ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ

ಅಂಕಣಬರಹ

ಪುಸ್ತಕ- ಬಾನಸಮುದ್ರಕೆ ಗಾಳನೋಟ

ಲೇಖಕರು- ಪ್ರವೀಣ

ಬೆಲೆ ೮೦/-

ಪ್ರಕಾಶನ-ಸಲೀಲ ಪುಸ್ತಕ

ಚಿಕ್ಕವನಿರುವಾಗ ಬಟ್ಟೆಯ ಸ್ಟ್ಯಾಂಡ್‌ನಲ್ಲಿರುವ ಬಟ್ಟೆಗಳನ್ನೆಲ್ಲ ಒಂದೆಡೆ ಗುಡ್ಡೆಹಾಕಿಕೊಂಡು ಬೆಚ್ಚಗೆ ಮಲಗುತ್ತಿದ್ದ ಮಗನಿಗೆ ಈಗ ಆತ ಹಾಗೆ ಮಾಡುತ್ತಿದ್ದ ಎಂದರೆ ನಂಬುವುದಿಲ್ಲ. ಮಲಗುವಾಗ ನಾನು ಬೆಳ್ಳಿಗ್ಗೆ ಬೇಗ ಏಳಬೇಕಾದಾಗಲೆಲ್ಲ ಅವನ ಪಕ್ಕ ನನ್ನ ಉಪಯೋಗಿಸಿದ ಉಡುಪುಗಳನ್ನು ಇಡುತ್ತಿದ್ದೆ. ಅದನ್ನೇ ತಬ್ಬಿಕೊಂಡು ಆತ ಹಾಯಾಗಿ ಮಲಗಿಬಿಡುತ್ತಿದ್ದ. ಕೆಲವೊಮ್ಮೆ ಬಟ್ಟೆ ಇಡದಿದ್ದಾಗ ಎದ್ದು ಅಳಲು ಪ್ರಾರಂಭಿಸುತ್ತಿದ್ದ. ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟ ಎನ್ನುವ ಸಂಕಲನದ ಮೊದಲ ಕವನವನ್ನು ಓದಿದಾಗ ನನಗೆ ಈ ಘಟನೆ ನೆನಪಾಗಿ ಮತ್ತೊಮ್ಮೆ ಕಣ್ಣಲ್ಲಿ ನೀರೂರಿತು. ತಾಯಂದಿರ ಸೀರೆಯ ಬಗ್ಗೆ ಎಲ್ಲ ಮಕ್ಕಳಿಗೂ ಒಂದು ರೀತಿಯಾದ ಭಾವನಾತ್ಮಕವಾದ ಅನುಬಂಧವಿರುತ್ತದೆ. ಊಟವಾದ ನಂತರ ತಾಯಿಯ ಸೆರಗಿಗೆ ಕೈ ಒರೆಸದ ನನ್ನ ತಲೆಮಾರಿನವರು ಸಿಗಲು ಸಾಧ್ಯವೇ ಇಲ್ಲ. ಕೊನೆಯಪಕ್ಷ ಹಳ್ಳಿಯಲ್ಲಿ ಬೆಳೆದವರಾದರೂ ಅಮ್ಮನ ಸೆರಗಿಗೆ ಕೈ ಒರೆಸಿಯೇ ಒಳೆದವರು ಎಂದು ಖಡಾಖಂಡಿತವಾಗಿ ಹೇಳಬಲ್ಲೆ. ನನ್ನ ನಂತರದ ತಲೆಮಾರಿಗೆ ಸೆರಗು ಸಿಕ್ಕಿರಲಿಕ್ಕಿಲ್ಲ. ಆದರೆ ಅಮ್ಮ ಬೆನ್ನು ತಬ್ಬಿ ಅಮ್ಮನ ಚೂಡಿದಾರಕ್ಕೆ ಮುಖ, ಕೈ ಒರೆಸಿಯೇ ಒರೆಸುತ್ತಾರೆ. ಆ ಸುಖವೇ ಬೇರೆ. ಇನ್ನು ನನ್ನ ಅಮ್ಮನ ತಲೆಮಾರಿನವರಿಗೆ ಹಾಗೂ ಅದಕ್ಕಿಂತ ಹಿಂದಿನವರಿಗೆ ಸೆರಗು ಬಹು ಉಪಯೋಗಿ ಸಾಧನವಾಗಿತ್ತು. ಕೆಂಡದ ಒಲೆಯಿಂದ ಬಿಸಿ ಪಾತ್ರೆಗಳನ್ನಿಳಿಸಲು, ಕೆಲವೊಮ್ಮೆ ಮಸಿ ಅರಿವೆಯಾಗಿ, ಮತ್ತೂ ಕೆಲವೊಮ್ಮೆ ತಕ್ಷಣದ ಸ್ವಚ್ಛಗೊಳಿಸುವ ಸಾಧನವಾಗಿಯೂ ಬಳಸಲ್ಪಡುತ್ತಿತ್ತು. ಸೆರಗಿನ ಬಳಕೆಯ ಮಹತ್ವ ಕಡಿಮೆಯದ್ದೇನಲ್ಲ. ಶ್ರೀಕೃಷ್ಣನ ಕೈಗೆ ಗಾಯವಾಗಿ ರಕ್ತ ಸೋರುತ್ತಿರುವಾಗ ದ್ರೌಪದಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಪಟ್ಟಿ ಕಟ್ಟಿದ್ದಳಂತೆ. ಆ ಸೆರಗಿನ ಅಂಚು ನಂತರ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಅಕ್ಷಯ ಸೆರಗಾಗಿ ಅವಳನ್ನು ಆವರಿಸಿಕೊಂಡಿದ್ದು ಎನ್ನುವ ನಂಬಿಕೆಯಿದೆ. ಹೀಗಿರುವಾಗ ಅಮ್ಮನ ಸೆರಗನ್ನು ಚಾಣಿಗಿಯಾಗಿ ಬಳಸುವ ರೂಪಕವನ್ನು ತನ್ನ ಮೊದಲ ಕವಿತೆಯಲ್ಲಿ ತಂದು ಇಡೀ ಸಂಕಲನದ ಘನತೆಯನ್ನು ಹೆಚ್ಚಿಸಿ, ಸಂಕಲನದ ಉಳಿದ ಕವಿತೆಯ ಕಡೆಗೊಂದು ಕುತೂಹಲವನ್ನು ಹುಟ್ಟಿಸಿದ್ದಾರೆ ಪ್ರವೀಣ.


