ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಯೋಗ ಸಾಧಕ ಹಡಪದ ರೇಚಣ್ಣ

ಕಾಲ -ಹನ್ನೆರಡನೆಯ ಬಸವ ಸಮಕಾಲೀನ ಶರಣರು
ಒಟ್ಟು -ವಚನ – 9
ಅಂಕಿತ -ನಿಃಕಳಂಕ ಕೂಡಲ ಚೆನ್ನ ಸಂಗಮದೇವ
ಕಾಯಕ: ಹಡಪದ (ಸಂಚಿ) ಕಾಯಕ (ತಾಂಬೂಲಕರಂಡ)
ಇವನ ಕುಟುಂಬ ಊರು- ವಿವರ ಲಭ್ಯವಾಗಿಲ್ಲ
ಲಿಂಗೈಕ್ಯ -ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ

ತಾಂಬೂಲ ಹಂಚುವ  ಕಾಯಕವನ್ನುಹಡಪದ ರೇಚಣ್ಣ   ಕೈಗೊಂಡಿದ್ದ ಈತ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣರ ದಂಡಿನೊಂದಿಗೆ ಉಳುವಿಯ ಹೋಗಿದ್ದನೆಂದು ತಿಳಿಯುತ್ತದೆ.  ಶಿವಭಕ್ತರ ಗುಣಲಕ್ಷಣ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಅವುಗಳ ವಸ್ತು.
  ಮಹಾಮನೆಯಲ್ಲಿ ಪ್ರಸಾದವನ್ನು ಹಂಚುವುದು, ಪ್ರಸಾದವಾದ ಮೇಲೆ ಎಲೆ ಅಡಿಕೆ ತಾಂಬೂಲವನ್ನು ಹಂಚುವುದು ಅವನ ಕಾಯಕವಾಗಿತ್ತು.

 ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.
ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ
ಘಟ್ಟಿವಾಳ ಮದ್ದಯ್ಯನು.
ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.
ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.
ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.
ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.
ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.
ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.
ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.
ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

ಹಡಪದ ರೇಚಣ್ಣನ ಹೆಸರಿನ ಮುಂದೆ ಇರುವ ಹಡಪದ – ಅಡಪ -ಸಂಚಿ- ಎಲೆ ಅಡಿಕೆ ತಾಂಬೂಲ ಸಂಗ್ರಹಿಸಿ   ಇಡುವ ಸಾಧನ ಕಟ್ಟಿಗೆಯ ಡಬ್ಬಿ .  ಇವನೊಬ್ಬ ಅನುಭವಿ ಸಾಧಕ, ಈತನ ವಚನಾಂಕಿತವನ್ನು ಅವಲೋಕಿಸಿದಾಗ ,ಈತನು ಚೆನ್ನಬಸವಣ್ಣನಿಂದ ಲಿಂಗ ದೀಕ್ಷೆ ಪಡೆದು ಪ್ರಭುದೇವ ಬಸವಣ್ಣ ಘಟ್ಟಿವಾಳಯ್ಯ ಮರುಳಶಂಕರ ದೇವರ ಜೊತೆಗೆ ಲಿಂಗಾಂಗ ಸಂಧಾನ ಮಾಡಿರುವ ವಿಚಾರ ಈತನ ವಚನಗಳಿಂದ ಗೊತ್ತಾಗುತ್ತದೆ . ಯೋಗ ಸಾಧಕರಲ್ಲಿ ಚಕ್ರಗಳ ಬಗ್ಗೆ ಮಾತನಾಡುವ ಮಹರ್ಷಿಗಳ ಯೋಗಿಗಳ ಚಕ್ರಗಳ ವ್ಯಾಖ್ಯಾನಕ್ಕೂ ಮತ್ತು ಶರಣು ಸಮ್ಮತವಾದ ಭಾವ ಲಿಂಗ ಪ್ರಾಣಲಿಂಗ ವಾದವನ್ನು ತನ್ನ ಶರೀರ ಚಕ್ರಗಳಲ್ಲಿನ ಶಕ್ತಿ ಕೇಂದ್ರ ಗುರುತಿಸುವುದು ಅತ್ಯಂತ ಸುಂದವಾಗಿದೆ.

