
ಅಂಕಣ ಸಂಗಾತಿ–02

ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮಧು ವಸ್ತ್ರದ
“ಮುಂಬಯಿನ
ಗುರುಪೂರ್ಣಿಮ
ಉತ್ಸವ ಆಚರಣೆ..”

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ..
ಗುರುವಿನ ಪ್ರಭಾವದ ಬಗ್ಗೆ ಹಲವಾರು ಶ್ಲೋಕಗಳು, ಪುರಾಣಕಥೆಗಳು, ತತ್ವಗಳು ನಮ್ಮ ಸಂಸ್ಕೃತಿಯಲ್ಲಿ ಪ್ರಚಲಿತವಾಗಿವೆ…ಅವುಗಳಲ್ಲಿಈ ಶ್ಲೋಕವು ಗುರುಗಳ ಮಹತ್ವವನ್ನು ಉತ್ತಮವಾಗಿ ಬಿಂಬಿಸುತ್ತದೆ. ಗುರು ಬ್ರಹ್ಮನಂತೆ ಜ್ಞಾನವನ್ನು ಸೃಷ್ಟಿಸುತ್ತಾನೆ, ವಿಷ್ಣುವಿನಂತೆ ಕಾಪಾಡುತ್ತಾನೆ, ಶಿವನಂತೆ ಅಜ್ಞಾನವನ್ನು ನಾಶಮಾಡುತ್ತಾನೆ..ಅಂತಹ ಗುರು ನಮ್ಮೆಲ್ಲರ ಜೀವನದಲ್ಲಿ ಬೆಳಕಾಗಿರಲಿ. ಅವರ ಮಾರ್ಗದರ್ಶನ ಸದಾ ನಮ್ಮೊಂದಿಗೆ ಇರಲಿ ಎಂದು ಎಲ್ಲರೂ ಸಹಜವಾಗಿಯೇ ಬಯಸುತ್ತಾರೆ..
ಗುರು ಎಂದರೆ ಜೀವನದ ದಾರಿ ದೀಪ..
ಭಕ್ತನಿಗೆ ಆ ಭಗವಂತನ ಪ್ರತಿರೂಪ..
ಅಜ್ಞಾನದ ಅಂಧಕಾರದಿಂದ ಅರಿವಿನ ಬೆಳಕಿನೆಡೆಗೆ ಕೈಹಿಡಿದು ಕರೆದೊಯ್ಯುವ ಸಕಾರಾತ್ಮಕ ವ್ಯಕ್ತಿಯೇ ಗುರು..ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳ ಮೂಲಕ ಸುಖ ದುಃಖಗಳ ಅನುಭವ ಪಡೆವ ಮನುಜನಿಗೆ ಈ ಸುಖ ದುಃಖಗಳ ಆಚೆಗಿನ ಚಿರಂತರ ಆನಂದದ ಅನುಭೂತಿಯನ್ನು ಪಡೆಯಲು ಕಠಿಣ ಪರಿಶ್ರಮ ವಹಿಸಿ ಗುರಿ ಸಾಧನೆಯತ್ತ ಸಾಗಬೇಕಾಗುತ್ತದೆ..ಈ ಸಾಧನೆಯನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಪಡೆಯಲು ಅಸಾಧ್ಯ..ಶಿಷ್ಯನ ಅಜ್ಞಾನವನ್ನು ದೂರ ಮಾಡಿ, ಅವನ ಗುರಿ ಸಾಧನೆಗೆ ತಕ್ಕ ಸ್ಪೂರ್ತಿ, ಪ್ರೇರಣೆ, ಜ್ಞಾನ, ಮಾರ್ಗದರ್ಶನಗಳನು ನೀಡಿ ಅವನ ಉನ್ನತಿಗಾಗಿ ಶ್ರಮಿಸಿ ದಾರಿ ದೀಪವಾಗುವ ಶ್ರೇಷ್ಠ ವ್ಯಕ್ತಿಯೇ ಗುರು..ಗುರುವಿನ ಆದರ್ಶ ತತ್ವಗಳು,ಬೋಧನೆಗಳು ಶಿಷ್ಯನ ಜೀವನದ ಹಾದಿಯನ್ನು ಸತ್ಯ ಧರ್ಮಗಳಿಂದ ತುಂಬಿಸುತ್ತವೆ.ಗುರುವಿನ ದರ್ಶನ ಮತ್ತು ಮಾರ್ಗದರ್ಶನಗಳು ಶಿಷ್ಯನ ಜೀವನವನ್ನೇ ಬದಲಾಯಿಸಿ ಮುನ್ನಡೆಸುವಷ್ಟು ಪ್ರಭಾವಶಾಲಿಯಾಗಿರುತ್ತವೆ ಎನ್ನುವುದು ಸತ್ಯ…

ನಮ್ಮ ಭಾರತದಲ್ಲಿ ಪುರಾತನ ಕಾಲದಿಂದಲೇ ಗುರುಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ..
