ನೆನಪಿನ ಸಂಗಾತಿ
́ಗಡಿನಾಡ ಹೋರಾಟಗಾರ್ತಿ
ಜಯದೇವಿತಾಯಿ ಲಿಗಾಡೆʼ́ಅವರ ಜನ್ಮದಿನದ ಸಂದರ್ಭದಲ್ಲಿ
ಅನ್ನಪೂರ್ಣಾ ಸುಭಾಶ್ಚಂದ್ರ ಸಕ್ರೋಜಿ.ಪುಣೆ.


ಜಯದೇವಿತಾಯಿ ಲಿಗಾಡೆ
ಕರ್ನಾಟಕ ಏಕೀಕರಣದ ಪ್ರಮುಖ ಗಡಿನಾಡ ಹೋರಾಟಗಾರ್ತಿ. ಶುಭ್ರವಸ್ತ್ರಧಾರಿ, ಮೂರೆಳೆ ವಿಭೂತಿ ಧರಿಸಿದ, ಗಂಭೀರ ವರ್ಚಸ್ಸಿನ, ಶರಣ ಭಾವದ ಜಯದೇವಿತಾಯಿ ಲಿಗಾಡೆಯವರ ಬಗ್ಗೆ ಕನ್ನಡಿಗರಿಗೆಲ್ಲರಿಗೂ ಅಭಿಮಾನ ಹಾಗೂ ನಮಿಸುವ ಭಾವ. ಕನ್ನಡ ನಾಡಿಗೆ, ಕನ್ನಡ ನುಡಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಾಪರೂಪದ ವ್ಯಕ್ತಿಮಹತ್ವದವರು.
ಜಯದೇವಿಯವರು 23 ಜೂನ 1912 ರಲ್ಲಿ ಜನಿಸಿದರು. ತಂದೆ ಚೆನ್ನಬಸಪ್ಪ, ತಾಯಿ ಸಂಗವ್ವ. ಸಂಗವ್ವನವರು ಉತ್ತಮ ಹಾಡುಗಾರ್ತಿ, ಮತ್ತು ಒಳ್ಳೆಯ ಮಾತುಗಾರ್ತಿ. ಮೃದುಸ್ವಭಾವದ ಸಂಗವ್ವನವರು ಮಧುರ ಮಾತುಗಳಿಂದ ಎಲ್ಲರಿಗೂ ಬೇಕಾದವರು. ಜಯದೇವಿಯವರ ಅಜ್ಜ ವಾರದ ಮಲ್ಲಪ್ಪನವರು. ದಾನ-ಧರ್ಮಗಳಲ್ಲಿ ಎತ್ತಿದ ಕೈ. ಅವರು ‘ಮಹಿಳಾ ಜ್ಞಾನಮಂದಿರ’ ಸ್ಥಾಪಿಸಿ, ಹೆಣ್ಣುಮಕ್ಕಳ ಕಲಿಕೆಗೆ ಬೇಕಾಗಿರುವ ವಾತಾವರಣ ನಿರ್ಮಿಸಿದ್ದರು. ಇಂಥ ಸುಸಂಸ್ಕೃತ, ಸುಶಿಕ್ಷಿತ ಕುಟುಂಬದಲ್ಲಿ ಜಯದೇವಿತಾಯಿಯವರು ಬೆಳೆದರು. ಸೊಲ್ಲಾಪೂರದ ಸಿದ್ಧರಾಮೇಶ್ವರನ ಗುಡಿಗೆ ಹೋಗಿ ದರ್ಶನ ಪಡೆದು ಬಂದ ಮೇಲೆಯೇ ಊಟ ಹಾಗೂ ದಿನನಿತ್ಯದ ಕಾಯಕ. ತಂದೆ ಚೆನ್ನಬಸಪ್ಪನವರದು ಅತ್ಯಂತ ಶ್ರೀಮಂತ ಮನೆತನ. ಅದು ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳಿಗೆ ಪ್ರಸಿದ್ಧವಾಗಿತ್ತು. ಇಂತಹ ಸುಂದರ ವಾತಾವರಣದಲ್ಲಿ ಬೆಳೆದ ಜಯದೇವಿಯು ಸರ್ವಗುಣಸಂಪನ್ನೆಯಾಗಿದ್ದಳು.
ಸೊಲ್ಲಾಪೂರದಲ್ಲಿ ಆವಾಗ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಜಯದೇವಿಗೆ ಮರಾಠಿಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಶರಣರಲ್ಲಿ ಭಕ್ತಿಭಾವ, ಬಡ ಜನರ ಸೇವೆಯಲ್ಲಿ ಜಯದೇವಿಯವರು ಕನ್ನಡಪರ ಒಲವಿನ ಹಾಗೂ ಕನ್ನಡ ಸಂಸ್ಕೃತಿಯ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರು. ಅವರು ಹದಿನಾಲ್ಕು ವಯಸ್ಸಿನವರಿದ್ದಾಗ ಮದುವೆಯಾಯಿತು. ಗಂಡನ ಮನೆಯಲ್ಲಿನ ಅನೇಕ ಸಮಸ್ಯೆಗಳನ್ನು ಶಾಂತಸ್ವಭಾವದಿಂದ ಸಹಿಸಿಕೊಂಡು ಇರಬೇಕಾಯಿತು. ನಂತರ ನಿಧಾನವಾಗಿ ಮನೆಮಂದಿಯನ್ನೆಲ್ಲ ಗೆದ್ದರು. ಇವರು ಮರಾಠಿಯಲ್ಲಿ 6 ನೇ ವರ್ಗದ ವರೆಗೆ ಮಾತ್ರ ಕಲಿತರು. ಇಬ್ಬರು ಮಕ್ಕಳಾದ ನಂತರ ಕನ್ನಡ ಕಲಿತು ವಚನ ಸಾಹಿತ್ಯ ಅಧ್ಯಯನ ಮಾಡಿದರು. ಅದುವೇ ಮುಂದೆ ಸಾಹಿತ್ಯ ರಚನೆಗೆ ಕಾರಣವಾಯಿತು. ಮನೆಯವರ ಮಾರ್ಗದರ್ಶನದಿಂದ ವೀರಶೈವ ಲಿಂಗಾಯತ ಮಹಾಸಭೇಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅನೇಕಬಾರಿ ಅಧ್ಯಕ್ಷೆ ಸ್ಥಾನವನ್ನೂ ಅಲಂಕರಿಸಿದ್ದರು. ಐದು ಮಕ್ಕಳಿಂದ ಕೂಡಿದ ಅವರ ಸಂಸಾರ ಸಂಭ್ರಮ ಸಂತೋಷದಿಂದ ಸಾಗಿತ್ತು. ಶರಣ ನಿಷ್ಠೆ, ಗಾಂಧೀವಾದ, ದೇಶಪ್ರೇಮ ಇವು ಅವರ ಜೀವನದ ಗುರಿಗಳಾಗಿದ್ದವು.

ಲಿಂಗಾಯತ ವೀರಶೈವ ಸಭೆಗಳಲ್ಲಿ ಜಯದೇವಿಯವರ ಭಾಷಣ ಕೇಳಿದ ಬ್ರಿಟೀಷರು, ‘ಲಿಂಗಾಯತ ಬಟಾಲಿಯನ್’ ಗಾಗಿ ಭಾಷಣ ಮಾಡಲು ಕೇಳಿದಾಗ ಜಯದೇವಿಯವರು ನಿರಾಕರಿಸಿದರು. ಹೆಣ್ಣುಮಕ್ಕಳಿಗಾಗಿ ಸಾಮಾಜಿಕ ಕಾರ್ಯಕಲಾಪಗಳಲ್ಲಿ ಸತತ ತಮ್ಮನ್ನು ತಾವು ತೊಡಗಿಸಿಕೊಂಡರು. ಸಮಾಜಸೇವೆ, ಹಲವಾರು ಕ್ಷೇತ್ರಗಳಲ್ಲಿಯ ಶ್ರಮ, ಕಾರ್ಯವೈಖರಿ ಶ್ಲಾಘನೀಯವಾದವುಗಳು.
