ನಾ ಬರೆದ ಮೊದಲ ಕವನ

ಮೊದಲ ಕವಿತೆಯ ರೋಮಾಂಚನ

Karnavati: Real life canvas of rural Rajasthan in Bengali play

ಸಾಹಿತ್ಯದ ಕಡೆಗೆ ನನ್ನ ಒಲವು ಚಿಕ್ಕವಳಿರುವಾಗಿಂದಲೇ ಇದೆ. ಅಂದರೆ ಕಥೆ, ಕಾದಂಬರಿ ಓದುವುದು. ಕವನ ಬರೆಯುವುದಿರಲಿ ಓದುವದೂ ನನ್ನ ಅಳವಲ್ಲವೆಂದುಕೊಂಡವಳು ನಾನು. ಅಂತಹ ದರಲ್ಲಿ ಈಗ ನಾನು ಪ್ರಕಟಿಸಿದ ಎಂಟು ಕೃತಿಗಳಲ್ಲಿ, ಐದು ಕವನ ಸಂಕಲನಗಳು. ನನಗೇ ಆಶ್ಚರ್ಯವಾಗುತ್ತದೆ! ಗದ್ಯ ಓದುತ್ತಿರುವಾಗ ಸಾಮಾಜಿಕ, ಐತಿಹಾಸಿಕ,ಪತ್ತೇದಾರಿ ಕಾದಂಬರಿ, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಭಂದ ಇತ್ಯಾದಿ ನನ್ನ ಓದಿನ ಪರಿಮಿತಿಯಲ್ಲಿ ಇರುತ್ತಿತ್ತು. ಸ್ನೇಹಿತರು ಕವನ ಓದಲು ಪುಸಲಾಯಿಸಿದರು. ಉಹುಂ, ಕಣ್ಣೆತ್ತಿ ನೋಡಿರಲಿಲ್ಲ. ಆದರೆ ನಿವೃತ್ತಿ ಹೊಂದಿದ ಮೇಲೆ ಬರೆಯಲು ಪ್ರಾರಂಭಿಸಿದಾಗ ಮೊದಲು ಬರೆದದ್ದು ಕವನವೇ. ಅದಕ್ಕೊಂದು ಸ್ವಾರಸ್ಯಕರ ಘಟನೆಯಿದೆ.

