ಗಾಂಧಿ ಜಯಂತಿ,ವಿಶೇಷ-ಮಾನವೀಯತೆ ಉಳಿಯಬೇಕೆಂದರೆ ಬಾಪೂ ಅನಿವಾರ್ಯ (ಅವರವಿಚಾರಗಳನ್ನು ಮರೆತು ದೀಪಧೂಪ ಬೆಳಗಿದರೆ ಬಾಪೂವನ್ನು ಗಡಿಪಾರು ಮಾಡಿದಂತೆ) ಪ್ರೇಮಾ ಟಿ ಎಂ ಆರ್

ಒಂದೆ ಹಿಡಿ ಮೂಳೆ ಚಕ್ಕಳ ಅಷ್ಟೇ
    ಅದಕೆ ಸುರಿ
ಮೂರೋ ನಾಲ್ಕೋ ಚಮಚ ರಕ್ತ
           ಮಾಂಸ
ಜೊತೆಗಿರಿಸು ನೆರೆಕೊರೆದ
ಕಡಲಿನಾಳದ ಮನಸ
ಒಳಗಿರಿಸು ಹಿಮಗಿರಿಯ ಮೀರಿ
ನಿಮಿರ್ದ ಹಿರಿಯಾತ್ಮವ
ಹಚ್ಚು ಮೊರಕಿವಿಯೆರಡ ಎರಡು
ಪಿಳಪಿಳಿ ಕಣ್ಣು
ನೆರೆಬಂದ ಕಡಲಿನೊಳ್ ಪ್ರೇಮವಂ
ತುಂಬಿದೆದೆಯ
ಚಿಂದಿಯಲಿ ಸುತ್ತಿ ಸೆಳೆ
ಬೊಂಬಿನಾ
ಲಂಬವನಿತ್ತು ಬಡಿಸುತ್ತಾ! ಅವನೆ
ಕಾಣ್ ಲೋಕತಾರಕ ಬಾಪೂ
          ‌‌‌‌      ಟಿ ಪಿ ಕೈಲಾಸಂ

  ಬಾಪೂ ಎಂದರೆ ಕಡಲಿನಾಳದ ಮನಸ್ಸಿನಲ್ಲಿ ನೆರೆಬಂದ ಕಡಲಿನಷ್ಟು ಪ್ರೇಮವನ್ನು ತುಂಬಿಕೊಂಡ  ವೈಶಾಲ್ಯ‌.  ಗಾಂಧೀಜಿ ಒಂದು ಹೆಸರಲ್ಲ ಇಡೀ ಬದುಕನ್ಬು ಸನ್ಮಾರ್ಗದಲ್ಲಿ ಒಯ್ಯಬಲ್ಲ ಒಂದು ಮಾಂತ್ರಿಕ ಶಕ್ತಿ. ಅಹಿಂಸೆಯೆಂಬ ಅಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವ್ಯಕ್ತಿತ್ವ ಅದು. ಗಾಂಧೀಜಿಗಿಂತ ಬಹಳ ಹಿಂದೆಯೇ ಅಂಹಿಂಸೆಯ ಕಲ್ಪನೆ ನಮ್ಮಲ್ಲಿ ಇತ್ತು. ನಮ್ಮಲ್ಲಿ ಬಹುತೇಕ ಎಲ್ಲ ಧರ್ಮಗಳ ಸಾರವೂ ಅಹಿಂಸೆಯೇ. ವೌದ್ಧರು ಜೈನರು ಮತ್ತೆ ಏಸುಕ್ರಿಸ್ತ ಕೂಡ ಅಹಂಸೆಯನ್ನೇ ಎತ್ತಿಹಿಡಿದ ಪುಣ್ಯಾತ್ಮ. ಆದರೆ ಇಷ್ಟು ವ್ಯಾಪಕವಾಗಿ ಇಡೀ ವಿಶ್ವಕ್ಕೆ ಒಂದು ಹೋರಾಟದ ಅಸ್ತ್ರವಾಗಿಸಿ ಅಹಿಂಸೆಯನ್ನು ಕೊಟ್ಟಿದ್ದು