ಗಾಂಧೀಜಿಯವರ ತತ್ತ್ವಗಳಿಗೆ ಮಾರುಹೋಗಿ, ಸ್ವದೇಶಿ ಬಟ್ಟೆ ತೊಡುವ ವೃತ ಕೈಗೊಂಡರು. ಕನ್ಯಾಶಲೆ ಕಟ್ಟಿಸಿ ಅಲ್ಲಿ ಮರಾಠಿಯ ಬದಲು ಕನ್ನಡ ಕಲಿಸಲು ಪ್ರಾರಂಭಿಸಿದರು. ವಿದ್ಯಾರ್ಥಿನಿಯರನ್ನು ಪೆÇ್ರೀತ್ಸಾಹಿಸಲು ಶಾಲೆಗಳಲ್ಲಿ ನಗದು ಬಹುಮಾನ ಕೊಡುತ್ತಿದ್ದರು. ಇವರಿಂದ ಧನಸಹಾಯ ಪಡೆದ, ಧಾರವಾಡದ ಜಯದೇವಿತಾಯಿ ಮಾಧ್ಯಮಿಕ ಶಾಲೆ, ಮತ್ತು ಹುಬ್ಬಳ್ಳಿಯ ಭಾರತಿ ಶಾಲೆಗಳು ಈಗಲೂ ಪ್ರಶಂಶಿಸುತ್ತಿವೆ. ಸಾಕ್ಷರತಾ ಕೇಂದ್ರಗಳನ್ನು ಕನ್ನಡದಲ್ಲಿ ತೆಗೆದದ್ದರಿಂದ, ಮರಾಠಿಪರ ಆಢಳಿತಗಾರರು ಕೆಲವು ಕನ್ನಡ ಅಧಿಕಾರಿಗಳನ್ನು ವರ್ಗಾಯಿಸಿ ತೊಂದರೆ ಕೊಟ್ಟರು. ಆದರೂ ಜಯದೇವಿಯವರು ತಮ್ಮ ಪ್ರಯತ್ನ ಬಿಡಲಿಲ್ಲ. ಬಸವತತ್ತ್ವ, ಗಾಂಧೀತತ್ತ್ವಗಳ ಅನುಯಾಯಿಗಳಾಗಿದ್ದರಿಂದ ಅಸ್ಪೃಶ್ಯರ ಸೇವೆ ಮಾಡಿದ್ದಾರೆ. ಸುಪ್ರಸಿದ್ಧ ಡಾಕ್ಟರ ಮೋದಿಯವರನ್ನು ಕರೆಯಿಸಿ ಸಾಮೂಹಿಕ ನೇತ್ರಚಿಕೀತ್ಸೆ ಹಾಗೂ ಶಸ್ತ್ರಕ್ರಿಯೆ ಮಾಡಿಸಿದ್ದಾರೆ. ಬ್ರಿಟೀಷರ ಕಾಲಕ್ಕೆ ಮುಂಬಯಿ ಪ್ರಾಂತವಿದ್ದಾಗ್ಗೆ ಸೊಲ್ಲಾಪೂರವು ಕನ್ನಡ ನಾಡಿನ ಭಾಗವೇ ಆಗಿತ್ತು, ಆದರೆ ಮುಂದೆ ಕ್ಷೇತ್ರ ವಿಭಾಗೀಕರಣದ ವೇಳೆಗೆ, ಅದು ಕರ್ನಾಟಕಕ್ಕೇ ಸೇರಬೇಕೆಂದು ಜಯದೇವಿತಾಯಿ ಮಾಡಿದ ಪ್ರಯತ್ನ ಮರಾಠಿಗರ ಕುತಂತ್ರದಿಂದ ಸಾಧ್ಯವಾಗಲಿಲ್ಲ.
ಆಗ ಹೈದ್ರಾಬಾದ ಪ್ರಾಂತದ ಕೆಲವು ಭಾಗಗಳಲ್ಲಿ ಕನ್ನಡಿಗರು ಬಹಳ ಜನ ಇದ್ದರು. ಅವರಿಗೆ ಬೆಂಬಲವಾಗಿ ಜಯದೇವಿಯವರು ಅಲ್ಲಲ್ಲಿ ಕನ್ನಶ ಶಾಲೆಗಳನ್ನು ಪ್ರಾರಂಭಿಸಿದರು; ಮತ್ತು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನಿಯಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ಅವರು ಕನ್ನಡ ಮರಾಠಿ ಎರಡೂ ಸಾಹಿತ್ಯಗಳಲ್ಲಿ ಸಿದ್ಧಹಸ್ತರು.
ಜಯದೇವಿತಾಯಿಯವರ ಕನ್ನಡ ಕೃತಿಗಳು : ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ಧರಾಮ ಪುರಾಣ, ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು, ಅರುವಿನಾಗರದಲ್ಲಿ.
