ತಲ್ಲಾವಜ್ಝುಲ ಪತಂಜಲಿ ಶಾಸ್ತ್ರಿ ಅವರ ತೆಲುಗುಕಥೆ “ಸೀತೆಯೆಂಬ ಆಮೆ” ಕನ್ನಡಕ್ಕೆ ಅನುವಾದ ಮಾಡಿದವರು ಚಂದಕಚರ್ಲ ರಮೇಶಬಾಬು

ಭೂಮಿಯಂತೆ ನಿಡುಸುಯ್ದಳು ಸೀತೆ.
ಊರ್ಮಿಳೆಯನ್ನು ಮತ್ತಷ್ಟು ಹತ್ತಿರಕ್ಕೆ ಕರೆದುಕೊಂಡಳು. ಊರ್ಮಿಳೆಯ ಕಣ್ಣೀರು ಸೀತೆಯ ಭುಜದ ಮೇಲೆ ಬೀಳುತ್ತಿತ್ತು. ಸೀತೆ ಅವಳ ಬೆನ್ನು ನೇವರಿಸುತ್ತ ಹೇಳಿದಳು.
“ಸುಮ್ಮನಿರು…. ನಿನ್ನ ಕಣ್ಣೀರು ಸೌಮಿತ್ರಿಯ ಕಂಗಳಲ್ಲಿ ಜಿನುಗುತ್ತಿದೆ”
ಅವನ ಹೆಸರು ಕೇಳುತ್ತಲೇ ಊರ್ಮಿಳೆ ಸೀತೆಯನ್ನು ತನ್ನ ಪ್ರಾಣದಂತೆ ಅಪ್ಪಿಕೊಂಡಳು.
 “ಅಕ್ಕಾ” ಅಂತ ಮಾತ್ರ ಹೇಳಲು ಸಾಧ್ಯವಾಯಿತು. ಊರ್ಮಿಳೆಯ ಬಾಷ್ಪಹೃದಯ ಬರಿದಾದ ಮೇಲೆ ಮೆತ್ತಗೆ ಅವಳಿಂದ ಬಿಡಿಸಿಕೊಂಡು, ಕೈಯಿಂದ ಕಂಬನಿಯ ಕಲೆಗಳನ್ನು ಒರೆಸುತ್ತ ಸೀತೆ ಹೇಳಿದಳು.
“ತವರಿಗೆ ಹೋಗು ಊರ್ಮಿಳಾ!. ಅಲ್ಲಿ ಕೆಲದಿನ ಕೊಳಗಳಲ್ಲಿ ಮೀನಿನಂತೆ ಈಜು. ಉದ್ಯಾನವನಗಳಲ್ಲಿ ಪಕ್ಷಿಯಂತೆ ಹಾರು.. ಹಸಿರು ಮರಗಳ ಕೆಳಕೆ ಮಲಗಿ ನಿನ್ನ ಬಾಲ್ಯಕ್ಕೆ ಹೋಗು. ನಮ್ಮ ಸುಖಸಂತೋಷಗಳೆಲ್ಲವನ್ನೂ ನಾವು ಅಲ್ಲೇ ಬಿಟ್ಟು ಬಂದಿದ್ದೇವೆ.”
“ಕೊಳಗಳಲ್ಲಿ ಲಕ್ಷ್ಮಣನ ಜೊತೆ ಈಜಿದ್ದೇನೆ. ತೋಟಗಳಲ್ಲಿ ಅವನ ಜೊತೆಯೇ ವಿಹರಿಸಿದ್ದೇನೆ. ಇಬ್ಬರೂ ನಮ್ಮ ನಮ್ಮ ಬಾಲ್ಯ ಕೌಮಾರಗಳಿಗೆ ಹೋಗಿ ಬಂದಿದ್ದೇವೆ. ಅವನು ನನ್ನ ಜೊತೆ ಇಲ್ಲದ್ದು ಯಾವಾಗ?! ಅವನು ನನ್ನ ನೆರಳು.”
“ಊರ್ಮಿಳಾ! ಅವನು ಆಗ ನಿನ್ನಲ್ಲಿದ್ದ. ಈಗ ನಿನ್ನ ಜೊತೆ ಇರುತ್ತಾನೆ. ಅಷ್ಟೇ. ಆ ವ್ಯತ್ಯಾಸವನ್ನು ಗುರುತಿಸು. ಬೇಸರಿಸಬೇಡ. ನಾನಿದ್ದೇನೆ. ನನ್ನ ಮಾತು ನಂಬು.”
ಸೀತೆಯ ಎರಡೂ ಕೈಗಳನ್ನು ಹಿಡಿದುಕೊಂಡು “ಅಕ್ಕಾ! ಸೌಮಿತ್ರಿಯನ್ನು ಒಮ್ಮೆ ನೋಡಬೇಕೆನಿಸುತ್ತಿದೆ.” ಅಂದಳು ಊರ್ಮಿಳೆ.
“ಈಗಷ್ಟೇ ತಾನೇ ನಿನ್ನನ್ನು ಕಂಡು ಹೋಗಿದ್ದು. ನೀನು ಅವನ ಕಣ್ಣಿಗೆ ಮತ್ತೆ ಬಿದ್ದರೆ ಅವನು ಬಲೆಯಲ್ಲಿ ಬಿದ್ದ ಮೀನಿನಂತೆ ನಿನ್ನ  ಮಡಿಲಲ್ಲಿ ಬೀಳುತ್ತಾನೆ. ಇಲ್ಲಿಂದಲೇ ನೋಡು. ನೀಲಿ ಮೇಘದ ಮಿಂಚಿನ ಅಂಚಿನಂತೆ ಅಕೋ ಅಲ್ಲಿ….. ನೋಡು. ನಿನ್ನ ಧರ್ಮ ಅವನ ಧರ್ಮವನ್ನು ನಿರ್ವರ್ತಿಸುವಲ್ಲಿ ಇರುತ್ತದೆ.”
