ಬೆರಳಚ್ಚುಗಾರರ ಹುದ್ದೆಯ ಲಿಖಿತ ಪರೀಕ್ಷೆ ತೇರ್ಗಡೆಯಾದ ಸುದ್ದಿ ತಿಳಿದು ನಂತರ ಬೆರಳಚ್ಚು ತರಬೇತಿಗೆ ಹೋಗುವ ವಿಷಯ ಹೇಳಿದ್ದೆ ಕಳೆದ ಸಂಚಿಕೆಯಲ್ಲಿ. ಎಸ್ ಎಸ್ ಎಲ್ ಸಿ ತೆರ್ಗಡೆಯಾದ ತಕ್ಷಣವೇ ಇಂಗ್ಲೀಷ್ ಟೈಪಿಂಗ್ ಸೇರಿಕೊಂಡು ಪಿಯುಸಿ ಮುಗಿಯುವುದರ ಒಳಗೆ ನನ್ನ ಇಂಗ್ಲಿಷ್ ಸೀನಿಯರ್ ಬೆರಳಚ್ಚು ಪರೀಕ್ಷೆ ಮುಗಿದಿತ್ತು ಹಾಗಾಗಿ ಈಗಾಗಲೇ ಮೂರು ವರ್ಷಗಳು ಕಳೆದದ್ದರಿಂದ ಅದರ ಅಭ್ಯಾಸ ತಪ್ಪಿ ಹೋಗಿದ್ದರಿಂದ ಮತ್ತೆ ಟೈಪಿಂಗ್ ಇನ್ಸ್ಟಿಟ್ಯೂಟ್ ಗೆ ಸೇರಿ ಅಭ್ಯಾಸ ನಡೆಸುವುದು ಅನಿವಾರ್ಯವಾಗಿತ್ತು. ಹಾಗಾಗಿಯೇ ಮನೆಯ ಬಳಿಯೇ ಇದ್ದ ಈ ಮೊದಲು ಇಂಗ್ಲಿಷ್ ಬೆರಳಚ್ಚು ಪರೀಕ್ಷೆ ಪಾಸ್ ಮಾಡಿದ್ದ ಸಂಸ್ಥೆಗೆ ಸೇರಿ 15 ದಿನಗಳ ಕಾಲಕ್ಕೆ ಹಣ ತುಂಬಿ ಒಂದು ಗಂಟೆಯ ಕಾಲ ಅಭ್ಯಾಸಕ್ಕೆ ಹೋಗುತ್ತಿದ್ದೆ.

ಬೆರಳಚ್ಚು ಪರೀಕ್ಷೆಗೆ ಪತ್ರ ಬಂದಿತ್ತು ಒಂದು ಭಾನುವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ವಿಭಾಗಿಯ ಕಚೇರಿ ಟೌನ್ ಹಾಲ್ ಬಳಿ ಇದೆ ಅಲ್ಲಿಗೆ ಬರುವಂತೆ ಆದೇಶ ಬಂದಿತ್ತು. ಈ ಬಾರಿಯೂ ಶಶಿ ಮತ್ತು ನಾನು ಇಬ್ಬರೇ ಹೋಗುವುದೆಂದು ತೀರ್ಮಾನ ಆಯಿತು ಅಂತೆಯೇ ಬೆಳಿಗ್ಗೆ ಹೊರಟು ಪರೀಕ್ಷೆ ನಡೆಯುವ ಕಚೇರಿಗೆ ಬಂದೆವು. ನನ್ನ ದುರದೃಷ್ಟ. ಅಂದೇ ಬೆಳಿಗ್ಗೆ ನನ್ನ ಮಾಸಿಕ ಪೀರಿಯಡ್ ಆರಂಭವಾಗಿ ಸಿಕ್ಕಾಪಟ್ಟೆ ಹೊಟ್ಟೆ ನೋವು ಕಾಲು ಸೆಳೆತ. ಪರೀಕ್ಷೆ ಆರಂಭವಾಗುವ ವೇಳೆಗೆ ಸಣ್ಣಗೆ ಜ್ವರ ಬೇರೆ. ಈ ಎಲ್ಲದರ ಮಧ್ಯೆ ಪರೀಕ್ಷೆ ಮುಗಿಸಿದ್ದೇ ಒಂದು ದೊಡ್ಡ ಸಾಹಸ. ಮನೆಗೆ ಮರಳಿ ಬಂದ ಮೇಲೆ ೧ ವಾರ ಜ್ವರದಲ್ಲಿ ನರಳಿದ್ದೆ.
ಶಶಿಗೂ ನನ್ನ ಕಷ್ಟ ನೋಡಿ ಸರಿಯಾಗಿ ಟೈಪ್ ಮಾಡಲಾಗಲಿಲ್ಲ ಅನ್ನಿಸತ್ತೆ. ಅಂತೂ ಇಬ್ಬರೂ ಪಾಸಾಗಲಿಲ್ಲ.

ನಂತರ ಅಸಿಸ್ಟೆಂಟ್ ಹುದ್ದೆಯ ಸಂದರ್ಶನಕ್ಕೆ ಕರೆ ಬಂದಿತು. ಡಿಸೆಂಬರ್ ೯ ರ ಸೋಮವಾರ . ಸ್ಥಳ ಬೆಂಗಳೂರು ವಿಭಾಗೀಯ ಕಛೇರಿ. ಪತ್ರ ತಲಪುವ ಮುನ್ನವೇ ಕಾರ್ಮಿಕ ಸಂಘದವರು ಮನೆಗೆ ಬಂದು ವಿಷಯ ತಿಳಿಸಿ ಸಾಮಾನ್ಯಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ತಯಾರಿ ನಡೆಸಿ ಎಂದು ಹೇಳಿ ಸಂದರ್ಶನದ ಬಗ್ಗೆ ಒಂದು ದಿನ ತರಬೇತಿ ಇರುತ್ತದೆ ಎಂದು ಹೇಳಿ ಹೋದರು. ಆದರೆ ನಾನು ಅದಕ್ಕೆ ಹೋಗಲಿಲ್ಲ. ಶಶಿಯೂ ಇದಕ್ಕೆ ಬರುವ ಹಾಗಿಲ್ಲ. ಒಬ್ಬಳೇ ಹೋಗಲು ಔದಾಸೀನ್ಯ.

ತಯಾರಿ ಅಂತ ಏನೂ ಮಾಡಿಕೊಳ್ಳಲಿಲ್ಲ.‌ಅಣ್ಣನೇ (ನಮ್ಮ ತಂದೆ) ಕರೆದು ಕೊಂಡು ಹೋಗುತ್ತೇನೆ ಅಂದರು. ಆ ಸಮಯದಲ್ಲಿ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿತ್ತು. ಭಾನುವಾರ ಎರಡನೆಯ ದಿನ. ಮೊದಲ ದಿನ ಮಾತ್ರ ಅಲ್ಲಿಗೆ ಹೋಗಿ ಬಂದರು ಇನ್ನೆರಡು ದಿನ ಹೋಗಲಿಲ್ಲ ಎನ್ನುವ ಬೇಸರ ಅಣ್ಣನಿಗೆ ಇತ್ತು ಆದರೆ ನನ್ನನ್ನು ತಾವೇ ಕರೆದುಕೊಂಡು ಹೋಗಬೇಕು ಎನ್ನುವ ಇಷ್ಟವೂ ಇತ್ತು .
ಕಡೆಗೆ ಅದೇ ಗೆದ್ದಿತು.

