ಕಾದ್ರಿಯಾಕ ಮತ್ತು ನಾಡ ದೋಣಿ

ಕಿರು ಕಥೆ

ಕೆ.ಎ. ಎಂ. ಅನ್ಸಾರಿ

ಪಕ್ಕದ  ಮಸೀದಿಯ ಬಾಂಗು(ಅಜಾನ್) ಕೇಳಿದಾಗ ಎದ್ದೇಳುವ ಕಾದ್ರಿಯಾಕನ ದಿನಚರಿ ಮಗ್ರಿಬ್ (ಮುಸ್ಸಂಜೆ) ವರೆಗೂ ಮುಂದುವರಿಯುತ್ತಿತ್ತು.

ಬೆಳಗ್ಗೆ ಎದ್ದಕೂಡಲೇ ದೋಣಿಯ ಹತ್ತಿರ ಹೋಗಿ ದೋಣಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಿ ಅದರ ಪ್ರತಿ  ಭಾಗಕ್ಕೆ ಒಂದು ಚಿಕ್ಕ ಏಟು.

ನಂತರ ದೋಣಿಯ ಒಳಗಡೆ  ಕುಳಿತುಕೊಳ್ಳುವ ಆಸನದ ಪರಿಶೀಲನೆ…

ಎಲ್ಲೂ ಹಲಗೆ ಅಲುಗಾಡುತ್ತಿಲ್ಲ… ಎಂಬುದನ್ನು ಖಾತ್ರಿಪಡಿಸುವಿಕೆ.

ನಂತರ ಕಂಗಿನ ಹಾಳೆಯಿಂದ ಮಾಡಿದ ಚಿಳ್ಳಿ (ನೀರೆತ್ತಲು ಮಾಡಿದ ದೇಸಿ ಪರಿಕರ)ಯಿಂದ ದೋಣಿಯೊಳಗಿನ ನೀರನ್ನು ಹೊರಚೆಲ್ಲುವುದು.

ದೋಣಿಗೆ ಸುಮಾರು ಇಪ್ಪತ್ತು-ಮೂವತ್ತು ವರುಷದ ಚರಿತ್ರೆಯಿದೆ.

ಅಷ್ಟೂ ಹಳೆಯದಾದ ಚಿಕ್ಕ ನಾಡ ದೋಣಿ.

ಅಲ್ಲಲ್ಲಿ ತೂತಾಗಿದ್ದರೂ ಡಾಂಬರು ಹಾಕಿ ಪ್ಯಾಚ್ ವರ್ಕ್ ನಡೆಸಲು ಕಾದ್ರಿಯಾಕ ಮರೆಯುತ್ತಿರಲಿಲ್ಲ.

ಹೊಳೆಯ ಆ ಬದಿಯಿಂದ ಕೂಯ್ ಎಂಬ ದನಿಯೊಂದು ಕೇಳಿದರೆ ಸಾಕು..

ಈ ದಡದಿಂದ ಕೂಯ್ ಕೂಯ್ ಎಂದು ಪ್ರತಿದ್ವನಿ ಕೊಟ್ಟು ಹುಟ್ಟು (ತುಡುವು) ಹಾಕುತ್ತಾ ಆ ದಡಕ್ಕೆ ಯಾತ್ರೆ.

ಈ ದಡದಿಂದ ಆ ದಡಕ್ಕೆ ಮೈಲಿಯ ದೂರವೇನೂ ಇಲ್ಲ.

ಐದು ನಿಮಿಷದ ದಾರಿ. ಅವರ ಭಾಷೆಯಲ್ಲಿ ಹೇಳುವುದಾದರೆ ಒಂದು ಬೀಡಿ ದೂರ.

ಅಂದ್ರೆ ಹುಟ್ಟು ಹಾಕುವಾಗ ಬೀಡಿ ಹೊತ್ತಿಸಿ ಬಾಯಲಿಟ್ಟರೆ ನಾಲ್ಕು ಸಲ ಹೊಗೆ ಬಿಟ್ಟಾಗ ಆ ದಡದಲ್ಲಿ ಹಾಜರ್.

ಎಲ್ಲರ ಹಾಗೆ ಕಾದ್ರಿಯಾಕನಿಗೂ ಒಂದು ಕನಸಿತ್ತು.

ಒಂದು ಹೊಸ ದೋಣಿ ಖರೀದಿಸಬೇಕು.