ಎನ್ನಾಧಾರ ಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು  
—————————————————————————————-
   ಯೋಗ ಶಾಸ್ತ್ರದಲ್ಲಿನ   ಚಕ್ರಗಳಲ್ಲಿ   ಮೂಲಾಧಾರವೇ ಮೊದಲ ಚಕ್ರ-ಅದು ಬೆನ್ನು ಹುರಿಯ ಕೊನೆಗೆ ಇರುವುದು ,ಎಲ್ಲಾ ಚಕ್ರಗಳಿಗೆ ಶಕ್ತಿ ಸಂಚಯ ಇದರಿಂದಲೇ ಆರಂಭ. ಮೂಲಾಧಾರ ಎಂದರೆ ‘ಮೂಲ ಬೆಂಬಲ’, ಇದು ಆರು  ಚಕ್ರಗಳಲ್ಲಿ ಮೊದಲನೆಯದು. ಮೊದಲ ಚಕ್ರವು ನಿಮ್ಮ ಭೌತಿಕ ದೇಹ ಮತ್ತು ಭೂಮಿಗೆ ಅದರ ಸಂಪರ್ಕಕ್ಕೆ ಅನುರೂಪವಾಗಿದೆ. ಇದು ಆಹಾರ ಮತ್ತು ಆಶ್ರಯದಂತಹ ನಿಮ್ಮ ಮೂಲಭೂತ ಅಗತ್ಯಗಳಿಗೆ ಸಂಬಂಧಿಸಿದೆ. ಮುಲಾಧಾರವು ನಿಮ್ಮ ಬೆನ್ನುಮೂಳೆಯ ತಳದಲ್ಲಿ ಇದೆ, ಅದು ನಿಮ್ಮ ಸೊಂಟದೊಂದಿಗೆ (ಸಕ್ರಮ್ ಮೂಳೆ) ಸಂಧಿಸುವ ಸ್ಥಳದ ಕೆಳಗೆ.
 ಎನ್ನಾಧಾರ ಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.ಬಸವಣ್ಣನು ಮೂಲಾಧಾರ ಚಕ್ರದಲ್ಲಿ ಮುಹೂರ್ತಗೊಂಡನು ಎಂದು ಹೇಳುತ್ತಾನೆ.

ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
——————————————————————————–
ದೇಹದ ಮೂಲಕ ಪ್ರಯಾಣಿಸುವಾಗ, ಎರಡನೇ ಚಕ್ರದ ಬಗ್ಗೆ ಮಾತನಾಡಲು ಸಮಯವಾಗಿದೆ – ಸ್ಯಾಕ್ರಲ್ ಅಥವಾ ಸ್ವಾಧಿಷ್ಠಾನ ಚಕ್ರ. ನೀವು ಈ ಚಕ್ರವನ್ನು ಹೊಟ್ಟೆಯ ಕೆಳಭಾಗದಲ್ಲಿ (ಹೊಟ್ಟೆ ಗುಂಡಿಯ ಕೆಳಗೆ ಒಂದೆರಡು ಬೆರಳುಗಳು) ಪತ್ತೆ ಮಾಡಬಹುದು ಆದರೆ ನೀವು ದೇಹದ ಮುಂಭಾಗಕ್ಕಿಂತ ಹೆಚ್ಚಾಗಿ ಮಧ್ಯದಲ್ಲಿ ಅದನ್ನು ದೃಶ್ಯೀಕರಿಸಲು ಬಯಸಬಹುದು. ಅಂತಹ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು ಮುಹೂರ್ತಗೊಂಡನು  ಎಂದು ಹೇಳುತ್ತಾನೆ.  


ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಘಟ್ಟಿವಾಳ ಮದ್ದಯ್ಯನು.

———————————————————————————————————–
ಮೂರನೇ ಚಕ್ರ . ಕೋಪ ಅಥವಾ ಉರಿಯುತ್ತಿರುವ ಸ್ವಯಂ ನಿಯಂತ್ರಣವನ್ನು ವ್ಯಕ್ತಪಡಿಸುತ್ತದೆ.ಚಕ್ರದ ಕಾರ್ಯ -ಸೊಂಟದ ಕೇಂದ್ರ ಎಂದೂ ಕರೆಯಲ್ಪಡುವ ಮಣಿಪುರ ಚಕ್ರವು ಹೊಕ್ಕುಳದ ಎದುರು ಸೊಂಟದ ಪ್ರದೇಶದಲ್ಲಿದೆ. ಮಣಿಪುರ ಚಕ್ರದ ನರಗಳು ಜೀರ್ಣಾಂಗ ವ್ಯವಸ್ಥೆ ಮತ್ತು ಎಲ್ಲಾ ಆಂತರಿಕ ಅಂಗಗಳು ಮತ್ತು ಗ್ರಂಥಿಗಳಾದ ಗುಲ್ಮ, ಯಕೃತ್ತು, ಮೂತ್ರಪಿಂಡಗಳು ಮತ್ತು ಮೂತ್ರಜನಕಾಂಗದ ಕಿಬ್ಬೊಟ್ಟೆಯ ಕುಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮಣಿಪುರ ಚಕ್ರವು ಶಕ್ತಿಯನ್ನು ಸಂಗ್ರಹಿಸುವ ಮತ್ತು ವಿತರಿಸುವ ಏಳು ಚಕ್ರಗಳಲ್ಲಿ ಒಂದಾಗಿದೆ; ಚಕ್ರಗಳು ಮಾನಸಿಕ ಅಥವಾ ಮಾನಸಿಕ ಪ್ರವೃತ್ತಿಗಳು, ಅಭ್ಯಾಸಗಳು ಮತ್ತು ಆಸೆಗಳ ಭಂಡಾರವಾಗಿಯೂ ಕಾರ್ಯನಿರ್ವಹಿಸುತ್ತವೆ, ಇದು ಉಪಪ್ರಜ್ಞೆ ಮನಸ್ಸಿನಿಂದ ಹುಟ್ಟುತ್ತದೆ. ಭಕ್ತನ ಕೋಪ ತಪಗಳನ್ನು ನಿಯಂತ್ರಿಸುವವನು ಘಟ್ಟಿವಾಳಯ್ಯನು  ಅಂತೆಯೇ
ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಘಟ್ಟಿವಾಳ ಮದ್ದಯ್ಯನು.

ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು
———————————————————————————————-
ಅನಾಹತ ನಾದ = ಶಾಶ್ವತ ಧ್ವನಿ  ಓಂ (ಓಂಕಾರ )
ಅನಾಹತ ಚಕ್ರವು ಎದೆಯ ಮಧ್ಯದಲ್ಲಿ, ಹೃದಯಕ್ಕೆ ಹತ್ತಿರದಲ್ಲಿದೆ. ಇದರ ಮಂತ್ರ ಯಮ್ . ಅನಾಹತ ಚಕ್ರದ ಬಣ್ಣ ತಿಳಿ ನೀಲಿ, ಆಕಾಶದ ಬಣ್ಣ. ಅನುಗುಣವಾದ ಅಂಶವೆಂದರೆ ಗಾಳಿ. ಗಾಳಿಯು ಸ್ವಾತಂತ್ರ್ಯ ಮತ್ತು ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ. ಇದರರ್ಥ ಈ ಚಕ್ರದಲ್ಲಿ ನಮ್ಮ ಪ್ರಜ್ಞೆಯು ಅನಂತವಾಗಿ ವಿಸ್ತರಿಸಬಹುದು.

ಅನಾಹತ ಚಕ್ರವು ದೈವಿಕ ಸ್ವಯಂ (ಆತ್ಮ) ಸ್ಥಾನವಾಗಿದೆ. ಅನಾಹತ ಚಕ್ರದ ಸಾಂಕೇತಿಕ ಚಿತ್ರದಲ್ಲಿ ಹನ್ನೆರಡು ದಳಗಳನ್ನು ಹೊಂದಿರುವ ಕಮಲವಿದೆ. ಇವು ಹೃದಯದ ದೈವಿಕ ಗುಣಗಳಾದ ಆನಂದ, ಶಾಂತಿ, ಸಾಮರಸ್ಯ, ಪ್ರೀತಿ, ತಿಳುವಳಿಕೆ, ಸಹಾನುಭೂತಿ, ಸ್ಪಷ್ಟತೆ, ಶುದ್ಧತೆ, ಏಕತೆ, ಸಹಾನುಭೂತಿ, ದಯೆ ಮತ್ತು ಕ್ಷಮೆಯನ್ನು ಪ್ರತಿನಿಧಿಸುತ್ತವೆ. ಆದಾಗ್ಯೂ, ಹೃದಯ ಕೇಂದ್ರವು ಭಾವನೆಗಳು ಮತ್ತು ಭಾವನೆಗಳ ಕೇಂದ್ರವಾಗಿದೆ. ಅದರ ಸಾಂಕೇತಿಕ ಚಿತ್ರದಲ್ಲಿ ಎರಡು ನಕ್ಷತ್ರಾಕಾರದ, ಅತಿಕ್ರಮಿಸಿದ ತ್ರಿಕೋನಗಳಿವೆ. ಒಂದು ತ್ರಿಕೋನದ ತುದಿಯು ಮೇಲಕ್ಕೆ, ಇನ್ನೊಂದು ತುದಿಯು ಕೆಳಗೆ ಬಿಂದುಗಳು. ಅನಾಹತ ಚಕ್ರದ ಶಕ್ತಿಯು ಆಧ್ಯಾತ್ಮಿಕ ಪ್ರಜ್ಞೆಯ ಕಡೆಗೆ ಹರಿಯುವಾಗ, ನಮ್ಮ ಭಾವನೆಗಳು ಭಕ್ತಿ, ಶುದ್ಧ, ದೈವಿಕ ಪ್ರೀತಿ ಮತ್ತು ಭಕ್ತಿಯಾಗಿ ವ್ಯಕ್ತವಾಗುತ್ತವೆ. ಆದಾಗ್ಯೂ, ನಮ್ಮ ಪ್ರಜ್ಞೆಯು ಲೌಕಿಕ ಭಾವೋದ್ರೇಕದ ಕ್ಷೇತ್ರಗಳಲ್ಲಿ ಮುಳುಗಿದರೆ, ನಮ್ಮ ಭಾವನೆಗಳು ಗೊಂದಲಕ್ಕೊಳಗಾಗುತ್ತವೆ ಮತ್ತು ಅಸಮತೋಲನಗೊಳ್ಳುತ್ತವೆ. ಆಗ ಆಸೆ, ಅಸೂಯೆ, ದುಃಖ ಮತ್ತು ಹತಾಶೆ ನಮ್ಮನ್ನು ಆವರಿಸುತ್ತದೆ.

