ಐದನೇ ವಾರ್ಷಿಕೋತ್ಸವ ವಿಶೇಷ-
ನಾನು ಮೆಚ್ಚಿದ ಕಾದಂಬರಿ
ಶಿವಲೀಲಾ ಶಂಕರ್
ಛೇದ
ಯಶವಂತ ಚಿತ್ತಾಲ
ಕರಾವಳಿಯ ತೀರದ ಉದ್ದಕ್ಕೂ ಅದೆಂತಹುದೋ ಸೆಳೆತದನಂಟಿದೆ. ಸಮುದ್ರದ ಜಲಚರಗಳು ಇಲ್ಲಿಯ ಜೀವನಾಡಿಗಳಾಗಿವೆ.ಅದರಂತೆ ವಿಶಿಷ್ಟ ರೀತಿಯ ಸಾಂಸ್ಕೃತಿಕ, ಜನಪದದ ಒಳಸುಳಿವಿದೆ.ಇಂತಹ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಅವರವರ ವೈಯಕ್ತಿಕ ಜೀವನದ ಬಗ್ಗೆ ಹೆಮ್ಮೆ ಪಡುವಂತ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳು, ವ್ಯಕ್ತಿಗಳು ಈ ನೆಲದಲ್ಲಿ ಆಗಿಹೋಗಿದ್ದಾರೆ.ಉಪ್ಪಿನ ಸತ್ಯಾಗ್ರಹ ಚಳುವಳಿ ನಡೆದದ್ದು ಅಂಕೋಲೆಯಲ್ಲಿ ಎಂಬುದು ಹೆಮ್ಮೆಯ ಸಂಗತಿ. ಹಾಗೆಯೇ ಜನಮನವ ಗೆದ್ದ ” ಚುಟುಕು ಬ್ರಹ್ಮ ” ದಿನಕರ ದೇಸಾಯಿ, ಗೌರೀಶ ಕಾಯ್ಕಣಿಯವರನ್ನು ಮರೆಯುವಂತಿಲ್ಲ.ನನ್ನ ಜಿಲ್ಲೆ ಸಂಪತ್ತ ಭರಿತ ಕಣಜವೆಂದರೆ ತಪ್ಪಾಗದು.
ನಮ್ಮ ಜಿಲ್ಲೆಯ ಕ್ರಿಯಾಶೀಲ ಮನೋಭಾವದ ಪ್ರತಿಭೆಯೊಂದು ಕುಮಟಾ ತಾಲ್ಲೂಕಿನ ‘ಹನೇಹಳ್ಳಿ’ಯಲ್ಲಿ ಜನಿಸಿತು. ತಂದೆ ವಿಠೋಬ,ತಾಯಿ ರುಕ್ಮಿಣಿ ಈ ದಂಪತಿಗಳಿಗೆ ಏಳನೆಯ ಮಕ್ಕಳಲ್ಲಿ ಐದನೆಯವರೇ ಯಶವಂತ ಚಿತ್ತಾಲರು. ಇವರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿದೆ ಇವರಿದ್ದ ಹಳ್ಳಿ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಮನೆ ಭಾಷೆ ಕೊಂಕಣಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟಾ, ಧಾರವಾಡ, ಮುಂಬಯಿ ಮುಂತಾದ ಕಡೆಗಳಲ್ಲಿ ನಡೆಯಿತು. ಉಚ್ಚ ಶಿಕ್ಷಣ ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ ಗಂಗಾಧರ ಚಿತ್ತಾಲರು ಇವರ ಅಣ್ಣನಾಗಿದ್ದರು. ಶಾಂತಿನಾಥ ದೇಸಾಯಿಯವರು ಮತ್ತು ಗೌರೀಶ ಕಾಯ್ಕಿಣಿಯವರು ಯಶವಂತ ಚಿತ್ತಾಲರ ಮೇಲೆ ಪ್ರಭಾವ ಬೀರಿದ್ದರು.ಯಶವಂತರಿಗೆ ಚಿತ್ರಕಲೆಯನ್ನು ಕಲಿಯುವ ಗೀಳಿತ್ತು. ಮನಸ್ಸನ್ನು ಉಳ್ಳವನು ಸದಾ ಒಂದಿಲ್ಲೊಂದು ಸಕಾರಾತ್ಮಕ ಪ್ರತಿಕ್ರಿಯೆ ವಿಮರ್ಶೆಗಳನ್ನು ತನ್ನೊಳಗೆ ನಡೆಸಿ ಕೊನೆಗೆ ಉತ್ತಮ ಬರಹವನ್ನು ಪ್ರಕಟಿಸಲು ಮನವನ್ನು ಹದಗೊಳಿಸುತ್ತಾನೆ.