   ಇಂದಿಗೂ ಪ್ರವೀಣ ಎಂದಾಗಲೆಲ್ಲ ಹತ್ತಾರು ಪ್ರವೀಣರನ್ನು ನೆನಪಿಸಿಕೊಳ್ಳುವ ನಾನು ೨೦೧೯ರಪ್ರಜಾವಾಣಿ ಕಾವ್ಯದ ವಿಜೇತರು ಎಂದಾಗ ಮಾತ್ರ ಅರ್ಥಮಾಡಿಕೊಳ್ಳುತ್ತೇನೆ. ಹೀಗಿರುವಾಗಲೇ ಈ ಸಂಕಲನ ನನ್ನ ಕೈ ಸೇರಿದ್ದು. ಅದ್ಭುತ ರೂಪಕಗಳ ಸುರಿಮಳೆಯನ್ನು ಓದಿ ದಿಗ್ಭ್ರಮೆಗೊಳಗಾಗಿದ್ದು.

ಅಮ್ಮನ ಮೊದಲ ಸೀರೆಗೆ
ಕನಸು ಬರೆದ ಚಿತ್ತಾರದ ಅಂಚಿತ್ತು
ವಸಂತ ಋತುವಿನ ಚಿಗುರಿನ


ಉತ್ಸಾಹಗಳ ಚಿನ್ನದ ಸೆರಗಿತ್ತು
ನನ್ನ ಹುಟ್ಟಿದ ದಿನ ಬಂಗಾರದ
ಸೆರಗು ಕುಂಚಿಗೆಯಾಗಿ ಅಂಚು
ಕಟ್ಟುವ ಕಸಿಯಾಗಿ ಚೂಪಾದ
ತುತ್ತತುದಿಗೆ ಸಾಗರದಾಳದ
ಹೊಚ್ಚಹೊಸ ಮುತ್ತು ಮೆರೆದು
ನನ್ನ ತಲೆಗೆ ಕಿರೀಟವಾಯಿತು.


 ಎಂದು ಹೇಳುತ್ತಾರೆ. ಇಲ್ಲಿ ಬರುವ ಸಾಲುಗಳನ್ನು ಗಮನಿಸಿ. ಮಗುವಿನ ತಲೆಗೆ ಕಟ್ಟಲು ಅಮ್ಮ ಹೊಲಿಯುವ ಕುಂಚಿಗೆಗೆ ತನ್ನ ಮೆತ್ತನೆಯ ಸೀರೆಯನ್ನು ಬಳಸಿ ಹೊಲೆಯುವ ಸಹಜ ಪ್ರಕ್ರಿಯೆ ಇಲ್ಲಿ ಕವಿತೆಯಾಗಿ ಮನಮುಟ್ಟುವ ಪರಿಯೇ ವಿಶಿಷ್ಟವಾದದ್ದು. ಈ ಕವನದಲ್ಲಿ ಬರುವ ಸಾಲುಗಳನ್ನು ಓದುತ್ತ ಹೋದಂತೆ ಹೊಸತೇ ಆದ ಒಂದು ಕಾವ್ಯಲೋಕ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ.  