ಅನಾಹತವು ಪಾಯಸಿಯ ಸ್ಥಾನವಾಗಿದೆ. ಈ ಚಕ್ರದ ಮೇಲಿನ ಏಕಾಗ್ರತೆಯು ಒಬ್ಬ ಲೇಖಕ ಅಥವಾ ಕವಿಯಾಗಿ ಒಬ್ಬರ ಪ್ರತಿಭೆಯನ್ನು ಅಭಿವೃದ್ಧಿಪಡಿಸಬಹುದು. ಅನಾಹತ ಚಕ್ರದಿಂದ ಉದ್ಭವಿಸುವ ಮತ್ತೊಂದು ಶಕ್ತಿ ಸಂಕಲ್ಪ ಶಕ್ತಿ, ಬಯಕೆಗಳನ್ನು ಪೂರೈಸುವ ಶಕ್ತಿ. ನೀವು ಬಯಕೆಯನ್ನು ಪೂರೈಸಲು ಬಯಸಿದಾಗ ನಿಮ್ಮ ಹೃದಯದಲ್ಲಿ ಅದರ ಮೇಲೆ ಕೇಂದ್ರೀಕರಿಸಿ. ನಿಮ್ಮ ಅನಾಹತ ಚಕ್ರವು ಎಷ್ಟು ಪರಿಶುದ್ಧವಾಗಿದೆಯೋ ಅಷ್ಟು ವೇಗವಾಗಿ ಬಯಕೆಯು ನೆರವೇರುತ್ತದೆ. ಅನಾಹತ ಚಕ್ರವನ್ನು ಪ್ರತಿನಿಧಿಸಲು ಗೊತ್ತುಪಡಿಸಿದ ಪ್ರಾಣಿ ಹುಲ್ಲೆ, ಇದು ನಮಗೆ ಗಮನ ಮತ್ತು ಜಾಗರೂಕತೆಯನ್ನು ನೆನಪಿಸುತ್ತದೆ.

ಲೌಕಿಕ ಭಾವೋದ್ರೇಕದಲ್ಲಿ   ಮನುಷ್ಯ  ಆಸೆ ,ಅಸೂಹೆ ,ದುಃಖ ಮುಂತಾದ ಹತಾಶೆ ಭಾವದಲ್ಲಿ ಮುಳುಗಿ ಬಿಡುತ್ತಾನೆ ,ಅವುಗಳ ನಿಗ್ರಹ ಮಾಡಿ ಸತ್ಯ ಶುದ್ಧ ದೈವಿಕ ಪ್ರೀತಿ,ಭಕ್ತಿ ಮಮತೆಯಲ್ಲಿ ತೊಡಗಿಸಲು ಈ ಚಕ್ರ ಸಹಾಯಕವಾಗಿವೆ ,ಇವುಗಳನ್ನು ತಾನು ಶ್ರೀ ಸಿದ್ಧರಾಮನವರಿಂದ ಪ್ರೇರಿತಗೊಂಡೇ ಎಂದು ಹೇಳುತ್ತಾರೆ.

ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು
—————————————————————————————————-
ಗಂಟಲಿನ ಮಧ್ಯ ಭಾಗದಲ್ಲಿರುವ ಶಕ್ತಿ ಕೇಂದ್ರವಾಗಿದೆ , ಶರೀರವನ್ನು ಸಂಪೂರ್ಣ ಶುದ್ಧೀಕರಿಸುವ ಸ್ಥಾನ ,ಇದನ್ನು ಅವರು ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು ಎಂದು ಹೇಳಿಕೊಂಡಿದ್ದಾರೆ.

ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.
—————————————————————————————
ಆರನೆಯದಾಗಿ ಆಜ್ಞಾಚಕ್ರ. ಇದೂ ಸುಷುಮ್ನಾ ನಾಡಿಯಲ್ಲೆ ಇದೆ. ಎರಡು ಹುಬ್ಬುಗಳ ನಡುವೆ ಇದರ ಸ್ಥಾನವಿದೆ. ಓಂಕಾರ ಈ ಚಕ್ರಕ್ಕೆ ಬೀಜಾಕ್ಷರ ಕುಂಡಲಿನಿಯಿಂದ ಇದನ್ನು ಎಚ್ಚರಿಸಬಲ್ಲ ಯೋಗಿ ತನ್ನ ಕರ್ಮವನ್ನೆಲ್ಲ ನೀಗಿಕೊಂಡು ಜೀವನ್ಮುಕ್ತನ ಸ್ಥಿತಿಯನ್ನು ಪಡೆಯುತ್ತಾನೆ. ಹೀಗೆ ಕುಂಡಲಿನೀ ಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡ ಯೋಗಿಗೆ ಅಣಿಮಾದಿ ಅಷ್ಟಸಿದ್ಧಿಗಳು (ನೋಡಿ- ಅಷ್ಟಸಿದ್ಧಿಗಳು) ಲಭಿಸುತ್ತವೆಂದು ಶಾಸ್ತ್ರದಲ್ಲಿ ಪ್ರತಿಪಾದಿತವಾಗಿದೆ.
ಇಂತಹ ಜೀವನ್ಮುಕ್ತಿ ಶಿವಯೋಗ ಸಾಧನೆಗೆ ಅಲ್ಲಮಪ್ರಭುದೇವರೇ ಪ್ರೇರಣೆ ಅಂತೆಯೇ ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು ಎಂದು ಹೆಮ್ಮೆಯಿಂದ ಹಡಪದ ರೇಚಣ್ಣ ಹೇಳಿದ್ದಾನೆ.
ಯೋಗಶಾಸ್ತ್ರದ ಪ್ರಕಾರ ಮೇಲ್ಕಂಡಂತೆ ಚಕ್ರಗಳು ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನುಂಟು ಮಾಡಬಲ್ಲ ಸೂಕ್ಷ್ಮ ಕೇಂದ್ರಗಳಾಗಿ ಮಹತ್ತ್ವವನ್ನು ಪಡೆದಿವೆ. ಮೂಲಾಧಾರಚಕ್ರದಲ್ಲಿನ ಕುಂಡಲಿನಿ ಎಚ್ಚರಗೊಂಡು ಈ ಷಟ್ಚಕ್ರಗಳ ಮೂಲಕ ಪ್ರಸರಿಸಿ ಶಿರೋಭಾಗದಲ್ಲಿರುವ ಮತ್ತು ಶರೀರದಲ್ಲಿ ಅತಿಪ್ರಧಾನ ಕೇಂದ್ರವಾಗಿರುವ ಸಹಸ್ರಾರವನ್ನು (ಇದನ್ನೂ ಚಕ್ರ ಎಂದೇ ಕರೆದಿದ್ದಾರೆ) ಸೇರಿದಾಗ ಯೋಗಿಗೆ ಮುಕ್ತಿಯ ಪರಮಾನಂದ ಲಭಿಸುತ್ತದೆ.
   ಈ ಆರು ಚಕ್ರಗಳಲ್ಲಿರುವ ಯೋಗಜ್ಞಾನ ಶಾಸ್ತ್ರವನ್ನು ಹಡಪದ ಅರಿತು ಅತ್ಯಂತ ಸರಳೀಕರಿಸಿ ಅವುಗಳನ್ನು ಆರು ಮಹಾಲಿಂಗವೆಂದು ಕರೆಯುತ್ತಾನೆ ,ಅವುಗಳು ಹೀಗಿವೆ.

ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ. ಆಧಾರ ಚಕ್ರದ ಕ್ರಿಯೆಗೆ ಆಚಾರ ಲಿಂಗವೆಂದಾತ ಬಸವಣ್ಣ , ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ ಸ್ವಾಧಿಷ್ಠಾನವು ಅರಿವಿನ ಸಂಕೇತ ಅಂತಹ ಅರಿವನ್ನು ಚೆನ್ನಬಸವಣ್ಣನಾದನು . ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ ಮಣಿಪುರಕೆ ಶಿವಯೋಗ ಸಾಧನೆಯ ಕೇಂದ್ರ ಅಂತಹ ಶಕ್ತಿ ಸ್ಥಾನಕ್ಕೆ ಚಾಲನೆ ಕೊಟ್ಟು ಅದನ್ನು ಶಿವಲಿಂಗವೆಂದಾತ ನಮ್ಮ ಘಟ್ಟಿವಾಳ ಮಡ್ಡಯ್ಯ  ಎಂದು ಹೇಳುತ್ತಾನೆ . ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ ,ಅನಾಹತ ಚಕ್ರದಿಂದ ಉದ್ಭವಿಸುವ ಮತ್ತೊಂದು ಶಕ್ತಿ ಸಂಕಲ್ಪ ಶಕ್ತಿ, ಬಯಕೆಗಳನ್ನು ಪೂರೈಸುವ ಶಕ್ತಿ ಅದನ್ನು ಸಮಷ್ಟಿಗೆ ಉಣಬಡಿಸುವ ಕಾರ್ಯವನ್ನು ಮಾಡಿದವನು ಸಿದ್ಧರಾಮ , ವ್ಯಕ್ತಿ  ಸಮಷ್ಟಿಯ ಸಂಬಂಧವನ್ನು ಸಬಲಗೊಳಿಸುವ ಸಾಧನ  ಅದನ್ನು ಸಿದ್ಧರಾಮರು ಜಂಗಮಲಿಂಗವೆಂದರು.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು ,ಇಡೀ ಶರೀರ ಮನಸ್ಸು ಪ್ರಾಣವನ್ನು ಎಲ್ಲ ಹಂತದಲ್ಲೂ ಶುದ್ಧೀಕರಿಸುವ ವಿಶುದ್ಧಿ ಚಕ್ರಕ್ಕೆ  ಪ್ರಸಾದಲಿಂಗವಾದರೂ ಮರುಳ ಶಂಕರ ದೇವರು ಎಂದು ಹೇಳುತ್ತಾನೆ.   ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.ಜ್ಞಾನದ ವಿಸ್ತಾರ ಅರಿವಿನ ಆಗಸಕ್ಕೆಆಜ್ಞಾ ಚಕ್ರವನ್ನು ಅಲ್ಲಮರು  ಮಹಾಲಿಂಗವೆಂದರು ಎಂದು ಹೇಳುತ್ತಾನೆ.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.ಇಂತಹ ಪರಿಪೂರ್ಣ ಶಿವಯೋಗ ಸಾಧಕನಿಗೆ ನಮೋ ನಮೋ ಎನುತಿರ್ದೆನಯ್ಯಾ ಎಂದು ಹೇಳುತ್ತಾನೆ ಹಡಪದ ರೇಚಣ್ಣ.

    ಹಡಪದ ರೇಚಣ್ಣನ ಅನುಭವ ಶಿವ ಯೋಗ ಸಾಧನೆ ಮತ್ತು ಯೋಗಶಾಸ್ತ್ರವನು ಷಟಸ್ಥಲಗಳ ಆರು ಲಿಂಗವನ್ನಾಗಿ ಕಂಡು ಶರಣರಿಗೆ ಯೋಗ ಮಾರ್ಗವನ್ನು ಸರಳೀಕರಿಸುವ ಮಹಾಕಾರ್ಯ ಗೈದಿದ್ದಾರೆ.

