ಶಿವಲೀಲಾ ಶಂಕರ್

 ಬೆಂದಕಾಳೂರು ಯಾರಿಗೆಲ್ಲ ಗೊತ್ತಿಲ್ಲ,ಬೆಂದು ಮಿಂದು ಹಗುರಾದ ಕನಸಿಗೆಲ್ಲ ಇದೊಂದು ಮಾಯಾನಗರ!. ನೂರು ಕನಸು ಹೊತ್ತು ಬರುವ ಅನೇಕರಿಗೆ ಕನಸಿನ ಲೋಕ ತೆರೆದಂತೆ.ಮನುಷ್ಯನ ಜೀವಂತಿಕೆಯ ಕುರುಹು ಯಾವುದೆಂದು ಉಹಿಸಿ!.ನಾವು ಯಾವುದಾದರೊಂದು ಊರಿಗೆ ಹೋಗುವುದು ಯಾಕಾಗಿ? ನಮ್ಮ ಅವಶ್ಯಕತೆ ಪೂರೈಸುವ ಸ್ಥಳ ಅಥವಾ ಸಂಬಂಧಿಗಳು ಇರಬಹುದು.ಮೊದಲಿನ ಊರಿಗೂ ಇಂದಿನ ಊರಿಗೂ ಏನೆಲ್ಲ ವ್ಯತ್ಯಾಸ ಆಗಿದೆಯೆಂಬುದನ್ನು ಒಮ್ಮೆ ಮೆಲುಕು ಹಾಕಿದಾಗ ಎಲ್ಲವೂ ಗೋಚರಿಸುತ್ತದೆ. ನಮ್ಮೂರ ಸಿನೆಮಾ ಥಿಯೇಟರ್ “ರಾಜಕಮಲ” ಬಂದಾಗಿದೆ.ಹಂಚಿನ ಮನೆಗಳು ಕಣ್ಮರೆಯಾಗುತ್ತಿವೆ. ಬಹುಮಹಡಿ ಕಟ್ಟಡಗಳು ತಲೆಯೆತ್ತಿವೆ.ರೈತರ ಹೊಲಗಳು ಭೂಮಾಫಿಯಾದಲ್ಲಿ ಸಿಲುಕುತ್ತಿವೆ.ಶಿಕ್ಷಣ ವ್ಯಾಪಾರಿಕರಣವಾಗಿ ಮಾರ್ಪಟ್ಟಿದೆ.ಯಾರು ಯಾರಿಗೂ ಕಮ್ಮಿಯಿಲ್ಲಯೆಂಬ ಮನೋಭಾವ ಸಕಾರಾತ್ಮಕವಾಗಿರದೆ,ನಕಾರಾತ್ಮಕವಾಗಿ ಬೆಳೆಯುವ ಕಳೆಯಾಗಿ ನಿಂತಿದೆ.ಹೀಗೆ ಸಾಗಿದರೆ ಮುಂದೇನು ಗತಿ? ಎಂಬ ಉತ್ತರ ಗೊತ್ತಿಲ್ಲ.
ಎಲ್ಲರ ನಿರೀಕ್ಷೆಗಳು ಏನಿರಬಹುದು?

ನೆತ್ತಿಲಿ ನೇಸರನು
ಒತ್ತುವ ಉರಿಬಿಸಿಲನು
ತಾಳುವ ನೆತ್ತಿಯ ಹುಡುಕಿಹನು
ಉತ್ತು ಬಿತ್ತಿ ಜಗವ ಬೆಳಗಿಹನು.
ನರನೆತ್ತ ಮಗ್ಗುಲಾಗಿಹನು?
ಉರಿತಾಳದೆ ನುಗ್ಗಾಗಿಹನು
ಎಸಿಯಗಂಳದಿ ಹುದುಗಿಹನು
ಭಸ್ಮಾಸುರನ ಮರಿಮೊಮ್ಮಗನಿವನು
.

