ಮಾಧುರಿ ದೇಶಪಾಂಡೆ,
ಕನ್ನಡ ಭಾಷೆ ಇತಿಹಾಸ ಮತ್ತು ಸಾಹಿತ್ಯ
2000ಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಭಾಷೆ ನಮ್ಮ ಕನ್ನಡ. ಭಾಷೆಯ ಇರುವಿಕೆಗೆ ಕನ್ನಡದ ಶಾಸನಗಳು ಸಾಕ್ಷ್ಮಿಯಾಗಿವೆ. 450ರಲ್ಲಿ ದೊರೆತ ಹಲ್ಮಿಡಿ ಶಾಸನವು ಕನ್ನಡದ ಮೊದಲ ಶಾಸನವೆಂದು ಗುರುತಿಸಲ್ಪಡುತ್ತದೆ. ಕನ್ನಡ ಲಿಪಿಯು ಕಳೆದ 2000 ವರ್ಷಗಳಲ್ಲಿ ಅನೇಕ ಬದಲಾವಣೆಗಳೊಂದಿಗೆ ಬೆಳೆದು ಬಂದಿದೆ. ಹಲ್ಮಿಡಿ ಶಾಸನವು ಗದ್ಯರೂಪದಲ್ಲಿದ್ದು ಅಭಿವ್ಯಕ್ತತೆಯಲ್ಲಿ ಸಾಹಿತ್ಯಿಕ ಭಾಷೆಯ ಪ್ರಬುದ್ಧತೆಯನ್ನು ಕಾಣಬಹುದಾಗಿದೆ. ನಂತರ ಐದನೆ ಶತಮಾನಕ್ಕೆ ಸೇರಿದ ಅಣಜಿಯ ಶಾಸನದಲ್ಲಿ ಛಂದೋಬದ್ಧ ಪದ್ಯವನ್ನು ಕಾಣಬಹುದಾಗಿದೆ. ಏಳನೇ ಶತಮಾನದ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ತ್ರಿಪದಿ ಶೈಲಿಯಲ್ಲಿ ರಚಿತವಾಗಿದೆ. ಏಳನೇ ಶತಮಾನದ ಶಾಸನವೊಂದರಲ್ಲಿ ಶ್ರವಣಬೆಳಗೊಳದ ಜೈನ ಗುರುಗಳನ್ನು ಹೊಗಳುವ ಪದ್ಯವು ವೃತ್ತ ಛಂದಸ್ಸಿನಲ್ಲಿ ನೋಡುತ್ತೇವೆ ಆಧ್ಯಯನವನ್ನು ಗಮನಿಸಿದಾಗ 5-6ನೇ ಶತಮಾನದ ಸಮಯದಿಂದ ಕನ್ನಡವು ಸಾಹಿತ್ಯಿಕವಾಗಿ ಉತ್ತಮ ಬೆಳವಣಿಗೆಯನ್ನು ಹೊಂದಿತೆಂದು ಕಾಣಬಹುದಾಗಿದೆ. ಕನ್ನಡ ಸಾಹಿತ್ಯದ ರಚನೆ ನಮಗೆ ದೊರಕುವುದು 8-9ನೇ ಶತಮಾನದ ನಂತರವೇ ಏಕೆಂದರೆ ಗ್ರಂಥಗಳು ನಮಗೆ ದೊರಕದೇ ಇರುವುದರಿಂಧ ಕೆಲವೇ ಶಾಸನಗಳು ಅಲ್ಲಲ್ಲಿ ದೊರೆತು ಕನ್ನಡ ಭಾಷೆ 2000 ವರ್ಷಕ್ಕೂ ಹಳೆಯದು ಎಂದು ನಮಗೆ ಸಾಕ್ಷಿಯನ್ನು ನೀಡುತ್ತದೆ.
8ನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜ ನೃಪತುಂಗನ ಆಸ್ಥಾನ ಕವಿ ಶ್ರೀ ವಿಜಯನು ಬರೆದ ಕವಿರಾಜ ಮಾರ್ಗವು ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಮೊದಲ ಕೃತಿಯಾಗಿದೆ. ಶ್ರೀವಿಜಯನ “ಕವಿರಾಜ ಮಾರ್ಗ”ವನ್ನು ಓದಿದರೆ ಅವನ ಕಾಲಕ್ಕೂ ಮೊದಲು ಇದ್ದ ಸಾಹಿತ್ಯಿಕ ಸಂಪತ್ತು ವೈಭವವನ್ನು ಉಲ್ಲೇಖ ಮಾಡುತ್ತಾನೆ. ಕನ್ನಡ ಪದ್ಯ ಗದ್ಯಗಳನ್ನು ಬರೆದ ಗಂಗ ರಾಜನಾದ ದುರ್ವಿನೀತ , ನಾಗಾರ್ಜುನರಂತಹ ಅನೇಕ ಕವಿಪುಂಗವರ ಹೆಸರುಗಳನ್ನು ಹೆಸರಿಸಿದ್ದಾನೆ. ಇದೇ ಅವಧಿಯಲ್ಲಿ ಗದ್ಯ ರೂಪದಲ್ಲಿರುವ “ವಡ್ಡಾರಾಧನೆ”ಯನ್ನು ಬರೆಯಲಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇದಲ್ಲದೇ ತತ್ವ ಚಿಂತನೆಯನ್ನು ಕುರಿತಾದ ತಂಬಲಾಚಾರ್ಯರ “”ಚೂಡಾಮಣಿ” ಕೃತಿ ರಚಿತವಾಗಿತ್ತೆಂದು ತಿಳಿಯುತ್ತದೆ. ಹತ್ತನೆಯ ಶತಮಾನದಿಂದ ಕನ್ನಡ ಭಾಷೆಯು ನಿರಂತರ ಅಭಿವೃದ್ಧಿಯನ್ನು ಅಪಾರ ಸಾಹಿತ್ಯವನ್ನು ಪಡೆಯಿತು ಎಂಬುದನ್ನು ಅಧ್ಯಯನದಿಂದ ತಿಳಿದು ಬಂದಿದೆ.
9ರಿಂದ 12ನೇ ಶತಮಾನದವರೆಗೆ ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಗಂಗರು ಹಾಗೂ ಚೋಳರಾಜರುಗಳು ಒಬ್ಬರ ಮೇಲೊಬ್ಬರು ಸಾರ್ವಭೌಮತ್ವ ಸ್ಥಾಪಿಸಲು ಮಾಡಿದ ಯುದ್ಧಗಳಯುಗ ಎಂಧು ಪರಿಗಣಿಸಲಾಗಿದ್ದು ಆ ಕಾಲದಲ್ಲಿ ವೀರತ್ವವನ್ನು ಪ್ರತಿಪಾದಿಸುವ ರಚನೆಗಳನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ಗದ್ಯ ಮತ್ತು ಪದ್ಯಗಳ ಮಿಳಿತವಾದ ಚಂಪೂ ಕಾವ್ಯಗಳು ಆರಂಭವಾದವು. ರಾಮಾಯಣ, ಮಹಾಭಾರತ, ಜೈನ ತೀರ್ಥಂಕರರ ಜೀವನ ಚರಿತ್ರೆಯನ್ನು ಆಧರಿಸಿ ಪಂಪ, ರನ್ನ, ನಾಗಚಂದ್ರ, ಗುಣ ವರ್ಮತಂತಹ ಮಹಾನ್ ಕವಿಗಳು ಕನ್ನಡ ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
ಪಂಪನನ್ನು ಆದಿ ಕವಿಯಂದು ಕರೆಯುತ್ತೇವೆ. ಧಾರ್ಮಿಕ ಸಾಹಿತ್ಯ ಮತ್ತು ಧರ್ಮ ಗ್ರಂಥವಲ್ಲದ ವಸ್ತುವಿನ ಮೇಲೆ ಕಾವ್ಯ ಬರೆದ ಕನ್ನಡದ ಮೊಟ್ಟ ಮೊದಲ ಕವಿಯಾಗಿದ್ದಾನೆ. ಮೂಲ ಕಥೆಯಲ್ಲಿ ಮಹಾಭಾರತದ ಅರ್ಜುನ ಹಿರಿಮೆಯ ಕಥೆಯಾದರೂ “ವಿಕ್ರಮಾರ್ಜುನ ವಿಜಯ”ದಲ್ಲಿ ಅವನ ಆಶ್ರಯದಾತನಾದ ಅರಿಕೇಸರಿಯ ವ್ಯಕ್ತಿತ್ವವನ್ನು ಸಾಂಕೇತಿಕವಾಗಿ ನಿರೂಪಿಸುತ್ತಾನೆ. ಇದಲ್ಲದೇ ಜೈನ ತೀರ್ಥಂಕರರ ಚರಿತ್ರೆಯನ್ನು “ಆದಿ ಪುರಾಣ “ಕೂಡ ಬರೆಯುತ್ತಾನೆ. ಅವನ ಶೈಲಿ ನಿರೂಪಣೆ ಮತ್ತು ಸಾಹಿತ್ಯದ ಸಂಸ್ಕೃತಿಯ ಸಂಯೋಜನೆ ಪಂಪನನ್ನು ಆಕಾಲದ ಪ್ರತಿನಿಧಿ ಕವಿಯನ್ನಾಗಿ ಮಾಡುತ್ತದೆ. ಇದೇ ಅವಧಿಯ ಕವಿಗಳಲ್ಲಿ ಪೊನ್ನನು ಕೂಡ “ಭುವನೈಕ ರಾಮಾಭ್ಯುದಯ ಮತ್ತು ಶಾಂತಿ ಪುರಾಣವನ್ನು ಬರೆದನು. ರನ್ನನ ಗದಾಯುದ್ಧವು ಅಜಿತನಾಥಪುರಾಣವು ಕೂಡ ಇದೇ ಕಾಲದ ಪ್ರಮುಖ ಗ್ರಂಥಗಳಲ್ಲಿ ಪರಿಗಣಿಸಲಾಗುತ್ತದೆ.
