ಗಝಲ್ ಜುಗಲ್

ಗಝಲ್ ಜುಗಲ್

ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ

ಶ್ರೀದೇವಿ ಕೆರೆಮನೆ

ಗಿರೀಶ್ ಜಕಾಪುರೆ

ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ)

ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯು
ಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು

ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲು
ಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು

ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ ನಿನ್ನ ನೆನಪಿನ ಗರಿಕೆ ಹುಲ್ಲಿನ ಚಿಗುರು
ಶರದೃತುವಿಗೆ ಆವರಿಸಿ ಮೈ ನಡುಗಿಸುವ ತಂಗಾಳಿಯಂತೆ ನನ್ನ ದನಿಗೆ ನನ್ನ ದನಿಯು

ಸುತ್ತೆಲ್ಲ ಹರಡಿದೆ ಎದೆಕೋಟೆಯ ಬತ್ತಲಾರದ ಬಯಕೆಯಂತೆ ಸುರುಗಿಯ ಸಮ್ಮೋಹನ
ಬದುಕಿನ ಪ್ರತಿಕ್ಷಣದಲ್ಲೂ ಜೀವದೃವ್ಯ ಚಿಮ್ಮಿದಂತೆ ನನ್ನ ದನಿಗೆ ನಿನ್ನ ದನಿಯು

ಮಥುರೆಯೊಂದಿಗೆ ತೊರೆದು ಹೋದ ಕೃಷ್ಣನಿಗಾಗಿ ಜೀವಮಾನವಿಡಿ ಕಾತರಿಸಿದಳು ರಾಧೆ
ನವಿಲುಗರಿಯ ಸಾವಿರ ಎಳೆಗಳ ನವಿರಾದ ಸ್ಪರ್ಶದಂತೆ ನನ್ನ ದನಿಗೆ ನಿನ್ನ ದನಿಯು

ಸಪ್ತಸಾಗರಗಳಿದ್ದರೂ ಪಾಲ್ಗಡಲ ಬೆಳ್ನೊರೆಯೇ ಬೇಕಂತೆ ಲಕ್ಷ್ಮಿಕಾಂತ ಹರಿಗೆ
ಶಿವನ ರುದ್ರ ಡಮರುಗದ ಅಬ್ಬರಿಸುವ ಅಲೆಯ ನಿನಾದಂತೆ ನನ್ನ ದನಿಗೆ ನಿನ್ನ ದನಿಯು

ಸುರೆಯಲ್ಲೇ ಮುಳುಗಿರುವ ದೇವಲೋಕದ ಅಧಿಪತಿಗೆ ಅಮರಾವತಿಯೂ ಬೇಸರವಂತೆ
ಗಸಗಸೆ ಪಾಯಸದ ಗೋಡಂಬಿಗೆ ನಶೆಯೇರಿದ ಅಮಲಂತೆ ನನ್ನ ದನಿಗೆ ನಿನ್ನ ದನಿಯು

ಅಳುವ ಮಗುವಿನ ದನಿಗೆ ಮೈಮರೆತು ರಮಿಸಿ ಮುದ್ದಿಸುವ ನಿನ್ನ ಹಳೆಯ ಚಾಳಿ ಬಿಡು ಅಲ್ಲಮ
ಮಗುವಿನ ಅಳುವಿನಲ್ಲಿರುವ ಸಪ್ತಸ್ವರದ ನಿನಾದದಂತೆ ನನ್ನ ದನಿಗೆ ನಿನ್ನ ದನಿಯು

ಕಾತರಿಸುತಿದೆ ನಿದ್ದೆಯಿರದ ಕಮಲ ಸೂರ್ಯನಿಗೆ, ನೈದಿಲೆಯ ನೆತ್ತಿಗೀಗ ವಿರಹದ ಉರಿ
ನಸುಕಿನ ಸೂರ್ಯನ ಎಳಸು ಕಿರಣಕೆ ನಾಚುವ ಇಬ್ಬನಿಯಂತೆ ನನ್ನ ದನಿಗೆ ನಿನ್ನ ದನಿಯು

ಸಿರಿ, ಆಗದಿರುವುದಕೆ ಮರುಗುವ ಬದಲು ಪಾಲಿಗೆ ಬಂದಿದ್ದನ್ನು ಸಂತಸದಲಿ ಒಪ್ಪಿಕೊ
ಒಮ್ಮೆಯೂ ಸೇರದ ಎಂದಿಗೂ ಅಗಲದ ರೈಲು ಹಳಿಯಂತೆ ನನ್ನ ದನಿಗೆ ನಿನ್ನ ದನಿಯು


ನನ್ನ ದನಿಗೆ ನಿನ್ನ ದನಿಯು (ಗಿರೀಶ ಜಕಾಪುರೆ)

ಮಧುರ ಮದಿರಿಗೆ ಅಧರ ಮಧು ಬೆರೆಸಿದಂತೆ ನನ್ನ ದನಿಗೆ ನಿನ್ನ ದನಿಯು
ನೆಲದ ಕುಸುಮಕೆ ಮುಗಿಲ ಘಮ ಸುರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ಜಗದ ರೀತಿ ರಿವಾಜು ಮುರಿದು ಒಲವಿಗಾಗಿ ಎಲ್ಲೆ ಮೀರಿಗೆ, ಅಪ್ಪಿದೆ
ಕಡಲು ತಾನೇ ಹರಿದು ನದಿ ಸೇರಿದಂತೆ ನನ್ನ ದನಿಗೆ ನಿನ್ನ ದನಿಯು

