ಪುಸ್ತಕ ಸಂಗಾತಿ
ಕವಿ ಸಿದ್ದು ಸಾವಳಸಂಗ ಅವರ
‘ಗೋಧೂಳಿ ಗಂಧ’
ಒಂದು ಅವಲೋಕನ
ಡಾ. ವೈ.ಎಂ.ಯಾಕೊಳ್ಳಿ.
ನಮ್ಮ ನಡುವಿನ ನಿರಂತರ ಬರಹಗಾರರಲ್ಲಿ ತುಂಬ ಮುಖ್ಯವಾದವರು ವಿಜಯಪುರದ ಕವಿ ಶ್ರೀ ಸಿದ್ದು ಸಾವಳಸಂಗ ಅವರು ನಿತ್ಯ ಸಾಮಾಜಿಕ ಜಾಲತಾಣದಲ್ಲಿ, ನಾಡಿನೆಲ್ಲೆಡೆ ಪ್ರಕಟವಾಗುವ ಪತ್ರಿಕೆಗಳಲ್ಲಿ ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಒಂದು ಕವಿತೆಯೋ ಅxವಾ ಒಂದು ಲೇಖನವೋ ಪ್ರಕಟವಾಗಿಯೇ ಇರುವದನ್ನು ನಾವು ನೋಡುತ್ತೇವೆ. ಅದರೊಂದಿಗೆ ಅನೇಕ ಪ್ರಶಸ್ತಿಗಳನ್ನೂ ಅವರು ಪಡೆದ ಸುದ್ದಿಯನ್ನು ನಾವು ಓದಿಯೇ ಓದುತ್ತೇವೆ. ದಿನಾಲು ಆಸಕ್ತಿಯಿಂದ ಬರೆಯುತ್ತಿರುವವರಿಗೆ ಮಾತ್ರ ಇದು ದೊರಕಲು ಸಾಧ್ಯ ಎಂಬುದನ್ನು ನಾವು ಮರೆಯಬಾರದು.
ಸದ್ಯಕ್ಕೆ ವಿಜಯಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಶ್ರೀಯುತರು ೧೯೬೭ ಎಪ್ರೀಲ್ ೧೭ ರಂದು ಜನಿಸಿದ ಅವರು ಮೂಲತ: ತಿಕೊಟಾ ತಾಲೂಕಿನ ತಾಜಪುರದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು ವಿಜಯಪುರ ಜಿಲ್ಲೆಯ ಮದಭಾವಿ ಯ ಪ್ರೌಢಶಾಲೆಯಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣ ಪಡೆದರು ನಂತರ ಪದವಿ ಪೂರ್ವ ಮತ್ತು ಪದವಿ ವ್ಯಾಸಂಗವನ್ನು ವಿಜಯಪೂರದಲ್ಲಿ ಪೂರ್ಣಗೊಳಿಸಿ ಕರ್ನಾಟಕ ವಿಶ್ವಿದ್ಯಾಲಯದಿಂದ ಎಂ.ಎ ಸ್ನಾತಕೋತ್ತರ ತರಗತಿಯಲ್ಲಿ ಉತತೀರ್ಣರಾಗಿ .ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಜಮಖಂಡಿಯಿಂದ ಬಿ ಇಡಿ ಪದವಿಯನ್ನೂ ಪಡೆದು ೧೯೯೭ ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆಗೆ ಸೇರಿ ಕಳೆದ ೨೫ ವರ್ಷಗಳಿಂದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
೧೯೯೦ರಿಂದಲೇ ಅವರು ಕವನಗಳನ್ನು ಬರೆಯುತ್ತಿದ್ದರೂ , ಬರೆದುದುನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರೂ ಅವನ್ನು ಒಂದೆಡೆ ಸೇರಿಸಿ ಕವನ ಸಂಕಲನ ತರುವ ಸಾಹಸವನ್ನು ಮಾಡಿರಲಿಲ್ಲ .ಆದರೆ ಈ ಮೊದಲೇ ಒಂದು ವಚನ ಸಂಕಲನ(ವಚನ ಸಂಜೀವಿನಿ) ಮತ್ತು ಒಂದು ಹನಿಗವನ ಸಂಕಲನ (ಹೃದಯ ಹೂವಿನ ಹಂದರ) ಅವರು ಪ್ರಕಟಿಸಿದ್ದರು. ಹೀಗಾಗಿ ಈಗ ಪ್ರಕಟವಾಗಿರುವ ಅವರ ‘ಗೋಧೂಳಿ ಗಂಧ’ ಅವರ ಮುರನೆಯ ಕೃತಿಯಾಗಿ ರೂಪುಗೊಂಡಿದೆ.