ಸಾಮಾನ್ಯ ಜ್ಞಾನ ಪರೀಕ್ಷೆಗಳ ಪ್ರಶಸ್ತಿ ಪತ್ರಗಳು ರಾಮಾಯಣ ಮಹಾಭಾರತ ಪರೀಕ್ಷೆಗಳ ಅಂಕಪಟ್ಟಿಗಳು ಇವೆಲ್ಲವೂ ಒಂದು ಫೈಲ್ ನಲ್ಲಿ ಸಿದ್ಧಪಡಿಸಿ ತೆಗೆದುಕೊಂಡು ಹೋಗಲು ಸಿದ್ಧವಾಯಿತು ಅಂಕಪಟ್ಟಿಗಳು ತರಲು ಹೇಳಿರಲಿಲ್ಲ. ಆಗಲೇ ಕಾಲೇಜಿನ ಪತ್ರಿಕೆಯಲ್ಲಿ ನನ್ನ ಕಥೆ ಕವನಗಳು ಪ್ರಕಟವಾಗಿದ್ದರಿಂದ ಕಳೆದೆರಡು ವರ್ಷದ ಕಾಲೇಜ್ ಮ್ಯಾಗ್ಜಿನ್ ಗಳು ಸಹ ಫೈಲಿನಲ್ಲಿ ಸೇರಿಕೊಂಡವು.

ನಮ್ಮ ದೊಡ್ಡಮ್ಮನ ಮನೆ ನಗರ್ತ ಪೇಟೆಯಲ್ಲಿ ಇದ್ದುದರಿಂದ ಅದು ವಿಬಾಗಿಯ ಕಚೇರಿಗೆ ಬಹಳ ಸಮೀಪವು ಆದುದರಿಂದ ದೊಡ್ಡಮ್ಮನ ಮನೆಗೆ ಹೋದೆವು ಅಲ್ಲಿ ನನ್ನ ಕಸಿನ್ಸ್ ಇಬ್ಬರೂ ಈಗಾಗಲೇ ಕೆಲಸದಲ್ಲಿ ಇದ್ದಿದ್ದರಿಂದ ಸಂದರ್ಶನದಲ್ಲಿ ಏನು ಕೇಳಬಹುದು ಹೇಗೆ ಉತ್ತರಿಸಬೇಕು ಎನ್ನುವುದರ ಬಗ್ಗೆ ಒಂದಷ್ಟು ಮಾರ್ಗದರ್ಶನ ಕೊಟ್ಟರು. ಅವೆಲ್ಲ ಕೇಳಿ ಮನಸ್ಸಿನಲ್ಲಿನ ಭಯ ಮತ್ತಷ್ಟು ಹೆಚ್ಚಾಯಿತು.

ಕಸಿನ್ ವಾಣಿ ಹೇಳಿದಂತೆಯೇ ಸೀರೆ ಉಟ್ಟು ಸಂದರ್ಶನಕ್ಕೆ ಹೋಗುವುದು ಎಂದು ನಿರ್ಧಾರ ಮಾಡಿ ಆಯಿತು. ಅದಕ್ಕೆಂದೇ ತೆಗೆದುಕೊಂಡು ಹೋಗಿದ್ದ ನನ್ನ ಸೀರೆಯನ್ನು ವಾಣಿ ಸಹ ಅಂಗೀಕರಿಸಿ ಆಯಿತು. ಆದರೆ ಅವಳು ಹೇಳಿದ ಹಾಗೆ ಯಾವುದೇ ಮೇಕಪ್ ಸಾಮಗ್ರಿಗಳನ್ನು ಉಪಯೋಗಿಸಲು ಒಪ್ಪದೇ ನನ್ನ ಮಾಮೂಲಿನ ಗೆಟಪ್ನಲ್ಲೇ ಹೊರಟಿದ್ದು.

ಇದೇ ಮೊಟ್ಟ ಮೊದಲ ಸಂದರ್ಶನ ನಾನು ಎದುರಿಸಿದ್ದು. ಸಹಜವಾಗಿಯೇ ಒಂದು ರೀತಿಯ ಪುಕಪುಕ ಎದೆಯಲ್ಲಿ. ಹೇಗೆ ಎದುರಿಸುವುದು ಎನ್ನುವ ಆತಂಕವು ಮನದಲ್ಲಿ.

