ಹಿಂದೂಸ್ತಾನಿ ಶಾಸ್ತ್ರೀಯ ನೃತ್ಯವು ಭಾರತದ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರೇರೇಪಿಸುತ್ತದೆ. ಶಾಸ್ತ್ರೀಯ ನೃತ್ಯದ ಭಾವ ಭಂಗಿಗಳು ಸೌಂದರ್ಯ ಮತ್ತು ಕಲೆಗಳ ವಿಶೇಷವಾದ ಶೈಲಿಗಳನ್ನು ಹೊಂದಿವೆ.ಅವುಗಳಲ್ಲಿ ವರ್ಣ ಚಿತ್ರಕಲೆಯೂ ಒಂದು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ವಿವಿಧ ಭಾವ ಭಂಗಿಗಳನ್ನು ವರ್ಣ ಚಿತ್ರಗಳಲ್ಲಿ ಹಿಡಿದಿಡುವ ಕಲಾವಿದರ ಪ್ರಯತ್ನವನ್ನು ವಿಶೇಷವಾಗಿ ಕಾಣಬಹುದು.

 ಮುಘಲ್ ಮಿನಿಯೇಚರ್ ಪೇಂಟಿಂಗ್…. ಮೊಘಲ್ ಮಿನಿಯೇಚರ್ ವರ್ಣ ಚಿತ್ರಗಳು  ಕಥಕ್ ನೃತ್ಯದ ವಸ್ತ್ರ ವೈಭವ ಮತ್ತು ಸೊಬಗನ್ನು ತೋರುತ್ತವೆ. ಅತ್ಯಂತ ಸೂಕ್ಷ್ಮವಾದ ವಸ್ತ್ರ ವಿನ್ಯಾಸ ಮತ್ತು  ಆಭರಣಗಳ ಕುಸುರಿ ಕೆಲಸ ಕಣ್ಮನ ಸೆಳೆಯುವಂತೆ ಈ ಶೈಲಿಯ ವರ್ಣ ಚಿತ್ರಗಳಲ್ಲಿ ಬಿಂಬಿತವಾಗಿವೆ.

 ರಾಜಸ್ಥಾನಿ ವರ್ಣ ಚಿತ್ರಗಳು… ರಾಜಸ್ಥಾನದ ಸಾಂಪ್ರದಾಯಿಕ ಕುಸುರಿ ಕಲೆಗಳು ಅವರ ವಸ್ತ್ರ ವಿನ್ಯಾಸಗಳಲ್ಲಿ ಬಿಂಬಿತವಾಗಿದ್ದು, ರಾಜಸ್ಥಾನದ ರಾಜ ಸಭಾಂಗಣದಲ್ಲಿ ಮಹಾರಾಜ ಮತ್ತು ರಾಣಿಯರ ಮುಂದೆ  ನೃತ್ಯ ಮಾಡುತ್ತಿರುವ ದೃಶ್ಯಗಳನ್ನು ಈ ವರ್ಣ ಚಿತ್ರಗಳಲ್ಲಿ ಬಿಂಬಿಸಲಾಗಿದ್ದು ಗಾಢ ವರ್ಣದ ಬಣ್ಣಗಳು ಮತ್ತು ಶೈಲಿಗಳು ರಾಜಸ್ಥಾನಿ ಕಲೆಯ ವೈಶಿಷ್ಟತೆಯನ್ನು ಸೂಚಿಸುತ್ತವೆ.

 ಬೆಂಗಾಳದ ಕಲಾ ಶಾಲೆ.. ಪಶ್ಚಿಮ ಬಂಗಾಳದ ಕಲಾ ಶಾಲೆಯ ಕಲಾಕಾರರು ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ತಮ್ಮ ಚಿತ್ರಗಳಲ್ಲಿ ಒಡಮೂಡಿಸಿದ್ದು ಭಾರತೀಯ ಶಾಸ್ತ್ರೀಯ ನೃತ್ಯದ  ಆಧ್ಯಾತ್ಮಕ ಮತ್ತು ಭಾವನಾತ್ಮಕ ಭಂಗಿಗಳನ್ನು ತಮ್ಮ ಚಿತ್ರಗಳಲ್ಲಿ ಚಿತ್ರಿಸಿದ್ದಾರೆ.  ಚಿತ್ರದ ಮೃದುವಾದ ತೈಲ ವರ್ಣಗಳು ನೃತ್ಯಗಾರರ ಸೊಬಗನ್ನು ಎತ್ತಿ ತೋರಿಸುತ್ತವೆ.  

 ಕಂಟೆಂಪರರಿ ಆರ್ಟ್ ( ಸಮಕಾಲೀನ ಕಲೆ ) .. ಆಧುನಿಕ ಕಲಾವಿದರು ಪ್ರಾಚೀನ ಶಾಸ್ತ್ರೀಯ ನೃತ್ಯ ಮತ್ತು ನಮಕಾಲೀನ ನೃತ್ಯಗಳ ಸಮ್ಮಿಶ್ರಣವನ್ನು ತಮ್ಮ ವರ್ಣ ಚಿತ್ರಗಳಲ್ಲಿ ಬಳಸುತ್ತಿದ್ದು ನೃತ್ಯ ಕಲೆಯ ಕ್ರಿಯಾಶೀಲತೆಯನ್ನು ಎತ್ತಿ ತೋರುತ್ತಿವೆ.