ಅದೇನೂ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತನಗೇ ಗೊತ್ತಿತ್ತು.

ಹೊಳೆದಾಟಲು ಊರವರು ಕೊಡುತ್ತಿದ್ದ  ಒಂದೋ ಎರಡೋ ರೂಪಾಯಿಗಳು ಸೇರಿದರೆ ಐವತ್ತೋ ನೂರೋ ಆಗುತ್ತಿತ್ತು ಅಷ್ಟೇ… ಅದರಿಂದ ಆತನ ದಿನದ ಖರ್ಚಿಗೇ ಸಾಕಾಗುತ್ತಿರಲಿಲ್ಲ.

ಖಾದ್ರಿಯಾಕನಿಗೆ ವಯಸ್ಸಾಗುತ್ತಾ ಬಂತು.

ಗಂಡು ಮಕ್ಕಳೆಲ್ಲಾ ಪೇಟೆಗೆ ಕೆಲಸಕ್ಕೆ ಹೋಗಲು ಶುರುಮಾಡಿದರು.

ದೋಣಿಗೆ ಹುಟ್ಟು ಹಾಕಿ ಹಾಕಿ ಆತನ ರಟ್ಟೆ ಬಲವೂ ಕ್ಷೀಣಿಸುತ್ತಾ ಬಂದಿತ್ತು.

ಈ ನಡುವೆ ಪೇಟೆಗೆ ಹೋಗಲು ಇನ್ನೊಂದು ಭಾಗದಿಂದ ಸೇತುವೆಯೂ ನಿರ್ಮಾಣವಾಯಿತು. ಅದರೊಂದಿಗೆ

ಪ್ರತಿ ಮನೆಯಲ್ಲೂ ದ್ವಿಚಕ್ರ ವಾಹನದ ಆಗಮನವೂ ಆಯಿತು.

ಸಾಧಾರಣ ಲುಂಗಿ, ಲಂಗ, ಸೀರೆಯುಡುತ್ತಿದ್ದ ಊರವರ ಜೀವನ ಶೈಲಿಯೂ ಬದಲಾಯಿತು. ಒಂದು ಕಯ್ಯಲ್ಲಿ ಚಪ್ಪಲಿಯನ್ನು ಇನ್ನೊಂದು ಕಯ್ಯಲ್ಲಿ ಲುಂಗಿಯನ್ನೋ ಲಂಗವನ್ನೂ ತುಸು ಮೇಲಕ್ಕೆತ್ತಿ ದೋಣಿಯೇರುವ ಜನರ ಜೀವನದಲ್ಲಿ ಬೂಟು, ಪೈಜಾಮ, ಪ್ಯಾಂಟುಗಳು ಬಂದಮೇಲೆ ನೀರಲ್ಲಿ/ಕೆಸರಿನಲ್ಲಿ ತುಸು ದೂರ ನಡೆಯಲು ಯಾತ್ರಿಕರಿಗೆ ಕಷ್ಟವಾಗತೊಡಗಿತು.

ತುಸು ದೂರವಾದರೂ ವಾಹನಗಳಲ್ಲಿ ಸೇತುವೆ ದಾಟಿ ಹೋಗಲು ಜನರು ಉತ್ಸುಕರಾದಾಗ ಕಾದ್ರಿಯಕರ ಸಂಪಾದನೆಗೂ ಕತ್ತರಿ ಬಿತ್ತು.

ಅಂಗಳದಲ್ಲಿ ದೋಣಿ ಅಂಗಾತ ಮಲಗಿತು.

ಮನೆಯೊಳಗೆ ಕಾದ್ರಿಯಾಕಾನೂ.

ಕೋವಿಡ್ 19 ಎನ್ನೋ ಮಹಾಮಾರಿ ಭಾರತಕ್ಕೆ ಲಗ್ಗೆಯಿಟ್ಟ ವಿಷಯ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಮಾಧ್ಯಮಗಳಲ್ಲಿ ಕಾಣಿಸುತ್ತಿತ್ತು. ಎಲ್ಲರೂ ಭಯಭೀತರಾಗಿ ಮನೆಯಲ್ಲೇ ಕುಳಿತುಕೊಂಡಿರುವ ಸಮಯ.

ಲಾಕ್ಡೌನ್ ಶುರುವಾಗಿದೆ…

ಎಲ್ಲಾ ಕಡೆ ರಸ್ತೆಗಳು ಮುಚ್ಚಿವೆ… !!