1
ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.
ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ
ಘಟ್ಟಿವಾಳ ಮದ್ದಯ್ಯನು.
ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.
ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.
ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.
ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.
ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.
ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.
ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.
ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

2
ಒಂದನಹುದೆನ್ನದೆ, ಒಂದನಲ್ಲಾ ಎನ್ನದೆ,
ಬಾಯಿಗೆ ಬಂದಂತೆ ಅಂದಚೆಂದವ ಸೇರಿಸಿ,
ಬಾಯಿಗೆ ಬಂದಂತೆ ಒಂದೊಂದ ನುಡಿಯದೆ,
ಇದು ಬಂಧ ಮೋಕ್ಷ ಕರ್ಮವೆಂದು
ದಂದುಗವ ಗಂಡನಿಕ್ಕಿಕೊಂಡಾಡದೆ, ತಾ ನಿಂದಲ್ಲಿ ನಿಜಸುಖಿಯಾದ ಮತ್ತೆ ,
ಇತ್ಯಾದಿಗಳಲ್ಲಿ ಹೊತ್ತುಹೋರಲೇತಕ್ಕೆ ?
ಶಿಲೆ ರಸವನುಂಡಂತೆ, ಮರೀಚಿಕಾ ಜಲದಂತೆ, ಅಂಬುವಿನ ಸಂಭ್ರಮದಂತೆ,
ಕುಂಭದಲ್ಲಿ ಅಡಗಿದ ಸರ್ಪನ ಇಂದ್ರಿಯದಂತೆ,
ಇದು ಗುಣಲಿಂಗಾಂಗಿಯ ನಿರ್ಗಮನ.
ನಿಃಕಳಂಕ ಕೂಡಲಚೆನ್ನಸಂಗಮದೇವ, ತಾನಾದ ಶರಣನ ಇರವು.

3
ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ ,
ಸಂಸಾರ ವಿಷಯಕ್ಕೆ ಮತ್ತನಪ್ಪುದೆ ?
ಮತ್ತೆ ಭಕ್ತರ ಗೃಹ ರಾಜದ್ವಾರದ ತಪ್ಪಲ ಕಾಯ್ವದೆ ?
ಆ ಚಿತ್ತ ತೊಟ್ಟುಬಿಟ್ಟ ಹಣ್ಣು, ಕಟ್ಟಿಸತ್ತ ಬಿದಿರು,
ದೃಷ್ಟ ನಷ್ಟವಾದ ಅಂಗಕ್ಕೆ ಮತ್ತೆ ಬಪ್ಪುದೆ ಪುನರಪ್ಪಿಯಾಗಿ ?
ಇದು ನಿಶ್ಚಯ, ನಿಜಲಿಂಗಾಂಗ ನಿರ್ಲೆಪನ ಹೊಲಬು.
ಮತ್ತೆ ಜಗದ ಮೊತ್ತದವನಲ್ಲ ,
ನಿಃಕಳಂಕ ಕೊಡಲಚೆನ್ನ ಸಂಗಮದೇವ ತಾನಾದ ಶರಣ.

4
ಕರ್ಮದಿಂದ ಕರ್ಮವ ಕಂಡಲ್ಲದೆ, ಮುಂದಣವರ್ಮವನರಿಯಬಾರದು.
ವರ್ಮದಿಂದ ಸರ್ವವ ತಿಳಿದಲ್ಲದೆ, ಸತ್ಕರ್ಮ ನಾಸ್ತಿ ವಿರಕ್ತನಾಗಬಾರದು.
ಮುಕುರದೊಳಗಣ ನೆಳಲ ತಾ ನೋಡಿ ಕಾಬಂತೆ,
ಇದು ಕ್ರಿಯಾಪಥ, ವಿರಕ್ತನ ಶ್ರದ್ಧೆ.
ಅದು ಸನ್ಮು ಕ್ತವಾದಲ್ಲಿ ಮಾಡೆನೆಂಬ ಶಂಕೆ.
ಮಾಡಿದೆನೆಂಬ ಕೃತ್ಯ ಉಭಯದ ಕಲೆಯಿಲ್ಲ ,
ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.

