ಧಾರಾವಾಹಿ ಸಂಗಾತಿ24
ಸವಿತಾ ದೇಶಮುಖ

ಜಯದೇವಿ ತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನ ಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಮಹಾನ್ ಚೇತನ


*ಜಯದೇವಿ ತಾಯಿಯವರ ಸಮಾಜಮುಖಿ, ಸಾಹಿತ್ಯಿಕ ಹಾಗೂ ಭಕ್ತಿಮಯ ಬದುಕು*
ಜಯದೇವಿ ತಾಯಿಯವರ ವ್ಯಕ್ತಿತ್ವವು ಕೇವಲ ಕುಟುಂಬದ ಚೌಕಟ್ಟಿನೊಳಗೆ ಸೀಮಿತವಾಗಿರಲಿಲ್ಲ. ಸಂಸಾರದ ಹೊಣೆ ಹೊತ್ತು… ಸಿದ್ದರಾಮೇಶ್ವರರ ಶ್ರೇಷ್ಠ ಭಕ್ತಿಯಾಗಿ, ತ್ರಿಭಾಷಾ ಪಾಂಡಿತ್ಯವನ್ನು ಪಡೆದು ,ಕನ್ನಡ ಸರಸ್ವತ ಲೋಕದ ಕಣ್ಣಾಗಿ, ಕನ್ನಡಿಗರ ತಾಯಿಯಾಗಿ , ಶ್ರೇಷ್ಠ ಶಿವಶರಣಿಯಾಗಿ ಬದುಕಿ… ಜನಮನಗಳಲ್ಲಿ ಅಳಿಯದ ಛಾಪು ಮೂಡಿಸಿದ ಮುಂದಿನ ಬದುಕನ್ನು ನೋಡೋಣ ಬನ್ನಿ ……
*ಸವಿಧಾನ ಜೀವನ| ನೋವು ನಾವು
ಗೆಲಿದು ಪಾವನ ಬದುಕಿ -ನಂದನವ
ನಲಿದು ಬೇವು ಬೆಲ್ಲಾಗಿ ಸವಿದೇನ*||
ಎನ್ನುತ ಸಮಾಜದ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಜಯದೇವಿ ತಾಯಿಯವರು ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಡವರು, ನಿರ್ಗತಿಕರು, ಮಹಿಳೆಯರು ಹಾಗೂ ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಶಿಕ್ಷಣ ಮತ್ತು ಸಂಸ್ಕಾರಗಳು ಬೆಳೆಯಬೇಕು ಎಂಬ ಆಶಯದಿಂದ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ಜೀವನದ ಅನುಭವಗಳು, ಭಕ್ತಿ, ಸಾಮಾಜಿಕ ಚಿಂತನೆಗಳು ಮತ್ತು ಸ್ತ್ರೀ ಸಂವೇದನೆಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸಿದರು. ಅವರ ಬರಹಗಳು ಕೇವಲ ಓದಿಗಾಗಿ ಅಲ್ಲ, ಬದುಕಿಗೆ ದಾರಿದೀಪವಾಗುವಂತಿದ್ದವು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿಯು ಅನೇಕ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾಯಿತು.
*ಬರದೇನೆನ್ನುವ ಭಾವ| ಬರಿತಾಯ್ತೆನಗವ್ವ ಕರೆದೇನೆನ್ನುವ ಭಕುತಿ ಬಯಲಾಯ್ತ- ತಾಯವ್ವ
ಕೊರಗೇನೆಂಬುವ ಮನ ಮಾಯಾಯಿತು||*
ಎನ್ನುತ ಶ್ರೀ ಸಿದ್ದರಾಮೇಶ್ವರಲಿ ಅಪಾರ ಭಕ್ತಿಯ ಲೀನರಾಗಿದ್ದರು. ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ, ಸಮಾಜ ಸೇವೆಯೇ ನಿಜವಾದ ದೇವರ ಸೇವೆ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು
.*ಕೃಪೆ ಮಾಡಿ ಎನಗೆ | ಶ್ರೀಪಾದವ ತೋರಿದನು
ಉಪಮೀಸ ಬಾರದ ಸಂತಸ -ಗೊಳಿಸಿದ
ಆ ಪರಬ್ರಹ್ಮನಿಗೆ ಶರಣೆಂಬೆ||*
ಎನ್ನುವಂತೆ ಸಮಾಜ ಸೇವೆಯೇ ದೇವರ ಸೇವೆಯಂತೆ ಸ್ವೀಕರಿಸಿದರು.
