ಕಾವ್ಯ ಸಂಗಾತಿ
ಟಿ.ಪಿ.ಉಮೇಶ್ ಚಿತ್ರದುರ್ಗ
“ಪ್ರೀತಿಯ ಬಾಹುಗಳು!ನದಿಗಳು”


ತಮ್ಮ ಹರಿವಿನ ದಾರಿಯಲ್ಲಿ ಸಿಕ್ಕ
ಪ್ರತಿಯೊಂದರ ದಾಹವನ್ನೂ ತಣಿಸುತ್ತಾ
ಪ್ರತಿ ತೀರವನ್ನೂ ಸ್ಪರ್ಶಿಸುತ್ತಾ
ಮುಂದೆ ಸಾಗುವವು ನದಿಗಳು!
ತಮ್ಮ ನೀರ ತುಳಿದು ಆಡಿದವರ
ಕುಡಿದು ಉಗಿದವರ
ತೆಗೆದುಕೊಂಡು ಬಳಸಿಕೊಂಡವರ ಲೆಕ್ಕವಿಡುವುದಿಲ್ಲ!
ನಾವು ನದಿಗಳ ಆಳವನ್ನು ಅರಿಯದೆ
ಅವುಗಳ ಉದಾರತೆಯನ್ನೇ ಉದಾಸೀನ ಮಾಡಿ
ಮಮತೆಯನ್ನೇ ಮೈಲಿಗೆ ಮಾಡಿ
ದುರುಪಯೋಗಪಡಿಸಿಕೊಳ್ಳುತ್ತೇವೆ!
ಒಂದು ಕಾಲದಲ್ಲಿ
ಚೀರುತ್ತಾ ಹಾಡುತ್ತ ಹಾರುತ್ತ ಹರಿಯುತ್ತಿದ್ದ ನದಿ
ಒಳಗೊಳಗೇ ಕುಸಿಯುತ್ತಾ ಕುದಿಯುತ್ತಾ ಕರಗುತ್ತಾ
ಮೌನವಾಗಿಬಿಡುತ್ತದೆ!
ಅತ್ಯಂತ ದಯೆಯುಳ್ಳ ಹೃದಯಗಳಿಗು
ದಣಿವು ಆಗುತ್ತದೆ!
ಅದು ಅಸಹಾಯಕತೆ ಕೋಪದ
ನಿರ್ಬಲತೆ ನಿರಾಸೆಯ ದಣಿವಲ್ಲ!
ಯಾರನ್ನೂ ದ್ವೇಷಿಸದ ದಣಿವು!
ಯಾರನ್ನು ಬೇಸರಿಸದ ದಣಿವು!
ಯಾರನ್ನು ಹಚ್ಚಿಕೊಳ್ಳದ ದಣಿವು!
ಯಾರನ್ನು ಅಪ್ಪಿಕೊಳ್ಳದ ದಣಿವು!
ನದಿಗಳು
ಪ್ರೀತಿಯ ಬಾಹುಗಳು!
ಮಮತೆಯ ಮಡಿಲುಗಳು!
ಭೂಮಿಯ ಎದೆಯ ಮೇಲೆ
ಹರಿದ ಕರುಣೆಯ ರೇಖೆಗಳು!
ಬತ್ತಿದ ಕನಸುಗಳಿಗೆ ಜೀವ ತುಂಬುವ
ಅಮೃತದ ಉಸಿರುಗಳು!
ತಮ್ಮ ದಾಹ ಮರೆತು
ಇತರರ ಬದುಕು ಹಸಿರಾಗಿಸುವ
ನಿಸ್ವಾರ್ಥ ಆತ್ಮಗಳು!
ಟಿ.ಪಿ.ಉಮೇಶ್ ಚಿತ್ರದುರ್ಗ



