ಧಾರಾವಾಹಿಸಂಗಾತಿ-26
ಅರಜುನ ಉವಾಚ
ಡಾ.ವಿಶ್ವನಾಥ ಎನ್ ನೇರಳಕಟ್ಟೆ
ಹಯಯಾಗಕ್ಕೆ ಹಾರೈಸುವವನಾದ ಹಂಸಧ್ವಜ


ಗರುಡನ ಬಳಿಬಂದ ನಂದಿ ಸುರಥ ಶಿರವನ್ನು ತನಗೆ ಕೊಡುವಂತೆ ವಿನಮ್ರತೆಯಿಂದ ಕೇಳಿದ. ಗರುಡ ಒಪ್ಪಲಿಲ್ಲ. ತನ್ನ ಒಡೆಯನೆನಿಸಿಕೊಂಡ ಆ ಶ್ರೀಹರಿ ವಹಿಸಿದ ಕಾರ್ಯವನ್ನು ಇದುವರೆಗೂ ನಡೆಸದೇ ಇದ್ದವನಲ್ಲ. ಈಗ ಈ ಶಿರವನ್ನು ಪ್ರಯಾಗದಲ್ಲಿ ಬಿಟ್ಟುಬರುವಂತೆ ಹೇಳಿದ್ದಾನೆ. ಹಾಗೆಯೇ ಮಾಡದೆ ಶಿರವನ್ನು ಬಿಟ್ಟುಕೊಡುವವನು ತಾನಲ್ಲ ಎಂಬ ಮಾತನ್ನು ಹೇಳಿದ.
ಗರುಡರಾಜನ ಮಾತನ್ನು ಕೇಳಿದ ವೃಷಭರಾಜ ವಿಚಾರವನ್ನು ಒಡನೆಯೇ ಬಂದುತಲುಪಿಸಿದ್ದು ತನ್ನೊಡೆಯನಾದ ಈಶ್ವರನಿಗೆ. ನಂದಿಯ ಮಾತದು ಪಾರ್ವತಿಯ ಕಿವಿಗೆ ಬಿತ್ತು. ಗರುಡರಾಜನನ್ನು ಮನಸಾರೆ ಹೊಗಳಿದಳು ಗಿರಿಜೆ. ಶಿವ ವಹಿಸಿದ ಕಾರ್ಯವನ್ನು ನೆರವೇರಿಸದ ನಂದಿಯನ್ನು ಬೈದಳು.
ಅವಮಾನವಾಯಿತು ಶಿವನ ವಾಹನನಿಗೆ. ಲಜ್ಜೆ ಮೂಡಿತು. ಮೊಗ ಬಾಡಿತು. ಸಂತಸ ಇಲ್ಲದವನಾದ ನಂದಿಯನ್ನು ಸಂತೈಸಿದ್ದು ಆ ಪರಶಿವನೇ. “ಶಿರವನ್ನು ತರುವ ಕಾರ್ಯವದು ನಿನ್ನಿಂದ ಸಾಧ್ಯವಿದೆ. ಹೋಗು. ಪ್ರಯತ್ನಪಡು” ಎಂದು ಪ್ರೇರಣೆಯಿತ್ತು ಮತ್ತೆ ಕಳುಹಿಸಿಕೊಟ್ಟ.
ಅತಿವೇಗದಿಂದ ಗಗನಮಾರ್ಗದಲ್ಲಿ ಸಾಗುತ್ತಿದ್ದ ಗರುಡನನ್ನು ಅಷ್ಟೇ ರಭಸದಿಂದ ಹಿಂಬಾಲಿಸಿದ ನಂದಿ. “ನಿನ್ನ ಕರದಲ್ಲಿರುವ ಶಿರವದು ಹರನಿಗೆ ಸಲ್ಲಬೇಕು. ಅವನ ಕೊರಳ ಮಾಲೆಯನ್ನದು ಅಲಂಕರಿಸಬೇಕು. ಅದನ್ನು ನನಗೆ ಕೊಡು. ಕೊಡದೇ ಹೋದರೆ ತೀವ್ರತರವಾದ ತೊಂದರೆ ನಿನಗೆದುರಾಗುತ್ತದೆ” ಎಂದು ಎಚ್ಚರಿಕೆಯ ಮಾತನ್ನು ಹೇಳಿದ ನಂದಿ, ಪಕ್ಷಿರಾಜನಿಗೆ.
