ಕಥಾಯಾನ

ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ ಅವಳೊಬ್ಬಳೇ ಬಂಗ್ಲೆ ಗುಡ್ಡೆಯಲ್ಲಿ ವಾಸವಾಗಿದ್ದಳು. ವರ್ಷಕ್ಕೊಮ್ಮೆ ಬಸುರಿ, ವರ್ಷಕ್ಕೊಂದು ಬಾಣಂತನ ಅಂದ ಹಾಗೆ ಸದಾ ಅದೇ ಸ್ಥಿತಿಯಲ್ಲಿರುತಿದ್ದಳು. ಅದ್ಯಾರು ಬರುತಿದ್ದರೋ, ಹೋಗುತಿದ್ದರೋ, ಆ ಬತ್ತಿದ ದೇಹದಲ್ಲಿ ಅದೆಂತ ಅಕರ್ಷಣೆಯಿತ್ತೊ ಅವಳಲ್ಲಿಗೆ ಬರೋ ಗಂಡಸರಿಗೆ, ಹೋಗುವ ಮೊದಲು ಅವಳಿಗೆ, ಅವಳ ಮಕ್ಕಳಿಗೆಂದು ಏನಾದರೂ ಕೊಡಬೇಕೆಂದು ಅನಿಸುತಿತ್ತೋ ಇಲ್ಲವೋ ಒಂದೂ ಸರಿಯಾಗಿ ಯಾರಿಗೂ ತಿಳಿಯುತ್ತಿರಲಿಲ್ಲ. ಯಾಕೆಂದರೆ ಅವಳು ಪೊಟ್ಟಿ. ಪೊಟ್ಟಿ ಅಂದರೆ ಮಾತು ಬಾರದವಳು. ಮೂಕಿ. ಅವಳ ಮಕ್ಕಳಿಗೆ ಮಾತು ಬರುತಿತ್ತೇನೋ ಆದರೆ ಅವರಿಗೆ ಮಾತು ಕಲಿಸಲು ಯಾರಿದ್ದರು? ಅವರ ಬಳಿ ಮಾತನಾಡುವವರು ಬೇಕಲ್ಲ! ನಮ್ಮ ಮನೆಗೆ ಬರುವಾಗ,  ಹಿಂದಿನ ಬಾಗಿಲೆಂದಿಲ್ಲ, ಮುಂದಿನ ಬಾಗಿಲೆಂದಿಲ್ಲ ಎಲ್ಲಿಂದಾದರೂ ಯಾವಾಗಲಾದರೂ ಬರುತಿದ್ದಳು. ಅಂದರೆ ಒಳಗೆ ಬರುತ್ತಿರಲಿಲ್ಲ. ಹೊರಗೆ ನಿಂತು ಅದೇನೋ ವಿಚಿತ್ರ ಸದ್ದು ಮಾಡುತಿದ್ದಳು. ನಮ್ಮ ಬಾಪಮಾ ಅವಳಿಗೆ ಉಳಿದದ್ದು, ಬಳಿದದ್ದು ಅದು ಇದು ಅಂತ ಕೊಡುತಿದ್ದರು. ಆ ಮಕ್ಕಳನ್ನು ನೋಡುವಾಗ ಹೊಟ್ಟೆ ಚುರ್ ಅನ್ನುತ್ತೆ ಅನ್ನುತಿದ್ದರು. ಕಂಕುಳಲ್ಲೊಂದು, ಹೆಗಲ ಮೇಲೆ ನೇತಾಡುವ ಜೋಳಿಗೆಯಲ್ಲೊಂದು, ಹಿಂದೆ ಮುಂದೆ ಹೀಗೆ ಐದಾರು ಮಕ್ಕಳು ಜತೆಗೆ ನಡೆದುಕೊಂಡು ಬರುವಂಥವು. ಇಷ್ಟು ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೋಗುತಿದ್ದಳು. ಕೆಲಸ ಮಾಡಿ ತಿನ್ನುವ ಸ್ವಾಭಿಮಾನ ಇತ್ತೋ ಇಲ್ಲವೋ, ಅವಳಿರುವ ಸ್ಥಿತಿ ಅವಳನ್ನು ಕೆಲಸ ಮಾಡಲು ಬಿಡಬೇಕಲ್ಲ. ನನ್ನ ಅಪ್ಪನಿಗೆ ಮದುವೆ ಆಗುವ ಮೊದಲಿನಿಂದಲೂ ಅವಳು ಅಲ್ಲಿ ವಾಸಿಸುತಿದ್ದಳು. ಅಪ್ಪನಿಗೆ ಮದುವೆ ಆದ ಹೊಸತರಲ್ಲಿ, ಅಮ್ಮ ಒಂದು ಸಂಜೆ ಒಬ್ಬರೇ ಅಡುಗೆ ಮನೆಯಲ್ಲಿ ಒಲೆ ಮೇಲೆ ಹಾಲಿಟ್ಟು ಅದು ಕಾಯುವುದನ್ನೇ ನೋಡುತ್ತಾ ಕೂತಿದ್ದಾಗ, ಎಂದಿನಂತೆ ಪೊಟ್ಟಿ ಬಂದು ತನ್ನ ವಿಚಿತ್ರ ಧ್ವನಿಯಲ್ಲಿ ಕೂಗಿದಳಂತೆ. ಅಮ್ಮ ಹೆದರಿ ಹೌಹಾರಿ ಒಲೆಯ ಕಟ್ಟಿಗೆ ಮೇಲೆ ಕಾಲಿಟ್ಟು, ಆ ಸೌದೆ ಎಗರಿ ಹಾಲಿನ ಪಾತ್ರೆ ಉರುಳಿ, ಹಾಲೆಲ್ಲ ಚೆಲ್ಲಿ ಹೋಯ್ತು. ಒಂದು ಕಡೆ ಇಷ್ಟೆಲ್ಲ ರಂಪವಾಗಿ ಹೋಯ್ತು. ಮತ್ತೊಂದೆಡೆ ಕಿಟಕಿಯಿಂದ ಹೆದರಿಸಿದ್ದು ಯಾರು ಎನ್ನುವ ಭಯ. ಒಳಗೆ ಇಷ್ಟೆಲ್ಲ ಆದ ಶಬ್ದಕ್ಕೆ ಎಲ್ಲರೂ ಓಡಿಬಂದು ನೋಡಿದರೆ ಪೊಟ್ಟಿ ಇನ್ನೂ ಅಲ್ಲೇ ತನ್ನ ಕೊಳಕಾದ ಹಲ್ಲು ತೋರಿಸಿ ನಗುತ್ತಾ ನಿಂತಿದ್ದಳು. ಅಮ್ಮ ಕಿಟಕಿ ಬಳಿ ಕೈ ತೋರಿಸಿ, ನಡುಗುತ್ತಾ ಅಳುವುದನ್ನು ನೋಡಿ ಬಾಪಮಾ ಪೊಟ್ಟಿಗೆ ಚೆನ್ನಾಗಿ ಬೈದರಂತೆ. ಹೀಗಾ ಹೆದರಿಸೋದು ಅಂತ. ಪೊಟ್ಟಿಗೆ ಹೆಸರೇನಾದರೂ ಇತ್ತೋ ಗೊತ್ತಿಲ್ಲ. ಇದ್ದರೂ ಅವಳ ಬಳಿ ಕೇಳಿದವರ್ಯಾರು? ಕೇಳಿದರೂ ಅವಳು ಹೇಳುವುದಾದರೂ ಹೇಗೆ? ಎಲ್ಲರೂ ಅವಳನ್ನು ಪೊಟ್ಟಿ ಎಂದೇ ಕರೆಯೋದಿತ್ತು. ಯಾರುಯಾರೋ ಕೊಟ್ಟ, ಎಲ್ಲಿ ಸಿಕ್ಕಿದರೂ ಹೆಕ್ಕಿದ ಬಳೆಗಳನ್ನು ಅವಳು ಕೈ ತುಂಬಾ ಸುರಿದುಕೊಳ್ಳುವುದಿತ್ತು. ಒಂದಕ್ಕೊಂದು ಬಣ್ಣ, ಸೈಜ್, ಡಿಸೈನ್ ಯಾವುದೂ ತಾಳೆ ಇರುತ್ತಿರಲಿಲ್ಲ. ಈಗಲೂ ಹಾಗೆ ಬಳೆ ಹಾಕಿಕೊಂಡ ಮಕ್ಕಳನ್ನು ” ಪೊಟ್ಟಿಯ ಹಾಗೆ” ಅನ್ನುವುದುಂಟು. ಅವಳ ಮಕ್ಕಳಲ್ಲಿ ಒಂದು ಮಗು ಎಲ್ಲೋ ಹೋಯ್ತೆಂದು ಬಂದು ಬಾಪಮಾ ಹತ್ತಿರ ಹೇಳುತಿದ್ದಳು ಒಮ್ಮೆ. ಆದರೆ ಅಂಥಾದ್ದೇನೂ ದುಃಖ ಆದ ಹಾಗಿಲ್ಲ. ಅವಳು ಯಥಾಪ್ರಕಾರ ಭಿಕ್ಷೆ ಬೇಡೋದು, ದಾರಿಯಲ್ಲಿ ಹೋಗುವವರನ್ನು ನೋಡಿ ತಲೆ ಕೆರೆದು, ಹಲ್ಲು ಕಿಸಿದು ನಗೋದು ಎಲ್ಲಾ ಮಾಡುತಿದ್ದಳು. ಅವಳಲ್ಲಿ ಏನೂ ಭಾವನೆಗಳಿಲ್ಲವೇನೋ ಎಂದು ನಮ್ಮ ಮನೆಯಲ್ಲಿ ಮಾತನಾಡಿಕೊಂಡದ್ದು ನನ್ನ ಕಿವಿಗೂ ಬಿದ್ದಿತ್ತು‌. ಅಮ್ಮನನ್ನು ಹೆದರಿಸಿದಾಗ ಬೈದದ್ದು ಬಿಟ್ಟರೆ ಬಾಪಮಾ ಮತ್ತು ಅವಳ ನಡುವೆ ಸಂಭಾಷಣೆ ಕೈ ಬಾಯಿ ಸನ್ನೆಯಲ್ಲೇ ನಡೆಯುತಿತ್ತು. ಅವಳಿಗೆಂದು ಏನಾದರೂ ತೆಗೆದಿಟ್ಟರೆ ಅಜ್ಜಿ ಮನೆಯ ಮುಂದಿನ ಸರಳುಗಳ ಜಗಲಿಯಲ್ಲಿ ಮರದ ಮಂಚದ ಮೇಲೆ ಕೂತು ಕಾಯುತಿದ್ದರು. ಅವಳನ್ನು ಕಂಡ ಕೂಡಲೇ ಏಯ್ ಅಂತ ಕರೆದರೆ ಅವಳೂ ಗೊಳ್ಳನೆ ನಕ್ಕು ನೀವು ಕರೆಯುವುದನ್ನೇ ಕಾದಿದ್ದೆ ಅನ್ನುವ ಹಾಗೆ ಕಾಂಪೌಂಡ್ ಒಳಗೆ ಬಂದು ತುಳಸಿ ಕಟ್ಟೆಯ ಬಳಿ ಕೂತು ಮಕ್ಕಳನ್ನೂ ಕೂರಿಸಿಕೊಂಡು ಬಾಪಮಾ ಕೊಟ್ಟ ತಿಂಡಿಯನ್ನು ತಾನೂ ತಿನ್ನುತ್ತಾ ಮಕ್ಕಳಿಗೆ ತಿನ್ನಿಸುತ್ತಾ ಸ್ವಲ್ಪ ಹೊತ್ತು ಇದ್ದು ನೀರು ಕುಡಿದು ಹೊರಡುತಿದ್ದಳು. ಮತ್ತೆ ಸಿಕ್ಕಿದ್ದು ಮದ್ಯಾಹ್ನಕ್ಕೆಂದು ಮನೆಗೆ ಕೊಂಡು ಹೋಗುತಿದ್ದಳು. ಮುಂದೆ ಒಂದು ದಿನ ಭಾರೀ ಸುಸ್ತಾಗಿ ಬಂದು ಅಂಗಳದಲ್ಲಿ ಕೂತಿದ್ದು ನೋಡಿ ಅಜ್ಜಿ ಹುಷಾರಿಲ್ವಾ ಎಂದು ಕೇಳಿದಾಗ ನಸು ನಾಚಿ ನಕ್ಕಳಂತೆ. ಅಜ್ಜಿಗೆ ಅರ್ಥ ಆಗಿ ಅವಳಿಗೆ ಸನ್ನೆಯಲ್ಲೇ ಸಹಸ್ರನಾಮಾರ್ಚನೆ ಮಾಡಿದರೂ ದಿನಾ ಕರೆದು ತಿನ್ನಲು ಕೊಡುತಿದ್ದರು. ಅವಳ ಬಾಣಂತನ ಅವಳೇ ಮಾಡಿಕೊಳ್ಳುತಿದ್ದಳಂತೆ. ಅದನ್ನೂ ಸನ್ನೆಯಲ್ಲೇ ವಿವರಿಸಿ ಹೇಳುತಿದ್ದಳು. ಯಾವ ಸಂಭ್ರಮವಿಲ್ಲದಿದ್ದರೂ, ಸರಿಯಾಗಿ ಹೊಟ್ಟೆಗಿಲ್ಲದಿದ್ದರೂ ಅವಳ ಮಕ್ಕಳು ಮಾತ್ರ ಮೈಕೈ ತುಂಬಿಕೊಂಡು ನೋಡಲು ಲಕ್ಷಣವಾಗಿದ್ದವು. ಹಾಲು, ಬೆಣ್ಣೆ, ತುಪ್ಪ ಸುರಿದು ತಿನ್ನಿಸಿದ್ರೂ ನಮ್ಮ ಮಕ್ಕಳು ಹೊಟ್ಟೆಗೆ ಇಲ್ಲದವರ ಹಾಗಿವೆ ಅಂತ ಬಾಪಮಾ ನಮ್ಮನ್ನು ತೋರಿಸಿ ಹೇಳುವಾಗ ಅಮ್ಮನಿಗೆ ಪಾಪ ಪಿಚ್ಚೆನಿಸುತಿತ್ತು. ಈ ಸಲವೂ ಹೆರಿಗೆಯಾಗಿ ಮೂರು ನಾಲ್ಕು ದಿನಕ್ಕೇ ರಸ್ತೆಗೆ ಇಳಿದಿದ್ದಳು ಪೊಟ್ಟಿ. ಅಷ್ಟೂ ಮಕ್ಕಳ, ತನ್ನ,  ಹೊಟ್ಟೆಗೆ ಏನಾದರೂ ಬೇಕಿತ್ತಲ್ಲ. ಈಗಲೂ ಎಂದಿನಂತೆ ಒಂದು ಜೋಳಿಗೆಯೊಳಗೆ, ಒಂದು ಕಂಕುಳಲ್ಲಿ. ಒಂದು ದಿನ ಮಾತ್ರ ಮದ್ಯಾಹ್ನ ಪೊಟ್ಟಿ ಓಡುತ್ತಾ ಬಂದು ಎದೆ ಬಡಿದುಕೊಳ್ಳುತ್ತಾ ಹೃದಯವಿದ್ರಾವಕವಾಗಿ ತನ್ನ ವಿಚಿತ್ರ ಧ್ವನಿಯಲ್ಲಿ ಅಳುತಿದ್ದಾಗ ಮನೆಯವರೆಲ್ಲ ಗಾಬರಿಯಾಗಿ ಓಡಿ ಬಂದರು. ಜೋಳಿಗೆಯಲ್ಲಿ ಮಗುವನ್ನು ನೇತಾಡಿಸಿದ್ದಾಳೆ. ಮಗು ಜೀವಂತವಾಗಿದೆ. ಇನ್ನೇತಕ್ಕೆ ಅಳುತಿದ್ದಾಳೆಂದು ಯಾರಿಗೂ ತಿಳಿಯದಾಯಿತು. ಆ ಹೊತ್ತು ಗಾಬರಿಯಾದ ನಮ್ಮ ಧೈರ್ಯಸ್ಥೆ ಬಾಪಮಾನ ಮುಖ ನನಗೆ ಇನ್ನೂ ಕಣ್ಣ ಮುಂದಿದೆ. ಬಾಪಮಾ ಅಂದರೆ ಅಜ್ಜಿ. ಅಜ್ಜಿ ಅಂದರೆ ಬಾಪಮಾ ಎರಡೂ ಒಬ್ಬರೇ. ಅಪ್ಪನ ಅಮ್ಮ ಬಾಪಮಾ. ಬಾಪಮಾ ಅಂಗಳಕ್ಕೆ ಇಳಿದು ಹತ್ತಿರ ಹೋಗಿ ಕೇಳಿದರು. ಹೂಂ ಹೂಂ ಅಂತ ಕೈಯಿಂದ ಸನ್ನೆಯಲ್ಲಿ “ಏನಾಯಿತು?” ಎಂದರು. ಅವಳು ಹೊಟ್ಟೆ ಕಿವುಚಿಕೊಳ್ಳುತ್ತಾ ಎದೆ ಬಡಿದು ಕೊಳ್ಳುತ್ತಾ, ಕೂದಲು ಕಿತ್ತು ಕೊಳ್ಳುತ್ತಾ ಅಳುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ಒದ್ದೆಯಾದವು. ಅವಳ ಕೈ ಹಿಡಿದು ಅಳಬೇಡ ಎಂದು ಕುಡಿಯಲು ನೀರು ಕೊಟ್ಟು, ಸಮಾಧಾನ ಮಾಡಲು ನಮ್ಮಜ್ಜಿ ಮಡಿ ಮೈಲಿಗೆಯನ್ನೂ ಮರೆತು ಅವಳ ಬೆನ್ನು ಸವರಿದ್ದರು. ಸಮಾಧಾನ ತಂದುಕೊಂಡ ಅವಳು ಅಜ್ಜಿಯ ಕೈ ಹಿಡಿದು ಏನು ನಡೆಯಿತು ಎಂದು ಪಾಪ ಅವಳ ರೀತಿಯಲ್ಲಿ ವಿವರಿಸಿದಾಗ ಅರ್ಥವಾಗಿದ್ದನ್ನು ಬಾಪಮಾ ಉಳಿದವರಿಗೆ ಹೇಳಿದರು. ಬೆಳಿಗ್ಗೆ ಭಿಕ್ಷೆಗೆ ಹೋಗುವಾಗ, ಕಂಕುಳ ಮಗುವಿನ ಕಾಲಿಗೆ ಮತ್ತು ಮನೆಯ ಮಾಡಿನ ಆಧಾರದ ಕೋಲಿಗೆ ದಾರ ಕಟ್ಟಿ ಬಿಟ್ಟು ಹೋಗಿದ್ದಳು. ಮೊದಲೆಲ್ಲ ಇನ್ನೂ ನಡೆಯಲು ಬಾರದ ಮಕ್ಕಳನ್ನು ಹೀಗೆ ಕಾಲಿಗೆ ದಾರ ಕಟ್ಟಿ ಮಂಚಕ್ಕೋ, ಕಂಬಕ್ಕೋ ಕಟ್ಟಿ ಹಾಕಿ ಮನೆ ಕೆಲಸ ಮುಗಿಸುವುದಿತ್ತು. ಆ ದಾರದ ಪರಿಧಿಯಲ್ಲೇ ಓಡಾಡಿ, ಆಟವಾಡಿ, ಸಾಕಾಗಿ ಅಲ್ಲೇ ಕೂತು ಅಳುತಿದ್ದವು ಮಕ್ಕಳು. ಪೊಟ್ಟಿ ಹೀಗೆ ಬಿಟ್ಟು ಹೋಗಿದ್ದಾಗ, ಮನೆಗೆ ಹಿಂತಿರುಗಿ ಬಂದು ನೋಡಿದರೆ ಮಗು ಇಲ್ಲ. ಹುಡುಕಿ, ಹುಡುಕಿ, ಕರೆದು ಸಾಕಾಗಿ, ಕೊನೆಗೆ ನೋಡಿದರೆ ಅಲ್ಲೇ ಹತ್ತಿರದಲ್ಲೇ ಇದ್ದ ನೀರಿಲ್ಲದ ಪೊಟ್ಟು ಸರ್ಕಾರಿ ಬಾವಿಯೊಳಗೆ ಬಗ್ಗಿ ನೋಡಿದರೆ ಅದರೊಳಗೆ ಬಿದ್ದಿದೆ ಮಗು. ತುಂಬಾ ಹಳೆಯ ಬಾವಿ ಅದು ಅದರ ಕಟ್ಟೆಯೂ ಬಿದ್ದು ಹೋಗಿ ಬಾವಿ ಎಂಬ ಹೊಂಡವೊಂದು ಮುಚ್ಚದೇ ಹಾಗೇ ಇತ್ತು. ಬನ್ನಿ ಬನ್ನಿ ಎಂದು ಸನ್ನೆಯಲ್ಲೇ ಕರೆದಾಗ ಎಲ್ಲರೂ ಬಾವಿಯ ಬಳಿ ಹೋಗಿ ನೋಡಿದರೆ ಮಗು ರಕ್ತ ಸಿಕ್ತವಾಗಿ ವಿಕಾರವಾಗಿ ಬಿದ್ದಿತ್ತು. ಕೂಡಲೇ ಅಜ್ಜಿ ಅದರೊಳಗೆ ಯಾರನ್ನೋ ಇಳಿಸಿ ಮಗು ಬದುಕಿದೆಯೋ ಎಂದು ಪರೀಕ್ಷಿಸಲು ಹೇಳಿ ಅಲ್ಲಿಯೇ ಮಣ್ಣು ಹಾಕಿ ಮುಚ್ಚಿಸಿದರು. ಪೊಟ್ಟು ಬಾವಿ ಅರ್ಧ ಮುಚ್ಚಿತು. ಆದರೂ ಅಪಾಯವೆಂದು ಮುನಿಸಿಪಾಲಿಟಿಯವರಿಗೆ ಹೇಳಿ ಪೂರ್ತಿ ಮುಚ್ಚಿಸಲಾಯಿತು. ಮಾತು ಬಾರದಿದ್ದರೂ , ಭಾವನೆಗಳೇ ಇಲ್ಲ ಎಂದು ಕೊಂಡಿದ್ದರೂ ಪೊಟ್ಟಿಗೆ ತನ್ನ ಕೈಯಾರ ಮಗು ಸತ್ತಿತು ಅನ್ನುವ ಅಪರಾಧಿ ಪ್ರಜ್ಞೆ ಕಾಡುತಿತ್ತೇನೋ, ಹೊಟ್ಟೆಗಿಲ್ಲದಿದ್ದರೂ, ಬಟ್ಟೆಗಿಲ್ಲದಿದ್ದರೂ, ಆ ಮಕ್ಕಳನ್ನು ಹುಟ್ಟಿಸಿದವರು ಆಮೇಲೆ ತಿರುಗಿ ನೋಡದಿದ್ದರೂ ಕರುಳವೇದನೆ ಎಂಬುದು ಎಷ್ಟು ತೀವ್ರವಾದುದು.  ಮುಂದಿನ ದಿನಗಳಲ್ಲಿ ಅವಳು ಯಾವ ಗಂಡಸನ್ನೂ ತನ್ನ ಗುಡಿಸಲಿಗೆ ಬರಲು ಬಿಡುತ್ತಿರಲಿಲ್ಲವಂತೆ, ಕಿರುಚಾಡಿ, ಕೈಗೆ ಸಿಕ್ಕಿದುದರಿಂದ ಹೊಡೆದು ಓಡಿಸುತಿದ್ದಳಂತೆ. ಈಗಲಾದರೂ ಬುದ್ಧಿ ಬಂತಲ್ಲ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತಿದ್ದರು.   *********