ನನಗೆ ಕೊಟ್ಟಿದ್ದ ಸಮಯ ಒಂದು ಗಂಟೆ ಎಂದು ಆದರೂ 11 ಗಂಟೆಗೆ ಮನೆ ಬಿಟ್ಟು ಹತ್ತು ನಿಮಿಷದಲ್ಲಿ ವಿಭಾಗಿಯ ಕಚೇರಿ ಸೇರಿದೆವು. ಅಲ್ಲಿ ಮೂರನೆಯ ಮಹಡಿಯಲ್ಲಿ ಸಿಬ್ಬಂದಿ ವಿಭಾಗದ ಸಂದರ್ಶನ ಇದ್ದಿದ್ದು. ಆ ವೇಳೆಗಾಗಲೇ 30 40 ಜನ ಅಲ್ಲಿ ಸೇರಿದ್ದರು. ಅಲ್ಲಿ ಕುಳಿತಿದ್ದ ಒಬ್ಬ ಮಹಿಳಾ ಸಿಬ್ಬಂದಿಯ ಬಳಿ ಹೋಗಿ ಬಂದಿದ್ದ ಪತ್ರ ತೋರಿಸಿದಾಗ ಕುಳಿತುಕೊಳ್ಳಲು ಹೇಳಿ ನಿಮ್ಮ ಹೆಸರು ಕರೆದಾಗ ಒಳಗೆ ಹೋಗಿ ಎಂದು ಹೇಳಿದರು. ಕುಳಿತು ಸುತ್ತಲಿನವರನ್ನು ಗಮನಿಸತೊಡಗಿದೆ.

ಒಳ್ಳೆ ಪರೀಕ್ಷೆಗೆ ಓದಿಕೊಳ್ಳುವವರಂತೆ ಸಿದ್ಧಪಡಿಸಿ ಇಟ್ಟುಕೊಂಡಿದ್ದ ಅಂಶಗಳನ್ನು ನೋಡಿಕೊಳ್ಳುತ್ತಿದ್ದವರು ಕೆಲವರು. ಬಹಳ ಸುಂದರವಾಗಿ ಸಿಂಗರಿಸಿಕೊಂಡು ಚೂಡಿದಾರ್, ಪ್ಯಾಂಟ್ ಧರಿಸಿ ಬಂದವರು ಕೆಲವರು ಮದುವೆ ಮನೆಗೆ ಬಂದಂತೆ ಒಳ್ಳೆಯ ಸೀರೆ ಒಡವೆ ಧರಿಸಿ ಬಂದವರು ಕೆಲವರು ಇವರೆಲ್ಲರ ಮಧ್ಯೆ ನಾನು ಏಕೋ ತುಂಬಾ ಸಪ್ಪೆ ಸಪ್ಪೆ ಡಲ್ ಅನಿಸತೊಡಗಿತು.‌ ಆ ಸಮಯದಲ್ಲಿ ನನಗೆ ಮೊದಲೇ ನನ್ನ ರೂಪದ ಬಗ್ಗೆ ಕೀಳರಿಮೆ ಬೇರೆ ಇದ್ದುದರಿಂದ ಇನ್ನಷ್ಟು ಒಳಗೊಳಗೆ ಕುಸಿಯತೊಡಗಿದ್ದೆ ಅನ್ನಿಸುತ್ತೆ.

ಮತ್ತೆ ಸಂದರ್ಶನ ಮುಗಿಸಿ ಹೊರಗೆ ಬಂದವರನ್ನು ಮಿಕ್ಕ ಎಲ್ಲರೂ ಮುತ್ತಿಕೊಂಡು ಏನು ಕೇಳಿದರು ಒಳಗಡೆ ವಾತಾವರಣ ಹೇಗಿರುತ್ತದೆ ಸಂದರ್ಶನ ಕಾರರು ಸ್ನೇಹ ಮಯ ವ್ಯಕ್ತಿತ್ವ ಹೊಂದಿದ್ದಾರಾ ಎಂದೆಲ್ಲವನ್ನು ಕೇಳತೊಡಗುತ್ತಿದ್ದರು. ಕೆಲವರು ತುಂಬಾ ಚೆನ್ನಾಗಿ ನಡೆಯಿತು ಸಂದರ್ಶನ ಎಂದು ತಾವು ಹೇಗೆ ಉತ್ತರಿಸಿದೆವು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನ್ನು ಕಂಡಾಗಲಂತೂ ನನ್ನ ಆತಂಕ ಮತ್ತಷ್ಟು ಹೆಚ್ಚಾಗುತ್ತಿತ್ತು.

