ಲಹರಿ ಸಂಗಾತಿ
ಜಯಲಕ್ಷ್ಮಿ ಕೆ
“ನಡೆಯೋಣು ಬಾರಾ”


ಮಳೆ ಸುರಿಯುತ್ತಿದ್ದರೂ ಛತ್ರಿ ಹಿಡಿಯದೆ ನಡೆದಾಡುವುದು, ಒಂದೇ ಕೊಡೆಯಡಿಯದಲ್ಲಿ ಇಬ್ಬರು ಮೂವರು ವಿದ್ಯಾರ್ಥಿಗಳು ಸೇರಿಕೊಳ್ಳುವುದು , ಕೈಯಲ್ಲಿ ಛತ್ರಿ ಇದ್ದರೂ ಅದನ್ನು ಬಿಡಿಸದೆ ಹಾಗೆ ತಲೆ ಮೇಲೆ ಇಟ್ಟುಕೊಂಡು ನಡೆಯುವುದು ಇವೆಲ್ಲ ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾಡುವ ಶೋಕಿ. ಛತ್ರಿಯ ಬಗ್ಗೆ ಇಂತಹ ಟ್ರೆಂಡ್ ಇರುವಾಗ ಕಾಲೇಜಿಗೆ ರೈನ್ ಕೋಟ್ ಧರಿಸಿ ವಿದ್ಯಾರ್ಥಿನಿ ಒಬ್ಬಳು ಬರುವುದೆಂದರೆ….? ಈ ಅಪರೂಪದ ನೋಟ ಎಲ್ಲರ ಗಮನವನ್ನು ಅವಳತ್ತ ಸೆಳೆಯುವುದು ಸಹಜ ತಾನೇ? ಕೆಲವೊಂದು ಮಕ್ಕಳು ಆಕೆಗೆ ‘ರೈನ್ ಕೋಟ್ ‘ ಎನ್ನುವ ಹೆಸರನ್ನೂ ಇಟ್ಟಿದ್ದರಂತೆ.( ಆ ವಿಷಯ ತಿಳಿದ ಮೇಲೆ ಅವರಿಗೆ ಬುದ್ಧಿ ಹೇಳಲಾಯಿತು) ಅಂತೆಯೇ ಅವಳನ್ನು ಗಮನಿಸಿದ ಉಪನ್ಯಾಸಕಿಯೊಬ್ಬರು ಆಕೆಯನ್ನು ಮಾತನಾಡಿಸುತ್ತಾ, ಅವಳ ಮನೆಯ ಸ್ಥಿತಿ, ಪೋಷಕರ ವೃತ್ತಿ, ಮೂರು ಕಿ.ಮೀ ದೂರದಿಂದ ನಡೆದುಕೊಂಡೇ ಕಾಲೇಜಿಗೆ ಬರುವ ಆಕೆಯ ದಿನಚರಿ ಈ ಎಲ್ಲ ಅಂಶಗಳನ್ನು ಕಲೆ ಹಾಕಿಕೊಂಡು ಬಂದು ಆ ವಿಚಾರಗಳನ್ನು ಉಪನ್ಯಾಸಕರ ಕೊಠಡಿಯಲ್ಲಿ ಹಂಚಿಕೊಂಡರು. ವಿದ್ಯಾರ್ಜನೆಗಾಗಿ ದಿನಕ್ಕೆ ಆರು ಕಿಲೋಮೀಟರ್ ನಡೆಯುವ ಆ ವಿದ್ಯಾರ್ಥಿನಿಯ ಬಗ್ಗೆ ನಮಗೆಲ್ಲ ಹೆಮ್ಮೆ ಎನಿಸಿತು. ಆ ಸಂದರ್ಭ ಉಪನ್ಯಾಸಕರಲ್ಲಿ ಕೆಲವರು, ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದ ತಮ್ಮ ಗತಕಾಲದ ನೆನಪುಗಳನ್ನು ಮೆಲುಕು ಹಾಕಿಕೊಂಡರೆ, ಇನ್ನು ಕೆಲವರು ನಡೆಯುವುದು ಬಡತನದ ಅನಿವಾರ್ಯತೆ ಎಂಬಂತೆ ಮಾತನಾಡಿದರು. ಇವರಲ್ಲಿ ಒಬ್ಬರ ಮಾತು ಮಾತ್ರ ನನಗೆ ತೀರಾ ಅಸಹಜವೆನಿಸಿತು. ” ನನ್ನ ಮಗಳು ಹುಟ್ಟಿದ ಮೇಲೆ ಮೆಟ್ಟಿದ ಎರಡನೆಯ ಹೆಜ್ಜೆಯೇ ಕಾರಿನೊಳಗೆ, ನಾವು ಇದುವರೆಗೆ ಒಮ್ಮೆಯೂ ಅವಳನ್ನು ಎಲ್ಲಿಯೂ ನಡೆಸಿದ್ದೇ ಇಲ್ಲ, ನಡೆದುಕೊಂಡು ಓಡಾಡಲು ಹೇಳಿದ್ದೇ ಇಲ್ಲ..ಯಾರಾದರೂ ನೋಡಿದರೆ ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ!! ನಾವು ಇಷ್ಟು ಚೆನ್ನಾಗಿದ್ದುಕೊಂಡು!! ಅವಳಿಗಂತೂ ಮನೆ ಹೊಸ್ತಿಲು ದಾಟಿ ಯಾವಾಗ ಎಲ್ಲಿಗೇ ಹೋಗಬೇಕಾದರೂ ಕಾರು ಬೇಕೇ ಬೇಕು “. ಎಂದರವರು. ಅವರ ಮಾತು ಕೇಳಿದ ನನಗೆ ‘ ಛೇ… ನಡೆಯುವುದೆಂದರೆ ಇಷ್ಟೊಂದು ಅವಮಾನವಾ?? ಎಂಬ ಚಿಂತನೆ ಮೂಡಿತು.ನಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓದುತ್ತಿದ್ದ ಆ ದಿನಗಳಲ್ಲಿ ರಣ ಬಿಸಿಲಿದ್ದರೂ, ಮಳೆಯಿದ್ದರೂ ನಾವೆಲ್ಲಾ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆವು. .ನಡೆಯುವುದು ಅವಮಾನ ಎಂದು ಅನಿಸಿದ್ದೇ ಇಲ್ಲ!! ಬಹುಶಃ ಅಂಥ ಮನೋಭಾವ ಸಮಾಜದ ಯಾರಲ್ಲೂ ಆಗ ಇರಲಿಲ್ಲ. ಬೆಳಗ್ಗೆ ಏಳೂವರೆ- ಎಂಟು ಗಂಟೆಗೆ ಮನೆ ಬಿಟ್ಟರೆ ಬಳಗದ ಮಕ್ಕಳೆಲ್ಲ ಸೇರಿಕೊಂಡು ಶಾಲೆ ತಲುಪುವಾಗ ಹತ್ತು ಗಂಟೆಯ ಆಸು ಪಾಸು. ಬೇಸಿಗೆ ಕಾಲದಲ್ಲಿ ನೇತ್ರಾವತಿ ಕೃಪೆ ತೋರಿದರೆ ಸುತ್ತಿ ಬಳಸಿ ನಡೆಯದೆ ನದಿ ದಾಟಿ ಸ್ವಲ್ಪ ಬೇಗ ಶಾಲೆ ಸೇರುತ್ತಿದ್ದೆವು.ಆಗಲೂ ವಾಹನದಲ್ಲಿ ಶಾಲೆಗೆ ಬರುವವರು ಇಲ್ಲದಿಲ್ಲ. ಆದರೆ ಆ ಸಂಖ್ಯೆ ತೀರಾ ಕಡಿಮೆಇತ್ತು.ನಡೆದು ಸಾಗುವ ಖುಷಿಗಾಗಿ ಕೆಲವೊಮ್ಮೆ ಅವರು ಕೂಡಾ ಪೋಷಕರಲ್ಲಿ ಕಾಡಿ ಬೇಡಿ ನಮ್ಮೊಡನೆ ಬರುತ್ತಿದ್ದರು.
