ಹಳ್ಳಿಯ ಸಂಕ್ರಾಂತಿ ಸಂಭ್ರಮ
ಸುಜಾತ ರವೀಶ್
ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು
ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು
ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು
ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು .
ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ
ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ
ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು
ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು .
ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ
ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ
ತಲೆದೂಗಿ ಆಡ್ತ್ಯಾವೆ ತೆಂಗು ಕಂಗು ಬಾಳೆ
ತನ್ನಿ ಕಲಸ ಕಟ್ಟೋಕೆ ಬಿರ್ನೆ ಒಂದು ಹೊಂಬಾಳೆ.
ಕೇರಿ ಕೇರೀನಾಗೆ ಅರಳಿ ನಿಂತ್ಯಾವೆ ರಂಗೋಲಿ
ಹೆಂಗೇಳೇರು ಹಾಕವ್ರೆ ಒಬ್ರಿಗೊಬ್ರು ಪೈಪೋಟೀಲಿ
ಚುಕ್ಕಿ ಎಳೆ ಹೂಗೋಳು ಸೇರಿ ಆಗವೆ ಚಿತ್ತಾರ
ಒಡ್ಲಾಗೆ ರಂಗು ತುಂಬಿಸ್ಕೊಂಡೂ ಮಾಡ್ತಿವೆ ವಯ್ಯಾರ.
ಹಾದಿಬೀದೀ ಪೂರಾ ಹೂರ್ಣದ ಹೋಳ್ಗೆ ಘಮಲೂ
ಮೈಮನ ಆವರಿಸೈತೆ ಹಿಗ್ಗಿನಾ ಅಮಲೂ
ಬೀಗರು ಬಿಜ್ಜರು ಭಾವ್ನೆಂಟ್ರು ಮನೇಕ್ ಬಂದಿರಲು
ನಗೆಸಾರಕ್ಕೇನ್ ಕಮ್ಮಿ ಇಲ್ಲˌ ಮಾಡ್ತೌವ್ರೆ ಕುಸಾಲು.
ಒಸ್ಬಟ್ಟೆ ಅಲಂಕಾರ ಹುಡ್ಗೀರ್ ಓಡಾಟ ಸರಭರ
ಗಂಡೈಕ್ಳ ಎದೇಲಿ ಏನೋ ಮಿಂಚು ಸಂಚಾರ
ಎಳ್ಳು ಬೀರೋಕ್ ಹೋಗೋರ್ನ ನೋಡೋದೇ ಹಬ್ಬ
ದಿನಾ ದಿನಾ ಸಿಕ್ತಾದಾ ಕಣ್ಗೋಳ್ಗಿಂತಾ ಹಬ್ಬಾ.
ಎತ್ತು ಗಿತ್ತು ರಾಸ್ಗೋಳಿಗೆ ಮಾಡಿಸ್ಬಿಟ್ಟು ಮಜ್ಜನ
ಟೇಪು ರಿಬ್ಬನ್ ಸುತ್ತಿ ಮಾಡ್ತಾರಲಂಕಾರಾವಾ
ಕೊಂಡ ಹಾಕಿ ಕಿಚ್ಚು ಹಾಯ್ಸಿ ಓಡ್ಸೋದ ನೋಡಿ
ಬಿಟ್ಟೋಗ್ತೈತೆ ಕೆಟ್ ದೃಸ್ಟಿ ಇನ್ನೂ ಏನೇನೋ ಹಾವ್ಳಿ.
ವರ್ಸಪೂರಾ ಜಂಜಡದಿಂದ ಖುಸಿ ಕೋಡೋದಿದು
ರೈತಾಪಿ ಜನಗೋಳ ಅಚ್ಮೆಚ್ಚಿನ್ ಅಬ್ಬಾ ಇದು
ಬನ್ನಿ ಎಲ್ಲಾ ಮಾಡೋಣ್ಕಂತೆ ಸಡ್ಗರದಾ ಸಂಕ್ರಾಂತಿ
ಕೊಚ್ಚಿ ಓಗ್ಲಿ ರೋಸ ದ್ವೇಸ ಸಾಸ್ವತ್ವಾಗ್ಲಿ ಪ್ರೀತಿ.
****************************
ಪ್ರಕಟಣೆಗಾಗಿ ಧನ್ಯವಾದಗಳು