ಶ್ರೀಕೃಷ್ಣ ಭಗವಂತ ಗುರು ಸಾಂದೀಪನ ಮಹರ್ಷಿಗಳಿಂದ, ಶ್ರೀರಾಮ ಗುರು ವಸಿಷ್ಠರಿಂದ ಜ್ಞಾನವನ್ನು ಪಡೆದು ಮಹಾ ಪುರುಷೋತ್ತಮರಾಗಿ ದೈವತ್ವವನ್ನು ಪಡೆದರು..ಈ ಅವತಾರ ಪುರುಷರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರ ಜೀವನದಲ್ಲೂ ಗುರುವಿಗೆ ವಿಶೇಷ ಮಹತ್ವವಿದೆಯೆಂಬ ಮಾತು ಸತ್ಯ..
ಹಿಂದೆ ರಾಜಕುವರರು,ಬ್ರಾಹ್ಮಣರು ಕ್ಷತ್ರಿಯರು ತಮ್ಮ ಜೀವನದ ಪ್ರಾರಂಭಿಕ ಹಂತವನ್ನು ಗುರುಗಳಿಗೆ ಮೀಸಲಾಗಿಸಿ,ವೇದಪಾಠಶಾಲೆ, ಗುರುಕುಲಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು. ಆ ಗುರುಗಳು ಶಿಷ್ಯರಿಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಉತ್ತಮ ಮೌಲ್ಯಗಳು, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಯುದ್ಧತಂತ್ರಗಳು, ಆಡಳಿತ ಕೌಶಲ್ಯ, ಶಿಷ್ಟಾಚಾರಗಳು, ಶಿಸ್ತು, ಭಯ, ಭಕ್ತಿಗಳನ್ನು ಕಲಿಸಿ ಅವರ ಆತ್ಮವಿಶ್ವಾಸವನ್ನು ಬೆಳೆಸುತ್ತಿದ್ದರು..
ಆಧ್ಯಾತ್ಮಿಕ ಪರಂಪರೆಯ ಒಳಹೊಕ್ಕು ನೋಡಿದಾಗ ನಮ್ಮ ಪರಂಪರೆಯಲ್ಲಿ ಗುರುಗಳು ವಿಶೇಷ ಸ್ಥಾನ ಪಡೆದಿದ್ದಾರೆ. ಅವರ ಬೋಧನೆಗಳು, ತತ್ವಗಳು ಮತ್ತು ಮಾರ್ಗದರ್ಶನಗಳು ಶಿಷ್ಯರನ್ನು ಆಧ್ಯಾತ್ಮಿಕ ಮುಕ್ತಿಯ ಕಡೆಗೆ ಕೊಂಡೊಯ್ಯುವಂತಿವೆ..
ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು, ರಾಮಕೃಷ್ಣ ಪರಮಹಂಸರು, ದಾಸರು, ಬುದ್ಧ ಬಸವಾದಿ ಶರಣರು, ಶ್ರೀ ಸಾಯಿಬಾಬಾ, ಶ್ರೀ ಸ್ವಾಮಿ ಸಮರ್ಥರಂತಹ ಇನ್ನೂ ಅನೇಕ ಸಂತ ಮಹಾನುಭಾವರು ತಮ್ಮ ಶಿಷ್ಯಗಣಗಳಿಗೆ ಜ್ಞಾನವನಿತ್ತು ಅವರ ಜೀವನವನ್ನು ಸುಧಾರಿಸಿ ಉದ್ಧರಿಸಿದ್ದಾರೆ..ಅಂತಹ ಮಹಾನ್ ಗುರುಗಳ ಮಹತ್ವವನ್ನು ಸ್ಮರಿಸಿ ನಮಿಸಿ ಅವರಿಂದ ಆಶೀರ್ವಾದ ಪಡೆಯಬೇಕೆಂಬುದೇ ಗುರು ಪೂರ್ಣಿಮೆಯ ಪ್ರಮುಖ ಉದ್ದೇಶವಾಗಿದೆ..