ಎಷ್ಟೇ ವಾಹನಗಳ ದಟ್ಟಣೆ ಇರಲಿ, ಎಷ್ಟೇ ಮಕ್ಕಳು ಅಲ್ಲಿ -ಇಲ್ಲಿ ನಡೆದಾಡುತ್ತಿರಲಿ,ಕೆಲವು ಪೋಷಕರು ಶಾಲೆಯ ಗೇಟಿಗೆ ಅಂಟಿಕೊಂಡಂತೆ ತಮ್ಮ ವಾಹನ ನಿಲ್ಲಿಸಿ, ಅಲ್ಲಿಯೇ ಮಕ್ಕಳನ್ನು ವಾಹನದಿಂದ ಇಳಿಸಿ ಮುಂದೆ ಸಾಗುವ ಚಿತ್ರಣ ಇಂದು ಸರ್ವೇ ಸಾಮಾನ್ಯ . ಮಕ್ಕಳು ಕ್ಷೇಮವಾಗಿ, ಸುಖವಾಗಿ, ಬೆಚ್ಚಗೆ ತರಗತಿ ಸೇರಿಕೊಳ್ಳಲಿ ಎನ್ನುವುದೇ ಪೋಷಕರ ಆಶಯ.ಇಂದು ಮಕ್ಕಳನ್ನು ಇಷ್ಟು ಜೋಪಾನ ಮಾಡಲು ಪ್ರಸ್ತುತ ಸಮಾಜದ ಸ್ಥಿತಿಗತಿಯೂ ಕಾರಣವೇ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಹಿಂದಿಗಿಂತ ಹೆಚ್ಚಾಗಿ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇಂದಿದೆ. ಆದ್ದರಿಂದ ಮನೆ ಮತ್ತು ಶಾಲೆಯ ನಡುವಿನ ಅಂತರ ಎಷ್ಟೇ ಕಡಿಮೆಯಾಗಿದ್ದರೂ ಪೋಷಕರು ಮಕ್ಕಳನ್ನು ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಶಾಲೆಗೆ ಕಳುಹಿಸುತ್ತಾರೆ. ವಾಹನಗಳ ದಟ್ಟಣೆ, ಅಪಘಾತದ ಭೀತಿ, ಅಪರಿಚಿತ, ಅಪಾಯಕಾರಿ ಮನುಷ್ಯರ ಭಯ, ಸಮಯದ ಅಭಾವ, ಪುಸ್ತಕಗಳ ಹೊರೆ ತುಂಬಿರುವ ಶಾಲಾ ಚೀಲದ ಭಾರ, ಉತ್ತಮ ಶಾಲೆಗಳಲ್ಲೇ ಓದಿಸಬೇಕೆನ್ನುವ ಸಹಜ ಹಂಬಲ, ಹವಾಮಾನದ ವೈಪರೀತ್ಯಗಳಿಂದ ( ಗಾಳಿ -ಮಳೆ ) ರಕ್ಷಣೆ , ಇತ್ತೀಚೆಗೆ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ ಈ ಎಲ್ಲ ಅಂಶಗಳಿಂದ ಮಕ್ಕಳನ್ನು ರಕ್ಷಿಸಿಕೊಳ್ಳಬೇಕಾದದ್ದು ,ತೀವ್ರ ಕಾಳಜಿ ವಹಿಸಬೇಕಾದದ್ದು ಇಂದಿನ ಅಗತ್ಯ. ಅಂದರೆ ವಾಹನಗಳಲ್ಲಿ ಸಂಚರಿಸುವುದು ಇಂದಿನ ಅವಶ್ಯಕತೆಯೇ ಹೊರತು ಪ್ರತಿಷ್ಠೆಯ ಅಂಶವಲ್ಲ ಎನ್ನಬಹುದು. ಅದೇ ಒಂದು ಪ್ರತಿಷ್ಠೆ ಎನ್ನುವ ಅಂಶ ಮಕ್ಕಳ ಮನಸಿಗೆ ಬಂದು ಬಿಟ್ಟರೆ ವಾಹನದ ಅವಶ್ಯಕತೆ ಇದ್ದರೂ ಅನಿವಾರ್ಯ ಕಾರಣಗಳಿಂದ ನಡೆದುಕೊಂಡು ಶಾಲೆಗೆ ಬರುವ ಸಹಪಾಠಿಗಳನ್ನು ಅವರು ತುಚ್ಚವಾಗಿ ಕಾಣುವ ಮನೋಭಾವ ಬೆಳೆಸಿಕೊಂಡಾರು. ಹೀಗಾಗದಿರಲು ಹಿರಿಯರ ಮಾತು -ವರ್ತನೆ ಜವಾಬ್ದಾರಿಯುತವಾಗಿರಬೇಕು.
