ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಜು ಮನಿ ಅಕ್ಕೊರ ಮನ್ಯಾಗ ಮುಂಜಾನಮುಂಜಾನಿ ಬಾಂಡ್ಯ ಸಪ್ಪಳ ಕೇಳಿ ನಿದ್ದಿಗಣ್ಣಾಗ ಎದ್ದ ನಾನು ಎಲ್ಲಿ ಭೂಕಂಪ ಎನಾರ ಆಯ್ತಾ ಅಂತ ಹೊರಗ ಬಂದು ನೋಡತೀನಿ..ಅಕ್ಕೋರು ಮನ್ಯಾಗಿನ ಎಲ್ಲಾ ಭಾಂಡಿ ಸಾಮಾನ ತಂದು ಕಂಪೌಂಡನಾಗ ಎತ್ತಿ ಇಡಲತಿದ್ರೂ . ಸ್ವಲ್ಪ ಜೋರಾಗೇ ಕುಕ್ಕಲತಿದ್ರೂ ಅಂತ ಅನ್ನಕೋರಿ.

ಈ ದಸರಿ ಹಬ್ಬ ಬಂತಂದ್ರ ನಮ್ಮ ಕಡಿ ಎಲ್ಲರ ಮನ್ಯಾಗ ಈ ಭೂಕಂಪದಂತ ಶಬ್ದ ಬರತದರಿ. ಮನಿ ಸ್ವಚ್ಚ ಮಾಡಿ , ಬಟ್ಟಿ ಬರಿ ಒಗದು ಮಡಿ ಮಾಡೋ ಧಾವಂತ ಎಲ್ರೀಗೂ. ಯಾಕಂದ್ರ ದೇವ್ರೂ ಕೂಡಸೋ ಈ ಹಬ್ಬ ಅಂದ್ರ ಎಲ್ಲರಿಗೂ ಭಕ್ತಿಗಿಂತ ಭಯನೆ ಜಾಸ್ತಿ.ಒಂಬತ್ತ ದಿನ ದೇವತೆ ಹೆಸರಲ್ಲಿ ಆರಾಧಿಸೋ ಈ ಹಬ್ಬ ನಮ್ಮ ಕಡಿ ತಾಯಿ ಕೂಡಸೋದು ಅಂತೀವಿ. ಒಂದು ಪತ್ರೋಳಿಗಿ ಮ್ಯಾಲ ಸೋಸಿದ ಮಣ್ಣು ಹಾಕಿ ಅದರಲ್ಲಿ ವಿವಿಧ ಧಾನ್ಯ ಹಾಕಿ ಸಸಿ  ಬೆಳಸಿ ಪೂಜಿಸೋ ಹಬ್ಬನೆ ನಮ್ಮ ಕಡಿ ದಸರಾ.  ಒಂಬತ್ತು ದಿನ ಹಚ್ಚಿದ ದೀಪ ಆರದಂಗ ನೋಡಕೋತಾರ.ದಿನಾ ನೀರು ಹಾಕಿದ ಸಸಿಗಳು ಒಂಬತ್ತ ದಿನ ಆಗೋಷ್ಟರಲ್ಲಿ ಚಂದ ಉದ್ದ ಬೆಳದಿರತಾವ , ಹಬ್ಬ ಆಗೋದೆ ತಡ ಒಂದ ದಿನನೂ ಈ ಸಸಿಗಳನ್ನ ಮನ್ಯಾಗ ಇಟ್ಟಕೊಳ್ಳದೆ ಒಯ್ದ ನೀರಾಗ ಬಿಟಾಕತಾರ. ಸುಮ್ನ ಮನಿ ಹೊರಗ ಇಡ್ರಿ , ದನಗಳಾದ್ರೂ ತಿಂತಾವ ಅಂದ್ರ ಒಬ್ಬರಾದ್ರೂ ನನ್ನ ಮಾತ ಕೇಳತಾರ ಅಂದಿರೆನು , ಊಹೂಂ , ದೇವ್ರೀಗಿ ದನ ತಿಂದ್ರ ಹ್ಯಾಂಗ್ , ನೀರಾಗ ಮುಳಗಿಸಿದ್ರ ಛಲೋ ,  ಅನ್ನಕೋಂತ ಸಸಿಗಳನ್ನೆಲ್ಲ ಬುಟ್ಯಾಗ ತುಂಬಿ ಕೆರ್ಯಾಗ ಚಲ್ಲಿ ಉಸ್ಸ ಅಂತ ಹಬ್ಬ ಮುಗಸ್ತಾರ.

