ಬೆಕ್ಕು -ನಾಯಿಗಳ ಹುಲ್ಲಿನೌಷಧ!

ಅನುಭವ ಕಥನ(ಮಕ್ಕಳಿಗಾಗಿ)

ವಿಜಯಶ್ರೀ ಹಾಲಾಡಿ

  ‘ಮುದೂರಿ’ ಒಂದು ಸಣ್ಣ ಹಳ್ಳಿ.   ಅಲ್ಲಿ ವಿಜಿಯ ಮನೆ . ಅವರ ಊರಿನಲ್ಲಿ ಫರ್ಲಾಂಗು ದೂರಕ್ಕೊಂದೊಂದು ಮನೆಗಳು. ಆ ಊರು ಕಾಡು-ಗುಡ್ಡಗಳ ನಡುವೆ ಅವಿತುಕೊಂಡಿತ್ತು. ಜನರ ಸಂಖ್ಯೆಯೂ ಕಡಿಮೆ. ಅಲ್ಲಿಂದ ವಾಹನ ಓಡಾಡುವ ರಸ್ತೆ ತಲುಪಲು ಎರಡೂವರೆ ಮೈಲು ನಡೆದುಹೋಗಬೇಕಿತ್ತು. ಹಾಗೆ ಹೋದಾಗ ಸಿಗುವುದೇ ಹಾಲಾಡಿ. ಅಲ್ಲಿ ಕೆಲವು ಅಂಗಡಿಗಳು, ಪೋಸ್ಟ್ ಆಫೀಸ್, ಶಾಲೆ, ಹಾಲಿನ ಡೈರಿ, ಬ್ಯಾಂಕು ಇದ್ದವು . ಬಸ್ಸುಗಳು ಓಡಾಡುತ್ತಿದ್ದವು. ಡಾಕ್ಟರರನ್ನು ಕಾಣಬೇಕಾದರೆ ಅಲ್ಲಿಂದ ಬಸ್ಸು ಹತ್ತಿ ‘ಶಂಕರನಾರಾಯಣ’ ಎಂಬ ಪಕ್ಕದೂರಿಗೆ ಹೋಗಬೇಕಿತ್ತು. ಅಥವಾ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ತಾಲೂಕು ಕೇಂದ್ರವಾದ ಕುಂದಾಪುರಕ್ಕೆ ಧಾವಿಸಬೇಕಿತ್ತು. ಮುದೂರಿಯಲ್ಲಿ ಒಂದು ಬೆಂಕಿಪೊಟ್ಟಣ ಕೂಡಾ ಸಿಗಲು ಸಾಧ್ಯವಿರಲಿಲ್ಲ. ಅಗತ್ಯ ಬೇಕಾದ ವಸ್ತುಗಳನ್ನು ಹಾಲಾಡಿಯಿಂದ ತಂದು ಇಟ್ಟುಕೊಳ್ಳಬೇಕಿತ್ತು. ಹಾಗಾಗಿ ಅವರ ಊರಿನ ಜನ ತಮ್ಮಲ್ಲಿ ಇದ್ದುದರಲ್ಲೇ ಅಲ್ಪಸ್ವಲ್ಪ ಹೊಂದಿಸಿಕೊಂಡು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದ್ದರು. ತೀರಾ ಅನಿವಾರ್ಯವಾದಾಗ ಮಾತ್ರ ದೂರದ ಪೇಟೆಪಟ್ಟಣಗಳಿಗೆ ಭೇಟಿಕೊಡುತ್ತಿದ್ದರು . ಆಹಾರಕ್ಕೆ ಬೇಕಾಗುವ ಅಕ್ಕಿ ,ಕಾಳು ,ತರಕಾರಿ ,ಸೊಪ್ಪು ಹಣ್ಣು ಮುಂತಾದುವನ್ನು ಬೆಳೆದುಕೊಳ್ಳುತ್ತಿದ್ದರು. ಜೊತೆಗೆ ಅಕ್ಕಪಕ್ಕದ ಕಾಡು ,ಬಯಲುಗಳಲ್ಲಿ ಬೆಳೆದ ತಿನ್ನಲಿಕ್ಕಾಗುವ ಹಣ್ಣು, ಕಾಯಿ ಗಡ್ಡೆ, ಎಲೆಗಳನ್ನು ಕೊಯ್ದು