ನಮ್ಮ ಮಹಾತ್ಮ ಅಂದುಕೊಂಡರೆ ಎದೆ ಉಬ್ಬುತ್ತದೆ. ಇಂದು ಮಹಾತ್ಮ ಜಗತ್ತಿನ ಉದ್ದಗಲ ಆಳೆತ್ತರಕ್ಕೆ ಬೆಳೆದು ನಿಂತವರು ಇಡೀ ಬದುಕನ್ನು ತುಂಡು ಪಂಚೆಯಲ್ಲಿ ಕಳೆದ ಭಾರತೀಯ ಪಕೀರನೊಬ್ಬನ  ಅಸಾಮಾನ್ಯ ಸಾಧನೆ ಇದು. ರಾಷ್ಟ್ರವೆಂದರೆ ನೆಲದಮೇಲೆಳೆದ ಬರೀ ಗಡಿರೇಖೆಗಳಲ್ಲ ಎಂಬ ಪರಿಕಲ್ಪನೆ ಅಂದೇ ಗಾಂಧೀಜಿ ಎದೆಗೆ ತುಂಬಿಕೊಂಡಿದ್ದರು. ಶೋಷಿತರನ್ನು ಎದೆಗೊತ್ತಿಕೊಳ್ಳುವದರ ಜೊತೆಗೆ ಶೋಷಣೆಗೆ ಕಾರಣವಾದವರ ವಿಚಾರ ಶೂನ್ಯತೆಗಾಗಿಯೂ ಮರುಗಿದವರು ಬಾಪೂ. ಹಾಗಾಗಿಯೇ ವಿಶೇಷ ವ್ಯಕ್ತತ್ವಗಳ ನಡುವೆಯೇ ಇದ್ದ ಅವರು ತಾರೆಗಳ ನಡುವೆ ಸೂರ್ಯನಾಗಿ ಹೊಳೆದವರು. ವಿಶ್ವದಗಲಕ್ಕೆ ಅನನ್ಯವಾಗಿ ಹಬ್ಬಿನಿಂತವರು.
    ಗಾಂಧಿಯೆಂದರೆ ಬರಿಮೂಳೆಚಕ್ಕಳದ ದೇಹ ಕವಚವಲ್ಲ . ಅದೊಂದು ಸತ್ಯನಿಷ್ಠೆ ಸ್ವಾಭಿಮಾನ ಅಹಿಂಸೆಯೆಂ ಹೂಮನಸ್ಸು. ಮಮತೆ ಸಮತೆ  ಮಾನವೀಯತೆಯ ಉತ್ತಂಗ ಶಿಖರ. ಅಷ್ಟಲ್ಲದೇ ಇಡೀ ವಿಶ್ವ ಇವರು ನಮಗೂ ಸಲ್ಲುತ್ತಾರೆಂದು ಎತ್ತಿ ಮೆರೆಸೀತೆ?. ಆದರೆ ನಮಗೆ ಈ ಮಣ್ಣಲ್ಲಿ ಇದೇ ನೆಲದಲ್ಲಿ ಹುಟ್ಟಿ ಬೆಳೆದು ವಿಚಾರಗಳ ಸತ್ಯಶೋಧನೆಯಲ್ಲಿ ತೊಡಗಿಕೊಂಡು ತತ್ವಗಳಾಗಿಸಿ ಅಂತೆಯೇ ತಾನೇ  ನಡೆದುತೋರಿ ನಾವೂ ಹಾಗೇ ನಡೆಯಬೇಕೆಂದು ಸತ್ಯ ಸಹಿಷ್ಣತೆ ಅಹಿಂಸೆಯ ರಹದಾರಿ ಕಡೆದಿಟ್ಟು ನಡೆದ ಹಿರಿಯ. ನಮಗೋ ಆ ಮಹಾಪುರುಷನ ಸಂತಾನ ನಾವೆಂಬ ಅವರಿಗೆ ತೀರ ಹತ್ತಿರದವರೆಂಬ ಹುಂಬತನವನ್ನು ಬಿಟ್ಟರೆ ಅವರನ್ನು ನಮ್ಮ ಭಾವಕೋಶದ ಹತ್ತಿತರಕ್ಕೆ ಬಿಟ್ಟುಕೊಳ್ಳಬೇಕು