ಕಥೆ
ಸುಧಾ ಹಡಿನಬಾಳ.
ರೀ, ನಿನ್ನೆ ಅವರೆಲ್ಲಾ ನಗ್ ನಗ್ತಾ ಮಾತಾಡ್ತಿರ್ವಾಗ ನೀವ್ಯಾಕ್ರಿ ಮಂಕಾಗಿ ಕುತಿದ್ರಿ? ನೀವೂ ನಗ್ತಾ ಮಾತಾಡ್ತಾ ಇದ್ರೆ ನಂಗೆ ಎಷ್ಟು ಖುಷಿ ಆಗ್ತಿತ್ತು ಗೊತ್ತಾ’ ಎನ್ನುತ್ತ ನಿನ್ನೆಯ ಅಮ್ಮನ ಮನೆ ಸಡಗರದ ಗುಂಗಲ್ಲೇ ಗಂಡನ ಕೊರಳಿಗೆ ಜೋತು ಬಿದ್ದು ಲಲ್ಲೆಗರೆದಳು ಸ್ವಾತಿ. ಅಷ್ಟೇ ನಿರ್ದಾಕ್ಷಿಣ್ಯವಾಗಿ ಅವಳ ಕೈಗಳನ್ನು ತಳ್ಳಿ ‘ ಒಹೋ, ನಿನ್ ತರನೆ ಕಂಡವರ ಜೊತೆ ಎಲ್ಲಾ ಹಲ್ ಕಿರ್ದು ನಗ್ಬೇಕಿತ್ತಾ? ನಿಂಗೆ ನೀನು ಮದುವೆ ಆಗಿರೋಳು ಅನ್ನೋದೆ ಮರ್ತು ಹೋದಂತಿದೆ. ನಂಗಿದೆಲ್ಲ ಒಂಚೂರು ಇಷ್ಟ ಆಗೋದಿಲ್ಲ. ಈಗ್ಲೆ ಹಿಂಗಿರೋಳು ಮದುವೆಗೆ ಮುಂಚೆ ಹೇಗಿದ್ಯೊ ಏನ್ ಕತೆನೊ. ಇನ್ಮುಂದೆ ಅಲ್ಲಿ ಹೋಗಿ ಮೊದಲಿಂತರ ಇರೋ ಕನಸು ಕಾಣ್ಬೇಡ ಹಾಂ’ ಎನ್ನುತ್ತಾ ಬೋರಲಾಗಿ ಮುಸುಕು ಎಳೆದುಕೊಂಡ. ಗಂಡನ ಮಾತಿನ ತೀಕ್ಷ್ಣತೆಗೆ, ಒಳಾರ್ಥಕ್ಕೆ ಸ್ವಾತಿ ನಲುಗಿ ಹೋದಳು.