ಸಿದ್ದರಾಮರ ಆದರ್ಶಗಳಾದ ದಾಸೋಹ, ಕಾಯಕ, ಸಮಾನತೆ ಮತ್ತು ಮಾನವ ಪ್ರೇಮವನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು.
ಈಗ ಒಂದೊಂದಾಗಿ ತಿಳಿದುಕೊಳ್ಳೋಣ. ಅವರ ಬದುಕಿನ ಅಧ್ಯಾಯಗಳು ನಿಸ್ವಾರ್ಥ ಸೇವೆ, ಆಧ್ಯಾತ್ಮಿಕತೆ ಮತ್ತು ಜನಪರ ಕಾಳಜಿಯ ಅಮೂಲ್ಯ ಕಥನಗಳಾಗಿವೆ.
ಆದರ್ಶ ಗೃಹಿಣಿ, ಸಮಾಜಸೇವಕಿ, ಸಾಹಿತಿ ಮತ್ತು ಶ್ರೇಷ್ಠ ಭಕ್ತೆಯಾಗಿ ಜಯದೇವಿ ತಾಯಿಯವರು ನಡೆಸಿದ ಬದುಕು ಬಹುಮುಖ ಸಾಧನೆಯ ಪ್ರತೀಕವಾಗಿದೆ.
*ಬಿಂಕಿನ ಮಾತಿಲ್ಲ ಕೊಂಕೀನ ನುಡಿಯಲ್ಲ
ಕಿಂಕರಳ ಕೂಗು ಕೇಳಿರಿ,- ಶರಣರ
ಲೆಂಖಿನ ನಾ ನೋಡಿ ನಂಬೀದ*
ಎನ್ನುತ ಕಿಂಕರರಲಿ ಕಿಂಕರಳಾಗಿ ಕನ್ನಡಾಂಬೆಯ ಸೇವೆಯಲ್ಲಿ ಜನಸೇವೆಯಲ್ಲಿ ತೊಡಗಿದರು.
೧೯೪೯ರಲ್ಲಿ ಕಲ್ಬುರ್ಗಿಯಲ್ಲಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ೩೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು* ಶ್ರೀ ಉತ್ತಂಗಿ ಚನ್ನಪ್ಪನವರು* ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ತಾಯಿಯವರು ಮಹಿಳಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದರು.
೧೯-೨-೧೯೫೦ ರಂದು ಸೊಲ್ಲಾಪುರದಲ್ಲಿ ೩೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು ಇಲ್ಲಿ ಶ್ರೀ ಎಂ ಆರ್ ಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಮಹಿಳಾಪರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಮುಂದೆ ೨೫-೧೨-೧೯೫೦ರಂದು ಮುಂಬೈಯಲ್ಲಿ ೩೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಇಲ್ಲಿ ರಾಷ್ಟ್ರಕವಿ* ಶ್ರೀ ಮಂಜೇಶ್ವರ ಗೋವಿಂದ ಪೈ *ಅವರು ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೂ ಕೂಡ ಮಹಿಳೆಯರ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದರು.
ಈ ಮೂರು ಸಮ್ಮೇಳನಗಳ ಮಹಿಳಾ ಗೋಷ್ಟಿಯಲ್ಲಿ ಜಯದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು.
ಜಯದೇವಿ ತಾಯಿಯವರ ಶಿಕ್ಷಣ ಕ್ರಾಂತಿ ಸೊಲ್ಲಾಪುರದ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ.
