ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ “ಪ್ರತಿಮಾಂತರಂಗ”ಅವಲೋಕನ-ಹರಿನರಸಿಂಹ ಉಪಾಧ್ಯಾಯ ಅವರಿಂದ

ಕೃತಿ : ಪ್ರತಿಮಾಂತರಂಗ
ಲೇಖಕರು :ಹೆಚ್.ಎಸ್.ಪ್ರತಿಮಾ ಹಾಸನ್
ಪುಟಗಳು :444
ಬೆಲೆ :500
ವರ್ಷ :2024

 

ಮೊದಲೊಂದು ಮುಕ್ತಕವು ತದನಂತರಕೆ ಗದ್ಯ
ಹದವಾಗಿ ವಿವರಿಸಿದ ವಸ್ತು ವಿಷಯಗಳು
ಎದೆಯೊಳಗೆ ಇಳಿದಂತೆ ಸನ್ನಿವೇಶದ ಅರಿವು
ಇದುವೆ ಒಳಹೂರಣವು ಚಕ್ರಪಾಣಿ||

  ಪ್ರತಿಮಾಂತರಂಗ   ಕೃತಿಯ ಒಳಗೇನಿದೆ ಎಂಬುದನ್ನು ಸ್ಪಷ್ಟವಾಗಿ ನಾಲ್ಕು ಸಾಲುಗಳಲ್ಲಿ ಹೀಗೆ ಮುಕ್ತಕದ ಮೂಲಕ ಹೇಳಬಹುದು. ಇದೊಂದು ಲೇಖಕಿಯ ಲೇಖನಿಯಿಂದ ಇಳಿದ ಹೊಸ ಬಗೆಯ ಲೇಖನ ಮಾಲಿಕೆಯಾಗಿದ್ದು ಕಂಡದ್ದು, ಕೇಳಿದ್ದು, ಅನುಭವಿಸಿದ್ದನ್ನು ಒಂದು ವಿಭಿನ್ನ ಪ್ರಯೋಗದಲ್ಲಿ ಅಳವಡಿಸಿ ಆ ಮೂಲಕ ಓದುಗರಿಗೆ ತಲುಪಿಸುವುದರ ಜೊತೆಗೆ ಅವರಲ್ಲಿ ಆ ವಿಷಯದ ಬಗ್ಗೆ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವ ಯತ್ನ ಎಂದು ಹೇಳಿದರೆ ತಪ್ಪಲ್ಲ. ಕೃತಿಯು 2024 ವರ್ಷದ್ದು ಒಟ್ಟು ಪುಟಗಳು 444 ನ್ನು ಒಳಗೊಂಡಿದೆ.ಕೃತಿಯ ಬೆಲೆಯೂ 500 ರೂಪಾಯಿಯಾಗಿದ್ದು.

ಶ್ರೀಮತಿ  ಹೆಚ್. ಎಸ್. ಪ್ರತಿಮಾ ಹಾಸನ್  ರವರು ಮೂಲತಃ ಹಾಸನದವರಾಗಿದ್ದು ವೃತಿಯಲ್ಲಿ ಪ್ರೌಢಶಾಲಾ ಶಿಕ್ಷಕಿ. ಪತ್ರಕರ್ತೆ ತನ್ನ ವೃತ್ತಿ ಜೀವನದ ಜೊತೆಗೆ ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸುವುದು ಮಾತ್ರವಲ್ಲದೆ ಸಾಹಿತ್ಯದಲ್ಲೂ ಕಲಾತ್ಮಕತೆಯನ್ನು ಸಾಧಿಸಿರುವುದು ಇವರ ಅವಿರತ ಪರಿಶ್ರಮವನ್ನು ತೋರಿಸುತ್ತದೆ. ಇಷ್ಟೇ ಅಲ್ಲದೆ “ಪ್ರತಿಮಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ”ದ ಸಂಸ್ಥಾಪಕಿಯಾಗಿ ಹಲವಾರು ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಇವರ ಕಾರ್ಯಬಾಹುಳ್ಯ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಹಲವು ವಿವಿಧ ಪ್ರಕಾರಾದ   ಕೃತಿಗಳನ್ನು ಓದುಗರಿಗೆ ಅರ್ಪಿಸಿದ ಇವರು   “ಪ್ರತಿಮಾಂತರಂಗ  – ಸಮಗ್ರ ಲೇಖನಗಳ ಮಾಲಿಕೆ ” ಎಂಬ ಲೇಖನಗಳ ಸಂಕಲನವನ್ನು ಹೊರತಂದಿರುವುದು  ಸ್ವಾಗತಾರ್ಹ.

