ಚುಮು ಚುಮು ಚಳಿಗೆ ಇಡೀ ಪ್ರಪಂಚವೇ ತತ್ತರಿಸುವ ಸುಸಮಯ!. ಹೌದಲ್ಲವಾ?” ಚಳಿಗೊಂದು ವಿರಹ ವೇದನೆಯಿದೆಯೆಂದು ಎಲ್ಲರೂ  ಕಣ್ತುಂಬಿಸಿಕೊಂಡಿದ್ದಾರೆ.ಆದರೆ ಕೆಲವೊಂದು ಸಲ ಈ ಚಳಿಯ ವೈಪರೀತ್ಯಗಳು ನೀಡುವ ಅನುಭವಗಳು ಎಂತವರನ್ನು ಗೊಂದಲ ಗೂಡಿಗೆ ತಳ್ಳುವಂತಹುದು.ಹವಾಮಾನ ಮುನ್ಸೂಚನೆ ಪ್ರಕಾರ ಕಡಲಿಗೆ ಇಳಿಯಲಿಲ್ಲ ಸಾವುರಾರು ಮೀನುಗಾರರು!. ಅದು ಪ್ರವಾಹ, ಸುನಾಮಿಯಂತಹ ಚಂಡಮಾರುತಗಳ ಸಂದರ್ಭದಲ್ಲಿ. ಬಿಸಿಲಿಗೆ ಮೈಯೊಡ್ಡಿ ಅಥವಾ ಬರಿ ತಾಪಮಾನಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ ದಾಖಲಾಗಿದೆ.ಅದೆ ರೀತಿಯಲ್ಲಿ ಚಳಿಗೂ ನೂರೆಂಟು ಬಾಧೆಗಳು!ಬದುಕು ಕಟ್ಟಿಕೊಡುವ ಪ್ರಕೃತಿಗೆ,ಹವಾಮಾನ ಜೀವ ಜಗತ್ತಿಗೆ ಕೊಟ್ಟಿರುವ ವರದಾನವೆಂದರೆ ತಪ್ಪಾಗದು!. ಇಲ್ಲಿ ಕ್ಷಣಕ್ಷಣಕ್ಕೂ ಒಂದೊಂದು ಬಗೆಯ ಚಿತ್ರಣಗಳು‌ ಸಾಕ್ಷಿಯಾಗಿವೆ.

ಚಳಿಯೆಂದರೆ ಯಾರಿಗೆಲ್ಲ ಇಷ್ಟ ಹೇಳಿ? ಪ್ರೀತಿಸುವ ಮನಸ್ಸು ಚಳಿಗೆ ಅಂಜಿ ಮುನ್ನುಡಿ ಬರೆಯುತ್ತದೆ.ಒಂದಿಷ್ಟು ವರ್ಷಗಳು ಕಳೆದಂತೆಲ್ಲ, ಮುನ್ನುಡಿ ಬೆನ್ನುಡಿಯಾಗಿ ಪರಿವರ್ತನೆಯಾಗುತ್ತದೆ.ಇದು ಇಷ್ಟಕ್ಕೆ ನಿಲ್ಲುವುದಿಲ್ಲ,ಕಾಲಕಳೆದಂತೆಲ್ಲ ವಯೋಸಹಜ ಮನೋಭಾವನೆಗಳು ಮೇಣದಂತೆ ಕರಗಿ ಚಳಿಗೆ ಮರಗಟ್ಟುವ ಸ್ಥಿತಿ ಬಂದಾಗ,ಹೊದಿಕೆಗಳು ಭಾರವಾದರೂ ದೇಹದ ತಾಪಮಾನ ಹೆಚ್ಚಾದರೂ,ಮನಸ್ದಿನ ಚಳಿಕೊಡುವ ಕಚಗುಳಿಗೆ ತತ್ತರಿಸುವ ಕನಸುಗಳು ಕಣ್ಮರೆಯಾಗಿದ್ದು ಹೀಗೆ ಅಲ್ಲವೇ?. ಚಳಿಯ ತಂಪಾದ ಗುಣ ಎಂತವರನ್ನು ಇದ್ದಲ್ಲೆ ತಣ್ಣಗಾಗಿಸುವ ಸ್ವಭಾವ ಹೊಂದಿದೆ.ಮಲೆನಾಡಿನ ಚಳಿಗೆ ಹಿತ್ತಲ ಒಲೆಯಲ್ಲಿ ಯಾವಾಗಲೂ ಕೆಂಡ ಬಿಸಿ ಬಿಸಿಯಾಗಿಯೇ ಕೈಕಾಲು ಬೆಚ್ಚಗಾಗಿಸುತ್ತದೆ.ಇದರೊಟ್ಟಿಗೆ ಬಿಸಿಬಿಸಿ ಚಹಾ,ಕಾಫಿ ಜೊತೆ ಸಂಗಾತಿಯ ಜೊತೆಯಿದ್ದರೆ ಮುಗಿತು…ಇನ್ನೂ ಚಳಿಯ ಗಮ್ಮತ್ತು ಯಾವ ನಶೆಗೂ ಕಮ್ಮಿಯಿಲ್ಲ.ಆದರೆ ಅಲ್ಲಿರುವ ಜೀವಗಳು ಪರಸ್ಪರ ನಿಸ್ವಾರ್ಥವಾದಾಗ ಮಾತ್ರ.