ನಮ್ಮ ಎಲ್ಲಾ ಹಬ್ಬಗಳು ಹಂಗೇ ಬಿಡ್ರೀ.ಹಿಂದಿನವರು ಮಾಡಿದಂಗ ಮುಂದಿನವರು ಮಾಡಿಕೊಂಡು ಬರತಾರ , ಇದರಿಂದ ಅವರಿಗೆ ಶಾಂತಿ , ನೆಮ್ಮದಿ ಸಿಗತದ ಅಂದ್ರ ಮಾಡ್ಲಿ. ಅದರಾಗ ಅವರಿಗಿ ಸಂತೋಷ ಅದ ಅಂದ್ರ ಬ್ಯಾಡ ಅಂತ ಯಾಕ ಅನ್ನ ಬೇಕು..!

ಆದ್ರ ಈಗ ನಾನು ಹೇಳತಿರೋದು ಹಬ್ಬದ ವಿಷಯ ಅಲ್ಲ.ಈ ಸ್ವಚ್ಚತಾ ಅಂಬೋ ಗೀಳಿನದ್ದು.ವರ್ಷಿಗೊಮ್ಮೆ ಹಬ್ಬದ ನೆಪದಾಗ ಮನಿ ಸ್ವಚ್ಚ ಮಾಡೋದು ಒಳ್ಳೆದೆ. ಆದ್ರ ಈಗೀಗ ನಮ್ಮ ಹೆಣ್ಣಮಕ್ಕಳಿಗಿ ಈ ಸ್ವಚ್ಚತೆ ಅಂಬೋದು ಗೀಳಾಗಲತದ. ತೋಳಿದದ್ಧೆ ತೋಳೆದು.ಒಗಿದದ್ದೆ ಒಗೇದು.ಇಂಥವೆ. ಹಿಂದಕಿನ ಕಾಲದಾಗ ಮನ್ಯಾಗಿನವರು   ಎಲ್ಲರೂ ಹೋಲದಾಗ ದುಡಿತಿದ್ರೂ. ದುಡದು ತಿನ್ನೋ ಅವ್ರೀಗಿ ಮನಿ ಒಪ್ಪ ಓರಣ ಮಾಡ್ಲಿಕ್ಕ ಟೈಮ್ ಇರತಿರಲಿಲ್ಲ.ಅದಕ್ಕ ಹಬ್ಬದ ನೆವದಾಗ ಮನಿ ಸುಣ್ಣ ಬಣ್ಣ ಮಾಡಿ ಪಾತ್ರಿ ಪಗಡಿ ತೊಳದು , ಕೌದಿ ಜಮಖಾನಿ ಅಂತಾ ದೊಡ್ಡ ದೊಡ್ಡ ಹಚ್ಚಕೊಳ್ಳೊ ಹಾಸಕೊಳ್ಳೊ ವಸ್ತ್ರ ಗಳನ್ನ ಕೆರಿಗಿ ಒಯ್ದ ಒಕ್ಕೊಂಡು ಬರತಿದ್ರು.ಇಷ್ಟ ಒಪ್ಪ ಓರಣ ಮಾಡಿ ಒಂದು ವರ್ಷ ಮತ್ತ ಮನಿ ಸ್ವಚ್ಚ ಅಂತಿರಲಿಲ್ಲ. ದಿನಾ ಕಾಯಕ ಮಾಡಿ ದುಡಿಯೋದು ಮುಖ್ಯ ಆಗಿತ್ತ ಅವರಿಗಿ.