ಬಳಸುತ್ತಿದ್ದರು. ಆರೋಗ್ಯ ಸರಿಯಿಲ್ಲದಾಗ ಮನೆಯಲ್ಲೇ ಸಣ್ಣಪುಟ್ಟ ಮದ್ದು ಮಾಡಿಕೊಂಡು ಮತ್ತೂ ಗುಣವಾಗದಿದ್ದರೆ ವೈದ್ಯರನ್ನು ಕಾಣುತ್ತಿದ್ದರು. ದನಕರುಗಳಿಗೆ ಹಳ್ಳಿಯ ಪಂಡಿತರಲ್ಲಿ ಔಷದ ತಂದು ಕುಡಿಸುತ್ತಿದ್ದರು. ಇಂತಹ ವಿಷಯಗಳಿಗೆ ಸಂಬಂಧಿಸಿದ ಕೆಲ ನೆನಪುಗಳು ವಿಜಿಯ ಮನಸ್ಸಿನಲ್ಲಿ ಆಗಾಗ ಹಣಕಿಹಾಕುತ್ತಿರುತ್ತವೆ.

 ಕಾಲಿಗೆ ಗರ್ಚ (ಕರಂಡೆ ,ಕವಳಿ )ನ ಗಿಡದ ಮುಳ್ಳು ಹೆಟ್ಟಿ ಅದೇ ಒಂದು ದೊಡ್ಡ ನೋವಾಗಿ ನಡೆದಾಡಲು ಆಗದೆ ಪುಟ್ಟ ವಿಜಿ ಹಾಸಿಗೆ ಹಿಡಿದ ಪ್ರಸಂಗ ಮೊದಲ ಪುಸ್ತಕದಲ್ಲಿ ಬಂದಿದೆ. ಆಗ ನೋವಿನ ತೀವ್ರತೆಗೆ ಜೋರು ಜ್ವರ ಕೂಡಾ  ಬಂದಿತ್ತು. ಅಮ್ಮ ಪ್ರತಿರಾತ್ರಿ ಮುಳ್ಳಿನ ಗಾಯಕ್ಕೆ ಸುಣ್ಣ ಹಚ್ಚಿ ಬಿಸಿಯಾದ ಒಲೆದಂಡೆಯ ಮೇಲೆ ಇಡಲು ಹೇಳುತ್ತಿದ್ದರು. ವಿಜಿ ಹಾಗೇ ಮಾಡುತ್ತಿದ್ದಳು. ಇದರಿಂದ ಗಾಯ ಬೇಗನೇ ಮಾಗಿ ಮೆದುಗೊಂಡು ಒಳಗಿರುವ ಮುಳ್ಳು ಹೊರಬರಲು ಸಹಾಯವಾಗುತ್ತದೆ ಎನ್ನುತ್ತಿದ್ದರು. ಇದಲ್ಲದೆ ತೋಟದಲ್ಲಿ ತಾನೇತಾನಾಗಿ ಬೆಳೆದು ಹಳದಿ ಹೂ ಬಿಡುವ ಕಡ್ಲಂಗಡ್ಲೆ  ಗಿಡದ ಎಲೆ ತಂದು ರಸ ಮಾಡಿ ಹಚ್ಚುತ್ತಿದ್ದರು . ಕೊನೆಗೊಂದು ದಿನ ಸೂಜಿಯಲ್ಲಿ ಕುತ್ತಿ ದೊಡ್ಡದಾದ ಮುಳ್ಳನ್ನು ಹೊರತೆಗೆದಾಗ ಒಂದು ಲೋಟದಷ್ಟು ರಶಿಗೆ (ಕೀವು) ಹೊರಬಂದು ಅಂಗಾಲಿನಲ್ಲಿ ದೊಡ್ಡ ಗಾಯವಾಗಿತ್ತು. ನೋವೆಂದು ಕಿರುಚಿ ಕುಣಿಯುತ್ತಿದ್ದ ವಿಜಿಗೆ ಸಮಾಧಾನವಾಗುವಂತೆ ಬಸಳೆಸೊಪ್ಪನ್ನು ಬಾಡಿಸಿ ಅದರ ರಸವನ್ನು ಹಚ್ಚಿದ್ದರು. ಆಗ ಸ್ವಲ್ಪ ತಣ್ಣ ತಣ್ಣಗೆ ಆಗಿ ಅವಳು ಅಳುವುದನ್ನು ನಿಲ್ಲಿಸಿದಳು. “ಬಸಳೆ ರಸ ಭಾರೀ ತಂಪು “ಎಂದು ಮುಳ್ಳು ತೆಗೆಯಲು ಬಂದಿದ್ದ ಶೇಷಿಬಾಯಿ, ರುಕ್ಮಿಣಿಬಾಯಿ ಹೇಳಿದ್ದರು.