ಛಾಯಾಚಿತ್ರ ಕಲೆ…. ಕಳೆದ ಶತಮಾನದಲ್ಲಿ ಹೆಚ್ಚು ಪ್ರಚಲಿತವಿರುವ ಛಾಯಾಚಿತ್ರ ಕಲೆಯು ಹಿಂದುಸ್ತಾನಿ ಶಾಸ್ತ್ರೀಯ ನೃತ್ಯದ ಸಾರವನ್ನು ಅತ್ಯಂತ ಸುಂದರವಾಗಿ ಚಿತ್ರಿಸುವ ಮೂಲಕ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಮತ್ತೊಂದು ಉತ್ತುಂಗಕ್ಕೆ ಕರೆದೊಯ್ದಿದೆ. ನೃತ್ಯಕಾರರ ಚಲನೆ, ಭಾವಾಭಿವ್ಯಕ್ತಿ, ಅಲಂಕಾರ, ವಸ್ತ್ರ ವಿನ್ಯಾಸ ಮತ್ತು ಆಭರಣಗಳ ಸೂಕ್ಷ್ಮ ವಿವರಗಳನ್ನು ಕೂಡ ಸೆರೆ ಹಿಡಿದಿದೆ. ನೆರಳು ಬೆಳಕಿನ ಹಿನ್ನೆಲೆಯಲ್ಲಿ ವಿವಿಧ ಭಾವ ಭಂಗಿಗಳಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ವೈವಿಧ್ಯಮಯ ಪ್ರಕಾರಗಳು ಜಗತ್ತಿನ ಕಣ್ಣು ಕೋರೈಸುವಂತೆ ಮಾಡುವಲ್ಲಿ  ವಿವಿಧ ಶೈಲಿಯ ವರ್ಣಚಿತ್ರ ಕಲೆಗಳು, ಛಾಯಾ ಚಿತ್ರಕಲೆಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಅತಿಶಯೋಕ್ತಿಯೇನಲ್ಲ.

 ಭಾರತೀಯ ಶಾಸ್ತ್ರೀಯ ನೃತ್ಯದ ವಿವಿಧ ಬಗೆಯ ಪ್ರದರ್ಶನಗಳು ಮತ್ತು ಆನ್ಲೈನ್ ಪ್ರದರ್ಶನಗಳು ಈ ಕಲೆಯ ಸೊಬಗು, ವಸ್ತ ವಿನ್ಯಾಸ, ಭಾವನಾತ್ಮಕ ಅಭಿವ್ಯಕ್ತಿಯನ್ನು ವಿಶೇಷವಾಗಿ ತೋರುತ್ತಿವೆ.

 ಸ್ನೇಹಿತರೆ, ಕಲೆ ಎಂಬುದು ಮಾನವನ ಬದುಕಿನ ಮತ್ತು ಭಾವಗಳ ಅಭಿವ್ಯಕ್ತಿ. ಧ್ಯಾನ ಭಜನೆಗಳ ಮೂಲಕ ಮನುಷ್ಯ ಸಾಮಾಜಿಕ ಸಂಘಟನೆಯ ಅವಿಭಾಜ್ಯ ಅಂಗವಾದರೆ ನೃತ್ಯ ಕಲೆ ಮತ್ತು ವರ್ಣ ಚಿತ್ರ ಕಲೆಗಳು ಆತನ ಆಂತರಂಗಿಕ ಭಾವನೆಯ ಅಭಿವ್ಯಕ್ತಿಗಳಾಗಿವೆ.

 ಉತ್ತರ ಭಾರತದಲ್ಲಿ ಮಾಡುವ ಎಷ್ಟೋ ನೃತ್ಯಗಳು, ದಕ್ಷಿಣ ಭಾರತದ ಜಾನಪದ ನೃತ್ಯಗಳು, ನಾಟಕಗಳು, ದೊಡ್ಡಾಟಗಳು, ಸಣ್ಣಾಟಗಳು,  ಯಕ್ಷಗಾನ, ಪ್ರಾದೇಶಿಕ ನೃತ್ಯಗಳು ಮತ್ತು ಚಿತ್ರಕಲೆಗಳಲ್ಲಿನ ಹಲವಾರು ವಿಧಗಳು  ಮಾನವ ಬದುಕಿನ ಹಲವಾರು ಬಣ್ಣಗಳನ್ನು ವ್ಯಕ್ತಪಡಿಸುತ್ತವೆ. ಪ್ರೀತಿ, ಪ್ರೇಮ, ಹುಸಿಮುನಿಸು, ಸಿಟ್ಟು, ರೌದ್ರ, ಭಯಂಕರ, ವಿಷಾದ, ವಿರಹ, ಅಸಹನೆ, ಸೆಡವು ಕೋಪ ಮುಂತಾದ ಎಲ್ಲ ಭಾವಗಳನ್ನು ಅಂತರಂಗದ ತುಡಿತ ಮಿಡಿತಗಳನ್ನು ಹೊರ ಹಾಕುತ್ತಾ  ಮನುಷ್ಯನನ್ನು ಮುಕ್ತನನ್ನಾಗಿಸುತ್ತವೆ. ಇದು ಕಲೆ ಮತ್ತು ವರ್ಣ ಚಿತ್ರಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿವೆ.


Leave a Reply

Back To Top