ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
 ತನ್ನ ನೂಲು ತನ್ನನ್ನೇ ಸುತ್ತಿ ಸುತ್ತಿ ಸಾವ ತೆರನಂತೆ
 ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
 ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
 ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನಾ

____

ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಮಾನವನಿಗೂ ,ಒಂದಿಲ್ಲ ಒಂದು ಆಸೆ ಇದ್ದೇ ಇರುತ್ತದೆ.ಒಂದು ಆಸೆ ತೀರಿದ ಮೇಲೆ ಮತ್ತೊಂದು ಆಸೆಗೆ, ಕಣ್ಣು ಹಾಕುವ ಮಾನವನ ದುರಾಸೆಗೆ ಕೊನೆಯ ಇಲ್ಲ ಎನ್ನುವ, ಸತ್ಯವಾದ ಮಾತನ್ನು ನಾವು ನೀವುಗಳೆಲ್ಲ ಒಪ್ಪಲೇ ಬೇಕು ಅಲ್ಲವೇ ?

 ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ,
 ತನ್ನ ನೂಲು ತನ್ನನ್ನೇ, ಸುತ್ತಿ ಸುತ್ತಿ ಸಾವ ತೆರನಂತೆ,

ಜೇಡರ ಹುಳುವು ತನ್ನ ನೂಲಿನಿಂದ ತನ್ನ ಮನೆಯ ಬಲೆಯನ್ನು ಅತೀ ಸಂತಸದಿಂದ ಹೆಣೆಯುತ್ತದೆ.
ಹಾಗೇ, ತನ್ನ ನೂಲಿನಿಂದ ಹೆಣೆದ ಬಲೆಯಿಂದ ಹೊರಗೆ ಬರದೇ ವದ್ದಾಡುತ್ತದೆ .
ವದ್ದಾಡಿ, ವದ್ದಾಡಿ ಬಲೆಯಿಂದ ಹೊರಗೆ ಬರಲಿಕ್ಕೆ ಆಗದೇ, ತನ್ನದೇ ಬಲೆಯಲ್ಲಿ ,ತಾನೇ ಹೆಣೆದ ಬಲೆಯಲ್ಲಿ ಸುತ್ತಿ, ಸುತ್ತಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ ..

ಈ ಒಂದು ವಚನದಲ್ಲಿ ಅಕ್ಕಳು ತನ್ನ ಅರಿವಿನ ಗಂಡನಾದ, ಚೆನ್ನಮಲ್ಲಿಕಾರ್ಜುನನನ್ನು ನೆನೆಯುವ ಪರಿ ಅಮೋಘವಾದುದು .ಆ ನೆನಪಿನ ಗೂಡಿನಲಿ, ತನ್ನ ನೂಲಿನಿಂದಲೆ ತಾನೆ ರೇಶಿಮೆಯ ಎಳೆಯನ್ನು ಬಿಚ್ಚುತ್ತ ,ಹೆಣೆಯುತ್ತ,ಸುತ್ತುತ್ತ, ತತ್ತರಿಸುವ ಅಕ್ಕಳ ಅರಿವಿನ ವಿರಹ ಭಾವದ ಗಂಡನ ನೂಲು ಎಳೆ ಎಳೆಯಾಗಿ, ತನ್ನ ದೇಹದಿಂದಲೇ ಉತ್ಪತ್ತಿಯಾದ,ಈ ನೂಲಿನ ರೇಶಿಮೆಯ ಎಳೆಯು ತನ್ನ ದೇಹವೆಂಬ  ಗೂಡನ್ನೇ, ಸುತ್ತಿ ಸುತ್ತಿ ಕೊನೆಗೆ ಸುಸ್ತಾಗಿ ,ನಿತ್ರಾಣಗೊಂಡು ಹೊರಗೂ ಬರಲಾರದೇ , ಅದೇ  ಸ್ಥಿತಿಯಲ್ಲಿಯೇ ತನ್ನ ಪತಿಯಾದ ಚೆನ್ನಮಲ್ಲಿಕಾರ್ಜುನನನ್ನು ನೆನೆದು ,
ನನ್ನ ಮನದ ದುರಾಸೆಯನ್ನು ನಿವಾರಿಸಿ ನಿಮ್ಮತ್ತ ತೋರಾ ಎನ್ನುವರು ಅಕ್ಕ .

ಹೇಗೆ ಜೇಡರ ಬಲೆಯು ತನ್ನ ನೂಲನ್ನೇ ಸುತ್ತಿ ,ಸುತ್ತಿ ಹೊರಗೆ ಬರದೆ ಒದ್ದಾಡಿ ಸಾಯುತ್ತದೆಯೋ, ಹಾಗೆ ಅಕ್ಕನವರ ಮನಸ್ಥಿತಿಯು ಆಗಿರುವುದು ನಮಗಿಲ್ಲಿ ಕಂಡು ಬಂದಿದೆ .