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್  ಈ ಹಿಂದೆ ಮುಕ್ತಕ ಹಾಗೂ ಅದರ ಭಾವಾರ್ಥ ಹೊಂದಿರುವ ಕೃತಿ ‘ಅಂತರಂಗದ ಪ್ರತಿರವ’ ‘ ನೀಲ ಪ್ರತಿಮಾನ ಮಂಜು ‘, ಕವನ ಸಂಕಲನ, ‘ಮನದಾಳದ ಪ್ರತಿಬಿಂಬ’ ವೈಚಾರಿಕ ಲೇಖನಗಳು, ‘ಭಾವನೆಗಳ ಪ್ರತಿ ರೂಪ’, ‘ಪ್ರತಿಮಾವಲೋಕನ’, ಎಂಬ ಕೃತಿಯನ್ನು ಹೊರತಂದ ನಂತರದಲ್ಲಿ ಈಗ ಮುಕ್ತಕ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಕೆಲವರ ಜೀವನದ ಕಥೆ  ಹಾಗೂ ವೈಚಾರಿಕ ಲೇಖನವನ್ನು ಪ್ರಸ್ತುತಪಡಿಸುವ ಭಿನ್ನವಾದ ಮತ್ತೊಂದು ಕೃತಿಗೆಸಜ್ಜಾಗಿರುವುದರ ಜೊತೆಗೆ ಮುನ್ನುಡಿ ಬರೆಯಬೇಕೆಂದು ನನಗೆ ಕೇಳಿಕೊಂಡಿರುವುದು ನನಗೂ ಸಂತಸದ ಸಂಗತಿ

ಪ್ರತಿಮಾಂತರಂಗ  ಕೃತಿಯ ಲೇಖನಗಳಲ್ಲಿ ಒಂದು ವಿಶೇಷ ಆಕರ್ಷಣೆ ಇದೆ. ಪ್ರತಿ ಲೇಖನದ ಆರಂಭದಲ್ಲೂ ಆಯಾ ವಸ್ತು ವಿಷಯಕ್ಕೆ ಸಂಬಂಧಪಟ್ಟ ಒಂದು ಮುಕ್ತಕವು ಇದ್ದು ನಂತರ ಅದಕ್ಕೆ ಸಂಬಂಧಪಟ್ಟಂತೆ ಕಥೆ

ಪ್ರತಿಮಾಂತರಂಗ  ಕೃತಿಯ ಲೇಖನವು ಒಳಗೊಂಡಿರುವುದನ್ನು ನಾವು ಕಾಣುತ್ತೇವೆ. ಆದ್ದರಿಂದಲೇ ಆರಂಭದಲ್ಲೇ ಒಳ ಹೂರಣ ಏನಿದೆ ಎಂಬುದನ್ನು ನಾನು ಮುಕ್ತಕ ಮೂಲಕವೇ ತಿಳಿಸಿರುವುದನ್ನು ಇಲ್ಲಿ ಹೇಳಬಯಸುತ್ತೇನೆ.

ಪದವನ್ನು ಬಳಸುತಲಿ ಭಾಷೆಯನು ಕಲಿಯುವರು
ಕದನವನು ಮಾಡುವರು ಸಂಸಾರದಿ
ಮದದಲ್ಲಿ ಮರೆಯದಿರು ಜೀವನದ ಹಾದಿಯಲಿ
ಕದವಿರದ ಮನೆ ಸರಿಯೆ ಲಕ್ಷ್ಮಿದೇವಿ