ಗುರುಗಳ ಆದರ್ಶ, ತತ್ವಗಳು ಮತ್ತು ಬೋಧನೆಗಳು ಶಿಷ್ಯನ ಜೀವನದ ಹಾದಿಯನ್ನು ಶುದ್ಧತೆ,ಸತ್ಯ ಮತ್ತು ಧರ್ಮದಿಂದ ತುಂಬಿಸುತ್ತವೆ. ಗುರುವಿನ ದರ್ಶನ ಮತ್ತು ಮಾರ್ಗದರ್ಶನಗಳು ಶಿಷ್ಯನ ಜೀವನವನ್ನು ಉತ್ತಮವಾಗಿ ರೂಪಾಂತರಿಸಬಲ್ಲ ಮಹಾನ್ ಶಕ್ತಿಯನ್ನೊಳಗೊಂಡಿವೆ ಎಂದರೆ ಅತಿಶಯೋಕ್ತಿ ಇಲ್ಲ..
ಆಷಾಢ ಮಾಸದ ಪೂರ್ಣಿಮೆಯ ದಿನವನ್ನು, ಪವಿತ್ರ ಮಹಾಭಾರತ ಗ್ರಂಥ ರಚಿಸಿದ ಮಹಾ ಮುನಿ ವೇದವ್ಯಾಸರ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನ ಅವರು ತಮ್ಮ ಶಿಷ್ಯಗಣಗಳಿಗೆ ಮತ್ತು ಇನ್ನಿತರ ಋಷಿ ಮುನಿಗಳಿಗೆ ವೇದ ಪುರಾಣಗಳ ಅಲೌಕಿಕ ಜ್ಞಾನವನ್ನು ನೀಡಿದ ದಿನವೆಂಬ ಕಾರಣದಿಂದ ಅವರ ಗೌರವಾರ್ಥವಾಗಿ ಇದಕ್ಕೆ ವ್ಯಾಸಪೂರ್ಣಿಮ ಎಂದೂ ಕರೆಯಲಾಗುತ್ತದೆ..ವಿಶ್ವದ ಹಲವು ಭಾಗಗಳಲ್ಲಿ ಬೌದ್ಧರು, ಜೈನರು, ಹಿಂದೂಗಳು ತಮ್ಮ ಗುರುಗಳಿಗೆ ಭಕ್ತಿ ಗೌರವಗಳನ್ನು ಸಲ್ಲಿಸುವುದರ ಮೂಲಕ ಈ ಹಬ್ಬವನ್ನು ಆಚರಿಸಿ ಗುರುಗಳ ಆಶೀರ್ವಾದವನ್ನು ಪಡೆಯುತ್ತಾರೆ..

ಮುಂಬಯಿಯಲ್ಲಿ ಪ್ರಸ್ತುತ ಕಾಲದಲ್ಲೂ ಸಹ ಗುರು ಶಿಷ್ಯರ ಪರಂಪರೆಯನ್ನು, ಶಿಸ್ತು, ಭಕ್ತಿ ಬಾಂಧವ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗುರುಪೂರ್ಣಿಮ ಉತ್ಸವವನ್ನು ಆಯೋಜಿಸಲಾಗುತ್ತದೆ.
ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಸಹಕರಿಸಿ, ಸ್ಪೂರ್ತಿ, ಪ್ರೇರಣೆ, ಪ್ರೋತ್ಸಾಹ, ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸುವ ಉತ್ತಮ ಗುರುಗಳನ್ನು ಸತ್ಕರಿಸಲಾಗುತ್ತದೆ..
ಮುಂಬಯಿ ಮಹಾನಗರದಲ್ಲಿ ಗುರು ಪೂರ್ಣಿಮ ಉತ್ಸವ ಧಾರ್ಮಿಕ ಆಚರಣೆಗಷ್ಟೇ ಸೀಮಿತವಾಗಿಲ್ಲ..