5
ಗಜ ಗಮನ, ಅಹಿತ ಶರಸಂಧಾನ, ಮಯೂರನ ಶಯನ,
ಮಾರ್ಜಾಲನ ಧ್ಯಾನ, ಕಂಠೀರವನ ಲಾಗು, ಬಕಮೂರ್ತಿಯ ಅನುಸಂಧಾನ,
ಅಳಿಯ ಗಂಧ ಭುಂಜನೆ, ಮಧು ಮಕ್ಷಿಕದ ಘೃತಗೊಡ ವಾಸ,
ಮೂಷಕದ ದ್ವಾರಭೇದ, ಮರೆವಾಸವೈದುವ ಸಂಚ,
ಚೋರನ ಕಾಹು, ಪರಿಚಾರಕನ ವೇಳೆ, ಸಾಹಿತ್ಯನ ಉಪಮೆ,
ಸಂಗೀತರ ಸಂಚು, ತಾಳಧಾರಿಯ ಕಳವು,
ವಾದ್ಯಭೇದಕನ ಮುಟ್ಟು, ಘ್ರಾಣನ ಹರಿತ, ಭಾವಜ್ಞನ ಚಿತ್ತ .
ಇಂತೀ ನಾನಾ ಗಣಂಗಳ ಲಕ್ಷಾಲಕ್ಷಿತವ ತಿಳಿದು,
ಶ್ರುತ ದೃಷ್ಟ ಅನುಮಾನ ಮುಂತಾದ ನಾನಾ ಭೇದಂಗಳಲ್ಲಿ ವಿಚಾರಿಸಿ ಕಂಡು,
ನಾನಾರೆಂಬುದದೇನೆಂದು ತಿಳಿದು, ತನಗೂ ಇದಿರಿಂಗೂ ಪಡಿಪುಚ್ಚವಿಲ್ಲದೆ,
ಸಿಂಧುವಿನೊಳಗಾದ ಸಂಭ್ರಮಂಗಳ ಸಂಚಾರದ
ಅಂಗವೆಲ್ಲ ಹೋಗಿ ನಿರಂಗವಾದಂತೆ.
ಅಂಗವಾತ್ಮನ ಸಂಗ, ಈ ಅಂಗವೆಂದು ತಿಳಿದು,
ಆವ ಸ್ಥಲವನಂಗೀಕರಿಸಿದಲ್ಲಿಯೂ
ಪರಿಪೂರ್ಣವಾಗಿ ಏನ ಹಿಡಿದಲ್ಲಿಯೂ
ತಲೆವಿಡಿಯಿಲ್ಲದೆ ಏನ ಬಿಟ್ಟಲ್ಲಿಯೂ
ಕುಳವಿಡಿಯಿಲ್ಲದೆ ಕರ್ಪುರ ಮಹಾಗಿರಿಯ ಸುಟ್ಟಡೆ
ಒಕ್ಕುಡಿತೆ ಬೂದಿ ಇಲ್ಲದಂತೆ,
ಚಿತ್ತನಿಶ್ಚಯವಾದ ಸದ್ಭಕ್ತ ಪರಮ ವಿರಕ್ತನ ಇರವು ಇದು.
ಎನ್ನೊಡೆಯ ಚೆನ್ನಬಸವಣ್ಣನ ಹರವರಿಯ ತೆರನಿದು.
ಸಾಧ್ಯ ಮೂವರಿಗಾಯಿತ್ತು , ಅಸಾಧ್ಯವಸಂಗತ.
ನಿಃಕಳಂಕ ಕೂಡಲಚೆನ್ನ ಸಂಗಮದೇವರೆಂದರಿದವಂಗೆ
ಅಸಾಧ್ಯ ಸಾಧ್ಯವಾಯಿತ್ತು ?

6
ಪೃಥ್ವಿಯಲ್ಲಿ ಅಪ್ಪುಸಾರವಿಲ್ಲದಿರೆ ಬೀಜವ ತಳಿಯಲಾಗಿ,
ಪ್ರತ್ಯಕ್ಷ ಅಂಕುರ ದೃಷ್ಟವಪ್ಪುದೆ?
ಶ್ರದ್ಧೆ ಸನ್ಮಾರ್ಗ ಭಕ್ತಿ ವಿಶ್ವಾಸವಿಲ್ಲದಿದ್ದಡೆ ಸದ್ಭಕ್ತನಪ್ಪನೆ ? ಸದ್ಭಕ್ತನಪ್ಪನೆ ?
ಇಂತೀ ದೃಷ್ಟ ಸಿದ್ಧಾಂತದಿಂದ ತಪ್ಪು ಕುಳಿತ ಮತ್ತೆ ,
ದೃಷ್ಟಾಂತರವ ಇದಿರ ಕೈಯಲ್ಲಿ ಕೇಳಲುಂಟೆ ?
ನುಂಗಬಾರದ ಘೃತ, ಉಗುಳಬಾರದ ಪ್ರಿಯ,
ಬಿಡಬಾರದ ಭಕ್ತಿ , ವಿಶ್ವಾಸವಿಲ್ಲದ ಆ ಭಕ್ತಿಪೂಜೆ,
ಘನಸಿಂಧುವಿನಲ್ಲಿ ನಾನಾ ವರ್ಣವ ಕದಡಿದಂತಾಯಿತ್ತು .
ಇದನಿನ್ನಾರಿಗುಸುರುವೆ !
ನಿಃಕಳಂಕ ಕೂಡಲಚೆನ್ನಸಂಗಮದೇವಾ, ನೀನೆ ಬಲ್ಲೆ .

7
ಭಕ್ತನಂತೆ ತ್ರಿವಿಧ ಮಲಕ್ಕಿಕ್ಕುವನೆ ಚಿತ್ತವ ?
ವಿರಕ್ತನಂತೆ ಸರ್ವವ್ಯಾಪಾರಕ್ಕೆ ಮೊತ್ತದ ಇಂದ್ರಿಯ ವರ್ಗದಲ್ಲಿ ,
ಸುಚಿತ್ತವ ಬಿಟ್ಟು ಮತ್ತೆ ವಿರಕ್ತನಪ್ಪನೆ ?
ಈ ಉಭಯದ ಭಾವವ ನಿಶ್ಚೆ ಸಿದಲ್ಲಿ ,
ಕುಸುಮ ಗಂಧದಂತೆ, ಮುಕುರ ಬಿಂಬದಂತೆ,
ಉರಿ ಕಪುರದಿರವಿನ ತೆರದಂತೆ,
ನಿಃಕಳಂಕ ಕೂಡಲಚೆನ್ನ ಸಂಗಮದೇವ ತಾನಾದ ಶರಣ.