ಎಂಬ ಈ ಮುಕ್ತಕವನ್ನು ಭಾವನೆಯನ್ನು ಅರ್ಥಮಾಡಿಕೊಳ್ಳದಿದ್ದಾಗ ಲೇಖನದ ಆರಂಭದಲ್ಲಿ ನಾವು ಕಾಣುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಭಾವನೆಗಳಿಗೆ ಬೆಲೆ ಕೊಡಬೇಕು. ಕಲಿತಿರುವ ಪದಗಳನ್ನು ಸೂಕ್ತ ರೀತಿಯಲ್ಲಿ ಬಳಸಬೇಕು. ಜಗಳ ಮಾಡುವಾಗ ಕೂಡಾ ಕಲಿತ ಪದಗಳು ಬಳಕೆಯಾಗುತ್ತವೆ. ಅದ್ದರಿಂದ ಸಂಸಾರದಲ್ಲಿ ಕದನ ಮಾಡುವ ಬದಲು ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಿದಾಗ ಸಂಸಾರವು ಶ್ರೀಗಂಧವಾಗುವುದರಲ್ಲಿ ಸಂದೇಹವಿಲ್ಲ. ಕದವಿಲ್ಲದ ಮನೆ ಹೇಗೆ ಅಭದ್ರವೋ ಹಾಗೆಯೇ ಸಂಸಾರದಲ್ಲಿ ಸಹಕಾರ ಇಲ್ಲದಿದ್ದರೆ ಅಲ್ಲಿ ಬದುಕಿಗೆ ಭದ್ರತೆ ಇಲ್ಲವಾಗುವುದಲ್ಲವೇ.. ಒಪ್ಪತಕ್ಕ ಮಾತು ಇದು

ಸ್ತ್ರೀ ನಿನಗೆ ಯಾರು ಸಾಟಿ ಲೇಖನವು ಮಹಿಳೆಯರು ಇಂದು ಎಲ್ಲಾ ಕಡೆ ಸಲ್ಲುವರು, ಅದ್ದರಿಂದ ಅವರಿಗೆ ಅವರೇ ಸಾಟಿ ಎಂದು ಹೇಳುತ್ತದೆ. ಇಂದು ಹಲವಾರು ರಂಗಗಳಲ್ಲಿ ಸ್ತ್ರೀಯರದೇ ಮೇಲುಗೈ ಆಗಿರುವಾಗ ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬುದನ್ನೂ ತೋರಿಸಿಕೊಟ್ಟಂತಾಗಿದೆ. ಒಬ್ಬಾಕೆ ಸ್ತ್ರೀಯು ಅಮ್ಮನಾಗಿ, ಅಕ್ಕ ತಂಗಿಯಾಗಿ, ಮಗಳಾಗಿ, ಮಡದಿಯಾಗಿ, ಸೊಸೆಯಾಗಿ, ಸ್ನೇಹಿತೆಯ ಸ್ಥಾನದಲ್ಲಿ ನಿಂತು ಪ್ರತಿಯೊಂದು ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವಾಗ ಅವಳಿಗಿಂತ ಮಿಗಿಲು ಯಾರೂ ಇಲ್ಲ ಎಂಬ ಸತ್ಯದ ಅರಿವನ್ನು ನೀಡುತ್ತಿದೆ ಈ ಲೇಖನ.

ಮೊದಲ ಚಿಕಿತ್ಸೆಯು ಅಪಘಾತದ ಸಂದರ್ಭದಲ್ಲಿ ನೀಡಬೇಕಾದ ಪ್ರಾಥಮಿಕ ಚಿಕಿತ್ಸೆಯನ್ನು ಪ್ರಸ್ತುತಪಡಿಸಿದೆ. ಯಾರೇ ಅಪಘಾತಕ್ಕೆ ಈಡಾದರೂ ನಿರ್ಲಕ್ಷ್ಯ ತೋರದೆ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು. ಅಷ್ಟೇ ಅಲ್ಲದೆ ಪ್ರಯಾಣದ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಅಪಘಾತಕ್ಕೀಡಾಗಿ ನೋವು ಸಂಕಟ ಅನುಭವಿಸುವ ಬದಲು ಅಪಘಾತ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂಬ ಸಾರ್ವಕಾಲಿಕ ಸತ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಇದು ಇಂದಿನ ದಿನಗಳಿಗೆ ಬಹಳ ಅಗತ್ಯವಾದ ಸೂಚನೆಯಾಗಿದೆ.