ಮೆಟ್ಟಿಲುಗಳ ಮೇಲೆ ನಿಂತು ನೋಡಿದರೆ ಪ್ರಾಂಗಣದ ಒಳಗಡೆ ಮತ್ತು ಹೊರಗಡೆ ಜನರಿಂದ, ರಾಜ ಬಂಧುಗಳಿಂದ ಕಿಕ್ಕಿರಿದು ಹೋಗಿದೆ.  ತಮ್ಮ ಕೆನ್ನೆಗಳ ಮೇಲೆ ಹರಿಯುತ್ತಿದ್ದ ಕಂಬನಿಗಳನ್ನು ಯಾವ ಮಹಿಳೆಯೂ ಒರೆಸುವ ಗೋಜಿಗೆ ಹೋಗುತ್ತಿಲ್ಲ. ಅಯೋಧ್ಯಾ ನಗರದ ಮೇಲೆ ಕಣ್ಣೀರಿನ ಒಂದು ಮೋಡ ದಟ್ಟವಾಗಿ ಆವರಿಸಿದೆ. ಕೊನೆಯ ಬಾರಿಗೆ ಸೀತೆ ಅವಳನ್ನು ಆಲಂಗಿಸಿ, ಮೆಟ್ಟಿಲುಗಳನ್ನು ಇಳಿದು ಹೊರಟುಹೋದಳು. ಊರ್ಮಿಳೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುತ್ತಾ ನಿಂತಳು. ಹೀಗೇ ನೋಡುತ್ತಿದ್ದ ಹಾಗೇನೇ, ಉಚ್ಚ ಸ್ವರದಲ್ಲಿ, “ದೀರ್ಘ ಪ್ರಯಾಣವು ಸುಖಕರವಾಗಲಿ, ಯೋಗಕ್ಷೇಮಗಳು ಪ್ರಾಪ್ತವಾಗಲಿ” ಎನ್ನುತ್ತ ಪುರೋಹಿತರ ಮಂತ್ರಗಳ ಸ್ವರ ಮೇಳ ಹೊರಟಿತು. ಊರ್ಮಿಳೆಯ ನೀರು ತುಂಬಿದ ಕಂಗಳಿಗೆ ಎಲ್ಲವೂ ಅಸ್ಪಷ್ಟವಾಗೇ ಇದೆ. ಪ್ರಾಂಗಣವೆಲ್ಲಾ ಬೆಳಗಿನ ಹೊಂಬಿಸಿಲಿನಿಂದ ತುಂಬಿದ್ದರೂ ಅವಳಿಗೆ ಮುಸ್ಸಂಜೆಯಂತೆಯೇ ಕಾಣುತ್ತಿದೆ. ಅಣ್ಣತಮ್ಮಂದಿರು, ಸೀತೆ, ಪರಿವಾರದವರೆಲ್ಲಾ ನಗರ ಪ್ರಜೆಗಳಲ್ಲಿ ಬೆರೆತುಹೋದರು. ಮುಂಡಾಸುಗಳ ನಡುವೆ ಅವರುಗಳು ಕಾಣುತ್ತಿಲ್ಲ. ಬೇರುಗಳು ಸಡಿಲವಾಗಿ ಬಾಗಿಹೋದ ಮರದಂತೆ ಊರ್ಮಿಳೆ ಕಣ್ಣು ಕತ್ತಲಿಟ್ಟು ಪರಿಚಾರಿಕೆಯರ ಭುಜದ ಮೇಲೆ ಒರಗಿದಳು. ಅಣ್ಣ ತಮ್ಮಂದಿರನ್ನು ಕಣ್ಣಾರೆ ನೋಡಿದ ಹೆಂಗಸರು ಪ್ರಾಂಗಣದಲ್ಲಿ ಸ್ತಬ್ದವಾಗಿ ನಿಂತರು.
ಆ ಮುಂಜಾನೆ ಮೊದಲುಗೊಂಡು ಹತ್ತು ದಿನ ಊರ್ಮಿಳ ಸ್ತಬ್ದಳಾಗಿದ್ದು, ಶುಷ್ಕನೋಟದಿಂದ ಮಳೆಯಲ್ಲಿನ ಹೂವಿನ ಗಿಡದಂತೆ ಇದ್ದಳು. ಅನ್ನ, ಹಣ್ಣು, ಮದಿರೆ ಯಾವುದೂ ರುಚಿಸಲಿಲ್ಲ.. ಪಕ್ಷದ ದಿನಗಳಲ್ಲಿ ಅವಳು ಎಲೆಗಳು ಕಿತ್ತಿದ ಹೂಬಳ್ಳಿಯಂತೆ ಆದಳು. ಲಕ್ಷ್ಮಣನ ರೂಪ, ಧ್ವನಿ, ನೋಟ, ಸ್ವರ್ಶದ ನೆನಪುಗಳು ಊರ್ಮಿಳೆಯನ್ನು ಉಸಿರುಗಟ್ಟಿಸುತ್ತಿದ್ದವು. ಬಾಯಿ ತೆರೆದು ಅವಳು ಮಾತಾಡಿ ತುಂಬಾ ದಿನಗಳಾಗಿ ಹೋದವು.  ಕಾಡಿನ ಬಿರುಗಾಳಿಯೊಂದು ನುಗ್ಗಿ, ನಗೆಯನ್ನೂ, ಆಹ್ಲಾದವನ್ನೂ ಆಟಪಾಠಗಳನ್ನೂ ಹಾರಿಸಿಕೊಂಡು ಹೋದಂತಿತ್ತು. ಅವಳ ಪರಿಚಾರಿಕೆಯರಿಗೆ ಸೂರ್ಯೋದಯವೇ ಭಯ ತರಿಸುತ್ತಿತ್ತು..
ಊರ್ಮಿಳೆಯ ವಿರಹದ ದಿನಗಳು ಗ್ರೀಷ್ಮದ ತೀವ್ರತೆಯಿಂದ ಅವಳನ್ನು ಇನ್ನಷ್ಟು ಕಂಗೆಡಿಸಿದವು. ಸೀತೆಯ ಮಾತುಗಳನ್ನು ನೆನೆದಳು. ಸೌಮಿತ್ರಿ ಓಡಾಡಿದ, ಕ್ರೀಡಿಸಿದ ಈ ಊರಲ್ಲಿ ಅವಳು ಇರಲಾರದಾದಳು. ಆ ರಾತ್ರಿಯಲ್ಲಾ ಆಲೋಚನೆ ಮಾಡಿ ಒಂದು ನಿರ್ಣಯಕ್ಕೆ ಬಂದಳು. ತನ್ನ ತವರಿನಿಂದ ಕರೆತಂದ ಮೂವರು ಪರಿಚಾರಿಕೆಯರನ್ನು ಬೆಳೆಗ್ಗೆಯೇ ಕರೆದು, ಪ್ರಯಾಣಕ್ಕೆ ಸಿದ್ಧಮಾಡಲು ಹೇಳಿದಳು. ಮುಂಚೆ ಆಶ್ಚರ್ಯ ಪಟ್ಟರೂ, ಸ್ವಸ್ಥಳಕ್ಕೆ ಹೋಗುವುದು ಅವರಲ್ಲಿ ಉತ್ಸಾಹ ಮೂಡಿಸಿತು. ಊಟವಾಗಿ, ವಿಶ್ರಾಂತಿ ಸಮಯ ಮುಗಿದ ಮೇಲೆ ಊರ್ಮಿಳೆ ಅತ್ತೆ ಮಾವಂದಿರ ಭವನಕ್ಕೆ ತೆರಳಿ, ಅವರ ಅನುಮತಿ ತೆಗೆದುಕೊಂಡಳು. ಸುಮಿತ್ರೆ ಅವಳನ್ನು ಹತ್ತಿರಕ್ಕೆ ಕರೆದು ಸಮಾಧಾನ ಮಾಡುತ್ತಾ ಕಂಬನಿಗರೆದಳು.