ಶ್ರೀ ಸಿದ್ದು ಸಾವಳಸಂಗ ಅವರು ಪ್ರಕಟಿಸಿದ ಹೊಸ ಕವನ ಸಂಕಲನ ‘ಗೋಧೂಳಿ ಗಂಧ’ ೫೦ ಕವನಗಳನ್ನು ಒಳಗೊಂಡಿದೆ. ಬಹಳ ಇತರ ಸರಳವಾದ ಸುಂದರ ರಚನೆಗಳಿಂದ ಕೂಡಿದೆ. ಕವಿಯ ವಯಕ್ತಿಕ ಪ್ರೇಮ, ಸಾಮಾಜಿಕ ಚಿಂತನೆ, ಸಮಕಾಲೀನ ಸಂಗತಿಗಳಿಗೆ ಕವಿ ಪ್ರತಿಕ್ರಿಯಿಸುವ ರೀತಿ , ಬಡವರ ಬದುಕು, ರ‍್ಯತರ ಬವಣೆ, ಇಂದಿನ ಯುವ ಜನಾಂಗ, ಕವಿಯ ದಾಂಪಯತ್ಯದ ಚಿತ್ರಗಳು ಹೀಗೆ ಹತ್ತು ಹಲವು ವಸ್ತುಗಳನ್ನು ಇಲ್ಲಿನ ಕವಿತೆಗಳು ಒಳಗೊಂಡಿವೆ..
ಮೊದಲ ಕವಿತೆಯಲ್ಲಿಯೆ ‘ಗೆಳತಿ ನೀನಿಲ್ಲದ ಸಮಯ’ ಎಂಬ ಶಿರ್ಷಿಕೆಯಲ್ಲಿ ತಮ್ಮ ಪ್ರೇಮ ತಮ್ಮನ್ನು ಅಗಲಿದರೆ ಉಂಟಾಗುವ ಪ್ರಭಾವವನ್ನು ವಿವಿರಿಸಿದ್ದಾರೆ. ಸುಂದರವಾದ ಇಂಥ ಪ್ರೇಮದ ನಿವೇದನೆಗಳು ಸಂಕಲನದಲ್ಲಿ ಅಲ್ಲಿ ಬಂದಿವೆ. ಪ್ರೇಮ ನವಿರದ ಭಾವ. ಅದು ಸದಾ ನಮ್ಮ ಕವಿಗಳನ್ನು ಕಾಡುತ್ತಲೆ ಇರುತ್ತದೆ. ‘ಕುವೆಂಪು’ ಅಂಥ ಮಹಾಕವಿಗಳೇ ತಮ್ಮ ಪ್ರೇಮಕ್ಕೆ ‘ನೀನು ಇದ್ದರೆ ಹೊತ್ತು ಹರಿಯುವದು ಹೊನಲಾಗಿ , ನೀನಿಲ್ಲದಿರೆ ಕಾಲ ನಿಲ್ಲುವದು ಕಲ್ಲಾಗಿ’ ಎಂದು ತಹತಹಿಸಿದ್ದುದನ್ನುಝ ಹಮ್ ನಾವು ಕನ್ನಡದಲ್ಲಿ ನೋಡುತ್ತೇವೆ. ಹಾಗೆಯೇ ಇಲ್ಲೂ ಕವಿ ಸಿದ್ದು ಅವರಿಗೆ
ಗೆಳತಿ ನೀನಿಲ್ಲದ ಸಮಯ
ನನ್ನ ಮನಕೆ ಕವಿದ ಶೂನ್ಯ ಕರಗಿ
ಸಂತಸದ ಹೂವು ಅರಳುವುದಿಲ್ಲ
