
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಆತ್ಮ ರಕ್ಷಣೆಗಾಗಿ ಹೋರಾಟ

ಕಾಮಕ್ಕೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ, ಅರಿವಂತೂ ಮೊದಲೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕೇವಲ ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ಬರ್ಬರವಾದ ಅತ್ಯಾಚಾರ ಎಸಗಿ ಆಕೆಯ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಸಾಯಿಸಿದ ಆ ಪಾತಕಿಯ ವೈಶಾಚಿಕ ಕೃತ್ಯಕ್ಕೆ ಧಿಕ್ಕಾರವಿರಲಿ.
ನವಮಾಸಗಳ ಕಾಲ ತನ್ನ ಉದರದಲ್ಲಿ ಹೊತ್ತು ಹೆತ್ತು ತನ್ನ ಮಗುವಿನ ಭವ್ಯ ಭವಿಷ್ಯದ ಕುರಿತು ಹಲವು ಕನಸುಗಳನ್ನು ಕಂಡ ಆ ತಾಯಿ ಮನೆಯ ಬಳಿ ಆಟವಾಡುತ್ತಿದ್ದ ತನ್ನ ಮಗು ವಿಕೃತನ ಕಾಮ ಪಿಪಾಸೆಗೆ ಬಲಿಯಾಗಿ ಹೋದಳು ಎಂಬುದನ್ನು ಕೇಳಿದಾಗ ಆಕೆಯ ಪರಿಸ್ಥಿತಿ ಏನಾಗಿರಬಹುದು. ತನ್ನ ಮಗುವನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದಾಗ ಅದೆಷ್ಟು ವಿಲವಿಲ ಒದ್ದಾಡಿರಬಹುದು ಆ ತಾಯಿಯ ಜೀವ ಎಂದು ಊಹಿಸಿಕೊಂಡರೆ ಅದೆಷ್ಟೇ ಗಟ್ಟಿ ಗುಂಡಿಗೆಯಾದರೂ ಒಂದು ಕ್ಷಣ ಝಲ್ಲೆನ್ನದೇ ಇರದು.
ಕಾನೂನಿನ ಕೈಗಳು ಅದೆಷ್ಟೇ ಉದ್ದ ಚಾಚಿದರೂ ಸಿಗದಂತೆ ತಪ್ಪಿಸಿಕೊಂಡು ಹೋಗುವ, ತಪ್ಪಿಸಿಕೊಳ್ಳಲು ಸಹಾಯ ಮಾಡುವ, ಅದೇ ಕಾನೂನಿನ ಲೋಪ ದೋಷಗಳನ್ನು ಬಳಸಿಕೊಂಡು ಪಾರಾಗಲು ಯತ್ನಿಸುವ
ಅಪರಾಧ ಪ್ರವೃತ್ತಿಯನ್ನು ಹೊಂದಿರುವವರನ್ನು ನೋಡಿದಾಗ ಇಂತಹ ವಿಕೃತ ಮನಸ್ಥಿತಿಯ ಕಾಮಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಸಮಾಧಾನ ಪಟ್ಟುಕೊಳ್ಳಬೇಕೋ…. ಅಥವಾ ಆ ತಾಯಿಯ ದುಃಖವನ್ನು ಕಂಡು ದ್ರವಿಸಿದ ಮನಸ್ಸನ್ನು ಸಾಂತ್ವನಗೊಳ್ಳಲು ಬಿಟ್ಟುಬಿಡಬೇಕೋ ಅಥವಾ ರಂಗೋಲಿಯ ಕೆಳಗೆ ನುಸುಳುವ ಇಂತಹ ವಿಕೃತರನ್ನು
ಹಾಡು ಹಗಲೇ ಕೊಂದು ಹಾಕಬೇಕೋ,ಎಲ್ಲರ ಆವೇಶವನ್ನು ಮೌನಕ್ಕೆ ತಿರುಗಿಸಿ ಒಂದಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಉರಿಸಿ ಆ ಪುಟ್ಟ ಆತ್ಮಕ್ಕೆ ಶಾಂತಿಯನ್ನು ಕೋರಿ ನಮ್ಮೆದೆಯಲ್ಲಿ ಆ ಕ್ಷಣಕ್ಕೆ ಜ್ವಲಿಸುವ ಬೇಗೆಯನ್ನು ಆರಿಸಬೇಕೋ…. ಸಾಂತ್ವನ ಸೂಚಿಸಿದ, ಪ್ರತಿಭಟನೆ ಮಾಡಿದ, ಮೆಣದ ಬತ್ತಿ ಉರಿಸಿ ಶಾಂತಿಯುತ ಹೋರಾಟ ಮಾಡಿ ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡು ಪತ್ರಿಕೆಯ ಪುಟಗಳನ್ನು ತುಂಬಿಸಿದರೆ….. ಹೀಗೆ ಯಾವುದನ್ನು ಮಾಡಿದರೂ ಹಾರಿ ಹೋದ ಜೀವ ಮತ್ತೆ ಬರಲಾರದು.
ಮತ್ತೆ ಕೆಲವೇ ದಿನಗಳಲ್ಲಿ ಎಲ್ಲವೂ ತಣ್ಣಗಾಗಿ ಸಹಜ ಸ್ಥಿತಿಗೆ ಬರುತ್ತದೆ. ಬಲಿಯಾದ ಬಾಲಕಿಯ ಪಾಲಕರಿಗೆ ಮಗಳ ಸಾವಿನ ಪರಿಹಾರದ ಹಣ ದೊರೆಯುತ್ತದೆ, ಈ ವಿಷಯ ಪತ್ರಿಕೆಗಳ ಒಂದೆರಡು ದಿನಗಳ ಸುದ್ದಿಗೆ ಗ್ರಾಸವಾಗುತ್ತದೆ, ಮಹಿಳಾಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗುತ್ತದೆ. 24*7 ಬಾಯಿ ಬಡಿದುಕೊಳ್ಳುವ ನ್ಯೂಸ್ ಚಾನೆಲ್ ಗಳು ತಮ್ಮ ಚಾನಲ್ನ ಟಿ ಆರ್ ಪಿ ಏರಿಸಿಕೊಳ್ಳಲು ಕ್ಷಣಕ್ಕೊಂದು ಹೊಸ ಮಾಹಿತಿಯನ್ನು ಒದಗಿಸುವಂತೆ ಅದದೇ ವಿಷಯವನ್ನು ರೀಲ್ ಸುತ್ತಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಾರೆ. ಇನ್ನು ಟಿವಿಯ ಮುಂದೆ ಕುಳಿತು ಈ ವಿಷಯಗಳ ಕುರಿತು ಕೆಲಸಕ್ಕೆ ಬಾರದ ಚರ್ಚೆ ಮಾಡುತ್ತಾ, ಪ್ಯಾನಲ್ ಡಿಸ್ಕಶನ್ ನಡೆದು ಕಾನೂನು ಮತ್ತು ಸುವ್ಯವಸ್ಥೆ ಕೈಕೊಟ್ಟಿದೆ ಎಂದು ಶರಾ ಬರೆಯಲು ರಾಜಕಾರಣಿಗಳನ್ನು, ಬುದ್ಧಿಜೀವಿಗಳನ್ನು, ಸಾಮಾನ್ಯ ನಾಗರಿಕರನ್ನು ಕರೆಸಿ ಹತ್ತಿಯ ಅರಳೆಯನ್ನು ಹಿಂಜಿದಂತೆ ವಿಷಯವನ್ನು ಹಿರಿದು ಹಿಂಜಿ ಪ್ರಸಾರ ಮಾಡಲಾಗುತ್ತದೆ.
ಮತ್ತೆ ಹೊಸದೊಂದು ವಿಷಯ ಹೊಸದೊಂದು ದುರ್ಘಟನೆ ನಡೆದಾಗ ಎಲ್ಲರ ಚಿತ್ತ ಅತ್ತ ಕಡೆ ತಿರುಗುತ್ತದೆ.
ಹಾಗಾದರೆ ಮುಖ್ಯವಾಗಿ ನಡೆಯಬೇಕಾಗಿರುವುದು ಏನು? ಈ ರೀತಿಯ ಕೃತ್ಯಗಳು ಏಕೆ ನಡೆಯುತ್ತವೆ? ಇಂತಹ ಕೃತ್ಯಗಳು ನಡೆಯದಂತೆ ಇರಲು ಬೇಕಾದ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ನಾವು ಎಲ್ಲಿ ತಪ್ಪಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಾದ ಕಾಲ ಯಾವಾಗಲೋ ಬಂದಿದ್ದರೂ ನಮ್ಮಗಳ ಹೇಡಿತನ, ಅಲ್ಲೆಲ್ಲೋ ನಡೆದಿದೆ ನಾವು ಸೇಫು ಎಂಬ ವಿಸ್ಮೃತಿಯ ಭಾವ ನಮ್ಮಲ್ಲಿರುವ ತನಕ ಯಾವ ಮನೆಯ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ.