ಇನ್ನು ಹೂದಾನಿಗಳ ಬಗ್ಗೆ ಹೇಳುತ್ತಾ ಇಂದಿನ ಜನನಿಬಿಡ ಬಡಾವಣೆಗಳಲ್ಲಿ ಕೈ ತೋಟ, ತರಕಾರಿ ತೋಟ ಮಾಡಲು ಜಾಗವೇ ಇಲ್ಲದ ಸ್ಥಿತಿ ಇರುವಾಗ ಎಷ್ಟೋ ಜನರು ಬಾಲ್ಕನಿಗಳಲ್ಲೋ ತಾರಸಿ ಮೇಲ್ಗಡೆಯಲ್ಲೋ ಹೂದಾನಿಗಳ ಮೂಲಕ ತರಕಾರಿ, ಹೂವಿನ ಗಿಡಗಳನ್ನು ಬೆಳೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಹಸಿರಿಂದಲೇ ಉಸಿರು ಎಂಬ ಮಾತಿಗೆ ಕಿಂಚಿತ್ತು ನ್ಯಾಯ ಒದಗಿಸಲು ಈ ರೀತಿಯ ಗಿಡಗಳನ್ನು ಬೆಳೆಸುವುದು ಪೂರಕವಾಗುತ್ತವೆ.

ಇನ್ನೊಂದು ಬಹಳ ಗಮನ ಸೆಳೆಯುವ ಲೇಖನ ಎಂದರೆ ರೈಲಿನ ಪಯಣದಲ್ಲಿ ಮಂಗಳಮುಖಿಯರು. ಇದು ಲೇಖಕಿಯ ಸ್ವಂತ ಅನುಭವದ ಸಾರವಾಗಿದ್ದು ಮಂಗಳಮುಖಿಯರು ಕೊಡುವ ಕಾಟ ಹಾಗೂ ಅವರಲ್ಲಿ ಎರಡು ವರ್ಗಗಳು ಇರುವುದನ್ನು ಇಲ್ಲಿ ವಿಷದಪಡಿಸಿದ್ದಾರೆ. ಒಂದು ವರ್ಗ ಯಾವುದೇ ಬೇಡಿಕೆಯಿಲ್ಲದೆ ಕೊಟ್ಟದ್ದನ್ನು ಪಡೆಯುವವರದ್ದಾದರೆ, ಇನ್ನೊಂದು ವರ್ಗ ಪ್ರಯಾಣಿಕರಿಗೆ ಹೊಡೆದು ಬಡಿದು ಹಿಂಸಿಸಿ ಹಣ ಕಸಿಯುವ ವರ್ಗ. ಇವೆರಡರಲ್ಲಿ ಯಾರು ಒಳ್ಳೆಯವರು ಎಂದು ಹೇಳುವುದೇ ಕಷ್ಟ ಎಂದು ಹೇಳುತ್ತಾ, ಅಂತಹ ಒಳ್ಳೆಯ ಗುಣವುಳ್ಳವರ ಬಗ್ಗೆ ಕನಿಕರ ತೋರಿಸಿದ್ದಾರೆ. ಇದೇ ರೀತಿ… ಮುಂದಿನ ಮಂಜೇಶನ ತೊಳಲಾಟದ ಬದುಕು ಲೇಖನದಲ್ಲಿ ಹುಟ್ಟಿದಾಗ ಗಂಡಾಗಿ ಹುಟ್ಟಿ ತದ ನಂತರದಲ್ಲಿ ಹೆಣ್ಣಾಗಿ ದೇಹದಲ್ಲಿ ಪರಿವರ್ತನೆ ಹೊಂದಿದ ಮಂಜೇಶ ಮಲ್ಲಿಯಾದ ವಿಚಾರ ಮನ ಕಲಕುವಂತಿದೆ. ಈ ಸಂದರ್ಭದಲ್ಲಿ ಮನೆಯವರ ತಿರಸ್ಕಾರ, ನೋವು, ಅವಮಾನ, ಅಣಕು ಮಾತುಗಳಿಗೆ ರೋಸಿ ಹೋಗಿರುವ ಜೀವ ಬದುಕುವ ಆಸೆ ಹೊತ್ತುಕೊಳ್ಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಲೇಖನಗಳು ಮಂಗಳಮುಖಿಯರ ಕುರಿತೇ ಇರುವುದನ್ನು ನಾವು ಗಮನಿಸುತ್ತೇವೆ.