ಶಿವಕೋಟ್ಯಾಚಾರ್ಯನ “ವಡ್ಡಾರಾಧನೆ” ಹಾಗೂ ಚಾವುಂಡರಾಯ ಪುರಾಣಗಳನ್ನು ಕನ್ನಡದ ಉತ್ತಮ ಗದ್ಯ ಕೃತಿಗಳೆಂದು ಪರಿಗಣಿಸಲಾಗುತ್ತದೆ. ಕಾದಂಬರಿ ಹಾಗೂ ಛಂದೋಂಬುಧಿ, ದುರ್ಗಸಿಂಹನ ಪಂಚತಂತ್ರ, ಗಂಗರಾಜ ಹಾಗೂ ಮೃಚ್ಛಕಟಿಕದ ಶೂದ್ರಕನ ಹೋಲಿಕೆಯನ್ನು ಗುಣವರ್ಮನು ಮಾಡುತ್ತಾನೆ. ರಾಷ್ಟ್ರಕೂಟ ರಾಜನಾದ ಮೂರನೆ ಇಂದ್ರನ ಸೇನಾಪತಿ ಶ್ರೀ ವಿಜಯನು ಕವಿಯಾಗಿದ್ದು ಅವನ ಕೃತಿಗಳು ಲಭ್ಯವಿರದೇ ಹೋದರೂ ಶತನ ಮಣ್ಣೆ ತಾಮ್ರ ಫಲಕವು ದೊರೆತಿದೆ ಇದರಲ್ಲಿ ಮಹಾನ್ ಮೌಲ್ಯವುಳ್ಳ ಕಿರು ಮಹಾಕಾವ್ಯ ರಚಿಸಿದ್ದನೆಂಬ ಮಾಹಿತಿ ದೊರೆಯುತ್ತದೆ.
12ನೇ ಶತಮಾನದ ನಂತರದ ಸಾಹಿತ್ಯದಲ್ಲಿ ಧಾರ್ಮಿಕ ಪ್ರಚಾರದ ಸಾಹಿತ್ಯವನ್ನೇ ಕಾಣಬಹುದು ಆ ಕಾಲದಲ್ಲಿ ಧಾರ್ಮಿಕ ಅಸ್ಥಿರತೆ ಬಹಳವಾಗಿ ಕಾಡಿತ್ತು. ಹೊಸ ಧರ್ಮಗಳ ಪ್ರಚಾರ ಪ್ರಸಾರದ ಕಾರಣ ಹಿಂದು ಧರ್ಮದ ಪನರುಜ್ಜೀವನ ಕಾರ್ಯವು ನಡೆಯಿತು. ಧಾರ್ಮಿಕ ಗುರುಗಳಾದ ರಾಮಾನುಜ, ಮಧ್ವ, ಬಸವ, ವಿದ್ಯಾರಣ್ಯರು ಧಾರ್ಮಿಕ ಸಾಹಿತ್ಯದ ರಚನೆಗಳನ್ನು ಮಾಡಿ ಜನರನ್ನು ಹಿಂದು ಧರ್ಮದ ಉಳಿವಿಗಾಗಿ ಪ್ರಚೋದನೆ ನೀಡಿದರು ಎಂಬುದನ್ನು ತಿಳಿಯುತ್ತೇವೆ. ಜೈನ ಸಾಹಿತ್ಯವು ಕೂಡ ಉತ್ತಮವಾಗಿ ಬೆಏಳದ ಕಾಲವಾಗಿದೆ. ನಾಗಚಂದ್ರ ಚರಿತ, ಪುಷ್ಪದಂತ ಪುರಾಣ, ಚಂದ್ರಪ್ರಭಾ ಪುರಾಣ ಅನಂತನಾಥ ಪುರಾಣದಂತಹ ಹಲವು ಕೃತಿಗಳು ರಚಿತವಾದವು. ಬ್ರಾಹ್ಮಣ ಕವಿಗಳು ಜಗನ್ನಾಥ ವಿಜಯ ಹರಿಚರಿತ, ಕೃಷ್ಣಲೀಲಾ, ರಾಮಾಐಣ ಮತ್ತು ಇತರ ಕೃತಿಗಳನ್ನು ಬರೆದರೆ, ವೀರಶೈವ ಕವಿಗಳಾದ ಹರಿಹರ, ಸಿದ್ಧರಾಮ, ಕೊಂಡಗುಳಿ ಕೇಶಿರಾಜ, ಮಗ್ಗೆಯ ಮಾಯಿದೇವ, ಗುಬ್ಬಿ ಮಲ್ಲಣ್ಣ ಮೊದಲಾದವರು ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ.