ಜಗತ್ತಿನ ಮೊತ್ತಮೊದಲ ಮುತ್ತಿನ
ಸಂಭ್ರಮದಲ್ಲಿ ನನ್ನ ರಾಜ್ಯಾಭಿಷೇಕವಾಯಿತು.
ಈ ಸಾಲುಗಳಲ್ಲಿ ಮೂಡಿರುವ ಆಪ್ತತೆಯನ್ನು ಗಮನಿಸಿ. ಈ ಎರಡು ಸಾಲುಗಳು ಓದುಗನಲ್ಲಿ ಸಾವಿರ ಭಾವವನ್ನು ತುಂಬುತ್ತವೆ.


     ಹತ್ತನೇ ತರಗತಿಯ ಹಿಂದಿನ ಸಿಲೆಬಸ್‌ನಲ್ಲಿ ಎ. ಕೆ. ರಾಮಾನುಜನ್‌ರವರು ಇಂಗ್ಲೀಷ್‌ಗೆ ಅನುವಾದಿಸಿದ್ದ ಲಂಕೇಶರ ಅವ್ವ ಕವನವಿತ್ತು. ಅವ್ವನನ್ನು ಹೊಗಳುತ್ತಲೇ ಬನದ ಕರಡಿಯಂತೆ ಪರಚುವ ಅವ್ವ, ಕಾಸು ಕೂಡಿಡುವ ಅವ್ವ, ಸರಿಕರೆದುರು ತಲೆ ತಗ್ಗಿಸಬಾರದೆಂದು ಛಲದಿಂದ ದುಡಿವ ಅವ್ವನನ್ನು ಹೇಳುವಾಗಲೆಲ್ಲ ನನ್ನ ಮಾತು ಆರ್ದೃವಾಗುತ್ತಿತ್ತು. ಅವ್ವನನ್ನು ಕುರಿತ ಕನ್ನಡದ ಅಥವಾ ನಿಮ್ಮ ಮಾತೃಭಾಷೆಯಲ್ಲಿರುವ ಕವನಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಎಂದು ನಾನು ಮಕ್ಕಳಿಗೆ ಹೇಳುತ್ತಿದ್ದೆ.  ಈಗ ಈ ಕವನವನ್ನು ಓದಿದ ನಂತರ ತಕ್ಷಣಕ್ಕೆ ಅನ್ನಿಸಿದ್ದು, ಆಗ ಹಿಂದಿನ ಸಿಲೆಬಸ್ ಇರುವಾಗಲೇ ಪ್ರವೀಣ ಈ ಕವನ ಬರೆದಿದ್ದರೆ ನನ್ನ ಮಕ್ಕಳಿಗೆ ಇನ್ನೊಂದಿಷ್ಟು ಚಂದವಾಗಿ ಅಮ್ಮನನ್ನು ಕಟ್ಟಿಕೊಡಬಹುದಿತ್ತು, ಆಸಕ್ತ ವಿದ್ಯಾರ್ಥಿಗಳಿಗೆ ನಾಲ್ಕಾರು ಸಾಲುಗಳನ್ನು ನೀಡಿ ಇಂಗ್ಲೀಷ್ ಅನುವಾದ ಮಾಡಿ ಎನ್ನಬಹುದಿತ್ತು ಎಂದೇ. ಅಮ್ಮನನ್ನು ಇಷ್ಟೊಂದು ಆಪ್ತವಾಗಿ ಕಟ್ಟಿಕೊಡುವ ಇನ್ನೊಂದು ಕವನವನ್ನು ಸಧ್ಯದಲ್ಲಿ ನಾನು ಓದಿರಲಿಲ್ಲ. ಬರೆದಷ್ಟೂ ಬರೆಯಿಸಿಕೊಳ್ಳುವ ಕವನವಿದು. ಇದೊಂದೇ ಕವನದ ಕುರಿತುಪುಟಗಟ್ಟಲೆ ಬರೆಯಬಹುದೇನೋ.


ಭಗಭಗನೆ ಉರಿವ ಹಾಸಿಗೆಯ ಮೇಲೆ
ಸೀರೆ ಹಾಸಿ ನಿದ್ದೆ ಮಾಡುತ್ತಾಳೆ ಎವೆಮುಚ್ಚದೆ
ಸೀರೆಯ ಗಂಟಿನಲ್ಲಿ ಮಡಚಿಟ್ಟುಕೊಂಡ
ಬೈಗುಳ ಅವಮಾನ
ದಣಿವು ಸುಸ್ತುಗಳ ಒದರಿ
ನಡಕ್ಕೆ ಸೆರಗು ಕಟ್ಟಿಕೊಂಡು ಹೊಟ್ಟೆಗೆ
ಹತ್ತಿದ ಬೆಂಕಿ ಆರಿಸಲು
ಸ್ಟೋವು ಹೊತ್ತಿಸುತ್ತಾಳೆ.