ಸಾಮಾಜಿಕವಾಗಿ ಪರಿಸ್ಥಿತಿ ಸುಗಮವಾಗಿದ್ದರೆ , ದಾರಿ ಪ್ರತಿಕೂಲವಾಗಿಲ್ಲ ಎಂದಾದರೆ ಪ್ರಕೃತಿಯ ಅಂಶಗಳನ್ನು ವೀಕ್ಷಿಸುತ್ತಾ ಜೊತೆಗೂಡಿ ನಡೆದು ಸಾಗುವ ಸೊಗಸೇ ಚಂದ! ದಣಿವರಿಯುವುದಿಲ್ಲ,ದಾರಿ ಸಾಗಿದ್ದು ತಿಳಿಯುವುದಿಲ್ಲ. ಹಾದಿ ಬದಿಯ ಅಂಗಡಿಗಳ ಬೋರ್ಡ್ ಗಳನ್ನು ಓದುವುದು, ಕೇಳಿ ಬರುವ ಪಕ್ಷಿಗಳ ಗಾನದ ಬಗ್ಗೆ ಚರ್ಚೆ ಮಾಡುವುದು, ಹಾದಿ ಬದಿಯ ಗಿಡಮರಗಳನ್ನು ನೋಡುವುದು, ಅಲ್ಲಿ ಹಾರಾಡುವ ಪಕ್ಷಿಗಳನ್ನು ವೀಕ್ಷಿಸುವುದು , ನಡೆದು ಸಾಗುವ ವಿವಿಧ ರೀತಿಯ ಜನರ ನೋಟ ಇವೆಲ್ಲವೂ ಮಕ್ಕಳಿಗೆ ಒಂದೊಂದು ರೀತಿಯಲ್ಲಿ ಜ್ಞಾನ ನೀಡುವ ಅಂಶಗಳೇ ಹೌದು . ಆದಕಾರಣ ಸಾಧ್ಯವಾದರೆ ಪೋಷಕರು ಮಕ್ಕಳ ಜೊತೆಯಲ್ಲಿಯೇ ಇರಬಹುದಾದಂತಹ ಸಂದರ್ಭಗಳಲ್ಲಾದರೂ ಕಾಲುನಡಿಗೆಯ ಸುಖವನ್ನು ಮಕ್ಕಳಿಗೆ ಪರಿಚಯಿಸುವುದು ಒಳ್ಳೆಯದು. ನಡೆಯುವಿಕೆ ಎನ್ನುವ ನೈಸರ್ಗಿಕ ಕ್ರಿಯೆ ಮಕ್ಕಳಿಗಾಗಲಿ ಹಿರಿಯರಿಗಾಗಲಿ ಮಾನಸಿಕ ಚೈತನ್ಯವನ್ನು ನೀಡುವಂತದ್ದು. ಹಿರಿಯರಾದ ನಾವೆಲ್ಲ ತಿಳಿದಿರುವಂತೆ ರಕ್ತದೊತ್ತಡ ನಿವಾರಣೆಗೆ,ದೇಹದ ತೂಕದ ಸಮತೋಲನಕ್ಕೆ , ಹೃದಯದ ಆರೋಗ್ಯಕ್ಕೆ ನಡೆಯುವಿಕೆ ಅತ್ಯುತ್ತಮ ದೈಹಿಕ ವ್ಯಾಯಾಮ.
ಜಯಲಕ್ಷ್ಮಿ ಕೆ
ಮಡಿಕೇರಿ.