ಆದ್ರ ಈಗ ಕೆಲಸಕ್ಕ ಹೋಗೋ ಹೆಣ್ಣ ಮಕ್ಕಳಿಗಿಂತ ಈ ಮನ್ಯಾಗ ಇರೋ ಹೆಣ್ಣಮಕ್ಕಳಿಗೆ ಈ ಸ್ವಚ್ಚತಾ ಗೀಳು ಬಾಳ ಅಂಟುಕೊಂಡದ. ಈಗಿನ ಅಧುನಿಕ ಮನಿಗಳು ಹಂಗೆ ಅವ ಬಿಡ್ರೀ.ನೆಲ ದಿನ ಒರೆಸಬೇಕು.ಬಾತ್ ರೂಂ ಟೈಲ್ಸ್ ತೊಳದು ಕ್ಲೀನ್ ಆಗಿಡಬೇಕು.ಕಟ್ಟಿಗಿನಿಂದ ಮಾಡಿದ ವುಡ್ ವರ್ಕ ಝಾಡಿಸ್ತ ಇರಬೇಕು.ಇಲ್ಲಂದ್ರ ಒಳಗ ಜಿಳ್ಳಿಗಳು ಮನಿ ಮಾಡಕೋತಾವ. ಹೀಂಗ ಕ್ಲೀನ್ ಕ್ಲೀನ್ ಮಾಡಕೋಂತಾ ಅದು ಯವಾಗ ವ್ಯಸನ ದ ಥರಾ ಆಯ್ತು ಅಂತ ನಮಗೆ ತಿಳಿವಲ್ದು.

ಅದರಾಗ ಈ ದಸರಿ ಹಬ್ಬ ಬಂದ್ರ ಮುಗೀತು.ಎಲ್ಲರ ಬಾಯಾಗೂ ಮನಿ ಸ್ವಚ್ಚ ಮಾಡಕೊಳ್ಳೊ ಮಾತೆ. ಗಲೀಜ್ ಆದ್ರ ಕ್ಲೀನ್ ಮಾಡ್ಲಿ. ಸ್ವಚ್ಚ ಇರೋ ಭಾಂಢೆ ಬಟ್ಟಿನೂ ಮತ್ತ ಮತ್ತ ಕ್ಲೀನ್ ಮಾಡತಾರಲ್ಲ,  ಅದಕ್ಕೆ
ವ್ಯಸನ ಅನ್ನೊದು. ನಾನಂತೂ ಒಬ್ಬೊಬ್ಬರಿಗಿ ನೋಡತಿರತೀನಿ , ಮನ್ಯಾಗ ಅಡಿಗಿ ಮಾಡಲ್ಲ , ಹೋರಗಿಂದ ತರಿಸಿಕೊಂಡು ತಿಂದು ಬರಿ ಮನಿಸ್ವಚ್ಚ ಮಾಡ್ಕೋಂಡು  ಕುತಿರತಾರ . ಮನೀಗಿ ಯಾರು ಬರೋರಿಲ್ಲ ಹೋಗೋರಿಲ್ಲ , ಅಡುಗಿನೂ ಮೂರಹೊತ್ತ ಮಾಡದು ಇಲ್ಲ , ಈಗ ಎಲ್ಲರ ಮನ್ಯಗ ಇರೋದೆ ಹೆಚ್ಚೆಂದ್ರ ನಾಲ್ಕ ಮಂದಿ . ಕಮ್ಮಿ ಅಂದ್ರ ಇಬ್ಬರು. ಇಷ್ಟ ಜನ್ರ್ದದು ಅದೇಷ್ಟು ಕೆಲಸ , ಅದೇಷ್ಟು ಅಡಿಗಿ , ಅದೇಷ್ಟು ಮನಿ ಹೊಲಸಾಗತದ..! ಹಾಂ , ಮನ್ಯಾಗ ಒಂದು ಏಳೆಂಟು ಜನ ಹರಾ ಅಂದ್ರ ಮಾಡೋದು ಹೆಚ್ಚು , ತಿನ್ನೊದು ಹೆಚ್ಚು .ಆಗ ಕೆಲಸನೂ ಹೆಚ್ಚು. ಅಂತವರು ಮ್ಯಾಲಿಂದ ಮ್ಯಾಲ ಸ್ವಚ್ಚ ಮಾಡತಾ ಇರಬೇಕಾಗತದ ಅಂದ್ರ ಒಪ್ಪಬಹುದು. ಆದ್ರ ಮಾಡೋದು ಇಲ್ಲ , ತಿನ್ನೊದು ಇಲ್ಲ. ಬರೀ ಸ್ವಚ್ಚ ಮಾಡೋದೆ ಅಂದ್ರ ಅದು ಒಂದು ವ್ಯಸನ ಅಷ್ಟ.

