ಪರಿವರ್ತನೆಯ ಪರ್ವಕಾಲ
ಅವ್ಯಕ್ತ
ಅನಂತ ಆಗಸದಿ ಸ್ವಚ್ಛಂದ ಕ್ರಮಿಸುವನು,
ಆದಿತ್ಯ ಸ್ನೇಹರಾಶಿಗಳ ಮನೆಯಿಂದ ಮನೆಗೆ,
ಧನುವಿಗೆ ಕೈಬೀಸಿ ಮಕರನಿಗೆ ಕೈಚಾಚುತಲಿ,
ಕಾಯದ ನಾಡಿಗಳಿಗೆ ಉತ್ತರಾಯಣಾಗಮನದ ಸಂಭ್ರಮ…
ಜೀವಲೋಕದ ದಿನಕರನ ಕಣಕಣದ ಆಟದ ಪರಿಯೋ !
ರಾತ್ರಿ ಮಾಗಿ ಹಗಲು ಹಿಗ್ಗಿ, ವಿರಸ ಕಳೆದು ಸರಸ ಬೆಳೆದು,
ಶೀತ ಕರಗಿ ಶಾಖವರಳಿ, ಬಂಜೆ ಬಾಡಿ ಭೂ ರಮೆಯಾಗಿರಲು,
ರವಿತೇಜನ ತಂಪಿಗೆ ಹಬ್ಬಿತೆಲ್ಲೆಡೆ ಸಂಕ್ರಮಣದ ಸಡಗರ…
ಸ್ವಾಗತಿಸುವ ಸಂಭ್ರಮದಿ ಸಂತಸವ ಹಂಚುತಲಿ,
ಎಳ್ಳು ಬೆಲ್ಲ ಕಡಲೆ ಕೊಬ್ಬರಿ ಕಬ್ಬು ಬಾಳೆ ಅಚ್ಚು ಮೆಚ್ಚು,
ವೃದ್ಧಿಸಲು ನಾಲಿಗೆಗೆ ಸವಿರುಚಿ ಆರೋಗ್ಯದ ಅಭಿರುಚಿ,
ಮುತ್ತಿನ ಮಾತುಗಳು ಮಾಗಿಸುತಲಿ ಮನದ ದುಗುಡವ…
ಪಂಜಾಬಲಿ ಲೋರಿ, ಆಂದ್ರದ ಭೋಗಿ, ತಮಿಳರ ಪೊಂಗಲ್,
ಅಸ್ಸಾಮಿನ ಮಾಗಬಿಹು, ಝಾರ್ಖಂಡಲಿ ಸಂಕ್ರಾತ್,
ಉತ್ತರಪ್ರದೇಶದ ಕಿಚರಿ, ಗುಜರಾತಿಯರ ಉತ್ತರಾಯಣ್,
ರಾಜಸ್ಥಾನಿಯರಿಗೆ ಪಟದ ಹಬ್ಬ, ಕನ್ನಡಿಗರಿಗೆ ಸಂಕ್ರಮಣದ ಹಬ್ಬ.
ಬನ್ನಿ ಎಲ್ಲರೂ ಒಂದುಗೂಡಿ ಎಳ್ಳು ಬೆಲ್ಲ ಹುಗ್ಗಿಯ ಹಂಚಿ,
ಸದ್ಭಾವನೆಯ ಅಮೃತವ ಲೋಕದೆಲ್ಲೆಡೆ ಹರಡುವ,
ಒಳಿತಿನ ಪಥದಲಿ ಶುಭವ ಅರಸುತ ಹಾರೈಸುವ,
ಸಾಧನೆ ಸಹನೆ ಸರಸ ಸಾಮರಸ್ಯದ ಬಾಂಧವ್ಯ ಮೆರೆಯುವ…
********
ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಉತ್ತರಾಯಣ ಪುಣ್ಯಕಾಲ , ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು.
Beautifully written….