“ಕೃಷ್ಣನಿತ್ತ ಆದೇಶದಂತೆ ಈ ಶಿರವನ್ನು ಹೊತ್ತು ಸಾಗುತ್ತಿರುವೆ ನಾನು ಆ ಪ್ರಯಾಗದೆಡೆಗೆ. ಪ್ರಯಾಸ ನೀಡುವವನು ನೀನಾಗದಿರು” ಎಂದು ಪ್ರತಿಕ್ರಿಯೆಯಿತ್ತ ಗರುಡ.
ಮೂರೂ ಲೋಕಗಳವು ಅಲ್ಲಾಡುವಂತೆ ಅತಿಭರದಿಂದ ರೆಕ್ಕೆಗಳನ್ನು ಬಡಿಯುತ್ತಾ ಸಾಗುತ್ತಿದ್ದ ಪಕ್ಷಿರಾಜ. ಅಟ್ಟಿಸಿಕೊಂಡು ಬರುತ್ತಿದ್ದ ನಂದಿಯ ಮೂಗಿನ ಉಚ್ಛ್ವಾಸ ನಿಶ್ವಾಸಗಳಿಂದ ಬಿರುಸು ಪಡೆದ ಗಾಳಿಯದು ಗರುಡರಾಜನನ್ನು ಅತ್ತಿತ್ತ ಸೆಳೆಯತೊಡಗಿತ್ತು. ಆಯಾಸವಾದರೂ ಅದನ್ನು ತಡೆದುಕೊಂಡ ಗರುಡ. ಪ್ರಯಾಗವನ್ನು ತಲುಪಿ ಸುರಥ ಶಿರವನ್ನು ಅಲ್ಲಿ ಎಸೆದು ತಕ್ಷಣವೇ ಕೃಷ್ಣನಿರುವ ಚಂಪಕಾನಗರದೆಡೆಗೆ ಮತ್ತೆ ಮುಖಮಾಡಿದ. ಆಗ ನಂದಿ ಗರುಡ ಎಸೆದಿದ್ದ ಆ ಶಿರವನ್ನು ತ್ವರಿತಗತಿಯಲ್ಲಿ ಅಲ್ಲಿಂದ ಎತ್ತಿಕೊಂಡು ಕೈಲಾಸಕ್ಕೆ ಬಂದ. ಶಿವನಿಗದನ್ನು ನೀಡಿದ.
ಸಂತಸಗೊAಡ ಶಿವ. ಪಾರ್ವತಿಯ ಮುಖದಲ್ಲಿ ನಗು ಮೂಡಿತು. ತನ್ನ ರುಂಡಮಾಲೆಯಲ್ಲಿ ಸುರಥ ಶಿರವನ್ನು ಧರಿಸಿದ ಶಂಕರ.
ಕೃಷ್ಣ ಯುಕ್ತಿಯದು ಅರ್ಜುನ ಶಕ್ತಿಯೊಡಗೂಡಿ ತನ್ನ ತನುಜ ಸುರಥ ಇನ್ನಿಲ್ಲವಾಗಿದ್ದಾನೆ ಎಂಬ ಸುದ್ದಿ ಹಂಸಧ್ವಜನನ್ನು ತಲುಪಿಯಾಗಿತ್ತು. ಶರೀರದ ಮೇಲಿದ್ದ ಗಾಯಕ್ಕೆ ಕಬ್ಬಿಣವನ್ನು ಕಾಯಿಸಿ ಇಟ್ಟಂತಾಯಿತು ಅವನ ಸ್ಥಿತಿ. ಸುತ ಸುಧನ್ವನ ಸಾವಿನಿಂದ ನೊಂದಿದ್ದ ಆತ ಈಗ ಸುರಥನ ಮರಣದಿಂದಾಗಿ ಅತಿಯಾಗಿ ನೊಂದ. ಇನ್ನು ತಾನು ಮರಣ ಹೊಂದುವುದೇ ಲೇಸು ಎಂಬ ಭಾವ ಅವನಲ್ಲಿ ಮೂಡಿತು. ಯುದ್ಧದಲ್ಲಿ ಆ ಕೃಷ್ಣನನ್ನು ಮೆಚ್ಚಿಸುವಂತೆ ಹೋರಾಡಿದರೆ ತನಗೆ ಮೋಕ್ಷ ಪ್ರಾಪ್ತವಾಗುವುದೆಂಬ ಯೋಚನೆ ಅವನಲ್ಲಿ ಮೂಡಿಬಂತು. ರಣದ ಮೂಲಕ ಮರಣದ ನಿಶ್ಚಯ ಮಾಡಿಕೊಂಡು ರಣರಂಗಕ್ಕೆ ಬಂದ.