ಹೌದು, ಹೆಣ್ಣಿನ ಸೀರೆಯ ಸೆರಗಿನಂಚಿನಲ್ಲಿ ಎಂತೆಂಥವು ಗಂಟುಹಾಕಿಕೊಂಡಿರುತ್ತವೋ ಬಲ್ಲವರಾರು? ಯಾರೋ ಕೊಟ್ಟ ಹಣ, ಇನ್ನಾರೋ ಮಾಡಿದ ಅವಮಾನ, ನಡೆವ ಬೀದಿಯೇ ಮೈಮೇಲೆ ಬಿದ್ದು ಎಸುಗಲೆತ್ನಿಸಿದ ಬಲಾತ್ಕಾರ, ಸ್ವಂತ ಗಂಡನೇ ತಿರಸ್ಕರಿಸಿ ಬೇರೆಯವಳೊಟ್ಟಿಗೆ ನಡೆದ ನೋವು, ಹಡೆದ ಮಗನೇ ದೂರೀಕರಿಸಿದ ಅಸಹಾಯಕತೆ ಎಲ್ಲವೂ ಆ ಸೆರಗಿನ ಮೂಲೆಯಲ್ಲಿರುತ್ತದೆ. ಸೆರಗು ಕೊಡವಿ ಎದ್ದು ನಿಂತರೆ ಬಾಳು, ಇಲ್ಲವೆಂದಾದಲ್ಲಿ ಅದೇ ಸೆರಗನ್ನು ಮನೆಯ ಜಂತಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬದುಕುವ ಛಲವಿರುವ ಯಾವ ಅಮ್ಮನೂ ಹಾಗೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ತನ್ನ ಮಕ್ಕಳಲ್ಲಿಯೂ ಬದುಕುವ ಹುಮ್ಮಸ್ಸನ್ನೇ ತುಂಬುತ್ತಾಳೆ.
ಜೀವನ ಕಟ್ಟುವ ಎಳೆದಾಟದಲ್ಲಿ
ಪಿಸುಕಿದ ಅಮ್ಮನ ಸೀರೆಗಳನ್ನು ಒಟ್ಟಿಗೆ

ಹೊಲಿದರೆ ನೆಪ್ಪದಿ ನೀಡುವ ದುಪಟಿ
ಹರಿದರೆ ಕಲ್ಮಶ ತೊಳೆಯುವ ಅರಿವೆ
ಇನ್ನಷ್ಟು ಹರಿದರೆ ಕಣ್ಣೀರು ಒರೆಸುವ ಕೈವಸ್ತ್ರ
ಹರಿದು ಚಿಂದಿ ಚಿಂದಿ ಮಾಡಿದರೂ
ಲಕ್ಷಾಂತರ ದೀಪಗಳಿಗೆ
ಬತ್ತಿ


ನಿಜ, ಇಂತಹ ಸಶಕ್ತ ಸಾಲುಗಳಿಗಲ್ಲದೇ ಬೇರಾವುದಕ್ಕೆ ಪ್ರಜಾವಾಣಿಯ ದೀಪಾವಳಿ ಕವನ ಸ್ಪರ್ಧೆಯಲ್ಲಿ ಬಹುಮಾನ ನೀಡಲು ಸಾಧ್ಯ? ಹಾಗೆ ನೋಡಿದರೆ ಈ ಕವಿತೆಗೆ ಪ್ರಥಮ ಬಹುಮಾನ ನೀಡಿ ಪ್ರಜಾವಾಣಿಯ ಬಹುಮಾನಿತ ಕವನಗಳು ಯಾವತ್ತೂ ಅತ್ಯುತ್ತಮವಾಗಿರುತ್ತವೆ ಎಂಬ ಮಾತಿಗೆ ಗಟ್ಟಿ ಸಾಕ್ಷ್ಯ ದೊರೆತಂತಾಗಿದೆ.