ಮುಹೂರ್ತ ನೋಡಿ ಊರ್ಮಿಳೆಯನ್ನು ಮತ್ತು ಪರಿಚಾರಿಕೆಯರನ್ನು ಶಸ್ತ್ರಸಜ್ಜಿತರಾದ ಬಿಲ್ಲುಗಾರರ ಸಂರಕ್ಷಣೆಯಲ್ಲಿ  ತವರಿಗೆ ಕಳಿಸಿದರು. ಅವಳನ್ನು ನೋಡಿದ ತಕ್ಷಣ ತಂದೆ ತಾಯಿಯರಿಗೆ ಕಣ್ಣೀರು ನಿಲ್ಲಲಿಲ್ಲ. ತವರಿಗೆ ಸೇರಿದ ಕೆಲ ದಿನಗಳು ಅವಳು ಸಖಿಯರ ಜೊತೆ, ಪರಿಚಾರಿಕೆಯರ ಜೊತೆ ಮಾತಾಡುವುದರಲ್ಲೇ ವೇಳೆ ಕಳೆಯಿತು. ನಿದ್ರೆ ಮಾಡುವಾಗ ಬಿಟ್ಟರೆ ಅವಳಿಗೆ ಏಕಾಂತ ಸಿಕ್ಕಿರಲಿಲ್ಲ. ಅಯೋಧ್ಯೆಯ ಸಂಗತಿಗಳು ಹೇಳಿ ಹೇಳಿ ದಣಿದುಹೋದಳು.  ಕೆಲದಿನಗಳಲ್ಲೇ ತವರು ಮನೆ ಏಕತಾನವೆನಿಸಿ ಒಬ್ಬಂಟಿತನ ಕಾಡತೊಡಗಿತು. ಅಯೋಧ್ಯೆಯಲ್ಲಿ ಸೌಮಿತ್ರಿಯ ಉಡುಪುಗಳು, ಇತರೆ ವಸ್ತುಗಳು, ಅವನ ಜೊತೆ ಆಡಿದ ದಾಳಗಳು ಮುಟ್ಟಿದಾಗಲೆಲ್ಲ ಅವನ ಸ್ಪರ್ಶದ ಅನುಭವವಾಗುತ್ತಿತ್ತು. ಪಲ್ಲಂಗದ ಅರ್ಧ ಬಾಗ ಅವನ ದೇಹಗಂಧದ ಪರಿಮಳದಿಂದ ಸಾಮೀಪ್ಯವನ್ನು ನೆನಪಿಸುತ್ತಿತ್ತು. ಸರ್ವವೂ ಸೌಮಿತ್ರಿಮಯ ಅಲ್ಲಿ. ಇಲ್ಲಿ ಅಂಥಾ ಆತ್ಮೀಯವಾದ ಅನುಭವ ಕೊಡುವಂಥವು ಯಾವವೂ ಇಲ್ಲ. ಒಂದೇ ಒಂದು ವಸ್ತು ಕೂಡಾ ಸೌಮಿತ್ರಿಯನ್ನ ನೆನಪಿಸುತ್ತಿಲ್ಲವೆನ್ನುವುದು  ಕಂಟಕಪ್ರಾಯವಾಗಿತ್ತು  ಎಲ್ಲಿಗೋ ದೂರ ಹೋಗಿಬಿಡಬೇಕೆನಿಸುತ್ತಿತ್ತು ಅವಳಿಗೆ. ಒಂದು ರಾತ್ರಿಯಂತ ಬೆಳಗಾಗುತ್ತಲೇ ಎದ್ದು ಒಬ್ಬಂಟಿಯಾಗಿ ಲಕ್ಷ್ಮಣನ ಹುಡುಕುತ್ತಾ ಕಾಡಿಗೆ ಹೋಗಬೇಕೆನಿಸಿತ್ತು.
ಊರ್ಮಿಳೆ ಉಹಿಸಿದಂತೆ ನಡೆಯುತ್ತಿಲ್ಲ. ಇಲ್ಲಿ ಯಾವ ವಿಧವಾದ ಸಾಂತ್ವನವೂ ಸಿಗುತ್ತಿಲ್ಲ. ಮನೆ ಸೇರಿದ ಕೆಲವೇ ದಿನಗಳಲ್ಲಿ ಅವಳ ಪರಿಚಾರಿಕೆಯರಿಗೆ ಪ್ರಿಯಕರರು ಸಿಕ್ಕಿದ್ದರು. ಅವರ ಸಲ್ಲಾಪದ ಮಾತುಗಳನ್ನು ಕೇಳುವಾಗ ಅವಳ ದೇಹ ದಹಿಸಿ ಹೋಗುತ್ತಿತ್ತು. ನಿದ್ರೆ ದೂರವಾಗಿತ್ತು. ತಂದೆ ತಾಯಿಯರು ಅವಳ ಮಾನಸಿಕ, ದೈಹಿಕ ಸ್ಥಿತಿಗಳನ್ನು ಗಮನಿಸದಿರಲಿಲ್ಲ. ಒಂದು ದಿನ ತಂದೆ ಕರೆಸಿ ಕೇಳಿದರು.
“ತಾಯೀ! ದುಃಖ ನಿನಗಿಲ್ಲ  ಎಂದುಕೊಳ್ಳುವುದು ಅಜ್ಞಾನ. ಅದನ್ನು ಮರೆತು ಬಿಡು ಎಂದು ಹೇಳುವುದು ಮುಗ್ಧತೆ. ಈ ವಿಷಯದಲ್ಲಿ ದುಃಖ, ಸಂತೋಷ ಎರಡೂ ಒಂದೇ- ಮರೆತು ಬಿಡಲು ಅಥವಾ ತಿರಸ್ಕರಿಸಲು ಆಗದು. ನಿನ್ನ ನೋವು ನಮ್ಮಿಬ್ಬರನ್ನೂ ಬಿರುಗಾಳಿಯಂತೆ ಆವರಿಸುತ್ತಿದೆ. ಧೈರ್ಯವಾಗಿರು ತಾಯೀ. ಮುಂಚಿತವಾಗಿ ನಿನ್ನ ದುಃಖವನ್ನು ನೀನು ಅರ್ಥಮಾಡಿಕೋ. ನೊಂದುಕೊಳ್ಳುವುದು ಸಹಜ. ಆದರೆ ಅದನ್ನ ಹಂಸಕ್ಷೀರ ನ್ಯಾಯವಾಗಿಸುವ ಪ್ರಯತ್ನ ಮಾಡು.ನಿನ್ನ ನೀನು ಪ್ರಶ್ನಿಸಿಕೋ ತಾಯೀ. ನೀನು ಯಾವ ಉಪಶಮನವನ್ನು ಬಯಸುತ್ತಿದ್ದೀಯೋ ಅದು ಹೊರಗಿರುವುದಿಲ್ಲ. ನಿನ್ನೊಳಗೇ, ನಿನ್ನ ನಿಯಂತ್ರಣದಲ್ಲಿ ಇರುತ್ತದೆ.” ಆಕೆ ನಿಸ್ಸಹಾಯಕಳಾಗಿ ನೋಡುತ್ತಿದ್ದಳು. ಎದ್ದು ಹೊರಡುವಾಗ, ಅವಳನ್ನು ಹತ್ತಿರ ಕರೆದು ಹೇಳಿದರು.
“ಅಮ್ಮಾ, ಮೋಡ ಬೆಟ್ಟವನ್ನು ಅಡಗಿಸಿದ ಹಾಗೆ ದುಖ, ಕೋಪ ವಿಜ್ಞತೆಯನ್ನು ಅಡಗಿಸುತ್ತವೆ.”