ಸ್ವಾತಿ ಕಿಲಕಿಲ ನಗುವ ಉತ್ಸಾಹದ ಚಿಲುಮೆಯಾಗಿದ್ದವಳು. ಇಡೀ ಊರಿಗೆ ಯುವರಾಣಿ ಹಾಗೆ ರಾಜಾರಸ್ಸಾಗಿ ಸಮುದ್ರ, ಹೊಲ- ಗದ್ದೆ ಹೀಗೆ ಎಲ್ಲೆಡೆ ತನ್ನ ಓರಗೆಯವರು, ಊರ ಹೈಕಳ ದಂಡು ಕಟ್ಟಿಕೊಂಡು ನಾಟಕ, ಡಾನ್ಸ ಅಂತ ನಲಿದಾಡ್ತಾ ಇರೊ ನವಿಲು ಅವಳು. ಅಪ್ಪನ ಜೊತೆ ಕತ್ತಿ ಹಿಡಿದು ತೋಟಕ್ಕೆ ಬಿಟ್ರು ಸೈ, ಅಡುಗೆ ಮನೆಯಲ್ಲಿ ಎಂಟಾಳಿಗೆ ಅಡಿಗೆ ಮಾಡಿ ಬಡಿಸೋಕು ಜೈ ಅಂತಿರೋಳು. ಹೆಸರಿಗೆ ತಕ್ಕ ಹಾಗೆ ಅಪರೂಪದ ಸ್ವಾತಿ ಮುತ್ತು. ಇಂತ ಮಗಳನ್ನ ಒಲ್ಲದ ಮನಸ್ಸಿನಿಂದ ಒಳ್ಳೆಯ ಸಂಬಂಧ , ಒಬ್ಬನೇ ಮಗ, ಅಲ್ಲೂ ರಾಜಕುಮಾರಿ ತರ ಇರ್ಬಹುದು ಅಂತ ಹೆತ್ತವರು ಮಹೇಶನಿಗೆ ಧಾರೆ ಎರೆದು ಕೊಟ್ಟರು. ಊರು – ಕೇರಿಯ ಪ್ರೀತಿ,ಆಶೀರ್ವಾದದೊಂದಿಗೆ ಬೆಳಕಿನ ಕಿರಣವಾಗಿ, ಮಹೇಶನ ಭಾಗ್ಯವಾಗಿ ಮನೆ ತುಂಬಿ ಬಂದವಳು ಸ್ವಾತಿ.ಆದರೆ ಅವನಿಗದು ಬೇಕಿರಲಿಲ್ಲ. ಹೇಳಿಕೊಳ್ಳಲೇನೂ ಕೊರತೆ ಇಲ್ಲ. ಮಿತಭಾಷಿ ಅತ್ತೆ, ಆಳು- ಕಾಳು , ತೋಟ, ಸ್ವಂತ ಟ್ಯಾಕ್ಸಿ ಓಡಿಸುವ ಗಂಡ. ಆದರೆ ಮದುವೆ ಸ್ವಾತಿಯ ಪಾಲಿಗೆ ಮಧುರ ಅನುಭವ ನೀಡಲಿಲ್ಲ.; ಸರಸ- ಸಲ್ಲಾಪದ ರಸ ನಿಮಿಷಗಳಾಗಿರಲಿಲ್ಲ. ಮಹೇಶನಿಗೆ ಹೆಂಡತಿಯಲ್ಲಿ ಯಾವ ಆಸಕ್ತಿ ಇಲ್ಲ. ಬೇಕಾದಾಗ ಮಡಿಲಿಗೆ ಬಂದರೆ ಮುಗಿಯಿತು. ಪಿಸು ಮಾತು, ಬಿಸಿಯಪ್ಪುಗೆ ಬೇಕಿರಲಿಲ್ಲ. ಅವಳ ಕಿಲಕಿಲ ನಗು ಅವನಿಗೆ ವರ್ಜ್ಯ. ಅದಕ್ಕೆ ಮದುವೆಯಾದ ಹೊಸದರಲ್ಲೇ ಬ್ರೇಕ್ ಹಾಕಿದ್ದ. ಅವಳ ಸೌಮ್ಯ ವದನ, ಸಹನೆಯನ್ನು ಕೆಣಕಿ ಕೊಂಕು ತೆಗೆಯುತ್ತಿದ್ದ.ಯಾವುದಕ್ಕೂ ಸೊಲ್ಲೆತ್ತದ ಸ್ವಾತಿ ಹೆಚ್ಚು – ಕಮ್ಮಿ ನಗುವುದನ್ನೇ ಮರೆತಿದ್ದಳು.