ಅಧ್ಯಾತ್ಮಿಕ, ವೈಚಾರಿಕ, ಯೋಗ,
ಸಾಹಿತ್ಯ,ಸಂಗೀತ, ವಿವಿಧ ಕ್ರೀಡೆಗಳು,ಹೀಗೆ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈದ (ಶಿಕ್ಷಕರು) ಗುರುಗಳನ್ನು ಅವರ ಪ್ರಿಯ ವಿದ್ಯಾರ್ಥಿಗಳೆಲ್ಲರೂ ಕೂಡಿ ಪ್ರೀತ್ಯಾದರಗಳಿಂದ ಸತ್ಕರಿಸಿ,
ಸನ್ಮಾನಿಸುತ್ತಾರೆ..ಅವರ ಬಗೆಗಿನ ತಮ್ಮ ಗೌರವ,ಭಕ್ತಿ ಹಾಗೂ ಕೃತಜ್ಞತಾ ಭಾವನೆಯನ್ನು ವ್ಯಕ್ತಪಡಿಸುವ ವಿಶೇಷ ದಿನವನ್ನು ಗುರುಪೂರ್ಣಿಮ ಉತ್ಸವವೆಂದು ಆಚರಿಸುತ್ತಾರೆ..
ಇದು ಮಹಾರಾಷ್ಟ್ರದಲ್ಲಿ, ವಿಶೇಷತಃ ಮುಂಬಯಿ ಮಹಾನಗರದಲ್ಲಿ ಬಹಳಷ್ಟು ಪ್ರಚಲಿತವಾಗಿದೆ…
ಐವತ್ತಾರು ಕಲೆಗಳಲ್ಲಿ ಅತ್ಯಂತ ಶ್ರೇಷ್ಠ ಕಲೆಗಳೆಂದು ಪರಿಗಣಿಸುವ ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರದಲ್ಲಿ ಇಂದಿಗೂ ಗುರು-ಶಿಷ್ಯ ಪರಂಪರೆ ಜಾರಿಯಲ್ಲಿರುವುದರಿಂದ ಸಂಗೀತೋಪಾಸಕರು,ಸಂಗೀತ,
ನೃತ್ಯ, ಕಲಾಪ್ರೇಮಿಗಳು ಈ ಗುರುಪೂರ್ಣಿಮ ಉತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ.ಯಾವುದೇ ರೀತಿಯ ಅಂಧಶ್ರದ್ಧೆ,ಕಂದಾಚಾರ,ಮೂಢನಂಬಿಕೆಗಳು ಇಲ್ಲದ ಈ ಗುರುಪೂರ್ಣಿಮ ಉತ್ಸವ ಸಂಪೂರ್ಣ ಶ್ರದ್ಧೆ, ಉತ್ಸಾಹ, ಸಕಾರಾತ್ಮಕತೆ, ಕ್ರಿಯಾಶೀಲತೆ,ಭಾವಪರವಶತೆ, ಕಲಿತ ವಿದ್ಯೆಯ ಸಾರ್ಥಕತೆ,ಮತ್ತು ಧನ್ಯತೆಯ ಭಾವಗಳಿಂದ ತುಂಬಿದ ಹಬ್ಬವಾಗಿದೆ.
ವಿದ್ಯೆ ಕಲಿಯುವ ವಿದ್ಯಾರ್ಥಿಗಳಲ್ಲಿ ಕಲಿಯುತ್ತಿರುವ ಅಥವಾ ಕಲಿತ ವಿದ್ಯೆಯನ್ನು ಕಲೆಯನ್ನು ತಮ್ಮ ಗುರುವಿನೆದುರಿಗೆ ಪ್ರದರ್ಶಿಸುವ ಅದಮ್ಯ ಉತ್ಸಾಹ ಒಂದು ಕಡೆಯಾದರೆ..ತಾವು ಕಲಿಸಿದ ತಮ್ಮ ಶಿಷ್ಯನ ಕಲಾ ಪ್ರದರ್ಶನವನ್ನ ನೋಡಿ ಆನಂದಿಸಿ,ಪ್ರಶಂಸೆ ಮಾಡಿ,ಪ್ರೋತ್ಸಾಹ ನೀಡುವ ಗುರು ಇನ್ನೊಂದೆಡೆ..