ಯಶವಂತ ಚಿತ್ತಾಲರು ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಅಮೂಲ್ಯ ಪ್ರತಿಭೆಗಳಲ್ಲಿ ಇವರು ಒಬ್ಬರೂ.ಇವರು ಬರೆದ ಕಾದಂಬರಿಗಳಲ್ಲಿ ಒಂದಾದ “ಛೇದ” ಕುರಿತಾಗಿ ಓದಿದಷ್ಟು ಅರ್ಥೈಸಿಕೊಂಡಷ್ಟನ್ನು ಮತ್ತು ಅನೇಕರು ಅರ್ಥೈಸಿಕೊಂಡದನ್ನು ಗ್ರಹಿಸುತ್ತ ನನ್ನೊಳಗೆ ‘ಛೇಧ’ ಕಾದಂಬರಿ ಆವರಿಸಲು ಸಾಧ್ಯವಾಯಿತು. ಯಾವ ಕಾದಂಬರಿಯಾದರೂ ಸರಿ ಪ್ರಥಮಾವಲೋಕನಕ್ಕೆ ನಮ್ಮಂತಹ ಅರಿವಿನ ಕೊರತೆಯಿರುವವರಿಗೆ ಒಮ್ಮೆಲೇ ಓದಿದರೆ ಅರ್ಥವಾಗದು. ನನಗೂ ಕಾದಂಬರಿ ಛೇದದ ಕುರಿತು ಓದುತ್ತಾ ಓದುತ್ತಾ ಹೋದಂತೆಲ್ಲಾ,
ಚಿತ್ತಾಲರ “ಛೇದ” ಪುಸ್ತಕವನ್ನು ಓದಿದ ಮೇಲೆ ಅನಿಸಿದ್ದು ಅವರು ಹೇಳಬೇಕಾದುದನ್ನು ಎಲ್ಲೂ ನೇರವಾಗಿ ಹೇಳುವುದಿಲ್ಲ. ಮೊದಮೊದಲು ಅರ್ಥವಾಗುವುದೂ ಇಲ್ಲ. ಆದರೆ ಒಂದು ಸಲ ಅವರು ಮನಸ್ಸಿನೊಳಗೆ ಇಳಿಯಲು ಪ್ರಾರಂಭಿಸಿದರೆ ಒಂದು ಅದ್ಭುತ ಲೋಕವನ್ನು ತೋರಿಸಿ ಬಿಡುತ್ತಾರೆ. ಒಂದು ಕೊಲೆಯ ಸುತ್ತ ತೆರೆದುಕೊಳ್ಳುವ ಕತೆಯ ಮೂಲಕ ನಮ್ಮ ಮನಸ್ಸನ್ನು ಶೋಧಿಸುವ ರೀತಿ ಅನನ್ಯ.ವಾಸ್ತವವನ್ನು ವಾಸ್ತವದಂತೆ ಕಾಣಬೇಕು. ವಾಸ್ತವದ ನೆಲೆಗಟ್ಟಿನಲ್ಲಿ ಒಂದು ಸಂಗತಿಯನ್ನು ವಿಶ್ಲೇಷಿಸುವುದಕ್ಕೂ ಅದರ ಪರಿಧಿಯಿಂದಾಚೆ ವ್ಯಕ್ತಿಯನ್ನೋ ವ್ಯಕ್ತಿ ವಿಶೇಷಣವನ್ನೋ ಶಕ್ತಿ ಮೀರಿ ಅರಿಯಲು ಹೋದಾಗ ಅವು ಅಸಂಗತ ಮತ್ತು ಅವಾಸ್ತವವಾಗುತ್ತದೆ. ಸತ್ಯಕ್ಕೆ ದೂರವಾದುದನ್ನು ಅಸತ್ಯದ ಹಿನ್ನೆಲೆಯಲ್ಲಿ ಹುಡುಕಲು ಹೊರಡುವ ವ್ಯರ್ಥ ಪ್ರಯತ್ನವೂ ಆಗದೇ ಇರಲಿಕ್ಕಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿ ಗುರಿ ತಲುಪಿದೆ ಎಂದರೆ ಅರ್ಥವಿದೆಯೇ? ಇರುವುದನ್ನು ಇಲ್ಲದಂತೆಯೂ ಇಲ್ಲದ್ದನ್ನು ಇರುವಂತೆಯೂ ಸಾಧಿಸುವುದು ಬದುಕಿನ ಉದ್ದೇಶವಾಗಬಾರದು. ಮನುಷ್ಯ ಏನೆಲ್ಲಾ ಮಾಡಿದರೂ ನೆಮ್ಮದಿ ಕಾಣುವ ನೆಲೆ ವಾಸ್ತವತೆ ಮತ್ತು ಊಹೆಗಳ ನಡುವೆ ಇರುವ ಅಂತರವನ್ನು ವಿಭಜಿಸುವುದರಲ್ಲಿದೆ.