೧೯೪೯ನೇ ವರ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇನ್ನೂ ಕೆಲವು ವರ್ಷಗಳಷ್ಟೇ ಆಗಿದ್ದವು. ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ನಿರಕ್ಷರತೆ ವ್ಯಾಪಕವಾಗಿದ್ದ ಕಾಲ ಅದು. ವಿಶೇಷವಾಗಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಾಗೂ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಜೀವನೋಪಾಯಕ್ಕಾಗಿ ದಿನವಿಡೀ ದುಡಿಯಬೇಕಾಗಿದ್ದ ಕಾರಣ ಅವರಿಗೆ ಶಾಲೆಯ ಮುಖವೇ ಕಾಣುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಜಯದೇವಿ ತಾಯಿಯವರು ಸಮಾಜದ ತಳಮಳವನ್ನು ಕಂಡು “ಶಿಕ್ಷಣವೇ ಬದುಕಿನ ಬೆಳಕು” ಎಂಬ ದೃಢ ನಂಬಿಕೆಯೊಂದಿಗೆ ಅವರು ಒಂದು ಮಹತ್ತರ ಸಾಮಾಜಿಕ ಚಳವಳಿಗೆ ಚಾಲನೆ ನೀಡಿದರು…..
ಯಾವುದೇ ದೊಡ್ಡ ಕಟ್ಟಡವಿಲ್ಲ, ಸರ್ಕಾರದ ನೆರವಿಲ್ಲ. ಆದರೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಮತ್ತು ಮಾನವೀಯತೆ ಅವರಲ್ಲಿತ್ತು.
ತಮ್ಮ ಮನೆಯ ಆವರಣದಲ್ಲಿಯೇ ಒಂದು ಸಣ್ಣ ಶಾಲೆಯನ್ನು ಆರಂಭಿಸುವ ಮೂಲಕ ಅವರು ಶಿಕ್ಷಣ ಯಜ್ಞಕ್ಕೆ ನಾಂದಿ ಹಾಡಿದರು.
ಗಿರಣಿಯಲ್ಲಿ ದುಡಿಯುತ್ತಿದ್ದ ಸುಮಾರು ೩೦,೦೦೦ ಕಾರ್ಮಿಕರ ಕುಟುಂಬಗಳ ಮಕ್ಕಳು ಹಾಗೂ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕನಸನ್ನು ಕಂಡರು.
ಆರಂಭದಲ್ಲಿ ಕೆಲವು ಅಡೆತಡೆಗಳು ಬಂದರೂ ತಾಯಿಯವರ ಪ್ರೀತಿ, ತಾಳ್ಮೆ ಮತ್ತು ಸೇವಾ ಭಾವದಿಂದ ಆ ಪ್ರಯತ್ನ ಬೇಗನೆ ಜನಮನ ಗೆದ್ದಿತು.
ನಂತರ* ಕಾರ್ಮಿಕ ಸಾಕ್ಷರತಾ ಸಮಿತಿಯ* ಸಹಯೋಗದೊಂದಿಗೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು. ಮೊದಲಿಗೆ ೨೫ ಕೇಂದ್ರಗಳು ಆರಂಭವಾದವು. ಕೇಂದ್ರಗಳಲ್ಲಿ ಮಕ್ಕಳ ಜೊತೆಗೆ ಅಕ್ಷರಜ್ಞಾನವಿಲ್ಲದ ಕಾರ್ಮಿಕರಿಗೂ ಓದು-ಬರಹ ಕಲಿಸಲಾಗುತ್ತಿತ್ತು. ಶಿಕ್ಷಣವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಬೇಕು ಎಂಬುವದು ಅವರ ಉದ್ದೇಶವಾಗಿತ್ತು.
ತಾಯಿಯವರ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಈ ಚಳವಳಿ ದಿನದಿಂದ ದಿನಕ್ಕೆ ವಿಸ್ತರಿಸಿತು. ೨೫ ಕೇಂದ್ರಗಳಾಗಿದ್ದವು ಮುಂದೆ ೧೨೫ ಶಿಕ್ಷಣ ಕೇಂದ್ರಗಳಾಗಿ ಬೆಳೆದವು. ಸಾವಿರಾರು ಮಕ್ಕಳು ಮತ್ತು ವಯಸ್ಕರು ಈ ಕೇಂದ್ರಗಳ ಮೂಲಕ ಅಕ್ಷರಜ್ಞಾನ ಪಡೆದರು. ಶಿಕ್ಷಣದ ಬೆಳಕು ಮನೆಮನೆಗೂ ಹರಡಿತು.
