ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

  ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು.

ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು.

ಈ ನಾಯಕರಿಗೆ  ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು.

ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ,
 ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು.
 ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .
ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.
*ಕನ್ನಡ ಮಕ್ಕಳು ಕನವರಿಸಿ ಕರೆದಾಗ
ಇನ್ನಾವ ನೆವ ಹೇಳದೆ ನನ ಮನ
ತನ್ನಿಂದ ತಾನೇ ಎಳದಿತ್ತ*

ಎಂದೆನ್ನುತ ಜಯದೇವಿತಾಯಿ ಅವರು
ಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ.

ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು  ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ.

 ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು  ವ್ಯಕ್ತಪಡಿಸುತ್ತವೆ.

ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು.

 ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.
ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು  ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.
ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು.

ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.

ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿ
ಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ||

 ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ  ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ.

ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು
 ಮೊಸರು ಕಡಿತ ಸಿಗಲಿಲ್ಲ -ರೈತಣ್ಣ
ಉಸ್ಸೆಂದಾನ ತನ್ನ ಬಾಳೇಕ||

ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ.

ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ.  ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.
ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು.
  ಜಯದೇವಿ ತಾಯಿಯವರು  ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ.


About The Author

Leave a Reply

You cannot copy content of this page

Scroll to Top