12ನೇ ಶತಮಾನದ ಸಮಯದಲ್ಲಿ ಜೈನ ಹಾಗೂ ವೀರಶೈವ ಬರಹಗಾರರು ಕರ್ನಾಟಕದಲ್ಲಿ ನೂತನ ಸಾಹಿತ್ಯಿಕ ಚಳುವಳಿಗೆ ನಾಂದಿ ಹಾಡಿ ವೀರ ಶೈವ ಮತದ ಸಿದ್ದಾಂತದ ಮೂಲಕ ಸಮಾಜೋಧಾರ್ಮಿಕ ವಲಯದಲ್ಲಿ ಪ್ರತಿಭಟನೆಯ ಮೂಲಕ ಹೊಸದಾದ ರೀತಿಯ ಸಾಹಿತ್ಯ ರಚನೆಯ ಮೂಲಕ ವಚನ ಸಾಹಿತ್ಯದ ಆರಂಭವಾಯಿತು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭು ಮೊದಲಾದ ಶಿವಶರಣರು ಕಾಯಕವನ್ನೇ ದೇವರ ಪೂಜೆಯೆಂಬ ವಿಚಾರದಿಂದ ಯಾವುದೇ ಶಿಕ್ಷಣದ ಹಂಗಿಲ್ಲದೇ ತಮ್ಮ ಅನುಭವದಿಂಧ ಜನಿತವಾದ ಜ್ಞಾನವನ್ನು ಜನ ಸಾಮಾನ್ಯರ ಭಾಷೆಯಲ್ಲಿ ವಚನಗಳನ್ನು ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತವನ್ನಾಗಿಸಿದರು. ಗದ್ಯ-ಗೇಯ ರೂಪದಲ್ಲಿ ಇರುವ ವಚನ ಸಾಹಿತ್ಯವು ಕನ್ನಡ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದೆ. 12ನೇ ಶತಮಾನದ ಮತ್ತೊಂದು ವಿಶೇಷತೆಯೆಂದರೆ ಹೊಸ ಛಂದಸ್ಸುಗಳಾದ ರಗಳೆ ಮತ್ತು ಷಟ್ಪದಿಗಳನ್ನು ಹರಿಹರ ರಾಘವಾಂಕರು ರಚಿಸಿದರು.
12ರಿಂದ 14ನೇ ಶತಮಾನದಲ್ಲಿ ಚಂಪೂ ಕಾವ್ಯ ಪ್ರವರ್ಧಮಾನಕ್ಕೆ ಬಂದಿತು. ನೇಮಿಚಂದ್ರ, ರುದ್ರಭಟ್ಟ, ಜನ್ನ ಹಾಗೂ ಆಂಡಯ್ಯನಂತಹ ಕವಿಗಳು ತಮ್ಮ ಕೃತಿಗಳಲ್ಲಿ ಚಂಪೂ ಕಾವ್ಯವನ್ನು ಬಳಸಿದರು. ಅಚ್ಚ ಕನ್ನಡದಲ್ಲಿ ಆಂಡಯ್ಯನು “ಕಬ್ಬಿರ ಕಾವ”ವನ್ನು ಬರೆದನು. ಉತ್ತಮ ಮಟ್ಟದ ಕನ್ನಡ ವ್ಯಾಕರಣ ಕಾವ್ಯವನ್ನು ಕೇಶಿರಾಜನು “ಶಬ್ದಮಣಿ ದರ್ಪಣ”ವನ್ನು ಬರೆದಿದ್ದಾನೆ.
