ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್

ನೆರಳು ಬೆಳಕಿನಂತೆ ಆಟ ಆಡಿಸುತಿದೆ ಬದುಕು
ಮರಳುಗಾಡಿನ ಬೇಗೆಯಂತೆ ಬಿಡದೆ ಸುಡುತಿದೆ ಬದುಕು
ಜನಿಸಿ ಬಂದ ತಪ್ಪಿಗೀ ಶಿಕ್ಷೆಯೇ ಖುದಾ
ಕನಸಿನಲೂ ಕರಾಳ ಚಿತ್ರವನು ತೋರುತಿದೆ ಬದುಕು
ಕತ್ತಲ ಕೋಣೆಯಲಿ ವ್ಯಂಗದಲಿ ನಗುತಿವೆ ರಿವಾಜುಗಳು
ಮೌನ ಭಿತ್ತಿಗಳಲಿ ಮನದಳಲನು ಮೂಡಿಸುತಿದೆ ಬದುಕು
ಬೆಳಕಿನ ಕೋಲು ಬಾಗಿದೆ ಮಾಳಿಗೆಯ ಬೆಳಕಿಂಡಿಯಿಂದ
ಕಳವಳಿಸಿದ ಉಸಿರಿನಲಿ ದನಿಯನು ಬಿಗಿಯುತಿದೆ ಬದುಕು
ಹೊಸ್ತಿಲಿನೊಳಗೆ ಕಂಬನಿಯ ಬಿಸುಪು ತಾಗುತಿದೆ ಬೇಗಂ
ನಿಷ್ಪಾಪ ಹೆಣ್ಣು ಜೀವವನು ಸಣ್ಣಗೆ ಬೇಯಿಸುತಿದೆ ಬದುಕು
————-
ಹಮೀದಾಬೇಗಂ ದೇಸಾಯಿ.

ಹೆಂಗಳೆಯರ ಬದುಕಿನ ಹಲವಾರು ವ್ಯಂಗಗಳನ್ನು ಅರ್ಥ ಪೂರ್ಣವಾಗಿ ನಿಮ್ಮ ಈ ಗಜಲ್ ಬಿಂಬಿಸುತ್ತಿದೆ ಮೇಡಂ..
ಸ್ಪಂದನೆಗೆ ಧನ್ಯವಾದ ತಮಗೆ.
ಹಮೀದಾಬೇಗಂ ದೇಸಾಯಿ.