ಸಖಿಯರು ತೋಟದಲ್ಲಿ ವಿಹಾರಕ್ಕಾಗಿ ತಯಾರಿ ಮಾಡಿದ್ದರು. ಅವುಗಳೆಲ್ಲವೂ ತಾವು ಮದುವೆಗೆ ಮುಂಚೆ, ನಂತರ ತಿರುಗಿದ ತೋಟಗಳು. ಹಸಿರ ಪರಿಮಳದೊಂದಿಗೆ, ತರತರದ ಪಕ್ಷಿಗಳ ಕೂಗುಗಳಿಗೆ ಮಾರ್ದನಿ ಕೊಡುತ್ತ, ಬೆದರಿ ಓಡುವ ಜಿಂಕೆಯ ಮರಿಯನ್ನು ಓಡಿ ಹಿಡಿಯುತ್ತ ತುಂಬಾ ಹೊತ್ತು ವಿಹರಿಸಿದ ಮೇಲೆ ಎಲ್ಲರೂ ವಿಶಾಲವಾದ ಸರೋವರ ತೀರದ ಮೇಲೆ ದಣಿವಾರಿಸಿಕೊಳ್ಳುತ್ತ ಉರುಳಿದರು. ಊರ್ಮಿಳೆಯ ತುಟಿಗಳು ಮಂದಹಾಸದಿಂದ ಬಿರಿದವು. ಸೌಮಿತ್ರಿಯೂ, ತಾನೂ ಸಂಚರಿಸಿ ಜಳಕ ಮಾಡಿದ ಸಂದರ್ಭಗಳನ್ನು ನೆನೆದಳಾಕೆ. ಒಂದು ದೊಡ್ಡ  ಕಣ್ಣೀರ ಅಲೆ ಅವಳನ್ನು ಮುಳುಗಿಸಿ ಹೊರಟು ಹೋಯಿತು. ಪರಿಚಾರಿಕೆಯರು ಅವಳನ್ನು ಬಲವಂತದಿಂದ ನೀರಿಗೆ ಎಳೆದರು. ನೀರು ತುಸುಬೆಚ್ಚಗೆ ಇದ್ದವು . ಅಪ್ರಯತ್ನವಾಗಿ ಅವಳು ಮೀನಾಗಿ ನೀರಿನೊಳಗೆ ಹೋದಳು. ಈ ಕೊಳದಲ್ಲೇ ತಾನು, ಲಕ್ಷ್ಮಣನೂ ನಾವೆಯಲ್ಲಿ ಬಂದು ಸ್ನಾನ ಮಾಡಿದ್ದಲ್ಲವೇ? ಎಷ್ಟೋ ಹೊತ್ತು ಒಬ್ಬರನ್ನೊಬ್ಬರು ಅಟ್ಟಿಸಿಕೊಳ್ಳುತ್ತ, ದಾಟಿ ಹೋಗುತ್ತ, ಮುಳುಗು ಹಾಕುತ್ತ, ಕೇಕೆ ಹೊಡೆಯುತ್ತ ಕೊಳವನ್ನು ಕದಡಿದ್ದೆವು.. ಆ ಸಂತೋಷ, ಆನಂದ ಇಷ್ಟು ದುಃಖವನ್ನು ಯಾಕೆ ತರುತ್ತಿವೆ? ಧನುರ್ಬಾಣಗಳಿಂದ ತನ್ನ ಜೊತೆ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುವುದು, ಮರೆಯಲ್ಲಿ ಅಡಗುವುದು ಕಲಿಸಿದನಲ್ಲಾ. ಅವೆಲ್ಲ ಗತ ಜನ್ಮದ ನೆನಪುಗಳಂತಾಗಿವೆ. ಈಗ ಈ ಶೂನ್ಯದಲ್ಲಿ, ನಿರ್ವೇದದಲ್ಲಿ, ಒಬ್ಬಂಟಿಯಾಗಿ ತನಗಿನ್ನೇನು ಜೀವನ ಉಳಿದಿದೆ? ಸೌಮಿತ್ರಿ ಹೊರಡುತ್ತಲೇ ತಾನೇಕೆ ಸಾಯಲಿಲ್ಲ? ಸಂತೋಷಕ್ಕೂ ದುಃಖಕ್ಕೂ, ಮರಣಕ್ಕೂ ವ್ಯತ್ಯಾಸವೇನಿದೆ? ಒಂದರಿಂದ ಮತ್ತೊಂದು. ಒಂದರ ಹಿಂದೆ ಮತ್ತೊಂದು. ಇದು ಹೊತ್ತು ತರುವ ದುರ್ಭರವಾದ ನೋವನ್ನು ತಡೆದುಕೊಂಡು ಜೀವಿಸುವ ಸ್ಥೈರ್ಯ ಬರುವುದಾದರೂ ಹೇಗೆ? ತಟ್ಟನೆ ಅವಳು ನೀರಿನ  ತಳಕ್ಕೆ ಈಜುತ್ತ ಹೋದಳು. ಇಲ್ಲೆಲ್ಲ ಸ್ಫಟಿಕದಷ್ಟು ಸ್ಪಷ್ಟ. ಮತ್ತೆ  ಮೆಲಕ್ಕೆ ಬಂದಳು ಊರ್ಮಿಳೆ. ತನ ಸುತ್ತಲೂ ಸ್ವಲ್ಪ ದೂರದಲ್ಲಿ ಎಲ್ಲರೂ ಆಡುತ್ತಿದ್ದಾರೆ.  ದಡವನ್ನು ಸೇರಿದಳು ಅವಳು. ಹಸಿರು ಹುಲ್ಲಲ್ಲಿ ಮಲಗಿ ಶೂನ್ಯದತ್ತ ದೃಷ್ಟಿ ನೆಟ್ಟಳು. ಸೂರ್ಯನಿಲ್ಲದ ಬಾನು ನೀಲಿಯಾಗಿ ಬೇಸರವಾಗುತ್ತಿತ್ತು. ಈ ಸೃಷ್ಟಿಯಲ್ಲಿ ನಿಜಕ್ಕೂ ಒಂಟಿಯಲ್ಲದವರು ಯಾರು? ಚಂದ್ರ, ಸೂರ್ಯ, ಗಿಡಮರ, ಮನುಷ್ಯ ಎಲಾ ಒಬ್ಬಂಟಿನೇ. ಈ ತೋಟಗಳಲ್ಲಿ ಸೌಮಿತ್ರಿ ಏಕಾಂಗಿಯಾಗಿ ಜಿಂಕೆಗಳನ್ನು ಬಾಣಗಳಿಂದ ಕೆಡವಿರಲಿಲ್ಲವಾ? ಅವಳ ಎದೆ ಝಲ್ಲೆಂದಿತು. ಆ ಪಕ್ಷಿಗಳು, ಜಿಂಕೆಗಳ ಜೋಡಿಗಳು ತನ್ನನ್ನು ಶಪಿಸಿರಬಹುದೇ? ಊರ್ಮೀಳೆಯ ದೇಹ ಕಂಪಿಸಿತು. ತಾನು ಅದೆಷ್ಟು ಪಾಪ ಮಾಡಿರುವೆನೋ! ಅವಳ ಕಂಗಳು ಕೊಳಗಳಾದವು.
ಲಕ್ಷ್ಮಣನು ನಿಶಬ್ದವಾಗಿ ಅನುಸರಿಸುತ್ತಿದ್ದ ಗಂಡು ಜಿಂಕೆಯೊಂದು ಮೂಗಿನ ಹೊಳ್ಳೆ ಅರಳಿಸುತ್ತ ನಿಂತು ಸುತ್ತಲೂ ನೋಡಿತು. ಕ್ಷಣಕಾಲದಲ್ಲಿ ಅವನು ಮರದ ಹಿಂದೆ ಅಡಗಿಕೊಂಡು ಕೂತ. ಮೆಲ್ಲಕ್ಕೆ ತಲೆಯಾಡಿಸುತ್ತ ಎರಡಡಿ ಹಾಕಿತು ಗಂಡುಜಿಂಕೆ. ಎರಡೇ ಅಡಿಯಲ್ಲಿ ಹೊರಗೆ ಬಂದು ಬಾಣವನ್ನು ಗುರಿಯಿಟ್ಟ ಲಕ್ಷ್ಮಣ. ಅಕಸ್ಮಾತ್ತಾಗಿ ಹಿಂತಿರುಗಿ ಶರವೇಗದಿಂದ ಬಂದು ಅದು ಅವನ ಹೊಟ್ಟೆಗೆ ಹಾಯಿತು. ಅಂಗಾತ ಬಿದ್ದುಬಿಟ್ಟ ಲಕ್ಷ್ಮಣ. ಹೊಟ್ಟೆ ಹಿಡಿದುಕೊಂಡು ನರಳುತ್ತಿದ್ದ. ಗಟ್ಟಿಯಾಗಿ ಕಿರುಚಿ ಎದ್ದು ಕೂತಳು ಊರ್ಮಿಳೆ. ಅವಳು ಸಮಾಧಾನ ಮಾಡಿಕೊಳ್ಳಲು ಕೊಂಚ ಸಮಯ ಬೇಕಾಯಿತು. ತೋಟದಲ್ಲಿಯ ಬಿಸಿ ಗಾಳಿಗೆ, ಭಯಕ್ಕೆ ಅವಳ ಮೈಯ ಪಸೆ ಒಣಗಿಹೋಯಿತು.