ಎನ್ನುವ ಶೂನ್ಯತೆ ಕಾಡುತ್ತದೆ. ಹಿಂದಿನ ಕವಿಗಳ ಕವಿತೆಯಲ್ಲಿ ಎಲ್ಲೋ ಒಂದು ಕಡೆ ಓದಿದ್ದೇವೆ ಎನಿಸುವ ಸಾಲನ್ನು ಶೀರ್ಷಿಕೆಯಾಗಿರಿಸಿಕೊಂಡ ‘ಮುನಿಸು ತರವೇ ನಲ್ಲೆ’ ಕವಿತೆ ತನ್ನವಳು ಕೋಪಗೊಂಡಿರುವಾಗ ಅವಳ ಕೋಪವನ್ನು ಶಮನ ಮಾಡುವ ಪ್ರಯತ್ನದಲ್ಲಿ ತೊಡಗಿದೆ. ಪ್ರಾಸವನ್ನೂ ಉಳಿಸಿಕೊಳ್ಳುವ ರೀತಿಯಲ್ಲಿ ಕವಿ
ನಲ್ಲೆ ಮುನಿಸು ತರವೆ ?
ಹಬ್ಬಲಕ್ಕೆ ತಂದಿರುವೆ ಒಡವೆ?
ಮತ್ತೇಕೆ ಈ ಕಲಹದ ಗೊಡವೆ ?
ಸರಿಸಿ ಬಿಡು ಈ ಅಂತರದ ಪರದೆ
ಚಿಮ್ಮಿ ಬಿಡಲಿ ಪ್ರೇಮದ ಕಾರಂಜಿ ಮುಂದೆ
ಎಂತಲೂ ವಿನಂತಿಸುತ್ತಾನೆ. ಬದುಕಿನ ದಾರಿಯಲ್ಲಿ ಈ ಸಿಟ್ಟು ಸೆಡವು ಯಾರ ಬಾಳಲಿಲ?್ಲ ಮುಂದೊಮ್ಮೆ ಈ ಸಿಟ್ಟಿನ ಪರದೆ ಹರಿದು . ಮುಸುಕಿದ ಮೋಡ ಕರಗಿ ಬೆಳ್ಳನೆಯ ಬಿಸಿಲು ಬಿದ್ದ ಹಾಗೆ ಪ್ರೀತಿ ಮೂಡುತ್ತದೆ. ಆಗ
ನಿನಗೆ ನಾನು ನನಗೆ ನೀನು
ಜೀವನ ಪರ್ಯಂತ ಹಾಲು ಜೇನು( ಒಲವಿನ ಸಖಿಗೆ ಪ್ರಶ್ನೆ)
ಎನ್ನುವ ಸಂತಸದ ಸಾಲು ಬರೆಯುತ್ತಾನೆ. ಹೀಗೆ ಒಂದು ದಿನ ದು:ಖ , ಇನ್ನೊಂದು ದಿನ ಸುಖ ಇವು ಬದುಕಿನ ಪುಟಗಳೇ ಆಗಿರುವ ಸತ್ಯವನ್ನು ಕವಿ ಸಾವಳಸಂಗ ತಮ್ಮ ನಿತ್ಯಜೀವನದಲ್ಲಿ ಕಾಣುತ್ತಾರೆ ಅವನ್ನೇ ಕವಿತೆಯಾಗಿಸುತ್ತಾರೆ. ‘ಮಡದಿ’ ಎಂಬ ಕವಿತೆಯಲ್ಲಿ ಸಂಸಾರದಲ್ಲಿರುವ ಸುಖವನ್ನು ಚಿತ್ರಿಸಿದ್ದಾರೆ.