ಈ ಕಾರ್ಯ ಶಾಲೆಗಳನ್ನು ಆರಂಭಿಸಿದ ಸಾಧನೆಯೊಂದಿಗೆ….*ಅದು ಸಮಾಜ ಪರಿವರ್ತನೆಯ ಚಳವಳಿಯಾಗಿತ್ತು. *
ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಹೊಸ ಭವಿಷ್ಯಕೆ ದಾರಿ ಮಾಡಿಕೊಟ್ಟರು ಬಡವರ ಮನೆಗಳಲ್ಲಿ ಆಶಾಕಿರಣ ಮೂಡಿಸಿದ ಪ್ರಯತ್ನವಾಗಿತ್ತು. ಅನೇಕ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿಸಿದ ಮಹಾನ ಸೇವೆಯಾಗಿತ್ತು.
ಆದ್ದರಿಂದಲೇ ಜಯದೇವಿ ತಾಯಿಯವರು ಕೈಗೊಂಡ ಶೈಕ್ಷಣಿಕ ಅಭಿಯಾನ ಸೊಲ್ಲಾಪುರದ ಶೈಕ್ಷಣಿಕ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿ ಗುರುತಿಸಲ್ಪಟ್ಟಿದೆ.
ಒಬ್ಬ ಮಹಿಳೆ ತನ್ನ ಮನೆಯ ಆವರಣದಲ್ಲಿ ಆರಂಭಿಸಿದ ಸಣ್ಣ ಶಿಕ್ಷಣ ಸೇವೆ ಮುಂದೆ ೧೨೫ ಕೇಂದ್ರಗಳ ಮಹಾ ಚಳವಳಿಯಾಗಿ ಬೆಳೆದು ಸಾವಿರಾರು ಜನರ ಬದುಕನ್ನು ಬೆಳಗಿಸಿತು ಎಂಬುದು ನಿಜಕ್ಕೂ ಅಪೂರ್ವ ಸಾಧನೆ.
ಜಯದೇವಿ ತಾಯಿಯವರ ಈ ಕಾರ್ಯ ನಮಗೆ ಶಿಕ್ಷಣದ ಮಹತ್ವವನ್ನು ಯಾವ ರೀತಿಯಲ್ಲಿ, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಇತಿಹಾಸವನ್ನೇ ಬದಲಾಯಿಸಬಲ್ಲದು ಎಂಬುದನ್ನೂ ಸಾರುತ್ತದೆ. ಅವರ ಜೀವನವು ಸೇವೆ, ತ್ಯಾಗ ಮತ್ತು ಶಿಕ್ಷಣದ ಮೂಲಕ ಸಮಾಜೋತ್ಥಾನ ಮಾಡಿದ ಆದರ್ಶದ ಪ್ರತೀಕವಾಗಿದೆ.
ಶಿಕ್ಷಣವು ಎಲ್ಲರಿಗೂ ಲಭಿಸಬೇಕು, ಸಮಾನತೆಯನ್ನು ಮೂಡಿಸಬೇಕು ಅನ್ನುವ ಉದ್ದೇಶ ಶಿಕ್ಷಣದ ತಳಹದಿಯಾಗಿರಬೇಕು ಅನ್ನುತ್ತಿದ್ದರು.
*ಜಗವು ಒಂದಾಗಲಿ |ನಗುತ ಕೈಗೂಡಿಸಿರಿ
ಬಗೆಯಲಿ ಅಣ್ಣತಮ್ಮರಂತೆ ಲೋಕದಿ
ಹಗೆ ಎಂಬ ಭಾವ ಅಳಿಯಲಿ||*
(ಮುಂದುವರೆಯುವುದು)
ಸವಿತಾ ದೇಶಮುಖ




