ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್ ಚೇತನ ಸೊಲ್ಲಾಪುರದಿಂದ ದೆಹಲಿಯವರೆಗೆ *ಜವಾಹರ ನೆಹರು ಪಂಡಿತರಿಗೆ ನುಡದೇವಅವರವರ ನುಡಿಯಲಿ ರಾಜ್ಯವ, ನಡೆಯಲಿ ಅವಿಭಾಜ್ಯ ಭಾರತಕೆ ಬಲ ಬರಲಿ||*ಡಾ.ಜಯದೇವಿತಾಯಿ ೧೯೫೨ರ ಸಮಯ…… ಸಾರ್ವತ್ರಿಕ ಚುನಾವಣೆಯ ನಂತರ ವರ್ಷದ ಅಂತ್ಯದವರೆಗೂ ಆಂಧ್ರ ಮತ್ತು ಕರ್ನಾಟಕವನ್ನು ಪ್ರತ್ಯೇಕ ಪ್ರಾಂತ್ಯಗಳಾಗಿ ರಚಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆರಂಭದಲ್ಲಿ ಮನವಿ, ಅರ್ಜಿ ಮತ್ತು ವಿನಂತಿಗಳ ಮೂಲಕ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದರೂ, ನಂತರ ಹೋರಾಟ ಮತ್ತು ಪ್ರತಿಭಟನೆಯಂತಹ ಕಾರ್ಯಾಚರಣೆಗಳು ಆರಂಭವಾದವು.ಆಂಧ್ರದ ಪ್ರತ್ಯೇಕ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೀರ್ಘಕಾಲ ೬೮ ದಿನ ಉಪವಾಸ ಮಾಡಿದರು ….೬೮ ನೆ ದಿನ ಅವರು ನಿಧನರಾದರು. ಅವರ ಸಾವಿನಿಂದ ಆಂಧ್ರದಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.ಹೈದರಾಬಾದನ ನಾನಲ ನಗರದಲ್ಲಿ ನಡೆದ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ ಸಮಿತಿಯು ಆಂಧ್ರ ಪ್ರಾಂತ್ಯ ರಚನೆಯ ಬೇಡಿಕೆಯನ್ನು ಪರಿಗಣಿಸಿತು. ನಂತರ ಪ್ರಧಾನಿ ನೆಹರು ಸಂಸತ್ತಿನ ಡಿಸೆಂಬರ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕರ್ನಾಟಕದ ಬಗ್ಗೆ ಯಾವ ಮಾತನ್ನು ಅವರು ಎತ್ತಲಿಲ್ಲ. ಅದರ ಪರಿಣಾಮವಾಗಿ ಮಾರ್ಚ್ನಲ್ಲಿ ಪ್ರತ್ಯೇಕ ಆಂಧ್ರ ಪ್ರಾಂತ್ಯ ರಚನೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದರಿಂದ ಕನ್ನಡಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಯಿತು. ಆಂಧ್ರದ ಬೇಡಿಕೆಗೆ ಸ್ಪಂದಿಸಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಭಾವಿಸಿದರು. ಪರಿಣಾಮವಾಗಿ ಕನ್ನಡಿಗರು ಕಾಂಗ್ರೆಸ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ವಿಶಾಲ ಕರ್ನಾಟಕವನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಇನ್ನಷ್ಟು ಬಲವಾದದ ಆಶಯ ಮುಂದಿಟ್ಟರು. ಈ ಹೋರಾಟವೇ ಮುಂದೆ ಕರ್ನಾಟಕ ಏಕೀಕರಣ ಚಳವಳಿಗೆ ಮತ್ತಷ್ಟು ವೇಗ ನೀಡಿತು.ಈ ಘಟನೆ ಕರ್ನಾಟಕ ಏಕೀಕರಣ ಚಳವಳಿಯ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘಟ್ಟವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಆಡಳಿತಗಳ ಅಡಿಯಲ್ಲಿ ಚದುರಿಹೋಗಿದ್ದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮದ್ರಾಸ ಪ್ರಾಂತ್ಯದ ಕನ್ನಡ ಪ್ರದೇಶಗಳು ಹೀಗೆ ಕನ್ನಡಿಗರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ರಾಜ್ಯ ನಿರ್ಮಿಸಬೇಕು ಎಂಬ ಹಂಬಲ ಜನರಲ್ಲಿ ಬಲವಾಗುತ್ತಿತ್ತು. ನವೆಂಬರ ೧೯೫೨ರ ಅವಧಿಯಲ್ಲಿ ಈ ಬೇಡಿಕೆ ಕೇವಲ ಸಭೆ, ಮನವಿ ಮತ್ತು ನಿರ್ಣಯಗಳಿಗೆ ಸೀಮಿತವಾಗದೆ ತ್ಯಾಗ ಮತ್ತು ಹೋರಾಟದ ಹಂತಕ್ಕೆ ತಲುಪಿತು. ಅದರಗುಂಟೆ ಶಂಕರಗೌಡರು, ದೊಡ್ಡಮೇಟಿ ಅಂದಾನಪ್ಪ, ತಲ್ಲೂರ ರಾಯಣ್ಣಗೌಡರು ಮುಂತಾದ ಏಕೀಕರಣ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗಾಗಿ ಮರಣಾಂತ ಉಪವಾಸ ವ್ರತ ಕೈಗೊಂಡರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಸರ್ಕಾರದ ಗಮನ ಸೆಳೆಯಲು ಅವರು ಮುಂದಾದರು.ಈ ಉಪವಾಸ ಸತ್ಯಾಗ್ರಹವು ಕನ್ನಡಿಗರ ಬಹುದಿನಗಳ ಆಶಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಒಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿತ್ತು. ಉಪವಾಸಿಗರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಂತೆ ಏಕೀಕರಣ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳಲ್ಲಿ ಆತಂಕ ಹೆಚ್ಚಾಯಿತು. ಇಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಹೋರಾಟಗಾರರ ಬೆನ್ನಿಗೆ ದೃಢವಾಗಿ ನಿಂತರು. ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾಗ ಅವರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಅಗತ್ಯವಾಗಿತ್ತು. ಜಯದೇವಿ ತಾಯಿಯವರು* ತಮ್ಮ ರಕ್ತದಿಂದಲೇ ಹಸ್ತಾಕ್ಷರ ಹಾಕಿ ಉಪವಾಸ ಸತ್ಯಾಗ್ರಹಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು* ಎಂಬುದು ಅವರ ಹೋರಾಟದ ತೀವ್ರತೆ ಮತ್ತು ಬದ್ಧತೆಯನ್ನು ತೋರಿಸುವ ಅಪೂರ್ವ ಘಟನೆ. ಇದು “ಕರ್ನಾಟಕ ಏಕೀಕರಣಕ್ಕಾಗಿ ನಡೆಯುವ ನಿಮ್ಮ ಹೋರಾಟಕ್ಕೆ ನನ್ನ ಜೀವದ ಕೊನೆಯ ಹನಿಯವರೆಗೂ ಬೆಂಬಲವಿದೆ” ಎಂಬ ಸಂಕಲ್ಪದ ಸಂಕೇತವಾಗಿತ್ತು. ಅವರ ಈ ನಡೆ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಮಹಿಳೆಯರು ಕೂಡ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು, ಅಗತ್ಯವಾದರೆ ವೈಯಕ್ತಿಕ ತ್ಯಾಗಕ್ಕೂ ಸಿದ್ಧರಾಗಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು. *ನುಡಿನಾಡ ಮಾಡುವಗ |ಗಡಿನಾಡ ಮರಿಬ್ಯಾಡ್ರಿಬೇಡಿದೆವು ನ್ಯಾಯವ ಕೊಡಿರೆಂತ -ಸರ್ಕಾರಕತೊಡಕ ಇಡಬ್ಯಾಡರಿ ಕಡೆ ತನಕ||*ಎಂದು ಹಾಡುತ್ತಾ ಜಯದೇವಿ ತಾಯಿಯವರು ಸರ್ಕಾರಕ್ಕೆ ಎಚ್ಚರಿಸಲು ಪ್ರಯತ್ನಿಸಿದರು. ಹೋರಾಟದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇವಲ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿತು. ಕರ್ನಾಟಕದ ಏಕೀಕರಣದ ಪ್ರಶ್ನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ಕೊಂಡೊಯ್ಯಬೇಕಾಗಿತ್ತು. ಆದ್ದರಿಂದ ಜಯದೇವಿ ತಾಯಿಯವರು ತಮ್ಮ ಸಂಗಡಿಗರೊಂದಿಗೆ ಸೊಲ್ಲಾಪುರದಿಂದ ದೆಹಲಿಯವರೆಗೆ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದರು. ಪ್ರವಾಸ ಕನ್ನಡಿಗರ ನೋವು, ಅಸಮಾಧಾನ ಮತ್ತು ಅಖಂಡ ಕರ್ನಾಟಕದ ಆಶಯವನ್ನು ದೇಶದ ರಾಜಧಾನಿಗೆ ಕೊಂಡೊಯ್ಯುವ ಪ್ರತೀಕಾತ್ಮಕ ರಾಜಕೀಯ…ಸಾಮಾಜಿಕ ಯಾತ್ರೆಯಾಗಿತ್ತು. ದಾರಿಯುದ್ದಕ್ಕೂ ಕನ್ನಡಿಗರ ಸಮಸ್ಯೆಗಳನ್ನು ಜನರಿಗೆ ತಿಳಿಸುವುದು, ಕರ್ನಾಟಕ ಏಕೀಕರಣದ ಅಗತ್ಯವನ್ನು ವಿವರಿಸುವುದು ಮತ್ತು ಕೇಂದ್ರ ನಾಯಕರ ಗಮನ ಸೆಳೆಯುವುದು ಈ ಪ್ರಯತ್ನದ ಉದ್ದೇಶವಾಗಿತ್ತು. *ನಾಡೊಂದುಗೂಡಿಸಿ ಕೊಡಿರೆಂದು ಹೊಂದಿಸಿಬೇಡ ಹೋದೆವ ದಿಲ್ಲಿಯ ಸರ್ಕಾರಕನುಡಿದೇವ “ಕನ್ನಡ ನಾಡೊಂದೇ “*ಎಂದು ಹಾಡಿದ ಜಯದೇವಿ ತಾಯಿಯವರು ಸೊಲ್ಲಾಪುರದಿಂದ ದೆಹಲಿಯವರೆಗೆ ಸಾಗಿದ ಈ ಪ್ರಯತ್ನವು ಒಂದು ಮಹತ್ವದ ಸಂದೇಶವನ್ನು ನೀಡಿತು….ಕರ್ನಾಟಕ ಏಕೀಕರಣವು ಕನ್ನಡಿಗರ ಸಾಮೂಹಿಕ ಹಕ್ಕು ಮತ್ತು ಭಾವನೆಯಾಗಿದೆ. ಜಯದೇವಿ ತಾಯಿಯವರಂತಹ ಮಹಿಳಾ ಹೋರಾಟಗಾರ್ತಿಯರು ಈ ಹಂತದಲ್ಲಿ ವಹಿಸಿದ ಪಾತ್ರ ವಿಶೇಷವಾದದ್ದು. ಅವರು ಭಾಷಣಗಳನ್ನು ಮಾಡುತ್ತಾ, ಸಮಾಲೋಚನೆಗಳನ್ನು ಆಯೋಜಿಸುತ್ತಾ … ಅಲ್ಲಲ್ಲಿ ಸಭೆಗಳನ್ನು ನಡೆಸಿ,ಉಪವಾಸ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ…,, ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತೆ ಮಾಡಲು ಪ್ರಯತ್ನಿಸಿದರು.ಈ ಘಟನೆಯು ಜಯದೇವಿ ತಾಯಿಯವರ ಧೈರ್ಯ ಮತ್ತು ಕೆಚ್ಚೆದೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟವು ಕನ್ನಡಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರು. ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ಹಳ್ಳಿಕೇರಿ ರುದ್ರಪ್ಪ, ಬಿ. ಡಿ. ಜತ್ತಿ ಮುಂತಾದ ಪ್ರಮುಖ ನಾಯಕರು ಜಯದೇವಿ ತಾಯಿಯವರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಪ್ರಮುಖ ಆಶಯವಾಗಿತ್ತು.ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋರಾಟವನ್ನು ಹೇಗೆ ಸಂಘಟಿಸಬೇಕು, ಜನರಲ್ಲಿ ಕನ್ನಡ ನಾಡಿನ ಏಕೀಕರಣದ ಬಗ್ಗೆ ಜಾಗೃತಿ ಹೇಗೆ ಮೂಡಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇಗೆ ತರಬೇಕು, ಕನ್ನಡ ಭಾಷಿಕ ಪ್ರದೇಶಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ಹೇಗೆ ತರಬೇಕು ಎಂಬುದರ ಕುರಿತು ತಾಯಿಯವರು ಮತ್ತು ನಾಯಕರು ಸುದೀರ್ಘವಾಗಿ ಚರ್ಚಿಸುತ್ತಿದ್ದರು. ಜನಜಾಗೃತಿ ಹಾಗೂ ವಿವಿಧ ಹೋರಾಟಗಳ ಮೂಲಕ ಕನ್ನಡಿಗರ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.ಇದೇ ಅವಧಿಯಲ್ಲಿ ಭಾರತ ಸರ್ಕಾರವು ಫಜಲ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗವನ್ನು ರಚಿಸಿತು. ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಯಾವ ರೀತಿಯಲ್ಲಿ ಪುನರ್ವ್ಯವಸ್ಥೆಗೊಳಿಸಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿತ್ತು.