ಕಾವ್ಯಯಾನ

ಹಬ್ಬ ಗೌರಿ.ಚಂದ್ರಕೇಸರಿ ನಾವು ಸಾಬೀತುಪಡಿಸಿದ್ದೇವೆ. ಪ್ರಾಣಕ್ಕಿಂತ ದೊಡ್ಡದು ಆಚರಣೆಗಳೆಂದು. ನೆತ್ತಿಯ ಮೇಲೆ ತೂಗುತ್ತಿದ್ದರೂ ಕತ್ತಿ ಬಾರಿಸುತ್ತಿದ್ದರೂ ಎಚ್ಚರಿಕೆಯ ಗಂಟೆ ನಡೆದು ಬಿಡುತ್ತೇವೆ ಚೀಲ ಹಿಡಿದು ಸಾವಿನ ಮನೆಯ ಕಡೆಗೆ ಮುಗಿ ಬೀಳುತ್ತೇವೆ ಹೂ ಕಾಯಿ ಹಣ್ಣುಗಳಿಗೆ ತುಂಬಿಕೊಳ್ಳತ್ತೇವೆ ಭವಿಷ್ಯವನ್ನೆಲ್ಲ ಭೂತವೆಂಬ ಚೀಲಗಳಿಗೆ ಹೊತ್ತು ನಡೆಯುತ್ತೇವೆ ತಪ್ಪಿಸಿ ಪೋಲೀಸರ ಕಣ್ಗಾವಲನ್ನು ಬಂದು ಸೇರಿ ಮನೆ ಬೀಗುತ್ತೇವೆ ಚಪ್ಪನ್ನೈವತ್ತಾರು ಕೋಟೆಗಳ ಗೆದ್ದಂತೆ ತಳಿರು ತೋರಣವಿಲ್ಲದ ಸಿಹಿಯಡುಗೆ ಮಾಡದ ನೆರೆಹೊರೆಯವರನ್ನು ನೋಡಿ ನಗುತ್ತೇವೆ ಜೀವವಿದ್ದಲ್ಲಿ ಮಾಡೇವು ನೂರು ಹಬ್ಬ ಹರಿದಿನ ಅವಿವೇಕಿಗಳು ನಾವು ಹಬ್ಬ ಮಾಡುವ ಹವಣಿಕೆಯಲ್ಲಿ ಆಗದಿರಲಿ ನಮ್ಮದೇ ಹಬ್ಬ ಆಗ ನಮ್ಮವರೇ ಬಾರದೆ ದೂರದಿ ನಿಂತು ನೋಡುವರು ನಮ್ಮ ದಿಬ್ಬಣ ಹಿಡಿ ಮಣ್ಣೂ ಹಾಕಿಸಿಕೊಳ್ಳದೆ ಭಾವನೆಗಳೇ ಇಲ್ಲದ ಯಂತ್ರ ತೋಡಿದ ಗುಂಡಿಯೊಳಗೆ ಹೂತು ಹೋಗಬೇಕಾದೀತು ಅನಾಥ ಶವದಂತೆ *******

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ| ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ|| ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ| ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ|| ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ| ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ|| ಗಡಿಯಾರದಂತೆ ತಿರುಗುವ ಋತುಗಳ ಹಿಂದೆ ಮೇಟಿ ಹಿಡಿದು ತಿರುಗಿದವನು| ಕುದಿವ ಬರಡು ನೆಲಕೆ ಹಸಿರು ಕುಸುರಿ ಸೀರೆ ಉಡಿಸಿದ ಮಣ್ಣಿನ ಮಗ|| ಹಂಗಾಮುಗಳ ಜೂಜಾಟಕ್ಕೆ ಬೇಸತ್ತು ಹಳ್ಳಿಗಳಿಗೆ ಬೆನ್ನು ಮಾಡಿ ಅಲೆದವನು| ಆಧುನಿಕ ಕೃಷಿಯ ಕವಲುದಾರಿಗಳನ್ನು ಬೇಧಿಸಿ ಸಾಧಿಸಿದ ಮಣ್ಣಿನ ಮಗ|| ಬೆನ್ನಿಗೆ ಬೆನ್ನು ಹಚ್ಚಿ ಹಗಲಿರುಳು ದುಡಿದು ಮಣ್ಣಿಗೆ ಬೆವರು ಹನಿಗಳ ಹಿಂಡಿದವನು| ಬರ ನೆರೆಗೆ ತಾನೇ ತುತ್ತಾದರೂ ಜಗದ ತುತ್ತಿನ ಚೀಲ ತುಂಬಿದ ಮಣ್ಣಿನ ಮಗ|| ಮಣ್ಣಿಗೆ ವಿಷ ಬೆರೆಸಿ ಜಗಕೆಲ್ಲ ವಿಷವುಣಿಸುವ ಸಾಚಿ ಕೃಷಿಗೆ ದಿಕ್ಕಾರವಿರಲಿ| ಬಂಡಿ ಬಂಡಿ ಕುಂಡಿ ಗೊಬ್ಬರವ ಉಣಿಸಿ ಖಂಡುಗದ ರಾಶಿ ಬೆಳೆದ ಮಣ್ಣಿನ ಮಗ|| ***********

ಕಾವ್ಯಯಾನ

ಋಜುವಾತು ಮಾಡಬೇಕಿದೆ ರೇಶ್ಮಾಗುಳೇದಗುಡ್ಡಾಕರ್ ನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ನನ್ನೊಳಗಿನ ನಾನು ಋಜುವಾತುಮಾಡಬೇಕಿದೆಎದೆಗೆ ಇಟ್ಟ ಕೊಳ್ಳಿಅರುವ ಮುನ್ನಹರಳುಗಟ್ಟಿದ ನೆನಪುಗಳುಹನಿಯಾಗಿ ಹರಿಯುವ ಮುನ್ನಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ….. ಬಣ್ಣ ಬಣ್ಣದ ನೋಟಗಳುಮನದ ಹಂದರ ಸೇರುವ ಮುನ್ನಮೋಹ ಸಲೆಗೆ ಅಡಿಯಾಳಾಗುವ ಮುನ್ನವಾಸ್ತವದ ತಳಹದಿಯ ಮರೆಮಾಚಿಭ್ರಮರ ಲೋಕಕೆ ಕಾಲಿಡುವ ಮುನ್ನಬಾಂಧವ್ಯ ದ ಆಚೆಗೊಸ್ನೇಹದ ಸೆಳೆತದಾಚೆಗೊ ನನ್ನ ನಾಋಜುವಾತು ಮಾಡಬೇಕಿದೆ …. ಏಳಿಗೆಯ ಬೇರುಗಳ ಕತ್ತರಿಸಿಹಿಂದೆ ಮುಂದೆ ನಿಂದನೆಗೆ ಆಹಾರಮಾಡಿ ನಾಜೂಕು ಮಾತುಗಳಾಡುತನಮ್ಮೊಳಗೆ ಬೇರೆತು ದೂರ ಇರುವವರುಕತ್ತಿಮಸೆಯುವ ಮುನ್ನ ನನ್ನೊಳಗಿನನಾನು ಋಜುವಾತು ಮಾಡಬೇಕಿದೆನನ್ನೂಳಗಿನ ನಾನು ಋಜುವಾತು ಮಾಡಬೇಕಿದೆ ***********                  

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು ಹೇಮ ನನಗೆಂದೇ ನಾನಿನ್ನು ಬದುಕಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ******

ಕಾವ್ಯಯಾನ

ಇವನೊಂದಿಗೆ ಅವನನ್ನೂ ಧಾಮಿನಿ ಸತ್ತಂತಿದ್ದೆನು ನಾನುಅದಕೆ ಕಾರಣ ನೀನು ಏನೊಂದೂ ಅರಿವಾಗಲಿಲ್ಲತಿಳಿಯುವಷ್ಟರಲ್ಲಿ ಮುಗಿದಿತ್ತೆಲ್ಲ ಮೈ ತುಂಬಾ ಚೇಳುಅದಕಿಂತ ಸಾವೇ ಮೇಲು ಮೈಯೋ ಬೆಣ್ಣೆಯಂತೆ ಮೃದುಮನಸೋ ಕಲ್ಲಿನಂತೆ ಕಠಿಣ ತಾನಾಗಿ ಚಲಿಸಲಿಲ್ಲ ಒಂದೂ ಬೆರಳುಬಲವಂತಕ್ಕಾಗಿ ಚೀರಿದವುಎಲ್ಲಾ ನರಳು ಸತ್ತಂತಿದ್ದೆನು ನಾನುಅದಕೆ ಕಾರಣ ನೀನು. ಹುಚ್ಚಿಇವನನ್ನು ಅವನೆಂದು ತಿಳಿಯಬಾರದಿತ್ತೇಹಬ್ಬವೇ ಆಗಿಹೋಗುತಿತ್ತಲ್ಲೆ! ಬರೀ ಗಂಡಸರಷ್ಟೇ ಇವಳೊಂದಿಗೆ ಅವಳನ್ನುಹೋಲಿಸಿಕೊಳ್ಳುವುದೇ? ನಮಗೇನು ಹಕ್ಕಿಲ್ಲವೇಇವನೊಂದಿಗೆ ಅವನನ್ನೂ ಮುಡಿದುಕೊಳ್ಳುವುದು. ********

ಕಾವ್ಯಯಾನ

ನಿಸಾರ ನಮನ ಗಝಲ್ ರೇಮಾಸಂ ಹತ್ತನೇ ವಯಸ್ಸಲೇ ಮಿಂದೆದ್ದ ಕಾವ್ಯ ಕವಿ ಅಹ್ಮದ ನಿಸಾರ ನಿತ್ಯೋತ್ಸವ/ ಜಲಪಾತ ಪ್ರಥಮ ಭಾವಗೀತೆ ಪತ್ರಿಕೆಲಿ ಪ್ರಕಟಿಸಿದ ಹರಿಕಾರ ನಿತ್ಯೋತ್ಸವ// ಮೃದು ಮಾತಿನ ಭಾವುಕದ ಸಾಹಿತಿಯೇ ಮೋಡದಲೇಕೆ ಮರೆಯಾದಿರಿ/ ಬುದ್ದಿಜೀವಿ ಸಂವೇದನಾಶೀಲ ಭಾವದ ಚಿಂತನಕಾರ ನಿತ್ಯೋತ್ಸವ// ರಾಜಕೀಯ ಸಮರ್ಥ ವಿಡಂಬನೆಯಲಿ ಕುರಿಗಳು ಸಾರ್ ಕುರಿಗಳು ಎಷ್ಟು ಚಂದ/ ಬೆಣ್ಣೆ ಕದ್ದವ ಕೃಷ್ಣನೆಂದು ತೋರಿದ ಪ್ರತಿಭಾಕಾರ ನಿತ್ಯೋತ್ಸವ// ಭಾವೈಕ್ಯದ ರುವಾರಿ ಕರುನಾಡಿನ ರಾಯಭಾರಿಯು ನೀವಲ್ಲವೇ/ ಕನ್ನಡದಲ್ಲಿ ಸಾರೆ ಜಹಾಂಸೆ ಅಛ್ಛಾ ನುಡಿಸಿದ ಗೀತಕಾರ ನಿತ್ಯೋತ್ಸವ// ಬಿಗಿದು ನಿನ್ನ ನಲಿವಿನ ಕಾವ್ಯದಿ ಪಾಲುಗೊಳ್ಳು ಮನಸ್ಸದಿ ರೇಮಾಸಂ/ ಈ ಜಗವು ಬರಿದಾಗಿ ಕಾಣುತಿದೆ ನೀವಿಲ್ಲದ ಗ್ರಂಥಕಾರ ನಿತ್ಯೋತ್ಸವ// ******

ನಿತ್ಯೋತ್ಸವ ಕವಿ

ಬದುಕು-ಬರಹ ನಿತ್ಯೋತ್ಸವ ಕವಿ ಹಾಗೂ ವಿಮರ್ಶಕ ಮತ್ತು ವೈಚಾರಿಕ ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಮಹಮದ್..! ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು… ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ. ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ 10ನೇ ವಯಸ್ಸಿನಲ್ಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅನರ್ಸ್ ಅಧ್ಯಯನ ಸಮಯದಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು. ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ.ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರಾಗಿದ್ದರು… ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿ ಹೃದಯವನ್ನು ಪಕ್ವಗೊಳಿಸಿ ಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು. 1960ರಲ್ಲಿ ಪ್ರಕಟಗೊಂಡ ‘ಮನಸು ಗಾಂಧಿಬಜಾರು’ ಎಂಬ ಕವಿತಾ ಸಂಕಲನದಿಂದ ತೊಡಗಿ 2013ರ ‘ವ್ಯಕ್ತಿಪರ ಕವನಗಳು’ ಕೃತಿಯವರೆಗೆ 19 ಕವನ ಸಂಕಲನಗಳನ್ನೂ 12 ಗದ್ಯ,ಪ್ರಬಂಧ, ವಿಮರ್ಶೆಯ ಲೇಖನ ಸಂಕಲನಗಳನ್ನೂ, 5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ, 5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಹಿರಿಮೆ ಇವರದು. ಇವರ ಹಲವು ಕವನ ಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ. ‘ನಿತ್ಯೋತ್ಸವ’ ಎಂಬ ಕವನ ಸಂಕಲನವು 24 ಬಾರಿ ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಶೇಕ್ಸ್‌ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ , ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. ‘ನಿತ್ಯೋತ್ಸವ’ ಎಂಬ ಭಾವಗೀತಗಳ ಆ ದ್ವನಿ ಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ… ಇವರ ಯಾವುದೇ ಕವನವು ನಮ್ಮನ್ನು ಕ್ಷೋಭೆಗೀಡು ಮಾಡದೇ, ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ. ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು,ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ… ಇದೇ ಕಾರಣದಿಂದಾಗಿಯೇ ‘ಉತ್ತನೆಲದ ಗೆರೆ’ ‘ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು’, ‘ಕೊಯ್ದ ಹಸಿಮರದ ಕಂಪು’, ‘ಸಮಾಜವಾದದ ರೊಟ್ಟಿಯ ತುಣುಕು’ ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ… ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ. ‘ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು’ ಎಂಬಂಥ ಪದಚಮತ್ಕಾರಗಳೂ ಇರುತ್ತದೆ. ‘ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ… ಅದೇ ರೀತಿಯಲ್ಲಿ ಇವರ ‘ಇದು ಬರಿ ಬೆಡಗಲ್ಲೋ ಅಣ್ಣ’ ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ… ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. ‘ಹಕ್ಕಿಗಳು’ ಎಂಬ ಕೃತಿಗೆ 1978ರಲ್ಲಿ, ‘ಇದು ಬರಿ ಬೆಡಗಲ್ಲೊ ಅಣ್ಣ’ ಎಂಬ ಕತಿಗೆ 1981ರಲ್ಲಿ ‘ಅನಾಮಿಕ ಆಂಗ್ಲರು’ ಕೃತಿಗೆ 1982ರಲ್ಲಿ, ‘ಹಿರಿಯರು ಹರಸಿದ ಹೆದ್ದಾರಿ’ ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ, ’73ನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ– ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದಾಗಿದೆ… ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳು ಇವರನ್ನು ಸಮ್ಮಾನಿಸಿವೆ. 1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನುಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ ಇವರು. ಡಾ.ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳು ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿ‌ಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ. ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿತ್ತು… 2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ‘ನಿಸಾರ್ ನಿಮಗಿದೋ ನಮನ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು. ಅವರ ಬಗೆಗೆ ಸಾಕ್ಷ್ಯಚಿತ್ರ, ಸಂದರ್ಶನ, ಕವನ ವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. ‘ಕುರಿಗಳು ಸಾರ್ ಕುರಿಗಳು’ ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್.ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು… ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೇ ಸ್ವಯಂ ತೇಜೋಮಾನರಾಗಿದ್ದರು. ಯುಗದ ಕವಿಯಾಗಿದ್ದರು. ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿಯಾಗಿದೆ..! ಇಂತಹ ಸಹೃದಯ ಕವಿವರ್ಯರು ಇಂದು ನಮನ್ನಗಲಿದ್ದಾರೆ. ಅವರಿಗೆ ನಮಸ್ಕಾರಗಳು… ************************************** ಕೆ.ಶಿವು.ಲಕ್ಕಣ್ಣವರ