ಮರಾಠಿ ಕೃತಿಗಳು : ಸಿದ್ಧವಾಣಿ, ಬಸವ ದರ್ಶನ, ಸಮೃದ್ಧ ಕರ್ನಾಟಕಾಂಬೆ, ರೂಪರೇಷೆ, ಮಹಾಯೋಗಿನಿ, ಸಿದ್ಧರಾಮಾಂಚೀ ತ್ರಿಪದಿ, ಬಸವ ವಚನಾಮೃತ, ಶೂನ್ಯ ಸಂಪಾದನೆ.
ಶ್ರೀ ಸಿದ್ಧರಾಮ ಪುರಾಣ ಇವರ ಮೇರುಕೃತಿ ಎಂದು ಡಾ. ವಿ. ಕೃ. ಗೋಕಾಕ ಅವರು ವ್ಯಕ್ತಪಡಿಸಿದ್ದಾರೆ. ಡಾ. ಜಿ.ಪಿ.ರಾಜರತ್ನಂ ಅವರು, ಇವರಿಗೆ ಸೊಲ್ಲಾಪೂರದ ಕನ್ನಡ ಕೋಟೆಯ ತಾಯಿ ಜಯದೇವಿ. ಎಂದು ಪ್ರಶಂಶಿಸಿದ್ದಾರೆ. ಸಂಚಿ ಹೊನ್ನಮ್ಮನ ನಂತರ ಕಾವ್ಯರಚನೆಯಲ್ಲಿ ಯಶಸ್ಸು ಸಾಧಿಸಿದವರು, ಎಂದು ಮನಸಾರೆ ಮೆಚ್ಚಿದ್ದಾರೆ. ಜಯದೇವಿಯವರಿಗೆ ರಾಜ್ಯ ಸಾಹಿತ್ಯ, ಲಲಿತಕಲಾ ಅಕಾಡೆಮಿಗಳ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ ಲಿಟ್ ಪದವಿ ಪ್ರಶಸ್ತಿ ಗೌರವಗಳು ಸಂದಿವೆ.
ಇಂಥ ಒಬ್ಬ ಸಾದಾ ಸರಳ ಮಹಿಳೆ ಗಡಿನಾಡಿನಲ್ಲಿದ್ದು ಕನ್ನಡಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ್ದು ಅಪರೂಪವೆನಿಸುತ್ತದೆ. ಅವರು ನಿರಪೇಕ್ಷಿಗಳಾಗಿ ಕನ್ನಡಕ್ಕೆ ನಿಸ್ವಾರ್ಥಸೇವೆ ಸಲ್ಲಿಸಿದ್ದಾರೆ. ಕೆಚ್ಚೆದೆಯ ಕನ್ನಡತಿ ಜಯದೇವಿತಾಯಿ ಲಿಗಾಡೆಯವರು ಹೇಳಿದ ಮಾತು ಕೇಳಿಸಿಕೊಂಡರೆ ರೋಮಾಂಚನವಾಗುತ್ತದೆ. ಕನ್ನಡಿಗರೇ! ಕೇಳಿಸಿಕೊಳ್ಳಿರಿ!! “ನನ್ನ ನೆತ್ತರಿನಿಂದ ಕರ್ನಾಟಕ ಏಕೀಕರಣ ಆಗುವುದಾದರೆ, ಇಗೋ, ಇಂದೇ ಕೊಡಲು ಸಿದ್ಧಳಿದ್ದೇನೆ.” ಹೀಗೆ ಕನ್ನಡ ನಾಡು ನುಡಿಗೆ ಹೋರಾಡಿದ ಗಡಿನಾಡ ಹೋರಾಟಗಾರ್ತಿ ಜಯದೇವಿತಾಯಿ ಲಿಗಾಡೆ ಅವರ ಪ್ರಾಣಜ್ಯೋತಿ 25 ಜುಲೈ 1986 ರಂದು ಲಿಂಗದಲ್ಲಿ ಲೀನವಾಯಿತು.
ಶರಣು ಶರಣಾರ್ಥಿ….
ಅನ್ನಪೂರ್ಣಾ ಸುಭಾಶ್ಚಂದ್ರ ಸಕ್ರೋಜಿ.