ಎಷ್ಟು… ನಿಜ,ಯಾವ ಭಾವಗಳು ಇಂದು ನೆಲೆನಿಲ್ಲಲು‌ ತಾಕಲಾಟ ಆರಂಭಿಸಿವೆ.ಅದಕ್ಕೆ…ಗಗನ ಚುಂಬಿ ಕಾಂಕ್ರೀಟ್ ಕಾಡುಗಳಲ್ಲಿ ಅಲೆದಾಡುವುದೆಂದರೆ; ಹರಹುಚ್ಚರ ಸಂತೆಯಲ್ಲಿ ಅಲೆದಾಡಿದಂತೆ. ನಿಜ….ಉಸಿರಾಟಕ್ಕೆ ಮತ್ತೇನು ಬೇಕು? ಅಯ್ಯೋ…. ಇಂತಹ ಸನ್ನಿವೇಶ ಬಹುಶಃ ಮುಂದಿನ ದಿನಗಳಲ್ಲಿ ಬೆನ್ನಿಗೊಂದು ಸಸಿ ಕಟ್ಟಿಕೊಂಡು; “ಹೃದಯಕ್ಕೊಂದು ರಂಧ್ರ ಹೊಡೆದು ಸಸಿಗಳ ಬೇರನ್ನು ಇಳಿಸಿದಂತೆ”. ಮನುಷ್ಯನ ಧಾವಂತದ ನಡುವೆ ಮಹಾನಗರಗಳು ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವುದು ನಮಗೆಲ್ಲ ತಿಳಿಯದಿರುವ ವಿಷಯವೆನಲ್ಲ!.ನಾವು ಕೂಡ ಅದರ ಭಾಗಿದಾರರು ಅಂದರೆ ತಪ್ಪೆನಿಲ್ಲ.ಹೌದು…ಇದೆಲ್ಲ ಗೊತ್ತಿದೆ,ಮತ್ಯಾಕೆ ಇದರ ಸುದ್ದಿಯೆಂದರೆ,ಜಗತ್ತು ಬೆಳೆಯುತ್ತಿದೆ, ಮನುಷ್ಯನ ಕ್ಷಿಪ್ರವಾಗಿ ಮೆದುಳು ವಿಕಾಸಗೊಂಡಿದೆ,ಅದರ ಜೊತೆಗೆ ವಿಕಾಸದ ಹೆಸರಲ್ಲಿ ವಿನಾಶದ ಹಾದಿ ಹಿಡಿದಿದೆಯೆಂದರೆ ತಪ್ಪಿಲ್ಲ.

ನಿಸರ್ಗದ ಮಡಿಲಿನಲ್ಲಿ ಬೆಳೆದವಳು ನಾನು,ಉತ್ತರ ಕೂಡ ಜಿಲ್ಲೆ ಪ್ರಕೃತಿಯ ತವರೂರು!..ಇಲ್ಲಿ ಅಂದರೆ,ಮಲೆನಾಡಿನಲ್ಲಿ ನೆಲೆನಿಂತವರಿಗೆ  ಬಯಲುಸೀಮೆ ಅಥವಾ ಕಾಂಕ್ರೀಟ್ ಕಾಡಲ್ಲಿ ನಿರ್ಭಯವಾಗಿ ಜೀವಿಸಲು ಕಷ್ಟ ಸಾಧ್ಯ. ಹಾಗೆ ಒಮ್ಮೆ ಯೋಚಿಸುವಾಗ,ದೊಡ್ಡ ದೊಡ್ಡ
ಮಹಾನಗರಗಳು ಸಿಮೆಂಟ್ ನ  ಒತ್ತಾಸೆಯಮೇಲೆ ಹಸಿರುಮನೆ ನಿರ್ಮಿಸಲು ಒದ್ದಾಡುತ್ತಿವೆ.ನಮಗೆ ಎದ್ದು ಕಾಣುವ ನಗರ “electronic city” ಬೆಂಗಳೂರು ” ಯಾರಿಗೆ ತಾನೆ ಇಷ್ಟವಿಲ್ಲ.ಹಳ್ಳಿಯಲ್ಲಿ ಬದುಕುವ ಸಾವಿರಾರು ಕುಟುಂಬಗಳು, ಯುವಕರು ಬೆಂಗಳೂರಿನತ್ತ ಪ್ರತಿದಿನ ಉದ್ಯೋಗ ಅರಸಿ ಬರುತ್ತಿರುವುದಂತು ಸತ್ಯ.ಜನಸಾಮಾನ್ಯರಿಗೆ ಬೆಂಗಳೂರು ಉಸಿರುಗಟ್ಟಿಸುತ್ತೆ!. ಕಾರಣ,ಒಂದು ಸ್ವಂತ ಮನೆ ಇರಬೇಕು.ಇಲ್ಲಾ,ಉದ್ಯೋಗ ಇರಬೇಕು,ಶಿಕ್ಷಣ ಪಡೆಯಲು ಬಂದಿರಬೇಕು ಇವು ಇಲ್ಲದೆ ಟೈಮ್ ಪಾಸ್ ಗೆ ಜಾಗವಿಲ್ಲ‌‌‌.
ನಿಜ ಅಲ್ವಾ… ಆದ್ರೆ,ಬದುಕುವ ಕಲಿಸುವ ಪಾಠಗಳು ಪ್ರತಿಕ್ಷಣ ಹೊಸದು.

ಎಷ್ಟೋ ಹುಡುಗರು/ ಹುಡುಗಿರು ಇಂತಹ ಪ್ರಪಂಚಕ್ಕೆ ಆಕರ್ಷಣೆ ಹೊಂದಿ,ನೈಜ ಬದುಕಿಂದ ಆಡಂಬರದ ಜೀವನಕ್ಕೆ ಒಗ್ಗಿಕೊಳ್ಳಬಯಸಿದ್ದಾರೆ.ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳು ಮಹಾನಗರಗಳತ್ತ ವಾಲುತ್ತಿವೆ.ಮಕ್ಕಳನ್ನು ಸರಕಾರಿ ಶಾಲೆಗಿಂತ,ಖಾಸಗಿ ಶಾಲೆಗಳತ್ತ ಮುಖಮಾಡಿ ನಿಂತಿವೆ.ಲಕ್ಷ ಲಕ್ಷ ಹಣ ನೀಡಿ ಸೀಟುಪಡೆಯಲು ತಯಾರಾದ ಪಾಲಕರನ್ನು ಬೆಳೆಸಿದ್ದು ಸರಕಾರಿ ಶಾಲೆಗಳು ಎಂಬುದನ್ನು ಮರೆತಿರುವುದೇ ಇದಕ್ಕೆಲ್ಲ ಕಾರಣ.ಅವರಿಗಾವ ಪರಿಹಾರ ನೀಡಬಹುದು? ಜಾಗತಿಕ ತಾಪಮಾನ ಏರಿಕೆಯ ಸಮಯದಲ್ಲಿ ನಮ್ಮ ಪಾತ್ರ ಎಷ್ಟು ಎಂದು ವಿವೇಚಿಸುವುದು ಸೂಕ್ಯವೆನೋ!.ನಿಮ್ಮ ಮಗ,ಮಗಳು ಎಲ್ಲಿದ್ದಾಳೆ? ಎಂದು ಕೇಳೋರಿಗೆ ಉತ್ತರ ಹೇಳೊದೊಂದು‌ ಹೆಮ್ಮೆ…ಬೆಂಗಳೂರು, ಮುಂಬಯಿ, ಕಲ್ಕತ್ತಾ, ದೆಹಲಿ,ಗೋವಾ ಹೀಗೆ ಹೇಳುತ್ತಾ ಹೋದರೆ ಮುಗಿಯದು. ಇದು ದೇಶದಲ್ಲಿ ಇರುವವರಿಗೆ ಮಾತ್ರ ಅಂತಲ್ಲ ಹೊರದೇಶಕ್ಕೂ ಹೋದವರು ಸೇರಿಕೊಳ್ಳುತ್ತಾರೆ.

