ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ: ಒಂದು ರಹಸ್ಯ ಕಥೆ…ಪ್ರಭಾವತಿ ಹಿರೇಮಠ ಹುಬ್ಬಳ್ಳಿ

ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿರುವದು ನಮ್ಮಪ್ಪ. ಅಪ್ಪನ ತಂದೆ ಮತ್ತು ತಾಯಿಯ ತಂದೆ ಮತ್ತು ತಾಯಿಯ ಪ್ರೀತಿ ನನಗೆ ಸಿಕ್ಕಿಲ್ಲ. ಕಾರಣ ನಾನು ಹುಟ್ಟುವ ಮೊದಲೇ ನಮ್ಮನ್ನು ಅಗಲಿದ್ದರು. ಆದರೆ ರೈತನಾಗಿರುವ ನಮ್ಮಪ್ಪ  ಮಾತ್ರ ತುಂಬಾ ಸ್ನೇಹಜೀವಿ….ಹೀಗಾಗಿ ಚಿಕ್ಕವರಿದ್ದಾಗ  ಎಲ್ಲಾ ಹಬ್ಬಗಳನ್ನು ಆಚರಿಸುವ ಆಕಾರಣ ತಿಳಿದುಕೊಳ್ಳುವ ಕುತೂಹಲ ನನಗೆ…ಅವನ ಜೊತೆ ತೋಟ, ಗದ್ದೆ ಹೀಗೆ ಹೋಗುವ ಅಭ್ಯಾಸ…..
ಇಂತಹ ಸಂದರ್ಭದಲ್ಲಿ ನನ್ನಪ್ಪ ಒಂದು ದಿನ ಹೊಲದಿಂದ ಮನೆಗೆ ಬರುವಾಗ ನಾನು ಕೇಳುವ ಕುತೂಹಲದ ಪ್ರಶ್ನೆಗಳಿಗೆ ಅಷ್ಟೇ ಕುತೂಹಲದ ಉತ್ತರ ನೀಡುತ್ತಿದ್ದ. ಆಗ ಚಿಕ್ಕ ವಯಸ್ಸಿನಲ್ಲಿದ್ದ ನನಗೆ ಯಾವ ಆಶ್ಚರ್ಯ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅವರು ಹೇಳಿದ ಪ್ರತಿ ಮಾಹಿತಿ ಎಲ್ಲಾದರೂ ಸಿಗುತ್ತಾ ಅಂತಾ ಹುಡುಕಾಡಿದರೆ ಫಲಿತಾಂಶ ಮಾತ್ರ ಶೂನ್ಯ. ಅವರಿಗೆ ಇದನ್ನು ಅವರ ಅಪ್ಪ ಹೇಳಿದ್ದರಂತೆ….ಯಾಕೆ ಇವೆಲ್ಲ ಲಿಖಿತ ರೂಪದಲ್ಲಿ ದಾಖಲಾಗಲಿಲ್ಲವೋ ಗೊತ್ತಿಲ್ಲ.  ದೀಪಾವಳಿ ಹಬ್ಬದ ಬಗ್ಗೆಯೂ ಯಾರಿಗೂ ಗೊತ್ತಿಲ್ಲದ ಮಾಹಿತಿ ನಮ್ಮತ್ತೆ ಹೇಳಿದ್ದನ್ನು ನಿಮ್ಮ ಮುಂದೆ ಮುಂದಿನ ಸಂಚಿಕಯಲ್ಲಿ ಹಂಚಿಕೊಳ್ಳುವೆ. ಹಾಗೆಯೇ ಇಂದು ಆಚರಿಸುತ್ತಿರುವ ಮಣ್ಣೆತ್ತಿನ ಅಮಾವಾಸ್ಯೆಯ ಬಗ್ಗೆಯೂ ಎಲ್ಲೂ ದಾಖಲಿಸಿದ ಮಾಹಿತಿ ಹೇಳಿದ್ದ……
ಅದನ್ನೇ ನಿಮ್ಮ ಮುಂದೆ ಒಪ್ಪಿಸುವೆ ಇಷ್ಟೇ….

ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮವಾಸ್ಯೆ. ಈ ಅಮವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ ಜಿಗುಟಾಗಿರುವ ಮಣ್ಣನ್ನು ಮನೆಗೆ ತಂದು, ಅದರಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ. ಬಳಿಕ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಇದು ಸಾಮಾನ್ಯವಾಗಿ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ,  ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಎತ್ತುಗಳ ಪಾತ್ರವನ್ನು ಸ್ಮರಿಸಿ, ಅವುಗಳನ್ನು ಪೂಜಿಸುತ್ತಾರೆ.  ಇಂದು ರೈತ ಕುಟುಂಬಗಳ ಮನೆಯಲ್ಲಿ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. *ಹೋಳಿಗೆ, ಹುಗ್ಗಿ, ಬೆಲ್ಲದ ಬೇಳೆ, ಕರಿಗಡಬು, ಸಂಡಿಗೆ, ಹಪ್ಪಳ, ಭಜಿ* ಇತ್ಯಾದಿಗಳನ್ನು ಮಾಡಿ ಮಣ್ಣೆತ್ತಿಗೆ ನೈವೇದ್ಯ ಮಾಡಲಾಗುತ್ತದೆ. ನಂತರ ಸಾಯಂಕಾಲ ಅವುಗಳನ್ನು ಮೆರವಣಿಗೆಯಲ್ಲಿ ಹೋಗಿ ವಿಸರ್ಜಿಸಿ ಬರುತ್ತಾರೆ…….