ಈ ಸಂದರ್ಭದಲ್ಲಿ ಜಯದೇವಿ ತಾಯಿಯವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುವುದರ ಜೊತೆಗೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ರಾಜ್ಯ ಪುನರ ರಚನಾ ಆಯೋಗದ ಸದಸ್ಯರಾಗಿದ್ದ ಶ್ರೀ ಕೆ. ಎಂ. ಫಣಿಕ್ಕರ ಅವರೊಂದಿಗೆ ಜಯದೇವಿ ತಾಯಿಯವರು ಹಲವು ಬಾರಿ ಸುದೀರ್ಘವಾಗಿ ಚರ್ಚಿಸಿದರು. ಕನ್ನಡಿಗರು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳ ಭಾಷಾ-ಸಾಂಸ್ಕೃತಿಕ ಸಂಬಂಧಗಳು ಹೇಗಿವೆ, ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕಾದ ಅಗತ್ಯವೇನು, ಜನರ ಆಶಯವೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಕರ್ನಾಟಕದ ಏಕೀಕರಣವು ಆಡಳಿತಾತ್ಮಕ ಬದಲಾವಣೆಯ ಜೊತೆ ಜೊತೆಯಾಗಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಭಾವನಾತ್ಮಕ ಏಕತೆಯ ಪ್ರಶ್ನೆ ಎಂಬುದನ್ನು ತಾಯಿಯವರು ಹೇಳುತ್ತಿದ್ದರು.ಹೀಗೆ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆ, ಜನಜಾಗೃತಿ, ಹೋರಾಟ ಮತ್ತು ರಾಜ್ಯ ರಚನಾ ಆಯೋಗದೊಂದಿಗೆ ವಿಚಾರ ವಿನಿಮಯ ನಡೆಸುವ ಮೂಲಕ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ನಿರ್ಮಾಣದ ಮಹತ್ವದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಅವರ ಪ್ರಯತ್ನ ಚದುರಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ನಾಡಿನ ಅಡಿಯಲ್ಲಿ ಒಂದಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ದೊರೆಯಬೇಕು ಎಂಬ ಗಾಢವಾದ ಕನ್ನಡಾಭಿಮಾನವಿತ್ತು. ಇಂತಹ ಅನೇಕ ಹೋರಾಟಗಾರರ ನಿರಂತರ ಪ್ರಯತ್ನಗಳ ಫಲವಾಗಿಯೇ ಮುಂದೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಕನಸು ನನಸಾಗುವ ದಾರಿ ಸುಗಮವಾಯಿತು.(ಮುಂದುವರೆಯಲಿದೆ) ಸವಿತಾ ದೇಶಮುಖ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ಪಟ ರಾಷ್ಟ್ರ ಪ್ರೇಮಿ ಜೈ ಹಿಂದ್ ಘೋಷಣೆ ಜನಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ರಾಜ್ಯಗಳ ಧರ್ಮೀಯರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧಿ ನೆಹರು ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಹೀಗೆ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಸಂಗ್ರಾಮ ಹೋರಾಟ ನಡೆದಿವೆ. ಇಂತಹ ಒಂದು ಅಪರೂಪದ ಹೋರಾಟವೇ ಭಾರತೀಯ ರಾಷ್ಟ್ರೀಯ ಸೇನೆಯ (INA) ಇದನ್ನು ಸ್ಥಾಪಿಸಿದವರು. ಸುಭಾಷ್ ಚಂದ್ರ ಬೋಸ್. ಇವರ ಕರೆಗೆ ಓಗೊಟ್ಟು ಸಾವಿರಾರು ಯುವಕರು ಭಾರತೀಯ ಸೇನೆಯನ್ನು ಸೇರಿದರು. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಮುಂತಾದ ಬೇರೆ ಬೇರೆ ಧರ್ಮದವರ ನಂಬಿಕೆಯುಳ್ಳ ಯುವಕರ ಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು . ಅವರೆಲ್ಲರ ಆಚರಣೆ ವಿಚಾರ ಭಿನ್ನ ಭಿನ್ನವಾಗಿ ಕಂಡು ಬಂದವು. ಕೆಲವರು ಬೆಳಿಗ್ಗೆ ಎದ್ದು ಕೂಡಲೇ ರಾಮ್ ರಾಮ್ ಎನ್ನುತ್ತಿದ್ದರು ಇನ್ನೂ ಕೆಲವರು ವಾಲೀಕುಂ ಸಲಾಂ ಎನ್ನುತ್ತಿದ್ದರು. ಸಿಖ್ ಜನಾಂಗ ಅಕಾಲಿ ಎನ್ನುತ್ತಿದ್ದರು ಹೀಗೆ ಒಂದೇ ಭಾರತೀಯ ಸೇನಾ ಸಂಸ್ಕೃತಿಯಲ್ಲಿ ಭಿನ್ನ ಭಿನ್ನವಾಗಿ ಸೈನಿಕರು ಘೋಷಣೆ ಅಥವಾ ತಮ್ಮ ತಮ್ಮ ಬೆಳಗಿನ ನಮಸ್ಕಾರಗಳನ್ನು ಹೇಳುತ್ತಿದ್ದರು. ಇದನ್ನು ಏಕ ರೂಪದಲ್ಲಿ ಅಳವಡಿಸಲು ಸುಭಾಷ್ ಚಂದ್ರ ಬೋಸರು ಚಿಂತಿಸ ಹತ್ತಿದರು ಆಗ ಇವರ ನೆರವಿಗೆ ಬಂದವರೇ ಅಬಿದ್ ಹಸನ್ ಸಫ್ರಾನೀ ಎಂಬ. ಮುಸ್ಲಿಂ ಯುವಕ. ಹಲವು ದಿನಗಳ ವರೆಗೆ. ಯೋಚನೆ ಮಾಡಿ ಜೈ ಹಿಂದುಸ್ತಾನಿ ಎಂದು ಆರಂಭದಲ್ಲಿ ಘೋಷಣೆ ಕೂಗಿದರೂ ಸಹಿತ ಮುಂದೆ ಅದನ್ನು ಜೈ ಹಿಂದ್ ಎಂಬ ಘೋಷಣೆಗೆ ಮಾರ್ಪಾಡಿಸಿದವರು ಅಬಿದ ಹಸನ್ ಸಫ್ರಾನಿ . ಅಬಿದ್ ಹಸನ್ ಸಫ್ರಾನಿ (Zain-al-Abdin Hasan) ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಒಡನಾಡಿ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ಪ್ರಮುಖ ಅಧಿಕಾರಿಯಾಗಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದ ‘ಜೈ ಹಿಂದ್’ (Jai Hind) ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ ರೂವಾರಿ ಇವರೇ ಆಗಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಜನನ: ಇವರು 11 ಏಪ್ರಿಲ್ 1911 ರಂದು ಹೈದರಾಬಾದ್ನ ಶ್ರೀಮಂತ ಮತ್ತು ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಮೂಲ ಹೆಸರು: ಇವರ ನಿಜವಾದ ಹೆಸರು ‘ಝೈನ್-ಅಲ್-ಅಬ್ದಿನ್ ಹಸನ್’.ಶಿಕ್ಷಣ: ಇವರ ತಾಯಿ ಬ್ರಿಟಿಷರ ಮೇಲಿನ ವಿರೋಧದಿಂದಾಗಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ಕಳುಹಿಸದೆ ಜರ್ಮನಿಗೆ ಕಳುಹಿಸಿದರು. ಅಲ್ಲಿ ಅಬಿದ್ ಅವರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನೇತಾಜಿ ಒಡನಾಟ ಮತ್ತು ಐಎನ್ಎ (INA) ಪಾತ್ರಪ್ರೇರಣೆ: ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾಷಣದಿಂದ ಪ್ರೇರಿತರಾಗಿ, ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಸಬ್ಮರೀನ್ ಪ್ರಯಾಣ: ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರೊಂದಿಗೆ ಜರ್ಮನಿಯಿಂದ ಜಪಾನ್ಗೆ ಅತ್ಯಂತ ಅಪಾಯಕಾರಿ 90 ದಿನಗಳ ಸಬ್ಮರೀನ್ (ಜಲಾವೃತ ನೌಕೆ) ಪ್ರಯಾಣ ಕೈಗೊಂಡ ಏಕೈಕ ಭಾರತೀಯ ಇವರಾಗಿದ್ದಾರೆ.’ಸಫ್ರಾನಿ’ ಹೆಸರಿನ ಹಿನ್ನೆಲೆ: ಐಎನ್ಎ ಧ್ವಜ ವಿನ್ಯಾಸದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೈನಿಕರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಕೋಮು ಸೌಹಾರ್ದತೆಯನ್ನು ಸಾರಲು, ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು (Saffron) ಸೂಚಿಸಿ, ತಮ್ಮ ಹೆಸರಿನೊಂದಿಗೆ ‘ಸಫ್ರಾನಿ’ ಎಂದು ಸೇರಿಸಿಕೊಂಡರು. ‘ಜೈ ಹಿಂದ್’ ಘೋಷಣೆಯ ಜನ್ಮ ಭಾರತೀಯ ಸೈನಿಕರನ್ನು ಧರ್ಮ ಮತ್ತು ಪ್ರಾಂತ್ಯಗಳ ಭೇದವಿಲ್ಲದೆ ಒಂದೇ ಗೌರವ ವಂದನೆಯಲ್ಲಿ ಸ್ವಾಗತಿಸಲು ನೇತಾಜಿ ಬಯಸಿದ್ದರು.ಆಗ ಅಬಿದ್ ಹಸನ್ ಅವರು “ಜೈ ಹಿಂದೂಸ್ತಾನ್ ಕಿ” ಎಂಬ ನುಡಿಗಟ್ಟನ್ನು ಸುಧಾರಿಸಿ “ಜೈ ಹಿಂದ್” (ಭಾರತಕ್ಕೆ ಜಯವಾಗಲಿ) ಎಂಬ ಸಂಕ್ಷಿಪ್ತ, ಶಕ್ತಿಯುತ ಘೋಷಣೆಯನ್ನು ಸೃಷ್ಟಿಸಿದರು. ನೇತಾಜಿ ಇದನ್ನು ತಕ್ಷಣವೇ ಒಪ್ಪಿಕೊಂಡು ಐಎನ್ಎಯ ಅಧಿಕೃತ ವಂದನೆಯನ್ನಾಗಿ ಮಾಡಿದರು. ರಾಜತಾಂತ್ರಿಕ ವೃತ್ತಿಜೀವನ (Diplomat)ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಇವರು ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದರು.ಈಜಿಪ್ಟ್, ಡೆನ್ಮಾರ್ಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ (Ambassador) ಅತ್ಯುತ್ತಮ ಸೇವೆ ಸಲ್ಲಿಸಿ 1969 ರಲ್ಲಿ ನಿವೃತ್ತರಾದರು. Nidhana ಈ ಮಹಾನ್ ದೇಶಭಕ್ತರು 9 ಮೇ 1984 ರಂದು ತಮ್ಮ ಸ್ವಂತ ನಗರವಾದ ಹೈದರಾಬಾದ್ನಲ್ಲಿ ನಿಧನರಾದರು. ಇತ್ತೀಚೆಗೆ ಅವರ ಸಾಹಸಮಯ ಜೀವನದ ಕುರಿತು Abid Hasan Safrani Netaji’s Comrade-in-Arms ಎಂಬ ಪುಸ್ತಕವನ್ನು ಅವರ ಕುಟುಂಬದವರು ಪ್ರಕಟಿಸಿದ್ದಾರೆ. ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಭಾರತೀಯ ಸೇನಾ ಪಡೆ ಸೇನಾನಿ ಇತಿಹಾಸಗಳ ಪುಟದಲ್ಲೂ ಸೇರ್ಪಡೆಗೊಂಡಿಲ್ಲ. __________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-39 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅರಮನೆಯ ತೊರೆದಳು, ಅರಣ್ಯವನು ಸೇರಿದಳು “ದುಃಖಿ ನೀನಾಗದೆ ಆ ಜಾನಕಿಯನ್ನು ಗಂಗಾನದಿಯ ದಡದಲ್ಲಿರುವ ಕಾಡಿನಲ್ಲಿ ಬಿಟ್ಟುಬರಬೇಕು. ಕಾಡಿನಲ್ಲಿ ಋಷಿಪತ್ನಿಯರ ಸಂಗದಲ್ಲಿ ಕಾಲವನ್ನು ಕಳೆಯುವ ಬಯಕೆಯನ್ನು ಹಿಂದೊಮ್ಮೆ ನನ್ನಲ್ಲಿ ತೋಡಿಕೊಂಡಿದ್ದಳು. ಈಗ ಅದನ್ನೇ ನೆಪವಾಗಿಸಿಕೊಂಡು ಅವಳನ್ನಿಲ್ಲಿಂದ ಕರೆದೊಯ್ದು ಕಾನನದಲ್ಲಿ ಬಿಟ್ಟು ಬಾ” ರಾಮನುಡಿಯದು ಕರ್ಣಕಠೋರವಾಯಿತು ಲಕ್ಷ್ಮಣನ ಪಾಲಿಗೆ.ಅಣ್ಣನ ಆಜ್ಞೆಯನ್ನು ಅವಗಣಿಸಲಾಗದ ಅನಿವಾರ್ಯತೆ ಒಂದೆಡೆಯಲ್ಲಿ. ಅಣ್ಣ ಹೇಳಿದಂತೆಯೇ ನಡೆದುಕೊಂಡರೆ ತಾಯಿಯನ್ನು ವಧಿಸಿದ ಮಹಾಪಾತಕಿಯಂತಾಗುತ್ತೇನೆ ತಾನು ಎಂಬ ಅಳುಕು ಇನ್ನೊಂದೆಡೆಯಲ್ಲಿ. ಅತ್ತಿಗೆಯನ್ನು ಕಾನನದಲ್ಲಿ ಬಿಟ್ಟು ಬರುವೆನೋ, ಬಾರೆನೋ ಎಂಬ ಇಬ್ಬಂದಿತನವದು ಸಂಕಟಕ್ಕೀಡುಮಾಡಿತು ಸುಮಿತ್ರೆಯ ಸುತನನ್ನು. ಶರೀರ ಅದುರಿತು. ಚದುರಿತು ಶೋಕಭಾವ ಮನದ ತುಂಬ. ಕೊರಳು ಬಿಗಿಯಿತು. ಸುರಿಯಿತು ದುಃಖಸೂಚಿತ ಅಶ್ರು ಕಣ್ಣಿನಿಂದ.ಈ ಸ್ಥಿತಿಯಲ್ಲಿ ಲಕ್ಷಣನಿರಬೇಕಾದರೆ ಶ್ರೀರಾಮನ ಕಠೋರ ಕಣ್ಣುಗಳು ಕಠಿಣಾತಿಕಠಿಣವಾಗಿ ದಿಟ್ಟಿಸಿದವು ತಮ್ಮನನ್ನು. “ನಾನೇ ಅವಳನ್ನು ತೊರೆಯುವ ನಿರ್ಧಾರ ಮಾಡಿರುವಾಗ ನಿನಗೇನು ಸಮಸ್ಯೆ! ಹೋಗು ಅವಳನ್ನು ಬಿಟ್ಟು ಬಾ ಅರಣ್ಯದಲ್ಲಿ” ಎಂದು ದಯೆಯಿಲ್ಲದೆ ನುಡಿದ ಶ್ರೀರಾಮ. ಪ್ರಜೆಗಳಿಗನುಗುಣವಾಗಿ ನಡೆದುಕೊಳ್ಳಬೇಕೆಂಬ ಒತ್ತಡವೇ ಅವನನ್ನು ಆ ಬಗೆಯಲ್ಲಿ ಕಾರುಣ್ಯಶೂನ್ಯನಾಗಿಸಿತೋ ಏನೋ!