ಗಂಡನ ವಿಚಿತ್ರ ವರ್ತನೆಗೆ ಕಾರಣ ಗೊತ್ತಿಲ್ಲದೆ ತಡಕಾಡುತ್ತಿದ್ದಳು. ಕಾಲ ಹೀಗೆ ಉರುಳುತ್ತಿರಲು ಸ್ವಾತಿಯ ಮಡಿಲಲ್ಲಿ ಮುದ್ದು ಕೂಸೊಂದು ಅರಳಿತ್ತು. ಮೂರು ತಿಂಗಳ ಕೂಸಿನೊಂದಿಗೆ ಮರಳಿ ಬಂದ ಸ್ವಾತಿ ಗಂಡನ ನಡೆಯಲ್ಲಿನ ಏರುಪೇರನ್ನು ಗುರುತಿಸಿದಳು. ಮೊದಲಿನಂತೆ ಮನೆಗೆ ಸರಿಯಾಗಿ ಬರುತ್ತಿಲ್ಲ. ಬಂದರೂ ತಡವಾಗಿ ಕುಡಿದು ಬರುತ್ತಿದ್ದ.ಪ್ರಶ್ನಿಸಿದರೆ ಏರು ದನಿಯಲ್ಲಿ ಗದರಿ ರಂಪಾಟ ಮಾಡಿ ಬಾಯಿ ಮುಚ್ಚಿಸುತ್ತಿದ್ದ. ಒಂದಿನ ಅಕ್ಕಿ ಗೇರುವಾಗ ಸ್ವಾತಿಯ ಅಸಹಾಯಕ ಮೌನವನ್ನು ಗ್ರಹಿಸಿ ಮನೆಯಾಳು ಮಂಜಮ್ಮ ಸತ್ಯ ಬಾಯ್ಬಿಟ್ಟಳು. ಗಂಡನ ಈ ಅನೈತಿಕ ಸಂಬಂಧವನ್ನು ಸಹಿಸಲಾರದೆ ಮುದ್ದು ಮಗಳ ಮುಂದೆ ಕಣ್ಣೀರಾಗುವುದೊಂದೆ ಸಮಾಧಾನದ ಕ್ಷಣ.ಇನ್ನೇನು ಮಾಡಿಯಾಳು? ಅವಳ ಸಹನೆ ಎಲ್ಲವನ್ನೂ ಮೌನವಾಗಿ ಒಪ್ಪಿಕೊಂಡಿತ್ತು. ಎಲ್ಲಕ್ಕೂ ಕಾಲವೆ ಪಾಠ ಕಲಿಸುತ್ತದಲ್ಲವೆ?
ಅದೊಂದು ರಾತ್ರಿ ಕುಡಿದ ಅಮಲಿನಲ್ಲಿ ಟ್ಯಾಕ್ಸಿ ಓಡಿಸಿಕೊಂಡು ಬರುವಾಗ ನಿಂತ ಲಾರಿಗೆ ಗುದ್ದಿಕೊಂಡು ಮಣಿಪಾಲ ಸೇರಿದ. ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಮೆದುಳು ದೇಹದ ಮೇಲಿನ ಹಿಡಿತ ಕಳೆದುಕೊಂಡಿತ್ತು. ವೈದ್ಯರೆ ಅಸಹಾಯಕರಾಗಿ ಇರುವಷ್ಟು ದಿನ ಹೀಗೆ ಮನೆಯಲ್ಲಿ ಇರಲಿ ; ಬೇರಾವ ಚಿಕಿತ್ಸೆಯೂ ಇಲ್ಲ ಎಂದಾಗ ಜೀವಂತ ಶವದಂತೆ ಮನೆ ಸೇರಿದ್ದ.. ಸ್ವಾತಿ ಟೊಂಕ ಕಟ್ಡಿ ಈ ಅಗ್ನಿ ಪರೀಕ್ಷೆಯನ್ನೂ ಎದುರಿಸಿದಳು. ಬಿದ್ದಲ್ಲೆ ಬಿದ್ದು ನಾರುವ ಎಲ್ಲವೂ ಸರಿ ಇದ್ದಾಗ ಗುರ್ ಎಂದು ಗೂಳಿಯಂತೆ ಗುಟುರುವ ಗಂಡನ ಕೊಳಕು ಬಳಿದು ,ಕುಂಡೆ ತೊಳೆದು ಕಲ್ಲಾಗಿದ್ದಳು. ಹೀಗೆ ನಾಲ್ಕು ವರ್ಷ ಕಳೆಯಿತು. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅವನ ಆರೋಗ್ಯ. ಅದೊಂದು ಮಳೆಗಾಲದ ರಾತ್ರಿ ಉಣಿಸಿ ಕಂಬಳಿ ಹೊದೆಸಿ ತುಸು ದೂರದಲ್ಲಿ ಮಲಗಿದ್ದಳು ಸ್ವಾತಿ. ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸಿದ ಗಂಡನ ತಲೆ ,ಬೆನ್ನು ನೀವುತ್ತಾ ನೀರು ಕುಡಿಸಲು ಮುಂದಾದ ಮಡದಿಯ ಕೈಯಲ್ಲೆ ಕತ್ತು ವಾಲಿಸಿ ಉಸಿರು ನಿಲ್ಲಿಸಿಬಿಟ್ಡ. ಬತ್ತಿ ಹೋದ ಅವಳ ಕಂಗಳಲ್ಲಿ ಮತ್ತೆ ನೀರು ಜಿನುಗಲಿಲ್ಲ. ಬೆಳಗಾಯಿತು. ಅಕ್ಕ- ಪಕ್ಕದವರು ,ಬಂಧು- ಬಳಗದ ಹಿರೀಕರು ಸೇರಿದರು. ಎಲ್ಲಾ ಕ್ರಿಯಾಕರ್ಮ ಮುಗಿಸಿ ಸ್ವಾತಯನ್ನು ಹೊರಗೆ ಕರೆದರು. ಮುಂದಿನ ತಯಾರಿಗಾಗಿ ಹೆಂಗಳೆಯರು ಶುರುವಿಟ್ಟುಕೊಂಡರು. ನೀರವ ಮೌನದ ನಡುವೆ ಆ ಮನೆಯ ಹಿರಿಯಾಳು ಬೋಳು ಬೋಳಾಗಿದ್ದ ಬಾಲ ವಿಧವೆ ಮಂಜಮ್ಮ ಏರು ದನಿಯಲ್ಲಿ ಮೊದಲ ಬಾರಿಗೆ ದನಿ ಎತ್ತಿದಳು.” ನಿಲ್ಸಿ, ಏನು ಮೊಕ ನೋಡ್ತಿವ್ರಿ; ಸ್ವಾತವ್ವ ಈ ಮನೆಗೆ ಬೆಳದಿಂಗಳ ಚಂದ್ರನಂತೆ ನಗ್ತಾ ಬಂದೋರು. ಆದ್ರೆ ಒಂದಿನ ನೆಮ್ಮದಿ ಕಾಣ್ಲಿಲ್ಲ ಅವರು. ನಮ್ ನಡುವಿನ ಸಹನೆಯ ತೇರು ಸ್ವಾತವ್ವ. ಮತ್ತೆ ಕೆಣಕ್ಬೇಡಿ ಅವರ ಸಹನೆಯ ಹಾಂ, ಅವ್ರನ್ನು ನೆಮ್ಮದಿಯಾಗಿ ಅವ್ರಿಷ್ಡದಂತೆ ಇರೋದಕ್ಕೆ ಬಿಟ್ಬಿಡಿ. ನೀವು ಒಳಗೆ ಹೋಗ್ರಿ ಸ್ವಾತವ್ವ’ ಎನ್ನುತ್ತಿದ್ದಂತೆ ಸ್ವಾತಿ ಸೆರಗು ಬಾಯಿಗೆ ಅಡ್ಡಲಾಗಿ ಹಿಡಿದು ಒಳಗೆ ನಡೆದಳು.
**********************
ಅತೀ ಸುಂದರ ….
Very nicely written….
ಚೆನ್ನಾಗಿದೆ.