ಬದುಕು ಅನೂಹ್ಯ ತಿರುವುಗಳ ಆಗುಂತಕ ಸರಮಾಲೆ. ಇಲ್ಲಿ ಯಾರು ಯಾವ ವೇಷವನ್ನು ಧರಿಸಿ ಬೇಕಾದರು ತಮ್ಮ ಉದ್ದೇಶ ಸಾಧನೆ ಮಾಡಿಕೊಳ್ಳಬಹುದು. ಕಳೆದುಹೋದ ಕನಸುಗಳು, ಬದುಕಿನ ಅಗತ್ಯತೆಗಳು, ಯಾವುದನ್ನೋ ಹಠಕ್ಕೆ ಬಿದ್ದು ಸಾಧಿಸುವಿಕೆ, ಕೈಜಾರಿದ ಸಂಬಂಧಗಳ ಪುನರ್ ಪ್ರತಿಷ್ಠಾಪನೆಗಾಗಿ ಚಹರೆ ಬದಲಿಸಿ ತಮ್ಮ ಉದ್ದೇಶ ಸಾಧನೆಗೋಸ್ಕರ ನಮ್ಮ ಮನೆ ಬಾಗಿಲಿಗೆ ಬರಬಹುದು. ಅವರು ಬಂದ ಕಾರಣ ನಮಗೆ ತಿಳಿಯಲಿಕ್ಕಿಲ್ಲ. ಪಾತ್ರರಲ್ಲದವರಿಗೆ ಅಂತಃಕರಣ ತೋರಿ ವಿನಾಕಾರಣ ತಗುಲಿಕೊಳ್ಳುತ್ತೇವೆ. ನಮ್ಮದಲ್ಲದ ಬದುಕಿಗೆ ಇನ್ನೊಬ್ಬನ ಸಲುವಾಗಿ ಜೀವನ ಸಮೆಸುತ್ತೇವೆ. ಕಾರಣ ತಿಳಿಯುವ ಹಂತಕ್ಕೆ ಬಂದಾಗ ಮನೆಗೆ ಬಂದು ಬಾಗಿಲು ತಟ್ಟಿದ ಆಗುಂತಕ ಕಣ್ಣಿಗೆ ಕಾಣುವುದೇ ಇಲ್ಲ. ನಾವು ಮಾತ್ರ ಸವೆಯುತ್ತಿರುತ್ತೆವೆ ಕಾರಣವಿಲ್ಲದೆಯೇ ವಿನಾಕಾರಣ.