ಅವರ ವಿಚಾರಗಳನ್ನು ಓದಬೇಕು ಅರಿಯಬೇಕು ನಡೆಯಬೇಕೆಂಬ ಎಂಬ ಪ್ರಾಮಾಣಿಕ ಮನಸ್ಸು ಇದೆಯೇ? ನಾವು ಮನಸ್ಸಿನ ಮಹಾದ್ವಾರದಾಚೆಯೇ ಅವರನ್ನು ನಿಲ್ಲಿಸಿದ್ದೇವೆ ಎನ್ನುವದು ಕಹಿಯಾದರೂ ಸತ್ಯ. ವರ್ಣಬೇಧವಷ್ಟೇ ಅಲ್ಲ ವರ್ಗಬೇಧವೂ ಕಳೆಯಬೇಕೆಂಬುದು ಬಾಪೂಕನಸಾಗಿತ್ತು. ಜೊತೆಗೆ ಸ್ತರಗಳ ಭೇದವನ್ನೂ ತೊಳೆಯಬೇಕೆನ್ನುವದು ಅವರ ಕನಸಾಗಿತ್ತು. ಇಡೀ ವಿಶ್ವ ಈ ತುಂಡುಪಂಚೆಯ ಅಜ್ಜನನ್ನು ವಿಶ್ವಮಾನವನೆಂದು ಗುರುತಿಸಿ ನಮಗೂ ಸಲ್ಲಬೇಕೆಂದು ಗೌರವಿಸುತ್ತಿರುವದು ಅವರ ವಿಚಾರಗಳನ್ನು ಆದರ್ಶಗಳನ್ನ ನುಡಿದಂತೆ ನಡೆದ ನಡೆಯನ್ನು ಅವರು ಬರೆದ ಪುಸ್ತಕಗಳನ್ನು ಮೆಚ್ಚಿ. ನಮಗೆ ಅವರ ಜಯಂತಿಯ ದಿನ ಅಥವಾ ಮುನ್ನಾದಿನ ನೆನಪಾಗುವ‌ ಬಾಪೂ ನಾಳೆನಾಡಿದ್ದರೊಳಗೆ ಮರೆತುಹೋಗುತ್ತಾರೆ.  ವೈಷ್ಣವ ಜನತೋ… ರಘುಪತಿ ರಾಘವ… ಜೊತೆಗೊಂದಿಷ್ಡು ರಾಮಧುನ್….ಈಗೊಂದಷ್ಟು ಸ್ವಚ್ಛತೆಯ ಶ್ರಮ  ಮುಗಿಯಿತು ನಮ್ಮ ಗಾಂಧಿ ಜಯಂತಿ. ಅವರ ವಿಚಾರಗಳು ಯಾರಿಗೂ ಬೇಡ. ನಮ್ಮ ಮಕ್ಕಳನ್ನು ಒಮ್ಮೆ ನಿಲ್ಲಿಸಿ ಕೇಳಿ ಗಾಂಧೀಜಿಯವರ ಬದುಕಿನ ನಡಿಗೆ ಬದುಕಿನ ರೀತಿ ಅವರ ಬದುಕಿನಲ್ಲಿ ನಡೆದ ಘಟನೆಗಳು ಅವರ ದಿನಚರಿಗಳನ್ನ ಅವರ ನಂಬಿಕೆಗಳ ಬಗ್ಗೆ…ಒಂದೆರಡು ಸಾಲುಗಳಾಚೆ ತೊದಲದಿದ್ದರೆ ಹೇಳಿ. ನಮ್ಮ ಫಿಲ್ಮಸ್ಟಾರ್ ಗಳ ಒಳಗು ಹೊರಗು ಅವರ ಅಫೇರ್ಸಗಳು ಅವರ ದಿನಚರಿ ಅವರ ಊಟದ ರೀತಿಗಳನ್ನ ಕಂಠಪಾಠದಂತೆ ವರದಿ ನೀಡಬಲ್ಲ ಯುವಜನಾಂಗ ನಮ್ಮ ಬಾಪೂ ಬಗ್ಗೆ ಎರಡು ನಿಮಿಷ ಮಾತನಾಡಿಯಾರೇ ಅವರ ಆತ್ಮಕಥೆಯನ್ನ ಕಣ್ಣೆತ್ತಿ ಕಾಣ ಬಯಸಿಯಾರೇ…