ಎಷ್ಟು ವಿಚಿತ್ರನೋಡಿ,ಎಲ್ಲ ಭಾಷೆಗಳನ್ನು ಗೌರವಿಸಬೇಕು, ಕಲಿಯಬೇಕು.ಆದರೆ,”ಕನ್ನಡ” ಭಾಷೆಯನ್ನು ಹೃದಯದಲ್ಲಿ ಇಟ್ಟು ಪ್ರೀತಿಸಬೇಕು,ಭಾಷೆಯ ಬೆಳವಣಿಗೆಗೆ ಹೆಚ್ಚು ಕನ್ನಡ ಮಾತಾಡಬೇಕು.ಇದು ಇಂತಹ ಮಹಾನಗರಗಳಿಗೆ ಬಂದಾಗ ನಮ್ಮ ಭಾಷೆಯ ಅವಸಾನದ ಸ್ಥಿತಿಯನ್ನು ಹತ್ತಿರದಿಂದ ನೋಡಬಹುದು.  ಬೆಂಗಳೂರು ನಮ್ಮ ಹೆಮ್ಮೆ.. ನಾಡಗೌಡ,ನಾಡ ಪ್ರಭು ಕೆಂಪೇಗೌಡರ ಕನಸಿನ ಕೂಸು…ಆದರೆ ಬೆಂಗಳೂರಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ನಮಗೆಲ್ಲ ಗೊತ್ತಿದೆ.ನಮ್ಮ ಅರಿವು ಪಸರಿಸುವ ಕಾಲ ಸನ್ನಿಹಿತವಾಗಿದೆ.ಕೇವಲ ಘಂಟಾಘೋಷವಾಗಿ ಕೂಗಿದರೆ,ಬರೆದರೆ ಬರಲಾರದು..ಅದು ಹೃದಯದಿಂದ ಬರುವಂತಹ ಮನಸ್ಸುಗಳು ಹೆಚ್ಚಿದರೆ ಒಳಿತೆಂಬ ಭಾವ.

ಸಿಟಿಗಳಲ್ಲಿಯ ಜನರ ಅರ್ಧ ಬದುಕು ಟ್ರಾಫಿಕ್ ಲೈಟ್ ನಲ್ಲೆ ಕಳೆಯತ್ತೆ. ಬೆಳಿಗ್ಗೆ ಹೊಂಟವರು ಮನೆತಲಪಿದಾಗಲೇ ಖಾತ್ರಿ.ಪ್ರತಿರೋಡು ವಾಹನಗಳ ಮೆರವಣಿಗೆಯಲ್ಲಿ ಸಾಗುತ್ತಿರುತ್ತದೆ.ಪರಿಸರ ಮಾಲಿನ್ಯ ಎಗ್ಗಿಲ್ಲದೆ ಸಾಗುತ್ತದೆ. ಶುದ್ದ ಗಾಳಿ ಬೇಕೆಂದರೆ ಶನಿವಾರ,ರವಿವಾರ ಗುಳೆಯೆದ್ದು ಊರು ಬಿಟ್ಟು ಹೋಗೊ ಜನರದಂಡಿನಿಂದ ಮತ್ತೆ ಟ್ರಾಫಿಕ್ ಜಾಮ್!. ಅಲ್ಲಲ್ಲಿ ಪಾರ್ಕ್ ಗಳನ್ನು ಮಾಡಿ ಜನದಟ್ಟನಿಯಲ್ಲಿ ವಾಕಿಂಗ್ ಜಾಗಿಂಗ್ ಮತ್ತು ವಿವಿಧ ವ್ಯಾಯಾಮ ಸಲಕರಣೆಗಳು,ಮಕ್ಕಳ ಆಟಿಕೆಗಳು, ಇವೆಲ್ಲವೂ ಸೇರಿವೆ; ಆದ್ರೆ ಶುದ್ದಗಾಳಿಗೆ ಬರ!. ಸುತ್ತಲು ವಾಹನಗಳ ಓಡಾಟ,ರಸ್ತೆ ಆಸುಪಾಸು ತಳ್ಳೊಗಾಡಿಗಳಲ್ಲಿ ತರಕಾರಿ, ಹಣ್ಣು, ದಿನಸಿಗಳ ಮಾರಾಟ!. ಫಾಸ್ಟ್ ಫುಡ್ ಅಂಗಡಿಗಳಿಗಂತೂ ಕೊರತೆ ಇಲ್ಲ. ವಯೋವೃದ್ದರಿಂದ ಹಿಡಿದು ಯುವಕರು ರಸ್ರೆ ಅಕ್ಕಪಕ್ಕದಲ್ಲಿ ನೂರೆಂಟು ಚಿಕ್ಕಪುಟ್ಟ ಕೆಲಸ ಮಾಡುತ್ತಾ; ಆ ದಿನದ ಜಮಾ,ಖರ್ಚಿನ ಲೆಕ್ಕ ಮುಗಿಸಿ ಪುಟ್ಪಾತ್ಗಳಲ್ಲಿ ಕೋಳಿ ನಿದ್ದೆಗೆ ಜಾರುವುದು ಸರ್ವೇಸಾಮಾನ್ಯ!.

