ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ದಳ್ಳುರಿ

ಎಲ್ಲೆಲ್ಲೂ..ರಣಹದ್ದುಗಳ ಹಾರಾಟ
ಕೊಳೆ ಕೊಳೆತು ನಾರುವ ದುರ್ನಾತದ ಮಧ್ಯೆ
ಮುಗ್ಧರ ಹೆಣ ಹುಡುಕುತ್ತಾ..
ರೆಕ್ಕೆ ಬಡಿವ ಸದ್ದಿಗೆ ತೊಟ್ಟಿಲ ಮಗು
ಬೆಚ್ಚಿ ಬೀಳುತ್ತಿದೆ ತಾಯಿಯಿದ್ದರೂ..

ಮೊದ ಮೊದಲು ಬೆಚ್ಚಿದ
ಮಗುವಿಗೀಗ –
ರೆಕ್ಕೆ ಬಡಿತದ ಸದ್ದೇ ತೂಗುವ ಜೋಗುಳ!

ನೋಡಿ ಕಿಟಾರನೆ ಕಿರುಚಿದ
ಕ್ರೌರ್ಯದ ರಕ್ತ
ಮಗುವಿಗೀಗ ಮೆತ್ತಿಕೊಳ್ಳುವ ಬಣ್ಣ!
ಕಣ್ಣು ಹೊರಳಿದರೆ
ಕಾಣುವುದೆಲ್ಲ ಕೆಂಪು
ಕೈಯಲ್ಲಿದ್ದ ಲೇಖನಿ ಆಯುಧಗಳಾಗಿವೆ
ವ್ಯವಸ್ಥೆಯ ಕ್ರೌರ್ಯದಿ ಮನಸ್ಸು ಮಾಗಿ!

ಬಾಂಬ್ ಸಿಡಿದ ಸದ್ದು ಕೇಳಿದ ಮಗುವಿಗೀಗ
ದೀಪಾವಳಿಯ ಠುಸ್ ಪಟಾಕಿಗಳು
ಮಜಾ ನೀಡುವುದಾದರೂ ಹೇಗೆ?
ದೊಡ್ಡ ಸದ್ದು ಕೇಳಲು ಮಾಡಲು ಸಿದ್ಧ

ಆಯುಧಗಳನ್ನೇ ಆಟಿಕೆಗಳೆಂದು
ಭ್ರಮಿಸಿದ ಮಗು ನಿಂತಿದೆ ಪಾಪ
ಕವಲೊಡೆದ ನಾಶದ ಹಾದಿಯಲಿ..
ಮಾರ್ಗದರ್ಶನ ನೀಡಬೇಕಾದ
ತಾಯಿ ಮಾತ್ರ ಕಾಯುತ್ತಿದ್ದಾಳೆ
ಎಂದೂ..ಆಗದ ಕಲ್ಕಿ ಉದಯಕ್ಕೆ!!


Leave a Reply