14ರಿಂದ 16ನೇ ಶತಮಾನವನ್ನು ವೈಭವದ ಯುಗವೆಂದು ಗುರುತಿಸಲಾಗುತತದೆ. ವಿಜಯನಗರದ ಅರಸರ ಕಾಲದಲ್ಲಿ ಎಲ್ಲ ಮತಗಳ ಕವಿಗಳು ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಕುಮಾರ ವ್ಯಾಸನ ಗದುಗಿನ ಭಾರತವೆಂದು ಕರೆಯಲ್ಪಡುವ “ಕರ್ನಾಟಕ ಭಾರತ ಕಥಾಮಂಜರಿ”ಯು ಷಟ್ಪದಿಯಲ್ಲಿ ರಚಿತವಾದ ಕಾವ್ಯವಾಗಿದೆ. ಇದೇ ಕಾಲದ ಇನ್ನೊಂದು ಜನಪ್ರಿಯ ರಚನೆ ಲಕ್ಷ್ಮೀಶನ “ಜೈಮಿನಿ ಭಾರತ”ವಾಗಿದೆ.
ಮಧ್ವ ಸಂಪ್ರದಾಯದ ಕವಿಗಳಾದ ಪುರಂದರ, ಕನಕದಾಸರು, ಶ್ರೀಪಾದರಾಜರು, ವ್ಯಾಸರಾಜರಿಂದ ದಾಸ ಸಾಹಿತ್ಯ ಪರಂಪರೆಯು ಬೆಳೆದು ಬಂದು ಕನ್ನಡ ಸಾಹಿತ್ಯದಲ್ಲಿ ಭಕ್ತಿಗೀತೆಗಳು ಕೀರ್ತನೆಗಳು, ಉಗಾಭೋಗ, ಸುಳಾದಿ ಮೊದಲಾದ ಪ್ರಕಾರಗಳ ಮೂಲಕ ಭಕ್ತಿ ಸಾಹಿತ್ಯಕ್ಕೆ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದರು.
ಈ ಅವಧಿಯಲ್ಲಿ ವಚನ ಸಾಹಿತ್ಯದ ಮರು ವ್ಯವಸ್ಥಿಕರಣವಾಗಿ ನಿಜಗುಣ ಶಿವಯೋಗಿ, ವಿರೂಪಾಕ್ಷ ಪಂಡಿತ, ಲಕ್ಕಣ ದಂಡೇಶ, ಚಾಮರಸ ಮೊದಲಾದವರು ತಮ್ಮ ಕೊಡುಗೆಯನ್ನು ನೀಡಿದರು. ಚಾಮರಸನ ಪ್ರಭುಲಿಂಗಲೀಲೆ ಮತ್ತು ನಿಜಗುಣ ಶಿವಯೋಗಿಗಳ ವಿವೇಕ ಚೂಡಾಮಣಿ ಆ ಕಾಲದ ಪ್ರತಿನಿಧಿ ಕಾವ್ಯಗಳಾಗಿವೆ. ಜೈನ ಮತಕ್ಕೆ ಸೇರಿದ ಮಂಗರಸ, ಸಾಳ್ವ, ರತ್ನಾಕರವರ್ಣಿ ಮೊದಲಾದವರು ತಮ್ಮ ಅತ್ಯುತ್ತಮ ರಚನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದರು.