ನನಗೂ ಬೆಂಗಳೂರಿಗೂ ಇತ್ತಿತಲಾಗಿ ಅವಿನಾಭಾವ ಸಂಬಂಧ. ಮೊದಲೆಲ್ಲ ರಾಜಧಾನಿಗೆ ಹೋಗೋ ಸಮಯ ಅಪರೂಪ.ರಾತ್ರಿ ಊರಲ್ಲಿ ಮಲಗಿದರೆ,ಬೆಳಿಗ್ಗೆ ಬೆಂಗಳೂರು ‌ಆನಂದರಾವ್ ಸರ್ಕಲ್. ಅಷ್ಟೇ ಗೊತ್ತಿದ್ದ ಸಮಯ.ನಮ್ಮಂತಹ ಮಿಡಲ್ ಕ್ಲಾಸ್ ಜನರಿಗೆ ಬೆಂಗಳೂರನಲ್ಲಿದ್ದು ಜೀವನ ಸಾಗಿಸುವುದು ಕಷ್ಟ ಸಾಧ್ಯ.ಮಹಾನಗರ ಪಾಲಿಕೆಯು ನಿರ್ವಹಣೆ, ಪ್ರಗತಿಯಲ್ಲಿರುವ ಕಾಮಗಾರಿಗಳು, ನಮ್ಮಮೆಟ್ರೋ,ಬಿ.ಎಮ್.ಟಿ.ಸಿ ,ಹತ್ತು ಹಲವಾರು ಸೌಲಭ್ಯಗಳ ನಡುವೆ ಜನಸಂಖ್ಯೆಯ ಹೆಚ್ಚಳ,ಕುಡಿಯೋನೀರು ನೆನೆದರೆ ಅಯ್ಯೋ ದೇವರೆ, ನಮ್ಮೂರಲ್ಲಿ ಹರಿವ ಕಾಳಿ,ಶ ರಾವತಿ, ಗಂಗಾವಳಿ,ಅಘನಾಶಿನಿ ಎಲ್ಲ ನದಿಗಳ ನೀರು ಅಮೃತಕ್ಕೆ ಸಮಾನ!.
“ಕನ್ನಡ ನಾಡಿನ ಜೀವನದಿ ಕಾವೇರಿ” ಮೈದುಂಬಿಹರಿಯುವುದು ಇಳೆಗೆ ಮಳೆ ಬಂದಾಗ!. ಒಂದಿಷ್ಟು ಸಮಯ ನೀರಿಲ್ಲದೆ ರಜೆ ಸಾರುವ ಗಳಿಗೆ ಬಂದರೆ ವಿಶೇಷವೆನಲ್ಲ!.

ಅದೇಷ್ಟೋ…ಜೀವಗಳು ರಾತ್ರೋರಾತ್ರಿ ಹೇಳ ಹೆಸರಿಲ್ಲದೇ ಅನಾಥ ಶವಗಳಾಗಿ,ಪತ್ತೆಹಚ್ಚುವವರೂ ಇಲ್ಲದೇ ಹೋದ ಘಟನೆಗಳು ಈಗೀಗ, ಎಲ್ಲೆಂದರಲ್ಲಿ ಹವ್ಯಾಹತವಾಗಿ ನಡೆಯುತ್ತಿರುವುದು,ಮಾನವನ ಮನೋಭಾವಗಳು ಪ್ರಕೃತಿಯಿಂದ ವಿಕೃತಿಯತ್ತ ಸಾಗುತ್ತಿದೆ ಎಂಬುದು ಸ್ಪಷ್ಟ ಅಲ್ಲವಾ!. “ಪಾಚಿ ಕಟ್ಟಿರುವ ಬದುಕಿಗೆ ತೇಪೆ ಹಚ್ಚಿದಂತೆ”. ದೊಡ್ಡ ದೊಡ್ಡ ನಗರಗಳು ಉಳ್ಳವರ ಪಾಲಿಗೆ.ಸೈಟ್ ಹಗರಣಗಳು…ದುಡ್ಡು ಕಟ್ಟಿ ಕಳಕೊಂಡು ಸೈಟ್ ಇಲ್ಲದೆ ಕೋರ್ಟ್ ಕಚೇರಿ ಅಲೆದು ನಿರಾಶರಾಗಿ,ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿಗೇನು ಕಮ್ಮಿಯಿಲ್ಲ.
ತಮ್ಮ ಪ್ರತಿಭೆಯನ್ನು ನಂಬಿ ಬಂದು,ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗದೆ, ತಮ್ಮ ಕಲೆಯನ್ನೆ ಅಡವಿಟ್ಟು ಬೀದಿ ಬೀದಿಗಳಲ್ಲಿ ತಮ್ಮ ಅದೃಷ್ಟವನ್ನು ಹರಾಜಿಗೆ ಇಟ್ಟು ನಂತರ’ ಸ್ಟಾರ್’ ಆದ ಕಥೆಗಳೆಷ್ಟೋ.