8
ಮರದ ದೇವರಿಗೆ ಉರಿಯ ಪೂಜೆಯುಂಟೆ ?
ಮಣ್ಣಿನ ಹರುಗುಲದಲ್ಲಿ ತುಂಬಿದ ತೊರೆಯ ಹಾಯಬಹುದೆ ?
ತೆರಕಾರನ ನಚ್ಚಿ ಕಳನೇರಬಹುದೆ ?
ಇಂತೀ ಗುಣದ ದೃಷ್ಟವ ಕಡೆಗಾಣಿಸಿದಲ್ಲಿ,
ಪ್ರಮಾಣಿಸಿದಲ್ಲಿಯೂ ಏತರನು,
ಹಾಂಗೆ ಬರಿಹುಂಡರ, ಆಚಾರಭ್ರಷ್ಟರ, ಅರ್ತಿಕಾರರ,
ಚಚ್ಚಗೋಷ್ಠಿವಂತರ, ಬಹುಯಾಚಕರ,
ಪಗುಡೆ ಪರಿಹಾಸಕರ, ತ್ರಿವಿಧದಲ್ಲಿ ಸೂತವನರಸುವ
ವಿಶ್ವಾಸಘಾತಕರ, ಅಪ್ರಮಾಣ ಪಾತಕರ,
ಭಕ್ಕಿಯ ತೊಟ್ಟಲ್ಲಿ ಭಕ್ತನೆಂದಡೆ,
ವಿರಕ್ತಿಯ ತೊಟ್ಟಲ್ಲಿ ಕರ್ತುವೆಂದಡೆ, ದೀಕ್ಷೆಯ ಮಾಡಿದಲ್ಲಿ ಗುರುವೆಂದಡೆ,
ತಪ್ಪ ಕಂಡಲ್ಲಿ ಎತ್ತಿ ತೋರುವೆನು.
ಗುಟ್ಟಿನಲ್ಲಿ ಚಿತ್ತ ಬಿಡಲಾರದಿರ್ದಡೆ,
ನಿಃಕಳಂಕ ಕೂಡಲಚೆನ್ನ ಸಂಗಮದೇವರಾದಡೂ ಎತ್ತಿಹಾಕುವೆನು.

9
ಹೊರಗಣ ಸಿಪ್ಪೆ ಒಳಗೆ ಮೆಲುವನ್ನಕ್ಕ ಉಭಯದ ಕೂಟ.
ಅಗಲಿಗೆ ಬಂದ ಮತ್ತೆ ರಸಾನ್ನವಲ್ಲದೆ ಹಿಪ್ಪೆಗೆ ಚಿತ್ತ ಒಪ್ಪಬಲ್ಲುದೆ ?
ಅರಿವನ್ನಬರ ಸ್ಥಲಕುಳಂಗಳ ಹೊಲಹೊಲದ ಹೊಲಬ ತಿಳಿದಲ್ಲಿ ,
ಭಕ್ತಿಜ್ಞಾನವೈರಾಗ್ಯಗಳೆಂಬ ತ್ರಿವಿಧದ ಗೊತ್ತು ನಷ್ಟವಾದ ಶರಣ,
ತಥ್ಯಮಿಥ್ಯಕ್ಕೆ ಸಿಕ್ಕ ಮತ್ತಾವ ಗುಣಂಗಳಲ್ಲಿಯೂ ಹೊರದೃಷ್ಟಕ್ಕೆ ಬಾರ.
ಆತ ನಿಶ್ಚಿಂತ ನೋಡಾ, ನಿಃಕಳಂಕ ಕೂಡಲಚೆನ್ನಸಂಗಮದೇವ
ತಾನಾದ ಶರಣ.

   ಕಲ್ಯಾಣ ಕ್ರಾಂತಿಯ ನಂತರದಲ್ಲಿ ಹಡಪದ ರೇಚಣ್ಣನವರು ಶರಣರ ತಂಡದಲ್ಲಿ ವಚನಗಳ ಕಟ್ಟನ್ನು ಸಂರಕ್ಷಿಸುವ   ನಿಟ್ಟಿನಲ್ಲಿ ಸೋವಿದೇವನ ಸೈನಿಕರ ಜೊತೆಗೆ ಸೆಣಸಾಡಿ , ಬೆಳಗಾವಿ ಜಿಲ್ಲೆಯ ಅಂಕಲಗಿಯಲ್ಲಿ ಐಕ್ಯವಾದನು.

5 thoughts on “ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಯೋಗ ಸಾಧಕ ಹಡಪದ ರೇಚಣ್ಣ

  1. ವಿವರವಾದ ಮಾಹಿತಿಗಾಗಿ ಧನ್ಯವಾದಗಳು ಸರ್

  2. ಎಷ್ಟು ವಿವರವಾದ ಸಂಶೋಧನೆಗಳ ಪರಿಣಾಮವೇ ತಮ್ಮ ಲೇಖನ ಸರ್

Leave a Reply

Back To Top