ಹುಡುಕುತಿವೆ ಕಾಳುಗಳು ಕೋಳಿಗಳನ್ನು
ಗೋರಿಗಳು ಸತ್ತ ದೇಹಗಳನ್ನು
ನಿದ್ರೆಗಳು ಮುಚ್ಚುವ ಕಣ್ಣೆವೆಗಳನ್ನು
ಬಟ್ಟೆಗಳು ಮುಚ್ಚಬಹುದಾದ ಮಾನಗಳನ್ನು  


ಈ ಸಾಲುಗಳಲ್ಲಿರುವ ವ್ಯಂಗ್ಯವನ್ನು ಗುರುತಿಸಿ. ಲೋಕದ ನಿಯಮಗಳನ್ನೆಲ್ಲ ಬದಲಾಯಿಸಿದ ವಿಷಾದವನ್ನು ನೋಡಿ. ಹೇಳಬೇಕಾದುದನ್ನೂ ಮೀರಿ ಈ ಸಾಲುಗಳು ಮಾತನಾಡುತ್ತಿವೆ. ಹಾಗೆ ನೋಡಿದರೆ ಒಮ್ಮೆಲೆ ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮಯ ದೇವರು….’ ಎನ್ನುವ ಸಾಲು ನೆನಪಿಗೆ ಬಂದೇ ಬರುತ್ತದೆ. ಇಡೀ ಕವನವನ್ನು ಓದಿದಮೇಲೆ ಅರಿವಾಗದ ವಿಶಣ್ಣಭಾವವೊಮದು ಎದೆಯೊಳಗೆ ಹಾಗೇ ಉಳಿಯದಿದ್ದರೆ ಹೇಳಿ. ಖಂಡಿತವಾಗಿ ಈ ಕವನವನ್ನು ಓದಿ ಮುಗಿಸಿದ ನಂತರ ಮಾಮೂಲಿಯಾಗಿ ಮುಂದಿನ ಕವನವನ್ನು ಓದಲಾಗುವುದೇ ಇಲ್ಲ. ಮತ್ತೊಮ್ಮೆ, ಮಗದೊಮ್ಮೆ ಈ ಕವನದ ಸಾಲುಗಳನ್ನು ತಿರುವುತ್ತೀರಿ. ಪ್ರಜಾಪ್ರಭುತ್ವದ ಮೇಲೆ ಒಂದಿಷ್ಟಾದರೂ ನಂಬಿಕೆಯಿದ್ದವರಾದರೆ ನಿಮಗೆ ಈ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಜೀವಪರ ನಿಲುವುಗಳು ನಿಮ್ಮಲ್ಲಿದ್ದರೆ ಖಂಡಿತಾ ಈ ಸಾಲುಗಳು ನಿಮ್ಮನ್ನು ಅಲುಗಾಡಿಸದೇ ಬಿಡುವುದಿಲ್ಲ.