ಅಷ್ಟರಲ್ಲಿ ನನ್ನ ಕಾಲೇಜಿನ ಸೀನಿಯರ್ ವಿದ್ಯಾರ್ಥಿನಿ ಒಬ್ಬರು ಸಹ ಸಂದರ್ಶನಕ್ಕೆ ಬಂದಿದ್ದರು ನನಗಿಂತ ಮೊದಲೇ ಅವರ ಸಂದರ್ಶನ ಇತ್ತು. ಉಭಯ ಕುಶಲೋಪರಿ ಮುಗಿದ ನಂತರ ನನ್ನ ಫೈಲ್ ನಲ್ಲಿ ಕಾಲೇಜ್ ಮ್ಯಾಗಜೈನ್ ಕಂಡು ನನ್ನದು ಒಂದು ಆರ್ಟಿಕಲ್ ಇದೆ ಅದರಲ್ಲಿ ನಾನು ತಂದಿಲ್ಲ ತೋರಿಸಿ ತಂದುಕೊಡುತ್ತೇನೆ ಕೊಡು ಎಂದು ತೆಗೆದುಕೊಂಡು ಹೋದರು.

ಅವರು ಸಹ ಸಂದರ್ಶನ ಮುಗಿಸಿ ಬಂದು ತುಂಬಾ ಚೆನ್ನಾಗಿ ಆಯಿತು ನೀನು ಇದನ್ನು ಕೊಟ್ಟಿದ್ದು ಉಪಯೋಗವಾಯಿತು ಎಂದು ಹೇಳಿ ಧನ್ಯವಾದ ತಿಳಿಸಿ ಹೋದಾಗ ನನ್ನಿಂದ ಒಬ್ಬರಿಗೆ ಸಹಾಯ ಆಯ್ತಲ್ಲ ಎನಿಸಿ ಒಂದು ರೀತಿಯ ಖುಷಿ ಉಂಟಾಯಿತು.

ನನ್ನ ಹೆಸರು ಕರೆಯಲ್ಪಡುವುದನ್ನೇ ಕಾಯುತ್ತಾ ಹಾಗೆ ಕುಳಿತಿದ್ದಾಗ ಕಾಲ ತುಂಬಾ ನಿಧಾನವಾಗಿ ಸರಿಯುತ್ತಿದೆ ಏನೋ ಎಂದೆನಿಸಿತು.

ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿತು ಸುಜಾತ ಎಂಬ ಕರೆ ಕೇಳಿಸಿದಾಗ ನನ್ನ ಫೈಲ್ಗಳನ್ನು      ಒಳಗೆ ಹೊರಡಲು ತಯಾರಾದೆ.

ಇನ್ನೂ ಇದೆ.

ಮುಂದಿನವಾರ
ಸಂದರ್ಶನ ಮತ್ತು ಫಲಿತಾಂಶ.


15 thoughts on “

  1. ಸೂಕ್ತ ಚಿತ್ರಗಳೊಂದಿಗೆ ಪ್ರಕಟಿಸಿ ನಿರಂತರ ಪ್ರೋತ್ಸಾಹ ನೀಡುತ್ತಿರುವ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

  2. ಉತ್ತಮ ನಿರೂಪಣೆ.