ಜಾತಿ,ಮತ,ಗಂಡು, ಹೆಣ್ಣು, ಬಡವ, ಶ್ರೀಮಂತ, ಹಿರಿಯ, ಕಿರಿಯರೆಂಬ ಬೇಧ ಭಾವವಿಲ್ಲದೆ ಸಂತೋಷ ಸಂಭ್ರಮಗಳಿಂದ ಆಚರಿಸುವ ಮಹೋತ್ಸವವಿದು..
ಒಟ್ಟಾರೆ ಈ ಗುರು ಪೂರ್ಣಿಮ ಆಚರಣೆ ಗುರು ಶಿಷ್ಯರ ನಡುವಿನ ಪ್ರೀತಿ, ವಿಶ್ವಾಸಗಳ ಬಾಂಧವ್ಯವನ್ನು ಉಳಿಸಿ ಬೆಳೆಸುವ ದಿವ್ಯ ಭವ್ಯ ಪರಂಪರೆ ಎನಿಸಿದೆ..೨೦೦೩ ನೇ ಇಸವಿಯಲ್ಲಿ ನಾನು ಮೊದಲ ಬಾರಿ ನೋಡಿದ ಗುರುಪೂರ್ಣಿಮ ಉತ್ಸವವನ್ನು ಜೀವನದಲ್ಲಿ ಎಂದೂ ಮರೆಯಲಾರೆ..ಬಾಂದ್ರಾದ ಸುಪ್ರಸಿದ್ಧ ಶಾರದಾ ಸಂಗೀತ ವಿದ್ಯಾಲಯದಲ್ಲಿ ನನ್ನ ಮಗಳು ಅಪೂರ್ವಳನ್ನು ಕಥಕ್ ನೃತ್ಯದ ಕ್ಲಾಸ್ ಗೆ ಮತ್ತು ಮಗ ಅಭಿಷೇಕ್ ನನ್ನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಕ್ಲಾಸ್ ಗೆ ಸೇರಿಸಿದ್ದೆ..ಅಲ್ಲಿನ ಶಿಸ್ತು, ಸಂಸ್ಕಾರ, ಸಂಗೀತಮಯ ವಾತಾವರಣದಿಂದ ಅತ್ಯಂತ ಪ್ರಭಾವಿತಳಾಗಿದ್ದ ನನಗೆ ೨೦೦೩ರಲ್ಲಿ ವಿದ್ಯಾಲಯದ ಗುರುಪೂರ್ಣಿಮ ಉತ್ಸವದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಸಿಕ್ಕಿತ್ತು. ಅಂದಿನ ಕಾರ್ಯಕ್ರಮಕ್ಕೆ ಸುಪ್ರಸಿದ್ಧ ಸಂತೂರ ವಾದಕರಾದ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ವಿಜೇತ ಪಂಡಿತ್ ಶಿವಕುಮಾರ್ ಶರ್ಮಾ ಜೀ ಅವರು ಮುಖ್ಯ ಅತಿಥಿಯಾಗಿದ್ದರು..