ಈ ಬಗೆಯಲ್ಲಿ ಹಂಸಧ್ವಜ ನನ್ನೆದುರು ನಿಂತಾಗ ಅಳುಕಿದವನು ಶ್ರೀಕೃಷ್ಣ. ಅವನಿಗೆ ಹಂಸಧ್ವಜನ ಜೊತೆಗಿನ ಕದನವದು ಸರಿಗಾಣಲಿಲ್ಲ. ಸುತರಿಬ್ಬರನ್ನು ಕಳೆದುಕೊಂಡ ಅವನನ್ನು ಇನ್ನೂ ನೋಯಿಸುವುದು ಉಚಿತವಲ್ಲವೆಂಬ ಭಾವ ಇದ್ದಿರಬಹುದು ದೇವ ಕೃಷ್ಣನ ಹೃದಯದೊಳಗೆ!
“ಯುದ್ಧ ಆರಂಭಿಸಬೇಡ. ಇರು” ಎಂದು ನನ್ನನ್ನು ತಡೆದ ಕೃಷ್ಣ ಕುದುರೆಗಳ ಲಗಾಮನ್ನು ಬಿಗಿದ. ಹೆಗಲಿನಿಂದ ಜಾರುತ್ತಿತ್ತು ಅವನ ಪೀತಾಂಬರ. ಅದನ್ನು ಮತ್ತೆ ಹೆಗಲಿನ ಮೇಲೆಯೇ ಹಾಕಿಕೊಂಡ. ರಥದಿಂದ ಕೆಳಗಿಳಿದ. ಸಿಂಹವನ್ನು ಸೋಲಿಸುವ ಘನಗತಿಯಲ್ಲಿ ನಡೆಯತೊಡಗಿದ, ಹಂಸಧ್ವಜನೆಡೆಗೆ. ಭಕ್ತನ ಕಡೆಗೆ ನಡೆದುಹೋಗುತ್ತಿದ್ದ ಕೃಷ್ಣನ ಹೆಜ್ಜೆಗಳು ಭಕ್ತರ ಭಕ್ತ ಶ್ರೀಕೃಷ್ಣ ಎಂಬ ಪರಮಸಂದೇಶವನ್ನು ಸಾರಿಹೇಳುವ ಪರಮಾತ್ಮ ಹೆಜ್ಜೆಗಳಾಗಿ ಕಂಡವು ನನ್ನ ದೃಷ್ಟಿಗೆ.
ಹೊಳೆಯುತ್ತಿತ್ತು ಕೃಷ್ಣ ಕಿರೀಟ ಶಿರದಲ್ಲಿ. ತಿಲಕವದು ಶೋಭಿಸುತ್ತಿತ್ತು ಹಣೆಯಲ್ಲಿ. ಕುಸುಮ ಕಣ್ಣದು ಕೃಷ್ಣನದ್ದು. ಕಾಂತಿ ಕೆನ್ನೆಯದು ಅವನದ್ದು. ಸೊಗಸನ್ನು ಸಾರುತ್ತಿದೆ ನಸುನಗೆಯಿಂದರಳಿದ ದೇವವದನ. ದಾನವಾಂತಕನ ದಂತಗಳವು ಮನಮೋಹಕ. ಮೂರು ಆಕರ್ಷಕವಾದ ಸರಗಳು ಅಲಂಕರಿಸಿವೆ ಹರಿ ಕೊರಳನ್ನು. ಕನಕವರ್ಣದ ಉಡುಗೆಯದು ಮೆರುಗು ನೀಡಿ ಮೆರೆಸಿದೆ ಹರಿ ಕಾಯವನ್ನು.