ಬಂತದೋ ತಂಗಾಳಿ
ಹಸಿನಗೆಯ ಹೊತ್ತು
ಕಚಗುಳಿಯನಿತ್ತು
ಕೋಪ ತಾಪಗಳ ಬದಿಗೊಪ್ಪಿ
ಪ್ರೀತಿಯ ಎದೆಗಪ್ಪಿ
ಚಳಿಗೊಂದು ಶುಭಾಶಯ
ಪ್ರಕೃತಿಯ ಸದಾಶಯ!.

ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ತಾಪಮಾನದ ಕುಸಿತದಿಂದಾಗಿ ಚಳಿಯ ಪ್ರಮಾಣ ಹೆಚ್ಚುತ್ತಿದೆಯೆಂದರೆ,ಇನ್ನುಳಿದ ಪ್ರದೇಶಗಳಲ್ಲಿ ಚಳಿಯ ಆರ್ದ್ರತೆಯ ಮಟ್ಟ ಎಷ್ಟಿರಬಹುದು? ವಯಸ್ಸಾದವರು, ಮಕ್ಕಳು ಈ ಚಳಿಯಿಂದ ಹೇಗೆ ಪಾರಾಗುತ್ತಾರೆ ? ಹೃದಯ ಸ್ತಂಭನದ ಸುದ್ದಿಗಳು ಕೇಳುವಾಗೆಲ್ಲ ಮೈ ನಡುಗುತ್ತದೆ.ನನ್ನ ಮಗಳು ಎಮ್.ಎಸ್.ಸಿ..ಮಾಡಲು ಕಳೆದ ವರ್ಷದಿಂದ ಬೆಂಗಳೂರಿನಲ್ಲಿ ಇರುವುದರಿಂದ ಕಳೆದ ತಿಂಗಳು ಈ ಚಳಿಗೆ ತತ್ತರಿಸಿ ಆರೋಗ್ಯ ಏರುಪೇರಾಗಿ ಉಸಿರಾಟಕ್ಕೆ ಕಷ್ಟ ಪಟ್ಟ ಘಟನೆಗಳು ಎಷ್ಟೋ ತಂದೆ ತಾಯಂದಿರು ಮಕ್ಕಳು ಬಗ್ಗೆ ಚಿಂತೆ ಮಾಡುತ್ತ ಕೊರಗುತ್ತಿರುತ್ತಾರೆ. ಮಗಳು ನಾವು ಕೊರಗಬಾರದು ಅಂತ ಬೆಂಗಳೂರು ಹಾಸ್ಪಿಟಲ್ ನಲ್ಲಿ ಆಡ್ಮಿಟ್ ಆದರೂ ಆರಾಮಾಗದೆ,ಅಪ್ಪನಿಗೆ ಮಗಳನ್ನು ಅಲ್ಲಿ ಬಿಡದೆ ರಾತ್ರೋರಾತ್ರಿ ಸೀಟಿಲ್ಲದೆ ಒದ್ದಾಡಿ ಕೊನೆಗೆ ಬುಕ್ ಮಾಡಿ ಕರೆಸಿಕೊಂಡಿದ್ದು ಚಳಿ,ಜ್ವರ, ಕೆಮ್ಮಿನಿಂದ ಕಂಗಾಲಾದ ಮಗಳು ಮಾತು ಆಡಲು ಕಷ್ಟ ಪಡುವುದನ್ನು ಕಂಡಾಗ ಕರುಳು ಚುರ್ರ್ ಅಂದಿತ್ತು. ಚಳಿಗೆ ಏನೆಲ್ಲ ಅನಾಹುತ ತರಬಹುದೆಂಬುದನ್ನು ಉಹಿಸಲು ಅಸಾಧ್ಯ.ತಿಂಗಳಿನ ಗಟ್ಟಲೆ ಆಸ್ಪತ್ರೆ ಡಾಕ್ಟರ್ ಮೆಡಿಸಿನ್ ಗೆ ಸಾಕಪ್ಪ ಸಾಕು ಮಗಳು ಬೇಗ ಹುಷಾರಾದರೆ ಸಾಕು ಅನ್ನಿಸದಿರದು. ನಮ್ಮಿಂದ ದೂರ ಇದ್ದಾಗ ಅವರ ಆರೋಗ್ಯದ ಚಿಂತೆ ಎಲ್ಲ ತಂದೆತಾಯಿಗೂ ನಿದ್ದೆ ಬಾರದ ದಿನಗಳು.ಚಳಿಯ ಸಂಕಟ ಬಲ್ಲವರಾರು? ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಮಾಡೋರಿಗೆ ಕಡಕ್ ಎಚ್ಚರಿಕೆಯಿದೆ. ವೃದ್ಧರಿಗಂತೂ ಇಲ್ಲವೇ ಇಲ್ಲ.ಅದರಲ್ಲೂ ಚಳಿಗಾಲದಲ್ಲಿ ಸೇವಿಸುವ ಆಹಾರ ಕ್ರಮದ ಬಗ್ಗೆ ಮುಂಜಾಗೃತೆ ವಹಿಸುವುದು ಅನಿವಾರ್ಯ ಕೂಡ.ತ್ವಚೆಯ ಸಂರಕ್ಷಣೆ ಕೂಡ ಬಹುಮುಖ್ಯ.