  ನಾವಂತೂ ನಮ್ಮ ಹತ್ತಿರಕ್ಕೂ ಅವರನ್ನು ಬಿಟ್ಟುಕೊಳ್ಳಲೊಕ್ಕಿಲ್ಲ. ಯಾಕೆಂದರೆ ಬಾಪೂ ಎದೆಯಹತ್ತಿರವಿದ್ದರೆ ನಮ್ಮೊಳಗಿನ ಕರಿಮನಸ್ಸು ಬಿಳಿಮನಸ್ಸುಗಳ ನಡುವೆ ಜಗಳವೆದ್ದು ನಮ್ಮ ಕೊಚ್ಚಿಕೊಂದೀತು . ಒಂದರಡು ತೀರಸಾಮಾನ್ಯ ಸೆಂಪಲ್ ನೋಡಿ… ಗೃಹಬಳಕೆಗೆಂದು ಸಿಗುವ ಗ್ಯಾಸ್ ಕಲೆಕ್ಷನ ಯಾವುಯಾವುದೋ ಸುಳ್ಳು ಹೆಸರುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು  ಪಡೆದು ಸಿಲಿಂಡರ್ ಮಿಗಿಸಿ ದುಪ್ಪಟ್ಟು ಬೆಲೆಗೆ ಮಾರುತ್ತೇವೆ, ಬದುಕುವದಕ್ಕೆ ಸರ್ವ ಸಮರ್ಥರಿದ್ದೂ ಕಳ್ಳ ಬಿಪಿಎಲ್ ಕಾರ್ಡ ಹೊಂದಿರುತ್ತೇವೆ, ಪುಕ್ಕಟೆ ರೇಷನ್ ಅಕ್ಕಿಯ ಕಥೆಯಂತೂ ಕೇಳ್ಲೇಬೇಡಿ. ಸ್ವಚ್ಛ ಭಾರತದ ಕಥೆ ಕೇಳಿ.. ಕಸದ ಗಾಡಿ ನಿತ್ ಮನೆಮುಂದೆ ಬಂದರೂ ಮುಸ್ಸಂಜೆ ಕಳ್ಳಹೆಜ್ಹೆಯಿಟ್ಟು ಬಂದು ರಸ್ತೆಯ ಕೊನೆಯಲ್ಲಿ ಆಚೆ ಈಚೆ ಮಳ್ಳು ನೋಟಬೀರಿ ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದಮೇಲೆ ಕಸವೆಸೆದು ರಾಜಗಾಂಭೀರ್ಯದಿಂದ ನಡೆದುಹೋದರೆ ಕಿರೀಟದ್ದೊಂದೇ ಕಮ್ಮಿ. ಕೈಕೆಳಗಿನ ಕೆಲಸದವರನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುವ, ಖಚೇರಿಯ ವಾಹನದಲ್ಲಿ  ಮಡದಿ ಮಕ್ಕಳ ಸವಾರಿಮಾಡಿಸುವ ಸಾಹೇಬರ ಮರ್ಜಿ ಮಾಮೂಲಿ ಬಿಡಿ. ಸೈನಿಕರಿಗೆ ನಿವೃತ್ತ ಸೈನಿಕರಿಗಾಗಿ ಮೀಸಲಿರುವ ಮಿಲಿಟ್ರಿ ಕೆಂಟೀನ್ ಪಾಸ್ ಗಳು ಹಿಡಿದು ಐರೆಗೈರೆಗಳು ಖರೀದಿಯ ಮಜಾ ಉಡಾಯಿಸುತ್ತಾರೆಂದರೆ ನಂಬಲೇಬೇಕು ನೀವು. ಹೀಗೆಲ್ಲ ಮಾಡುವವರು ಕಡುಬಡವರಲ್ಲ ತುತ್ತು ಅನ್ನಕ್ಕೆ ಹಪಹಪಿಸುವ ದೀನರಲ್ಲ. ತುತ್ತು ಅನ್ನಕ್ಕಾಗಿ ಇಂಥದ್ದು ಮಾಡಿದರೆ  ತಪ್ಪಾಗಲಿಕ್ಕಿಲ್ಲ. ಹಸಿವು ಏನನ್ನೂ ಬೇಕಾದರೂ ಮಾಡಿಸುತ್ತೆ.  ಉಳ್ಳವ ಮಾಡಿದರೆ  ಅಪರಾಧ….  ದೇಶದಲ್ಲಿ ಹಣವಂತನನ್ನು ಓಲೈಸುವ ನೀಚ ಪದ್ಧತಿಯೇ  ಎಲ್ಲಇದ್ದು ಇನ್ನಷ್ಟು ಬಾಚಿ ಬರಗಿ ಧನಿಕರಾಗುವ ನಮ್ಮ ಹಂಬಲಕ್ಕೆ ಕಾರಣವಿರಬಹುದು. ಗಾಂಧೀಜಿ ಕೈಯ್ಯಲ್ಲಿಯ ಊರುಗೋಲು ನೆನಪಾದಾಗೆಲ್ಲ ಅಡ್ಡಪಲ್ಲಕ್ಕಿಯೇರುವ ಸ್ವಾಮಿಗಳು ನೆನಪಾಗುತ್ತಾರೆ. ಎಲ್ಲಿಂದೆಲ್ಲಿಯ ಅಂತರ..  ಹೀಗೆಲ್ಲ ಇದ್ದಾಗ್ಯೂ ಗಾಂಧಿ ತಾತನ್ನ ಅವರ ವಿಚಾರಗಳನ್ನು ಹತ್ತಿರ ಬಿಟ್ಕೊಂಡ್ರೆ ನಮಗೆ ಸುಖದ ನಿದ್ದೆಯುಂಟೇ. ಮತ್ತೆ ಸತ್ಯ ಅಹಿಂಸೆಯೆಂದು ಬದುಕುವದಕ್ಕಾಗಿ ಅವಶ್ಯವಿದ್ದಷ್ಟೇ ಆಹಾರ ಸೇವಿಸಿದ ಅವರು ತುಸು ದೂರವೇ ಇರಲಿಬಿಡಿ. ಏನಂತೀರಿ…..
       ಸ್ವಾತಂತ್ರ್ಯಸಮರದಲ್ಲಿ ಭಾಗಿಯಾಗುವ ಮೊದಲು ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನದಲ್ಲಿ ದೇಶದ ಉದ್ದಗಲಕ್ಕೂ ಓಡಾಡಿದ ಬಾಪೂ ದೇಶ ಸ್ವತಂತ್ರ ಆಗಬೇಕಾದರೆ  ಹೆಂಗಸರು ಮಕ್ಕಳು ಎನ್ನುವ ಭೇದವಿಲ್ಲದೇ ಸಮಸ್ತಭಾರತವೇ ಬ್ರಿಟಿಷ್ ವಸಾಹತುದಾರರ ವಿರುದ್ಧ ತಿರುಗಿನಿಲ್ಲಬೇಕಾದ ಅನಿವಾರ್ಯತೆಯನ್ನು ಮನಗಂಡಿದ್ದರು. ಅದಕ್ಕಾಗಿ ಅವರ ತಲೆಯಲ್ಲಿ ಹೊಕ್ಕಿದ್ದು ಅಹಿಂಸಾ ಮಾರ್ಗದಲ್ಲಿ ಸತ್ಯಾಗ್ರಹ.. ಕೊನೆಪಕ್ಷ ನಮ್ಮ ಪೀಳಿಗೆಗೆ ಇಷ್ಟಾದರೂ ನೆನಪಿದ್ದರೆ ಸಾಕು. ಬಾಪೂ ನವ ಚಿಗುರುಗಳನ್ನು ಕಂಡು ಉಜ್ವಲ ಭಾರತದ ಕನಸು ಕಟ್ಟಿದ್ದರು. ತದನಂತರ ಹೊತ್ತಿಗೆ ಹೊತ್ತಿಳಿದಂತೆ ಚಿಗುರುಗಳು ಹಣ್ಣೆಲೆಗಳಾದವು. ಹದಗೆಡುತ್ತಲೇ ಸಾಗಿತು ಭಾರತ. ಇಂದಿನ ಚಿಗುರುಗಳ ಬಾಯಲ್ಲಿ ಪಿಜ್ಜಾಬರ್ಗರ್ ಗಳಿವೆ. ಕೈಯ್ಯಲ್ಲಿ ಆ್ಯಪ್ ಗಳು, ದುಡ್ಡು ಮಾಡುವದಕ್ಕೆ ಶಿಕ್ಷಣ, ಮತ್ತೆ ಮತ್ತೆ ಗಾಂಧೀಜಿ ನಂಬಿದ ಸತ್ಯನಿಷ್ಠೆ ನಿಯತ್ತು. ಅಹಿಂಸೆ ಸ್ವಾಭಿಮಾನ ಸ್ವಾವಲಂಬನೆಯ ಪಾಠವನ್ನು ಎಲ್ಲಿ ಯಾರು ಮಾಡಬೇಕು?
    ಸರ್ ಅಲ್ಬರ್ಟ್ ಐನ್ಸ್ಟಿನ್ ಗಾಂಧಿಯವರ ಕುರಿತು ಹೇಳುತ್ತ–” ರಕ್ತಮಾಂಸಗಳಿಂದ ಕೂಡಿದ ವ್ಯಕ್ತಿಯೊಬ್ಬ  ಈಭೂಮಿಯಮೇಲೆ ನಡೆದಾಡಿದ್ದ ಎಂಬುವದನ್ನು ನಂಬುವದು ಮುಂದಿನ ಪೀಳಿಗೆಗೆ ಕಷ್ಟವಾಗಬಹುದು” ಎಂದಿದ್ದರು. ಮಾರ್ಟಿನ್ ಲೂಥರ್ — “ಮಾನವೀಯತೆ ಉಳಿಯಬೇಕೆಂದರೆ ಗಾಂಧಿ ಅನಿವಾರ್ಯ, ನಾವು ಗಾಂಧಿಯನ್ನು ದೂರವಿಟ್ಡರೆ ಮಾನವೀಯತೆಯ ಸಾವು.”ಎಂದಿದ್ದಾರೆ. ತತ್ವ ಆದರ್ಶಗಳಿಂದ ತೀರ ದೂರಕ್ಕೆ ಸರಿಯುತ್ತಿರುವ ಪೀಳಿಗೆಗೆ ಗಾಂಧೀಜಿವರ ಬದುಕು ಕುರಿತು ಹೇಳಿದರೆ ಕಟ್ಟುಕಥೆಯೆಂದು ಹೇಳುವ ಕೆಟ್ಟದಿನ ಎಂದೂ ಬಾರದಿರಲಿ. ಅವರ ವಿಚಾರಗಳನ್ನು ಮರೆತು ಅವರ ಭಾವಚಿತ್ರಕ್ಕೆ ಹೂವು ದೀಪಧೂಪ ಬೆಳಗಿದರೆ ಬಾಪೂವನ್ನು ಗಡಿಪಾರು ಮಾಡಿದಂತೆ…….ಬಾಪೂ  ಜಯಂತಿಯನ್ನು ಆಚರಿಸಿಕೊಳ್ಳುತ್ತಿದ್ದೇವೆ. ಒಮ್ಮೆ ಪ್ರಾಮಾಣಿಕವಾಗಿ ಎದೆಮೇಲೆ ಕೈಯ್ಯಿಟ್ಟುಕೊಳ್ಳೋಣವೇ….


Leave a Reply

Back To Top