ಅಂದಿನ ಸಭಾ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಅರ್ಧ ಗಂಟೆ ಮೊದಲೇ ನಾನು ನನ್ನ ಮಕ್ಕಳೊಡನೆ ವಿದ್ಯಾಲಯದ ಅಂಗಳದಲ್ಲಿ ಕುಳಿತಿದ್ದೆ..ಸ್ವಲ್ಪ ಸಮಯದಲ್ಲೇ ಗೇಟಿನಿಂದ ಒಳಗೆ ಬೆಳಗಿನ ಸೂರ್ಯನಂತೆ ದಿವ್ಯತೇಜಸ್ಸಿನಿಂದ ಥಳ ಥಳ ಹೊಳೆವ ವ್ಯಕ್ತಿಯೊಬ್ಬರು ಒಳಗೆ ಪ್ರವೇಶಿಸಿದರು..ಅವರನ್ನು ಕಂಡೊಡನೆ ಅಲ್ಲಿದ್ದ ಹಲವಾರು ಜನ ಅತ್ಯಂತ ಆದರಾಭಿಮಾನಗಳಿಂದ ನಮಸ್ತೇ ಪಂಡಿತ್ ಜೀ ಎನ್ನುತ್ತ ದೀರ್ಘ ದಂಡ ನಮಸ್ಕಾರ ಮಾಡತೊಡಗಿದರು. ನನಗರಿವೇ ಇಲ್ಲದಂತೆ ನಾನೂ ಸಹ ನಮಸ್ತೆ ಪಂಡಿತ್ ಜೀ ಎಂದು ಕೈ ಜೋಡಿಸಿದೆ ಮರು ಕ್ಷಣದಲ್ಲೇ ಅವರಿಂದ ಮುಗುಳ್ನಗೆಯೊಂದಿಗೆ ಜೀ ನಮಸ್ತೆ ಎಂಬ ಪ್ರತ್ಯುತ್ತರ ಬಂತು..ಆ ವಿನಯಭರಿತ ಮೃದು ಮಾತು ಕೇಳಿ ನಾನು ದಂಗಾದೆ. ಮುಂದಿನ ಎರಡು ಗಂಟೆಗಳ ಕಾಲ ಆ ಅದ್ಭುತ ಪ್ರತಿಭೆಯ ಹಿರಿಯ ಕಲಾವಿದರ ಸಂತೂರ್ ವಾದನದ ಮತ್ತು ಆಕರ್ಷಕ, ಮೃದು ವ್ಯಕ್ತಿತ್ವದ ಪ್ರಭಾವ ವಲಯದಲ್ಲಿ ನಾನು ಸಿಲುಕಿಬಿಟ್ಟೆ..ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗಿದ ಮೇಲೂ ಸಹ ಅವರಾಡಿದ ಹಿತನುಡಿಗಳು ನನ್ನ ಮನದೊಳಗೆ ಅಚ್ಚೊತ್ತಿದ್ದವು..
“ತನ್ನಲ್ಲಿರುವ ಯಾವುದೇ ರೀತಿಯ ಕಲೆಯನ್ನು ನಿಸ್ವಾರ್ಥದಿಂದ ಇತರರಿಗೆ ಕಲಿಸುವ ಗುರು ಸದಾಕಾಲವೂ ಉನ್ನತ ಸ್ಥಾನದಲ್ಲಿಯೇ ಇರುತ್ತಾನೆ..
ಅವನಿಗೆ ಮಾನ ಸಮ್ಮಾನಗಳನ್ನು ನೀಡುವುದು ನಿಜವಾದ ಧರ್ಮ, ಇದನ್ನು ನಮ್ಮ ಮಕ್ಕಳಿಗೆ ಚಿಕ್ಕವಯಸ್ಸಿಂದಲೇ ಕಲಿಸಬೇಕು..”
ಪಂಡಿತ್ ಶಿವಕುಮಾರ್ ಶರ್ಮಾ ಜೀ ಅವರು ಹೇಳಿದ ಈ ಮೇಲಿನ ನುಡಿ ನನ್ನ ಮನದಲ್ಲಿ ಅಚ್ವಳಿಯದೇ ಉಳಿಯಿತು..ಆಂದಿನಿಂದ ಇಂದಿನವರೆಗೂ ಪ್ರತಿವರ್ಷ ಗುರುಪೂರ್ಣಿಮ ಹಬ್ಬ ನಮ್ಮ ಮನೆಯಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ..
ನನ್ನ ಮಗನ ಸಂಗೀತದ ಗುರು ಶ್ರೀ ಮದನ್ ಪ್ರಸಾದ್ ಜೀ ಅವರಿಗಾಗಿ ವಿಶೇಷ ಔತಣ ಕೂಟ ಏರ್ಪಡಿಸಿ, ಶಾಲು, ಶ್ರೀಫಲ (ತೆಂಗಿನಕಾಯಿ), ಮಿಠಾಯಿ ಮತ್ತು ಕಿರುಕಾಣಿಕೆಗಳನ್ನು ನೀಡಿ ಗೌರವಿಸುವ ಪದ್ದತಿಯನ್ನು ರೂಢಿಸಿಕೊಂಡಿರುವೆ. ನನ್ನ ಮಗಳ ಸಂಗೀತದ ಗುರು ಶ್ರೀಮತಿ ಮನಿಷಾ ಗೋರೆ ಮತ್ತು ಕಥಕ್ ನೃತ್ಯದ ಗುರು ಶ್ರೀಮತಿ ಶೀಲಾ ಮೆಹ್ತಾ ಅವರಿಗೂ ಇದೇ ರೀತಿ ಸತ್ಕಾರ ನಡೆಯುತ್ತದೆ..ನಾನು ಸಂಗೀತ ಕಲಿಯುತ್ತಿರುವ ಸ್ವರಮೇಘಾ ಅಕ್ಯಾಡಮಿಯ ಗುರು ಶ್ರೀಮತಿ ಯೋಗಿತಾ ಬೋರಾಟೆ ಅವರಿಗಾಗಿ ನನ್ನ ಆಯೋಜನೆಯ ಅಡಿಯಲ್ಲಿ ಒಂದು ವಿಶೇಷ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನೆರವೇರುತ್ತದೆ..
