ಮರೆವು
ಅನುಪಮಾ ರಾಘವೇಂದ್ರ
ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು.
ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ ಹೋದ ಕ್ಷಣದಲ್ಲಿ ಸ್ಟೋರ್ ರೂಮಿಗೆ ಹೋದ ಕಾರಣ ನೆನಪಾಗಿತ್ತು. ಇಂತಹ ಘಟನೆಗಳು ಅದೆಷ್ಟೋ……
ಒಲೆಯಲ್ಲಿ ಹಾಲಿಟ್ಟು ಧಾರಾವಾಹಿ ನೋಡುತ್ತಾ ಮೈ ಮರೆತು ಹಾಲು ಉಕ್ಕಿ ಚೆಲ್ಲಿ ಹೋಗುವುದೋ…….. ಫೋನಿನಲ್ಲಿ ಮಾತನಾಡುತ್ತಾ ಇರುವಾಗ ತಳ ಹಿಡಿದು ಕರಟಿದ ವಾಸನೆ ಮೂಗಿಗೆ ಬಡಿದಾಗಲೇ ಒಲೆಯಲ್ಲಿ ಪಲ್ಯ ಬೇಯಿಸಲು ಇಟ್ಟಿದ್ದೇನೆಂಬ ನೆನಪು ಮರುಕಳಿಸುವುದೋ……. ಇನ್ನೊಂದು ರೀತಿಯ ಮರೆವು.
ಮದುವೆ , ಸಮಾರಂಭಗಳಿಗೆ ಹೋದಾಗ ಯಾರೋ ಬಂದು ನವಿರಾಗಿ ಬೆನ್ನು ತಟ್ಟಿ “ನಮಸ್ಕಾರ .ನನ್ನ ನೆನಪಿದೆಯಾ…?” ಎಂದಾಗ ಅವರನ್ನು ಎಲ್ಲೋ ನೋಡಿದ ನೆನಪು….. ಆದರೆ ಯಾರೆಂಬ ಸ್ಪಷ್ಟತೆ ಇಲ್ಲ….. ನೆನಪಿಲ್ಲವೆಂದು ಹೇಳಿದರೆ ತನಗೇ ಕೊರತೆ ಎಂಬ ಭಾವದಲ್ಲಿ “ಹೋ…. ಏನು ನೆನಪಿಲ್ಲದೆ. ಧಾರಾಳ ನೆನಪಿದೆ.” ಎಂದು ಹಲ್ಲು ಕಿಸಿದು ಮೆಲ್ಲನೆ ಅಲ್ಲಿಂದ ಜಾರಿಕೊಂಡ ಸಂದರ್ಭ ಅದೆಷ್ಟೋ…. ಆದರೆ ಕೆಲವೊಮ್ಮೆಅವರು “ಹಾಗಾದರೆ ನಾನು ಯಾರು ? ಹೇಳು ನೋಡುವ” ಎಂದಾಗ “ಬ್ಬೆ ಬ್ಬೆ ಬ್ಬೆ” ಎಂದು ಹೇಳಿ ಕಕ್ಕಾಬಿಕ್ಕಿಆದದ್ದೂ ಇದೆ. ಅವರ ಪರಿಚಯದ ಒಂದು ಎಳೆ ಸಿಕ್ಕಿದರೂ ಇಡೀ ಜಾತಕವನ್ನು ಜಾಲಾಡುವಷ್ಟು ಮಾಹಿತಿ ಸಂಗ್ರಹ ನಮ್ಮ ಬಳಿ ಇದ್ದರೂ ಆ ಎಳೆ ಸಿಕ್ಕದೆ ಒದ್ದಾಡುವ ಪ್ರಸಂಗ ಯಾರಿಗೂ ಬೇಡಪ್ಪಾ…
ಕೆಲವೊಂದು ವ್ಯಕ್ತಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪರಿಚಯವೇ ಇಲ್ಲದಂತೆ ನಡೆದುಕೊಳ್ಳುವುದನ್ನು ಏನೆನ್ನಬೇಕೋ…..? ಅದು ಜಾಣ ಮರೆವು ತಾನೇ…. ಜೀವನದ ಅನೇಕ ವಿಚಿತ್ರ ಸಂದರ್ಭಗಳಲ್ಲಿ ನಮ್ಮನ್ನು ಪಾರು ಮಾಡುವುದೂ ಜಾಣ ಮರೆವು. ಈ ಜಾಣ ಮರೆವಿನಿಂದ ಲಾಭ ಮಾಡಿಕೊಳ್ಳುವ ಕೆಟ್ಟ ಮನಸ್ಸಿನ ದುಷ್ಟ ಜನರೂ ಅದೆಷ್ಟೋ……
ಇವೆಲ್ಲಕ್ಕಿಂತಲೂ ಮುಖ್ಯವಾದ ಮರೆವು ರೋಗ ಅಲ್ಜ಼ೀಮರ್. ತಾನು ಯಾರು…? ತನ್ನವರು ಯಾರು ….? ತನ್ನ ಇರವಿನ ಅರಿವೇ ಇಲ್ಲದ ಪರಿಸ್ಥಿತಿ. ಹಸಿವು , ಬಾಯಾರಿಕೆ ಇಲ್ಲ . ಬಹಿರ್ದೆಸೆಯ ಪರಿಜ್ಞಾನ ಇಲ್ಲ. ಹಗಲು – ರಾತ್ರಿಗಳ ಪರಿವೇ ಇಲ್ಲ. ಉಟ್ಟ ಅರಿವೆಯ ಗೊಡವೆಯೇ ಇಲ್ಲ. ಅಬ್ಬಾ…..! ಕಲ್ಪನೆಯೇ ಭಯಂಕರ. ಮರೆವು ಒಂದು ವರ ಎಂದವರೆಲ್ಲಾ ಈ ಮರೆವು ಎಂಬುದು ದೊಡ್ದ ಶಾಪ ಎನ್ನದಿರುವರೇ…….
********
Idu harate alla.Idu nija sthithi.thiluvalike