ಚೂರಿ ದೈವವೇ ಬಹುಪರಾಕ
ಗಡಿಯ ನಶೆಯೇ ಬಹುಪರಾಕ
ತಲೆಯ ಚಪ್ಪಲಿಯೇ ಬಹುಪರಾಕ
ಬಣ್ಣದ ಪೊರಕೆಯೇ ಬಹುಪರಾಕ
ನಿಜ, ಈ ಪರಾಕುಗಳೇ ನಾವು ಸಾಗುತ್ತಿರುವ ದಾರಿಯನ್ನು ತೋರಿಸುತ್ತಿದೆ. ಬಗಲಲ್ಲಿ ಚಾಕು ಸಿಕ್ಕಿಸಿಕೊಂಡೇ ನಾವೀಗ ಬೆಣ್ಣೆ ಸವರಿದ ಮಾತನಾಡುತ್ತೇವೆ. ದೇಶಪ್ರೇಮದ ಹೆಸರಿನಲ್ಲಿ ಸೈನಿಕರ ಕುರಿತಾದ ಭಾವನಾತ್ಮಕ ಕಥೆಗಳನ್ನು ಹರಿಯಬಿಟ್ಟು ಎಂದೂ ಇಳಿಯದ ನಶೆಯನ್ನು ಸಾಮಾನ್ಯ ಜನರಲ್ಲಿ ತುಂಬಿ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುತ್ತೇವೆ, ಇದೇ ನಶೆಯಲ್ಲಿ ಮಾಡಿದ ತಪ್ಪುಗಳನ್ನೆಲ್ಲ ಮರೆಮಾಚಿಕೊಂಡು ತಲೆಯ ಮೇಲೆ ಪಾದುಕೆಗಳನ್ನಿಟ್ಟುಕೊಂಡು ಪೂಜಿಸುತ್ತಿದ್ದೇವೆ,
‘ಇಕೋ ತಕೋ ಸಂಭ್ರಮಿಸು’ ಕವಿತೆಯಂತೂ ಇಡೀ ಸಂಕಲನದ ಕಿರೀಟವೆಂಬಂತೆ ಭಾಸವಾಗುತ್ತದೆ. ರಾವಣ ತನ್ನ ದೈವ ಶಂಕರನನ್ನು ಪ್ರಶ್ನಿಸುತ್ತಲೇ ದೇವಾನುದೇವತೆಗಳನ್ನು ಬೆತ್ತಲು ಮಾಡಿ ನಿಲ್ಲಿಸುತ್ತಾನೆ. ‘ಲಂಕೆಯ ಶರಧಿಯಲಿ ಬೀಳುವ ನನ್ನ ನಾಡ ಪ್ರತಿಬಿಂಬದಷ್ಟೂ ಚೆಂದವಿರದ ಸ್ವರ್ಗವನ್ನು ಬಿಟ್ಟು ಬಾ’ ಎಂದು ಶಿವನನ್ನೇ ಆಹ್ವಾನಿಸುವ ಪರಿ ಕುತೂಹಲ ಮೂಡಿಸುತ್ತದೆ. ಲಕ್ಷ್ಮಣನ್ನು , ಜರೆಯುತ್ತ, ಶಿವಧನಸ್ಸನ್ನು ಮುರಿದವನ ಮೇಲೆ ಸೇಡು ತೀರಿಸಿಕೊಳ್ಳುವ ತನ್ನ ಹಠವನ್ನು ತಪ್ಪೆಂದು ಒಪ್ಪಿಕೊಳ್ಳುತ್ತ ಇಕೊ ತಕೊ ನನ್ನ ಪ್ರಾಣ ಎನ್ನುವ ರಾವಣ ಇಲ್ಲಿ ಪ್ರತಿನಾಯಕನ ವಿಜೃಂಭಣೆಯಿಂದ ಮೆರೆಯುವುದಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ಮನುಷ್ಯನಾಗಿಯೇ ಹೆಗ್ಗಳಿಕೆ ಗಳಿಸಿಕೊಳ್ಳುತ್ತಾನೆ.
‘ತನ್ನ ಡಬ್ಬಿಯ ಅನ್ನ’ ಕವಿತೆ ಹಸಿವಿನ ಕುರಿತಾಗಿ ಮಾತನಾಡುತ್ತದೆ. ಹಸಿವೆಯೆಂದು ತಿಂದು ಬಿಡುವಂತಿಲ್ಲ, ಹೊಟ್ಟೆ ತುಂಬಿಸಿಕೊಳ್ಳುವಂತಿಲ್ಲ. ಅದಕ್ಕೂ ರೀತಿ ನೀತಿ ನಿಯಮಗಳಿವೆ. ಆದರೆ ಇಲ್ಲಿ ಮಗು ತನ್ನೆದುರು ಕುಳಿತ ಬಡ, ಬತ್ತಲ ಮಗುವಿಗೆ ಆಹಾರ ನೀಡಿ ಸಂತೃತ ಕಣ್ಣುಗಳಿಂದ ನೋಡುವ ಬಗೆಯಿದೆಯಲ್ಲ, ಅದು ಯಾವ ಸ್ಥಿರ ಚಿತ್ರಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಮ್ಮಿಸುತ್ತದೆ. ಇದೇ ಚಮದದ ಮನಸೆಳೆಯುವ ಚಿತ್ರಣ ‘ವಿಶ್ವವೇ ಆಟಿಗೆಯ ಬುಟ್ಟಿ’ಯಲ್ಲಿದೆ.


ಕೊಚ್ಚೆಯಲೂ ನೆಗೆದು ಹಕ್ಕಿಗೂಡ ಮಾತಾಡಿ
ನದಿಯೊಡನೆ ಓಟ ರವಿಯೊಡನೆ ಆಟ
ಚಂದಾಮಾಮನ ಜೊತೆಯೂಟ
ವಿಶ್ವವೇ ಅವಗೆ ಆಟಿಗೆಯ ಬುಟ್ಟಿ


ಎನ್ನುವಲ್ಲಿ ಮಕ್ಕಳ ಮನಸ್ಸಿನ ನಿರ್ಮಲತೆಯನ್ನು ಬಣ್ಣಿಸಲಾಗಿದೆ. ಎರಡೂ ಕವನಗಳಲ್ಲಿ ಇದ್ದಷ್ಟು ಮುಗ್ಧವಾದ ಮಕ್ಕಳ ಪ್ರಪಂಚ ಈ ಜಗತ್ತಿನಲ್ಲಿದ್ದರೆ ಈ ಜಗತ್ತು ಅಳುವಾಗ ಅತ್ತು ಉಳಿದದ್ದಕ್ಕೆಲ್ಲ ನಗುವ ಸುಂದರ ಸ್ವರ್ಗವಾಗುತ್ತಿತ್ತು. ಆದರೆ ನಾವೆಲ್ಲ ಹಾಗೆ ಸ್ವರ್ಗದಲ್ಲಿ ಬದುಕುವ ಮನಸ್ಸು ಮಾಡುತ್ತಿಲ್ಲ. ಸದ್ದಿಲ್ಲದೇ ನರಕವನ್ನು ಕೈಹಿಡಿದು ಕರೆತಂದು ಎದುರಿಗೆ ಕುಳ್ಳಿರಿಸಿಕೊಳ್ಳುತ್ತೇವೆ. ನಾಜೂಕಾಗಿ ಒಂದೊಂದೇ ಹೆಜ್ಜೆಯನ್ನು ನರಕದೊಳಗೆ ಇಡುತ್ತ, ಅದರ ನೋವುಗಳನ್ನೇ ಸುಖ ಎಂದು ಭ್ರಮಿಸುತ್ತಿದ್ದೇವೆ.


