ಕಾವ್ಯಸಂಗಾತಿ
ಸೂರ್ಯಸಖ ಪ್ರಸಾದ್ ಕುಲಕರ್ಣಿ
ಅವರ ಕಾದಂಬರಿ’
ನಾನು ಸತ್ಯವನ್ನೇ ಹೇಳುತ್ತೇನೆ..’
(ಇದು ಅವಳ ಪ್ರಪಂಚ)ಅವಲೋಕನ,
ವರದೇಂದ್ರ ಕೆ ಮಸ್ಕಿ
ನಾನು ಸತ್ಯವನ್ನೇ ಹೇಳುತ್ತೇನೆ…
(ಇದು ಅವಳ ಪ್ರಪಂಚ) – ಕಾದಂಬರಿ
ಕೃತಿಕಾರರು : ಸೂರ್ಯಸಖ ಪ್ರಸಾದ್ ಕುಲಕರ್ಣಿ
ಪ್ರಕಾಶನ : ಸೂರ್ಯಸಖ ಫೌಂಡೇಶನ್, ಬೆಳಗಾವಿ
ಬೆಲೆ : 250/-
ಒಂದು ಕಥಾ ಹಂದರದ ಸುತ್ತ ಪಾತ್ರಗಳ ಪೋಷಣೆ ಮಾಡುತ್ತಾ ಒಂದಕ್ಕೊಂದು ಸಹಸಂಬಂಧ ಕಲ್ಪಿಸುತ್ತಾ ನೈತಿಕ, ಮಾಲ್ಯಯುತ ಸಂದೇಶದ ಗುರಿಯನ್ನು ಬೆನ್ಹತ್ತಿ ಸೂಕ್ತ ನಿರೂಪಣೆಯೊಂದಿಗೆ ರಚಿತವಾದ ಕಾದಂಬರಿ ಓದುಗರ ಮನ ಸೆಳೆಯುತ್ತದೆ. ಕೃತಿಕಾರರ ಅಭಿರುಚಿ, ಬುದ್ಧಿವಂತಿಕೆಗೆ ತಕ್ಕಂತೆ ವಿವಿಧ ಶೈಲಿಯಲ್ಲಿ ನಿರೂಪಣೆ ಸಾಗುತ್ತದೆಂಬುದು ತಮಗೆಲ್ಲ ತಿಳಿದ ವಿಚಾರವಾಗಿದೆ. ಕಂಡದ್ದನ್ನು ಅಥವಾ ಕಾಣದ್ದನ್ನು ಕಾಲ್ಪನಿಕವಾಗಿ ಪರರ ಊಹೆಗೆ ನಿಲುಕದಂತೆ ಕಥೆಯನ್ನಾಗಿಸಿದರೆ ಅದು ಬೇಗ ಓದುಗರ ಮನಕ್ಕೆ ತಲುಪುತ್ತದೆ.
“ಸೂರ್ಯನ್ ಪರ್ಪಂಚ” ಎನ್ನುವ ವಿಭಿನ್ನ ಕಾದಂಬರಿ ಮೂಲಕ ಮನೆಮಾತಾಗಿದ್ದ ಸೂರ್ಯಸಖ ಪ್ರಸಾದ್ ಕುಲಕರ್ಣಿ ಅವರು ಈಗ ಮತ್ತೊಂದು ವಿಶೇಷ ಕಥಾ ವಸ್ತುವಿನೊಂದಿಗೆ ವೈಶಿಷ್ಟ್ಯವಾದ ನಿರೂಪಣಾ ವಿಧಾನದೊಂದಿಗೆ “ನಾನು ಸತ್ಯವನ್ನೇ ಹೇಳುತ್ತೇನೆ” ಎಂಬ ಕಾದಂಬರಿಯನ್ನು ತಮ್ಮದೇ ಪ್ರಕಾಶನ ಸಂಸ್ಥೆಯಿಂದ ಲೋಕಾರ್ಪಣೆ ಮಾಡಿದ್ದಾರೆ.
ಈ ಕಾದಂಬರಿ ಕುರಿತಾಗಿ ಒಂದಷ್ಟು ಸಾಲುಗಳಲ್ಲಿ ಪರಿಚಯಾತ್ಮಕ ಓದಿನ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನಷ್ಟೇ ಹೊರತು ಕಾದಂಬರಿಯ ತಿರುಳನ್ನು ಬಿಟ್ಟುಕೊಡದಂತೆ ಪ್ರಯತ್ನಿಸುತ್ತೇನೆ.
***
ರೆಬೆಲ್, ಡೇರ್ ಡೆವಿಲ್, ಪೂಲಂ ದೇವಿ.. ಎಲ್ಲಿಯೂ ತನ್ನ ಗಟ್ಟಿತನವನ್ನು ಬಿಟ್ಟುಕೊಡದ ಛಲಗಾತಿ, ಓದುಗರ ಕಣ್ಮನ ತುಂಬುವ ಬಟ್ಟಲು ಕಂಗಳ ಸ್ಫುರದ್ರೂಪಿ ಚೆಲುವೆ, ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಹೇಳುತ್ತ, ಹೇಳುತ್ತ, ಹೇಳುತ್ತಲೇ ಬಂದ “ಅವಳು” ಮನದರಸ, ತನುವರಸನ ಸೌಖ್ಯಕ್ಕಾಗಿ, ಹೆತ್ತವರಲ್ಲದೇ ಇದ್ದರೂ ಸಂಪೂರ್ಣ ಪಾಲಕ ಪ್ರೀತಿಯನ್ನು ಧಾರೆ ಎರೆದ ಸಾಕು ತಂದೆ ತಾಯಿಯರಿಗಾಗಿ ಸುಳ್ಳಿನ ರೇಶಿಮೆ ನೂಲನ್ನು ತನ್ನ ಸುತ್ತ ಸುತ್ತಿಕೊಳ್ಳುತ್ತಾಳೆಂದರೆ ಅಂತಹ ಪೂಲಂ ದೇವಿಯ ಮೃದ್ವಂಗಿ ಚಿಪ್ಪಿನಂತಹ ಗಟ್ಟಿ ಹೃದಯದಲ್ಲೂ ಕೋಮಲ ಲತೆಯಂತಹ ಮೃದು ಮನಸು ಇತ್ತೆನ್ನುವ ಅಂಶದ “ನಾನು ಸತ್ಯವನ್ನೇ ಹೇಳುತ್ತೇನೆ” ಎಂಬ (ಇದು ಅವಳ ಪ್ರಪಂಚ) ಕಾದಂಬರಿ, ಓದುಗನ ಹೃದಯವನ್ನು ತನ್ಮಯಗೊಳಿಸುತ್ತದೆ.
ಸುಂದರ ಹುಡುಗಿಯ ಕೋಮಲ ಮನ ಕ್ರಮೇಣವಾಗಿ ಸಂಪೂರ್ಣ ವಜ್ರದಂತಾಗಲು ಕಾರಣ ಅವಳ ಬಾಲ್ಯದ ಕೌಟುಂಬಿಕ ವಾತಾವರಣ. ಕುಟುಂಬದಲ್ಲಿ ಪ್ರಾರಂಭದಿಂದಲೂ ಈಕೆಯ ತುಂಟ ನಡೆಗೆ ತೆಗಳುವಿಕೆ, ಮೂದಲಿಸುವಿಕೆ ಇತ್ತೇ ಹೊರತು, ಮಾಡಿದ ಚಿಕ್ಕ ಪುಟ್ಟ ವಯೋಸಹಜ ತಪ್ಪುಗಳಿಗೆ ಕಠಿಣ ಪೆಟ್ಟು ಇತ್ತೇ ಹೊರತು ತಿದ್ದುವಿಕೆಯ ತಿಳುವಳಿಕೆಯ ನೀತಿ ಪಾಠ ಬೋಧನೆ ಇರಲೇ ಇಲ್ಲ. ಇವಳ ಅಪ್ಪನ ಹೊರತಾಗಿ ಮನೆಯವರ ದೃಷ್ಟಿಯಲ್ಲಿ ಇವಳು ಶನಿ ಆಗಿದ್ದಳು, ಮನೆಯ ಮಾನ, ಮರ್ಯಾದೆ ತೆಗೆಯುವ ಶುದ್ಧ ಮಾನಗೇಡಿ ಆಗಿದ್ದಳು.
ಒಂದು ಹೃದಯ ಅತ್ಯಂತ ನೋವಿನಲ್ಲಿರುವಾಗ, ಎಲ್ಲರಿಂದ ತಿರಸ್ಕಾರಕ್ಕೊಳಗಾದಾಗ ತನಗಾಗಿ ಮಿಡಿಯುವ, ಪ್ರೀತಿಸುವ ಜೀವ ಸಿಕ್ಕರೆ ಸಾಕು ನೆಮ್ಮದಿಯಿಂದ ಅತ್ತ ಕಡೆ ವಾಲಿಬಿಡುತ್ತದೆ. ಇಲ್ಲಿ ಆಗಿದ್ದೂ ಅದೆ. ಅವಳನ್ನು ಎಲ್ಲರೂ ದ್ವೇಷಿಸುವ ಸಂದರ್ಭದಲ್ಲಿ ಪ್ರೇಮಿಸುವವನೊಬ್ಬ ಸಿಕ್ಕಿದ್ದ. ಎಲ್ಲರೂ ತೆಗಳುವ ಸಂದರ್ಭದಲ್ಲಿ ಆದರಿಸುವವನೊಬ್ಬ ದಕ್ಕಿದ್ದ. ಅವಳ ಮಾತೆಂದರೆ ಸಾಕು ರೇಗುವವರ ಮಧ್ಯೆ ಅವಳ ಮಾತಿಗಾಗೇ ಕಾಯುವವನೊಬ್ಬ ಹತ್ತಿರವಾಗಿದ್ದ. ಅವಳ ಮುಖವೇ ಶನಿ ಎಂದು ಕರೆಯುವವರ ಮಧ್ಯೆ ಅವಳ ಮುಖವನ್ನೇ ಹೃನ್ಮಂದಿರದಲ್ಲಿ ತುಂಬಿಕೊಳ್ಳುವವನೊಬ್ಬ ಜೊತೆಯಾಗಿದ್ದ. ಅಂತಹ ಸಹೃದಯಿ ಪ್ರೇಮಿ ಆಂಥೋನಿಯ ಹೃದಯವನ್ನು ಧರ್ಮಾತೀತವಾಗಿ, ಶರತ್ತಿಲ್ಲದೆ ಅವಳ ಹೃದಯ ಪ್ರೀತಿಸಲು ಶುರುಮಾಡುತ್ತದೆ. ಅಂತಹ ಅವಳ ಡೆವಲ್ ಹೃದಯವನ್ನೇ ಇಂಪಾಗಿಸಿದ ಹುಡುಗ ಅವನು. ಈ ಆಂಥೋನಿ ಎಂಬೋ ಹುಡುಗನನ್ನು ಪ್ರೇಮಿಸಿದ ಹುಡುಗಿ ಎಲ್ಲ ಸಮಯದಲ್ಲೂ ಅವನನ್ನು ಧ್ಯಾನಿಸುತ್ತಲೇ, ಮನದತುಂಬ ಆದರಿಸುತ್ತಲೇ ಹೋಗುತ್ತಾಳೆ. ಪ್ರೀತಿ, ಪ್ರಣಯಕ್ಕೆ ತಿರುಗಿದಾಗ ಮುತ್ತುಗಳ ವಿನಿಮಯವಾಗುತ್ತದೆ. ಇದಾದ ನಂತರವೇ ಅಗಲಿಕೆ ನೋವು ಬಾಧಿಸುತ್ತದೆ. ಸಹಜವಾಗಿಯೇ ಮನೆಯವರು; ಪ್ರೇಮವನ್ನು ವಿರೋಧ ಮಾಡಿ ಪ್ರೇಮಿಗಳನ್ನು ದೂರ ಮಾಡಿ, ಗೆದ್ದ ಖುಷಿಯನ್ನು ವಿಜೃಂಭಿಸಿದರೆ ಈ ಹೃದಯಗಳು ತಲ್ಲಣಗೊಳ್ಳುತ್ತವೆ. ಆದರೆ ಸತ್ಯವನ್ನೇ ಹೇಳುವವರ ಪ್ರೇಮವೂ ಸತ್ಯದ್ದಾದುದರಿಂದ ಕೊನೆಯಲ್ಲಿ ಅವರ ಪ್ರೇಮ ಉಳಿಯುತ್ತದೆ. ನಡುವೆ ಮತ್ತೊಬ್ಬ “ವಿಶ್ವರಾಮ” ಎನ್ನುವವ ಒಮ್ಮುಖ ಪ್ರೇಮಿಯಾಗಿ ಅವಳನ್ನು ಆರಾಧಿಸುತ್ತ ಅವಳ ಸಾಮಾಜಿಕ, ಆರ್ಥಿಕ, ವೃತ್ತಿ ಬದುಕಿಗೆ ಮೇರು ಬದಲಾವಣೆಯನ್ನು ತರುತ್ತಾನೆ. ಒಂದು ಕಡೆ ಅವಳಿಗಾಗಿ ಯಥೇಚ್ಚವಾಗಿ ಹಣವನ್ನೂ ವ್ಯಯಿಸುತ್ತ, ಮತ್ತೊಂದೆಡೆ ಅವಳನ್ನು ಪ್ರೇಮಿಸುತ್ತಾ ಸಾಗುತ್ತಾನೆ. ಆದರೆ ಅವನ ಅಂತ್ಯಕ್ಕೆ ಮೂಲ ಕಾರಣವೇ “ಅವಳು”, ಅವಳಿಗಾಗಿ ಮಾಡುತ್ತಿದ್ದ ಹಣದ ಖರ್ಚು ಎನ್ನುವುದೇ ಕಾದಂಬರಿಯ ತಿರುವು. ಅವಳ ಕಾರಣಕ್ಕಾಗಿಯೇ ನಡೆದ ಕೊಲೆ, ಕೊಲೆಯಲ್ಲಿ ಅವಳೂ ಭಾಗೀದಾರಳು ಎನ್ನುವ ಭಾಗ ಓದುಗನನ್ನು ಬಾಧಿಸುತ್ತದೆ. ಆದರೆ ಸತ್ಯ ಬೇರೆಯೇ ಇರುತ್ತದೆ. ಮೊದಲೇ ಹೇಳಿದಂತೆ “ನಾನು ಸತ್ಯವನ್ನೇ ಹೇಳುತ್ತೇನೆ” ಎನ್ನುತ್ತಲೇ ಸುಳ್ಳಿನ ಕಥೆ ಕಟ್ಟುತ್ತಾಳೆ ಅವಳು. ಅವಳ ಸುಳ್ಳಿನ ಪ್ರಪಂಚದಲ್ಲಿ ಆಂಥೋನಿಯೂ ಇರುತ್ತಾನೆ. ಇನ್ನೇನು ಇವರೇ ಕೊಲೆಗಾರರು ಎಂದು ತೀರ್ಮಾನಿಸುವ ಸಮಯದಲ್ಲಿ ಕಾದಂಬರಿ ಮತ್ತೆ ತಿರುವು ಪಡೆದುಕೊಳ್ಳುತ್ತದೆ. ಸತ್ಯದ ಅನ್ವೇಷಣೆ ಆಗುತ್ತದೆ. ಈ ಎಲ್ಲಾ ಅಂಶಗಳನ್ನು ರೋಮಾಂಚನವಾಗುವಂತೆ ಲೇಖಕರು ಬರೆದಿದ್ದಾರೆ. ಕಾದಂಬರಿಯ ಕೊನೆಯವರೆಗೂ ಗೌಪ್ಯತೆ, ಕುತೂಹಲ ಕಾಯ್ದುಕೊಂಡು ಹೋಗಿದ್ದಾರೆ.