ಕವಿ ಸಮಾಜ ಜೀವಿ . ಅಲ್ಲಿ ನಡೆಯುವ ಅನ್ಯಾಯ , ಅನಾಚಾರ ಪ್ರಜ್ಞಾವಂತ ಕವಿಯನ್ನು ಮೌನದಲ್ಲಿರಲು ಬಿಡಲಾರವು ‘ನಾವು ಮಹಿಳೆಯರು’ ಎಂದು ಮಹಿಳೆಯ ನೋವಿಗೆ ದನಿಯಾಗುವ ಕವಿ, ‘ಇವರು ಪುಂಡರು ಪೋಕರಿಗಳು’ ಎಂದು ಸಮಾಜದಲ್ಲಿ ಕಂಡು ಬರುವ ದುರುಳ ರಾಜಕಾರಣಿಗಳನ್ನು ತನ್ನ ಚಾಟಿ ಏಟಿನಂತಹ ಮಾತಿನ ಮೂಲಕ ಚುಚ್ಚುತ್ತಾರೆ.
ಇವರು ಪುಂಡರು ಪೋಕರಿಗಳು
ಚುನಾವನೆಯ ದಿನ ಮತ ಪಟ್ಟಿಗೆ ಉ ಊ ಕ ಝಗಘ
ಅಪಹರಿಸುತ್ತಾರೆ,
ಕಳ್ಳ ಮತದಾನ ಮಾಡುತ್ತಾರೆ. (ಇವರು ಪುಂಡರು,ಪುಢಾರಿಗಳು)
ಎಂದು ನಿರ್ಭಿಡೆಯಿಂದಲೆ ಅವರನ್ನು ಚುಚ್ಚುತ್ತಾರೆ. ನಮ್ಮ ತಪ್ಪೂ ಇಲ್ಲವೆಂದಲ್ಲ ನಾವು ಸಾಮಾನ್ಯರು ಹೇಗೆ ಜಾತಿ ವ್ಯವಸ್ಥೆಗಳ ಗುಲಾಮರಾಗಿದ್ದೇವೆ ಎಂಬುದನ್ನು ‘ನಾವು ಭಾರತೀಯರು ಕವಿತೆ ‘ ಚಿತ್ರಿಸಿದೆ.
ಆ
ನಾವು ಭಾರತೀಯರು
ಜಾತಿ ಧರ್ಮದ ಹೆಸರಲ್ಲಿ
ದೇಶವನ್ನು ನೂರಾರು ಹೋಳು ಮಾಡಿ
ರಕ್ತದೋಕುಳಿಯಾಡಿದವರು
ಬಡವರ ಪಾಡು ಕವಿಯ ಜೀವವನ್ನು ಕದಡಿದೆ. ಅದನ್ನು ‘ಇಲ್ಲದವರ ಹಾಡು ಪಾಡು’ ದಂತಹ ಕವಿತೆಗಳು ವಿವಿರಿಸಿವೆ. ತೀವ್ರವಾದ ಸಾಮಾಜಿಕ ಕಾಳಜಿಯ ಈ ಕವಿ ಮಹಿಳೆಯ ಶೋಷಣೆ ಮಾಡುವ ಪುರುಷರನ್ನು ಕಂಡು ರೊಚ್ಚಿಗೇಳುತ್ತಾರೆ. ‘ಗಂಡಸರಿಗೆ ಧಿಕ್ಕಾರ’ ಎಂಬ ಕವಿತೆಯಲ್ಲಿ
ಹರೆಯದ ಹೆಣ್ಣು ಕಂಡಾಗ
ಸೆರಗಿನ ಮರೆಯ ದೇಹವ
ಕಣ್ಣೆಂಬ ಕ್ಯಮರಾದಿಂದ ತಡಕಾಡುವ
ಹೇಡಿ ಗಂಡಸರಿಗೆ ದಿಕ್ಕಾರ
ಎಂದು ತಿರಸ್ಕರದಿಂದ ಕಾಣುವ
ಕವಿ ನಿಸರ್ಗದ ಸಂಗತಿಗಳಿಗೂ ಗಮನ ಕೊಟ್ಟುದಕ್ಕೆ ಇಲ್ಲಿನ ಕೆಲವು ಕವಿತೆಗಳನ್ನು ಉದಾಹರಿಸಬಹುದು .ಮಳೆಯನ್ನೇ ಜನನ ಸುರಿಸದೆ ಓಡುವ ಮೋಡಗಳಿಗೆ ‘ತುಸು ನಿಲ್ಲಿರಿ’ ಮೋಡಗಳೇ ಎಂದು ಕರೆಕೊಡುವ ಕವಿ
ಧರೆಯ ಮಡಿಲು ಕಾಯ್ದು
ಕೆಂಡದುಂಡೆಯಾಗಿದೆ.