ನಮ್ಮ ಸೊಸೈಟಿಯ ಪುಟ್ಟ ಮಕ್ಕಳಿಗಾಗಿ, ಕೆಲವು ಸಂಗೀತಪ್ರೇಮಿ ಸ್ನೇಹಿತರ ಗುಂಪಿಗಾಗಿ ಕಾರ್ಯಕ್ರಮಗಳು ನಡೆಯುತ್ತವೆ..ಆಷಾಢ ಮಾಸದ ಹುಣ್ಣಿಮೆಯಿಂದ ಹಿಡಿದು ಮುಂದಿನ ಶ್ರಾವಣದ ಹುಣ್ಣಿಮೆಯವರೆಗೂ ಅವರವರ ಅನುಕೂಲಕ್ಕೆ ತಕ್ಕಂತೆ ಸಮಯ ಹೊಂದಿಸಿ ಈ ರೀತಿಯ ಗುರುಪೂರ್ಣಿಮ ಆಚರಣೆಗೈವ ಪದ್ಧತಿ ಮುಂಬಯಿನಲ್ಲಿದೆ..
ಆಷಾಢದ ಜಿಟಿಜಿಟಿ ಮಳೆ ಇರಲಿ, ಭೋರೆಂದು ಸುರಿವ ಮಳೆ ಇರಲಿ,
ಗುರುಪೂರ್ಣಿಮ ಆಚರಣೆಯ ಸಂಭ್ರಮ ಮಾತ್ರ ಎಳ್ಳಷ್ಟೂ ಕಡಿಮೆ ಆಗುವುದಿಲ್ಲ..
ಸಾಂಪ್ರದಾಯಿಕ ಆಚರಣೆಗಳೊಂದಿಗೆನಾವೀನ್ಯತೆಯನ್ನು ಬೆರೆಸಿ ಸಂಭ್ರಮಿಸುವುದರಲ್ಲಿ ಮುಂಬಯಿಕರರದು ಎತ್ತಿದ ಕೈ.. ಹೊಸದೆಲ್ಲವನ್ನೂ ಮನದಾಳದಿಂದ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಇವರ ವಿಶಾಲ ಮನೋಭಾವ ಅತ್ಯಂತ ಶ್ಲಾಘನೀಯವಾಗಿದೆ.. “ಹಳೆಯ ಸಂಪ್ರದಾಯಗಳು ಮತ್ತು ಹೊಸ ದೃಷ್ಟಿಕೋನಗಳ ಸಮನ್ವಯವು” ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಕಾಪಾಡಿ ಅದರ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ವೈವಿಧ್ಯತೆಯನ್ನು ತಂದು ಹೊಸ ಪೀಳಿಗೆಯಲ್ಲಿ ಆಸಕ್ತಿಯನ್ನು ಬೆಳೆಸ ಬಲ್ಲದೆಂಬ ವಿಚಾರಧಾರೆಯೊಂದಿಗೆ ನಾನು ಆರಂಭಿಸಿದ ಹೊಸರೀತಿಯ ಗುರುಪೂರ್ಣಿಮ ಆಚರಣೆ ಅತ್ಯಂತ ಯಶಸ್ವಿಯಾಗಿ ಜನಮನ್ನಣೆ ಗಳಿಸಿದೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ..