ನಾನು ಕತ್ತಲೆಯೊಡನೆ ರಾಜಿ ಮಾಡಿಕೊಂಡಿದ್ದೇನೆ
ಮಿಂಚುಹುಳುಗಳ ಬೆಳಕಲ್ಲಿ ನಕ್ಷತ್ರಗಳ ಬಿಡಿಸುತ್ತಿದ್ದೇನೆ
ಹೃದಯಕ್ಕೆ ಬೆಂಕಿ ಹಚ್ಚಿ ಬೆಚ್ಚಗಾಗುತ್ತಿದ್ದೇನೆ


ಎಂಬುದು ನಮ್ಮೆಲ್ಲರ ಸಾಲುಗಳೂ ಹೌದು. ಬಯಸಿ ಬಯಸಿ ಎದೆಯಗೂಡಿನಲ್ಲಿರುವ ನಂದಾದೀಪವನ್ನು ತೆಗೆದು ಪೆಟ್ರೋಮ್ಯಾಕ್ಸ್ ಉರಿಸಿ ಸ್ಪೋಟಿಸುತ್ತೇವೆ. ‘ಇನ್ನು ಪ್ರೀತಿ ಹುಟ್ಟುವುದಿಲ್ಲ’ ಕವನದ ಬೆಂಕಿಕಡ್ಡಿ, ‘ಸುಡುತ್ತಿದ್ದುದು’ ಕವನದಲ್ಲಿ ಬರುವ ‘ಬರಿ ಚಡ್ಡಿಯಲ್ಲಿರುವವರು ಎಲ್ಲವನೂ ಸಹಿಸಿಕೊಳ್ಳಬೇಕಾಗುತ್ತೆ,’ ಎನ್ನುವ ಮಾತು, ‘ಹೂವು ಅರಳಿಲ್ಲ’ ಕವಿತೆಯಲ್ಲಿ ಹೇಳುವ ಪಾಚಿಗಟ್ಟಿದ ಗವಿಯ ಹೊರಗಿರುವ ಕಲ್ಲನ್ನು ತಿಕ್ಕಿ ತಿಕ್ಕಿ ಫಳಫಳನೆ ಹೊಳೆಯುವಂತೆ ಮಾಡುವ ಗವಿಯಾಚೆಗಿನ ಬೆಳಕು, ‘ಮುಗಿದು ಹೋದ ಕಥೆ’ಯಲ್ಲಿ ಬರುವ ಕಥೆಯಲ್ಲದ ಕಥೆಯ ವರ್ಣನೆ, ‘ಬದಲಿಸಲಾಗದ ಮೊದಲು’ ಕವಿತೆಯ ಹುಳು, ಎಲ್ಲವೂ ನಮ್ಮನ್ನು ಹೊಸತೇ ಆದ ಲೋಕವೊಂದನ್ನು ಪರಿಚಯಿಸಿಕೊಳ್ಳಲು ಒತ್ತಾಯಿಸುತ್ತಿರುವಂತೆ ಭಾಸವಾಗುತ್ತದೆ. ಇನ್ನೇನು ಮುಗಿದೇ ಹೋಯಿತೆನ್ನುವಾಗ ಧಿಗ್ಗನೆ ಹೊತ್ತಿ ಉರಿಯುವ ಪ್ರೇಮದಂತೆ ಇಲ್ಲಿನ ಕವಿತೆಗಳು ಏನು ಹೇಳಲಿಲ್ಲ ಎನ್ನುವಾಗಲೇ ಎರಡೇ ನಲ್ಲಿ ಎಲ್ಲವನ್ನೂ ಹೇಳಿ ದಿಗ್ಭ್ರಮೆಗೊಳ್ಳುವಂತೆ ಮಾಡಿಬಿಡುತ್ತವೆ.


