ಕಾವ್ಯ ಸಂಗಾತಿ
ಮಮತಾ ಶಂಕರ್
ಮಾತು ಮೌನ

ಮಾತು ಊರೆಲ್ಲಾ ಮೆರವಣಿಗೆ
ಮಾಡಿ ಬರುವುದರಲ್ಲಿ
ಮೌನ ಎದೆಯ ಸಾಮ್ರಾಜ್ಯ
ಆಳುತ್ತಿತ್ತು.
ಎಲ್ಲರ ನಾಲಿಗೆ ಮೇಲೆ
ನಲಿದಾಡುವೆ ಎಂಬ ಹಮ್ಮು ಮಾತಿನದು
ಶಬ್ದದ ಹಂಗಿಲ್ಲದವರು ಎಂಬ ಹೆಮ್ಮೆ ಮೌನದ್ದು
ಹೊರ ಬಿದ್ದ ಮಾತುಗಳಿಗೆ
ನೂರಾರು ಚಪ್ಪಾಳೆ
ಇದು ನೋಡು ತಾಕತ್ತು
ಎಂಬ ಜಂಭ ಮಾತಿನದು
ಆಡದೆ ಉಳಿದ
ಮಾತುಗಳಿಗರ್ಥ ನೂರಿದೆ
ಅರ್ಥೈಸಿಕೋ ಬೇಕಾದ್ದು ಎಂಬ
ದೌಲು ಮೌನದ್ದು
ನಾಲಿಗೆಯನಾಳುವ ಅರಸ ನಾನೇ
ಎಂಬ ಧಿಮಾಕಿನ ಮಾತು
ಕಣ್ಣ ತುಳುಕಿನಲ್ಲೇ ಸಾವಿರ
ಹೇಳುವೆ ನೋಡು ಎಂದು ಬೀಗುವ ಮೌನ
ಆಡಿದ ಮಾತು ಹಗುರವಾಯ್ತು
ಉಳಿದ ಮೌನ ಭಾರವಾಯಿತು
ಅಬ್ಬರಿಸುವ ಮಾತು
ನಸುನಗುವ ಮೌನ
ಮಾತುಗಳು ಮನ ಒಡೆದವು
ಮಾತುಗಳು ಮನೆ ಒಡೆದವು
ಸಾಮ್ರಾಜ್ಯಗಳು ಬರಿದಾದವು
ಮಾತುಗಳು ತಣ್ಣಗೆ
ಮೌನದೊಳಗೆ ಅಡಗಿದವು….
ಆಗಲೇ ಸಂಶಯ ಬಂದದ್ದು
ಗೆದ್ದದ್ದು ಮಾತೋ
ಮೌನವೋ…
ಮಮತಾ ಶಂಕರ್

Beautiful
ಗೆಲ್ಲುವುದು ಯಾವಾಗಲೂ ಮೌನವೇ ಅಲ್ವಾ ಮಾ ..ಚೆಂದ ಕವಿತೆ …
ತುಂಬ ಅರ್ಥಪೂರ್ಣ..