ನೋವಿನ ಭಾವದಿಂದಲೇ ರಥವನ್ನು ಸಿದ್ಧಪಡಿಸಿದ ಲಕ್ಷ್ಮಣ. ಸೀತೆಯಿದ್ದ ರಾಜಮಂದಿರಕ್ಕೆ ಬಂದ. ಅವಳ ಮೊಗವನ್ನು ನೋಡುವ ಧೈರ್ಯ ಬರಲಿಲ್ಲ ಅವನಿಗೆ. ತಲೆಬಾಗಿಸಿಯೇ ನಿಂತು ಅವಳಲ್ಲಿ “ಮಾತೆಯೇ, ಕಾನನಕ್ಕೆ ಹೋಗಬೇಕೆಂದು ಬಯಸಿದವಳು ನೀನು. ನಿನ್ನಿಚ್ಛೆಯನ್ನು ಪೂರೈಸಲೆಂದು ಈಗ ನನ್ನಣ್ಣ ಶ್ರೀರಾಮ ನಿನ್ನನ್ನು ಕಾಡಿಗೆ ಕಳುಹಿಸುವ ಮನಸ್ಸು ಮಾಡಿದ್ದಾನೆ. ರಥವನ್ನೇರು. ಈಗಲೇ ಪಯಣ ಆರಂಭವಾಗಲಿ” ಎಂದು ಶೋಕಛಾಯೆಯನ್ನು ಬೀರಿ ನುಡಿದ ಲಕ್ಷ್ಮಣಆ ಕ್ಷಣದಲ್ಲಿ ಅವಳ ಮನಸ್ಸಿಗಾದ ಸಂತಸವದು ಲಕ್ಷö್ಮಣನ ನಿಜಭಾವವನ್ನು ತೋರಗೊಡಲೇ ಇಲ್ಲ. ಅತಿಯಾಗಿ ಸಂಭ್ರಮಿಸಿದಳು ಧರಣಿಸುತೆ. ತನ್ನ ಮನದಿಚ್ಛೆಯನ್ನು ತನ್ನ ಮನದೊಡೆಯ ಇಷ್ಟು ಬೇಗ ಪೂರೈಸಿದ ಎಂಬ ಸಂತೃಪ್ತಿ ಅವಳದಾಯಿತು. ನಿಜವನ್ನು ತಿಳಿಯದೆಯೇ ಹರ್ಷದಲ್ಲಿ ನಲಿಯುತಿರುವ ಸೀತೆಯನ್ನು ಕಂಡು ಇನ್ನಷ್ಟು ಮರುಗಿದ ಲಕ್ಷö್ಮಣ.ಆಶ್ರಮದ ಋಷಿಪತ್ನಿಯರಿಗೆ ಕೊಡಲೆಂದು ಅನೇಕಾನೇಕ ವಸ್ತುಗಳನ್ನು ತೆಗೆದಿಟ್ಟುಕೊಂಡಳು. ಶ್ರೀರಾಮನ ಪಾದುಕೆಗಳನ್ನು ಜೊತೆಗಿರಿಸಿಕೊಂಡಳು. ಅರಮನೆಯ ಗುರು ಹಿರಿಯರಿಗೆ ವಂದಿಸಿದಳು. ಅನುನಯದಿಂದ ಎಲ್ಲರನ್ನೂ ಮಾತನಾಡಿಸಿದಳು. ಅಯೋಧ್ಯೆಗೆ ವಿದಾಯ ಹೇಳಿದಳು ಸೀತೆ. ಲಕ್ಷö್ಮಣ ನಡೆಸುತ್ತಿದ್ದ ರಥವದು ಸೀತೆಯನ್ನು ಅಯೋಧ್ಯೆಯಿಂದ, ಶ್ರೀರಾಮನಿಂದ ದೂರ ದೂರ ದೂರವಾಗಿಸಿತು.ರಥದಲ್ಲಿದ್ದ ಪತಾಕೆಯದು ನೋಡಲಾರೆ ಜಾನಕಿಯ ಈ ಹೀನಸ್ಥಿತಿಯನ್ನು ಎಂಬAತೆ ತಲೆಯನ್ನು ಕೊಡಹುತ್ತಿತ್ತು. ‘ಯುದ್ಧದಲ್ಲಿ ಶತ್ರುಗಳನ್ನು ಕೊಂದು ಮೆರೆಯಲೆಂದು ಏರುತ್ತಿದ್ದ ರಥವಿದು. ಇಂದು ಸೀತಾಮಾತೆಯನ್ನು ಕಾಡಿಗೆ ಕಳುಹಿಸಿಬರಲು ಇದನ್ನು ಏರುವಂತಾಯಿತಲ್ಲಾ!’ ಎಂಬ ಯೋಚನೆ ಲಕ್ಷö್ಮಣನಲ್ಲಿ ಮೂಡಿತು. ಮರುಕಪಟ್ಟ ಸೌಮಿತ್ರಿ. ‘ಹೇಗೆ ಇವಳನ್ನು ಕಾಡಿಗೆ ಬಿಟ್ಟುಬರುವೆನೋ! ಯಾಕೆ ಈ ಕಾರ್ಯವನ್ನು ನನಗೆ ವಹಿಸಿದನೋ ನನ್ನಣ್ಣ!’ ಎಂದು ಹಾಗೆಯೇ ಹಲುಬಿದ.ಆಗಲೇ ನರಿಯ ಕೂಗು ಕೇಳಿಬಂತು. ಕುಳಿತಿದ್ದ ಮೃಗಗಳು ಮೇಲೆದ್ದು ರಥದ ಮುಂದುಗಡೆ ದಾರಿಯನ್ನು ದಾಟಿದವು. ಸೀತೆಯ ಬಲದ ಕಣ್ಣು ಅದುರಿತು. ಏನಿದು ಈ ಬಗೆಯ ಅಪಶಕುನಗಳು ಎನಿಸಿತು ಅವಳಿಗೆ. ಹೇಳಿಕೊಂಡಳು ಲಕ್ಷö್ಮಣನಲ್ಲಿ. ಆ ಕ್ಷಣದಲ್ಲಿ ಅವಳಲ್ಲಿ ಮೂಡಿಬಂದದ್ದು ರಾಮಯೋಚನೆ. ತನ್ನೊಡೆಯ ಶ್ರೀರಾಮನಿಗೆ ಒಳ್ಳೆಯದೇ ಆಗಲಿ; ಕೆಡುಕು ಅವನನ್ನು ಬಾಧಿಸದಿರಲಿ ಎಂದು ಬಯಸಿದಳು ಭೂಮಿಸುತೆ.ರಥವೀಗ ಬಹುದೂರ ಸಾಗಿಬಂದಿತ್ತು. ಸೀತಾಮಾತೆಯ ಕಣ್ಣೆದುರಿಗೆ ಈಗ ಕಂಡವಳು ಗಂಗಾಮಾತೆ. ಪರಮ ನಿಷ್ಕಲ್ಮಶ ಪರಿಯಲ್ಲಿ ಪರಮ ಪಾವನೆಯಾಗಿ ಹರಿಯುತ್ತಿದ್ದಳು. ರಥದಿಂದಿಳಿದ ಲಕ್ಷö್ಮಣ ಸೀತೆ ಗಂಗಾನದಿಗೆ ನಮಸ್ಕರಿಸಿದರು. ದೋಣಿಯನ್ನೇರಿದ ಅವರನ್ನು ಗಂಗಾಮಾತೆ ತನ್ನ ಬೆನ್ನಮೇಲೆಯೇ ಹೊತ್ತು ಇನ್ನೊಂದು ತೀರಕ್ಕೆ ಸೇರಿಸಿದಳು.ಆ ತೀರದಲ್ಲಿದ್ದದ್ದು ದಟ್ಟವಾದ ಕಾಡು. ಭಯ ಮೂಡಿಸುವಂತಿತ್ತು ಆ ನಿಬಿಡ ಕಾನನದ ನಿಲುವು. ರಾಮಕಾಂತೆಯ ಕಾಂತಿವೆತ್ತ ಕಣ್ಣಿಗೆ ಆ ಕಾಂತಾರ ತೋರಿತು ಭೀಕರವಾಗಿ. ರಾಮನಾಮವನ್ನು ಜಪಿಸತೊಡಗಿದಳು ಭೀತಿಗೆ ಈಡಾಗಿ. ಅಂಜಿದಳು. ಅಳುಕಿದಳು.“ಇಲ್ಲಿ ಮುನಿಗಳ ಆಶ್ರಮಗಳು ಕಾಣಿಸುತ್ತಿಲ್ಲ. ಋಷಿಪತ್ನಿಯರು ಕಣ್ಣಿಗೆ ತೋರುತ್ತಿಲ್ಲ. ಹೋಮಧೂಮಗಳಿಲ್ಲ. ಋಷ್ಯಾಶ್ರಮಕ್ಕೆ ನನ್ನನ್ನು ಕರೆದೊಯ್ಯದೆ ಮನಕ್ಕೆ ಶ್ರಮವನ್ನು ನೀಡುವ ಈ ದಟ್ಟ ಕಾಡಿಗೇಕೆ ಕರೆತಂದೆ ನನ್ನನ್ನು?” ಎಂದು ಕೇಳಿದಳು ಲಕ್ಷö್ಮಣನಲ್ಲಿ.ಅವನು ಮೌನಿಯಾಗಿರುವಾಗಲೇ “ಪರಮ ಪಾವನರಾದ ನನ್ನ ಪತಿಯನ್ನು ತೊರೆದುಬಂದ ನನಗೆ ಪುಣ್ಯಾಶ್ರಮ ಕಣ್ಣಿಗೆ ಬೀಳುವುದಾದರೂ ಹೇಗೆ!” ಎಂದು ಹೇಳಿದಳು.ಧಿಕ್ಕರಿಸಿ ತೊರೆದ ಶ್ರೀರಾಮನನ್ನು ಹೊಗಳುವ ಅವಳ ಮುಗ್ಧತೆ ಇನ್ನಿಲ್ಲದ ದುಃಖ ಮೂಡಿಸಿತು ಲಕ್ಷö್ಮಣನಲ್ಲಿ. ಅವನ ಅಧರಗಳು ಅದುರಿದವು. ಕಣ್ಣೀರ ಹನಿಗಳು ಸುರಿದವು. ಉದರದೊಳಗೆ ಕತ್ತಿಯಾಡಿಸಿದಂತಹ ಅನುಭವ ಅವನದ್ದಾಯಿತು. ಹೃದಯ ಕರಗಿತು. ಮನವು ಮರುಗಿತು. ಎದೆಯೊಳಗಿನ ಮಾತು ಹೊರಬರದಾಯಿತು. ‘ಹೇಗೆ ಹೇಳದಿರಲಿ ನಿಜವಿಚಾರವನ್ನು ಈ ಮುಗುದೆಗೆ!’ ಎಂದು ಅತೀವ ವೇದನೆಗೊಳಗಾದ ರಾಮನ ಪ್ರಿಯ ಅನುಜ ಲಕ್ಷö್ಮಣ.ಸಂತಸದ ಸೀತೆಯನ್ನು ಸೋತ ಸೀತೆಯಾಗಿಸುವ ಮಾತುಗಳದೋ ಹೊರಬಂದವು ಲಕ್ಷö್ಮಣನಿಂದ. “ಮಾತೆಯೇ, ಇದುವರೆಗೂ ನಾನು ನಿನ್ನಿಂದ ಮುಚ್ಚಿಟ್ಟ ವಿಚಾರವಿದು. ಲೋಕಾಪವಾದಕ್ಕೆ ಹೆದರಿ ನಿನ್ನನ್ನು ತೊರೆದು ಕಳುಹಿಸಿದ್ದಾನೆ ಶ್ರೀರಾಮ. ನಿನ್ನನ್ನು ಕಾಡಿನಲ್ಲಿಯೇ ಬಿಟ್ಟುಹೋಗುವ ಹೊಣೆಯನ್ನವನು ವಹಿಸಿದ್ದು ನನಗೆ. ಅವನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ದಟ್ಟ ಕಾನನಕ್ಕೆ ಕರೆತಂದಿದ್ದೇನೆ. ಇನ್ನು ಎಲ್ಲಿಗಾದರೂ ಹೋಗು ನೀನು” ಎಂದ ಕಣ್ಣೀರು ಹರಿಸುತ್ತ, ಸುಮಿತ್ರಾಸುತ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ -130 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮಗಳನ್ನು ಕಂಗೆಡಿಸಿದ ಅಮ್ಮನ ಡಯಾಲಿಸಿಸ್ ಖರ್ಚು ಮಾರನೇ ದಿನ ಸುಮತಿಯ ತಮ್ಮ ಕೆಲಸಕ್ಕೆ ಹೋಗುವ ಮುಂಚೆಯೇ ತನ್ನ ಅಕ್ಕ,ಅಳಿಯ ಮತ್ತು ಮಗಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ಬಳಿ ಬಿಟ್ಟನು. ಹೊರಡುವ ಮೊದಲು ಅಳಿಯನನ್ನು ಹತ್ತಿರ ಕರೆದು…. “ನೀನು ಅಕ್ಕನನ್ನು ವೈದ್ಯರಿಗೆ ತೋರಿಸಿ, ಅವರು ಏನು ಹೇಳುತ್ತಾರೆ ಎಂಬುದನ್ನು ನನಗೆ ತಿಳಿಸು…. ಕೆಲಸ ಮುಗಿಸಿಕೊಂಡು ಸಂಜೆ ನಾನು ಇಲ್ಲಿಗೆ ಬರುತ್ತೇನೆ”…. ಎಂದು ಹೇಳಿ, ಅಕ್ಕ ಮತ್ತು ಮಗಳಿಗೆ ಧೈರ್ಯ ಹೇಳಿ ಕೆಲಸಕ್ಕೆ ಹೊರಟನು. ಮಾವ ಹೊರಟು ಹೋದ ನಂತರ ಸುಮತಿಯ ಮಗಳು ತಾಯಿಯನ್ನು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿ… “ಅಮ್ಮಾ… ನೀನು ಇಲ್ಲಿ ಕುಳಿತಿರು…. ನಾನು ಮತ್ತು ಬಾವ ಆಸ್ಪತ್ರೆಯ ರಿಸೆಪ್ಶನ್ ಗೆ ಹೋಗಿ ಇಲ್ಲಿಯ ಚಿಕಿತ್ಸೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ಬರುವೆವು”…. ಎಂದು ಹೇಳಿ ಬಾವನ ಜೊತೆ ನಾದಿನಿ ರಿಸೆಪ್ಷನಿಸ್ಟ್ ಬಳಿಗೆ ಹೋದಳು. ಅಲ್ಲಿ ರಿಸೆಪ್ಶನ್ ಬಳಿಗೆ ಹೋಗಿ ಸಕಲೇಶಪುರದ ವೈದ್ಯರು ಕೊಟ್ಟ ಶಿಫಾರಸ್ಸು ಪತ್ರವನ್ನು ಹಾಗೂ ಸುಮತಿಯ ಇತರೆ ಚಿಕಿತ್ಸೆಗಳ ವಿವರಗಳು ಇರುವ ಕಡತವನ್ನು ತೋರಿಸಿ ವಿಚಾರಿಸಿದಳು. ರಿಸೆಪ್ಶನ್ ನಲ್ಲಿ ಕುಳಿತಿದ್ದ ಸ್ವಾಗತಗಾರ್ತಿ…. “ಮೊದಲು ನಿಮ್ಮ ತಾಯಿಯನ್ನು ಒಳಗಡೆ ಇರುವ ತುರ್ತು ಚಿಕಿತ್ಸಾ ವಿಭಾಗದ ವಾರ್ಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿ ವರ್ಗಕ್ಕೆ ನಿಮ್ಮ ತಾಯಿಯನ್ನು ಇಲ್ಲಿ ಅಡ್ಮಿಟ್ ಮಾಡುವ ಬಗ್ಗೆ ತಿಳಿಸಿ ಮತ್ತು ಈ ಚೀಟಿಯನ್ನು ಅವರಿಗೆ ತೋರಿಸಿ…. ನಿಮ್ಮ ತಾಯಿಯನ್ನು ಅಲ್ಲಿ ಅಡ್ಮಿಟ್ ಮಾಡಿದ ಬಳಿಕ ಪುನಃ ಇಲ್ಲಿಗೆ ಬನ್ನಿ…. ನಂತರ ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇನೆ”…. ಎಂದರು. ಸ್ವಾಗತಗಾರ್ತಿಗೆ ಧನ್ಯವಾದವನ್ನು ತಿಳಿಸಿ ನೂರು ರೂಪಾಯಿಯನ್ನು ಕೊಟ್ಟು ನೋಂದಣಿ ಮಾಡಿಸಿ, ತಾಯಿಯ ಬಳಿಗೆ ಬಂದಳು…. “ಅಮ್ಮಾ…. ನಿನ್ನನ್ನು ಇಲ್ಲಿನ ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲು ಮಾಡಲು ತಿಳಿಸಿದ್ದಾರೆ…. ಬಾ ಹೋಗೋಣ…. ನಿನ್ನನ್ನು ಅಲ್ಲಿ ದಾಖಲಿಸಿದ ನಂತರ ನಾನು ಮತ್ತು ಬಾವ ಹೋಗಿ ಇನ್ನಿತರೆ ಕಾರ್ಯವಿಧಾನಗಳ ಬಗ್ಗೆ ವಿಚಾರಿಸಿಕೊಂಡು ಮತ್ತೆ ಬರುತ್ತೇವೆ”…. ಎಂದಳು. ಸುಮತಿಗೆ ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗ ಹಾಗೂ ಅವರ ಶಿಸ್ತಿನ ನಡವಳಿಕೆಯನ್ನು ಕಂಡು ಬಹಳ ಮೆಚ್ಚುಗೆಯಾಯಿತು. ವಾರ್ಡಿನ ಹಾಸಿಗೆಯ ಮೇಲೆ ಮಲಗಿದಾಗ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಳು. ಇನ್ನು ಇಲ್ಲಿ ತನಗೆ ಉತ್ತಮ ಚಿಕಿತ್ಸೆ ಖಂಡಿತ ದೊರಕುತ್ತದೆ ಎಂಬುದು ಅವಳಿಗೆ ಖಾತ್ರಿಯಾಯಿತು. ನರ್ಸ್ ಒಬ್ಬರು ಬಳಿ ಬಂದು ಒಂದು ಚೀಟಿಯಲ್ಲಿ ಕೆಲವು ಔಷಧಿಗಳನ್ನು ಬರೆದು ನೀವು ವಾರ್ಡಿಗೆ ಬರುವಾಗ ಇದನ್ನು ಖರೀದಿಸಿಕೊಂಡು ಬನ್ನಿ ಎಂದು ಹೇಳಿದಳು…. “ಅಮ್ಮಾ …ನೀನು ಇಲ್ಲೇ ಮಲಗಿರು… ನಾವು ಈಗಲೇ ಬರುತ್ತೇವೆ”…. ಎಂದು ಸುಮತಿಗೆ ಹೇಳಿ ನರ್ಸ್ ಕೊಟ್ಟ ಚೀಟಿಯನ್ನು ಪಡೆದು ಬಾವನೊಂದಿಗೆ ಪುನಃ ರಿಸೆಪ್ಶನ್ ಬಳಿಗೆ ನಡೆದಳು. ಅಲ್ಲಿ ಹೋದಾಗ ಚಿಕಿತ್ಸೆಯ ಪೂರ್ಣ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರವನ್ನು ಬರೆದಿರುವ ಪ್ರತಿಯೊಂದು ಅವಳ ಕೈಗಿಟ್ಟರು. ನೀವು ಇದರಲ್ಲಿ ನಮೂದಿಸಿರುವ ಪ್ರಕಾರ ಈಗಲೇ ನಮ್ಮ ಕೌನ್ಸಿಲಿಂಗ್ ವಿಭಾಗಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತಾಡಿ ಹಣವನ್ನು ಕಟ್ಟಿ ಬನ್ನಿ. ಅದರ ರಸೀದಿಯನ್ನು ತಂದು ಇಲ್ಲಿ ನಮಗೆ ತೋರಿಸಿ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡಿಸುವ ಎಲ್ಲಾ ಏರ್ಪಾಡುಗಳನ್ನು ನಾವು ಮಾಡುತ್ತೇವೆ ಎಂದರು. ಅವರು ಕೊಟ್ಟ ಪ್ರತಿಯನ್ನು ಪಡೆದು ಕೌನ್ಸಿಲಿಂಗ್ ವಿಭಾಗದೆಡೆಗೆ ಇಬ್ಬರೂ ಹೊರಟರು. ಅಲ್ಲಿ ಹೋದಾಗ ಸಿಬ್ಬಂದಿಯು ಇಬ್ಬರನ್ನೂ ಕುಳಿತುಕೊಳ್ಳಲು ಸೂಚಿಸಿ ಇಂತಿಂಥ ಚಿಕಿತ್ಸೆಗೆ ಇಂತಿಷ್ಟು ವೆಚ್ಚವಾಗುತ್ತದೆ ಎಂಬ ವಿವರವನ್ನು ನೀಡಿ, ಅಲ್ಲಿ ನಮೂದಿಸಿದ ಮೊತ್ತದ ಹಣವನ್ನು ಪಾವತಿಸುವಂತೆ ತಿಳಿಸಿದರು. ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕಾದರೆ ತಾವು ಭರಿಸಬೇಕಾದ ಹಣದ ಮೊತ್ತವನ್ನು ಕಂಡು ಇಬ್ಬರೂ ದಂಗಾದರು. ಏಕೆಂದರೆ ಅಲ್ಲಿ ನಮೂದಿಸಿದಂತೆ ವೈದ್ಯರ, ದಾದಿಯರ, ವಾರ್ಡಿನ ಮತ್ತು ಇತರೆ ಖರ್ಚುಗಳ ಮೊತ್ತವನ್ನು ಭರಿಸುವಷ್ಟು ಹಣ ಅವರ ಕೈಲಿರಲಿಲ್ಲ. ಗೆಳತಿ ಕೊಟ್ಟಿದ್ದ ಹಣ ಸಾಲುತ್ತಿರಲಿಲ್ಲ. ಬಾವನ ಬಳಿಯೂ ಹೆಚ್ಚು ಹಣವಿಲ್ಲ ಎಂಬುದನ್ನು ಆ ಹುಡುಗಿ ಅರಿತಿದ್ದಳು. ತನಗೆ ಹಾಗೂ ಹಾಗೂ ತಂಗಿಗೆ ಬರುತ್ತಿದ್ದ ಸಂಬಳ ಮನೆಯ ಖರ್ಚು ಮತ್ತು ಆಸ್ಪತ್ರೆಯ ಸಣ್ಣ ಪುಟ್ಟ ಖರ್ಚುಗಳಿಗೆ ಆಗುತ್ತಿತ್ತು. ಮಾವನ ಬಳಿ ಕೇಳೋಣವೆಂದರೆ, ಅವರಿಂದಲೂ ಇದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಏಕೆಂದರೆ ಮಾವನ ಹಣಕಾಸಿನ ಸ್ಥಿತಿಯನ್ನು ಸುಮತಿಯ ಮಗಳು ಬಲ್ಲವಳಾಗಿದ್ದಳು. ಅದೂ ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಯನ್ನು ತಿಂಗಳಿಗೆ ನಾಲ್ಕು ಬಾರಿಯಾದರೂ ತಾಯಿಗೆ ಕೊಡಿಸಬೇಕು ಎಂಬ ಸತ್ಯದ ಅರಿವೂ ಆಯಿತು. ಪ್ರತೀ ಬಾರಿಯೂ ಡಯಾಲಿಸಿಸ್ ಮಾಡಿಸುವಾಗಲೂ ಹೆಚ್ಚು ಹಣದ ಅಗತ್ಯ ಇರುತ್ತದೆ. ನಮಗೆ ಆಶ್ರಯ ನೀಡಿದ ಎಷ್ಟೇಟಿನ ಸಾಹುಕಾರರಲ್ಲೂ ಈ ರೀತಿಯ ದುಬಾರಿ ಚಿಕಿತ್ಸೆಗಾಗಿ ಹಣ ಪಡೆಯುವುದು ಕೂಡ ಸರಿಯಲ್ಲ. ಯಾರೂ ದಿಕ್ಕಿಲ್ಲದ ನಮಗೆ ಆಶ್ರಯ ನೀಡಿದ್ದಲ್ಲದೇ ತಾಯಿಯ ಹಲವು ಚಿಕಿತ್ಸೆಗಳಿಗಾಗಿ ಅವರು ಈವರೆಗೂ ಯಥೇಚ್ಛವಾಗಿ ಹಣವನ್ನು ಖರ್ಚು ಮಾಡಿದ್ದಾರೆ. ಕೂಲಂಕುಶವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ತಾಯಿ ಜೀವಂತವಿರುವವರೆಗೂ ಈ ಚಿಕಿತ್ಸೆಯನ್ನು ಆಗಾಗ ಕೊಡಿಸುತ್ತದೆ ಇರಬೇಕು. ಡಯಾಲಿಸಿಸ್ ಮಾಡಿಸುತ್ತಿದ್ದರೆ ತಾಯಿಯು ಇನ್ನೂ ಹೆಚ್ಚು ಕಾಲ ನಮ್ಮ ಜೊತೆ ಬದುಕುಳಿಯುತ್ತಾಳೆ. ಆದರೆ ಅದಕ್ಕಾಗಿ ಹಣವನ್ನು ಎಲ್ಲಿಂದ ಹೊಂದಿಸುವುದು? ಈ ಎಲ್ಲ ಚಿಂತೆಗಳು ಒಮ್ಮೆಲೇ ಆ ಹುಡುಗಿಯ ಆಲೋಚನೆಯಲ್ಲಿ ಮೂಡಿ ಅವಳನ್ನು ಗೊಂದಲಕ್ಕೀಡು ಮಾಡಿತು. ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತು ದೀರ್ಘವಾಗಿ ಆಲೋಚನೆಯಲ್ಲಿ ಮಗ್ನಳಾದಳು….”ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲಾದಾಗ ತನ್ನ ತಾಯಿಯ ಮುಖದಲ್ಲಿ ಮೂಡಿದ್ದ ಭರವಸೆ ಮತ್ತು ನೆಮ್ಮದಿಯ ಭಾವ ಈಗಲೂ ನಮ್ಮ ಮನವನ್ನು ತಲ್ಲಣಗೊಳಿಸುತ್ತಿದೆ…. ಏನು ಮಾಡಲಿ ದೇವರೇ!? ತಾಯಿಯ ಚಿಕಿತ್ಸೆಗಾಗಿ ಹಣವನ್ನು ಎಲ್ಲಿಂದ ಹೊಂದಿಸಲಿ?… ಚಿಕಿತ್ಸೆಯ ದುಬಾರಿ ಖರ್ಚಿಲ್ಲದೇ ಇಲ್ಲಿ ಬೆಂಗಳೂರಿನಲ್ಲಿ ದಿನವೂ ಓಡಾಡಲು, ಊಟದ ಖರ್ಚು ಮತ್ತು ಇನ್ನಿತರೆ ವೆಚ್ಚಕ್ಕೆ ಹಣದ ಅಗತ್ಯ ಇರುತ್ತದೆ….ನಾನು ಏನೇ ಪ್ರಯತ್ನ ಮಾಡಿದರೂ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಿಲ್ಲ”…. ಎಂದು ಸ್ವಗತ ಹೇಳಿಕೊಂಡ ಹುಡುಗಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು. ಒಂದೊಂದೇ ಆಲೋಚನೆಗಳು ಮನದಲ್ಲಿ ಹಾದು ಹೋದಾಗ ಅವಳಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಂಡಿ ಮೇಲೆ ತಲೆಯೂರಿ ತಮ್ಮೆಲ್ಲರ ಹತಾಶ ಸ್ಥಿತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ಅಳುವುದಲ್ಲದೆ ಅನ್ಯಮಾರ್ಗ ಅವಳಿಗೆ ಆ ನಿಮಿಷ ತೋಚಲಿಲ್ಲ. ನಾದಿನಿ ಅಳುತ್ತಿರುವುದನ್ನು ಕಂಡು ಬಾವನಿಗೆ ಕಸಿವಿಸಿಯಾಯಿತು. ಏನು ಹೇಳಿ ಆಕೆಯನ್ನು ಸಮಾಧಾನ ಪಡಿಸುವುದು ಎಂದು ಆತನಿಗೆ ತಿಳಿಯಲಿಲ್ಲ. ಅತ್ತು ಸಾಕಾಗಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಂತೆ ಸೀರೆಯ ಸೆರಗಿನಿಂದ ಕಣ್ಣುಗಳು ಹಾಗೂ ಮುಖವನ್ನು ಒರೆಸಿ ಕುಳಿತಲ್ಲಿಂದ ಎದ್ದಳು.
ಧಾರಾವಾಹಿ ಸಂಗಾತಿ-32 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಕನ್ನಡನಾಡಿನ ಸೇವೆ ನಡುನಾಡಿನ ಅಣ್ಣಂದಿರೆ| ಗಡಿಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲಒಡ ಹುಟ್ಟಿದ ಕನ್ನಡ ಮಕ್ಕಳು||-ಡಾ.ಜಯದೇವಿತಾಯಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು.. ೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು… ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ) ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು. ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು. ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು. ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು. ಏಕೀಕರಣವು ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು. ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು. ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು. ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು. ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್ಸಂಘಟನೆಯಾಗಿ ಕಂಡರು. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು. ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ. ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ. ಕರ್ನಾಟಕ ಏಕೀಕರಣದ ಇತಿಹಾಸವು ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ. ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನುಬಚ್ಚ ಬರಿಯ ನಿತ್ಯ- ನುಡಿಗನ್ನಡಅಚ್ಚೊತ್ತಿಕೊಳ್ಳಲೇನ ಅಖಂಡ||ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸಿಂಹ ನರಗುಂದ ಶ್ರೀ ಬಾಬಾಸಾಹೇಬ ಸಂಸ್ಥಾನ ಸಿಂಹ ಕ್ರಾಂತಿಕಾರಿ ಹೋರಾಟಗಾರ ಶ್ರೀ ಬಾಬಾಸಾಹೇಬ ಭಾವೆ ನರಗುಂದ ಸಂಸ್ಥಾನದ ಪ್ರಭು (1842-58) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ಅಪ್ರತಿಮ ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ. ನರಗುಂದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಅಪ್ರತಿಮ ವೀರ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ. ಇವರು ಬ್ರಿಟಿಷರ “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ತೀವ್ರವಾಗಿ ವಿರೋಧಿಸಿ, ದೇಶಪ್ರೇಮದ ಕಹಳೆ ಮೊಳಗಿಸಿದರು ಅಧಿಕಾರಕ್ಕೆ ಇವರ ತಂದೆ ದಾದಾಜಿ ತಾಯಿ ಯಮುನಾಬಾಯಿ. ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ. ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. ಬಂಡಾಯ ಆ ಕಾಲದಲ್ಲಿ ಲಾರ್ಡ್ ಡಾಲ್ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857). ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರೂ ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ಜಿದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಕೂಟ ರಚನೆ: ಬಾಬಾಸಾಹೇಬರು ಬ್ರಿಟಿಷರನ್ನು ಮಟ್ಟಹಾಕಲು ಮುಂಡರಗಿ ಭೀಮರಾವ್, ಸುರ್ಪುರ ವೆಂಕಟಪ್ಪ ನಾಯಕ, ರಾಮದುರ್ಗ, ಕೊಪ್ಪಳ ಮತ್ತು ನಿಪ್ಪಾಣಿಯ ಪ್ರಮುಖ ನಾಯಕರನ್ನು ಒಗ್ಗೂಡಿಸಿ ಬೃಹತ್ ಒಕ್ಕೂಟ ರಚಿಸಿಕೊಂಡರು. ಆರಂಭಿಕ ಗೆಲುವು ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ. ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ.ಹತ್ತಿರದ ಮಲ್ಲಿಕಾರ್ಜುನ ಗುಡ್ಡದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಮ್ಯಾನ್ಸನ್ ಮೇಲೆ ಬಾಬಾಸಾಹೇಬರ ಸೈನಿಕರು ಅನಿರೀಕ್ಷಿತ ದಾಳಿ ಮಾಡಿದರು. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ಅಗಸಿ ದ್ವಾರವೊಂದಕ್ಕೆ ನೇತುಹಾಕಲಾಯಿತು. ಮ್ಯಾನ್ಸನನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮತ್ತು ಮಾನ್ಯಾ ಬಾಪು ಮೊದಲಾದ ಬಾಬಾಸಾಹೇಬರ ಆಪ್ತರು ತಮ್ಮ ಕುಟಿಲುತನದಿಂದ ದ್ರೋಹ ಎಸಗಿ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ತಿಳಿಸಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ. ಸೋಲು ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ರಾಮದುರ್ಗ ತೊರೆದು ಹೋದ. ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದು ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರ ಬಾಬಾಸಾಹೇಬನನ್ನು ನೇಣುಹಾಕಲಾಯಿತು. ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು. ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು. 1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಹೀಗೊಂದು ಕ್ರಾಂತಿ ತನ್ನ ಜನರಿಂದಲೇ ನೆಲೆ ಕಚ್ಚಿತು.
