ಸಂಕ್ರಾಂತಿ
ಪ್ರಮಿಳಾ ಎಸ್.ಪಿ.
ಪಥ ಬದಲಿಸುವ ನೇಸರನನ್ನು
ಶರಶೆಯ್ಯಯ ಮೇಲೆ ಮಲಗಿ
ಕಾದಿದ್ದನಂತೆ ಗಾಂಗೇಯ….
ಪುಣ್ಯಕಾಲಕ್ಕಾಗಿ!
ಪೃಥ್ವಿಯ ತಿರುಗುವಿಕೆಯಲಿ
ದಿನಕರನ ಮೇಲಾಟದಲಿ
ಋತುಗಳ ಓಡಾಟದಲಿ
ಇಳೆಯ ಜೀವಿಗಳ ಹೊಸ
ವರುಷದ ಹುರುಪಿನಲಿ
ವರುಷಕ್ಕೊಮ್ಮೆ ಬರುವುದೇ
ಸಂಕ್ರಾಂತಿ
ಉಳುವ ಯೋಗಿಯು ಬೆಳೆದ
ಹುಲುಸಾದ ಫಸಲು ಮನ
ತುಂಬಿ ಮನೆ ತುಂಬುವ ತವಕದಲಿರೆ
ದುಡಿದ ದನಕರುಗಳ ಮಜ್ಜನಕ್ಕಿಳಿಸಿ ಮೈದಡವಿ
ಹಿಗ್ಗು ತರುವುದೇ
ಸಂಕ್ರಾಂತಿ
ಕುಗ್ಗಿದ ಕೊರಗಿದ ಅಹಂ
ಒಳಗೆ ಬೀಗಿದ ಮನಗಳು
ಎಳ್ಳು ಬೆಲ್ಲ ನೀಡಿ-ಪಡೆದು
ಹಗುರಾಗುವ ಘಳಿಗೆಯೇ
ಸಂಕ್ರಾಂತಿ
ಮೇಲೇರಿದವ ಕೆಳಗಿಳಿಯಲೇ
ಬೇಕೆಂಬುದ ಆಡದೇ ತೋರಿಸುವ ಉದಯನು
ತಂಪುಣಿಸುವ ಗಾಳಿ ನಿಲ್ಲಿಸಿ
ಬಿರುಬಿಸಿಲಿಗೆ ಮುನ್ನುಡಿ
ಬರೆಯುವ ದಿನವೇ
ಸಂಕ್ರಾಂತಿ.
*********
ಚೆನ್ನಾಗಿದೆ.
ಪ್ರುತ್ವಿಯ ಮೇಲೆ ದಿನಕರನನ್ನು ಇಳಿಸಿ ಕಳಿಸಿದಂತಿದೆ…
ಆಹಾ ಎಂತಹ ಸುಂದರವಾಗಿ ವರ್ಣಿಸಿದ್ದೀರಿ,