“ವಾಸ್ತವವನ್ನು ಎದುರಿಸುವ ಶಕ್ತಿ ಎಲ್ಲರಿಗೂ ನಿಸರ್ಗದತ್ತವಾಗಿ ಇದೆ. ಆದರೆ ನಮ್ಮ ಮನಸ್ಸು ಇಲ್ಲಸಲ್ಲದ ಕಲ್ಪನೆಗಳ ಗೂಡಾಗಿ ಗಾಳಿಯೊಡನೆ ಗುದ್ದಾಡಿ ಸೋತು ಹೋಗುತ್ತದೆ. ಬದುಕು ನರಕವಾಗುತ್ತದೆ”. ಬದುಕಿನ ಅಪರಿಚಿತ ಪಯಣದಲ್ಲಿ ಯಾರೂ ಘಾಸಿಗೊಳ್ಳಬಹುದು, ಜೀವನ ತಿರುಗ ತಿಪ್ಪಲೆ ಆಗಬಹುದು. ನಿಮ್ಮ ದೃಷ್ಟಿಯಲ್ಲಿ ಜೀವಕ್ಕೆ ಕಟ್ಟಲಾಗದ ಬೆಲೆ ಇನ್ನೊಬ್ಬನಿಗೆ ನಿಕೃಷ್ಟದಂತೆ ತೋರಬಹುದು.ಕಾಯಿದೆಗೆ ವಿರುದ್ಧವಾದುದು,ಪೋಲೀಸರು ಹಿಡಿಯುತ್ತಾರೆ ಆದುದರಿಂದ ಕೊಲ್ಲುವುದು ತಪ್ಪು ಎನ್ನುವ ತಣ್ಣನೆಯ ಕ್ರೌರ್ಯ ಕೂಡ ಸಹಜ ಮಟ್ಟದ ಸಮರ್ಥನೆ ಆಗಬಹುದು. ಜೀವಕ್ಕೆ ಬೆಲೆಯೇ ಇಲ್ಲವಾ? ಏನನ್ನು ಅಲ್ಲಗಳೆಯುವಂತಿಲ್ಲ. ಬರುವುದನ್ನು ಅಷ್ಟೇ ಸಮರ್ಥವಾಗಿ ಎದುರಿಸುವ ದಿಟ್ಟತನದ ಹೊರತು; ಬದುಕು ನೀಡುವ ಅಪರಿಚಿತ ತಿರುವುಗಳಿಂದ ಮತ್ತು ಆಘಾತಗಳಿಂದ ಯಾರು ಬಚಾವಾಗಲಾರರು.
ಹೇಳುವ ಮಾತುಗಳು ಒಗಟಿನಂತ್ತಿದ್ದರೂ,ಬೇಕಂತ ಬರೆದದ್ದಲ್ಲ. ಅವು ಅರ್ಥವಾಗಬೇಕೆಂದರೆ ಯಶವಂತ ಚಿತ್ತಾಲರು ಬರೆದ “ಛೇದ”ವನ್ನು ಓದಬೇಕು. ಚಿತ್ತಾಲರೇ ಹಾಗೆ. ನಾನು ಅತ್ಯಂತ ಇಷ್ಟಪಡುವ ಲೇಖಕ. ಹೇಳುವ ವಿಷಯ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ, ಅವರಷ್ಟು ಗಹನವಾಗಿ ವಿಷಯ ಮಂಡಿಸಬಲ್ಲವರು ಕಡಿಮೆ, ಅವರ ಧಾಟಿಯಂತೆ ಹೇಳುವರು ಅಪರೂಪ, ಚಿತ್ತಾಲರ ಪಾತ್ರಗಳು ಸಮಾಜದ ಮುಖವಾಡ ಕಳಚುವ ದಾರಿ ದೀಪದಂತೆ.ಚಿತ್ತಾಲರು ಬರೆಯುತ್ತಾ ಹೋಗುತ್ತಾರೆ; ಸಹಜ ಗಾಳಿಯಾಡುವಂತೆ, ನಾವು ಉಸಿರಾಡುತ್ತೇವೆ.ಸಹಜವಾಗಿರುವ ಚಿತ್ರಕಾರನಂತೆ, ನಾವು ಬಣ್ಣಗಳಾಗುತ್ತೇವೆ. ಅವರು ಅವರಾಗುವುದಕ್ಕೆ, ಅವರನ್ನು ಅವರು ಕಂಡುಕೊಳ್ಳಲು ಬರೆಯುತ್ತಾರೆ. ಅದರಲ್ಲಿ ನಮ್ಮ ಬಿಂಬವೂ ಕಾಣದೇ ಇರಲಿಕ್ಕಿಲ್ಲ.ಎಂತಹ ಅನುಭೂತಿ.