ಅಂಕಣ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ *ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? “ಹುಟ್ಟಿನಿಂದ ಬಂದ ಗುಣ ಅಥವಾ ನೈಜ ಸ್ವಭಾವವನ್ನು ಎಂತಹ ಭವ್ಯ ಪರಿಸರದಲ್ಲೇ ಇಟ್ಟರೂ ಬದಲಾಯಿಸಲು ಸಾಧ್ಯವಿಲ್ಲ.” ಈ ಅನುಭವದ ಸಾರವನ್ನು ಹಿಡಿದಿಟ್ಟ ಗಾದೆಗಳು ನಮಗೆ ನೀಡಿದ ಅಮೂಲ್ಯ ಜ್ಞಾನದ ಮುತ್ತುಗಳು. ಹನಿ ಹನಿ ಸೇರಿದರೆ ಹಳ್ಳವಾಗುವಂತೆ, ಸಣ್ಣ ಸಾಲುಗಳಲ್ಲಿ ಇಡೀ ಜಗತ್ತಿನ ಸತ್ಯವನ್ನು ದರ್ಶಿಸುವ ಶಕ್ತಿ ಗಾದೆ ಮಾತಿನಲ್ಲಿವೆ. ಅಂತಹ ಅದ್ಭುತ ಗಾದೆಗಳಲ್ಲಿ “ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?” ಎನ್ನುವುದು ಪ್ರಮುಖವಾದದ್ದು. ಇದು ಕೇವಲ ಪಕ್ಷಿ ಪ್ರಪಂಚಕ್ಕೆ ಸೀಮಿತವಾಗದೆ, ಮನುಷ್ಯನ ಸಹಜ ಗುಣ, ಯೋಗ್ಯತೆ ಮತ್ತು ಅಹಂಕಾರದ ಮುಖವಾಡಗಳನ್ನು ಕಳಚಿಡುವ ಒಂದು ತತ್ವವಾಗಿದೆ.ಕಾಗೆಯ ಸ್ವರ ಬಹು ಕರ್ಕಶ ಧ್ವನಿ, ಸಾಮಾನ್ಯತೆ ಅಥವಾ ಕೀಳು ಗುಣದ ಸಂಕೇತ ಇಲ್ಲಿ ಕಾಗೆಯನ್ನು ಕೀಳಾಗಿ ಕಾಣುವುದಕ್ಕಿಂತ ಅದರ ಸಹಜ ಗುಣವನ್ನು ಗುರುತಿಸುವುದು ಮುಖ್ಯ.ಪಂಜರ (ಚಿನ್ನದ ಪಂಜರ): ಇದು ವೈಭೋಗ, ಕೃತಕವಾಗಿ ಸೃಷ್ಟಿಸಿದ ಉನ್ನತ ಪರಿಸರ ಅಥವಾ ಯೋಗ್ಯತೆಗೂ ಮೀರಿದ ಸ್ಥಾನದ ಸಂಕೇತ.ಪಂಚಮ ಸ್ವರದ ವಿಶೇಷತೆ ಎಂದರೆ ಸಂಗೀತದ ಅತ್ಯಂತ ಮಧುರವಾದ, ಕೋಗಿಲೆಯು ಹೊರಡಿಸುವ ಶ್ರೇಷ್ಠ ಧ್ವನಿಯ ಸಂಕೇತ.ಕೋಗಿಲೆಯನ್ನು ಚಿನ್ನದ ಪಂಜರದಲ್ಲಿಟ್ಟರೆ ಅದು ತನ್ನ ಮಧುರವಾದ ಪಂಚಮ ಸ್ವರದಿಂದ ಹಾಡುತ್ತದೆ. ಆದರೆ, ಕಾಗೆಯನ್ನು ತಂದು ಎಷ್ಟೇ ದುಬಾರಿ, ರತ್ನಖಚಿತ ಪಂಜರದಲ್ಲಿ ಕೂರಿಸಿದರೂ ಅದು ತನ್ನ ಸಹಜ ಗುಣವಾದ ‘ಕಾವ್ ಕಾವ್’ ಎಂಬ ಕರ್ಕಶ ಧ್ವನಿಯನ್ನೇ ಹೊರಡಿಸುತ್ತದೆಯೇ ಹೊರತು ಕೋಗಿಲೆಯಂತೆ ಹಾಡಲು ಸಾಧ್ಯವಿಲ್ಲ.ನೈಜ ಸ್ವಭಾವ ಮತ್ತು ಪರಿಸರದ ಮಿತಿಮಾನವನ ವ್ಯಕ್ತಿತ್ವ ವಿಕಸನದಲ್ಲಿ ಪರಿಸರ ಮತ್ತು ವಂಶವಾಹಿ (ಹುಟ್ಟುಗುಣ) ಎರಡೂ ಪಾತ್ರ ವಹಿಸುತ್ತವೆ. ಆದರೆ ಕೆಲವು ಮೂಲಭೂತ ಗುಣಗಳು ಹುಟ್ಟಿನಿಂದಲೇ ರಕ್ತಗತವಾಗಿ ಬಂದಿರುತ್ತವೆ. ಹೊರಗಿನ ಆಡಂಬರ, ಸಂಪತ್ತು ಅಥವಾ ಉನ್ನತ ಹುದ್ದೆಗಳು ಮನುಷ್ಯನ ಬಾಹ್ಯ ರೂಪವನ್ನು ಬದಲಾಯಿಸಬಹುದೇ ಹೊರತು ಆತನ ಆಂತರಿಕ ಯೋಗ್ಯತೆ ಅಥವಾ ದುರ್ಗುಣವನ್ನು ಬದಲಾಯಿಸಲಾರವು.ಒಬ್ಬ ಅಯೋಗ್ಯನಿಗೆ ರಾಜಸಿಂಹಾಸನವನ್ನು ನೀಡಿದರೂ ಆತ ಯೋಚಿಸುವ ರೀತಿ ಮತ್ತು ನಡೆದುಕೊಳ್ಳುವ ರೀತಿ ಆತನ ಅಲ್ಪತನವನ್ನೇ ಪ್ರದರ್ಶಿಸುತ್ತದೆ. ಕೆಸರಿನಲ್ಲಿ ಹುಟ್ಟಿದ ಕಮಲ ಪವಿತ್ರವಾಗುತ್ತದೆ, ಆದರೆ ಹಾವಿಗೆ ಹಾಲನ್ನು ಕುಡಿಸಿದರೂ ವಿಷವೇ ಹೊರಬರುತ್ತದೆ ವಿನಃ ಅಮೃತವಲ್ಲ. ಹಾಗೆಯೇ, ಆಂತರಿಕವಾಗಿ ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಅತ್ಯುನ್ನತ ಸಮಾಜದಲ್ಲಿ ಕೂರಿಸಿದರೂ ಆತನ ನೈಜ ಗುಣ ಒಂದಲ್ಲಾ ಒಂದು ದಿನ ಹೊರಬಂದೇ ತೀರುತ್ತದೆ.ಸಾಮಾಜಿಕ ಮತ್ತು ರಾಜಕೀಯ ಪ್ರಸ್ತುತತೆಯಲ್ಲಿನಇಂದಿನ ಆಧುನಿಕ ಸಮಾಜಕ್ಕೆ ಈ ಗಾದೆ ಮಾತು ಅತ್ಯಂತ ಪ್ರಸ್ತುತವಾಗಿದೆ. ಇಂದು ಹಣ, ಅಧಿಕಾರ ಅಥವಾ ವಂಶಪಾರಂಪರ್ಯದ ಪ್ರಭಾವದಿಂದ ಅನೇಕರು ಉನ್ನತ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದರೆ ಆ ಸ್ಥಾನಕ್ಕೆ ಬೇಕಾದ ಅರ್ಹತೆ, ಕರುಣೆ, ವಿವೇಕ ಅವರಲ್ಲಿ ಇರುವುದಿಲ್ಲ.ರಾಜಕೀಯದಲ್ಲಿ ಅರ್ಹತೆಯಿಲ್ಲದ ನಾಯಕನಿಗೆ ಎಷ್ಟೇ ದೊಡ್ಡ ಅಧಿಕಾರ ನೀಡಿದರೂ ಆತ ಜನಕಲ್ಯಾಣ ಮಾಡಲಾರ. ಆತನ ಭ್ರಷ್ಟ ಮತ್ತು ದುರಹಂಕಾರದ ಗುಣಗಳು ಹೊರಬೀಳುತ್ತವೆ. ಇದು ಕಾಗೆಯನ್ನು ಪಂಜರದಲ್ಲಿಟ್ಟಂತೆ.ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಅಷ್ಟೆ .ಕೇವಲ ಶಿಫಾರಸಿನಿಂದ ದೊಡ್ಡ ಹುದ್ದೆ ಪಡೆದ ವ್ಯಕ್ತಿ ಆ ಕೆಲಸದಲ್ಲಿ ಸೃಜನಶೀಲತೆ ತೋರಿಸಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದವನಿಗೆ ಐಷಾರಾಮಿ ಕಚೇರಿ (ಪಂಜರ) ಕೊಟ್ಟರೂ ಆತನಿಂದ ಗುಣಮಟ್ಟದ ಕೆಲಸ (ಪಂಚಮ ಸ್ವರ) ನಿರೀಕ್ಷಿಸಲು ಸಾಧ್ಯವಿಲ್ಲ.ಈ ಗಾದೆಯು ನಮಗೆ ಕೃತಕತೆ ಮತ್ತು ನೈಸರ್ಗಿಕತೆಯ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಕಾಗೆಗೆ ತನ್ನದೇ ಆದ ಮಹತ್ವವಿದೆ—ಅದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ, ಪಿತೃಕಾರ್ಯಗಳಲ್ಲಿ ಅದಕ್ಕೆ ಪ್ರಾಧಾನ್ಯತೆಯಿದೆ. ಆದರೆ, ಅದರ ಮಿತಿ ಅದಕ್ಕಿದೆ. ಕಾಗೆ ಕೋಗಿಲೆಯಾಗಲು ಯತ್ನಿಸುವುದು ಕೃತಕತೆ.ಅದೇ ರೀತಿ, ಮನುಷ್ಯ ತಾನು ಅಲ್ಲದೇ ಇರುವುದನ್ನು ತೋರಿಸಿಕೊಳ್ಳಲು ‘ಮುಖವಾಡ’ ಧರಿಸಿದಾಗ ಈ ಗಾದೆ ಅನ್ವಯಿಸುತ್ತದೆ. ಎಷ್ಟೇ ಶ್ರೀಮಂತಿಕೆಯ ಪ್ರದರ್ಶನ ಮಾಡಿದರೂ, ಆಚಾರ-ವಿಚಾರಗಳಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಶ್ರೀಮಂತಿಕೆ ವ್ಯರ್ಥ. ಬೂದಿಗೆ ತುಪ್ಪ ಸುರಿದರೆ ಹೋಮವಾಗುವುದಿಲ್ಲ, ಹಾಗೆಯೇ ಸಂಸ್ಕಾರಹೀನನಿಗೆ ಸಕಲ ಸೌಲಭ್ಯ ನೀಡಿದರೂ ಆತ ಸತ್ಪ್ರಜೆಯಾಗಲಾರ.ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಕನ್ನಡದ ಅನೇಕ ಶರಣರು ಮತ್ತು ದಾಸರು ಈ ಕಲ್ಪನೆಯನ್ನು ತಮ್ಮ ವಚನ ಹಾಗೂ ಕೀರ್ತನೆಗಳಲ್ಲಿ ಬಳಸಿದ್ದಾರೆ.”ಕಾಗೆಯ ತಂದು ಪಂಜರದೊಳಗಿಟ್ಟರೆ ಕೋಗಿಲೆಯಾಗಬಲ್ಲದೇ?”ಎಂದು ಜಗತ್ತಿನ ಕೃತಕತೆಯನ್ನು ವಚನಕಾರರು ಪ್ರಶ್ನಿಸಿದ್ದಾರೆ. ಆಧ್ಯಾತ್ಮಿಕವಾಗಿ, ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭಗಳೆಂಬ ಮಲಿನತೆ ತುಂಬಿರುವಾಗ, ದೇಹಕ್ಕೆ ಕಾವಿ ಬಟ್ಟೆ ಧರಿಸಿದ ತಕ್ಷಣ ಅಥವಾ ದೇವಸ್ಥಾನದೊಳಗೆ ಕುಳಿತ ತಕ್ಷಣ ಒಬ್ಬ ವ್ಯಕ್ತಿ ಮಹಾತ್ಮನಾಗಲು ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದ ಹೊರತು ಬಹಿರಂಗದ ಆಡಂಬರವೆಲ್ಲವೂ ಶೂನ್ಯ. ಕಾಗೆಯ ಕಪ್ಪು ಬಣ್ಣವನ್ನು ತೊಳೆದರೆ ಬಿಳಿಯಾಗುವುದಿಲ್ಲ, ಹಾಗೆಯೇ ದುರ್ಬುದ್ಧಿಯುಳ್ಳವನಿಗೆ ತೀರ್ಥಸ್ನಾನ ಮಾಡಿಸಿದರೂ ಆತನ ಪಾಪ ಅಥವಾ ಕುಟಿಲತೆ ದೂರವಾಗುವುದಿಲ್ಲ.ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? ಎಂಬ ಮಾತು ನಮಗೆ ಬದುಕಿನ ದೊಡ್ಡ ಸತ್ಯವನ್ನು ಬೋಧಿಸುತ್ತದೆ.ಸ್ವಯಂ ಅರಿವು ಉಂಟಾಗುತ್ತದೆ.ನಾವು ಯಾರೋ ಆಗಲು ಪ್ರಯತ್ನಿಸದೇ, ನಮ್ಮ ನೈಜ ಸಾಮರ್ಥ್ಯವನ್ನು ಗುರುತಿಸಿ ಬೆಳೆಯಬೇಕು. ಬಾಹ್ಯ ವೈಭವವನ್ನು ನೋಡಿ ವ್ಯಕ್ತಿಯನ್ನು ಅಳೆಯಬಾರದು, ಆತನ ಆಂತರಿಕ ಯೋಗ್ಯತೆ ಮತ್ತು ನಡತೆಗೆ ಬೆಲೆ ಕೊಡಬೇಕು.ಕೇವಲ ಪರಿಸರ ಬದಲಾದರೆ ಸಾಲದು, ವ್ಯಕ್ತಿಯ ಆಂತರಿಕ ಗುಣ ಮತ್ತು ಯೋಚನಾ ಲಹರಿ ಬದಲಾಗಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಿತಿಯನ್ನು ಅರಿತು, ಕೃತಕ ಮುಖವಾಡಗಳನ್ನು ಕಳಚಿ ಹಾಕಿ, ಸತ್ಸಂಗ ಮತ್ತು ಸದ್ವಿಚಾರಗಳ ಮೂಲಕ ತನ್ನ ಆಂತರಿಕ ಗುಣವನ್ನು ಕೋಗಿಲೆಯಂತೆ ಮಧುರವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಮಾತು ಮನುಷ್ಯನ ಆಂತರಿಕ ಪ್ರಕೃತಿ ಮತ್ತು ಬಾಹ್ಯ ಪ್ರಭಾವಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಮನಃಶಾಸ್ತ್ರದಲ್ಲಿ ಇದನ್ನು ಹುಟ್ಟುಗುಣ ಅಥವಾ ಬೆಳೆಸಿದ ವಾತಾವರಣ ಎನ್ನಲಾಗುತ್ತದೆ. ಇಂದು ಜಗತ್ತು ಕೇವಲ ‘ಪಂಜರ’ಗಳನ್ನು ಅಂದರೆ ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳು, ಬ್ರ್ಯಾಂಡೆಡ್ ಬಟ್ಟೆಗಳನ್ನು ನೋಡಿ ವ್ಯಕ್ತಿಯ ಯೋಗ್ಯತೆಯನ್ನು ಅಳೆಯುತ್ತದೆ. ಆದರೆ, ಮಾನಸಿಕವಾಗಿ ವಿಕಾಸಗೊಳ್ಳದ, ಸಣ್ಣತನದ ಯೋಚನೆ ಇರುವ ವ್ಯಕ್ತಿಯನ್ನು ಎಷ್ಟೇ ದೊಡ್ಡ ಶ್ರೀಮಂತಿಕೆಯಲ್ಲಿ ಇಟ್ಟರೂ ಆತನ ಮಾತುಗಳು ಮತ್ತು ವರ್ತನೆಗಳು ಕಾಗೆಯ ಕರ್ಕಶ ಧ್ವನಿಯಂತೆಯೇ ಇರುತ್ತವೆ.