 ಜಿರಾಪತಿ ಸುರಿಯುವ ಮಳೆಗಾಲದ ನಾಲ್ಕು ತಿಂಗಳಲ್ಲಂತೂ ಅವರೂರಿನಲ್ಲಿ ಶೀತ, ಜ್ವರ ಮಾಮೂಲಿ ವಿಚಾರವಾಗಿತ್ತು. ಸೀನಿ ಸಾಕಾಗಿ ಮೂಗಿನಲ್ಲಿ ನೀರಿಳಿದು ಮೈಕೈ ನೋವು, ತಲೆಭಾರ ಆಗಿ ಮೈಯೆಲ್ಲಾ ಕೆಂಡದಂತೆ ಸುಡುತ್ತಾ ಸ್ವಸ್ಥ ನಿದ್ದೆ ಮಾಡಲೂ ಬಿಡದೆ ಜ್ವರ ಕಾಡುವಾಗ ಆರಂಭದಲ್ಲಿ ಜನರು ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಕಾಳು ಮೆಣಸಿನ ಕಷಾಯ ಮಾಡುತ್ತಿದ್ದರು. ಕಾಳುಮೆಣಸು ಬೆಳೆಯುವುದು ತೋಟದ ಅಡಕೆ, ತೆಂಗಿನ ಮರಕ್ಕೆ ಹಬ್ಬುವ ಬಳ್ಳಿಯಲ್ಲಿ. ಆರಂಭದಲ್ಲಿ ಹಸಿರಾಗಿದ್ದು ಹಣ್ಣಾದ ಮೇಲೆ ಕೆಂಪಾಗಿ, ಕೊಯ್ದು ಒಣಗಿಸಿದ ನಂತರ ಕಪ್ಪಾಗುತ್ತದೆ.  ಇದು ಚಿಕ್ಕ ಚಿಕ್ಕ ಕಾಳಿನಂತಹಾ ಮೆಣಸು. ಇದನ್ನು ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಕಷಾಯ ಮಾಡುವಾಗ ಒಂದರ್ಧ ಮುಷ್ಟಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ನೀರು -ಬೆಲ್ಲ ಬೆರೆಸಿ ಕುದಿಸುತ್ತಿದ್ದರು. ಒಂದ್ಹತ್ತು ನಿಮಿಷ ಕುದಿದ ಮೇಲೆ ಕಷಾಯ ತಯಾರಾಗುತ್ತದೆ. ಇದನ್ನು ಸೋಸಿ ಕುಡಿದರೆ ಜೋರು ಖಾರ!  ವಿಜಿಗೆ ಖಾರ ಇಷ್ಟವಿಲ್ಲದಿದ್ದರೂ ಕುಡಿಯಲೇಬೇಕು. ಅವಳಿಗೆ ಆಗಾಗ ಜ್ವರ ಬರುತ್ತಿತ್ತು. ಸಪೂರಕ್ಕಿದ್ದ ವಿಜಿಗೆ ಏನೂ ತಿನ್ನದೇ ನಿಶ್ಶಕ್ತಿಯಿಂದಲೇ ಜ್ವರ ಬರುವುದೆಂದು ಅಮ್ಮ ದೂರುತ್ತಿದ್ದರು. ಅವರ ಮನೆಯಲ್ಲಿ ಶೋಲಾಪುರ (ಸೊಲ್ಲಾಪುರ) ಹೊದಿಕೆಗಳಿದ್ದವು. ಅಪ್ಪಯ್ಯ ಯಾವಾಗಲೂ ಅವುಗಳನ್ನೇ ತರುತ್ತಿದ್ದುದು. ವಿಜಿ ನೋಡಿದ ಹೊದಿಕೆಗಳಲ್ಲೆಲ್ಲ ಇವೇ ಅತ್ಯುತ್ತಮವಾದವು. ಉದ್ದ- ಅಗಲ ಹೆಚ್ಚು ಇರುವುದರ ಜೊತೆಗೆ ದಪ್ಪ ಇರುತ್ತವೆ. ಆದರೆ ದಿನಗಳಲ್ಲೂ ಹೊದ್ದುಕೊಳ್ಳಬಹುದು. ಸೆಕೆಗೆ ತಣ್ಣಗೆ ಇರುತ್ತವೆ. ಚಳಿ ಬಂದಾಗ ಎರಡೆರಡು ಹೊದಿಕೆ ಹೊದ್ದು ಮೇಲೊಂದು ರಗ್ಗು ಹಾಕಿಕೊಳ್ಳಬೇಕು. ಶೋಲಾಪುರ ಹೊದಿಕೆಯ ಡಿಸೈನ್ಗಳೂ ಚಂದ . ಈ ಎಲ್ಲ ಕಾರಣಕ್ಕಾಗಿ ಅವಳಿಗೆ ಶೋಲಾಪುರ ಹೊದಿಕೆಗಳೆಂದರೆ ಬಹಳ ಇಷ್ಟ. ಆದರೆ ಜ್ವರ ಬಂದ ರಾತ್ರಿಗಳಲ್ಲಿ ಆಗುತ್ತಿದ್ದುದೇ ಬೇರೆ. ಆಗ ಜ್ವರ ತಲೆಗೇರಿ ಹೊದಿಕೆಯ ಬಣ್ಣದ ಚಿತ್ತಾರಗಳು ರಾಕ್ಷಸಾಕಾರ ತಾಳಿ ಬಂದು ಹೆದರಿಸುತ್ತಿದ್ದವು. ಅರೆನಿದ್ದೆಯಲ್ಲಿರುತ್ತಿದ್ದ ವಿಜಿ ಹಲ್ಲುಮಟ್ಟೆ ಕಚ್ಚಿ ಕೈ ಮುಷ್ಟಿ ಬಿಗಿದುಕೊಂಡು ರಾಕ್ಷಸಾಕಾರಗಳನ್ನು ನೋಡುತ್ತಿದ್ದುದು ಮರೆತೇ ಹೋಗುವುದಿಲ್ಲ .ಹೀಗಾಗಿ ಜ್ವರವೆಂದರೆ ಕೆಟ್ಟ ಕನಸಿನಂತೆ ಅವಳಿಗೆ. ಇಂತಹ ಸಂದರ್ಭದಲ್ಲಿ ಕಾಳು ಮೆಣಸಿನ ಕಷಾಯ ಕುಡಿಯದಿದ್ದರೆ ಅಜ್ಜಿ ಹೊಡೆಯುತ್ತಾರೆಂಬ ಕಾರಣಕ್ಕಾದರೂ ಕುಡಿದೇ ಕುಡಿಯುತ್ತಿದ್ದಳು. ಸುಮಾರು ಏಳೆಂಟು ದಿನವಾದರೂ ಜ್ವರ ಬಿಡದಿದ್ದರೆ ಆಸ್ಪತ್ರೆಗೆ ಹೋಗಬೇಕಿತ್ತು. ಆಚೆಮನೆ ದೊಡ್ಡಮ್ಮ ಜ್ವರ, ಗಂಟಲುನೋವು ಬಂದರೆ ಈರುಳ್ಳಿ, ಶುಂಠಿ, ಕಾಳುಮೆಣಸು ಎಲ್ಲಾ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರು.” ನಂಗೆ ಗಂಟ್ಲ್ ನೋವ್. ನೀರುಳ್ಳಿ ಸುಟ್ಕಂಡ್, ಬೆಲ್ಲ ಹಾಯ್ಕಂಡ್ ತಿಂದೆ” ಅಂತ ಆಗಾಗ ಹೇಳುತ್ತಿದ್ದರು. ಅಜ್ಜಿಗೆ ಜ್ವರ ಬರುತ್ತಿದ್ದುದು ಕಮ್ಮಿ. ಬಂದರೆ ಮಾತ್ರ ಜೋರಾಗಿಬಿಡುತ್ತಿತ್ತು. ಅವರಿಗೆ ಜ್ವರ ಬಂದಾಗ ನಾಲಗೆ ರುಚಿ ಇರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಡುಗೆ ಚೆನ್ನಾಗಿಲ್ಲವೆಂದು ಅಮ್ಮನಿಗೆ ಬಯ್ಯುತ್ತಿದ್ದುದೂ ಇದೆ! ಕಟ್ಟಗಿನ ಮಿಡಿ ಉಪ್ಪಿನಕಾಯಿ ರಸವನ್ನು ನಾಲಗೆಗೆ ತಾಗಿಸಿಕೊಂಡು ಒಂದೆರಡು ತುತ್ತು ತಿಂದು ಬೇಡವೆಂದು ಎದ್ದುಹೋಗುತ್ತಿದ್ದರು. ಆಮೇಲೆ ಕಷಾಯ ಕುಡಿದು ಕಂಬಳಿ ಹೊದ್ದು ಮಲಗುತ್ತಿದ್ದರು. ಆದರೆ ಅಮ್ಮ ಹಾಗಲ್ಲ, ಜ್ವರ ಬಂದಾಗಲೂ ಸ್ವಲ್ಪ ಊಟ ಮಾಡಿ ಆಗಾಗ ಕಷಾಯ ಕುಡಿದು ಬೇಗನೆ ಗುಣ ಮಾಡಿಕೊಳ್ಳುತ್ತಿದ್ದರು.

 ಮುದೂರಿ ಮತ್ತು ಆಸುಪಾಸಿನಲ್ಲಿ ನರ್ಸಿಹಾಂಡ್ತಿ, ಅಕ್ಕಣಿಬಾಯಿ ಮುಂತಾದ ಸೂಲಗಿತ್ತಿಯರಿದ್ದರು. ಪೈಕನಾಯ್,ಕ ಸುಬ್ಬನಾಯ್ಕ ಎಂಬ ನಾಟಿ ವೈದ್ಯರಿದ್ದರು.  ಜನರಿಗೆ ಮತ್ತು ದನಕರುಗಳಿಗೂ ಇವರುಮದ್ದು ಕೊಡುತ್ತಿದ್ದರು. ಗಂಟಿ (ದನಕರು)ಗಳಿಗೆ ಹುಷಾರಿಲ್ಲದಾಗ ದೊಡ್ಡ ದೊಡ್ಡ ಬಾಟಲಿಗಳಲ್ಲಿ ಪೈಕ ನಾಯ್ಕ ಕೊಡುವ ಕಪ್ಪು ದ್ರವವನ್ನು ತಂದು ನೆಳಾಲಿಗೆ ಹಾಕಿ ಕುಡಿಸುತ್ತಿದ್ದರು. ಅವು ಹೆದರಿಕೆಯಲ್ಲಿ ಕುಣಿದಾಡುತ್ತಾ, ಅರ್ಧ ಉಗಿದು ಸೀನುತ್ತಾ ಹೇಗೋ ಸ್ವಲ್ಪ-ಸ್ವಲ್ಪ ನುಂಗಿ ಆರೋಗ್ಯರಕ್ಷಣೆ ಮಾಡಿಕೊಳ್ಳುತ್ತಿದ್ದವು!  ಬೆಕ್ಕುಗಳಾದರೆ ಹೀಗಲ್ಲ ; ತಮ್ಮಆರೋಗ್ಯದ ಬಗ್ಗೆ ತಾವೇ ಆದಷ್ಟು ಜಾಗ್ರತೆ ವಹಿಸುತ್ತಿದ್ದವು!!  ತಿಂಗಳಿಗೆರಡು ಸಲವಾದರೂ ಎಳೆಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತಿದ್ದವು. ಹಾಗೆ ಮಾಡಿದಾಗ ಅವುಗಳ ಹೊಟ್ಟೆಯಲ್ಲಿ ಅಜೀರ್ಣದ ಅಂಶ ಇದ್ದರೆ ಹೋಗಿಬಿಡುತ್ತದಂತೆ. ಬೆಕ್ಕುಗಳನ್ನು ನೋಡಿ ನಾಯಿಗಳೂ ಇದನ್ನು ಕಲಿತು ಅಳವಡಿಸಿಕೊಂಡಿದ್ದವು!

 ಹುಲ್ಲು ತಿನ್ನುವುದು; ವಾಂತಿ ಮಾಡುವುದು!  ಇನ್ನು ಬೆಕ್ಕುಗಳು ಇಡೀ ದಿನ ಒಲೆಯ ಹತ್ತಿರ ಅಥವಾ ಅಕ್ಕಿಮುಡಿ, ಅಟ್ಟ ಹೀಗೆ ಮನೆಯ ಬೆಚ್ಚಗಿನ ಜಾಗದಲ್ಲೇ ಮಲಗುತ್ತಿದ್ದುದರಿಂದ ಜ್ವರ ಗಿರ ಬಾಧಿಸುವ ಚಾನ್ಸೇ ಇರಲಿಲ್ಲ !ಅದೇನೇ ಇರಲಿ, ಅಮ್ಮ ಬೆಕ್ಕುಗಳಿಗೆ ಆಗಾಗ ಅನ್ನಕ್ಕೆ ತೆಂಗಿನೆಣ್ಣೆ ಹಾಕುತ್ತಿದ್ದರು. “ಅದಕ್ಕೆ ಅದೇ ಔಷಧ ಯಾವುದೇ ಕಾಯಿಲೆ ಬರುವುದಿಲ್ಲ” ಎನ್ನುತ್ತಿದ್ದರು. ದಿನಾಲೂ ಕಾಯಿ ಹೆರೆಯುವಾಗ ತುರಿಯನ್ನು ಹಾಕುತ್ತಿದ್ದರು. ನಾಯಿಗಳಿಗೆ ಟೀ ಕಣ್ಣ್ (ಟೀ ಡಿಕಾಕ್ಷನ್) ಮಾಡಿ ಹಾಕುತ್ತಿದ್ದರು . ಅದನ್ನು ಕುಡಿದರೆ ಅವುಗಳಿಗೆ ಹುಳದ ಉಪದ್ರ ಇರುವುದಿಲ್ಲ ಎಂಬುದಾಗಿ ಜನರ ಅಭಿಪ್ರಾಯ. ಇನ್ನು ಬೆಕ್ಕು ,ನಾಯಿಗಳು ವಿಷದ ವಸ್ತು ತಿಂದದ್ದು ಗೊತ್ತಾದರೆ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಪ್ರಥಮ ಚಿಕಿತ್ಸೆ ಮಾಡುತ್ತಿದ್ದರು. ಬಿಸಿಲು- ಚಳಿ -ಮಳೆಯೆನ್ನದೆ ಗದ್ದೆಗಳಲ್ಲಿ ಕಷ್ಟದ ಕೆಲಸ ಮಾಡುವ ಹೋರಿಗಳಿಗೆ ವರ್ಷದ ಕೊನೆಯಲ್ಲಿ ಹದ್ನದ ದಿನ ಹಂಗಾರ್ ಕೆತ್ತೆಯ ಗಂಜಿ ಮಾಡಿ ಬಡಿಸುತ್ತಿದ್ದರು. ಅದು ಕಹಿಯಿರುತ್ತದೆಂದು  ಅದಕ್ಕೆ ಬೆಲ್ಲ ಕೂಡ ಹಾಕುತ್ತಿದ್ದರು. ಆ ದಿನ ಅವುಗಳಿಗೆ ಸ್ನಾನ ಮಾಡಿಸಿ ಮೈಗೆಲ್ಲಾ ಎಣ್ಣೆ ಹಚ್ಚುತ್ತಿದ್ದರು. ವರ್ಷವಿಡೀ ದುಡಿದ ಎಲ್ಲರಿಗೂ ಹದ್ನದ ದಿನ ಪಾಯಸದ ಊಟ ಇರುತ್ತಿತ್ತು. ಇದಾದ ನಂತರ ಹೋರಿಗಳಿಗೆ, ಶ್ರಮಿಕರಿಗೆ ಗದ್ದೆಯಲ್ಲಿ ಮಾಡುವ ಕಷ್ಟದ ಕೆಲಸದಿಂದ ಸ್ವಲ್ಪ ಸಮಯ ಬಿಡುವು. 