ಓದುಗನಿಗೆ ಓದಿನ ಮಧ್ಯೆ ಎಷ್ಟು ಆತುರ ಆಗುತ್ತದೆ ಎಂದರೆ ನೇರ ಕೊನೆಯ ಪುಟಗಳನ್ನು ಓದಿ ಸತ್ಯ ತಿಳಿದುಬಿಡಲೇ ಎನ್ನುವಷ್ಟು ಆತುರ, ಕಾತುರ ಉಂಟಾಗುತ್ತದೆ.
ಹಾಗಾದರೆ ಕೊಲೆ ಮಾಡಿದವರು ಯಾರು? ಕೊಲೆ ಮಾಡಲು ಕಾರಣವೇನು? ಕೊಲೆಯಲ್ಲಿ ಈ ಪ್ರೇಮಿಗಳು ಏಕೆ, ಹೇಗೆ ಸಿಕ್ಕಿಬಿದ್ದರು? ಅವರೇ ಕೊಲೆಯನ್ನು ತಾವೇ ಮಾಡಿರುವುದಾಗಿ ಏಕೆ ಒಪ್ಪಿಕೊಂಡರು? ನಿಜವಾದ ಕೊಲೆಗಾರನನ್ನು ಕಂಡು ಹಿಡಿದವರು ಯಾರು? ಹೇಗೆ ಕಂಡು ಹಿಡಿದರು? ಸಾಕ್ಷಿಗಳನ್ನು ಕಲೆ ಹಾಕಿದ್ದು ಹೇಗೆ? ಎಂಬ ಕುತೂಹಲದ ಪ್ರಶ್ನೆಗಳಿಗೆ ಉತ್ತರಗಳನ್ನು, ಮತ್ತು “ಇದು ಅವಳ ಪ್ರಪಂಚ’, ಈ ಪ್ರಪಂಚದಲ್ಲಿ ಬಂದವರು ಯಾರ್ಯಾರು?, ಅವರ ಪಾತ್ರವೇನು?, ಯಾರು ಪ್ರಮುಖರಾದರು?, ಇವಳ ಸಾಧನೆಗೆ ಯಾರು ಸಹಾಯಕರಾದರು? ಎಂಬದರ ಸ್ವಾದ ಸವಿಯಲು ಕಾದಂಬರಿಯನ್ನು ಓದಲೇಬೇಕು.
**
** ಬಾಲ್ಯವನ್ನು ತಂದೆ, ತಾಯಿ ಅಜ್ಜ, ಅಜ್ಜಿಯೊಂದಿಗೆ ಕಳೆಯಬೇಕಾಗಿದ್ದ ಬಾಲೆ, ಹಾಸ್ಟೆಲ್ ಸೇರಬೇಕಾದುದು ಅವಳ ಪಾಲಿನ ಮೊದಲ ದುರಂತ. ಅವಳ ಅನುಪಸ್ಥಿತಿ ಕಾಡಿದಾಗ ಅವಳು ಬೇಕು ಎನಿಸಿದ ಅವರ ಕುಟುಂಬಕ್ಕೆ ಅವಳು ಬಂದು ಅನ್ಯ ಧರ್ಮದ ಆಂಥೋನಿಯೊಂದಿಗೆ ಪ್ರೇಮದಲ್ಲಿ ಬಿದ್ದಾಗ ಮತ್ತೆ ಬೇಡವಾಗುತ್ತಾಳೆ. ಮತ್ತೆ ಕುಟುಂಬದಿಂದ ದೂರವಾಗುತ್ತಾಳೆ. ಬಾಲ್ಯದಲ್ಲಿ ಕುಟುಂಬ ನೀಡುವ ಸಂಸ್ಕಾರ, ಭದ್ರತೆ ಅವಶ್ಯವಾಗಿ ಅವಳಿಗೆ ಬೇಕಾಗಿರುತ್ತದೆ. ಆದರೆ ಅವಳು ಇದರಿಂದ ವಂಚಿತಳಾಗುತ್ತಾಳೆ. ಕುಟುಂಬ ಎನ್ನುವುದು ಪರಮ ಪ್ರಮುಖವಾದುದಾಗಿದ್ದು, ಈ ಕುಟುಂಬದ ಪ್ರೀತಿ, ಭದ್ರತೆ, ಔದಾರ್ಯ ಸಿಗದೇ ಇದ್ದಲ್ಲಿ ಏನಾಗಬಹುದೆಂಬುದಕ್ಕೆ ಉದಾಹರಣೆಯೇ ‘ಅವಳು’. ಈ ಕುಟುಂಬದ ವಿಷಯವನ್ನೇ ಪ್ರಥಮ ಆದ್ಯತೆಯಾಗಿ ಈ ಕಾದಂಬರಿ ತಿಳಿಸುತ್ತದೆ. ಹಿಗಾಗಿ ಇದು ಒಂದು “ಕೌಟುಂಬಿಕ ಕಾದಂಬರಿ” ಎನಿಸಿಕೊಳ್ಳುತ್ತದೆ.
** ಸಾಮಾಜಿಕವಾಗಿ ಮುನ್ನೆಲೆಗೆ ಬರುವುದು, ನಾನು ಯಾರು? ನನ್ನ ಸಾಮರ್ಥ್ಯ ಏನು? ಎಂದು ನನ್ನನ್ನು ಕಡೆಗಣಿಸಿದವರಿಗೆ, ತೆಗಳಿದವರಿಗೆ, ಅವಹೇಳನ ಮಾಡಿದವರಿಗೆ ತೋರಿಸುತ್ತೇನೆ ಎಂಬ ಛಲ ಹೊತ್ತು ಅದಕ್ಕೆ ಪೂರಕವಾಗಿ ಸಮಾಜದಲ್ಲಿ ಒಂದು ಸ್ಥಾನ ಗಳಿಸಿ ಮೆರೆದ ಕೀರ್ತಿ ಅವಳದು ಮತ್ತು ಅವಳ ಪ್ರೇಮಿ ಆಂಥೋನಿಯದು. ಹೀಗಾಗಿ ಇದು ಒಂದು “ಸಾಮಾಜಿಕ ಕಾದಂಬರಿ”ಯಾಗಿ ನನಗೆ ಗೋಚರಿಸುತ್ತದೆ.
** ಒಂದು ಪ್ರೇಮದ ಕಥೆಯನ್ನು ಎಷ್ಟೆಲ್ಲಾ ವರ್ಣನಾತ್ಮಕವಾಗಿ ತೋರಿಸಬಹುದೆಂದು ಎಲ್ಲರಿಗೂ ತಿಳಿದಿರುತ್ತದೆ. ಕೇವಲ ವರ್ಣನೆ, ಬಣ್ಣನೆ ಮಾಡುತ್ತ ಪ್ರೇಮದಲ್ಲಿ ಎದುರಾಗಬಹುದಾದ ಎಡರು ತೊಡರುಗಳನ್ನು ನಾವು ಬಹುತೇಕ ಕಡೆಗಣಿಸಿಬಿಡುತ್ತೇವೆ. ಅದರಲ್ಲೂ ಅನ್ಯ ಧರ್ಮೀಯರನ್ನು ಪ್ರೇಮಿಸಿದರೆ ಬದುಕು ದುಸ್ತರ, ಸವಾಲಾಗಿ ಬಿಡುತ್ತದೆ. ಇದಷ್ಟೇ ಅಲ್ಲ ಪ್ರೇಮಿಗಳ ಮಧ್ಯೆ ಮತ್ತೊಬ್ಬರು ಪ್ರವೇಶಿಸಿದರೆ ಆಗುವ ಅಪಾಯ, ಇದರಿಂದ ಪ್ರೇಮಿಗಳು ತಮ್ಮ ಮಧ್ಯೆ ಬಂದ ಮನಸ್ತಾಪಗಳನ್ನು, ಅನುಮಾನದ ಪ್ರಸಂಗಗಳನ್ನು, ಮನಸಲ್ಲಿ ಆಗುವ ತಳಮಳಗಳನ್ನು ಮತ್ತು ಇವೆಲ್ಲವುಗಳನ್ನು ಅನುಭವಿಸಿ ಎಲ್ಲವನ್ನೂ ದಾಟಿ, ಎಲ್ಲ ಮನೋವೇದನೆಗಳನ್ನು ಮೀರಿ ಹೇಗೆ ಒಂದಾಗುತ್ತಾರೆ ಎಂಬುದರ ಚಿತ್ರಣವೇ “ನಾನು ಸತ್ಯವನ್ನೇ ಹೇಳುತ್ತೇನೆ”. ಹೀಗಾಗಿ ಇದು ಒಂದು “ಪ್ರೇಮ ಕಾದಂಬರಿ”ಯೂ ಹೌದು.
** ಈ ಮಧ್ಯೆ ಒಂದು ಕೊಲೆಯಾಗುತ್ತದೆ. ಆ ಕೊಲೆಯ ಬೆನ್ಹತ್ತಿ ಹೋದ ಪೋಲೀಸರ ಅಲೆದಾಟ, ಕಲೆಹಾಕಿದ ಮಾಹಿತಿ, ಮಾಡಿದ ತನಿಖೆ, ತಪ್ಪಿದ ಊಹೆಗಳು, ಖದೀಮರು ಪೂರ್ವ ನಿಯೋಜಿತವಾಗಿ ಉಪಾಯ ಮಾಡಿ ಮಾಡಿದ ಕೊಲೆ, ಕೊಲೆ ಆಪಾದನೆಯನ್ನು ಬೇರೊಬ್ಬರ ಮೇಲೆ ಬರುವಂತೆ ಮಾಡುವುದು, ಪೋಲೀಸರು ದಿಕ್ಕು ತಪ್ಪುವುದು, ಪ್ರಾರಂಭದಲ್ಲಿ ಎಡವಿದರೂ ಮತ್ತೆ ನಿಜವಾದ ಕೊಲೆಗಾರರನ್ನು ಪತ್ತೆ ಹಚ್ಚುವುದು
ಇವೆಲ್ಲವನ್ನೊಳಗೊಂಡ ಈ ‘ನಾನು ಸತ್ಯವನ್ನೇ ಹೇಳುತ್ತೇನೆ’ ಒಂದು “ಪತ್ತೇದಾರಿ ಕಾದಂಬರಿ”ಯಂತೆ ಓದುಗರಿಗೆ ಭಾಸವಾಗುತ್ತದೆ.
ಹೀಗೆ ನಾನಾ ಮುಖಗಳೊಂದಿಗೆ ನಮ್ಮೊಂದಿಗೆ ಸತ್ಯದ ದರ್ಶನವನ್ನು ಮಾಡಿಸುತ್ತ ಸಾಗುವ “ನಾನು ಸತ್ಯವನ್ನೇ ಹೇಳುತ್ತೇನೆ” ಕಾದಂಬರಿ ಓದುಗನನ್ನು ಸಂಪೂರ್ಣವಾಗಿ ಒಮ್ಮೆ ಧ್ಯಾನಸ್ಥ ಸ್ಥಿತಿಗೆ, ಮತ್ತೊಮ್ಮೆ ಪ್ರೇಮದಾಲಾಪಕ್ಕೆ, ಮಗದೊಮ್ಮೆ ತುಲನಾತ್ಮಕ ಚಿಂತನೆಗೆ ಹಚ್ಚುತ್ತದೆ.
“ಅವಳು” ಎಂಬ ಸರ್ವನಾಮದಿಂದ ಪ್ರಾರಂಭವಾಗುವ ಕಾದಂಬರಿಯ ಕೊನೆಯ ಪುಟದವರಿಗೂ ಅವಳ ಹೆಸರಿನ ನಾಮಪದ ಎಲ್ಲೂ ನಮಗೆ ಗೋಚರಿಸುವುದಿಲ್ಲ. ಎಲ್ಲ ಪಾತ್ರಗಳೂ ಅವಳು ಎಂದೇ ಅವಳ ಕುರಿತಾಗಿ ಮಾತನಾಡುತ್ತಾರೆಯೇ ಹೊರತು ಹೆಸರುಚ್ಚರಿಸುವುದಿಲ್ಲ. ಇಲ್ಲಿ, ಅಲ್ಲಿ ಅವಳ ಹೆಸರು ಬಂದಿದ್ದರೆ ಸೂಕ್ತ ಇತ್ತು ಎಂದೂ ಓದುಗನಿಗೆ ಎಲ್ಲಿಯೂ ಅನಿಸುವುದಿಲ್ಲ. ಓದುಗನ ಮನಕೆ ಹೀಗೆ ಅನಿಸದಂತೆ ಕಾಪಾಡಿಕೊಂಡದ್ದು ಕೃತಿಕಾರರ ಪ್ರತಿಭೆಯಾಗಿದೆ. ನಾನು ಕೂಡ ಅವಳ ನಾಮಧೇಯವನ್ನು ಇಲ್ಲಿ ಬಹಿರಂಗ ಪಡಿಸುವುದಿಲ್ಲ. ಕಾದಂಬರಿಯ ಓದಿನಿಂದಲೇ ಅವಳ ಹೆಸರನ್ನು ತಿಳಿದರೆ ಸಾರ್ಥಕ ಮತ್ತು ತೃಪ್ತಿ ಅನಿಸುತ್ತದೆ.
ಕೃತಿಕಾರರ ಚಾಣಾಕ್ಷತನದಿಂದ ರೂಪು ಪಡೆದ ಈ ಕಾದಂಬರಿ ಮೆಚ್ಚುಗೆಯಾಗುವುದರೊಂದಿಗೆ ಎಲ್ಲ ಆಯಾಮಗಳಿಂದಲೂ ಪ್ರೌಢತೆಯಿಂದ ಕೂಡಿದೆ.
ಪ್ರತೀ ಕಾದಂಬರಿಯನ್ನು ಕಾದಂಬರಿಯ ಕರ್ತೃಗಳು ನಿರೂಪಿಸುತ್ತಾ ಹೋಗುತ್ತಾರೆ. ಮಧ್ಯೆ ಸಂದರ್ಭೋಚಿತವಾಗಿ ಸಂಭಾಷಣೆಗಳು ಸೇರ್ಪಡೆ ಆಗುತ್ತವೆ. ಆದರೆ ಇಲ್ಲಿ ಬರುವ ಪಾತ್ರಗಳು ತಮ್ಮನ್ನು ಪರಿಚಯಿಸಿಕೊಳ್ಳುತ್ತ “ಅವಳ ಪ್ರಪಂಚ”ದಲ್ಲಿ ತಮ್ಮ ಪಾತ್ರವೇನು ಎಂದು ಹೇಳುತ್ತಾ ಸಾಗುತ್ತಾರೆ. ಇದು ಈ ಕಾದಂಬರಿಯ ಪ್ರಮುಖ ವಿಶೇಷತೆ. ಇಲ್ಲಿ ಅನೇಕ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳು ಬರುತ್ತವೆ. ಎಲ್ಲ ಪಾತ್ರಗಳೂ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿದ್ದು ಕಾದಂಬರಿಯ ಗೆಲುವಿಗೆ ಕಾರಣವಾಗುತ್ತವೆ.
ಓದುತ್ತಾ, ಓದುತ್ತಾ ಹೋದಂತೆ, ಓದುವುದನ್ನು ನಿಲ್ಲಿಸುವ ಮನ ಒಂದು ಚಲನಚಿತ್ರದ ವಿಕ್ಷಣೆಗೆ ಒಳಪಡುತ್ತದೆ. ನಿಜವಾಗಿಯೂ ಇದು ಬೆಳ್ಳಿ ತೆರೆಯ ಮೇಲೆ ಮೂಡಿ ಬಂದರೆ ಲೇಖಕರ ಶ್ರಮ ಸಾರ್ಥಕವಾಗುತ್ತದೆ.
ನಾನು ಸತ್ಯವನ್ನೇ ಹೇಳುತ್ತೇನೆ ಎಂಬ ಅವಳ ಪ್ರಪಂಚದಲ್ಲಿ ಪ್ರತೀ ಓದುಗರನ್ನು ಸುತ್ತಾಡಿಸಿ, ತಲೆ ತುಂಬ ಕೂತೂಹಲದ ನೂಲನ್ನು ಸುತ್ತಿ, ಪ್ರೇಮದ ಬಣ್ಣ ಹಚ್ಚತ್ತಾರೆ. ಅನೇಕ ಮುಖವಾಡಗಳನ್ನು ಕಳಚಿ ಸುಂದರವಾದ ಬದುಕಿಗೆ ಪಾರದರ್ಶಕತೆ ಮುಖ್ಯ ಎಂದು ಸಾಬೀತುಗೊಳಿಸುವಲ್ಲಿ ಸೂರ್ಯಸಖ ಅವರು ಯಶಸ್ವಿಯಾಗಿದ್ದಾರೆ.
ಕಾದಂಬರಿಯ ಅಲ್ಪ ಸ್ವಲ್ಪ ಭಾಗವನ್ನು, ಕೆಲ ಪಾತ್ರ, ಸನ್ನಿವೇಶಗಳನ್ನು ಮಾತ್ರ ನಾನು ಪರಿಚಯಿಸಿದ್ದು, ಇನ್ನೂ ಅನೇಕ ಪಾತ್ರಗಳನ್ನು, ಸನ್ನಿವೇಶಗಳನ್ನು ತಿಳಿಯಲು, ಈಗಾಗಲೇ ಎರಡನೇ ಮುದ್ರಣಕ್ಕೆ ಸಿದ್ಧವಾಗಿ ನಿಂತ ಈ ಕೃತಿಯನ್ನು ಎಲ್ಲ ಓದುಗರೂ ಕೊಂಡು ಓದಿ ಆನಂದಿಸಬೇಕೆಂದು ಪ್ರಾರ್ಥಿಸುತ್ತೇನೆ.
ವರದೇಂದ್ರ ಕೆ ಮಸ್ಕಿ
Excellent
ಬಹು ಚಂದದ ಕೃತಿ ಪರಿಚಯ ಇದು..ಅರ್ಥಪೂರ್ಣ ವಿಶ್ಲೇಷಣೆ.ಈ ಕೃತಿಯನ್ನು ನೀವು ಗ್ರಹಿಸಿದ ರೀತಿಯೂ ಚಂದ.ನಿರೂಪಣೆಯೂ ಚಂದವಿದೆ.ಒಬ್ಬ ಬರಹಗಾರನಿಗಿದಕ್ಕಿಂತ ಮತ್ತೇನು ಬೇಕು.ಈ ರೀತಿಯ ಪ್ರೋತ್ಸಾಹ ನಮ್ಮನ್ನು ಬರೆಯಲು ಪ್ರೇರೇಪಿಸುತ್ತದೆ.
ನಿಮ್ಮ ಓದು ಮತ್ತು ಅದನ್ನು ಹಂಚಿಕೊಂಡ ನಿಮ್ಮ ಸರಳತೆ ಇಷ್ಟವಾಯಿತು.
ಇನ್ನು ಕಾದಂಬರಿಯ ವಿವರಿಸುತ್ತ ನೀವು ಮುಖ್ಯ ಪಾತ್ರಗಳ ಕುರಿತು ಚಂದವಾಗಿ ಓದದವರಲ್ಲಿ ಆಸಕ್ತಿ ಮೂಡುವಂತೆ ಬರೆದಿರುವಿರಿ..
ಜೊತೆಗೆ ಈ ಒಂದು ಕಾದಂಬರಿ ನಿಮಗೆ ಕೌಟುಂಬಿಕ, ಸಾಮಾಜಿಕ , ಪ್ರೇಮ , ಪತ್ತೆದಾರಿ ಕಾದಂಬರಿ ಅನಿಸುವಂತಿದೆ ಅಂದಿರಿ
ಇಡೀ ಕಾದಂಬರಿಯನ್ನು ನೀವು ಓದಿದ, ಸ್ವೀಕರಿಸಿದ ರೀತಿಯೇ ವಿಶಿಷ್ಠವೆನಿಸಿತು..
ಒಟ್ಟಿನಲ್ಲಿ ಈ ಕೃತಿ ನಿಮಗೆ ಮೆಚ್ಚುಗೆಯಾಗಿ ಆ ಮೆಚ್ಚುಗೆಯನ್ನು ಚಂದದಿ ಹಂಚಿಕೊಂಡಿದ್ದಕ್ಕೆ ಆಭಾರಿ ನಾನು.
ಧನ್ಯೋಸ್ಮಿ..
ನಿಮ್ಮ ಓದಿಗೆ ಅದರ ಪ್ರೀತಿಗೆ ಶರಣು.
ಧನ್ಯವಾದಗಳು.
ಧನ್ಯವಾದಗಳು ಸರ್
ನಿಮ್ಮ ವಿಮರ್ಶೆ ಓದುವುದೇ ಒಂದು ಧಾನ್ಯಸ್ತ ಸ್ಥಿತಿ. ನಾ ಕಂಡ ಅದ್ಭುತ ವಿಮರ್ಶಕರು ನೀವು. ಕಾದಂಬರಿಯ ಹೂರಣವನ್ನು ಎಲ್ಲಿಯೂ ಬಿಟ್ಟು ಕೊಡದೆ ಹೇಳಿಯೂ ಹೇಳದಂತೆ ಸತ್ಯವನ್ನೇ ಉಳಿಸಿ ಬಿಟ್ಟಿರಿ
ಅದ್ಭುತ ಅವಲೋಕನ ಹಾಗು ಅದ್ಭುತ ಕೃತಿ ಇಬ್ಬರಿಗೂ ಅಭಿನಂದನೆಗಳು
ಧನ್ಯವಾದಗಳು ಸರ್
ವರದೇಂದ್ರ ಸರ್ ಅವರು ಹಲವಾರು ಕೃತಿಗಳಿಗೆ ತಮ್ಮ ಅಭಿಮತವನ್ನು ಬರೆದಿದ್ದಾರೆ. ಸೂರ್ಯನ್ ಪರ್ಪಂಚಕ್ಕೆ ಅವರು ಬರೆದ ಅವಲೋಕನ ಅಮೋಘವೆನಿಸಿತ್ತು ನನಗೆ.
ಅವರು ನಿಸ್ಪ್ರಹ ಮನದಿಂದ ಬರಹಗಾರರರನ್ನು ಪ್ರೋತ್ಸಾಹಿಸುವವರು..
ಉತ್ತಮ ಬರಹಗಳನ್ನು ನೀಡಬೇಕೆಂಬ, ಉತ್ತಮ ಪುಸ್ತಕಗಳ ಪರಿಚಯ ಓದುಗರಿಗೆ ತಲುಪಿಸಬೇಕೆಂಬ ಸದಾಶಯ ಹೊತ್ತವರವರು..
ಸೂರ್ಯಸಖರ ಸತ್ಯವನ್ನೇ ಹೇಳುತ್ತೇನೆ ಕಾದಂಬರಿ ಗೆದ್ದಿದೆ ಅನ್ನುವುದಕ್ಕೆ ಬರುತ್ತಿರುವ ರಿವ್ಯೂಗಳು ಅದರಲ್ಲೂ ಈ ರಿವ್ಯೂ ಸಾಬೀತು ಮಾಡಿತು.
ಕಥೆಯ ಗುಟ್ಟು ಬಿಟ್ಟು ಕೊಡದೇ ಪಟ್ಟಾಗಿ ಕೂತು ಓದಲೇ ಬೇಕೆಂಬ ಭಾವ ಮೂಡುವಂತೆ ಅವಲೋಕಿಸಿದ ವರದೇಂದ್ರ ಸರ್ ಗೆ ಮತ್ತು ಸೂರ್ಯಸಖರಿಗೆ ಅಭಿನಂದನೆಗಳು.
ಧನ್ಯವಾದಗಳು ರಿ