ಕಾಗೆಯು, ಕೋಗಿಲೆಯನ್ನು ನೋಡಿ ನಕಲು ಮಾಡಲು ಸಾಧ್ಯವಿಲ್ಲ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ತಾವೂ ಹಾಗೆಯೇ ಬದುಕಲು ಕೃತಕವಾಗಿ ಪ್ರಯತ್ನಿಸುತ್ತಿದೆ. ತನ್ನ ಮೂಲ ಅಸ್ತಿತ್ವವನ್ನು ಮರೆತು, ಬೇರೊಬ್ಬರ ಮುಖವಾಡ ಧರಿಸಿದಾಗ ಮನುಷ್ಯ ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಕಾಗೆಗೆ ತನ್ನದೇ ಆದ ಸ್ವಾತಂತ್ರ್ಯವಿದೆ, ಆದರೆ ಅದು ಕೋಗಿಲೆಯಾಗಲು ಹೋದಾಗ ಮಾತ್ರ ಹಾಸ್ಯಾಸ್ಪದವಾಗುತ್ತದೆ.ಕುಟುಂಬ ಮತ್ತು ಸಂಸ್ಕಾರದ ಹಿನ್ನೆಲೆಯಲ್ಲಿ ಈ ಗಾದೆಗೆ ಭಿನ್ನವಾದ ಅರ್ಥವಿದೆ. ಕೇವಲ ಶ್ರೀಮಂತ ಅಥವಾ ಪ್ರಭಾವಿ ಕುಟುಂಬದಲ್ಲಿ ಹುಟ್ಟಿದ ತಕ್ಷಣ ಒಬ್ಬ ವ್ಯಕ್ತಿಗೆ ಯೋಗ್ಯತೆ ಬಂದುಬಿಡುವುದಿಲ್ಲ. ಸಮಾಜದಲ್ಲಿ ದೊಡ್ಡ ಮನೆತನದಲ್ಲಿ ಹುಟ್ಟಿ, ಸಕಲ ಸೌಕರ್ಯಗಳ ಮಧ್ಯೆ ಬೆಳೆದ ಎಷ್ಟೋ ಮಕ್ಕಳು ದುಶ್ಚಟಗಳಿಗೆ ದಾಸರಾಗಿ, ಸಮಾಜಕ್ಕೆ ಕಂಟಕರಾಗುವುದನ್ನು ನಾವು ನೋಡುತ್ತೇವೆ. ಇಲ್ಲಿ ‘ದೊಡ್ಡ ಮನೆತನ’ ಎನ್ನುವುದು ಚಿನ್ನದ ಪಂಜರ ಇದ್ದಂತೆ. ಆದರೆ ಆ ಮಗುವಿನಲ್ಲಿ ಮೂಲತಃ ಒಳ್ಳೆಯ ಗುಣ, ವಿನಯ ಮತ್ತು ಸಂಸ್ಕಾರ ಇಲ್ಲದಿದ್ದರೆ, ಆತ ಸಮಾಜದಲ್ಲಿ ‘ಪಂಚಮ ಸ್ವರ’ದಂತಹ ಕೀರ್ತಿಯನ್ನು ತರಲಾರ. ರಾಜನ ಮಗ ರಾಜನಾಗಬಹುದು, ಆದರೆ ಆತ ಪ್ರಜಾವತ್ಸಲನಾದ ನಾಯಕನಾಗಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದ ಉತ್ತರಾಧಿಕಾರಿಗೆ ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಹಸ್ತಾಂತರಿಸಿದರೂ ಆತ ಅದನ್ನು ನಾಶ ಮಾಡುತ್ತಾನೆಯೇ ಹೊರತು ರಕ್ಷಿಸುವುದಿಲ್ಲ. ಯೋಗ್ಯತೆಯನ್ನು ತರಬೇತಿಯಿಂದ ಕೊಡಬಹುದೇ ಹೊರತು, ಜನ್ಮಸಿದ್ಧ ಹಕ್ಕಾಗಿ ಅಥವಾ ಆಸ್ತಿಯ ರೂಪದಲ್ಲಿ ವರ್ಗಾಯಿಸಲು ಸಾಧ್ಯವಿಲ್ಲ.ಕಲೆ ಮತ್ತು ಸಾಹಿತ್ಯದ ಲೋಕದಲ್ಲಿ ಈ ಗಾದೆಯು ‘ಪ್ರತಿಭೆ’ ಮತ್ತು ‘ಅವಕಾಶ’ಗಳ ನಡುವಿನ ಸಂಬಂಧವನ್ನು ವಿವರಿಸುತ್ತದೆ. ಕಲೆ ಎನ್ನುವುದು ದೈವದತ್ತವಾದದ್ದು ಮತ್ತು ಕಠಿಣ ಪರಿಶ್ರಮದಿಂದ ಒಲಿಯುವಂತದ್ದು. ಇಂದು ಕಲಾ ಜಗತ್ತಿನಲ್ಲಿ ಅಥವಾ ಸಿನಿಮಾ ರಂಗದಲ್ಲಿ ಯಾವುದೇ ಪ್ರತಿಭೆಯಿಲ್ಲದ ವ್ಯಕ್ತಿಗೆ ಹಣದ ಬಲದಿಂದ ದೊಡ್ಡ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು. ಆದರೆ, ಜನಮನ ಗೆಲ್ಲುವಂತಹ ‘ಪಂಚಮ ಸ್ವರ’ವನ್ನು ಸೃಷ್ಟಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ನೈಜ ಪ್ರತಿಭೆಯಿಲ್ಲದ ನಟನೆ ಅಥವಾ ಸಂಗೀತ ಕೃತಕವಾಗಿ ಕಾಣುತ್ತದೆ.ಕಾಗೆ ಕಪ್ಪಗಿದ್ದರೂ ಸಮಾಜಕ್ಕೆ ಅದರದೇ ಆದ ಕೊಡುಗೆಯಿದೆ. ಆದರೆ ಅದನ್ನು ಕೋಗಿಲೆಯ ಸ್ಥಾನದಲ್ಲಿ ಕೂರಿಸುವುದು ಕಲೆಯ ಅಪಚಾರವಾಗುತ್ತದೆ. ಅದೇ ರೀತಿ, ಅನರ್ಹರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಉನ್ನತ ಪೀಠದಲ್ಲಿ ಕೂರಿಸಿದಾಗ ಇಡೀ ಸಾಂಸ್ಕೃತಿಕ ವ್ಯವಸ್ಥೆಯೇ ಹದಗೆಡುತ್ತದೆ ಎಂಬುದನ್ನು ಈ ಗಾದೆ ಎಚ್ಚರಿಸುತ್ತದೆ.ನಮ್ಮ ಭಾರತೀಯ ದರ್ಶನಗಳಲ್ಲಿ ಅಥವಾ ವೇದಾಂತದಲ್ಲಿ ಈ ಗಾದೆಗೆ ಅತ್ಯಂತ ಆಳವಾದ ತಾತ್ವಿಕ ಹಿನ್ನೆಲೆಯಿದೆ. ಇಲ್ಲಿ ಪಂಜರ ಎನ್ನುವುದು ‘ಐಹಿಕ ಜಗತ್ತು’ ಅಥವಾ ‘ದೇಹ’, ಕಾಗೆ ಎನ್ನುವುದು ‘ಅಹಂಕಾರ’ ಅಥವಾ ‘ಅಜ್ಞಾನ’.ಅಂತರಂಗದ ಶುದ್ಧಿಯೆನ್ನಬಹುದು. ಮನುಷ್ಯನು, ಕಾಶಿ, ರಾಮೇಶ್ವರ ಅಥವಾ ಮಕ್ಕಾಗೆ ಹೋಗಿ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿದರೂ ಆತನ ಮನಸ್ಸಿನಲ್ಲಿರುವ ಕ್ರೌರ್ಯ, ಅಸೂಯೆ ಮತ್ತು ಕಾಮನೆಗಳು ದೂರವಾಗುವುದಿಲ್ಲ. ದೇಹಕ್ಕೆ ಚಂದನ ಸವರಿದರೂ ಒಳಗಿರುವ ಕೊಳಕು ನಾಶವಾಗುವುದಿಲ್ಲ. ಧಾರ್ಮಿಕ ಆಚರಣೆಗಳು ಕೇವಲ ಬಾಹ್ಯ ಪಂಜರದಂತೆ. ಮನಸ್ಸು ಶುದ್ಧವಾಗದ ಹೊರತು ಭಗವಂತನ ಸಾಕ್ಷಾತ್ಕಾರವೆಂಬ ಪಂಚಮ ಸ್ವರ ಹೊರಹೊಮ್ಮಲು ಸಾಧ್ಯವಿಲ್ಲ. ಹಿಂದೂ ತತ್ತ್ವಶಾಸ್ತ್ರದ ಪ್ರಕಾರ, ಮನುಷ್ಯ ತನ್ನ ಹಿಂದಿನ ಜನ್ಮಗಳ ‘ವಾಸನೆ’ (ಗುಣಗಳು) ಮತ್ತು ಕರ್ಮಗಳನ್ನು ಹೊತ್ತು ತರುತ್ತಾನೆ. ಆ ಹುಟ್ಟುಗುಣವನ್ನು ಕೇವಲ ಬಾಹ್ಯ ಪರಿಸರದಿಂದ ಬದಲಾಯಿಸುವುದು ಕಷ್ಟ. ಕಟುಕನ ಕೈಯಲ್ಲಿರುವ ಕತ್ತಿಗೆ ಚಿನ್ನದ ಹಿಡಿ ಹಾಕಿದರೂ ಅದು ರಕ್ತವನ್ನೇ ಹರಿಸುತ್ತದೆಯೆ ಹೊರತು ಕಬ್ಬಿನ ಹಾಲನ್ನು ಹರಿಸಲಾರದು .ಹಾಗೆಯೇ, ತಾಮಸ ಗುಣವುಳ್ಳ ವ್ಯಕ್ತಿಗೆ ಸಾತ್ವಿಕ ವಾತಾವರಣ ಕಲ್ಪಿಸಿದರೂ ಆತನ ಆಲೋಚನೆಗಳು ತಾಮಸಿಕವಾಗಿಯೇ ಇರುತ್ತವೆ.ಜಾಗತಿಕ ಮಟ್ಟದಲ್ಲಿ ಅಥವಾ ಇಂದಿನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಈ ಗಾದೆ ಅತ್ಯಂತ ಮಾರ್ಮಿಕವಾದ ವಿಡಂಬನೆಯನ್ನು ಮಾಡುತ್ತದೆ.ಪದವಿಗಳು ಮತ್ತು ಪ್ರಬುದ್ಧತೆಗಳಿಗೂ ಬೇರೆ ಮಾತು ಹೇಳಬೇಕಾಗಿಲ್ಲ. ಇಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರೂಪಾಯಿ ಕೊಟ್ಟು ಪದವಿ (Degrees) ಪಡೆದವರು ದೇಶದಲ್ಲಿದ್ದಾರೆ. ಈ ಪದವಿಗಳು ಕೇವಲ ಒಂದು ಪಂಜರವಿದ್ದಂತೆ. ಆದರೆ, ಸಮಾಜಕ್ಕೆ ಬೇಕಾದ ಕರುಣೆ, ನೈತಿಕತೆ, ಮತ್ತು ದೇಶಪ್ರೇಮ ಅವರಲ್ಲಿ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಜ್ಞಾನವಿದ್ದಲ್ಲಿ ವಿನಯವಿರಬೇಕು, ಆದರೆ ಕೇವಲ ಅಹಂಕಾರದ ‘ಕಾವ್ ಕಾವ್’ ಧ್ವನಿ ಕೇಳಿಬಂದರೆ ಆ ಶಿಕ್ಷಣ ಸಂಪೂರ್ಣ ವಿಫಲ ಎಂದರ್ಥ.ವ್ಯವಸ್ಥೆಯ ವೈಫಲ್ಯವು ಎಷ್ಟು ಕೆಟ್ಟು ಹೋಗಿದೆ ಎಂದರೆ, ಯಾವುದೇ ಒಂದು ಸಂಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ನೌಕರನನ್ನು ಮೂಲೆಗುಂಪು ಮಾಡಿ, ಕೇವಲ ಹಿತೈಷಿ ಅಥವಾ ಚಮಚಾಗಿರಿ ಮಾಡುವ ವ್ಯಕ್ತಿಗೆ ಉನ್ನತ ಮ್ಯಾನೇಜರ್ ಹುದ್ದೆ ನೀಡಿದರೆ ಆ ಸಂಸ್ಥೆ ದಿವಾಳಿಯಾಗುತ್ತದೆ. ಕಾಗೆಯನ್ನು ಸಿಂಹಾಸನದ ಮೇಲೆ ಕೂರಿಸಿದಾಗ ಇಡೀ ಸಾಮ್ರಾಜ್ಯವೇ ಪತನದ ಹಾದಿ ಹಿಡಿಯುತ್ತದೆ ಎಂಬ ರಾಜನೀತಿಯ ಸತ್ಯವನ್ನು ಇದು ಜ್ಞಾಪಿಸುತ್ತದೆ.ಈ ಗಾದೆ ಮಾತು ಕೇವಲ ನಕಾರಾತ್ಮಕವಾಗಿ ಕಾಗೆಯನ್ನು ನಿಂದಿಸುವ ಮಾತಲ್ಲ; ಬದಲಿಗೆ ಇದು ಪ್ರಕೃತಿಯ ನಿಯಮವನ್ನು ಎತ್ತಿಹಿಡಿಯುವ ಸತ್ಯ. “ಯಾರಿಗೆ ಎಲ್ಲಿ ಗೌರವ ಸಿಗಬೇಕೋ ಅಲ್ಲಿ ಸಿಗಬೇಕು ಮತ್ತು ಯಾರು ತಮ್ಮ ನೈಜ ಗುಣಕ್ಕೆ ತಕ್ಕಂತೆ ಬದುಕಬೇಕೋ ಹಾಗೆ ಬದುಕಬೇಕು.”ಕಾಗೆ ಮುಕ್ತವಾಗಿ ಆಕಾಶದಲ್ಲಿ ಹಾರಾಡುತ್ತಾ ಪ್ರಕೃತಿಯನ್ನು ಸ್ವಚ್ಛಗೊಳಿಸುವಾಗ ಸುಂದರವಾಗಿರುತ್ತದೆ. ಅದನ್ನು ತಂದು ಪಂಜರದಲ್ಲಿಟ್ಟು ಕೋಗಿಲೆಯಾಗಲು ಒತ್ತಾಯಿಸುವುದು ಕಾಗೆಗೂ ಮಾಡುವ ಅನ್ಯಾಯ, ಪಂಜರಕ್ಕೂ ಮಾಡುವ ಅಪಚಾರ. ಆದ್ದರಿಂದ, ಪ್ರತಿಯೊಬ್ಬ ಮನುಷ್ಯನೂ ತನ್ನ ನೈಜ ಸಾಮರ್ಥ್ಯವನ್ನು ಅರಿತು, ಕೃತಕ ಆಡಂಬರಗಳಿಗೆ ಮಾರುಹೋಗದೆ, ತನ್ನ ಅಂತರಂಗವನ್ನು ಶುದ್ಧೀಕರಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗುವ ‘ಪಂಚಮ
ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.