ಜೀವನದಲ್ಲಿ ಪ್ರಾಪ್ತರಾದ ನಮ್ಮ ಗುರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಆದರಿಸಿ ಸತ್ಕರಿಸುವಂತೆ, ಅಸ್ಮಿತಾ ಸಂಸ್ಥೆಯಲ್ಲಿ, ವಿಶೇಷ ಚೇತನ ಮಕ್ಕಳಿಗೆ ವೃತ್ತಿಪರ ತರಬೇತಿ ನೀಡುವ, ವಿವಿಧ ರೀತಿಯ ಕಲೆಗಳನ್ನು ಕಲಿಸುವ ಶಿಕ್ಷಕರನ್ನು (ಗುರುಗಳನ್ನು) ಸತ್ಕಾರ ಮಾಡುವ ಅಭಿಯಾನ ಕಳೆದ ೪-೫ ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದೆ..ಈ ಕಾರ್ಯವನ್ನು ನಮ್ಮ ನಾರಿಶಕ್ತಿ ಸಂಘದ ಸದಸ್ಯೆಯರು ಅಥವಾ ಸಮಾನ ಮನಸ್ಕರಾದ ಗೆಳತಿಯರ ಗುಂಪುಗಳು ಒಟ್ಟಿಗೆ ಸೇರಿ ನಿರ್ವಹಿಸುತ್ತೇವೆ..
ಬಡತನ ಮತ್ತು ಅಂಗವಿಕಲತೆಗಳ ಜೋಡಿ ಭಾರವನು ಹೆಗಲ ಮೇಲೆ ಹೊತ್ತಿದ್ದರೂ ಸಹ,ಧೃತಿಗೆಡದಂತೆ ವಿವಿಧ ಕಲೆ,ಕಸುಬುಗಳನ್ನು ಕಲಿತು ಸ್ವಾವಲಂಬಿಗಳಾಗಿ ನೆಮ್ಮದಿಯ ಜೀವನ ನಿರ್ವಹಿಸುತ್ತಿರುವ ಅಸ್ಮಿತಾ ಫೌಂಡೇಶನ್ ನ ವಿಶೇಷ ಚೇತನ ಮಕ್ಕಳ ಮೇಲೆ ನನಗೆ ಅತ್ಯಂತ ಅಭಿಮಾನವಿದೆ..ಈ ರೀತಿಯ ಮಕ್ಕಳಿಗೆ ಜೀವನ ನಿರ್ವಹಣೆಯ ಕಲೆಗಳನ್ನು ಕಲಿಸುವ ತರಬೇತಿ ಕೊಡುವ ಅಲ್ಲಿಯ ಶಿಕ್ಷಕರ ಕಾರ್ಯದಕ್ಷತೆ, ತಾಳ್ಮೆ ಮತ್ತು ಪ್ರತಿಭೆಯಂತೂ ನಿಜಕ್ಕೂ ಅತ್ಯಂತ
ಪ್ರಶಂಸನೀಯ..ಸಾಮಾನ್ಯ ಮಕ್ಕಳಿಗೆ ಕಲಿಸುವಾಗ ಪಡುವ ಶ್ರಮಕ್ಕಿಂತ ನಾಲ್ಕು ಪಟ್ಟು ಹೆಚ್ಚು ಶ್ರಮ ತಾಳ್ಮೆಗಳು ಇಲ್ಲಿ ಬೇಕಾಗುತ್ತವೆ..ಅವರ ಈ ಅಮೂಲ್ಯ ಸೇವೆಗಾಗಿ ನಾವು ನೀಡುವ ಆದರದ ಉಡುಗೊರೆ, ಪ್ರಶಂಸೆಗಳು ಆ ಮನಗಳಿಗೆ ಸ್ವಲ್ಪ ಮಟ್ಟಿಗಾದರೂ ಸಂತಸವನ್ನು ಉಂಟು ಮಾಡುತ್ತವೆ ಎಂಬ ಮಾತು ಸತ್ಯ..ಹೀಗೆ ಮುಂಬಯಿಯಲ್ಲಿನ ವಿಭಿನ್ನ ಗುರುಪೂರ್ಣಿಮ ಉತ್ಸವದ ಆಚರಣೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ..ಮುಕ್ತ ಮನದ ಅಭಿಪ್ರಾಯಗಳನ್ನು ಮನದಾಳದಿಂದ ಸ್ವಾಗತಿಸುತ್ತೇನೆ..
ಮಧು ವಸ್ತ್ರದ್
ಮುಂಬಯಿ..