ದೇವನಡೆಯದು ಪಡೆಯಿತು ನಿಲುಗಡೆ ಚಂಪಕಾಪುರದೊಡೆಯನ ಮುಂದುಗಡೆ. ಸುತರನ್ನು ಕಳೆದುಕೊಂಡ ದುಃಖವನ್ನು ಮರೆಸಿತು ಕೃಷ್ಣ ನಿಲುವು. ದೇವಮೊಗವನ್ನು ಕಾಣುತ್ತಿದ್ದ ಅರಸನ ಮುಖದಲ್ಲಿ ಪೂರ್ಣ ನಲಿವು. ಸಾಷ್ಟಾಂಗ ನಮಸ್ಕರಿಸಿದ ಹಂಸಧ್ವಜ. “ನಿನ್ನ ರಥದಿಂದಿಳಿದು ಇಲ್ಲಿ ಬಂದೆಯೇಕೆ ಪರಮ ದೇವ?!” ಎಂದು ಕೇಳಿದ ಕರವನ್ನು ಮುಗಿಯುತ್ತ.
“ಯುದ್ಧದಲ್ಲಿ ಅರ್ಜುನನನ್ನು ಗೆಲ್ಲುತ್ತೇನೆಂಬ ಕ್ಷಾತ್ರಭಾವವದು ನಿನ್ನಲ್ಲಿ ಏತಕ್ಕೆ! ಈ ಬಗೆಯ ಛಲದಿಂದಲೇ ಮಕ್ಕಳನ್ನು ಕಳೆದುಕೊಂಡೆ. ಪಾರ್ಥ ವಿಜಯಕ್ಕೆ ನಾನು ಮಾಡುತ್ತಿರುವ ಸಹಾಯವನ್ನು ಕಂಡವ ನೀನು. ಮಿತ್ರಭಾವವನ್ನು ಹೊಂದು ನಮ್ಮಲ್ಲಿ. ವೈರಭಾವವದು ಬೇಡ. ಕುದುರೆಯನ್ನು ಬಿಡು. ಯಾಗಕ್ಕೆ ಅನುಕೂಲನೆನಿಸು” ಎಂದು ಹಂಸಧ್ವಜನಿಗೆ ಹರಿ ಅರುಹಿದ.
“ಗಂಗೆಯಲ್ಲಿ ಮುಳುಗಿದವನಿಗೆ ಬಾಯಾರಿಕೆ ಇರುವುದೇ! ನಿನ್ನ ಸ್ನೇಹ ಸಂಪಾದಿಸಿದ ಎನಗೆ ಇನ್ನು ದುಃಖವೆಲ್ಲಿಯದು!” ಎಂದು ಹೇಳಿದ ಹಂಸಧ್ವಜ ಹರಿಯನ್ನು ಅಪ್ಪಿದ, ಒಪ್ಪಿದ. ಕಟ್ಟಿದ್ದ ಕುದುರೆಯನ್ನು ಬಿಡಿಸಿ ಇತ್ತ. ಸಕಲ ಸಂಪದವನ್ನಿತ್ತ. ನಮ್ಮ ಯಾಗಕ್ಕೆ ತಾನೂ ನೆರವು ನೀಡುವ ಬಗೆಯಲ್ಲಿ ನಮ್ಮ ಜೊತೆಗೇ ಬಂದ. ನಮ್ಮನ್ನು ಬೀಳ್ಕೊಟ್ಟ ಶ್ರೀಕೃಷ್ಣ, ಧರ್ಮಜನನ್ನು ಕಾಣುವುದಕ್ಕಾಗಿ ಹಸ್ತಿನಾವತಿಗೆ ಹೊರಟ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ




