ಸುಗ್ಗಿಯ ಸಂಭ್ರಮ
ರತ್ನಾ ಬಡವನಹಳ್ಳಿ
ಬಂದಾನೋ ಭಾಸ್ಕರ ಬೆಳ್ಳಿಯಾ ರಥವೇರಿ
ಬುವಿಗೆ ಚೆಲ್ಲುತ ಬೆಳಕ ಹೊನ್ನಕಿರಣಗಳ ಕಾಂತಿ
ದಿಕ್ಕು ಬದಲಿಸು ದೆಸೆಯ ತಿರುಗಿಸುತ ಸವಾರಿ
ತಂದು ಧರೆಯಲಿ ಮಕರ ಸಂಕ್ರಾಂತಿಯ ಸಂಭ್ರಮ
ಊರ ಬಾಗಿಲಿಗೆ ಹಸಿರು ತೋರಣವ ಕಟ್ಟಿ
ತಲೆಗೊಂದು ಚೌಕದಾ ಪೇಟವಾ ಧರಿಸಿ
ಎಳ್ಳು,ಬೆಲ್ಲ,ಕೊಬ್ಬರಿ ಕಬ್ಬಿನ ಸವಿಯ ಸವಿಯುತ
ಬೆಳೆದ ಧಾನ್ಯಗಳ ರಾಶಿಯ ಮಾಡುವ ಸಂಭ್ರಮ
ಎತ್ತುಗಳ ಅಲಂಕರಿಸಿ ಮೆರವಣಿಗೆ ಮಾಡುತಾ
ಸುಗ್ಗಿಯ ಸಡಗರದಿ ಹುಗ್ಗಿಯನು ತಿನ್ನುತಾ
ಕುಣಿ ಕುಣಿದು ನಲಿ ನಲಿದು
ಹೆಜ್ಜೆ ಹಾಕುತ ಆಚರಿಸಿ ಹಬ್ಬದಾ ಸಂಭ್ರಮ
ವಕ್ಕಲು ಮಕ್ಕಳಿಗೆ ವರುಷವೆಲ್ಲ ದುಡಿದ ದಣಿವು
ಒಳ್ಳೆಯ ಫಸಲು ಬಂದರೆ ಜೀವಕೆ ಗೆಲುವು
ತಂದಿತೋ ಎಲ್ಲರ ಮನಸಿಗೂ ಚೈತನ್ಯದ ನಲಿವು
ನಗುತ ಬೆರೆತ ಊರಿನ ಜನರ ಕೊನೆಯಿರದ ಸಂಭ್ರಮ
*******