ರಾತ್ರಿ ಅವಳ ಕಂಗಳ ತುಂಬಾ ಕನಸುಗಳು. ಕನಸುಗಳ ತುಂಬಾ ಲಕ್ಷ್ಮಣ. ಅವನ ಮಡಿಲಲ್ಲಿ ತಲೆಯಿಟ್ಟು ನಿದ್ರೆಮಾಡಿದಳವಳು. ಭಾರವಾಗಿ ಮುಂಜಾನೆ ಕಣ್ಣು ತೆಗೆದು ನೋಡಿದಾಗ ಪರಿಚಾರಿಕೆಯ ಪರಿಚಿತ ನಗೆ ಕಂಡಿತು.
ನಿತ್ರಾಣಗೊಂಡಳು ಊರ್ಮಿಳೆ. ನೀರಿಲ್ಲದ ಹೂಬಳ್ಳಿಯಂತೆ ಬಾಡಿಹೋದಳು. ಒತ್ತಾಯವಾಗಿ ತಾಯಿ ಅನ್ನ ಕಲಿಸಿ ಮಕ್ಕಳಿಗೆ ಉಣಿಸಿದ ಹಾಗೆ ಉಣಿಸಬೇಕಾಗುತ್ತಿತ್ತು..
ಒಂದು ದಿನ ಸಂಜೆ ಊರ್ಮಿಳೆ ದಾಳ ಮುಂದಿಟ್ಟುಕೊಂಡು ನೋಡುತ್ತ ಕುಳಿತಿದ್ದಳು. ಇಬ್ಬರ ಆಟ ಒಬ್ಬರೇ ಆಡಿದರೆ ಹೇಗಿರುತ್ತದೆ? ಅಷ್ಟರಲ್ಲಿ ಅವಳ ಇಬ್ಬರು ಪರಿಚಾರಿಕೆಯರು ದೊಡ್ಡದಾಗಿ ನಗುತ್ತ ಬಂದರು.
“ಅಮ್ಮಾ! ನಿಮಗಾಗಿ ಏನು ತಂದಿದ್ದೇವೆ ಎಂದು ನೋಡುವಿರಾ?”
“ತೋರಿಸು.”
ಒಬ್ಬಳ ಕೈಯಲ್ಲಿ ಬಳ್ಳಿಗಳಿಂದ ಹೆಣೆದ ಪುಟ್ಟಿಯೊಂದು ಇತ್ತು. ಇಬ್ಬರೂ ಕಿವಿಯಿಂದ ಕಿವಿಯ ವರೆಗೆ ನಗುತ್ತಾ ಪುಟ್ಟಿಯನ್ನು ಪಕ್ಕಕ್ಕೆ ಬಾಗಿಸಿ ನೆಲದಮೇಲೆ ಮಲಗಿಸಿದರು. ಪುಟ್ಟಿಯಲ್ಲಿ ಏನೋ ಚಲನ ಕಂಡಿತು. ಮೆಲ್ಲಕ್ಕೆ ಪುಟ್ಟಿಯ ಅಂಚಿನಿಂದ ನೆಲದ ಮೇಲಕ್ಕೆ ಒಂದು ಚಿಕ್ಕ ತಲೆ ಹೊರಬಂತು. ಕ್ಷಣದಲ್ಲಿ ಮುಚ್ಚಿದ ಕರಟದಿಂದ ಶರೀರ ಹೊರಬಂತು. ತಣ್ಣಗಿನ ನೆಲ ಮೈಗೆ ತಾಗಲು ಆಶ್ಚರ್ಯದಿಂದ ಅದು ಒಮ್ಮೆ ತಲೆಯೆತ್ತಿ ಬೆನ್ನ ಮೇಲಿನ ಕರಟವನ್ನು ಹೊತ್ತು ಚಲಿಸಿತು. ಕಪ್ಪನೆಯ ಬೆನ್ನಿನ ಮೇಲೆ ಬಿಳಿಯ ಚುಕ್ಕೆಗಳು. ಊರ್ಮಿಳೆ ಆಶ್ಚರ್ಯದಿಂದ ಆ ದೊಡ್ಡ ಅಂಗೈಯಷ್ಟರ ಆಮೆಯನ್ನು ನೋಡುತ್ತಿರಲು ಅವರಿಬ್ಬರೂ ಚಪ್ಪಾಳೆ ತಟ್ಟುತ್ತ ಕೇಕೆ ಹಾಕಿದರು. ಆಮೆ ಸರಕ್ಕನೆ ತನ್ನ ತಲೆ ಒಳಗೆ ಎಳೆದುಕೊಂಡು ನಿಂತಿತು. ಮತ್ತೆ ತಲೆ ಹೊರಹಾಕಿ ಸಂಚಾರ ಮುಂದುವರೆಸಿತು. ವಿಶಾಲವಾದ ನೆಲದ ಮೇಲೆ ಆಚೆ ಈಚೆ ತಿರುಗುತ್ತಾ, ನಿಲ್ಲುತ್ತಾ, ಆಗಾಗ ತನ್ನಲ್ಲಿ ಚಿಪ್ಪಲ್ಲಿ ಮರೆಯಾಗುತ್ತಾ ಮೆಲ್ಲಕ್ಕೆ ಊರ್ಮಿಳೆಯನ್ನು ಸಮೀಪಿಸಿತು. ನಿಂತುಹೋಯಿತು. ಅವಳು ಕೈಚಾಚಿ ಅದರ ಬೆನ್ನನ್ನು ನೇವರಿಸಿದಳು. ಸ್ವಲ್ಪ ಹೊತ್ತು ಬೆನ್ನು ನೇವರಿಸಿಕೊಂಡ ಆಮೆ ಸಂಶಯದಿಂದ ತಲೆ ಹೊರಹಾಕಿತು. ತರ್ಜನಿಯನ್ನು ಅದರ ತಲೆಯ ಮೇಲೆ ಇಡುತ್ತಲೇ ಮತ್ತೆ ಒಳಗೆ ಹೋಯಿತು.
“ಅಮ್ಮಾ! ಬೆರಳು ಕಚ್ಚತ್ತೆ ಅದು. ಜಾಗ್ರತೆ.”
ಊರ್ಮಿಳೆ ಅವರ ಮಾತು ಕೇಳಲಿಲ್ಲ. ಆಮೆಯ ಕಡೆಗೇ ತದೇಕವಾಗಿ ನೋಡುತ್ತಾ ಇದ್ದಳು. ತನ್ನೊಳಗೆ ತಾನು ಮುದುರಿಕೊಳ್ಳುವ ಈ ಚಿಕ್ಕಪ್ರಾಣಿಗೂ, ತನಗೂ ಯಾವುದೋ ಸಂಬಂಧ ಇದೆ ಎನಿಸಿತು. ಸ್ವಲ್ಪ ಹೊತ್ತಿಗೆ ಮತ್ತೆ ಅದು ಊರ್ಮಿಳೆಯ ಕಡೆಗೆ ನಡೆದು ಬಂತು. ಮೆಲ್ಲಕ್ಕೆ ಕೈಚಾಚಿದಳಾಕೆ. ಅವಳನ್ನು ನೋಡಿ ನಿಂತಿತು. ಸಖಿಯರಿಬ್ಬರೂ ಚಪ್ಪಾಳೆ ತಟ್ಟಿದರೂ ಅದು ನಿರ್ಭಯವಾಗಿ ಊರ್ಮಿಳೆಯನ್ನು ನೋಡುತ್ತಿತ್ತು. ತುಂಬಾ ಕತ್ತಲೆ ಬಿದ್ದ ಮೇಲೆ ಸಹ ದೀಪಗಳ ಬೆಳಕಿನಲ್ಲಿ ಅದು ಅವಳ ಹತ್ತಿರವೇ ತಿರುಗುತ್ತಿತ್ತು. ಆಮೆಯನ್ನು ಹೇಗೆ ಎತ್ತಿ ಹಿಡಿಯಬೇಕು ಎಂದು ಊರ್ಮಿಳೆ ಕಲಿತುಕೊಂಡಳು. ಕೈಗಳಲ್ಲಿ ತೊಗೊಂಡ ತಕ್ಷಣ ಸಖಿ ಕೇಳಿದಳು.