ಇವಿಷ್ಟೇ ವಿಷಯಗಳಲ್ಲದೆ ಶಿವರಾತ್ರಿ ಹಬ್ಬ, ತಂದೆಯಾದವನ ಬೇಜವಾಬ್ದಾರಿಯಿಂದ ಹೆಂಡತಿ ಮಕ್ಕಳು ಅನುಭವಿಸಬೇಕಾದ ನೋವು, ಕಷ್ಟ, ಮಹಿಳಾ ದಿನದ ಕುರಿತಾದ ಬರೆಹ, ಮನುಜನಲ್ಲಿ ಸಾಧಿಸುವ ಛಲ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂಬುದನ್ನು ಕೂಡ ಇಲ್ಲಿ ಹೇಳಿದ್ದಾರೆ. ಇನ್ನು ಹಿರಿಯರ ಮಾರ್ಗದರ್ಶನ ನಮಗೆ ಏಕೆ ಬೇಕು ಎಂಬುದನ್ನೂ ಪ್ರಸ್ತುತಪಡಿಸಿದ್ದಾರೆ. ಹಾಗೆಯೇ ಟೀಂ ಪ್ರಮೋದಿನಿಯಲ್ಲಿ ಪ್ರಮೋದಿನಿ ಪಟ್ಟಿರುವ ಕಷ್ಟ, ಅವಮಾನ , ತಿರಸ್ಕಾರಗಳ ಸಂಕುಲವನ್ನೇ ಬಿಚ್ಚಿಟ್ಟಿದ್ದಾರೆ. ಆದರೂ ತಾನು ಯಾವುದೇ ಕಾರಣಕ್ಕೂ ಸೋಲದೆ ತನ್ನ ಆತ್ಮವಿಶ್ವಾಸದಿಂದ ತನ್ನದೇ ಸಂಸ್ಥೆ ಸ್ಥಾಪಿಸುವ ಮೂಲಕ ಉತ್ತರಿಸಿ, ಮೇಲೆದ್ದು ನಿಲ್ಲುವ ಸಾಹಸವನ್ನು ಮಾಡಿದ್ದು ಎಷ್ಟೋ ತುಳಿತಕ್ಕೆ ಒಳಗಾದವರಿಗೆ ಒಂದು ಆಶಾಕಿರಣವಾಗಿ ಗೋಚರಿಸುವುದರಲ್ಲಿ ಸಂದೇಹವೇ ಇಲ್ಲ. ಹಲವಾರು ಲೇಖನಗಳನ್ನು ಒಳಗೊಂಡಂತಹ  ವಿಭಿನ್ನ ವಿಷಯಗಳನ್ನು ಆಧರಿಸಿ ಬರೆದ ಎಲ್ಲ ಲೇಖನಗಳೂ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರ  ವಿಚಾರ ದೃಷ್ಟಿಯನ್ನು ಸ್ಪಷ್ಟಪಡಿಸುತ್ತವೆ.

ಅದ್ದರಿಂದ ಈ  ಪ್ರತಿಮಾಂತರಂಗ( ಸಮಗ್ರ ಲೇಖನಗಳ ಸಂಗ್ರಹ )  ಕೃತಿಯು ಒಂದು ವಿಶಿಷ್ಟ ಆಯಾಮವನ್ನು ಹೊಂದಿದ್ದು, ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸುವಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಹೇಳಬಹುದು. ಇಲ್ಲಿರುವ ಎಲ್ಲ ಲೇಖನಗಳೂ ಓದುಗರ ಹೃದಯವನ್ನು ತಟ್ಟಿ, ಪ್ರತಿಯೊಬ್ಬರಲ್ಲೂ ಚಿಂತನೆಯ ಅಲೆಗಳು ಹೊಮ್ಮಲಿ, ಲೇಖಕಿಯ ಶ್ರಮ ಸಾರ್ಥಕವಾಗಿ, ಕೀರ್ತಿ ಯಶಸ್ಸು ಅರಸಿ ಬರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ..


One thought on “ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ “ಪ್ರತಿಮಾಂತರಂಗ”ಅವಲೋಕನ-ಹರಿನರಸಿಂಹ ಉಪಾಧ್ಯಾಯ ಅವರಿಂದ

Leave a Reply

Back To Top