ಎನ್ಕೌಂಟರ್ ಮಾಡುವ ಮೂಲಕ ಕೃತ್ಯವೆಸಗಿದ ಅಪರಾಧಿಗೆ ಶಿಕ್ಷೆ ದೊರೆತಿದೆ, ನಿಜ ಆದರೆ ನಿಜವಾದ ಶಿಕ್ಷೆ ಆಗಬೇಕಾಗಿರುವುದು ಅಂತಹ ಮನಸ್ಥಿತಿಗೆ. ಆರ್ಥಿಕವಾಗಿ ಅಷ್ಟೇನು ಸಬಲರಲ್ಲದ ಯುವ ಜನಾಂಗಕ್ಕೆ ಬೃಹತ್ ಆಮಿಷಗಳನ್ನು ಒಡ್ಡಿ ತಮ್ಮ ಕೊಕ್ಕೆಗೆ ಸಿಲುಕಿಸಿಕೊಳ್ಳುವ ದುಷ್ಕೃತ್ಯಗಳನ್ನು ಮಾಡುವ ಜನರ ಬಹುದೊಡ್ಡ ತಂಡಗಳು ದೇಶದೆಲ್ಲೆಡೆ ಇವೆ. ಕ್ಷಣಿಕ ಸುಖದ ಆಸೆಗಾಗಿ ಅನ್ಯಾಯ ಅತ್ಯಾಚಾರ ಕೊಲೆಯಂತಹ ದುಷ್ಕೃತಗಳು ನಡೆದೇ ಇವೆ. ಅವುಗಳನ್ನು ಮುಚ್ಚಿ ಹಾಕುವ ಹುನ್ನಾರಗಳು ಕೂಡ.
ನಮ್ಮ ಪುರಾತನವೂ ಆದ ಆದರೆ ಚಿರನೂತನವೂ ಸಾರ್ವಕಾಲಿಕವೂ ಆದ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಒಂದು ಗೋವು ಕೂಡ ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಎಂದು, ಕೊಟ್ಟ ಮಾತಿಗೆ ತಪ್ಪಲಾರೆ ಎಂದು ಕರ್ತವ್ಯ ಪರನಾಗಿ ಕಾರ್ಯನಿರ್ವಹಿಸಿದ್ದನ್ನು ನಾವು ಕಂಡಿದ್ದೇವೆ.
“ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ತಾನಂ ಅಧರ್ಮಸ್ಯ ತದಾತ್ಮಾನಾಮ್ ಸೃಜಾ ಮ್ಯಹಂ” ಎಂಬ ಗೀತೆಯ ವಾಣಿಯಂತೆ ಯಾವಾಗ ಅಜ್ಞಾನ ಎಂಬ ಕತ್ತಲು ನಮ್ಮನ್ನು ಆವರಿಸುತ್ತದೆಯೋ ಆ ಎಲ್ಲ ಸಮಯದಲ್ಲೂ ಜ್ಞಾನದ ಬೆಳಕಿನ ಮೂಲಕ ನಾವು ಬದುಕಿನ ಉನ್ನತ ಮೌಲ್ಯಗಳನ್ನು ಅರಿಯುವ, ಪ್ರತಿಪಾದಿಸುವ ಮತ್ತು ಪಾಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.
ಪ್ರತಿ ಮನೆ ಮನೆಗಳಲ್ಲೂ ಮೌಲ್ಯಗಳನ್ನು ಬಿತ್ತಿ ಬೆಳೆಯಬೇಕು. ಸಾಮಾಜಿಕ ನೀತಿ ನಿಯಮಾವಳಿಗಳನ್ನು ಧಿಕ್ಕರಿಸುವವರನ್ನು ಸಾಕ್ಷಿ ಸಮೇತ ಹಿಡಿದು ಶೀಘ್ರವಾಗಿ ಶಿಕ್ಷೆ ನೀಡುವ ಮೂಲಕ ಅನ್ಯಾಯಕ್ಕೆ ಕತ್ತರಿ ಹಾಕಬೇಕು. ನಮ್ಮ ಸಂವಿಧಾನವು ಕೊಡ ಮಾಡಿರುವ ಕಾನೂನಿನ ಕುರಿತು ಕೇವಲ ಗೌರವವಿದ್ದರೆ ಸಾಲದು ತಪ್ಪು ಮಾಡಿದವರಿಗೆ ಶಿಕ್ಷೆಯ ಭಯ, ಸರಿಯಾದ ಮಾರ್ಗದಲ್ಲಿರುವವರಿಗೆ ನ್ಯಾಯದ ಅಭಯಹಸ್ತ ದೊರೆಯಲೇಬೇಕು.