ಬದಲಾಗುತ್ತಿರುವ ದಿನಗಳಿಗೆ ನಾವು ಬದಲಾಗಬೇಕು.ಆದರೆ ಹವಾಮಾನದ ವೈಪರೀತ್ಯಕ್ಕೆ ಯಾವಾಗ ಯಾವ ಕಾಲ ಬಂದಿದೆ ಎಂಬ ಚಿಂತೆ!. ವರ್ಷವಿಡೀ ಅಕಾಲಿಕ ಮಳೆಗಳು!. ರೈತನಿಗೆ ಬೆಳೆಗೆ ತಕ್ಕ ಫಲವಿಲ್ಲ!. ಎಲ್ಲೆಂದರಲ್ಲಿ ಭೂಕುಸಿತಗಳು, ಬರಗಾಲ,ಹತ್ತು ಹಲವಾರು ತೊಂದರೆ ತಾಪತ್ರೆಯಗಳು.ಹಿಂದಿನವರು ಕಂಡ ಮಳೆಗಾಲ,ಚಳಿಗಾಲ, ಬೇಸಿಗೆ ಕಾಲ ಹೋಲಿಸಿದರೆ ಇಂದು “ಪ್ರಕೃತಿ ನಾಶದ ಅಂಚಿನಲ್ಲಿದೆ” ಎಂಬ ಸಂದೇಶ ಮನುಕುಲದ ಅವನತಿಯ ಮುನ್ಸೂಚನೆ. ಕಾಲಗಳು ಮೂರು ಎಂದಾಗ ಪ್ರತಿ ತಿಂಗಳು ಈ ಮೂರು ಕಾಲಗಳ ದರ್ಶನವಾದರೆ ಮಗು ಅರ್ಥೈಸಿಕೊಳ್ಳುವುದು ಹೇಗೆ?… ಮೊನ್ನೆ ಫೇಸ್ ಬುಕ್ ನಲ್ಲಿ  ಕಂಡ ದೃಶ್ಯ ಬೋರವೆಲ್ ಚಿಮ್ಮಿದ ನೀರು  ನದಿಯಾಗಿ ಹರಿದ ಸಂದರ್ಭ,ಇತಿಹಾಸ,ಭೂಗರ್ಭ ಶಾಸ್ತ್ರಜ್ಞರು ವಿಜ್ಞಾನಿಗಳು ಭೂಮಿಯ ತಳದಲ್ಲಿ ಸಂಗ್ರಹವಾದ ನೀರು ಸ್ಫೋಟಗೊಂಡಿದ್ದು ಆಶ್ಚರ್ಯ.ಪ್ರಕೃತಿ ತನ್ನ ಗರ್ಭದಲ್ಲಿ ಎನೆಲ್ಲ ಬಚ್ಚಿಟ್ಟಿದೆ ಎಂಬುದು ಚಿದಂಬರ ರಹಸ್ಯವೇ ಸರಿ!.