ನಾನೊಂದು ಮಹಿಳಾಮಂಡಳದ ಸದಸ್ಯೆ. ಮಂಡಳದ ವಾರ್ಷಿಕೋತ್ಸವದ ಅಂಗವಾಗಿ ಸದಸ್ಯೆಯರು ಒಂದು ನಾಟಕ ಆಡಬೇಕೆಂದು ನಿರ್ಧರಿಸಲಾಗಿತ್ತು. ಒಬ್ಬ ಸದಸ್ಯೆ ನಾಟಕ ಬರೆದಿದ್ದರೆ, ಉಳಿದವರು ಪಾತ್ರಧಾರಿಗಳು. ನನಗೂ ಒಂದು ಪಾತ್ರವಿತ್ತು ಅದರಲ್ಲಿ. ಸಾಮಾಜಿಕ ನಾಟಕದ ಹೆಸರು ‘ಆಯುಷ್ಯಕ್ಕೆ ಒಂದಿಷ್ಟು ರೇಶನ್’. ನಾಟಕದ ರಿಹರ್ಸಲ್ ಸುರುವಾದಮೇಲೆ ಡೈರೆಕ್ಟರ್ ಹೇಳಿದರು – ಇದಕ್ಕೆ ಒಂದು ಟೈಟಲ್ ಸಾಂಗ್ ಇದ್ದರೆ ಚೆನ್ನಾಗಿತ್ತು ಅಂತ. ಒಂದೆರಡು ದಿವಸ ಅದಕ್ಕೆ ವ್ಯವಸ್ಥೆ ಆಗಲಿಲ್ಲ. ನಾನೇ ಯಾಕೆ ಬರೆಯಬಾರದು? ಅನ್ನಿಸಿತು. ಸರಿ ಮುಂದೆ ಎರಡು ದಿನದಲ್ಲಿ ಒಂದು ಕವನ ತಯಾರಾಯಿತು, ಆಯುಷ್ಯ ಬೇಕೇ ಆಯುಷ್ಯ ಶೀರ್ಷಿಕೆ ಇಟ್ಟುಕೊಂಡು. ಪ್ರಾಸಬದ್ಧವಾಗಿಯೇ ಬರೆದಿದ್ದೆ.  ಗೆಳತಿ (ಡೈರೆಕ್ಟರ್) ಗೆ ಒಯ್ದು ತೋರಿಸಿದೆ. ಆದರೆ ನಾನು ಬರೆದದ್ದು ಅಂತ ಮಾತ್ರ ಹೇಳಲಿಲ್ಲ. ನನ್ನ ಬಗ್ಗೆ ನನಗೇ ವಿಶ್ವಾಸವಿರಲಿಲ್ಲ. ನನ್ನ ಪತಿ ಮಹಾಶಯರಿಗೆ ನಾಟಕದ ಹುಚ್ಚಿತ್ತು. ಅಲ್ಲದೆ ಅಲ್ಪ ಸ್ವಲ್ಪ ಬರೆಯುವ ಅಭ್ಯಾಸವಿತ್ತು. ಹೀಗಾಗಿ, ನಾನು ಬರೆದ ಕವನವನ್ನು ಅವರು ಬರೆದು ಕೊಟ್ಟಿರುವರು ಎಂದು ಹೇಳಿಬಿಟ್ಟೆ. ಗೆಳತಿಗೆ ಒಪ್ಪಿಗೆಯಾಯಿತು. ಧಾಟಿ ಹಚ್ಚಿ ಹಾಡಿ, ನೋಡಿ, ಪಾಸ ಮಾಡಿಬಿಟ್ಟರು. ವಾರ್ಷಿಕೋತ್ಸವ ಆಚರಣೆಯಲ್ಲಿ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಇದಾದಮೇಲೆ ಯಾರಿಗಾದರೂ ಇದನ್ನು ತಿಳಿಸಿ ನನ್ನ ಸಂತೋಷ ಹಂಚಿಕೊಳ್ಳಬೇಕೆಂದು ತುಡಿಯುತ್ತಿದ್ದೆ. ನನ್ನ ಗಂಡನಿಗೆ ಬಿಟ್ಟರೆ ಯಾರಿಗೂ ವಿಷಯ ತಿಳಿದಿರಲಿಲ್ಲ. ನನಗೆ ಬರೆಯುವ ಹುಮ್ಮಸ್ಸು, ವಿಶ್ವಾಸ ಉಕ್ಕೇರತೊಡಗಿತು. ತಲೆಯಲ್ಲಿರುವ ಕೆಲವು ವಿಚಾರಗಳಿಗೆ ಮನಸ್ಸಿನ ಭಾವನೆಗಳ ಪ್ರನಾಳಿಯಲ್ಲಿ ಹಾಕಿ ಮತ್ತೆರಡು ಕವನ ಬರೆದೆ. ನನ್ನಮ್ಮನಿಗೆ ನುಡಿನಮನ ಮತ್ತು ಮಹಿಳೆಯ ಶೋಷಣೆಯ ಬಗೆಗೆ. ನಾನೂ ಬರೆಯಬಹುದೆನ್ನಿಸಿತು. ಅಲ್ಲಿಂದ ಪ್ರಾರಂಭವಾದ ಕವನ ಯಾನ, ಐದು ವರ್ಷಗಳಲ್ಲಿ ೩೫೦ ಕವನ ಗಳನ್ನೊಳಗೊಂಡ ಐದು ಕೃತಿಗಳು ಹೊರಬಂದವು. ಮೊದಲ ಸಂಕಲನಕ್ಕೆ ಪ್ರಶಸ್ತಿ ಲಭಿಸಿತು. ಮತ್ತೆ ಹಲವಾರು ಕವನಗಳು ಬಹುಮಾನಕ್ಕೆ ಪಾತ್ರವಾದವು.

ಮೊದಲು ಬರೆದ ಕವನ ಬಹಳ ಕಚ್ಚಾ ಇದೆ. ಈಗ ನನಗೆ ಗೊತ್ತಾಗುತ್ತದೆ. ಆದರೆ ಅದು ನನ್ನ ಮೊದಲ ಮಗು ಇದ್ದಂತೆ. ಅಪಾರ ಪ್ರೀತಿಗೆ ಪಾತ್ರವಾಗಿದೆ.

**********************

3 thoughts on “ನಾ ಬರೆದ ಮೊದಲ ಕವನ

  1. ಬಹಳ ಚೆನ್ನಾಗಿದೆ ಲೇಖನ. ನಿಮ್ಮ ಹಿರಿತನದ ಅನುಭವ ಕಿರಿಯರಿಗೆ ದಾರಿತೋರಲಿ.

Leave a Reply

Back To Top