17ನೇ ಶತಮಾನದಿಂದ 19ನೇ ಶತಮಾನದ ಕಾಲ ಘಟ್ಟವನ್ನು ಪುನರುಜ್ಜೀವನ ಯುಗ ಎಂದು ಕರೆಯಲಾಗುತ್ತದೆ. ಮೈಸೂರು ರಾಜರಾದ ಚಿಕ್ಕದೇವರಾಜರ ಆಶ್ರಯದಲ್ಲಿ ಈ ಕಾಲದ ಹೆಸರಾಂತ ಬರಹಗಾರರಾದ ತಿರುಮಲರಾಯ ಹಾಗೂ ಚಿಕ್ಕುಪಾಧ್ಯಯರು ಕನ್ನಡದಲ್ಲಿ ಶ್ರೀವೈಷ್ಣವ ಆಖ್ಯಾಯಿಕೆ ಅಥವಾ ಐತಿಹ್ಯ ಹಾಗೂ ಚೀವನ ಚರಿತ್ರೆಗಳನ್ನು ಬರೆದರು. ತಿರುಮಲರಾಯರು ಚಿಕ್ಕದೇವರಾಯ ವಿಜಯ ಬರೆದು ಸಮಕಾಲೀನ ಇತಿಹಾಸವನ್ನು ಬರೆದರು. ಇದೇ ಕಾಲದ “ಸರ್ವಜ್ಞ ಪದಗಳು” ತ್ರಿಪದಿ ಪ್ರಕಾರದ ಅತ್ಯುತ್ತಮ ಹಾಗೂ ಅಭೂತಪೂರ್ವ ಕೊಡುಗೆಯಾಗಿದೆ. ಈ ಕಾಲದಲ್ಲಿ ವಚನ ಸಾಹಿತ್ಯದ ಷಡಕ್ಷರದೇವನ “ರಾಜ ಶೇಖರ ವಿಳಾಸ”, ವೃಷೇಭೇಂದ್ರ ವಿಜಯ, ಶಬರ ಶಂಕರ ವಿಲಾಸಗಳು ಪ್ರಸಿದ್ಧ ರಚನೆಗಳಾಗಿವೆ.
18ನೇ ಶತಮಾನದಲ್ಲಿ ಯಕ್ಷಗಾನ ಜಾನಪದ ಕಲೆಯು ಅತ್ಯಂತ ಜನಪ್ರಿಯವಾದ ಪ್ರಕಾಋವಾಗಿದ್ದಿತು. ಮುದ್ದಣನ ರಾಮಾಶ್ವಮೇಧವು 19ನೇ ಶತಮಾನದ ಪ್ರತಿನಿಧಿ ಕಾವ್ಯ. ಈ ಸಮಯದಲ್ಲಿ ವಿಜ್ಞಾನ, ಜ್ಯೋತಿಷ್ಯ, ಗಣಿತ, ತತ್ವಜ್ಞಾನ ಮೊದಲಾದ ವಿಷಯಗಳ ಕುರಿತು ಬರೆದ ಸಾವಿರಕ್ಕೂ ಹೆಚ್ಚು ಲೇಖಕರರನ್ನು ಗುರುತಿಸಬಹುದು.
19ನೇ ಶತಮಾನದ ನಂತರದ ಸಾಹಿತ್ಯವನ್ನು ಆಧುನಿಕ ಯುಗ ಆಧುನಿಕ ಕನ್ನಡದ ಸಾಹಿತ್ಯವೆಂದು ಗುರುತಿಸಲಾಗುತ್ತದೆ. ಎಂ.ಎಸ್ ಪುಟ್ಟಯ್ಯನವರ ಮಾಡಿದ್ದುಣ್ಣೋ ಮಹರಾಯ, ಡಿ ವೆಂಕಟಾಚಲಯ್ಯನವರ ಪರಿಮಳ ಮತ್ತು ಡಾ. ಬಿ.ವಿ ವೆಂಕಟೇಶ್ವರಯ್ಯನವರ ಅರಿಂದಮನ ಸಾಹಸಗಳು ಪತ್ತೇದಾರಿ ಕಾದಂಬಿ, ಗಳಗನಾಥರ ಸಾಮಾಜಿಕ ಚರಿತ್ರೆ ಹಾಗೂ ಚಾರಿತ್ರಿಕ ಕಾದಂಬರಿಗಳು. ರೆವರೆಂಡ್ ಕಿಟಲ್‌ರ ಕನ್ನಡ ಆಂಗ್ಲ ನಿಘಂಟು, ಚ ವಾಸುದೇವರಾಯರ ಬಾಲಬೋಧೆ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮೇಲೆ ಪರಿಣಾಮ ಬೀರಿದ ಕೃತಿಗಳಾಗಿವೆ.