“ಛೇದ”ವನ್ನು ಸಮಗ್ರಿಸಲು ಸಾಧ್ಯವಿಲ್ಲ.ಯಾವುದೇ ಒಂದು ಪಟ್ಟು ಹಿಡಿದು ಕಾದಂಬರಿಯನ್ನು ಚೌಕಟ್ಟಿನೊಳಗೆ ಬಂಧಿಸಲು ಆಗುವುದೇ ಇಲ್ಲ.ಕಥೆ ಹೀಗೆ ಹೀಗೆ ಎಂದು ಹೇಳಿ ಸ್ವಾರಸ್ಯ ಕುತೂಹಲ,ಪ್ರಶ್ನೆಯೂ ಅಲ್ಲ. ಓದಬೇಕು ಚಿತ್ತಾಲರು ಪಾತ್ರ ಸನ್ನಿವೇಶ ಕಟ್ಟಿಕೊಡುವ ಬಗೆಯನ್ನು ಸುಮ್ಮನೆ ಓದಬೇಕು. ಓದುತ್ತಾ ಓದುತ್ತಾ ನಮ್ಮನ್ನು ನಾವು ಅರಿಯುವ ಮಾರ್ಗ ಕಂಡುಕೊಳ್ಳಬೇಕು. ಅನಿಶ್ಚಿತತೆಯೆಡೆ ನಡೆಯುತ್ತಲೇ ಅದರಿಂದ ಬಿಡಿಸಿಕೊಂಡು ನಮ್ಮ ದಾರಿ ನಾವು ಕಂಡುಕೊಳ್ಳಬೇಕು. ಚಿತ್ತಾಲರು ಸೃಷ್ಟಿಸುವ ಗುಂಗಿನಲ್ಲಿ ಮೈ ಮರೆಯದೆ ಎಚ್ಚರವಾಗಿರುವುದನ್ನು, ಬದುಕು ಸಹನೀಯ ಮಾಡಿಕೊಳ್ಳುವುದನ್ನು, ಮಾನವ ಸಹಜ ಸಂಬಂಧಗಳ ತುಲನೆಯನ್ನು ಅರಿತಷ್ಟು ಒಳಿತು.
“ಛೇದದ ಅರ್ಥ ಒಳನೋಟ”!. ಪ್ರತಿಯೊಬ್ಬರು ತಮ್ಮೊಳಗೆ ಇಣುಕಿ ಪರಿಶೀಲಿಸಲು ಇದೊಂದು ಸೂಕ್ತ ಕಾದಂಬರಿಯೆಂದರೆ ತಪ್ಪಿಲ್ಲ!.
ನಿಂತವನನ್ನು ಸಹಜವಾಗಿ ಮಾತನಾಡಿಸುವುದು ಬಿಟ್ಟು ಅವನ ಆಳ ಅಳತೆಗಳನ್ನು ಶೋಧಿಸುವುದರಲ್ಲಿಯೇ ಸಮಯವನ್ನು ಕಳೆದಿರುತ್ತೇವೆ. ನಮ್ಮಲ್ಲಿರುವ ಸಂಶಯ ,ಭಯಗಳು ಸಹಜತೆಯನ್ನು ಮರೆಮಾಡಿ ಜೀವನವನ್ನು ಯಾಂತ್ರಿಕವಾಗಿಸುತ್ತದೆ. “ಮನಸ್ಸಿನಲ್ಲಿ ಆಡಬೇಕೆಂದು ಕೊಂಡ ಮಾತುಗಳು ವಿಚಾರಗಳು ನೂರಾರು ಇದ್ದರೂ ಅವು ಗಂಟಲಲ್ಲಿ ಉಳಿದುಹೋಗುತ್ತವೆ. ಸಂದರ್ಭ ಸನ್ನಿವೇಶಗಳು ನಮ್ಮನ್ನು ಕಟ್ಟಿ ಹಾಕುತ್ತವೆ. ಕೆಲವೊಮ್ಮೆ ನಮ್ಮ ಆಂಗಿಕ ಭಾಷೆಗಳು ನಮ್ಮ ಮಾತುಗಳನ್ನು ನಮಗಿಂತ ಮುಂಚೆ ಆಡಿರುತ್ತವೆ”. “ಪ್ರಕೃತಿಯ ಅಗಾಧವಾದ ಘನವಾದ ಸೌಂದರ್ಯವನ್ನು ಅನುಭವಿಸುವ ಮನಸ್ಸು ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಗೆ ಎಷ್ಟು ಕ್ಷುದ್ರವಾಗಿ ಬಿಡುತ್ತದೆ. ಎಷ್ಟು ಸಂಕುಚಿತ ಮನೋಭಾವವನ್ನು ತಾಳುತ್ತದೆ”.