ಇದು ನಮಗೆಲ್ಲ ಗೊತ್ತಿರುವ ಮಾಹಿತಿ. ಆದರೆ ನನ್ನಪ್ಪ ಹೇಳಿದ್ದೆ ಬೇರೆ……. *ನಿಜವಾಗಲೂ ಇದು ರೈತರ ಹಬ್ಬ ಅಲ್ಲವಂತೆ!!!!.* ಬದಲಾಗಿ ರೈತರಿಗೆ ಸಹಾಯ ಮಾಡುವ ಕೂಲಿ ಕಾರ್ಮಿಕರ ಹಬ್ಬವಂತೆ…ಮೊನ್ನೆಯ ಹುಣ್ಣಿಮೆಯಂದು ರೈತರು ಎತ್ತುಗಳಿಗೆ ಪೂಜಿಸಿ ಕರಿ ಹರಿದು ಕಾರ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಿದ್ದಕ್ಕೆ ಜಮೀನುಗಳಲ್ಲಿ ಕೂಲಿ ಮಾಡುವ ಮತ್ತು ರೈತನಿಗೆ ಸಹಾಯ ಮಾಡುವ ಕಂಬಾರ, ಕಮ್ಮಾರ, ಚಮ್ಮಾರ, ಬಡಿಗ ಹೀಗೆ ಎಲ್ಲರೂ ಸೇರಿ ಶಿವನನ್ನು ಕೇಳಿದರಂತೆ *….”ರೈತ ಮೊನ್ನೆಯ ಹುಣ್ಣಿಮೆಯಂದು ಎತ್ತುಗಳಿಗೆ ಸಿಂಗಾರ ಮಾಡಿ ವೈಭವದಿಂದ ಹಬ್ಬ ಆಚರಿಸಿದ….ಆದರೆ, ನೆಲ ಮೂಲದಿಂದ ಬಂದ ನಾವು ರೈತರಲ್ಲ. ಬದಲಾಗಿ ಕೇವಲ ರೈತನ ಸಹಾಯಕರು ನಾವು…ನಮ್ಮಲ್ಲಿ ಎತ್ತುಗಳಿಲ್ಲ…ಏನು ಮಾಡೋಣ??”*  ಎಂದು ಬೇಡಿಕೊಂಡರಂತೆ. ಆಗ ಪಾರ್ವತಿಯ ಪಕ್ಕದಲ್ಲಿ ಆಸೀನನಾಗಿದ್ದ ದೇವ ನಗುತ್ತಾ ಹೇಳಿದನಂತೆ……” *ನೀವೂ ನೆಲಮೂಲದ ಮಕ್ಕಳೇ. ಪಾರ್ವತಿ ಇದೇ ನೆಲದ ಮಣ್ಣಿನಿಂದ ಗಣಪತಿಗೆ ಜೀವ ನೀಡಿದ್ದಾಳೆ… ನೀವೂ ಕೂಡಾ ನನ್ನ ನಂದಿಗೆ ಜೀವ ನೀಡಿ ಪೂಜಿಸಿ…..ರೈತನ ಜಮೀನಿನ ಮಣ್ಣು ತೆಗೆದುಕೊಂಡು ಎತ್ತುಗಳನ್ನು ಮಾಡಿ ತುಂಬಾ ವಿಜೃಂಭಣೆಯಿಂದ ಹಬ್ಬ ಆಚರಿಸಿ. ಭಕ್ಷ್ಯ ಭೋಜನ ಮಾಡಿ ನಿಮ್ಮ ಮನೆಗೆ ವರ್ಷವಿಡೀ ದಣಿದ ರೈತನನ್ನು ಕರೆದು ಊಟ ಮಾಡಿಸಿ….ನಂತರ ಅದೇ ಭೂಮಿಯಲ್ಲಿ ಮಣ್ಣಿನ ಎತ್ತುಗಳನ್ನು ಪೂಜಿಸಿ ಇಟ್ಟು ಬನ್ನಿ…..ನಾನು ಮುಂಗಾರು ಮಳೆ ಕಳಿಸುವೆ…..ಅದು ನೀವಿಟ್ಟ ಮಣ್ಣಿನ ಎತ್ತುಗಳಿಗೆ ನೀರುಣಿಸಿ ಮತ್ತೆ ಮಣ್ಣಲ್ಲಿ ಮಣ್ಣಾಗಿಸುತ್ತದೆ…..ಅಂತಾ ಹೇಳಿ ಕಳುಹಿಸಿದ್ದಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತಿದೆ ಅಂತೆ* ……..

ಇದೇ ನಮ್ಮಪ್ಪ ಹೇಳಿದ ಮಣ್ಣೆತ್ತಿನ ಅಮಾವಾಸ್ಯೆಯ ರಹಸ್ಯ……


4 thoughts on “ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ: ಒಂದು ರಹಸ್ಯ ಕಥೆ…ಪ್ರಭಾವತಿ ಹಿರೇಮಠ ಹುಬ್ಬಳ್ಳಿ

  1. ಸೊಗಸಾದ ಜಾನಪದ ಸಂಕಥನ. ನಮ್ಮ ಜನಪದ ಹಬ್ಬ ಆಚರಣೆಗಳು ಯಾವತ್ತೂ ಮಹಾ ಸ್ವಾರಸ್ಯಕರ. ಅಭಿನಂದನೆಗಳು ಲೇಖಕಿಗೆ.

      1. It’s really great idea that, you learnt it from your father. Hats off.
        This article every one should read and understand.
        It’s highly recommend to read and circulate

  2. Good write up and really need to know the facts before celebrations . And this occasion is dedicated to the Farmers for their relentless service to the nation.

Leave a Reply

Back To Top