ಒಟ್ಟಾರೆಯಾಗಿ ಹೇಳುವುದಾದರೆ ಜಗತ್ತಿನಾದ್ಯಂತ ಮಿಲಿಯನ್ ಡಾಲರ್ ಹಣವನ್ನು ದೇಣಿಗೆ,ಸಾಲವಾಗಿ ನೀಡಿದರೂ,ಮನುಷ್ಯನ ಚಂಚಲತೆಯನ್ನು ಬದಲಿಸಲು ಸಾಧ್ಯವಿಲ್ಲ.ಕಾರಣ ಅವನಿಗ ರಾತ್ರಿ ಶ್ರೀಮಂತನಾಗಬೇಕು…ಅದೆಲ್ಲ ಅಷ್ಟು ಸುಲಭವಾ? ಅಂದಾಗ ದರೋಡೆ ಸುಲಿಗೆ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ದುರಂತವೆ ಸರಿ.ಪ್ರೀತಿ,ಪ್ರೇಮವೆಂಬ ಮೋಸಕ್ಕೆ ಅಮಾಯಕರು ಬಲಿಯಾಗುತ್ತಿರುವುದು ನಿತ್ಯನೂತನ…ಪಾಪ…ಪಾಲಕರು ಎಷ್ಟಂತ ಎಚ್ಚರವಾಗಿರಬೇಕು.ಅವರ ನೆಮ್ಮದಿ,ವೃದ್ಧಾಪ್ಯದ ಕೊನೆ‌ ವೃದ್ದಾಶ್ರಮಗಳು ಹೆಚ್ಚುತ್ತಿರುವುದು..ನಮ್ಮ ಅತಿ ಬುದ್ಧಿವಂತಿಕೆಯ ಪರಿಣಾಮವು ಇರಬಹುದೇನೋ? ನಾವು ಮಾಡಿದ ಕರ್ಮ ನಾವೇ ಅನುಭವಿಸಬೇಕು..ಒಳಿತೆಗೆಲ್ಲಿ ಕಾಲವಿದೆ?.
———————————————

8 thoughts on “

        1. Madam.
          ನೀವು ಎಲ್ಲವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ಸೂಪರ್ ಮೇಡಂ

  1. ತುಂಬಾ ಧನ್ಯವಾದಗಳು ಮೇಡಂ ನಿಮ್ಮಂತಹ ಉತ್ತಮ ಸಾಹಿತಿಗಳು ಹೊರಹೊಮ್ಮಲಿ

  2. ವಾಸ್ತವ ಚಿತ್ರಣ ಅತೀ ಸುಂದರ ವಾಗಿ ಬಿಂಬಿಸುವ ಅಧ್ಭುತ ಲೇಖನ ಮೇಡಂ ರೀ…..ತುಂಬು ಹೃದಯದ ಅಭಿನಂದನ…..

  3. ತಮ್ಮ ಈ ಲೇಖನವು ಸೊಗಸಾಗಿ ಓದಿಸಿಕೊಂಡು ಹೋಗುವಂತಹ ಅತ್ಯದ್ಭುತವಾಗಿದೆ ಅನಂತ ಕೋಟಿ ಅಭಿನಂದನೆಗಳು ಅಕ್ಕಾ.

  4. ಬೆಂಗಳೂರಿನ ಸಮಗ್ರ ವಿವರಗಳು ಎಲ್ಲಾ ಮಗ್ಗಲುಗಳಲ್ಲಿ ಸುಂದರವಾಗಿ ಅಭಿವ್ಯಕ್ತವಾಗಿದೆ ಸಹೋದರಿ.
    ಬಾಲಚಂದ್ರ. ಹೆಗಡೆ.

Leave a Reply

Back To Top