ಗಿರಿಜಾ ಇಟಗಿ ಅವರ ಕವಿತೆ-ಭೂರಮೆಯ ಸೊಗಸು

ದಿನದಿನವೂ ತೇಜಸ್ಸನ್ನು ಹೊತ್ತು
ಉತ್ತರಾಯಣದೆಡೆಗೆ ಪಥವ ಬದಲಿಸಿ
ಭೂರಮೆಯ ಸಕಲರಿಗೂ ಸಂತಸವ ತಂದು
ಅವಿಶ್ರಾಂತನಾದ ಭಾಸ್ಕರನಿಗೆ ನಮಿಸುವೆ

ಪಲ್ಲವಿಸಿ ತರುಲತೆ ಫಲವಿಯೋ ಕಾಲವಿದು
ಸುಗ್ಗಿಯ ಹಿಗ್ಗಲಿ ಸಡಗರದಿ ಮಿಂದೆದ್ದು
ರೈತನ ಮೊಗದಲಿ ಕಳೆಯನು ತುಂಬುತ್ತಾ
ಸಂಭ್ರಮವ ಇಮ್ಮಡಿಸುವ ಸಂಕ್ರಾತಿಗೆ ನಮಿಸುವೆ

ಮಾಗಿಯ ಚಳಿಯಲಿ ಮೈಮನ ಮುದುಡಿರಲು
ಎಳ್ಳಿನ ಅಭ್ಯಂಜನ ಮುದವ ನೀಡಿದೆ
ಅಂಗಳದಿ ರಂಗುರಂಗಿನ ರಂಗೋಲಿಗೆ ಮನಸೋತು
ಪೂರ್ಣಕುಂಭದಿ ಹರಸುತಿಹ ಭೂದೇವಿಗೆ ನಮಿಸುವೆ

ಗಾಳಿಗೆ ತೂರುತಾ ಕಹಿನೆನಪುಗಳೆಲ್ಲಾ
ಋತುಮಾನದ ಜೊತೆಗೆ ಹೆಜ್ಜೆಯನು ಹಾಕುತಾ
ಹಮ್ಮು- ಬಿಮ್ಮುಗಳ ದೂರ ತಳ್ಳುತಾ
ಎಳ್ಳು ಬೆಲ್ಲದ ಸವಿಯ ವಿಶಿಷ್ಟ ಸಂಸ್ಕೃತಿಗೆ ನಮಿಸುವೆ

ಶರಣಸಂಸ್ಕೃತಿಯ ಸಂಕ್ರಮಣವಿದು
ಸೊನ್ನಲಿಗೆಯ ಸಿದ್ಧರಾಮರ ಸ್ಮರಿಸುತಾ
ಸಕಲ ಶರಣರಿಗೂ ಶುಭವನು ಕೋರುತಾ
ನಿರ್ಗುಣ ನಿರಾಕಾರದ ಸಾಕಾರವಾದ ಶರಣ ಸತ್ವಕೆ ನಮಿಸುವೆ


#

Leave a Reply

Back To Top