ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ತಂತು


ಕಡಿದುಕೊಳ್ಳಲೆಂದೇ ಸ್ನೇಹ ತಂತುವಿನ ಕೈ ಹಿಡಿದಿದ್ದೆ
ಎಂದರಿವಾಗುವ ಮುನ್ನವೇ ಹರಿದುಕೊಳ್ಳಲು ಬಂದಿದ್ದೆ
ನನ್ನೊಳಗಿನ ಹರಿವು ಅರಿವಾಗಲೇ ಇಲ್ಲ
ನನ್ನ ಸ್ನೇಹವ ಕಳೆಯಂತೆ ಕಿತ್ತದ್ದು ಮರೆಯಲಾಗಲಿಲ್ಲ
ನಾನೋ ಅತ್ಯಾಪ್ತನ ಆತ್ಮಕೇ ಅಂಟಿ ಕೊಂಡವಳು
ಮಧುರ ಬಾಂಧವ್ಯವೇ ಬದುಕೆಂದು ನಂಬಿಕೊಂಡವಳು
ಚೂರಾದ ಮನಸ ಮುಚ್ಚಿಬಿಡಲು ಕಲ್ಲುಬಂಡೆಯೇ ಬೇಕಿಲ್ಲ
ಕಲ್ಲಂತ ಮನಸಿನ ಮಾತುಗಳ ಹತ್ಯಾರವೇ ಸಾಕಲ್ಲ
ಬೇಕೆಂದಾಗ ಬೆಸೆದು ಬಿಡುವ ಬೇಡವೆಂದಾಗ ಬಸಿದು ಬಿಡುವವನೇ
ನಿರೀಕ್ಷೆಯನೇ ನಿರ್ಲಕ್ಷಿಸಿ ಕಣ್ಣಮುಂದಿರುವುದ ಕಡೆಗಣಿಸಿದವನೇ
ತಿರುಳಿಲೆಂದು ತಳ್ಳಿ ಹೋಗುವ ಮೊದಲೇ ತಾಲೀಮು ನಡೆದಿತ್ತೇ….
ಮೌನದ ಅಗಾಧ ದಳ್ಳುರಿಯಲಿ ಮಾತುಗಳ ದಾಸ್ತಾನು
ಸುಟ್ಟು ಭಸ್ಮವಾಗಿತ್ತೇ…..
ಅಪರಿಚಿತನಾಗ ಬಯಸಿದವಗೆ ಪರಿಚಯದ ಮುಖವಾಡ ಬೇಕಿತ್ತೇ
ಬೆನ್ನು ತಿರುಗಿಸಲು ಕ್ಷುಲ್ಲಕ ಕಾರಣ ಸಾಕಿತ್ತೇ
ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ
ಎಂಬರಿವಿನ ಕುರುಹಿರುವವಳ ವಿಶ್ವಾಸವ ಹೊಸಕಿ
ಒಲವ ತೋಟಕೆ ಲಗ್ಗೆಯಿಟ್ಟು ಧ್ವಂಸ ಮಾಡಿ ಮನದ ಮೊಗ್ಗನು ಹಿಚುಕಿ
ದೂಷಿಸಿ ದೂರಾಗುವ ಮುನ್ನ
ಧಮನಿ ಧಮನಿಗಳ ದಿಟ್ಟಿಸದಾದೆಯ ಮರುಳ
ಅಂತಃಸಾಕ್ಷಿಯನ್ನೊಮ್ಮೆ ಸಾಕ್ಷೀಕರಿಸಬೇಕಿತ್ತು ಅಂತರಾತ್ಮವ ಕೊಂದು ತೆರಳುವ ದುರುಳ
——————-
ಶೋಭಾ ಮಲ್ಲಿಕಾರ್ಜುನ್