ನಿನ್ನ ಹೆಸರು ಕೇಳಿದೊಡನೆ ಮನಸಿನಲಿ ಹೆಜ್ಜೆ ಗೆಜ್ಜೆಯ ಘಲಿರು ನಾದ
ಒಲವ ಮಿಡಿತ ಎದೆಯಿಂದ ಎದೆಗೆ ಹರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ತಿಳಿಯದಾಗಿದೆ ಈಗ ಯಾವ ಬಿಂಬ ನನ್ನದು ಯಾವ ಬಿಂಬ ನಿನ್ನದು
ನನ್ನ ದೇಹ ನಿನ್ನ ರೂಪ ಧರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ಮಗುವು ತಾಯಿಯ ಹಿಂದೆ ಬರುವಂತೆ ಬಂದೆ ಒಲವ ಸಮ್ಮೋಹಿತನಾಗಿ
ಶಾರೀರ ಶರೀರವ ಅನುಕರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿ
ದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ಯಾವ ಜನ್ಮದ ಬಂಧವೂ ಚೆಂಬೆಳಕಾಗಿ ಬಂದು ಕೂಡಿದೆ ಬಾಳಿಗೆ
ಕತ್ತಲಲಿ ನಂದಾದೀಪ ಉರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ನೀನು ಮುಟ್ಟಿದ ಶಿಲೆಗಳಿಂದ ಹೊಮ್ಮುತಿದೆ ಸುರಸಂಗೀತ ಝರಿಯಾಗಿ
ಬರೀ ಸ್ಪರ್ಶದಿಂದ ಗಾಯ ಭರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ಯಾವ ಪ್ರಹರದಲೂ ಮರೆತಿಲ್ಲ ಮಾಯೆ ‘ಅಲ್ಲಮ’ ಒಬ್ಬರನೊಬ್ಬರು
ಬೇಟವು ಬೇಟೆಗಾರನ ಸ್ಮರಿಸಿದಂತೆ ನನ್ನ ದನಿಗೆ ನಿನ್ನ ದನಿಯು


ಇದು ಶ್ರೀದೇವಿ ಕೆರೆಮನೆ ಹಾಗೂ ಗಿರೀಶ್ ಜಕಾಪುರೆಯವರು ಬರೆದ ಗಜಲ್ ಜುಗಲ್ ನನ್ನ ದನಿಗೆ ನಿನ್ನ ದನಿಯು ಸಂಕಲನದ ಶೀರ್ಷಿಕಾ ಗಜಲ್‌ಗಳು. ಇಲ್ಲಿ ಶ್ರೀದೇವಿ ಕೆರೆಮನೆಯವರು ೩೮ ಮಾತ್ರೆ ಬಳಸಿದ್ದರೆ, ಗಿಋಈಶ್ ಜಕಾಪುರೆಯವರು ೩೦ ಮಾತ್ರೆ ಬಳಸಿ ಬರೆದಿದ್ದಾರೆ. ಈ ಗಜಲ್‌ಗಳ ವೈಶಿಷ್ಟ್ಯತೆ ಏನೆಂದರೆ ಇಬ್ಬರೂ ಪರಸ್ಪರರ ತಕಲ್ಲೂಸ್‌ನ್ನು ತಮ್ಮ ಗಜಲ್‌ಗಳಲ್ಲಿ ಬಳಸಿಕೊಂಡಿದ್ದಾರೆ.

ಅಳುವ ಮಗುವಿನ ದನಿಗೆ ಮೈಮರೆತು ರಮಿಸಿ ಮುದ್ದಿಸುವ ನಿನ್ನ ಹಳೆಯ ಚಾಳಿ ಬಿಡು ಅಲ್ಲಮ
ಮಗುವಿನ ಅಳುವಿನಲ್ಲಿರುವ ಸಪ್ತಸ್ವರದ ನಿನಾದದಂತೆ ನನ್ನ ದನಿಗೆ ನಿನ್ನ ದನಿಯು

ಎಂದು ಶ್ರೀದೇವಿಯವರು ಬರೆದಿದ್ದರೆ

ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿ
ದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದಂತೆ ನನ್ನ ದನಿಗೆ ನಿನ್ನ ದನಿಯು

ಎಂದು ಗಿರೀಶ ಜಕಾಪುರೆಯವರು ಹೇಳಿದ್ದಾರೆ.

ಗಜಲ್ ಪರಂಪರೆಯಲ್ಲಿಯೇ ಇಂತಹುದ್ದೊಂದು ವಿಶಿಷ್ಟ ಪ್ರಯೋಗ ಪ್ರಪ್ರಥಮ ಬಾರಿಗೆ ಬಳಕೆಯಾಗಿದೆ. ಗಜಲ್ ಬರೆಯುವವರಿಗೆ ಇವು ಅಭ್ಯಾಸಕ್ಕೆ ಯೋಗ್ಯವಾದ ಗಜಲ್‌ಗಳಾಗಿವೆ

2 thoughts on “ಗಝಲ್ ಜುಗಲ್

  1. Evergreen Gazal jugals by LEADING KANNADA GAZAL JUGAL STARS ALLAMA AND SIRI THE MILESTONES OF OUR KANNADA GAZAL JUGAL LITERATURE

  2. ಗಜಲ್ ಸಾಮ್ರಾಜ್ಯ ಇವರಿಂದಲೇ ಶ್ರಿಮಂತವಾಗಿದೆ ಎಂದು ಹೇಳಬಹುದು. ಇವರಿಬ್ಬರ ಗಜಲ್ ಓದುವಿಕೆ ಮನಕ್ಕೆ ಮುದವನ್ನು ಕೊಡುತ್ತದೆ.

Leave a Reply

Back To Top