ಗುರುವಂದನೆ

ಗುರುವಂದನೆ ಪೂರ್ಣಿಮ ಸುರೇಶ್ ಗೃಹಬಂಧಿಯಾಗಿ ಕರೋನ ಪೊಸಿಟಿವ್,ನೆಗಟಿವ್,ಹಸಿರು,ಹಳದಿ,ಕೆಂಪು ಅನ್ನುವ ಸುದ್ದಿಮಾಯೆಯ ಸೆಳೆತಕ್ಕೆ ಹೊಂದಿಸಿಕೊಂಡು.ಮೌನ ಹೊದ್ದ ದಿನಗಳು ತೆವಳುತ್ತಿದೆ. ಇಂತಹ ಸಮಯದಲ್ಲೇ ಬೆಂಗಳೂರಿನ ಗೆಳೆಯರೊಬ್ಬರು ಕರೆ ಮಾಡಿ ‘ನಿಸಾರ್ ಹೋಗಿಬಿಟ್ರಲ್ವಾ’..ಮನಸ್ಸು ಒಪ್ಪಲಾರದ,ಬುದ್ದಿ ಗ್ರಹಿಸಲಾರದ ಏನನ್ನೋ ಆಡುತ್ತಿದ್ದಾರೆ. ಉತ್ತರಿಸಲಾಗದ ಮಂಕು ಕವಿಯಿತು. ವಾಟ್ಸಫ್ ತೆರೆದರೆ ಆಗಲೇ ಹಲವಾರು ಸ್ನೇಹಿತರು ಸಂದೇಶ ಕಳುಹಿಸಿದ್ರು. ಒಳಹೊರಗೆಲ್ಲ ಸೂತಕ. ಸಾರ್..ಹೋಗಿಬಿಟ್ರೇ..ಸಾಧ್ಯವೇ ಇದು..ಟಿ.ವಿಯಲ್ಲೂ ಅದೇ ಸುದ್ದಿ..ಬಂಧು,ಗುರು,ಮಾರ್ಗದರ್ಶಿ..ಇನ್ನಿಲ್ಲ. ಹೇಗೆ ನಂಬಲಿದನ್ನು..ಸುಳ್ಳಾಗಬಾರದೇ.. ಅಂತರಂಗದಲ್ಲಿ ಕಚ್ಚಿಕೊಂಡ ನೆನಪುಗಳು,ಬರಹಗಳು ಮಾತ್ರ ನಮ್ಮ ಜೊತೆ. ನಿಸಾರ್ ಸಾರ್ ಗೆ ನಮ್ಮ ಉಡುಪಿಯ ಜೊತೆ ಅನನ್ಯವಾದ ನಂಟು. ಅವರೇ ಹೇಳುತ್ತಿದ್ದಂತೆ ದಾಖಲೆ ಎನ್ನುವಷ್ಟು ಕಾರ್ಯಕ್ರಮಗಳಿಗೆ ಉಡುಪಿಯಲ್ಲಿರುವ ಅವರ ಅಭಿಮಾನಿಗಳು ಕರೆಸಿಕೊಂಡಿದ್ದರು. ಅದು 2013 ಇರಬೇಕು ಅರಣ್ಯ ಇಲಾಖೆಯವರು ಪ್ರೊ ನಿಸಾರ್ ಅಹಮದ್ ಅವರನ್ನು ವನಮಹೋತ್ಸವ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಆಹ್ವಾನಿಸಿದ್ರು. ಜೊತೆಜೊತೆಗೆ ಅವರ ಒಪ್ಪಿಗೆಯಿಂದ ಬೇರೆ ಎರಡು ಸಾಹಿತ್ಯಕ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. ಉಡುಪಿಯ ಟಿ.ವಿ. ಚಾನಲ್ ನವರು ಸಾರ್ ಅವರ ಸಂದರ್ಶನ ಮಾಡುವಂತೆ ನನ್ನ ಕೇಳಿಕೊಂಡಿದ್ರು. ನನಗೆ ಒಂದು ಎರಡು ತಾಸಿನ ಸಮಯ. ನಾನು ತಯಾರಾಗಬೇಕಿತ್ತು. ನನಗೋ ಗೊಂದಲ..ಅಷ್ಟಿಷ್ಟು ನಿಸಾರ್ ಅವರ ಕವನ ಓದಿದ್ದು ಅಷ್ಟೆ. ಅದು ಹೊರತುಪಡಿಸಿ ಮತ್ತೇನು ಗೊತ್ತು. ಮಾತಿನ ನಡುವೆ ಅವರು ನನ್ನನ್ನು ಸಾಹಿತ್ಯದ ಬಗ್ಗೆ ಏನಾದ್ರೂ ಪ್ರಶ್ನಿಸಿದರೆ..? ನಾನೋ ಅರೆಬೆಂದ ಕಾಳು. ಏನು ಮಾಡಲಿ. ಓದಿದ್ದೂ ಕೂಡಲೇ ನೆನಪಿಗೂ ಬರುತ್ತಿಲ್ಲ…ಸಂದಿಗ್ಧತೆಯಲ್ಲೇ ಚಾನಲ್ ಹುಡುಗರೊಂದಿಗೆ ಅವರು ಉಳಿದುಕೊಂಡಿದ್ದ ವಸತಿಗೃಹಕ್ಕೆ ಹೋಗಿದ್ದೆ. ಆಗಷ್ಟೆ ಅವರು ನಮ್ಮ ಊರನ್ನು ತಲುಪಿದ್ರು. ಮುಖದಲ್ಲಿ ಆಯಾಸ. ಏನು? ಎನ್ನುವ ಪ್ರಶ್ನೆ ಯೊಂದಿಗೆ ಸರಿದು ಒಳಬರಲು ನಮಗೆ ದಾರಿಕೊಟ್ಟರು. ನಾನು ವಿಷಯವನ್ನು ಅವರಿಗೆ ತಿಳಿಸಿ ಅಂದೆ. “ಸಾರ್,ಸಂದರ್ಶನ ಎನ್ನುವ ಧೈರ್ಯ ನನ್ನೊಳಗಿಲ್ಲ. ನಿಮ್ಮನ್ನ ಮಾತನಾಡಿಸಬೇಕು, ಸಾಹಿತ್ಯದ ಮಾತುಗಳನ್ನು ಕೇಳಬೇಕು . ಮಗುವಿನ ಕುತೂಹಲ. ನಿಮ್ಮನ್ನ ಪೂರ್ತಿ ಓದಿಲ್ಲ. ತಪ್ಪುಗಳಿದ್ದರೆ ಕೋಪಿಸದಿರಿ.” ಸಾರ್,ಒಂದು ತಾಸು ಬರಹದ ಬಗ್ಗೆ,ಕವಿತೆಗಳ ಬಗ್ಗೆ,ಬದುಕಿನ ಬಗ್ಗೆ..ಮಾತನಾಡುತ್ತಲೇ ಹೋದರು. ನಡುನಡುವೆ ನನ್ನ ಪ್ರಶ್ನೆ..ಸಮಯದ ಮಿತಿ ತಿಳಿದು ಮಾತಿಗೆ ಚುಕ್ಕಿ ಇಟ್ಟಿದ್ದೆ. ಗೊತ್ತಿಲ್ಲ ಅಂದವಳು ಅದೆಷ್ಟು ಒಳ್ಳೆಯ ಪ್ರಶ್ನೆಗಳನ್ನು ಕೇಳಿರುವೆ ತಾಯಿ..ಎನ್ನುವ ಸರ್ಟಿಫಿಕೇಟ್ ನೀಡಿದ್ರು. ಮರುದಿನ ಅವರ ಇನ್ನೊಂದು ಕಾರ್ಯಕ್ರಮದಲ್ಲಿ ತನ್ನ ಮಾತಿನ ನಡುವೆ ಈ ಸಂದರ್ಶನದ ನೆನಪು ಮಾಡಿ..ಎಲ್ಲಿ ಆ ಹುಡುಗಿ.. ಇದ್ರೆ ಸ್ವಲ್ಪ ನಿಂತುಬಿಡಮ್ಮಾ. ಬಹಳ ಚೆನ್ನಾಗಿ ಸಂದರ್ಶನ ನಡೆಸಿದೆ ಎನ್ನುತ್ತ ನನ್ನ ಒಳಗೊಂದು ಪುಳಕದ ತೇರನ್ನೇ ಎಳೆದುಬಿಟ್ಟರು. ಸಾರ್..ನನ್ನನ್ನ ಆಶೀರ್ವದಿಸಿದರು. ಇಂತಹ ಆಶೀರ್ವಾದ ನನ್ನಂತಹ ಅದೆಷ್ಟೋ ಜನರಿಗೆ ಮೊಗೆದು ಕೊಡುವ ಸಿರಿವಂತಿಕೆ ಆ ಮೇರು ವ್ಯಕ್ತಿತ್ವಕ್ಕಿತ್ತು. ಮುಂದೆ ಉಡುಪಿಗೆ ಕಾರ್ಯಕ್ರಮಗಳಿಗಾಗಿ ಹಲವಾರು ಬಾರಿ ಸಾರ್ ಬಂದಿದ್ದರು. ನನ್ನ ಕವನ ಸಂಕಲನ ಅವರ ಕೈಗಿಟ್ಟು ಆಶೀರ್ವಾದ ಬೇಡಿದ್ದೆ. ಸಂಘಟಕಿಯಾಗಿ ನನ್ನ ಕೆಲಸದ ಬಗ್ಗೆ ಮೆಚ್ಚುಗೆ,ಹಾರೈಕೆ ನೀಡುತ್ತಲೇ ಉಡುಪಿಯೊಳಗೆ ಕಿರಿಯ ಸ್ನೇಹಿತರ,ಅಭಿಮಾನಿಗಳ ತಂಡವನ್ನೇ ನಿರ್ಮಿಸಿ ಬಿಟ್ಟರು. ಸಾರ್ ಬಂದಾಗಲೆಲ್ಲ ಸಿಹಿ ಕಂಡಾಗ ಮುಗಿ ಬೀಳುವ ಇರುವೆಗಳಂತೆ ಸೇರಿ ಬಿಡುತ್ತಿದ್ದರು . ಇವರಲ್ಲಿ ಗೂಡಂಗಡಿಯವರು, ಅರಣ್ಯ ಇಲಾಖೆಯ ಉದ್ಯೋಗಿಗಳು,ಸಾಹಿತಿಗಳು,ವ್ಯಾಪಾರಸ್ಥರು,ಉಪನ್ಯಾಸಕರು ವಿಧ್ಯಾರ್ಥಿಗಳು, ಎಲ್ಲ ಬಗೆಯ ಮನಸ್ಸುಗಳನ್ನು ಸೇರಿಸಿ ಮಾತು..