ಸುರಿಸಿ ಮಳೆಯನ್ನು
ಇಹಕ್ಕೆ ತಂಪು ತರಬಾರದೆ?
ಎಂದು ಕೇಳಿಕೊಳ್ಳುತ್ತಾನೆ. ದ್ವಿಪದಿಗಳಲ್ಲಿಯೂ ಇದೇ ಭಾವವಿದ್ದು “ಭೂಮಿಗೆ ಬಂದಾಗ ಪ್ರಥಮ, ಮಳೆ, ರೈತನ ಮುಖದಲ್ಲಿ ಹೊಸ ಕಳೆ” ಎಂಬ ಸಾಲಿನಲ್ಲಿ ಚಿತ್ರಿಸಿದ್ದಾರೆ. ವಿಜಯಪುರದವರೇ ಆಗಿರುವ ಕವಿ ಈ ನೆಲದಲ್ಲಿ ತುಂಬ ಆದರ್ಶಜೀವನ ಸಾಗಿಸಿ ಮಹಾಂತರಾಗಿ ಹೋದ ಶ್ರೀ ಶಿದ್ದೇಶ್ವರ ಶ್ರೀಗಳನ್ನು ‘ಧರೆಗೆ ಅವತರಿಸಿದ ದೇವರು’ ಎಂದು ಕರೆದಿದ್ದಾರೆ. ಅವರ ಬದುಕಿದ ಸರಳ ರೀತಿಯನ್ನು ಈ ಕವಿತೆಯಲ್ಲಿ
ಶುಭ್ರವಸ್ತ್ರ ಧರಿಸಿದ ನಿಮಗೆ ಕಿಸೆಯೆ ಇಲ್ಲ
ನೀವು ಆಸೆ ಆಮಿಷ ಗೆದ್ದ ಮಹಾಮಲ್ಲ
ಎಂದು ಮನದುಂಬಿ ಬಣ್ಣಿಸಿರುವದನ್ನು ಕಾಣುತ್ತೇವೆ. ಅವರ ನೆನಪಿನಲ್ಲಿ ಅರ್ಪಿಸಿದ ಅಶ್ರುತರ್ಪಣ ಈ ಕವಿತೆಯ ರೂಪ ಧರಿಸಿದೆ .
ಕವಿ ಸಿದ್ದು ಸವಳಸಂಗ ಅವರನ್ನು ವಯಕ್ತಿಕವಾಗಿಯೂ ನಾನು ಕಳೆದ ಎರಡು ದಶಕದಿಂದ ನೋಡುತ್ತಲೇ ಬಂದಿದ್ದೇನೆ . ತಾವಾಯಿತು ತಮ್ಮ ಬರಹವಾಯಿತು ಎಂಬಂತೆ ಇರುವ , ಸದಾ ತಮ್ಮ ಕೆಲಸದಲ್ಲಿ ತಾವಿದ್ದು ಬಿಡುವ ಮೌನಿಯ ಹಾಗೆ ಅವರು ಕಂಡಿದ್ದಾರೆ. ಮಾತೂ ಕಡಿಮೆ. ಆಡಿದರೆ ಅವೂ ಮೆಲುದನಿಯ ಎರಡು ಮಾತುಗಳು. ಆದರೆ ಇಂತಹ ತಾಳ್ಮೆಯಿಂದ ಕೂಡಿದ ಕವಿಯ ಮನಸ್ಸಿನಲ್ಲಿಯೂ ಅನೇಕ ತಲ್ಲಣಗಳು ಹೇಳಲೇಬೇಕಾದ ಮಾತುಗಳೂ ಇರುತ್ತವೆ. ಅವೇ ಆಗಾಗ ಕವಿತೆಗಳಾಗಿ ಸಿಡಿಯುತ್ತವೆ. ಅವರದು ವಿನಯವಂತ ಬದುಕೇ ಹೊರತು ಸೋಲಿಗೆ ಶರಣಾಗುವ ಗುಣವಲ್ಲ. ತಣ್ಣನೆಯ ಸ್ವಭಾವದೊಳಗೂ ಒಂದು ಛಲ ಎದ್ದು ಕಾಣುತ್ತದೆ ಇದನ್ನು ಅವರದೇ ಸಾಲುಗಳಲ್ಲಿ ಕಾಣುತ್ತೇವೆ. ತನ್ನನ್ನು ಕರಕಿಗೆ ಹೋಲಿಸಿಕೊಳ್ಳುವ ಕವಿ
ನನ್ನನ್ನು ತುಳಿದಂತೆಲ್ಲಾ
ಸಣ್ಣಕರಕಿಯಂತೆ ಮತ್ತೆ ಮತ್ತೆ
ಬೆಳೆಯಬೇಕೆಂಬ ಛಲ ಮೂಡುತ್ತದೆ!
