ಕಾವ್ಯಸಂಕ್ರಾಂತಿ

Image result for photos of sankranti i paintings

ಗಝಲ್

ಸಂಕ್ರಾಂತಿ ವಿಶೇಷ

ಎ.ಹೇಮಗಂಗಾ

ಹೊಸ ವರುಷದೊಡೆ ಹರುಷವಿನ್ನೂ ಮೂಡಲಿಲ್ಲ ಬಂದರೇನು ಸಂಕ್ರಾಂತಿ?
ದುರ್ದಿನಗಳ ಕರಾಳ ನೆನಪಿನ್ನೂ ಮಾಸಲಿಲ್ಲ ಬಂದರೇನು ಸಂಕ್ರಾಂತಿ?

ದಕ್ಷಿಣದಿಂದ ಉತ್ತರದೆಡೆಗೆ ನಿಶ್ಚಿತ ಪಥದಲಿ ಸೂರ್ಯನ ಚಲನ
ಸ್ವಾರ್ಥದ ಪಥವ ಮನುಜನಿನ್ನೂ ಬದಲಿಸಲಿಲ್ಲ ಬಂದರೇನು ಸಂಕ್ರಾಂತಿ ?

ಯಾಂತ್ರಿಕ ಬದುಕಲ್ಲಿ ತುಂಬುವುದು ಸುಗ್ಗಿಯ ಸಂಭ್ರಮ ಅಲ್ಪಕಾಲ
ಬಡವನೊಡಲ ಬಡಬಾಗ್ನಿಯಿನ್ನೂ ತಣಿಯಲಿಲ್ಲ ಬಂದರೇನು ಸಂಕ್ರಾಂತಿ?

ಸೃಷ್ಟಿಕರ್ತನ ದೃಷ್ಟಿಯಲಿ ಯಾರು ಮೇಲು, ಯಾರು ಕೀಳು ಇಲ್ಲಿ?
ಅಸಮಾನತೆಯ ಗೋಡೆಯನಿನ್ನೂ ಕೆಡವಲಿಲ್ಲ ಬಂದರೇನು ಸಂಕ್ರಾಂತಿ ?

ಮಂದಿರ, ಮಸೀದಿ, ಚರ್ಚುಗಳ ದೇವನೊಬ್ಬನೇ ನಾಮಗಳು ಹಲವು
ಜಾತಿ, ಮತದ ಭೇದ ಭಾವವಿನ್ನೂ ಅಳಿಯಲಿಲ್ಲ ಬಂದರೇನು ಸಂಕ್ರಾಂತಿ?

ಕಾಮಪಿಪಾಸುಗಳ ಕಿಚ್ಚಿಗೆ ಬಲಿಯಾದ ಮುಗ್ಧ ಹೆಣ್ಣು ಜೀವಗಳೆಷ್ಟೋ !
ರಣಹದ್ದುಗಳ ಕೊರಳನ್ನಿನ್ನೂ ಮುರಿಯಲಿಲ್ಲ ಬಂದರೇನು ಸಂಕ್ರಾಂತಿ ?

ಪರರ ಸಮಾಧಿಯ ಮೇಲೆ ಬದುಕು ಕಟ್ಟಿಕೊಳ್ಳುವ ಹುನ್ನಾರವೇಕೆ ?
ಮಾನವತೆ ಸತ್ತ ಸೂತಕವಿನ್ನೂ ಮುಗಿಯಲಿಲ್ಲ ಬಂದರೇನು ಸಂಕ್ರಾಂತಿ ?

ಹುಟ್ಟು ಸಾವಿನ ನಡುವಿನ ಪಯಣಕೆ ಕೊನೆ ಇಹುದು ಕಾಲನ ಕರೆಯಲ್ಲಿ
ನಿತ್ಯಸತ್ಯವಿದು ದುರುಳರಿಗಿನ್ನೂ ಅರಿವಾಗಲಿಲ್ಲ ಬಂದರೇನು ಸಂಕ್ರಾಂತಿ ?

******

Image result for photos of sankranti i paintings

2 thoughts on “ಕಾವ್ಯಸಂಕ್ರಾಂತಿ

  1. ಬಂದರೇನು ಸಂಕ್ರಾಂತಿ.. ಎಂಬ ಸಾಲೇ ಏನೋ ಕೊರತೆ ಇದೆ ಎಂಬುದನ್ನು ಬಬಿಸುತ್ತದೆ.‌
    ಅಳಿಯದೆ ಉಳಿಯುವ ಸಾಲುಗಳು. ‌

  2. ತುಂಬಾ ಚೆಂದದ ಭಾವ ಪೂರ್ಣ ಗಜಲ್ ಮೇಡಂ..

Leave a Reply

Back To Top