ಹಲ್ಲು ನೋವು, ತಲೆನೋವು ,ಬೆನ್ನುನೋವು, ಕಾಲು ನೋವು, ಹಾವು ಕಚ್ಚಿದ್ದು , ಚೇಳು ಕಚ್ಚಿದ್ದು ಹೀಗೆ ಪ್ರತಿಯೊಂದಕ್ಕೂ ಹಳ್ಳಿಗರಲ್ಲಿ ಏನಾದರೊಂದು ಔಷಧದ ಮಾಹಿತಿ ಇರುತ್ತಿತ್ತು. ಕೆಲವರಂತೂ ಬಾಯಿ ತೆಗೆದರೆ ಆ ಸೊಪ್ಪು, ಈ ಬಳ್ಳಿ ,ಇನ್ಯಾವುದೋ ಬೇರು ಎಂದು ಮದ್ದುಗಳನ್ನು ಸೂಚಿಸುತ್ತಿದ್ದರು. ಇವುಗಳಲ್ಲಿ ಕೆಲವಂತೂ ಒಳ್ಳೇ ಪ್ರಭಾವ ಬೀರುತ್ತಿದ್ದವು. ‘ದಶಮೂಲಾರಿಷ್ಟ’ ಎಂಬ ಗಿಡಮೂಲಿಕೆಗಳ ಔಷಧವೊಂದು ಆಗ ಅಲ್ಲಿನ ಜನರ ಸರ್ವರೋಗ ನಿವಾರಕ ಎಂಬಂತಿತ್ತು!  ಅಜೀರ್ಣ ಅಥವಾ ಥಂಡಿ ಆದಾಗ ಮೊದಲು ಅದನ್ನೇ ಕುಡಿಯಲು ಕೊಡುತ್ತಿದ್ದರು. ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ, ಬೆಕ್ಕು -ನಾಯಿಗೂ ಸುಮಾರು ಕಾಯಿಲೆಗೆ ಇದೇ ಮದ್ದಾಗಿತ್ತು! ಇನ್ನು; ಹುಟ್ಟಿದ ಮಕ್ಕಳ ಎಳೆನಾಲಿಗೆಗೆ ‘ಬಜೆ’ ಹಾಕುತ್ತಿದ್ದರು . ಅಂದರೆ ಬಜೆ, ಹಿಪ್ಪಲಿ, ಜಾಯಿಕಾಯಿ ಎಂಬ ಮೂಲಿಕೆಗಳನ್ನು ತೇಯ್ದು ಚೂರು ಜೇನುತುಪ್ಪದೊಂದಿಗೆ ಸೇರಿಸಿ ನೆಕ್ಕಿಸುತ್ತಿದ್ದರು. ಇದನ್ನು ದಿನವೂ ಸಂಜೆ ಹೊತ್ತಿಗೆ ತಪ್ಪದೇ ಮಾಡುತ್ತಿದ್ದರು. ಮಗುವಿಗೆ ಹೊಟ್ಟೆ ನೋವು ಬಾರದೆ  ಚೆನ್ನಾಗಿ ನಿದ್ದೆ ಮಾಡುತ್ತದೆ ಮತ್ತು ಸ್ಪಷ್ಟವಾಗಿ ಮಾತು ಕಲಿಯುತ್ತದೆ ಎನ್ನುತ್ತಿದ್ದರು. ಸಣ್ಣ ಮಕ್ಕಳಿಗೆ ಜ್ವರ ಬಂದಾಗ ಸಂಬಾರ್ ಬಳ್ಳಿ ಸೊಪ್ಪನ್ನು (ದೊಡ್ಡಪತ್ರೆ ) ಬಾಡಿಸಿ ರಸ ತೆಗೆದು ಕುಡಿಸುತ್ತಿದ್ದರು . ಇನ್ನೂ ಕೆಲವು ಸಂಬಾರ ಪದಾರ್ಥಗಳನ್ನು