ಎನ್ನುವ ಸಾಲುಗಳಲ್ಲಿ ಕಾಣುತ್ತೇವೆ. ಇನ್ನೊಂದು ಕವಿತೆ ‘ನಾನು ಶಾಂತವಾಗಿದ್ದೇನೆಂದರೆ’ ಎಂಬ ಕವಿತೆ ಯಲ್ಲಿಯೂ “ನಾನು ಶಾಂತವಾಗಿದ್ದೇನೆ ಎಂದರೆ ನನ್ನಲ್ಲಿ ಕೋಪವಿಲ್ಲವೆಂದರ್ಥವಲ್ಲ ಎದೆಯೊಳಗೆ ವಡಬಾಗ್ನಿ ತುಂಬಿಕೊಂಡಿದೆ” ಎಂದು ತಮ್ಮ ಆಕ್ರೋಶ ವ್ಯಕ್ತ ಮಾಡುತ್ತಾರೆ. ಹೌದು , ಕವಿಯ ಎದೆ ಒಂದು ವೀಣೆಯೂ ಹೌದು . ಅಲ್ಲಿ ಸುಂದರ ಹಾಡೂ ಇವೆ. ಹಾಗೆಯೇ ಅದರಲ್ಲಿ ಆಕ್ರೋಶದ ಪಾಡೂ ಇದೆ. ಇವೆರಡೂ ಸಂಗತಿಗಳಿಗೆ ಕವಿ ಸಾವಳಸಂಗ ಕವಿತೆಯಾಗಲು ಆಸ್ಪದ ಕೊಟ್ಟಿದ್ದಾರೆ.
ಇಲ್ಲಿನ ಕವಿತೆಗಳ ಒಂದು ವಿಶೇಷವೆಂದರೆ ಈ ಎಲ್ಲ ಕವಿತೆಗಳು ಸಂಕಲನವಾಗುವ ಮೊದಲು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಕವಿತೆಗಳೇ. ನಾಡಿನ ಅನೆಕ ಪತ್ರಿಕೆ ಸಾಮಾಜಿಕ ಜಾಲತಾಣಗಳ ಪತ್ರಿಕೆ, ಬ್ಲಾಗ್ ಗಳಲ್ಲಿ ಪ್ರಕಟವಾದುವೆ ಆಗಿವೆ. ಉತ್ಸಾಹಿ ಬರೆಹಗಾರರಾದ ಶ್ರೀ ಸಿದ್ದು ಸಾವಳಸಂಗ ಅವರು ಇನ್ನಷ್ಟು ಇನ್ನಷ್ಟು ಬರೆಯಲಿ , ಅದನ್ನು ಓದುವ ಸೌಭಾಗ್ಯವೂ ನಮ್ಮದಾಗಲಿ ಎಂದು ಹಾರೈಸುವದು ಸೂಕ್ತವಾಗಿದೆ.
----------------------------------
ಡಾ. ವೈ.ಎಂ.ಯಾಕೊಳ್ಳಿ.