ಪ್ರೀತಿ, ವಾತ್ಸಲ್ಯ ತುಂಬುತ್ತಿದ್ದರು. ಭೇಟಿಯಾದ ಪ್ರತಿಯೊಬ್ಬರ ಹೆಸರು ಅವರ ಮನಸ್ಸಿನಲ್ಲಿ ದಾಖಲಾಗುತ್ತಿತ್ತು. ಮಾತ್ರವಲ್ಲಅವರವಿಶೇಷತೆಗಳು,ಇಷ್ಟಗಳು,ಆಸಕ್ತಿಗಳ ಬಗ್ಗೆ ಥಟ್ಟಂತ ಹೇಳಿ ಬಿಡುತ್ತಿದ್ದರು. ಅದೊಂದು ಸಲ ಉಡುಪಿಗೆ ಬಂದಾಗ ಅವರ ಆಪ್ತರು ರಾತ್ರಿ ಊಟಕ್ಕೆ ಹೋಟೇಲಿಗೆ ಕರೆದಿದ್ರು. ಊಟ ಮುಗಿಸಿ ಕಾಲ್ನಡಿಗೆಯಲ್ಲಿ ಅವರು ಉಳಿದುಕೊಂಡ ವಸತಿ ಗೃಹ ಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಕುಡುಕನೊಬ್ಬ ಎದುರಾದ. ಇವರನ್ನು ದಾಟಿ ಮುಂದೆ ಹೋಗುವ ಸಮಯದಲ್ಲಿ ಥಟ್ಟಂತ ನಿಂತು ಅವರಿಗೆ ಸೆಲ್ಯೂಟ್ ನೀಡಿದ. ಸಾರ್ ಕೂಡಲೇ ಅವನ ಭುಜ “ಸವರಿ ಎಲ್ಲಿಂದ ಬರುತ್ತಿರೋದು” ಅಂದ್ರು. ಅವನು ಯಾವುದೋ ಕಟ್ಟಡ ಕಾರ್ಮಿಕ. ಅಮಲಿನಲ್ಲೇ ಉತ್ತರಿಸಿದ. ಕೈಯಲ್ಲಿ ಪೊಟ್ಟಣವಿತ್ತು. ಇದೇನು ಎಂದು ಪ್ರಶ್ನಿಸಿದರು. ಪರೋಟ ಅಂದ. ಮನೆಯಲ್ಲಿ ಯಾರಿದ್ದಾರೆ. ಎಷ್ಟು ಮಕ್ಕಳು..ಯಾಕೆ ಕುಡಿತದ ಅಭ್ಯಾಸ.ತಗೋ ಓದುವ ನಿನ್ನ ಮಗಳಿಗೆ ಇರಲಿ ಎಂದು ತಮ್ಮ ಕಿಸೆಯಿಂದ ಹಣವನ್ನ ತೆಗೆದು ಅವನ ಕೈಗಿರಿಸಿದ್ರು. ಉಡುಪಿಯಲ್ಲಿ ಪರಿಚಯವಾದ ಪ್ರತಿಯೊಬ್ಬರ ಮನೆಯ ಸದಸ್ಯರ ಹೆಸರು,ಅವರ ಆಸಕ್ತಿ..ಅದರ ಬಗ್ಗೆ ವಿಚಾರಣೆ ಬಲುಆಸ್ಥೆಯಿಂದ ಮಾಡುತ್ತಿದ್ದವರು. ಒಮ್ಮೆ ಬೈಂದೂರಿನಲ್ಲಿ ಅವರ ಅಧ್ಯಕ್ಷತೆಯಲ್ಲಿ ಅಡಿಗರ ವಿಚಾರಗೋಷ್ಠಿ ನಡೆಯುವುದಿತ್ತು. ಉಡುಪಿಯಿಂದ ನಾವು ಒಂದಷ್ಟು ಜನ ಅವರ ಜೊತೆ ಹೊರಟಿದ್ದೆವು. ದಾರಿ ಮಧ್ಯದಲ್ಲಿ ಶಿವರಾಮ ಕಾರಂತರ ಊರು ಕೋಟ ಬಂದಾಗ ಅಟೋ ನಿಲ್ದಾಣ ..ಕಾರು ಸ್ವಲ್ಪ ನಿಲ್ಲಿಸಪ್ಪ..ಇದು ಕಾರಂತರ ಓಡಾಡಿದ ಪುಣ್ಯಭೂಮಿ ಅಲ್ವಾ.ನಾನು 15 ವರ್ಷಗಳ ಹಿಂದೆ ಇಲ್ಲಿ ಬಂದಾಗ ಒಬ್ಬ ಆಟೋ ಡ್ರೈವರ್ ನನ್ನನ್ನು ಕರೆದುಕೊಂಡು ಹೋಗಿದ್ದ. ಅವನ ಹೆಸರು ಎಂದು ಹೆಸರು ಹೇಳಿ, ಅವನು ಇದ್ರೆ ಮಾತಾಡಿಸಿ ಬರುವೆ ಎನ್ನುತ್ತ ಅಲ್ಲಿ ವಿಚಾರಿಸಿ ಬಂದಿದ್ದರು. ಯಾವುದೇ ಹಮ್ಮುಬಿಮ್ಮುಗಳಿಲ್ಲ,ಜಾತಿ,ಮತ,ಧರ್ಮ ಎಲ್ಲವನ್ನು ಮೀರಿ ಮಾನವತೆಯ ಮಂತ್ರವನ್ನು ತಮ್ಮೊಳಗೆ ತುಂಬಿಕೊಂಡವರು. ತಮ್ಮ ಆಪ್ತರಿಗೆ ಅದನ್ನೇ ಬೋಧಿಸಿದವರು. ಸಾಹಿತ್ಯವೆಂದರೆ ಹೃದಯಗಳನ್ನು ಬೆಸೆಯುವ ಶ್ರೇಷ್ಠ ಮಂತ್ರ ಎನ್ನುತ್ತಿದ್ದರು. ಅವರ ಸಾಹಿತ್ಯ ಹಾಗೂ ಅವರು ಬೇರೆಯಲ್ಲ. ಬರೆದಂತೆ ಬದುಕಿದವರು. ತನ್ಮ ಕಾರ್ಯಕ್ರಮಕ್ಕೆ ಬಂದ ಪರಿಚಿತರ ಹೆಸರನ್ನು ಪ್ರೀತಿಯಿಂದ ಉಲ್ಲೇಖಿಸಿ ಗುರುತಿಸುತ್ತಿದ್ದರು. ಬೆಂಗಳೂರಿನಲ್ಲಿ ನಾಗರಬಾವಿಯ ಅವರ ಮನೆಯಲ್ಲಿ ಪ್ರಕಾಶ್ ಎನ್ನುವ ಒಬ್ಬ ಅನಾಥರಿದ್ದರು. ತನ್ನ ಊಟದಲ್ಲಿ ಅರ್ಧವನ್ನು ಅವನಿಗೆ ನೀಡಿ ಖರ್ಚಿಗೆ ಕೊಟ್ಟು ಸಾಕುತ್ತಿದ್ದರು. ಆ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದ್ದಂತಿತ್ತು. ಕೆಲವೊಮ್ಮೆ ಜೋರಾಗಿ ಕಿರುಚಿ ಸಾರ್ ಗೆ ಬಯ್ಯುತ್ತಿದ್ದ. ಅದನ್ನೂ ಮುಗುಳ್ನಗೆಯಿಂದ ಸ್ವೀಕರಿಸಿ ಅನುಕಂಪದಿಂದ ಹೇಳುತ್ತಿದ್ರು. ಪಾಪ,ಅವನಿಗೆ ಯಾರಿದ್ದಾರೆ ? ಲಕ್ಷ್ಮಣ್ ಎಂಬ ಹುಡುಗ ಕೇಬಲ್ ಕೆಲಸದಲ್ಲಿ ತೊಡಗಿಸಿಕೊಂಡವನು. ಸ್ವಂತ ಮಗನಿಗಿಂತ ಹೆಚ್ಚು ಎಂಬಂತೆ ಪ್ರೀತಿಸಿದರು. ಕ್ಯಾಮಾರ ಹಿಡಿದು ಫೋಟೋ ತೆಗೆಯುವ ಗೋವಿಂದರಾಜ್,ಅರಣ್ಯಾಧಿಕಾರಿಯಾಗಿ ನಿವೃತ್ತರಾದ ಯೋಗೇಶ್ವರ ದಂಪತಿಗಳು,ಪ್ರಕಾಶಚಂದ್ರ, ಭಾಸ್ಕರ್,ಕಲಾವಿದರು,ಸಿಹಿತಿಂಡಿ ತಯಾರಿಸುವ ಶ್ರೀಧರ್, ಬರಹಗಾರರಾದ ಪಾರ್ವತಿ ಐತಾಳ್,ಡಾ.ನಿಕೇತನ, ಡಾ.ಪ್ರಶಾಂತ್, ಡಾ.ಧನಂಜಯ್ ಕುಂಬ್ಳೆ, ರಾಜಕೀಯದಲ್ಲಿ ತೊಡಗಿಸಿಕೊಂಡ ಕುಯಿಲಾಡಿ ಸುರೇಶ್ ನಾಯಕ್,ಅಮೃತ್ ಶೆಣೈ,ಯು.ಆರ್,ಸಭಾಪತಿ, ಹೆಸರು ತಿಳಿಯದ ಬೀಡ ಮಾರುವ ಹುಡುಗ ಇನ್ನೂ ನನ್ನ ನೆನಪಿಗೆ ಸಿಗದ ಅದೆಷ್ಟೋ ಹೆಸರುಗಳು.. ಉಡುಪಿ, ಮಂಗಳೂರಿನ ಸ್ನೇಹ ಬಂಧುಗಳು. ಎಲ್ಲರೂ ಅವರಿಂದ ಪ್ರೀತಿಯ ಸವಿ ಉಂಡು ಪುಷ್ಠಿಗೊಂಡವರು. ತಮ್ಮ ಪರಿಧಿಯೊಳಗೆ ಇಣುಕಿದ ಎಲ್ಲ ಮನಸ್ಸುಗಳಿಗೂ ಲಗ್ಗೆ ಇಟ್ಟರು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಕಂದಾ..ಎತ್ತರಕ್ಕೆ ಬೆಳೆದಷ್ಟು ನಾವು ವಿನೀತರಾಗಬೇಕು. ಕನ್ನಡ ನಮ್ಮ ತಾಯಿ ಆಕೆಯನ್ನು ಪ್ರೀತಿಸಬೇಕು, ಮನುಷ್ಯತ್ವ ಒಂದೇ ನಮ್ಮೆಲ್ಲರನ್ನೂ ಜೊತೆಯಾಗಿ ನಡೆಸಬಲ್ಲದು. ಎನ್ನುತ್ತಿದ್ದ ಸಾರ್ , ಅಂತೆಯೇ ಬದುಕಿದವರು. ಇಂದು ಭೌತಿಕವಾಗಿ ನಮ್ಮೆಲ್ಲರ ನ್ನೂ ಅಗಲಿ ಶೂನ್ಯವೊಂದನ್ನು ಮನಸ್ಸಿನಲ್ಲಿ ನೆಟ್ಟಿದ್ದಾರೆ. ಆ ನಿರ್ವಾತ ದೊಳಗಿಂದ ಅವರ ಆದರ್ಶ,ಆ ಮೇರು ವ್ಯಕ್ತಿತ್ವದ ಪರಿಮಳ ಹೆಕ್ಕುತ್ತ ನಾವು ನಡೆಯಬೇಕಾಗಿದೆ. ನಿಮ್ಮ ಸಾವಿರದ ನೆನಪುಗಳು,ವಿಶಿಷ್ಟ ಭಾಷೆಯ ಬರಹಗಳು,ಚಿಂತನೆ, ಕಾವ್ಯ ನಮ್ಮ ಜೊತೆಗಿದೆ ಸಾರ್. ಅವು ಅಜರಾಮರ. ಮನದಾಳದ ನಮನಗಳು *******

ಕಾವ್ಯಯಾನ

ಯಾನ ಪ್ರೊ.ಕವಿತಾ ಸಾರಂಗಮಠ ಲೋಕದಿ ಆವರಿಸಿದೆ ಕೊರೊನಾ ಛಾಯೆ ನಿತ್ಯೋತ್ಸವದ ಬೆಳಕು ಆರಿತಾವ ಮಾಯೆ! ನವ್ಯ ಕಾವ್ಯದ ನೇತಾರ ಕನ್ನಡದ ಕುರಿತ ಪ್ರೀತಿ ಅಪಾರ! ಕುರಿಗಳು ಸಾರ್ ಕುರಿಗಳು ರಾಜಕೀಯ ವಿಡಂಬನೆ ಮನದಲಿಲ್ಲ ನಾ ಸಾಹಿತಿ ಎಂಬ ಅಹಂಭಾವನೆ! ಪಡೆದದ್ದು ಪದವಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಕನ್ನಡ ಸಾಹಿತ್ಯದಲ್ಲಿ ಏರಿದರು ಶಿಖರ! ನಗುವಿನ ದಿನವೇ ನಿಧನ ಇದುವೇ ವಿಧಿಯ ವಿಧಾನ! ಕನ್ನಡ ಸಾಹಿತ್ಯದಲ್ಲಿ ಮಾಡಿದರು ಕ್ರಾಂತಿ ವಿಧಿವಶರಾದ ಇವರ ಆತ್ಮಕ್ಕೆ ದೊರೆಯಲಿ ಶಾಂತಿ! ಒಮ್ಮೆ ನಗು ಒಮ್ಮೆ ಅಳು ಜೀವನಕ್ಕಿರಲಿ ನಿಧಾನ ಇದೇ ಜೀವನದ ಬಹುಮೂಲ್ಯ ಸಮಾಧಾನ! *******

Back To Top