“ಇದಕ್ಕೆ ಏನು ಹೆಸರು ಇಡೋಣಮ್ಮಾ?”
ಊರ್ಮಿಳೆ ತುಂಬಾ ತಡಮಾಡಲಿಲ್ಲ.
“ಸೀತೆ”
ತಕ್ಷಣ ಆ ಇಬ್ಬರೂ ಅದನ್ನು ಹೆಸರು ಹಿಡಿದು ಕರೆದರು. ರಾತ್ರಿ ಸೀತೆಯನ್ನ ಊರ್ಮಿಳೆಯ ಹತ್ತಿರವೇ ಪುಟ್ಟಿಯಲ್ಲಿಟ್ಟು ಹೋದರು. ನಿದ್ರೆಗೆ ಜಾರುವ ಮುನ್ನ ಊರ್ಮಿಳೆ ಬಗ್ಗಿ ಕರೆದಳು.
“ಸೀತಾ”
ಪುಟ್ಟಿಯಲ್ಲಿ ಏನೋ ಚಲನವನ್ನು ಗಮನಿಸಿದಳವಳು. ಕಿರುನಗೆಯೊಂದಿಗೆ ನಿದ್ರೆ ಮಾಡಿದಳು.
ಕನಸಿನಲ್ಲಿ ಚಿಕ್ಕ ಸೀತೆ ಅವಳ ಹತ್ತಿರ ಏನೋ ಮಾತಾಡಿದಳು. ಬೆಳಗಾಗುವಾಗ ಕನಸಿನಲ್ಲಿ ನಗುವ ಅಕ್ಕ ಸೀತೆಯನ್ನು  ಕಂಡಳು. ನಿದ್ದೆಯಿಂದ ಎದ್ದ ತಕ್ಷಣ ಊರ್ಮಿಳೆ ಪುಟ್ಟಿಯ ಕಡೆಗೆ ನೋಡಿದಳು. ಪಕ್ಕಕ್ಕೆ ಬಾಗಿಹೋಗಿತ್ತು. “ಸೀತಾ ಸೀತಾ” ಎಂದು ಹುಡುಕಲಾರಂಭಿಸಿದಳು. ಸೀತೆ ಹೊರಗೆ ಹೊಸಿಲ ಬಳಿ ನಿದ್ರೆಯಲ್ಲಿತ್ತು. ಉಸಿರು ಎಳೆದುಕೊಂಡು ಅದನ್ನು ಎತ್ತಿಕೊಂಡಳು. ಬೆಳಗು ಪ್ರಶಾಂತವಾಗಿದೆ ಎಂದೆನಿಸಿತು..
ಪರಿಚಾರಿಕೆಯರಿಗೆಲ್ಲ ಆಶ್ಚರ್ಯವಾಯಿತು. ಸೀತೆ ಅಂತ ಕೇಳಿದ ತಕ್ಷಣ ಆಮೆ ತಲೆ ಹೊರಗಿಟ್ಟು ನೋಡುತ್ತಿತ್ತು.  ಆದರೆ ಊರ್ಮಿಳೆ ಕರೆದರೆ ಮಾತ್ರ. ಆಶ್ಚರ್ಯವೂ ಆನಂದವೂ ಒಟ್ಟಿಗೆ ಆದವು ಊರ್ಮಿಳೆಗೆ. ರಾತ್ರಿ ಮಲಗುವವರೆಗೂ ಸೀತೆ ಅವಳ ಸಾನ್ನಿಧ್ಯದಲ್ಲೇ. ಅವಳ ಹಿಂದೆಯೇ ತಿರುಗುತ್ತದೆ. ಅದರನ್ನು ಹೆಸರು ಹಿಡಿದು ಕರೆಯುವುದು ಊರ್ಮಿಳೆಗೆ ಇಷ್ಟವಾದ ಅಭ್ಯಾಸವಾಯ್ತು. ತೋಟದಲ್ಲಿ ಆಚೆ ಈಚೆ ತಿರುಗುತ್ತಾ, ಯಾವ ಚಿಕ್ಕ ಅಪಾಯ ಕಂಡರೂ ತನ್ನೊಳಗೆ ಎಳೆದುಕೊಳ್ಳುತ್ತಿತ್ತು ಸೀತೆ. ಈ ರಕ್ಷಣೆ ಊರ್ಮಿಳೆಗೆ ತುಂಬಾ ಅದ್ಭುತವಾಗಿ ಕಂಡಿತು. ಈ ಚಿಕ್ಕ ಸೀತೆ ಯಾವುದೋ ದೊಡ್ಡ ಗುಟ್ಟು ಅಡಗಿಸಿಟ್ಟುಕೊಂಡಿದೆ. ಆಗಾಗ ಅದು ತಾವಿಬ್ಬರೇ ಇದ್ದಾಗ ತಲೆಯೆತ್ತಿ ತನಗೆ ಏನೋ ಹೇಳಬಯಸುತ್ತದೆ. ತನ್ನ ಅಸ್ಮಿತೆ, ಚೈತನ್ಯ ಸೀತೆ ಸಹಜವಾಗಿ ಕಾಪಾಡುಕೊಳ್ಳುತ್ತಿದೆ. ಈ ಜಗತ್ತಿನಲ್ಲಿರುತ್ತಲೇ, ತಿರುಗುತ್ತಲೇ, ತಿನ್ನುತ್ತಲೇ ತನ್ನ ಜಗತ್ತಿನಲ್ಲಿ ತನ್ನದಾದ ಪ್ರತ್ಯೇಕವಾದ ನಿದ್ರೆ, ಜಾಗ್ರದಾವಸ್ಥೆಯಲ್ಲಿ ಬದುಕುತ್ತಿದೆ. ಇದು ಕಾಲವನ್ನು, ಚೈತನ್ಯವನ್ನು ತನ ಆಧೀನದಲ್ಲಿ ಇಟ್ಟುಕೊಳ್ಳುತ್ತಿದೆ ಅಲ್ಲವೇ? . ದಿಢೀರನೆ ಬಂದ ಈ ಆಲೋಚನೆ ಅವಳ ಬೆನ್ನಹುರಿಯಲ್ಲಿ ಕಂಪನ ಮೂಡಿಸಿತು..
“ಕಾಲಕ್ಷೇಪಕ್ಕೆ ಪರಿಚಾರಿಕೆಯರು, ಸಖಿಯರು ಇದ್ದಾರೆ. ಆನಂದಿಸಲು ಬೇಕಾದರೆ ಗಿಣಿಗಳನ್ನೋ, ಗೊರವಂಕೆಗಳನ್ನೋ ತರಿಸುತ್ತಿದ್ದೆ! ಮಣ್ಣಿನ ಮುದ್ದೆಯಂಥ ಈ ಆಮೆ ಹೇಗೆ ಇಷ್ಟವಾಯಿತು ನಿಮ್ಮ ಮಗಳಿಗೆ?” ಅಂದಿದ್ದಳು ಊರ್ಮಿಳೆಯ ತಾಯಿ. ಸ್ವಲ್ಪ ಹೊತ್ತು ತಂದೆ ಏನೂ ಹೇಳಲಿಲ್ಲ. ಕೊನೆಗೆ ಸಾಲೋಚನರಾಗಿ “ಅವಳು ಚಿಕ್ಕ ಸೀತೆಯೊಂದಿಗೆ ಆಟಾಡುವುದನ್ನು ನೋಡಿದೆ. ವಾಸ್ತವಕ್ಕೆ ಅವಳು ಆಡುತ್ತಿಲ್ಲ. ಕಾರಣ ಹೇಳುವುದಿಲ್ಲವಾದರೂ ಊರ್ಮಿಳೆ ಅದರಿಂದ ಯಾವುದೋ ಆಲೋಚನೆಯಲ್ಲಿ ಲೀನವಾಗಿದ್ದಾಳೆ.” ಎಂದರು ಅವಳ ತಂದೆ.
“ಇದು ಹೇಗೆ ಸಾಧ್ಯ?”
“ಪ್ರಕೃತಿ ನಮ್ಮ ಗುರು ಎಂದು ಒಪ್ಪಿಕೊಂಡರೆ ಅದು ಸಾಧ್ಯ. ಪ್ರಾಣಿಕೋಟಿ, ಪ್ರಕೃತಿಯಲ್ಲಿ ಒಂದು ಭಾಗವೇ ಅಲ್ಲವೇ! ಸೀತೆ ಸಹ ಆಗ ಪ್ರಕೃತಿಯಾಗುತ್ತದೆ. ಮನದ ಅಂತರಾಂತರಗಳು ಪ್ರಕೃತಿಗೆ ಸ್ಪಂದಿಸುತ್ತವೆ. ಅವುಗಳನ್ನು ಗಮನಿಸುವುದು ನಮ್ಮ ಚಿತ್ತ ಸಂಸ್ಕಾರಕ್ಕೆ ಒಳಪಟ್ಟಿರುತ್ತದೆ. ಬುದ್ಧಿಯ ಮೇರೆಗೆ ಅರ್ಥ ಮಾಡುಕೊಳ್ಳುವುದಿರುತ್ತದೆ. ಈ ಎರಡಕ್ಕೂ ಅತೀತವಾದ ಒಂದು ಸ್ಫುರಣೆ ಸಹ ಇರುತ್ತದೆ.”
ಹಗಲಿಡೀ ಊರ್ಮಿಳೆ ಸೀತೆಯನ್ನು ನೋಡುತ್ತಾ ಅದರ ಜೊತೆ ಆಡುತ್ತ ತನಗೇ ಗೊತ್ತಿಲ್ಲದ ಹಾಗೆ ಸಂತೋಷದಲ್ಲಿರುತ್ತಾಳೆ. ಪರಿಚಾರಿಕೆಯರ ಮಾತುಗಳು, ಹಾಡುಗಳಿಗಿಂತ ಸೀತೆಯ ಜೊತೆ ಕಳೆಯುವುದೇ ಅವಳಿಗೆ ಹೆಚ್ಚು ಇಷ್ಟವಾಗಿದೆ. ರಾತ್ರಿ ಕಳೆಯುವುದು ಮಾತ್ರ ಕಷ್ಟವಾಗಿದೆ. ಒಮ್ಮೆ ನಿದ್ರೆ ಮಾಡಲು ಪ್ರಯತ್ನಿಸುವಾಗ ಅವಳಿಗೆ ಸಂಶಯ ಬಂತು. ಸೀತೆಗೆ ಕನಸುಗಳು ಬರುತ್ತವಾ? ಎಂಥಾ ಕನಸುಗಳು ಅವು? ತನ್ನೊಳಗೆ ತಾನು ಹುದುಗಿಹೋಗಿ ಜಗತ್ತಿನಿಂದ ಕಳಚಿಕೊಳ್ಳಬಲ್ಲ ಸೀತೆಗೆ ಕನಸುಗಳೇಕೆ ಬರುತ್ತವೆ? ಜಗತ್ತಿನ ಜೊತೆ ಸಂಬಂಧವನ್ನು ಅದೇ ನಿಯಂತ್ರಿಸುತ್ತದೆಯೇ? ಹಾವು ಹುತ್ತದಲ್ಲಿ ಅಡಗುತ್ತೆ. ಪಕ್ಷಿಗಳು ಮರಗಳ ಮೇಲಿರುತ್ತವೆ. ಅವುಗಳಿಗೆ ಅಭದ್ರಾತಾ ಭಾವ ಜಾಸ್ತಿ. ಚಿಕ್ಕ ಸೀತೆ ತನ್ನೊಳಗೆ ಹುದುಗಿ ಹೋಗಿಬಿಡುತ್ತೆ. ಎಲ್ಲ ಭಯಗಳಿಗೆ, ನೋವುಗಳಿಗೆ, ವಿಯೋಗಗಳಿಗೆ ಅತೀತವಾಗಿ ಇರಬಲ್ಲದು. ಓಡಿಹೋಗುವುದಿಲ್ಲ. ಕೊನೆಗೆ ನಿದ್ರೆ ಆವರಿಸುವ ಮುನ್ನ ಅವಳಿಗೆ ಒಂದು ಸಂಗತಿ  ಹೊಳೆಯಿತು.. ಚಿಕ್ಕ ಸೀತೆಗೆ ತನ್ನ ಬಗ್ಗೆ ಗೊತ್ತು. ತನಗೆ ಏನೋ ಹೇಳಬೇಕೆಂದು ನಿರಂತರ ಪ್ರಯತ್ನಿಸುತ್ತದೆ. ಅದು ತನಗಾಗಿ ಬಂದಿದೆ.
ನಂತರ ಕೆಲ ದಿನಗಳು ಏಕಾಂತದಲ್ಲಿದ್ದಾಗ ತನ್ನ ಸುತ್ತೂ ಸಂಚಾರದಲ್ಲಿದ್ದ ಸೀತೆಯನ್ನು ಗಮನಿಸುತ್ತ ಆಲೋಚನೆಯಲ್ಲಿ ಮುಳುಗಿದಳು ಊರ್ಮಿಳೆ. ಗಾಳಿಗೆ ತೂರಿಕೊಂಡು ಹೋಗುತ್ತಿದ್ದ ಒಬ್ಬಂಟಿ ನಾವೆಯ ರೀತಿ ಅವಳನ್ನು ನೆನಪುಗಳು, ಆಲೋಚನೆಗಳು ಹಿಂದಕ್ಕೆ ಮುಂದಕ್ಕೆ ಓಲಾಡಿಸುತ್ತಿದ್ದವು.. ಸದಾ ಏಕಾಂತದಲ್ಲಿದ್ದಾಗ ಭಯವಾಗುತ್ತದೆ. ಇನ್ನು ಸೌಮಿತ್ರಿಯನ್ನು ನೋಡಲಾರೆನೇನೋ ಎನ್ನುವ ಭಯ ಅವಳ ಹೃದಯದ  ಮೇಲೆ ಬಂಡೆಕಲ್ಲಿನಂತೆ ಕೂತಿತ್ತು. ತನ್ನ ಜೀವನ, ಭಯದ ಸುರುಳಿ ಸುತ್ತಿದ ವಿಯೋಗ. ಒಂದು ಸಂಜೆ ಊರ್ಮಿಳೆಗೆ ಅಕ್ಕ ಸೀತೆಯ ಮಾತುಗಳು ನೆನಪಿಗೆ ಬಂದವು. “ಬಾಲ್ಯ ಬಿಟ್ಟರೆ ಕ್ಷತ್ರಿಯ ಹೆಣ್ಣಿಗೆ ಸುಖವು ಸಿಗದು.” ಅಂದರೆ ತನ್ನ ಸುಖ ಸಂತೋಷಗಳು ತನ್ನ ಕೈಯಲ್ಲಿಲ್ಲ ಅಂತಾಯಿತು. ಕ್ಷತ್ರಿಯನ ಜೀವನ ಬಾಣದ ರೀತಿ. ಬಿಲ್ಲನ್ನು ಬಿಟ್ಟಮೇಲೆ ಮರಳಿ ಬಾರದು. ಅವನ ಅರ್ಧಾಂಗಿ ಬಾಣಗಳಿಲ್ಲದ ಬತ್ತಳಿಕೆ! ಅಕ್ಕ ಹಾಗೆ ಎಣಿಸ್ತಿದ್ದಾಳಾ? ಈ ಎಚ್ಚರಿಕೆಯಲ್ಲೇ ಜೀವನ ಕಳೆಯುತ್ತಿದ್ದಾಳಾ? ಊರ್ಮಿಳೆಗೆ ಸೀತೆಯ ನಗೆಮೊಗ ಕಾಣಿಸಿತು. ಆ ಮುಖ ನೋಡುತ್ತ ಚೇತರಿಸಿಕೊಂಡಳು.
ಊರ್ಮಿಳೆಯ ಕಾಲಿಗೆ ಏನೋ ಮೆತ್ತಗೆ ತಗುಲಿತು. ಕಾಲಿನ ಹೆಬ್ಬೆಟ್ಟಿನ ಹತ್ತಿರ. ಚಿಕ್ಕ ಸೀತೆಯ ತಲೆ. ಅದು ತಲೆ ಎತ್ತಿ ತನ್ನನ್ನು ನೋಡುತ್ತಿತ್ತು. ಅವಳ ಹೆಬ್ಬೆಟ್ಟನ್ನು ಮೆದುವಾಗಿ ಕಚ್ಚಿತು.
ಬೆಚ್ಚಿಬಿದ್ದಳು ಊರ್ಮಿಳೆ.
ಮತ್ತೆ ಕೆಲ ದಿನಗಳು ಕಳೆದವು.
ಊರ್ಮಿಳೆ ಆಗಾಗ ತನ್ನ ಕಾಲಿನ ಹೆಬ್ಬೆಟ್ಟನ್ನು ಮುಟ್ಟಿ ನೋಡಿಕೊಳ್ಳುತ್ತಿದ್ದಾಳೆ.
ನಡುರಾತ್ರಿಯಾದರೂ ಅವಳಿಗೆ ನಿದ್ದೆ ಹತ್ತುತ್ತಿಲ್ಲ. ಹೊರಗಡೆ ದಿವ್ಯವಾದ ಬೆಳದಿಂಗಳ ಬೆಳಕು. ಕೋಣೆಯಲ್ಲಿ ದೀಪ ಚಲಿಸುತ್ತಿದೆ. ಅವಳು ಎದ್ದು ಕೂತು ಬಗ್ಗಿ ಪುಟ್ಟಿಯನ್ನು ತಟ್ಟಿ ಸೀತೆಯನ್ನು ಕರೆದಳು. ಪುಟ್ಟಿ ಹಗುರಾಗಿತ್ತು. ಊರ್ಮಿಳೆ ಎದ್ದು ಹೊರಗಡೆಯ ಬಾಗಿಲ ಹತ್ತಿರ ನಿಂತು ನೋಡಿದಳು.  ಬೆಳದಿಂಗಳ ಗಾಳಿ ತಣ್ಣಗೆ ಬೀಸುತ್ತಿತ್ತು. ಆ ರಾತ್ರಿಯ ಪ್ರಶಾಂತತೆಯನ್ನು  ಮನಸ್ಸಿನೊಳಗೆ ಎಳೆದುಕೊಂಡಳು ಊರ್ಮಿಳೆ. ಬೆಳದಿಂಗಳಲ್ಲಿ ಮಲಗಿದ್ದಳು ಚಿಕ್ಕ ಸೀತೆ. ಕೊಂಚ ಸಮಯ ಸೀತೆಯನ್ನು ನೋಡುತ್ತ ನಿಂತಳು.. ದಿಢೀರ್ ಎಂದು ತನ್ನ ಮೈ ಭಾರ ಕಳೆದುಕೊಂಡಂತೆ ಅನಿಸಿತು. ಎಚ್ಚರಿಕೆಯಲ್ಲಿದ್ದಾಗಲೆಲ್ಲ ನಿರಾಯುಧನಾದ ಶತ್ರುವಿನ ಮೇಲೆ ಹಾರಿ ದಾಳಿ ಮಾಡಿದ ಹಾಗೆ ಅನಿಸುತ್ತಿದ್ದ ಉದ್ವೇಗಗಳೆಲ್ಲವೂ ಉಪಶಮನಗೊಂಡಂತೆ ಅನಿಸಿತು.  
ತಲೆ ಹೊರಗಿಟ್ಟು ಅವಳ ಕಡೆಗೇ ನೋಡುತ್ತಿತ್ತು ಸೀತೆ.
ಅಸಂಕಲ್ಪಿತವಾಗಿ ಊರ್ಮಿಳೆ ಸೀತೆಯ ಎದುರಲ್ಲಿ ಕೂತಳು.
ಅದೇ ಸ್ಥಿತಿಯಲ್ಲಿ ಪದ್ಮಾಸನ ಹಾಕಿ ಹೆಬ್ಬೆಟ್ಟನ್ನು ನೋಡಿಕೊಂಡಳು.
ಹಾಗೇ ಸ್ವಲ್ಪ ಹೊತ್ತು ನೋಡಿಕೊಂಡು, ಸೀತೆಯ ಕಡೆಗೆ ನೋಡುತ್ತಾ ಅಂದಳು.
“ಹೇಳು ಸೀತೇ! ನಾನು ಸಿದ್ಧಳಾಗಿದ್ದೇನೆ.”
ಅಷ್ಟೂ ಹೊತ್ತು ತಿಂಗಳ ಬೆಳಕನ್ನು ಸವಿದು ಅಮಲಿನಲ್ಲಿದ್ದಂತೆ ಸೀತೆ ತಲೆ ಎತ್ತಿ ನೋಡಲಾರದೆ, ಅವಳನ್ನೇ ನೋಡುತ್ತ ಕ್ರಮೆಣ ತನ್ನೊಳಗೆ ಹೋಯಿತು.
ಊರ್ಮಿಳೆ ಆ ಸುಪ್ತ ಚೇತನವನ್ನು ಅರೆತೆರೆದ ಕಂಗಳಿಂದ ನೋಡುತ್ತಿದ್ದಳು.
ಸ್ವಲ್ಪ ಸಮಯದಲ್ಲಿ ಅವಳ ಕಂಗಳು ಧ್ಯಾನಸ್ಥಿತಿಯಲ್ಲಿ ಮುಚ್ಚಿಕೊಂಡವು.
ಮತ್ತೆ ಕೆಲ ಸಮಯಕ್ಕೆ ಸೀತೆ ತಲೆ ಹೊರಗಿಟ್ಟು ಅವಳನ್ನು ನೋಡಿ ಒಳಗೆ ಹೋಯಿತು. ಮಾರನೆಯ ದಿನ ಮುಂಜಾನೆ, ಆ ಮಾರನೆಯ ದಿನ ಮತ್ತು ಆ ಮಾರನೆಯ ದಿನ ಸಖಿಯರು ಎಷ್ಟು ಹುಡುಕಿದರೂ ಚಿಕ್ಕ ಸೀತೆ ಕಾಣಲಿಲ್ಲ.


One thought on “ತಲ್ಲಾವಜ್ಝುಲ ಪತಂಜಲಿ ಶಾಸ್ತ್ರಿ ಅವರ ತೆಲುಗುಕಥೆ “ಸೀತೆಯೆಂಬ ಆಮೆ” ಕನ್ನಡಕ್ಕೆ ಅನುವಾದ ಮಾಡಿದವರು ಚಂದಕಚರ್ಲ ರಮೇಶಬಾಬು

  1. ಕತೆ ತುಂಬಾ ಚೆನ್ನಾಗಿ ಭಾವನಾತ್ಮಕವಾಗಿ ಮೂಡಿ ಬಂದಿದೆ ಸರ್.

Leave a Reply

Back To Top