ದಿನನಿತ್ಯದ ಊಟದಲ್ಲಿ ಬಳಕೆ ಮಾಡುತ್ತಾ ಅವುಗಳಿಂದ  ಔಷಧೀಯ ಅಂಶಗಳನ್ನು ಪಡೆಯುತ್ತಿದ್ದರು. ಕೊತ್ತಂಬರಿ, ಜೀರಿಗೆ, ಮೆಂತ್ಯೆ, ಸಾಸಿವೆ, ಅರಿಶಿನ ಹಾಕದೆ ಸಾಂಬಾರು ಆಗುವುದಿಲ್ಲ. ಬೆಳ್ಳುಳ್ಳಿ, ಶುಂಠಿ ಕಾಳುಮೆಣಸು, ಜೀರಿಗೆ, ಓಮ, ಏಲಕ್ಕಿ, ಲವಂಗ ,ಚಕ್ಕೆ ,ಜಾಯಿಕಾಯಿ ಆಗಾಗ ಬಳಸುತ್ತಲೇ ಇರುತ್ತಿದ್ದರು. ತ್ರಾಣಿ ಮೊದಲಾದ ಸೊಪ್ಪಿನ ಕಷಾಯಗಳನ್ನು ಮಾಡಿ ಕುಡಿಯುತ್ತಿದ್ದರು.  ಆಸ್ಪತ್ರೆಗಳಾಗಲಿ, ವೈದ್ಯರ ಸಹಾಯವಾಗಲಿ ಸುಲಭಕ್ಕೆ ದೊರಕದ ಆ ಕಾಲದಲ್ಲಿ ಜನರಿಗೆ ಆದಷ್ಟು ಕಾಯಿಲೆಗಳೇ ಬರದಂತೆ ಆರೋಗ್ಯ ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅನಾರೋಗ್ಯವಾದಾಗ ಆಗುವ ಅನಾಹುತಗಳ ಬಗ್ಗೆ ಭಯವಿತ್ತು. ನಿಸರ್ಗಸಹಜ ಆಹಾರ  ಬಳಸುತ್ತಾ ಹುಷಾರಿಲ್ಲದಾಗ ಹಳ್ಳಿಯ ಮದ್ದು ಮಾಡುತ್ತಾ ಸುಧಾರಿಸಿಕೊಳ್ಳುತ್ತಿದ್ದರು. ಶುದ್ಧ ನೀರು ,ಗಾಳಿ ,ಆಹಾರ ಸೇವಿಸುತ್ತಿದ್ದುದರಿಂದ ಕಾಯಿಲೆ ಕಸಾಲೆಗಳೂ ಕಮ್ಮಿಯಿದ್ದವು .

**************************

2 thoughts on “ಬೆಕ್ಕು -ನಾಯಿಗಳ ಹುಲ್ಲಿನೌಷಧ!

  1. ಈ ಎಲ್ಲ ವಸ್ತುಗಳು ಈಗಲೂ ಲಭ್ಯ. ನಾವು ಇವುಗಳ ಕಷಾಯವನ್ನೇ ಬೆಳಿಗ್ಗೆ ಕುಡಿಯುವುದು. ಚಹಾ, ಕಾಫಿ ಅಲ್ಲ.
    ಬಹಳ ಚೆನ್ನಾಗಿ ಹೇಳಿದ್ದಿ ವಿಜಯಶ್ರೀ…

  2. ಹಿತ್ತಲ ಮದ್ದು.. ನಮ್ಮ ಸುತ್ತ ಮುತ್ತಲೇ ನಿಸರ್ಗದ ಔಷಧವಿರುತ್ತೆ. ಬಹಳ ಚೆನ್ನಾಗಿದೆ ಲೇಖನ

Leave a Reply

Back To Top