ಧಾರಾವಾಹಿ ಸಂಗಾತಿ–129 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರು ತಲುಪಿದ ಸುಮತಿ ಸುಮತಿಯ ಎರಡನೇ ಮಗಳು ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬೆಂಗಳೂರಿನಲ್ಲಿರುವ ಮಾವನ ವಿಳಾಸವನ್ನು ಪಡೆದುಕೊಂಡು ಬಂದಳು. ಹೆಚ್ಚು ತಡ ಮಾಡಿದರೆ ಸುಮತಿಯ ಆರೋಗ್ಯದಲ್ಲಿ ಮತ್ತೆ ಇನ್ನೇನು ಏರುಪೇರು ಆಗುವುದೋ ಎಂದು ಆದಷ್ಟು ಬೇಗ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗುವ ತಯಾರಿಯನ್ನು ಸುಮತಿಯ ಕುಟುಂಬ ಮಾಡತೊಡಗಿತು. ತನ್ನ ತಾಯಿಗೆ ಹೆಚ್ಚು ನಡೆದಾಡಲು ಕಷ್ಟವಾಗುತ್ತದೆ. ಹಾಗಾಗಿ ಊರಿಗೆ ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬುದನ್ನು ಅರಿತ ಎರಡನೇ ಮಗಳು ಅನಾಥಾಶ್ರಮದ ಸೆಕ್ರೆಟರಿಯವರ ಅನುಮತಿಯನ್ನು ಪಡೆದು ತನ್ನ ಜೊತೆಯಲ್ಲಿ ತನ್ನ ಕೋಣೆಯಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಿದಳು. ಮಾರನೇ ದಿನ ಎಸ್ಟೇಟಿನ ಸಾಹುಕಾರರು ತಮ್ಮ ಕಾರು ಹಾಗೂ ಚಾಲಕನನ್ನು ಅನಾಥಾಶ್ರಮಕ್ಕೆ ಕಳುಹಿಸಿ, ಸುಮತಿಯನ್ನು ಸುರಕ್ಷಿತವಾಗಿ ಬೆಂಗಳೂರಿನ ಸುಮತಿಯ ತಮ್ಮನ ಮನೆಗೆ ತಲುಪಿಸುವಂತೆ ತಿಳಿಸಿದರು. ಸುಮತಿಯ ಎರಡನೇ ಮಗಳ ಕೈಲಿ ಹೆಚ್ಚು ಹಣವಿರಲಿಲ್ಲ. ಇದನ್ನು ಅರಿತ ಆಶ್ರಮದಲ್ಲಿ ಇತರೆ ಕೆಲಸಗಳಿಗೆ ಸಹಾಯಕ್ಕೆ ಬಂದಿದ್ದ ಹುಡುಗಿ ತನ್ನ ಗೆಳತಿಯ ಸ್ಥಿತಿಯನ್ನು ಗಮನಿಸಿ, ತಾನು ಮುಂದಿನ ವರ್ಷದಲ್ಲಿ ನರ್ಸಿಂಗ್ ತರಬೇತಿಗೆ ಸೇರಬೇಕೆಂದು ಕೂಡಿಟ್ಟಿದ್ದ ಹಣವನ್ನು ತಂದು ತನ್ನ ಸ್ನೇಹಿತೆಯ ಕೈಯಲ್ಲಿ ಇಟ್ಟು…. “ನೀನು ಮೊದಲು ನಿನ್ನ ತಾಯಿಗೆ ಚಿಕಿತ್ಸೆಯನ್ನು ಕೊಡಿಸು…. ಮುಂದಿನ ವರ್ಷ ತಾನೇ ನಾನು ತರಬೇತಿಗೆ ಸೇರಿಕೊಳ್ಳುವುದು… ಅಷ್ಟರ ಒಳಗಾಗಿ ನೀನು ನಿಧಾನವಾಗಿ ಈ ಹಣವನ್ನು ನನಗೆ ಹಿಂತಿರುಗಿ ಕೊಡುವಿಯಂತೆ”….. ಎಂದು ಹೇಳಿದಳು. ಬೆಂಗಳೂರಿಗೆ ಹೋಗಿ ಬರುವ ಖರ್ಚಿಗಾಗಿ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದ ಸುಮತಿಯ ಮಗಳಿಗೆ ಆಕೆಯ ಗೆಳತಿಯೇ ಆಪದ್ಬಾಂಧವಳಾಗಿ ಬಂದು ಸಹಾಯವನ್ನು ಮಾಡಿದ್ದಳು. ತನ್ನ ಪರಿಸ್ಥಿತಿಯನ್ನು ಅರಿತು ಕಷ್ಟಕ್ಕೆ ನೆರವಾದ ಗೆಳತಿಯನ್ನು ಅಪ್ಪಿಕೊಂಡು ಆ ಹುಡುಗಿ ಗದ್ಗದಿತಳಾದಳು…. ₹ನಿನ್ನ ಈ ಉಪಕಾರವನ್ನು ನಾನು ಈ ಜನ್ಮದಲ್ಲಿ ಮರೆಯುವುದಿಲ್ಲ…. ನೀನು ಹೀಗೆ ನನಗೆ ಸಹಾಯ ಮಾಡುತ್ತೀಯಾ ಎಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ…. ನಿನ್ನ ಅಂತಃಕರಣ ದೊಡ್ದದು…..ಯಾವ ರೀತಿಯಲ್ಲಿ ನಿನಗೆ ಕೃತಜ್ಞತೆ ಸಲ್ಲಿಸಲಿ ಎಂದು ತಿಳಿಯುತ್ತಿಲ್ಲ”…ಎಂದು ಹೇಳುತ್ತಾ ಅತ್ತುಬಿಟ್ಟಳು. ತನ್ನ ಗೆಳತಿಯ ತಲೆಯನ್ನು ನೇವರಿಸುತ್ತಾ…..”ನಿನ್ನ ತಾಯಿ ಮತ್ತು ನನ್ನ ತಾಯಿ ಬೇರೆ ಬೇರೆಯಲ್ಲ…. ಇಬ್ಬರೂ ಒಂದೇ ಎಂದು ನಾನು ತಿಳಿದಿದ್ದೇನೆ… ನನ್ನ ಕೈಲಿ ಆದ ಪುಟ್ಟ ಸಹಾಯವನ್ನು ನಾನು ನಿನಗೆ ಮಾಡಿದ್ದೇನೆ….. ನೀನು ಮಾಡಬೇಕಾಗಿದ್ದು ಇನ್ನೂ ಇದೆ…. ಆದಷ್ಟು ಬೇಗ ನಿನ್ನ ತಾಯಿಗೆ ಚಿಕಿತ್ಸೆ ಕೊಡಿಸು….ಇಲ್ಲಿನ ಕೆಲಸಗಳನ್ನು ಮಾಡಲು ನಾನಿದ್ದೇನೆ….ಈಗ ಹೇಗಿದ್ದರೂ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದೆ…. ಶಾಲೆಗೆ ರಜೆಯೂ ಇದೆ….ಹಾಗಾಗಿ ನೀನು ನಿಶ್ಚಿಂತೆಯಿಂದ ಹೋಗಿ ಬಾ”…. ಎಂದು ಹೇಳುತ್ತಾ ತನ್ನ ಗೆಳತಿಗೆ ಸಾಂತ್ವನ ಹೇಳಿ ಬೀಳ್ಕೊಟ್ಟಳು. ಅಳಿಯ ಹಿಂದಿನ ರಾತ್ರಿಯೇ ಬಂದು ಸುಮತಿಯ ಜೊತೆಯೇ ಉಳಿದುಕೊಂಡಿದ್ದರಿಂದ ಬೆಳಗ್ಗೆ ಬೇಗನೇ ಬೆಂಗಳೂರಿಗೆ ಹೊರಡಲು ಅನುಕೂಲವಾಯಿತು. ಹಿಂದಿನ ದಿನವೇ ಹಿರಿಯ ಮಗಳು, ಮೊಮ್ಮಕ್ಕಳು, ಮೂರನೇ ಮಗಳು ಸುಮತಿಯನ್ನು ನೋಡಲು ಬಂದಿದ್ದರು. ಕೊನೆಯ ಮಗಳು ಮಧ್ಯ ಪ್ರದೇಶದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳು ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಪತ್ರದ ಮೂಲಕ ತಾಯಿಯ ಯೋಗಕ್ಷೇಮದ ವಿವರಗಳನ್ನು ತಿಳಿಸಲಾಗುತ್ತಿತ್ತು. ಅವಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳ ವ್ಯಾಸಂಗಕ್ಕೆ ತೊಂದರೆಯಾಗದೆ ಇರಲೆಂದು ತನ್ನ ಆರೋಗ್ಯ ತೀರಾ ಹದಗಟ್ಟಿದೆ ಎಂಬ ವಿಚಾರವನ್ನು ಅವಳಿಗೆ ತಿಳಿಸುವುದು ಬೇಡ ಎಂದು ಸುಮತಿ ತಾಕೀತು ಮಾಡಿದ್ದಳು. ತಾಯಿಯ ಅಣತಿಯಂತೆ ಮಕ್ಕಳು ನಡೆದುಕೊಂಡರು. ಸುಮತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬೆಳಗ್ಗೆ ಕಾರು ಬರುವುದೆಂದು ಹಿಂದಿನ ದಿನ ಟೆಲಿಫೋನ್ ಮುಖಾಂತರ ಸಾಹುಕಾರರ ಜೊತೆಗೆ ಎರಡನೇ ಮಗಳು ಮಾತನಾಡಿದಾಗ ತಿಳಿಸಿದ್ದರು. ಹಾಗಾಗಿ ಬೆಳಗ್ಗೆಯೇ ಸುಮತಿ,ಅಳಿಯ ಮತ್ತು ಎರಡನೇ ಮಗಳು ತಯಾರಾದರು. ಅವರಿಗೆ ಚಿರಪರಿಚಿತನಾದ ಚಾಲಕನಾದ ಕಾರಣ ದಾರಿಯಲ್ಲಿ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಸುಮತಿಗೆ ಯಾವುದೇ ರೀತಿಯಲ್ಲೂ ಆಯಾಸವಾಗದಂತೆ ನಿಧಾನ ಗತಿಯಲ್ಲಿ ಚಾಲಕನು ಕಾರಿನ ಚಾಲನೆ ಮಾಡುತ್ತಿದ್ದ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಉತ್ತಮವಾದ ಹೋಟೆಲ್ ಗಳಿಗೆ ಕರೆದುಕೊಂಡು ಹೋಗಿ ಊಟ ಮಾಡಲು ಅನುಕೂಲ ಮಾಡಿಕೊಟ್ಟು ಅವರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸುತ್ತಿದ್ದ. ಸುಮತಿಗೆ ಡಯಾಬಿಟಿಸ್ ಇರುವ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕಿತ್ತು. ಮಧ್ಯಾಹ್ನದ 3:00 ಹೊತ್ತಿಗೆ ಕಾರು ಸುಮತಿಯ ತಮ್ಮನ ಮನೆಯನ್ನು ತಲುಪಿತು. ಅಕ್ಕನ ಮಗಳು ಪತ್ರದ ಮೂಲಕ ಬರೆದು ತಿಳಿಸಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕ ಬೆಂಗಳೂರಿಗೆ ಬರುವುದು ತಮ್ಮನಿಗೆ ತಿಳಿದಿತ್ತು. ಸುಮತಿಯನ್ನು ಕಂಡು ಅವಳ ತಮ್ಮನ ಕುಟುಂಬದ ಎಲ್ಲರಿಗೂ ಸಂತಸವಾಯಿತು. ತಮ್ಮನ ಹೆಂಡತಿ ಮತ್ತು ಮಕ್ಕಳು ಬಂದು ಜಾಗ್ರತೆಯಿಂದ ಸುಮತಿಯನ್ನು ಮನೆಯ ಒಳಗೆ ಕರೆದುಕೊಂಡು ಹೋದರು. ಸಕಲೇಶಪುರದಿಂದ ಸುಮತಿಯನ್ನು ಕರೆದುಕೊಂಡು ಬಂದ ಚಾಲಕನನ್ನು ಮನೆಯ ಒಳಗೆ ಕರೆದು ಆತನಿಗೆ ಕಾಫಿ ತಿಂಡಿಯನ್ನು ಕೊಟ್ಟು ಉಪಚರಿಸಿ, ಕೃತಜ್ಞತೆಗಳನ್ನು ತಿಳಿಸಿ ಕಳುಹಿಸಿಕೊಟ್ಟರು. ಸುಮತಿಯ ತಮ್ಮ ಮೊದಲೇ ಆಸ್ಪತ್ರೆಯ ಬಗ್ಗೆ ಕೂಲಂಕುಶವಾಗಿ ಕೇಳಿ ತಿಳಿದುಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಬೇಗನೆ ಆಸ್ಪತ್ರೆಗೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅಂದು ರಾತ್ರಿ ತಮ್ಮನ ಹೆಂಡತಿ ಸುಮತಿಗೆ ಇಷ್ಟವಾದ ವಿಶೇಷ ಅಡಿಗೆಯನ್ನು ಮಾಡಿ ಬಡಿಸಿದಳು. ಎಲ್ಲರೂ ಸಂತೋಷದಿಂದ ರಾತ್ರಿ ಊಟ ಮಾಡಿ ಮಾತನಾಡುತ್ತಾ ಕಾಲ ಕಳೆದರು. ಅತ್ತೆಯೆಂದರೆ ತಮ್ಮನ ಮಕ್ಕಳಿಗೆ ಅಚ್ಚುಮೆಚ್ಚು. ಅತ್ತೆ ಹೇಳುವ ಕಥೆಯು ಅವರಿಗೆ ಪ್ರಿಯ. ತಮ್ಮನ ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಸುಮತಿಗೂ ಖುಷಿ. ಆದರೆ ಸುಮತಿಯ ಆರೋಗ್ಯ ಸರಿ ಇಲ್ಲದೇ ಇರುವುದನ್ನು ಅರಿತ ಮಕ್ಕಳು ಅತ್ತೆಗೆ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದರು. ಅಕ್ಕನ ಆರೋಗ್ಯ ತೀರಾ ಹದಗಟ್ಟಿರುವುದನ್ನು ಅರಿತ ತಮ್ಮ ಬಹಳ ಚಿಂತಿತನಾದನು.
ಧಾರಾವಾಹಿ ಸಂಗಾತಿ-31 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯಕ್ಕೆ ಪೂರ್ಣವಿರಾಮ ಅತ್ಯಂತ ಧೀಮಂತ ವ್ಯಕ್ತಿತ್ವ, ಪ್ರಖರ ವಾಗ್ಮಿತೆ ಮತ್ತು ಜನಮನ ಸೆಳೆಯುವ ಮಾತಿನ ಶೈಲಿಯನ್ನು ಹೊಂದಿದ್ದ ಜಯದೇವಿತಾಯಿಯವರು ರಾಜಕೀಯ ಕ್ಷೇತ್ರದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು. ಅವರ ಒಂದು ಭಾಷಣವೇ ಸಾವಿರಾರು ಜನರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳಲ್ಲಿ ಸತ್ಯದ ಕಿಡಿ, ಸಮಾಜದ ಕಳಕಳಿ ಮತ್ತು ಕನ್ನಡ ನಾಡಿನ ಬಗ್ಗೆ ಅಚಲವಾದ ಪ್ರೀತಿ ಪ್ರತಿಧ್ವನಿಸುತ್ತಿತ್ತು. ರಾಜಕೀಯ ಪಕ್ಷದ ಅಭ್ಯರ್ಥಿಯಾಗಲಿ, ಚುನಾವಣಾ ಕಣಕ್ಕಿಳಿದಾಗ ಪ್ರಚಾರ ನಡೆಸಲು ಜಯದೇವಿತಾಯಿಯವರನ್ನು ಆಹ್ವಾನಿಸುತ್ತಿದ್ದರು. ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಜನಸಾಗರವೇ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳುವಷ್ಟು ಶಾಂತಿ ಆವರಿಸುತ್ತಿತ್ತು. ಅವರ ಮಾತುಗಳು….ಸಮಾಜದ ಜಾಗೃತಿ, ನ್ಯಾಯ ಮತ್ತು ಜನಸೇವೆಯ ಸಂದೇಶವನ್ನು ಸಾರುತ್ತಿದ್ದವು.ಜಯದೇವಿತಾಯಿಯವರ ಪ್ರಭಾವ ಎಷ್ಟಿತ್ತೆಂದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜನರು ಅಭ್ಯರ್ಥಿಗಿಂತಲೂ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದರು. ಅವರ ಸತ್ಯನಿಷ್ಠೆ, ನಿರ್ಭೀತ ನಿಲುವು ಮತ್ತು ಜನಪರ ಕಾಳಜಿಯಿಂದ ಪಕ್ಷಗಳ ನಾಯಕರೂ ಅವರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು. ಜಯದೇವಿತಾಯಿಯವರನ್ನು ಕರೆಸಿಕೊಳ್ಳುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ೧೯೫೧ರ ಚುನಾವಣೆಯ ಅಭ್ಯರ್ಥಿಗಳು ಸಹಾಯ ಕೇಳಿ ಅವರನ್ನು ಕರೆದವರು…..ಲೋಕಸಭೆಯ ಅಭ್ಯರ್ಥಿಗಳಾಗಿದ್ದ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಮಹಾದೇವಮ್ಮ ಪಾಟೀಲ,ಶಂಕರ ಥಣಿ ಮುಂತಾದವರು ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು ಅವರು ಕರೆದಾಗ ಅಲ್ಲಿಯೂ ಕೂಡ ತಾಯಿಯವರು ಹೋಗುತ್ತಿದ್ದರು. ಜನತೆ ಅವರನ್ನು ಹರ್ಷಉಲ್ಲಾಸದಿಂದ ಸ್ವಾಗತಿಸುತ್ತಿದ್ದರು. ಅವರ ಭಾಷಣಕ್ಕೆ ಮಂತ್ರಮುಗ್ಧರಾಗುತ್ತಿದ್ದರು.ಒಂದು ಭಾಷಣ ಸಾವಿರಾರು ಜನರನ್ನು ಆಲೋಚನೆಗೆ ಹಚ್ಚುವ ಶಕ್ತಿಯನ್ನು ಹೊಂದಿತ್ತು. ಜಯದೇವಿತಾಯಿಯವರು ವೇದಿಕೆಗೆ ಏರಿದಾಗ ಅಭ್ಯರ್ಥಿಯ ಗೆಲುವಿಗಿಂತ ಸಮಾಜದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಭಾಷಣದ ಕೇಂದ್ರಬಿಂದು ಕನ್ನಡ ಭಾಷೆಯ ಅಭಿಮಾನ, ಕನ್ನಡ ನಾಡಿನ ಹಿತ, ಅಸ್ಪೃಶ್ಯರ ಉದ್ಧಾರ, ಮಹಿಳೆಯರ ಸ್ವಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾಜದಲ್ಲಿ ಸಮಾನತೆಯ ಸ್ಥಾಪನೆ ಆಗಿತ್ತು. ಅವರು ಯಾವುದೇ ಪಕ್ಷದ ಹೊಗಳಿಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ಜನರಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿ, ಸಮಾಜಮುಖಿ ಚಿಂತನೆ ಬೆಳೆಸುವ ಕೆಲಸ ಮಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಿದ್ದರು..*”ನಾನು ಇಲ್ಲಿ ಯಾವುದೇ ಅಭ್ಯರ್ಥಿಯ ಪರವಾಗಿ ಮತ ಕೇಳಲು ಬಂದಿಲ್ಲ. ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಬದುಕು ಹೇಗಿದೆ, ನಿಮ್ಮ ನೋವು ಏನು, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂಬುದನ್ನು ಅರಿಯಲು ಬಂದಿದ್ದೇನೆ. ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತೊಬ್ಬ ಅಭ್ಯರ್ಥಿ ಸೋಲುವುದು ಸಹಜ. ಸತ್ಯ, ನ್ಯಾಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಹಕ್ಕಾಗಿರಬೇಕು. ಆದ್ದರಿಂದ ಪಕ್ಷವನ್ನು ನೋಡಿ ಮತ ಹಾಕಬೇಡಿ…ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ನೀಡಿ.”*ಈ ಮಾತುಗಳು ಜನರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದವು. ರಾಜಕೀಯಕ್ಕಿಂತ ಜನಸೇವೆ ಮುಖ್ಯ ಎಂಬ ಸಂದೇಶವನ್ನು ಅವರು ಎಲ್ಲೆಡೆ ಸಾರಿದರು* ಅವರ ವ್ಯಕ್ತಿತ್ವವೇ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತಿತ್ತು. ಜನರು ಅವರನ್ನು ಸಮಾಜ ಸುಧಾರಕಿಯಾಗಿ ಕಾಣುತ್ತಿದ್ದರು.ಒಮ್ಮೆ ನಡೆದ ಚುನಾವಣೆಯಲ್ಲಿ ಅವರ ಉಪಸ್ಥಿತಿ ಮತ್ತು ಭಾಷಣಗಳು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸಿದವು ಎಂದು ಹೇಳಲಾಗುತ್ತದೆ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷ ಉತ್ತಮ ಸಾಧನೆ ಮಾಡಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎನ್ನುವ ಮಾತು ಜನರಲ್ಲಿ ಪ್ರಚಲಿತವಾಯಿತು. *ಜಯದೇವಿತಾಯಿಯವರು ಜಯವನ್ನು ತಮ್ಮ ಸಾಧನೆ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. “ಗೆಲ್ಲಬೇಕಾದದ್ದು ಒಬ್ಬ ವ್ಯಕ್ತಿಯ ಸತ್ಯ ಮತ್ತು ಸಮಾಜದ ಹಿತ” ಎಂಬುದೇ ಅವರ ನಿಲುವಾಗಿತ್ತು.*ಆದರೂ ಚುನಾವಣೆಯ ನಂತರ ಅವರು ರಾಜಕೀಯ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದರು. ಚುನಾವಣಾ ವೇದಿಕೆಗಳು ತಮ್ಮ ಆದರ್ಶಗಳಿಗೆ ಸೂಕ್ತವಾದ ಸ್ಥಳವಲ್ಲ ಎಂಬ ಅರಿವು ಅವರಿಗೆ ಮೂಡಲಾರಂಭಿಸಿತು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶಭಕ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಮತ್ತು ಗಾಂಧೀಜಿಯವರ ಆದರ್ಶಗಳ ಪ್ರತೀಕವಾಗಿತ್ತು. ಜಯದೇವಿತಾಯಿಯವರೂ ಇದೇ ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರು. . ಸ್ವಾತಂತ್ರ್ಯಾನಂತರದ ರಾಜಕೀಯ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ತ್ಯಾಗ ಮತ್ತು ಸೇವೆಯ ಸ್ಥಾನದಲ್ಲಿ ಅಧಿಕಾರದ ಹಂಬಲ, ಸ್ವಾರ್ಥ ರಾಜಕಾರಣ ಮತ್ತು ಗುಂಪುಗಾರಿಕೆ ತಲೆ ಎತ್ತುತ್ತಿರುವುದನ್ನು ಜಯದೇವಿತಾಯಿಯವರು ನೋವಿನಿಂದ ಗಮನಿಸಿದರು.ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಬಡವರ ಪರವಾದ ರಾಜಕಾರಣ ಕ್ರಮೇಣ ಮರೆಯಾಗುತ್ತಿರುವಂತೆ ಅವರಿಗೆ ಭಾಸವಾಯಿತು.ಒಮ್ಮೆ ಆದರ್ಶಗಳಿಗಾಗಿ ಬದುಕಿದ್ದ ಪಕ್ಷದಲ್ಲಿ ಈಗ ಆ ಆದರ್ಶಗಳು ಕೇವಲ ಭಾಷಣಗಳಲ್ಲಷ್ಟೇ ಕೇಳಿಬರುತ್ತಿದ್ದವು…..ಆದರೆ ಆಚರಣೆಯಲ್ಲಿ ಅವುಗಳ ಪ್ರತಿಫಲನ ಕಾಣುತ್ತಿರಲಿಲ್ಲ. ಮಾತು ಮತ್ತು ಕೃತಿಯ ನಡುವೆ ಹೆಚ್ಚುತ್ತಿರುವ ಅಂತರ ಅವರನ್ನು ತೀವ್ರವಾಗಿ ಕಾಡಿತು. ಅಧಿಕಾರಕ್ಕಾಗಿ ನಡೆಯುತ್ತಿದ್ದ ರಾಜಕೀಯ ಅವರ ಅಂತರಂಗವನ್ನು ನೋಯಿಸಿತು. ಜನಸೇವೆಯೇ ರಾಜಕಾರಣದ ಆತ್ಮವಾಗಿರಬೇಕು ಎಂಬ ಅವರ ನಂಬಿಕೆಗೆ ಬೆಳವಣಿಗೆಗಳು ವಿರುದ್ಧವಾಗಿದ್ದವು. ಅಂತಹ ಸಂದರ್ಭದಲ್ಲಿ ಆಗಿನ ಹೈದರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ. ಕೃಷ್ಣರಾವ ಅವರು, ಕಾಂಗ್ರೆಸ ಪ್ರಭಾವಿ ಸದಸ್ಯೆಯಾಗಿದ್ದ ಜಯದೇವಿತಾಯಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ವಿಶೇಷವಾಗಿ ಒತ್ತಾಯಿಸಿದರು. ಅವರ ಜನಪ್ರಿಯತೆ, ವಾಗ್ಮಿತೆ ಮತ್ತು ಜನರ ಮೇಲಿನ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳಲು ಬಯಸಿತು.ಆದರೆ ಜಯದೇವಿತಾಯಿಯವರ ಮನಸ್ಸಿನಲ್ಲಿ ಆಗಲೇ ತೀವ್ರವಾದ ಆತ್ಮಸಂಘರ್ಷ ನಡೆಯುತ್ತಿತ್ತು. ಅಂತಹ ವಾತಾವರಣದಲ್ಲಿ ಮುಂದುವರಿಯುವುದು ತಮ್ಮ ಅಂತರಾತ್ಮಕ್ಕೆ ವಿರುದ್ಧ ಎಂದು ಸ್ಪಷ್ಟವಾಗಿ ಅರಿತುಕೊಂಡರು.ಅವರು ದೃಢವಾಗಿ ಹೇಳಿದರು…..“ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾಗಿ ಸಾಗುತ್ತಿರುವ ಪಕ್ಷದಲ್ಲಿ ನನ್ನ ಅಂತರಾತ್ಮ ಜನಸೇವೆ ಮಾಡಲು ಒಪ್ಪುವುದಿಲ್ಲ. ರಾಜಕಾರಣವು ಅಧಿಕಾರದ ದಾಹವೆ ಆಗಿದೆ…. ಜನರ ಉದ್ಧಾರಕ್ಕಾಗಿ ಇರಬೇಕು. ಆದರ್ಶಗಳಿಲ್ಲದ ರಾಜಕೀಯದಲ್ಲಿ ನನಗೆ ಸ್ಥಾನವಿಲ್ಲ.ಈ ನಿರ್ಧಾರವು ಕ್ಷಣಿಕ ಭಾವೋದ್ವೇಗದಿಂದ ಬಂದದ್ದಲ್ಲ. ಅದು ದೀರ್ಘ ಆತ್ಮಪರಿಶೀಲನೆಯ ಫಲವಾಗಿತ್ತು. ಅಧಿಕಾರ, ಹುದ್ದೆ ಅಥವಾ ರಾಜಕೀಯ ಭವಿಷ್ಯಕ್ಕಿಂತ ತಮ್ಮ ಆತ್ಮಸಾಕ್ಷಿಯ ವಿರುದ್ಧ ನಾನು ಹೋಗಲಾರೆ” ಎಂದು ಘೋಷಿಸಿದರು. ಜಯದೇವಿತಾಯಿಯವರು ಕಾಂಗ್ರೆಸ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದರು. ಅಧಿಕಾರದ ಹಾದಿಯನ್ನು ತೊರೆದು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು. ನಂತರ ತಮ್ಮ ಜೀವನವನ್ನು ಕನ್ನಡ ಭಾಷೆಯ ಅಭಿವೃದ್ದಿ, ಮಹಿಳಾ ಸಬಲೀಕರಣ, ಅಸ್ಪೃಶ್ಯರ ಉದ್ಧಾರ, ಶಿಕ್ಷಣದ ಪ್ರಸಾರ ಮತ್ತು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕೆ ಸಮರ್ಪಿಸಿದರು.ಜಯದೇವಿತಾಯಿಯವರ ಈ ನಿರ್ಧಾರವು ತತ್ವಕ್ಕಾಗಿ ಅಧಿಕಾರವನ್ನು ತ್ಯಜಿಸಿದ ಅಪರೂಪದ ವ್ಯಕ್ತಿತ್ವದ ಘೋಷಣೆಯಾಗಿತ್ತು. ಅವರ ಈ ನಿಲುವು ಒಂದು ಸತ್ಯವನ್ನು ಸಾರಿತು…..ಹುದ್ದೆಗಿಂತ ಮೌಲ್ಯಗಳು ಶ್ರೇಷ್ಠ, ಅಧಿಕಾರಕ್ಕಿಂತ ಅಂತರಾತ್ಮ ದೊಡ್ಡದು, ರಾಜಕಾರಣಕ್ಕಿಂತ ಜನಸೇವೆ ಪವಿತ್ರವಾದುದೆಂದು. ಸಮಾಜ ಸೇವೆ, ಶಿಕ್ಷಣ, ಕನ್ನಡ ಭಾಷೆಯ ಉಳಿವು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯೇ ತಮ್ಮ ಜೀವನದ ನಿಜವಾದ ಧ್ಯೇಯ ಎಂದು ಅವರು ನಿಶ್ಚಯಿಸಿದರು. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಹೋದದ್ದು ಅದೇ ಮೊದಲೂ, ಅದೇ ಕೊನೆಯೂ ಆಯಿತು. ನಂತರ ತಮ್ಮ ಸಂಪೂರ್ಣ ಜೀವನವನ್ನು ಜನಸೇವೆ, ಕನ್ನಡದ ಸೇವೆ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಸಮರ್ಪಿಸಿ, ಆದರ್ಶ ಸಮಾಜ ಸುಧಾರಕಿಯಾಗಿ ಚಿರಸ್ಥಾಯಿಯಾಗಿ ಉಳಿದರು. (ಮುಂದುವರಿಯುವುದು) ಸವಿತಾ ದೇಶಮುಖ