    ನಡೆದು ಬಂದ ದಾರಿಯನ್ನು ಮರೆಯಬಾರದು

  3. ನಿರಂತರ ಪಯಣ ಮತ್ತು ಅದರ ಅನುಭವ ಸದಾ ಸ್ನುಹಿ.ಹಾಗಾಗಿ ಕಣ್ಮುಂದೆ ಈಗ ವರ್ತಮಾನದಲ್ಲಿ ಈ ಘಟನೆಗಳು ನಡೆಯುತ್ತಿವೆ ಎನ್ನಿಸುವಷ್ಟು ಚೇತೋಹಾರಿ. ಭೂತಕಾಲದ ಸಂಗತಿಗಳನ್ನು ಈ ಪ್ರಸ್ತುತತೆಯ ನಿಕಷದಲ್ಲಿ ಇರಿಸಿ, ಓದುಗರಿಗೆ ಕೊಡಮಾಡುತ್ತಿರುವ ಈ ಹದನು ಹೀಗೇ ಸಂತತವಾಗಲಿ.ನವಿರಾದ ನಿಸೂರ ಬರೆವಣಿಗೆಯ ಚೆಂದ ಕಾಣುತ್ತದೆ. ಹಿಂದಿನ ನೆನಪಿಗೆ ಇಂದಿನ ನವಿಲು ನಲಿವಾಗಿ ಗರಿ ಬಿಚ್ಚಿ ಕುಣಿಯುವ ಲಾಸ್ಯ ಆಮೋದ ಉಂಟು ಮಾಡುತ್ತಿದೆ.ಇದು ಸಶೇಷವಾಗಲಿ.-ಸುಜಾತ ಮೇಡಂ.

    1. ಧನ್ಯವಾದಗಳು. ಶ್ರೀನಿವಾಸ ಪ್ರಸಾದ್. ನಿಮ್ಮ ಸವಿಸ್ಪಂದನೆ ಬರೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ತುಂಬಾ‌ ಚೇತೋಹಾರಿ.ನಿಮ್ಮ ಪ್ರತಿಕ್ರಿಯೆ ಓದಲು ಬಹಳ ಖುಷಿ ನೀಡುತ್ತದೆ.

      ಸುಜಾತಾ ರವೀಶ್

    2. ಅನುಭವ ಕಥನ ಉತ್ತಮವಾಗಿ ಮೂಡಿ ಬಂದಿದೆ. ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿದೆ. ಮುಂದಿನ ಭಾಗವನ್ನು ಸಹ ಮರೆಯದೆ ಕಳುಹಿಸಿ. ತುಂಬಾ ಕುತೂಹಲ ಮೂಡಿಸಿದೆ.

      1. ಧನ್ಯವಾದಗಳು. ಖಂಡಿತ ಮುಂದಿನ ಭಾಗಗಳಲ್ಲಿ ಹಾಕುವೆ

        ಸುಜಾತಾ ರವೀಶ್

  4. ಸೊಗಸಾಗಿ ಮೂಡಿ ಬಂದಿದೆ. ಈ ಲೇಖನ ಓದಿ ನನ್ನ ಸಂದರ್ಶನ ನೆನಪಾಯಿತು. ಹೆದರಿದ್ದು ನೆನದರೆ ಈಗ ನಗು ಬರುತ್ತದೆ.

    1. ನಿಜ. ಕಾಲದ ಪಯಣದಲ್ಲಿ ಒಂದು ಕಾಲಘಟ್ಟದಲ್ಲಿ ಹೀಗಿದ್ದೆವಾ ಎಂದು ಈಗ ನೋಡಿದಾಗ ಅನ್ನಿಸುತ್ತೆ.
      ಧನ್ಯವಾದಗಳು.

      ಸುಜಾತಾ ರವೀಶ್

  5. ತುಂಬಾ ಸೊಗಸಾಗಿ ಮೂಡಿಬಂದಿದೆ.ನಿಮ್ಮ ಜ್ಞಾನಪಕ ಶಕ್ತಿಗೆ ಧನ್ಯವಾದಗಳು

  6. ಮೊದಮೊದಲು ಇಂಥ ಅನುಭವಗಳು ಭಯ ಹುಟ್ಟಿಸುವುದು ಸಹಜ, ನಮ್ಮ ಮೊಟ್ಟ ಮೊದಲ ಸಂದರ್ಶನಗಳೂ ಹೀಗೆ ಇದ್ದವು

Leave a Reply

Back To Top