ಹೆಣ್ಣು ಮಕ್ಕಳು ಆರ್ಥಿಕವಾಗಿ ಸಶಕ್ತರಾಗಿ ವಿದೇಶಗಳಿಗೂ ಒಬ್ಬರೇ ಓಡಾಡಿ ಕಾರ್ಯ ನಿರ್ವಹಿಸುತ್ತಿರುವುದನ್ನು, ಎಲ್ಲ ರಂಗಗಳಲ್ಲೂ ಸಬಲೀಕರಣ ಸಾಧಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ನಿಜ, ಆದರೆ ದೀಪದ ಅಡಿಯೇ ಕತ್ತಲು ಎಂಬಂತೆ ಅದೇ ಸಮಾಜದಲ್ಲಿ ದೈನಂದಿನ ನೋವು,ಹಸಿವು, ಬಡತನ, ದಾರಿದ್ರ್ಯ,ಅವಮಾನ, ದೈಹಿಕ ಶೋಷಣೆಗಳನ್ನು ಅನುಭವಿಸುವ ಹೆಣ್ಣು ಮಕ್ಕಳು ನಮಗೆ ಕಾಣಸಿಗುತ್ತಾರೆ.
ಸಮಾನ ಹಕ್ಕು, ಕರ್ತವ್ಯ ಮತ್ತು ಸಾಮಾಜಿಕ ಸ್ಥಾನಮಾನಗಳು ಕೇವಲ ಸಂವಿಧಾನದಲ್ಲಿ ಮಾತ್ರ ಅನುರಣಿಸದೆ ಪ್ರತಿ ಮನೆಯ ಹೆಣ್ಣುಮಕ್ಕಳು ತನ್ನ ಮತ್ತು ತನ್ನ ಸುತ್ತಣ ಸಮಾಜದ ಹೆಣ್ಣು ಮಕ್ಕಳ ಏಳಿಗೆಗಾಗಿ ದ್ವನಿ ಎತ್ತಬೇಕು. ಸಾಮಾಜಿಕ, ಆರ್ಥಿಕ ಸ್ವಾವಲಂಬನೆಯ ಜೊತೆ ಜೊತೆಗೆ ವೈಯುಕ್ತಿಕ ಹೋರಾಟದ ಕಿಡಿ ಅವರಲ್ಲಿ ಪ್ರಜ್ವಲಿಸಿ ಆತ್ಮ ರಕ್ಷಣೆಗಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಸನ್ನದ್ಧರಾಗಬೇಕು.
ಗಂಡೇ ಇರಲಿ ಹೆಣ್ಣೇ ಇರಲಿ ತಪ್ಪು ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆಗಳನ್ನು ನೀಡುವ ಮೂಲಕ ಕಾನೂನಿನ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಮುಖ್ಯವಾಗಿ ನಮ್ಮ ದೇಶದ ನಾಲ್ಕನೇ ಅಂಗವಾದ ಪೊಲೀಸ್ ವ್ಯವಸ್ಥೆಯು ಎಲ್ಲ ರೀತಿಯ ಭ್ರಷ್ಟಾಚಾರ, ಮೇಲಧಿಕಾರಿಗಳ ಮತ್ತು ರಾಜಕಾರಣಿಗಳ
ಒತ್ತಡದಿಂದ ಮುಕ್ತವಾಗಿ ನ್ಯಾಯಪರವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕು. ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಬೆಳೆಸುವ ಪಾಲಿಸುವ ಪ್ರೋತ್ಸಾಹಿಸುವ ಬೆನ್ನುತಟ್ಟುವ ಕೈಗಳು ಸಮಾಜದ ಸರ್ವ ನಾಗರಿಕರದಾಗಿರಬೇಕು ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್