ಅಲೌಕಿಕ ಗಂಡನಾದ ಕೌಶಿಕನ ಅರಮನೆಯ ಬದುಕು, ಒಂದು ರೀತಿಯ ರೇಶಿಮೆಯ ಗೂಡು ಇದ್ದ ಹಾಗೆ .ಎನ್ನುವ ಭಾವ ಅಕ್ಕನವರದು .
ಕೌಶಿಕನಿಂದ ಅನುಭವಿಸಿದ ನೋವು, ಅಕ್ಕನವರಿಗೆ ಅಷ್ಟೇ ಗೊತ್ತು .ಅದು ಜೀವವಿದ್ದೂ ಸತ್ತಂತೆ.

 ಮನ ಬಂದುದ ಬಯಸಿ ಬಯಸಿ ಬೇಯುತ್ತಿರುವೆನಯ್ಯ !

ಮನಸ್ಸೇ ಹಾಗೇ, ಕಂಡದ್ದನ್ನು ಪಡೆಯುವ ಛಲ ಒಬ್ಬೊಬ್ಬರದು .ಒಂದನ್ನು ಪಡೆದರೆ, ಮತ್ತೊಂದು ಪಡೆಯುವ ಹುಚ್ಚು ಬಯಕೆಯ ಮನ ಕೋತಿ ಆಟ .ಈ ಮನ ಕೋತಿ ಆಟಕ್ಕೆ ಬಲಿಯಾದ ಮನಕ್ಕೆ ಮಾತ್ರ ಗೊತ್ತು .
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ,ಆಡುವ ಆಟಕ್ಕೆ ಬಲಿಯಾದ ಮನಸ್ಸು ತತ್ತರಿಸಿ ,ತತ್ತರಿಸಿ ಬೀಳುತ್ತದೆ.
ಹರಿಯುವ ನೀರಿನಂತೆ ಮನಸ್ಸು ,ಆ ಹರಿಯುವ ಮನಕ್ಕೆ ಒಡ್ಡು ಕಟ್ಟುವ ಜಾನತನ ಇರುವರೇ  ಸಾಧಕರು .
ಮನದೊಳಗಿನ ಅರಿಷಡ್ವರ್ಗಗಳನ್ನು ಜಯಿಸಿ ನಡೆಯಬೇಕು ಎನ್ನುವುದು ಅಕ್ಕನವರು ಹೇಳಿದ ಅನುಭಾವದ ನುಡಿಗಳನ್ನು ಇವತ್ತಿನ ಜನರು ಅದೆಷ್ಟು ಪಾಲಿಸಿಕೊಂಡು ನಡೆಯುತ್ತಿದ್ದಾರೆ ಎನ್ನುವುದನ್ನು ಅವಲೋಕಿಸಿಕೊಂಡು ನಡೆಯಬೇಕಾಗಿದೆ.

ಹೇ, ಚನ್ನಮಲ್ಲಿಕಾರ್ಜುನ ಈ ಭವ ಬಂಧನದಿಂದ ನನ್ನನ್ನು ಪಾರು ಮಾಡು.ನನ್ನ ಮನ ಬಂದುದನ್ನು ಬಯಸಿ ಬಯಸಿ ಬೇಯುತ್ತಿದೆ.
ಭಕ್ತಿಯ ಅರಿವಿನ ಭಾವ ಕಣ್ಮರೆಯಾಗುತ್ತಿದೆ. ಎಂದೆನ್ನುವರು ಅಕ್ಕ.

 ಅಯ್ಯ, ಎನ್ನ ಮನದ ದುರಾಸೆಯ ಮಾಣಿಸಿ ನಿಮ್ಮತ್ತ ತೋರಾ ,ಚೆನ್ನಮಲ್ಲಿಕಾರ್ಜುನ

ಕಾಣದ ಅಮೂರ್ತ, ನಿರಾಕಾರನಾದ ಅರಿವಿನ ಭಾವ ಮನದ ಪತಿಯಾದ ಚೆನ್ನಮಲ್ಲಿಕಾರ್ಜುನನನ್ನು ಕಾಣಲು ಪ್ರಕೃತಿಯೊಂದಿಗೆ ತನ್ನ ಮನದ ಇಂಗಿತವನ್ನು ತೋಡಿಕೊಂಡ ,ನಿರಾಸೆಯ ಭಾವ ಒಡಮೂಡಿ ನಿಂತಾಗ, ಹೇ ಚೆನ್ನಮಲ್ಲಿಕಾರ್ಜುನಾ ನನ್ನ ಮನ ನಿನಗಾಗಿ ಹಂಬಲಿಸಿ ಹಂಬಲಿಸಿ ಸೋತು ಹೋಗಿದೆ .ಈ
ನನ್ನ ಮನದ ದುರಾಸೆಯವ ಹೋಗಲಾಡಿಸಿ, ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ .
——————————————————–

2 thoughts on “

Leave a Reply

Back To Top