ಮೊದಲ ಕವಿತೆ
ಶುಭಲಕ್ಷ್ಮಿ ನಾಯಕ
ಗುರುನಮನ
ಕತ್ತಲೆಯ ಕಳೆದು ಬೆಳಕ ನೀಡುವ
ದಿವ್ಯಜ್ಯೋತಿಗೆ ನಮ್ಮ ನಮನ
ಶಿಲೆಯನು ಕೆತ್ತಿ ಕಲೆಯನು ಕೊರೆಯುವ
ಕಲಾಕಾರನಿಗಿದೋ ನಮ್ಮ ನಮನ//
ದುರ್ಗುಣವಳಿಸಿ ಸದ್ಗುಣ ಬೆಳೆಸುವ
ಆಚಾರ್ಯರಿಗೆಮ್ಮ ನಮನ
ಕಲಿಕೆಯ ಮಹಿಮೆಯ ಲೋಕಕೆ
ಅರುಹುವ ತತ್ವಜ್ಞಾನಿಗಿದೋ ನಮನ//
ಅಜ್ಞಾನವನಳಿಸಿ ಜ್ಞಾನವ ದರ್ಶಿಸುವ
ದಾರ್ಶನಿಕನಿಗಿದೋ ಎಮ್ಮ ನಮನ
ಗುರಿಯೇಇಲ್ಲದೆ ಅಲೆಯುವ ವೃಂದಕೆ
ಗುರಿತೋರುವ ಗುರುವಿಗಿದೋ ನಮನ//
ತಿದ್ದಿ ತೀಡಿ ಹೊಳಪನು ನೀಡುವ
ಶಿಲ್ಪಿಗಿದೋ ನಮ್ಮ ನಮನ
ಜೀವಕೋಟಿಗೆ ಒಳಿತನು ಬಯಸುವ
ಚಿನ್ಮಯಮೂರ್ತಿಗೆಮ್ಮ ನಮನ//
ದೇಶಭಕ್ತಿಯ ಬೀಜವ ಬಿತ್ತುವ
ಸಂತನಿಗೆಮ್ಮ ನಮನ//
ಗುರುನಮನದ ಕುರಿತು
ಗು’ ಎಂದರೆ ಕತ್ತಲೆ ‘ರು’ ಎಂದರೆ ಕಳೆಯುವವ ‘ಗುರು’ ಎಂದರೆ ಅಜ್ಞಾನವೆಂಬ ಕತ್ತಲನ್ನು ಕಳೆದು ಜ್ಞಾನದ ಬೆಳಕನ್ನು ನೀಡುವ ಗುರುವಿಗೆ ಮೊದಲು ನಮ್ಮೆಲ್ಲರ ನಮನ ಸಲ್ಲಬೇಕು. ಪ್ರತಿಯೊಬ್ಬರೂ ಈ ಗುರು ತೋರಿದ ಮಾರ್ಗದಲ್ಕಿ ನಡೆಯುತ್ತಾರೆ. ಅನಕ್ಷರಸ್ಥ ಅನಕ್ಷರಸ್ಥ ಎಂಬ ಅಂತರವಿಲ್ಲ. ” ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರು” ಎಂಬಲ್ಲಿ ನಮಗೆಲ್ಲರಿಗೂ ಮೊದಲ ಗುರು ನಮ್ಮ ಹೆತ್ತಮ್ಮಳಾಗಿರುವಾಗ ಗುರುಸ್ವರೂಪಿಣಿಯಾದ ಆಕೆಗೆ ನಮನ ಸಲ್ಲಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಅಂತೆಯೇ ಬದುಕಿನಲ್ಲಿ ತಪ್ಪುಗಳ ತಿದ್ದಿದ, ನಡೆಯುವಾಗ, ಎಡವಿದಾಗ ಸರಿಯಾದ ಮಾರ್ಗವನ್ನು ತೋರಲು ನೆರವಾದವರೆಲ್ಲ ಗುರುಗಳೇ. ಅಕ್ಷರ ಕಲಿಸಿದ ಗುರುಗಳ ಜೊತೆಯಲ್ಲಿ ಬದುಕೆಂಬ ಶಾಲೆಯಲ್ಲಿ ಜೀವನ ಪಾಠ ತಿಳಿಸಿದ ಅಪ್ಪ, ಅಮ್ಮರಾದಿಯಾಗಿ ಎಲ್ಲ ಗುರುವೃಂದಕ್ಕೆ ಗೌರವ ಪೂರ್ವಕ ನಮನವನ್ನು ಸಲ್ಲಿಸಿ ಧನ್ಯತಾ ಭಾವವನ್ನು ಸಮರ್ಪಿಸಲು ಗುರುನಮನವೆಂಬ ಕವಿತೆಯನ್ನು ಬರೆದೆ. ದೇವರು ಹಾಗೂ ಗುರು ಇಬ್ಬರೂ ಒಟ್ಟಿಗೆ ಬಂದರೆ ಮೊದಲು ಗುರುವಿಗೆ ನಮಿಸುವೆ ಎಂದ ಸಂತ ಕಬೀರ್ ದಾಸರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ನೆನೆಯಲೇಬೇಕು. ಬದುಕಿನಲ್ಲಿ ಬೀಳುಗಳನ್ನೇ ಕಂಡಾಗ ಕೈ ಹಿಡಿದು ಮೆಲೆತ್ತುವವನು ಗುರು. ಅಂಧಕಾರದಲ್ಲಿ ಮನಸ್ಸು ಒದ್ದಾಡುವಾಗ ಜ್ಞಾನದ ಹಣತೆಯನ್ನು ಉರಿಸುವವನು ಗುರು. ಒಂದರ್ಥದಲ್ಲಿ ನೋಡಿದರೆ ಪ್ರಕೃತಿಯೇ ಮನುಷ್ಯನಿಗೆ ಗುರು. ಇಲ್ಲಿನ ಕಣಕಣವೂ ನಮಗೊಂದ ಪಾಠ ಕಲಿಸುತ್ತದೆ. ಚುಗುರುವ ಮರ, ಅರಳುವ ಹೂ, ಮುದುಡುವ ಪುಷ್ಪ, ಚಿಮ್ಮುವ ಸೆಲೆ , ಓಡುವ ನದಿ, ಬಳುಕುವ ಬಳ್ಳಿ, ಅಚಲಪರ್ವತ, ಎಲ್ಲವನ್ನು ತನ್ನೊಳಗೆ ಇಟ್ಟುಕೊಂಡಿರುವ ಅಪಾರ ಶರಧಿ. ಒಣಗಿದ ಎಲೆ ಉದುರಿಸುವ ಮರಗಳು, ಸಿಡಿಲು, ಗುಡುಗು, ರಾತ್ರಿ ಹಗಲು, ಈ ಎಲ್ಲವೂ ನಮಗೆ ಒಂದೊಂದು ರೀತಿಯ ಜೀವನ ಪಾಠವನ್ನು ಕಲಿಸುತ್ತವೆ ಎಂದಾದಾಗ ಬದುಕಿನಲ್ಲಿ ಗುರುವನ್ನು ನಂಬಿ, ಗೌರವಸಲ್ಲಿಸಿ ಕೆಟ್ಟವರಿಲ್ಲ ಎಂಬ ಭಾವದಲಿ ಗುರುವೃಂದಕ್ಕೆ ನಮನ ಸಲ್ಲಿಸಲು ‘ ಗುರುನಮನ’ ಎಂಬ ಕವನ ಬರೆದೆ ಅದು ನನ್ನ ಚೊಚ್ಚಲ ಕವನ ಸಂಕಲನ “ಬೆಸುಗೆಯಿದ್ದರೆ ವಸುಧೆ” ಇದರ ಮೊದಲ ಕವನವೂ ಹೌದು. ತನ್ಮೂಲಕ ಗುರುವಾಗಿ ಸರಿದಾರಿ ತೋರುದ ಎಲ್ಲರಿಗೂ ಮನದಾಳದ ಪೂಜನೀಯ ನಮನಗಳು.
ಶುಭಲಕ್ಷ್ಮಿ ನಾಯಕ