‘ಸಾಗಿದ ಹೆಜ್ಜೆ’ಸಣ್ಣಕಥೆ-ನಾಗರಾಜ ಬಿ.ನಾಯ್ಕ

 ಅವನದೇ ಕೋಣೆ. ಕೋಣೆಯೊಳಗೆ ನಿಶ್ಯಬ್ದ. ಗೋಡೆಗಳಿಗೆ ಬಣ್ಣ. ಬಣ್ಣವೆಂದರೆ ಹಿತ. ಮತ್ತೆ ಮತ್ತೆ ಮಾತಾಗುವ ಮೌನ. ಮಾತು ಗಾಳಿಯೊಡನೆ ಅವ್ಯಕ್ತ. ನೀರೊಡನೆ ಅಗೋಚರ. ಚಿತ್ತು ಚಿತ್ತಾದ ಅವನದೇ ಕಥೆಗಳು.  ಬಿಡಿಸಿದಷ್ಟು ಬದಲಿಸುವ ಎಳೆಗಳು. ನಂಬುವ ಮಾತುಗಳು ಗೋಡೆಗೆ ಅವನೇ ಬರೆದದ್ದು. ಖಾಲಿಯಾದ ಅನ್ನದ ಪಾತ್ರೆ. ಹಸಿವೆ ನಿಟ್ಟುಸಿರು ಅವನಿಗೆ ಮಾತ್ರ ಕೇಳಿಸುವಂತೆ ಕೇಳುತ್ತಿತ್ತು. ಲೋಕವೊಂದು ಪ್ರತ್ಯೇಕವಾದಂತೆ ಕಾಣಿಸುತ್ತಿತ್ತು. ಸುತ್ತು ಸುತ್ತಾಗಿ ಅವನಿಗೆ ಸುತ್ತುಕೊಳ್ಳುವ ನೆರಳಿನ ವಿಮುಖತೆ ಎಲ್ಲವೂ ಅಂದುಕೊಂಡಂತೆ ಕಾಣಿಸುತ್ತಿತ್ತು. ಹುಡುಕಾಡಿದ ತಾನೇ ಬರೆದ ತನ್ನದೇ ಸಾಲುಗಳ ಸೂಕ್ಷ್ಮತೆಯ. ಸಿಗಲಿಲ್ಲ ಅವನಿಗೆ. ಅವನೆಂದೂ ಅವನಿಗಾಗಿ ಹಂಬಲಿಸಲಿಲ್ಲ. ಅವನ ಆತ್ಮದ ಕನ್ನಡಿ ಅವನಲ್ಲಿ ಇದ್ದಂತೆ ಕಾಣಿಸುತ್ತಿತ್ತು.
           ಕಿಟಕಿ  ಬಾಗಿಲು ತೆರೆದು ಕುಳಿತ. ಕತ್ತಲು ಕಾಣಿಸಿತು. ಕಾಡಂಚಲ್ಲಿ ಹರಿವ ನದಿಯ ಸದ್ದು ಕೇಳಿಸಿತು. ಗೊತ್ತಿಲ್ಲದ ಜೀರುಂಡೆಗಳ ಹಾಡು ಕೇಳಿಸಿತು. ಮೌನವಾಗಿ ಕುಳಿತು ಕತ್ತಲೆಯೊಮ್ಮೆ ನೋಡಿದ. ಹೆದರಿಕೆ ಎನಿಸಿತು. ಕಣ್ಮುಚ್ಚಿ ಮಲಗಿದ. ಸ್ವಲ್ಪ ಸಮಯ ಅಷ್ಟೇ. ನಿಧಾನಕ್ಕೆ ಅವನ ಮುಖದ ಮೇಲೆ ಬೆಳಕು ಬಿದ್ದಿತು. ಕಣ್ಣು ಬಿಟ್ಟು ನೋಡಿದರೆ ಚಂದಿರನ ಸುಂದರ ಬೆಳಕು. ಪ್ರಕೃತಿಯ ವಿಶಾಲ ಅನಂತತೆಗೆ ಮಾರುಹೋದ……
              ಕ್ಷಣದ ಹಿಂದೆ ಇದ್ದ ಭಾವಗಳೆಲ್ಲಾ ಹೊರಟು ಹೋಗಿ ಹೊಸ ಪರಿಚಯದ ಬೆಳಕು ಮಾತ್ರ ಕಾಣಿಸುತ್ತಿತ್ತು. ನಗುತ್ತಾ ಎದ್ದು ಕುಳಿತ. ಮುಗುಳು ನಗೆಯ ಚೆಲ್ಲಿ ನಿಲ್ಲಲು ನೋಡಿದ. ಕಾಲುಗಳು ಬಾಗಿದಂತೆ ಎನಿಸಿತು. ಮತ್ತೆ ಮತ್ತೆ ನಡೆಯಲು ನೋಡಿದ. ಆಗಲೇ ಇಲ್ಲ. ಈಗ ಅವನಿಗೆ ಚಂದಿರನ ಬೆಳಕು ಹಿತ ಎನಿಸಲಿಲ್ಲ. ನಡೆಯಲಾರದ ಕಾಲುಗಳ ಯೋಚನೆ ಕಾಡಿತು. ತನಗೂ ವಯಸ್ಸಾಯಿತೇ ಎಂದುಕೊಂಡ. ಛೇ ಇಲ್ಲ…..ಎಂದು ಸುಮ್ಮನಾದ.
                   ಯೋಚಿಸುವ ಹೊತ್ತಲ್ಲಿ ಕಣ್ಣಿಗೆ ಮಂಪರು ಆವರಿಸಿತು. ನಿದ್ದೆಗೆ ಜಾರಿದ. ನಿದ್ದೆಯಲ್ಲೂ ಯೋಚಿಸಿದ. ಕಾಲುಗಳು ನಾಳೆ ನಡೆಯದಿದ್ದರೆ ಬದುಕು ಹೇಗೆ? ಯಾರಿಗೆ ಸಹಾಯ ಕೇಳುವುದು?  ಮಾತನಾಡಲು ನೋಡಿದ ದನಿ ಅದುರುತ್ತಿತ್ತು. ಅರೆ ಈಗ ಸರಿ ಇರುವ ದನಿ ಏನಾಯಿತು.? ಮಾತು ಕೊನೆಯಾಯಿತೇ……? ಎಂದುಕೊಂಡು ಹಾಗೇ ಉಳಿದ. ಮತ್ತೆ ಕತ್ತಲು ಹಗಲಿತ್ತ ಮುಖ ಮಾಡಿತು. ಕಿಟಕಿ ಬಾಗಿಲು ತೆರೆದೇ ಇಟ್ಟ ಕಾರಣದಿಂದ ಬೆಳಕು ಗಾಳಿ ಕೋಣೆಯ ಒಳ ಬಂತು. ಎಚ್ಚರವಾದಾಗ ಹೆದರಿದ. ನಡೆಯಲಾರದ ಕಾಲುಗಳ ನೋಡಿದ. ಗೋಡೆ ಹಿಡಿದು ಮುಂದೆ ಸಾಗಿ ನಡೆದ.
                ಅವನಿಗೆ ಏನೂ ಆಗಿರಲೇ ಇಲ್ಲ. ನಡೆಯುವುದು ನಿಲ್ಲಿಸಿದರೆ ಮತ್ತೆ ಕಾಲುಗಳು ನಿಂತರೆ  ಎಂದು ನಡೆದ. ಮುಂಜಾನೆಯ ಮಂಜಿನ ಹನಿಗೆ ಕಾಲು ಚುರುಕಾಯಿತು. ವೇಗವಾಗಿ ನಡೆದ. ನಡಿಗೆ ಸರಾಗವಾಯಿತು. ಮಾತು ಏನಾಗಿರಬಹುದು ಯೋಚಿಸಿದ. ಗಟ್ಟಿಯಾಗಿ ಕೂಗಿದ. ಧ್ವನಿ ಹೊರ ಬಂದಿತು
ಬದುಕು ಬವಣೆಗಳು ಇರುವ ವಾಸ್ತವಕ್ಕೆ ಹತ್ತಿರ.  ಈಗ ಸಾಲು ನೆನಪಿಸಿಕೊಂಡ. ನಾನು ಬದುಕಬೇಕು ಎಂದು ಅಂದುಕೊಂಡ. ಮನೆ ಕಡೆ ಹೆಜ್ಜೆ ಹಾಕಿದ.


8 thoughts on “‘ಸಾಗಿದ ಹೆಜ್ಜೆ’ಸಣ್ಣಕಥೆ-ನಾಗರಾಜ ಬಿ.ನಾಯ್ಕ

      1. ಯೋಚನೆಯಂತೆ ಮಾತು ,ಮಾತಿನಂತೆ ಕೃತಿ ಕೃತಿಯಂತೆಕಾರ್ಯ, ಕಾರ್ಯದಿಂದ ಫಲ.
        ಸಕಾರಾತ್ಮಕವಾಗಿ ಚಿಂತಿಸಿದರೆ ಒಳಿತನ್ನು ಕಾಣಲು ಸಾಧ್ಯ. ಎಂಬು ದನ್ನುಈ ಕೃತಿ ತಿಳಿಸುತ್ತದೆ.

  1. ನಮ್ಮ ಯೋಚನೆ ಭಾವನೆಗಳ ರೀತಿ ನಮ್ಮ ಬದುಕು ರೂಪಗೊಳ್ಳುತ್ತದೆ. ಸಕಾರಾತ್ಮಕ ಯೋಚನೆ ನಮ್ಮನ್ನ ಜೀವನದಿ ಮುಂದಕ್ಕೆ ಕೊಂಡಯುತ್ತದೆ.ಎಂಬ ಚಿಕ್ಕ ಚೊಕ್ಕ ಸಂದೇಶ ಹೊಂದಿರುವ *ಸಾಗಿದ ಹೆಜ್ಜೆ* ಕತೆ ಅರ್ಥ ಪೂರ್ಣವಾಗಿದೆ.

    ನಾಗರಾಜ ಜಿ. ಎನ್. ಬಾಡ

  2. Good..
    ಕಥೆಯನ್ನು ಇನ್ನಷ್ಟು ಹಿಗ್ಗಿಸಿ ಇನ್ನೊಂದಿಷ್ಟು ಪಾತ್ರಗಳನ್ನು ಸೇರಿಸಿದರೆ ದೊಡ್ಡ ಕಥೆಯಾಗುತ್ತಿತ್ತು..
    ಇದು ಅಪೂರ್ಣವಾಗಿ ಓದುಗನಿಗೆ ಕಾಣುತ್ತದೆ

    @ ಫಾಲ್ಗುಣ ಗೌಡ ಅಚವೆ

Leave a Reply

Back To Top