ನನ್ನಲ್ಲೂ ಮಳೆ ಬಂದು
ನಿನ್ನಲ್ಲೂ ಮಳೆ ಬಂದದ್ದೂ
ತಿಳಿಯುವುದು ಮಳೆ ನಿಂತ ಮೇಲೆ


ಇದು ಕೇವಲ ಪ್ರವೀಣರವರ ಸಾಲುಗಳಲ್ಲ. ಅವರ ಸಾಲುಗಳನ್ನು ಓದಿದ ನಂತರ ನಮ್ಮಲ್ಲೂ ಹೀಗೊಂದು ಭಾವ ಹೊಮ್ಮುತ್ತದೆ. ಏನೂ ಆಗಿಲ್ಲವಲ್ಲ ಎನ್ನುವಾಗಲೇ ಕವಿತೆ ನಮ್ಮನ್ನು ನಿಬ್ಬೆರಗಾಗುವ ಒಂದು ತಿರುವಿನಲ್ಲಿ ಕಣ್ಣುಕಟ್ಟಿ ನಿಲ್ಲಿಸಿ ನಾಜೂಕಾಗಿ ತಾನು ಜಾರಿಕೊಳ್ಳುತ್ತದೆ. ಮುಂದಿನ ದಾರಿ ತಿಳಿಯದೇ ಮತ್ತದೇ ಕವನದೊಳಗೆ ಹುದುಗಲೇಬೇಕಾದ ಅನಿವಾರ್‍ಯತೆ ಸೃಷ್ಟಿಯಾಗುವ ವೈಚಿತ್ರ್ಯವನ್ನು ನಾನು ಇಡೀ ಪುಸ್ತಕದ ತುಂಬ ಹಲವಾರು ಸಲ ಎದುರುಗೊಂಡಿದ್ದೇನೆ.


ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆ
ನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ


ಒಂದು ಕವಿತೆಯ ರೂಪಕಗಳು ಸಾಕೆಂದು ಮತ್ತೊಮದು ಕವಿತೆಗೆ ನಡೆದರೆ ಅಲ್ಲೂ ಎದುರಾಗುವುದು ಒಳಸುಳಿಗೆ ಸಿಕ್ಕಿಸುವ ನುಡಿಚಿತ್ರಗಳೇ ಹೊರತೂ ಮತ್ತೇನೂ ಅಲ್ಲ. ಬದುಕು ಇಷ್ಟೇ. ನಿಜ, ಆಜೆಗೇನೂ ಇಲ್ಲ ಎಂಬ ಸುಂದರ ಕಲ್ಪನೆಯಲ್ಲಿಯೇ ನಾವು ಈಚೆಗಿನ ಸೌದರ್‍ಯವನ್ನು ಕಣ್ತುಂಬಿಕೊಂಡು, ವಾಸ್ತವದ ನಿಜಾಯಿತಿಯಲ್ಲಿ ಬದುಕಬೇಕಿದೆ.


                                 *****************************

ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

9 thoughts on “ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ

  1. ‘ಬಾನ ಸಮುದ್ರಕೆ ಗಾಳನೋಟ ‘ಈ ಸಂಕಲನದಲ್ಲಿ ನೀವು ವಿಮರ್ಶೆಗೆ ಒಳಪಡಿಸಿದ ಸಾಲುಗಳು ಓದುವ ಮನಸ್ಸನ್ನು ಹಿಡಿದಿಡುವ ಪರಿ ತುಂಬಾನೇ ಚೆಂದ.ಸಂಕಲನ ಓದಲು ಕೈ ಹಿಡಿದು ಎಳೆದಿದೆ ನಿಮ್ಮ ವಿಮರ್ಶೆ.ಕೆರೆಮನೆಯವರೆ ತುಂಬಾ ಖುಷಿ ಆಯ್ತು.

  2. ವಿಮರ್ಶೆ ಪ್ರೌಢವಾಗಿದೆ, ಶಕ್ತ ಕವಿಯೊಬ್ಬನನ್ನು ಸರಿಯಾಗಿ ಪರಿಚಯಿಸಿದೆ.

  3. ವಿಮರ್ಶೆಯೋಜನೆ ಭಾವ ತುಂಬಿದಇನ್ನೊಂದು ಕವನವೋ

  4. ಕವಿಯ ಸಾಲುಗಳನ್ನು ಬಹಳ ಆಪ್ತ ಭಾವದಲ್ಲಿ ಹೆಕ್ಕಿ ಹೊಸತಾದ, ನವಿರಾದ ಮೃದು ಮಾತಿನಲ್ಲಿ ವಿವರಿಸಿದ್ದೀರಿ. ಲೇಖನ ಚೆನ್ನಾಗಿದೆ.

Leave a Reply

Back To Top