ಒಟ್ಟಾರೆ ಹೇಳುವುದಾದರೆ ಕೊನೆಯದಾಗಿ, ಬರಿಗಣ್ಣಿಗೆ ಅಗಾಧವಾಗಿ, ರಮಣೀಯವಾಗಿ ಕಾಣುವ ಸಮುದ್ರವನ್ನು ಜೇಡರ ಬಲೆಯ ಮೂಲಕ ಅಥವಾ ಒಡೆದ ಗಾಜಿನ ಮೂಲಕ ನೋಡಿದರೆ ಯಾರು ಹೊಣೆ? ವಾಸ್ತವವನ್ನು ನೋಡಬೇಕು ಅನುಭವಿಸಬೇಕು ಬದುಕಬೇಕು. ಇಲ್ಲವಾದರೆ ವಾಸ್ತವ ಅರಿವಾಗುವ ಹೊತ್ತಿಗೆ ಬದುಕು ಮುಗಿದಿರುತ್ತದೆ.
ಇಂತಹ ಮೇಧಾವಿ ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಕವಿ,ಸಹೃದಯಿ
ಶ್ರೀ ಯಶವಂತ ಚಿತ್ತಾಲರು ತಮ್ಮಅಮೂಲ್ಯ ಕೃತಿಗಳನ್ನು ನೀಡುವುದರ ಮೂಲಕ,ಸಮಾಜದ ಸ್ಥಿತಿ ಗತಿಗಳ ಹಿನ್ನೆಲೆಯನ್ನು ತುಂಬ ಸುಂದರವಾಗಿ ಮತ್ತು ಮಾರ್ಮಿಕವಾಗಿ ಬರಹದ ಮೂಲಕ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆನಿಂತ ಧೀಮಂತ ವ್ಯಕ್ತಿಯ ಕೃತಿಯನ್ನು ಪರಿಚಯಿಸುವ ಅಥವಾ ಓದಿ ಅರ್ಥೈಸುವ ಅವಕಾಶ ಒದಗಿಸಿದ್ದಕ್ಕೆ ಸಂಗಾತಿ ಪತ್ರಿಕೆಗೆ ಆಭಾರಿಯಾಗಿರುವೆ.
ನಮ್ಮ ಜಿಲ್ಲೆಯ ಪ್ರತಿಭೆ ಅಸ್ತಂಗತವಾಗಿದ್ದು ಸಾಹಿತ್ಯ ಕ್ಷೇತ್ರಕ್ಕೆ ಭರಿಸಲಾರದ ನಷ್ಟವೆಂದೆ ಹೇಳಬೇಕು.ಶ್ರೀ ಯಶವಂತ ಚಿತ್ತಾಲರು ೨೦೧೪ ಮಾರ್ಚ್ ೨೨ ರಂದು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಮನುಷ್ಯ ಬದುಕಿರುವಾಗ ಏನೆಲ್ಲಾ ಮಾಡಬಹುದೋ ಅದನ್ನು ಪ್ರಾಮಾಣಿಕವಾಗಿ ಮತ್ತು ಸಮಾಜದ ಮುಂದೆ ಕನ್ನಡಿಯಂತೆ ಬದುಕುವ ಛಲ ಯಾರಿಗಿದೆ?. ವಾಸ್ತವತೆಯನ್ನು ಹೊತ್ತು ನೈಜತೆಯನ್ನು ಅರಿತು ಬದುಕುವ ಜೀವನ ನಮ್ಮದಾಗಬೇಕು ಎಂಬ ಮನೋಭಾವವನ್ನು ಅಳವಡಿಸಿಕೊಂಡು,ಅದರಂತೆ ಬದುಕಿ..ಯುವ ಪ್ರತಿಭೆಗಳಿಗೆ ದಾರಿದೀಪವಾದಂತಹ ಯಶವಂತ ಚಿತ್ತಾಲರು ಇಂದಿಗೂ ಪ್ರಸ್ತುತ ವ್ಯಕ್ತಿಯೆಂದರೆ ತಪ್ಪಾಗಲಾರದು.ಇವರ ಕೃತಿ ಓದಲು ಪ್ರೇರಣೆ ನೀಡಿದ ಸಂಗಾತಿ ಸಾಹಿತ್ಯ ಪತ್ರಿಕೆಗೆ ಅನಂತ ಧನ್ಯವಾದಗಳು… ಓದೋಣ…ಇನ್ನಷ್ಟು ತಿಳೊಯೋಣ!.