ಕೆಲವರಿಗಿ ಸ್ವಚ್ಚತೆ ಎಂಬೋದು ವ್ಯಸನ ಆದ್ರ , ಕೆಲವರಿಗಿ ಇದು ಅನಿವಾರ್ಯ. ಹೊರಗೆ ದುಡಿಯೋ ಮಹಿಳೆಯರಿಗೆ ಇಂತಹ ಹಬ್ಬಗಳು ಯಾಕಾರ ಬರತಾವಪ್ಪ ಅನಸ್ತದ. ದುಡಿತದ ಒತ್ತಡ. ನಿಶ್ಯಕ್ತಿ , ಇವೆಲ್ಲವೂ ಸೇರಿ ಅವರನ್ನು ಹೈರಾಣ ಮಾಡಿಬಿಡತಾವ. ಆದ್ರ ಸುತ್ತಮುತ್ತಲೂ ಇದ್ದವ್ರೇಲ್ಲ ಸ್ಚಚ್ಚತಾ ಅಭಿಯಾನದಲ್ಲಿ ಬಿಜಿಯಾಗಿದ್ದಾಗ ತಾವೂ ಮನಸ್ಸಿಲ್ಲದಿದ್ರೂ ಮಾಡಬೇಕು. ಇಲ್ಲಂದ್ರ ಅಕ್ಕ ಪಕ್ಕದವ್ರೂ ಕೆಳತಾರ. ಯಾಕ್ರೀ ಹಬ್ಬ ಮಾಡಲ್ಲ ಎನ್ರೀ ಅಂತ. ಅದಕ್ಕ ನಾವೂ ಹಬ್ಬ ಮಾಡತೀವಿ ಅಂತ ತೊಇರುಸಿಕೊಳ್ಳಕ ಮನ್ಯಾಗಿನ ಎಲ್ಲ ಭಾಂಡೆ ತಂದು ಅಂಗಳಕ್ಕ ಒಗೀಬೇಕು.ಆಗ ಅಕ್ಕಪಕ್ಕದವ್ರೀಗಿ ಇವರೂ ಹಬ್ಬ ಮಾಡೋರು ಹರಾ ಅಂತಾ ಖಾತ್ರಿ ಆಗತದ. ಮನಿ ಸ್ವಚ್ಚ ಮಾಡಿಲ್ಲಂದ್ರ , ಮನ್ಯಾಗಿನ ಎಲ್ಲಾ ಬಟ್ಟಿ ಒಗದ ಮಡಿ ಮಾಡಿಲ್ಲಂದ್ರ ಅವರು ಮೈಲಿಗಿ ಹರಾ ಅಂತ ಹಬ್ಬದಾಗ ಅವರಿಗಿ ಯಾರೂ ಮುಟ್ಟಸಿಕೊಳ್ಳೋದಿಲ್ಲ. ಮನಿ ಪಾತ್ರೆ ಗಳೆಲ್ಲ ತೊಳದು ಹೊರಗ ಒಣಗಲಕ್ಕಿಟ್ಟು , ಮನಿ ಒಳಗಿನ ಎಲ್ಲಾ ಬಟ್ಟೆಗಳು ಒಗದು ಮಾಳಗಿ ಮ್ಯಾಲ ಒಣಗಕ ಹಾಕಿದ್ರ ಮಾತ್ರ ಅವರು ಮಡಿ ಆಗಿದ್ದು ಖಾತ್ರಿ ಅಗತದ.

ಈ ಮಡಿ ಮೈಲಿಗಿ ಆಚರಣೆ ಎಲ್ಲಾ ಹಿಂದಕಿನಿಂದ ಬ್ರಾಹ್ಮಣ ರನ್ನು ನೋಡಿ ಕಲತದ್ದು. ನಾವು ಮಡಿ ಮೈಲಿಗಿ ಅಂತ ಮಾಡಿದ್ರ ಅವರ ಸರಿಗಿ ನಮ್ಮನ್ನು ಮನುಷ್ಯರು ಅಂತಾ ತಿಳಕೊತಾರಂತ ಈ ಮಡಿ ಮೈಲಿಗಿ ಪ್ರಯೋಗ ನಾವು ಅನುಸರಿಸಿದೆವು ಅನಸ್ತದ ನನಗ. ಇದಕ್ಕ ಪೂರಕವಾಗಿ ದಲಿತರು ಮತ್ತು ಹೆಚ್ಚಾಗಿ ಮಡಿ ಮೈಲಿಗಿ ಅಂತ ಮಾಡತಿದ್ದಾರ. ಇವೆಲ್ಲ ನಾವು ನಿಮ್ಮಂಗ ಅಂತ ತೋರಸಿಕೊಳ್ಳಕ ಮಾಡೋ ಆಚರಣೆಗಳು.ಮನುಷ್ಯ ಸಹಜ ಭಾಂಧ್ಯವ್ಯಗಳು ಮರೆಯಾಗಿ  ಆಚರಣೆಗಳ ಸ್ಪರ್ಧೆ ನಮ್ಮ ನಡುವೆ ಎರ್ಪಡುತ್ತಿರೊದು ವಿಪರ್ಯಾಸ.