ಬಿ ಎಂ ಶ್ರೀಯವರ ‘”ಇಂಗ್ಲೀಷ್ ಗೀತೆಗಳು”, ಕುವೆಂಪುರವರ ರಾಮಾಯಣ ದರ್ಶನಂ “ಮಲೆಗಳಲ್ಲಿ ಮದುಮಗಳು” “ಕಾನೂರು ಸುಬ್ಬಮ್ಮ ಹೆಗ್ಗಡತಿ”, ಡಿವಿಜಿಯವರ “ಮಂಕುತಿಮ್ಮನ ಕಗ್ಗ” ಇವುಗಳು ಅಪರೂಪದ ಕೃತಿಗಳಾಗಿವೆ.
ಕನ್ನಡ ಸಾಹಿತ್ಯವು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯ ಹೆಗ್ಗಳಿಕೆಗೆ ಪಡೆದಿದೆ. ಕುವೆಂಪು, ದ.ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ವಿಕೃ ಗೋಕಾಕ ಇವರು ನವೋದಯು ಕಾಲದ ಪ್ರತಿನಿಧಿ ಕವಿಗಳಾದರೆ ಮುಂದಿನ ಪೀಳಿಗೆಯ ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ, ಯು ಆರ್ ಅನಂತ ಮೂರ್ತಿ ಇವರುಗಳು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ಕನ್ನಡಿಗರಾಗಿದ್ದಾರೆ.
ಇವರುಗಳಲ್ಲದೇ ನವೋದಯ ಕಾಲದಲ್ಲಿ ಗೋಪಾಲಕೃಷ್ಣ ಅಡಿಗರು, ಕೆ ಎಸ್ ನರಸಿಂಹ ಸ್ವಾಮಿ, ಜೆ.ಪಿ ರಾಜರತ್ನಂ, ಪುತಿ ನರಸಿಂಹಾಚಾರ್, ಗೋರುರು ರಾಮಸ್ವಾಮಿ ಐಯ್ಯಂಗಾರ್. ಎ ಎನ್ ಮೂರ್ತಿರಾಐರು, ತಿ ನಂಶ್ರೀ, ಎ ಆರ್ ಕೃಷ್ಣ ಶಾಸ್ತ್ರಿಗಳು , ಅನ ಕೃಷ್ಣರಾಯರು, ರಂ ಶ್ರೀ ಮುಗಳಿ ಇವರ ಕೊಡುಗೆ ಅಪಾರವಾಗಿದೆ. ಕಾವ್ಯ ಕವಿತೆ, ಕಾದಂಬರಿ ವಿಮರ್ಶಾ ಗ್ರಂಥಗಳು ಅನೇಕ ಪ್ರಕಾರಗಳಲ್ಲಿ ಗಣನೀಯ ಸೇವೆಯನ್ನು ನೀಡಿದ ಜನರ ಪಟ್ಟಿ ದೊಡ್ದದಾಗುತ್ತಾ ಹೋಗುತ್ತದೆ. ಸಾಮಾಜಿಕ ಕಾದಂಬರಿಗಳು ಮಹಿಳೆಯ ಮನಸಿನ ತುಮುಲಗಳನ್ನು ಬಿಂಬಿಸುವ ತ್ರಿವೇಣಿ, ವಾಣಿ ಮೊದಲಾದವರ ಕೃತಿಗಳು ಬಹಳ ಪ್ರಭಾವ ಬೀರಿದವು.
ನವ್ಯ , ಬಂಡಾಯ, ಪ್ರಗತಿ ಸಾಹಿತ್ಯಗಳೂ ಕೂಡ ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಕೊಡುಗೆ ನೀಡಿದ್ದು ಶ್ರೀ ಕೃಷ್ಣ ಆಲನಹಳ್ಳಿ, ಲಂಕೇಶ, ಯಶವಂತ ಚಿತ್ತಾಲ , ಎಸ್ ಎಲ್ ಭೈರಪ್ಪನವರ ಕೊಡುಗೆ ಅಪಾರವಾಗಿದೆ. ಬಂಡಾಯ ಸಾಹಿತ್ಯದಲ್ಲಿ ದೇವನೂರು ಮಹಾದೇವ, ಡಾ ಸಿದ್ಧಲಿಂಗಯಯ್ಯ, ಬಿಟಿ ಲಲಿತಾ ನಾಯಕ, ಅರವಿಂದ ಮಾಲಗತ್ತಿ ಮೊದಲಾದವರ ಗಣನೀಯವಾಗಿದೆ.
