ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅನುರಾಗದ ಬಾಗಿಲು ತೆರೆದಿದ್ದೆ ನಾ ಧ್ಯಾನಸ್ಥನಾಗಿದ್ದ ಅವನು
ಎದೆಯಲಿ ಮೂತಿ೯ ಇಟ್ಟು ಕುಳಿತಿದ್ದೆ ನಾ ಅಲೆಮಾರಿಯಾಗಿದ್ದ ಅವನು

ಮೋಹವ ತೊರೆದು ದೂರಾಗಿ ಕನಸಲಿ ನಿತ್ಯ ಕಾಡಿದವನು
ವಿರಹ ದಾಹ ತಣಿಯಲು ಅಪ್ಪಲು ಬಯಸಿದ್ದೆ ನಾ ಮಾಯವಾಗಿದ್ದ ಅವನು

ತ್ರಿಲೋಕ ಸುಂದರಿ ಎಂಬ ಅಹಂದಲಿ ಜಗವ ಗೆಲ್ಲಲು ಹೋದೆ ನಾ
ಗೆಜ್ಜೆ ಕಟ್ಟಿ ಮೋಹಿನಿಯಾಗಿ ಕುಣಿಯುತ್ತಿದ್ದೆ ನಾ  ನಿರಾಕಾರನಾಗಿದ್ದ ಅವನು

ಸಪ್ತ ಪದಿಗಳ ತುಳಿದು ಸಂಸಾರಿಯಾಗಿ ಮಾಯೆಯ ಉಡುಗೆ ತೊಟ್ಟಿದ್ದೆ ನಾ
ಬದುಕಿನ ಸುಳಿಯಲಿ ಬಂಧಿಸಲು ಆಶಿಸಿದ್ದೆ ನಾ  ಜಂಗಮನಾಗಿದ್ದ ಅವನು

ಕಾಡು ಮೇಡಲಿ ಸ್ವಚ್ಛಂದವಾಗಿ ತಿರುಗುತ್ತಾ ಸಂತಸದಲಿದ್ದೆ ನಾ
 ನಶೆಯಲಿ ಸೋಮಾರಿಯಾಗಿದ್ದೆ ನಾ ಕಾಯಕ ಯೋಗಿಯಾಗಿದ್ದ ಅವನು

ಚೆಲುವ ಮಾಯೆಯಾಗಿ ನತಿ೯ಸುತಾ ಎಲ್ಲರನು ಮರುಳುಮಾಡಿದ್ದೆ ನಾ
ವಿರಾಗಿಣಿ ಯಾಗಿ ಜಗದ ಬಂಧನ ಕಳಿಚಿದ್ದೆ ನಾ ಅಲ್ಲಮಪ್ರಭುವಾಗಿದ್ದ ಅವನು

ಮೌಢ್ಯದ ಕಡಲಲಿ ಜಾರಿ ಮೇಲೇಳಲಾಗದೆ ಚಡಪಡಿಸುತ್ತಿದ್ದೆ ನಾ
ಅಂಧಕಾರ ಹೊದ್ದು ಮಲಗಿದ್ದೆ ನಾ ಅರುವಿನ ಜ್ಞಾನ ಪ್ರಭೆಯಾಗಿದ್ದ ಅವನು
ಪ್ರಭಾವತಿ ಎಸ್ ದೇಸಾಯಿ

About The Author

Leave a Reply

You cannot copy content of this page

Scroll to Top