ಈ ಮಡಿ ಮೈಲಿಗಿ ನಾವು ಚಿಕ್ಕರಿದ್ದಾಗ ಇದ್ದಾಗಿನಕ್ಕಿಂತ ಈಗ ಸ್ವಲ್ಪ ಕಮ್ಮಿ ಆಗ್ಯಾದ ಅಂತನೆ ಹೇಳಬೇಕು. ಆದ್ರ ಈಗ ಸ್ವಚ್ಚತೆ ಗೀಳು ಹೆಚ್ಚಾಗಲತದ. ಈ ಕೆಲಸ ಹೀಗೆ ಆಗಬೇಕು.ನನ್ನಿಷ್ಟದಂತೆ ಆಗಬೇಕು. ಯಾರು ಮಾಡಿದ್ದ ಕೆಲಸನೂ ಇಷ್ಟ ಆಗಲಾರದು , ಸ್ವಚ್ಚ ಸ್ವಚ್ ಅಂತ ಮಾನಸಿಕ ನೆಮ್ಮದಿ ಹಾಳು ಮಾಡಕೊಂಡು ಒತ್ತಡ ಅನುಭವಿಸತೀವಿ. ಗೃಹಿಣಿಯರಿಗಿ ಈ ಗೀಳು ಹೆಚ್ಚಾಗಲಕ ಕಾರಣ ಸದಾ ಮನೆಯಲ್ಲೇ ಇರೋದು.ದಿನ ಎಲ್ಲಾ ಕೆಲಸ , ಅಡುಗೆ , ಮನೆ ಒಪ್ಪ ಓರಣ , ಮತ್ತ ಅಡುಗೆ , ಮತ್ತ ಸ್ವಚ್ಚತೆ ಇದೇ ಇದೇ , ಮನಿ ಬಿಟ್ಟು ಒಂದೆರಡು ದಿನ ಹೋರಗ ಹೋದ್ರೂ ಧ್ತಾನ ಎಲ್ಲಾ ಮನಿ ಕಡಿ.ಗಂಡ ಮಕ್ಕಳು ಮನ್ಯಾಗ ಇದ್ರಂತೂ ಇನ್ನೂ ಟೆನ್ಷನ್ ತಾನು ಮನಿಗಿ ಹೋಗೋವಷ್ಟರಲ್ಲಿ ಮನಿ ಎಷ್ಟು ಗಲೀಜ್ ಮಾಡ್ತಾರೋ ಅಂತ ಹೋರಗಿದ್ರೂ ಮನಸ್ಸೆಲ್ಲ ಮನ್ಯಾಗೆ. ಅದಕ್ಕ ಗೃಹಿಣಿಯರು ಮನೀಗೆ ಅಂಟಕೋಲತಾರ.

ಯಾವದು ಶಾಶ್ವತ ಸಲ್ಲ.ನಾವು ಅಷ್ಟು ಕಾಳಜಿ ಮಾಡಿ ಒಗಿಯೋ ಬಟ್ಟೆಗಳು ಒಮ್ಮೆ ಹರದು ಹೋಗತಾವ. ಹರಿಯೋತನ ಈಗ ಯಾರೂ ಉಟ್ಟಕೊಳ್ಳತಿಲ ಬಿಡ್ರೀ , ಇನ್ನ ಸ್ವಚ್ಚ ಸ್ವಚ್ಚ ಅಂತ ತಿಕ್ಕೋ ಪಾತ್ರೆಗಳು ತಿಕ್ಕಿ ತಿಕ್ಕಿ ಸವೆದು ಹೋದಮ್ಯಾಲ ಹೋಸದು ತಗೊಳ್ಲಕೆ ಬೇಕು. ಪಾತ್ರೆಗಳಂತೂ ಈಗ ಎಲ್ಲರ ಮನ್ತಾಗೂ ಒಜ್ಝಿ ಆಗ ಬಿಟ್ಟಾವ.ಇನ್ನೂ ನೆಲ , ಪರ್ಸಿ ಎಷ್ಟು ಸ್ವಚ್ಚ ಮಾಡಿದ್ರೂ ಮತ್ತ ಮತ್ತ ಹೊಲಸ ಆಗೆ ಆಗತವ. ಮನಿ ಕನ್ನಡಿ ಹಂಗ ಹೋಳೆಸಿದಷ್ಟೂ ಗೃಹಿಣಿಯರು ಕಬ್ಬಿಣ ಆಗಲತಾರ.

ಎಲ್ಲಕ್ಕೂ ಒಂದು ಮಿತಿ ಇರಲಿ , ಎಲ್ಲಾ ಮೋಹಗಳನ್ನು ಬಿಟ್ಟು ಒಮ್ಮೆ ಖಾಲಿ ಹೋಗಬೇಕು. ಮನಿಯ ಗೀಳು , ಸ್ವಚ್ಚತೆಯ ಗೀಳು ಅತೀ ಆಗದಂಗ ನಮ್ಮ ಶರೀರದ ಬಗ್ಗೆನೂ ಸ್ವಲ್ಪ ಕಾಳಜಿ ಮಾಡೋಣ.

About The Author

Leave a Reply

You cannot copy content of this page

Scroll to Top