ಈ ಪರಿಸ್ಥಿತಿಯಲ್ಲಿ ರಾತ್ರಿ ಸುಮಾರು ಹನ್ನೆರಡು ಗಂಟೆಗಯ ಹೊತ್ತಲ್ಲಿ ಐದಾರು ಜನರ ಗುಂಪು ಕಾದ್ರಿಯಾಕನ ಮನೆಬಾಗಿಲು ತಟ್ಟತೊಡಗಿದರು.

ಕಾದ್ರಿಯಾಕನಿಗೆ ಎದ್ದು ನಡೆಯಲಾಗುತ್ತಿಲ್ಲ.

ಕಾಕನ ಮಡದಿ ಬಾಗಿಲು ತೆರೆದಾಗ ಅಲ್ಲಿ ಕಂಡದ್ದು ಶಂಕರ ಭಟ್ರ ಮಗ,  ತುಂಬು ಗರ್ಭಿಣಿ ಸೊಸೆ…. ನಾಲ್ಕೈದು ಊರ ಭಾಂಧವರು.

ಗುಂಪಿನಿಂದ ಹೇಗಾದರೂ ಮಾಡಿ ಹೊಳೆದಾಟಿಸಿಕೊಡಬೇಕೆಂಬ ನಿವೇದನೆ.

ಊರಲ್ಲಿ  ಯಾವೊಬ್ಬನೂ ಕರೆದರೆ ಬರುತ್ತಿಲ್ಲ. ಎಲ್ಲರಿಗೂ ಕೊರೊನಾದ ಭಯ.

ಪೊಲೀಸರು ಯಾರನ್ನೂ ಪೇಟೆಗೆ ಬಿಡುತ್ತಿಲ್ಲ. ಆಸ್ಪತ್ರೆ ಸೇರಬೇಕಾದರೆ ಇನ್ನೊಂದು ರಾಜ್ಯದ ಗಡಿ ದಾಟಬೇಕು…

ಎಲ್ಲಾ ಕಡೆ ಪೊಲೀಸರ ಸರ್ಪಗಾವಲು. ಆಂಬುಲೆನ್ಸ್ ಕೂಡಾ ರಾಜ್ಯದ ಗಡಿ ದಾಟಲು ಬಿಡುತ್ತಿಲ್ಲ.

ಹೇಗಾದರೂ ಮಾಡಿ ಹೊಳೆ ದಾಟಿಸಿ ಕೊಡಬೇಕು…

ಕಾದ್ರಿಯಾಕನಿಗೆ ಏನುಮಾಡಬೇಕೆಂದು ತೋಚಲಿಲ್ಲ.

ದೋಣಿ ಹಳೆಯದಾಗಿದೆ. ಅಂಗಾತ ಮಲಗಿದೆ ಎಂದು ಹೇಳುವ ಹಾಗೆಯೂ ಇಲ್ಲ.

ರಾತ್ರೋ ರಾತ್ರಿ ಎಲ್ಲರೂ ಸೇರಿ

ದೋಣಿಯನ್ನು ಹೊಳೆಗಿಳಿಸಿದರು.

ಕಾದ್ರಿಯಾಕನ ಗೈರು ಹಾಜರಿಯಲ್ಲಿ ಮಡದಿ ಪಾತುಮ್ಮ ಹುಟ್ಟು ಹಾಕಿ ಇನ್ನೊಂದು ದಡಸೇರಿಸಿ ವಾಪಸ್ ಬಂದಾಗ ಕಾದ್ರಿಯಾಕನ ಕಣ್ಣುಗಳು ತೇವಗೊಂಡಿತ್ತು.

2 thoughts on “ಕಾದ್ರಿಯಾಕ ಮತ್ತು ನಾಡ ದೋಣಿ

  1. ತುಂಬಾ ಸ್ಟ್ರಾಂಗ್ ಆಗಿದೆ……ಮೆಸೇಜ್..
    ಕತ್ತಲಲ್ಲಿ ಬುರ್ಖಾ ತೊಟ್ಟು ದೋಣಿ ನಡೆಸುವ ಪಾತುಮ್ಮಳ ಚಿತ್ರ ಕಣ್ಣೆದುರು ಬಂತು.

  2. ಬಹಳ ಚೆಂದದ ಕತೆ. ಓದಿ ಮುಗಿಸಿದಾಗ ಹೃದಯ ತುಂಬಿ ಬಂತು.

Leave a Reply

Back To Top