ಒಟ್ಟಾರೆಯಾಗಿ ಹೇಳುವುದಾದರೆ,ಚಳಿ ಬದುಕಿಗೆ‌ ಬೇಕು.ಮನಸ್ಸಿನ ಚಳಿ ಬಿಡಬೇಕು.ಪ್ರಕೃತಿ ಸಹಜವಾಗಿ ಇರುವಂತೆ ಕಾಪಾಡುವ ಜವಾಬ್ದಾರಿ ನಮ್ಮದೆಂದು ಗೊತ್ತಿದ್ದರೂ,ಬೆಟ್ಟಗುಡ್ಡಗಳು ಕರಗುತ್ತಿವೆ ನಮ್ಮ ದುರಾಸೆಯ ಬಲದಿಂದ….ನಮ್ಮಜ್ಜ ಅವರಜ್ಜ ಕಂಡ ಮಳೆ,ಬಿಸಿಲು, ಚಳಿ ಈಗಿಲ್ಲ!. ಅಷ್ಟು ಪ್ರಮಾಣ ಕಡಿಮೆಯಾಗಿದ್ದರೂ,ಸ್ವಲ್ಪ ಮಳೆಯಾದರು ಜೀವ ಸಂಕುಲ ಹೇಳಹೆಸರಿಲ್ಲದೆ ಕೊಚ್ಚಿಹೋಗುತ್ತಿರುವ ದೃಶ್ಯಗಳು ಕಣ್ಣಾರೆ ಕಂಡರೂ,ಆ ಕ್ಷಣ ಮರುಗಿ ಮತ್ತೆ ನಮ್ಮ ಕಾಯಕದಲ್ಲಿ ಬಿಜಿಯಾಗುವ ನಾವು ಬರಿ ಚಳಿಗೆ ಸಾಯುವಂತಹ‌ ಸ್ಥಿತಿಗೆ ಬಂದು‌ ತಲುಪಿದ್ದೆವೆ‌.ಇನ್ನೂ ಏನೇನು ನೋಡಬಹುದು ಅಥವಾ ಅನುಭವಿಸಬಹುದು ಎಂಬುದು ಗೊತ್ತಿಲ್ಲ…ಕರೋನಾದಿಂದ ಇಡೀ ವಿಶ್ವ ತತ್ತರಿಸಿದ್ದನ್ನು  ನಮ್ಮ ನಮ್ಮ ಮನೆಗಳಲ್ಲಿ ಅದರ ವಾಸ್ತವ ಅರಿತಿದ್ದೆವೆ.
ಉಸಿರು ಚಲ್ಲುವ ಮೊದಲು ಹಸಿರ ಚಲ್ಲುವ ಕೆಲಸವಾಗಬೇಕು.ಅದು ಒಬ್ಬರಿಂದ ಸಾಧ್ಯವಿಲ್ಲ….ಕೈಜೋಡಿಸುವ ಕೆಲಸವಾದಾಗ ಮಾತ್ರ.


Leave a Reply

Back To Top