ಇಂತಹ ಅಪಾರ ಕೊಡುಗೆಗಳನ್ನು ನಮ್ಮ ಕನ್ನಡ ಸಾಹಿತ್ಯಕ್ಕೆ ಶತಮಾನಗಳಿಂದ ನೀಡುತ್ತಲೇ ಬಂದಿದ್ದಾರೆ. ಹೊಸ ತಂತ್ರಜ್ಞಾನಗಳ ಬಳಕೆ ಹೊಸ ಹೊಸ ಪ್ರಯೋಗಗಳು ಸಮಕಾಲೀನ ಸಾಹಿತ್ಯ, ಹೊಸ ಪ್ರಕಾರಗಳು ಸಾಹಿತ್ಯ ಬೆಳವಣಿಗೆ ಮತ್ತು ಸಮಾಜದ ಕನ್ನಡಿಗಳಂತೆ ನಿಲ್ಲಬೇಕು. ಸಾಹಿತ್ಯವು ಸಮಾಜದ ದರ್ಪಣವಾಗಿರಬೇಕಾದ್ದು ಆದರೆ ಹಾಗೆ ಆಗದೇ ಕೇವಲ ಕೆಲವು ವಾದಗಳ ಪ್ರತಿಬಿಂಬವಾಗುತ್ರಿರುವುದು ವಿಷಾದನೀಯವಾಗಿದೆ. ಸಮಾಜದಲ್ಲಿ ಸಕಾರಾತ್ಮಕ ಸಾಹಿತ್ಯ ಇತಿಹಾಸದಲ್ಲಿ ನಮ್ಮ ಸಮಾಜ ಮತ್ತು ಸಂಸ್ಕೃತಿಗಳ ಪ್ರತಿಬಿಂಬವಾಗಬೇಕೆ ಹೊರತು ನಕಾರಾತ್ಮತೆ ವಿರೋಧಗಳ ಗೂಡಾಗಬಾರದು. ಸಾಹಿತ್ಯವು ಕೇವಲ ಸಾಹಿತ್ಯವಾಗಿ ಉಳಿದುಕೊಳ್ಳುವುದಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಅಧ್ಯಯನದ ಆಕರಗಳಾಗುವುದರಿಂದ ಹಿಂದೆ ನಮ್ಮ ಪೂರ್ಜರು ಕೊಟ್ಟ ಭವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಪ್ರತಿನಿಧಿ ಕಾವ್ಯಗಳ ಗ್ರಂಥಗಳ ರಚನೆಗಳ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಕಾವ್ಯ ಕಥೆ ಯಾವುದೇ ಪ್ರಕಾರಗಳು ಇರಲಿ ದೀರ್ಘವಾಗಿ ಇರುವ ವಿಷಯಗಳ ಓದು ಅಥವಾ ಅಧ್ಯಯನಕ್ಕೆ ಜನರು ಹಿಂಜರಿಕೆ ಮಾಡುವುದರಿಂದ ಪ್ರಬುದ್ಧವಾದ ಬರಹಗಳು ಆಳವಾದ ಅಧ್ಯಯನದ ಕೊರತೆ ಹಲವು ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಆಧುನಿಕ ಮತ್ತು ಅವರಸದ ಕಾಲದಲ್ಲೇ ಆದರೂ ಪುಸ್ತಕಗಳ ಅಧ್ಯಯನ ಜ್ಞಾನಾರ್ಜನೆಯಿಂದ ಮಾತ್ರ ಉತ್ತಮ ಸಾಹಿತ್ಯದ ಸೃಜನವಾಗುವುದರಿಂದ ನ್ಯಾನೋ ಕಥೆ, 4-6 ಸಾಲುಗಳ ಕವನಗಳು, 100-150 ಪದಗಳ ಲೇಖನಗಳು ಜ್ಞಾನವನ್ನು ಬೆಳೆಸುವುದರ ಬದಲು ಆಡಿಯೋಗಳ ಮೂಲಕ ಸಾಹಿತ್ಯ ಕೇಳಿಸುವ ಸುಲಭೋಪಾಯದ ಕಡೆಗೆ ನಡೆಯುತ್ತದೆ. ಸಾಹಿತ್ಯ ಅಳಿವಿನ ಅಂಚಿಗೆ ಬಾರದಿರಲು ಉತ್ತಮ ಸಾಹಿತ್ಯ ಬರೆಯುವ ಲೇಖಕರು ಇದ್ದರೂ ಓದುಗರ ಕೊರತೆ ಪ್ರಸ್ತುತ ಸಮಯದಲ್ಲಿ ಕಾಣಬಹುದಾಗಿದೆ.
ಮಾಧುರಿ ದೇಶಪಾಂಡೆ
.