ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವಿಶ್ವ ವಿಜೇತ…. ನಮ್ಮ ಭಾರತ
(ಚೆಸ್ ಒಲಂಪಿಯಾಡ್ 2024 )
ಭಾರತೀಯ ಕ್ರಿಕೆಟ್ ತಂಡ ಗೆದ್ದಾಗ ಇಡೀ ದೇಶದ ಮನೆಮನೆಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಪ್ರತಿ ಊರುಗಳಲ್ಲಿ ಸಂಭ್ರಮಾಚರಣೆ ನಡೆಯುತ್ತದೆ. ಎಲ್ಲರೂ ಪಟಾಕಿ ಹಚ್ಚಿ ಕೇಕೆ ಹೊಡೆದು,ಕುಣಿದು ಕುಪ್ಪಳಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಾಯಕರ ಚಿತ್ರಗಳು ಹರಿದಾಡುತ್ತ ಭಾರತ ದೇಶದಾದ್ಯಂತ ಜಾತಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ, ನ್ಯೂಸ್ ಚಾನೆಲ್ಗಳಲ್ಲಿ ಮಾಧ್ಯಮಗಳಲ್ಲಿ ಪದೇ ಪದೇ ಅದೇ ವಿಷಯಗಳನ್ನು ಮರುಪ್ರಸಾರ ಮಾಡುತ್ತಾ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. ಇದ್ಯಾವುದೂ ತಪ್ಪಲ್ಲ ಬಿಡಿ!. ಆದರೆ ಇದೇ ಸಂಭ್ರಮಾಚರಣೆ ಉಳಿದ ಕ್ರೀಡೆಗಳಿಗೆ ಇಲ್ಲ ಎಂಬುದು ವಿಪರ್ಯಾಸದ ಸಂಗತಿ.
ಬಹಳಷ್ಟು ಬಾರಿ ವಿವಿಧ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಅದಷ್ಟೇ ಐತಿಹಾಸಿಕವಾದ ಜಯಗಳಿಸಿದ್ದರೂ ಪತ್ರಿಕೆಯಲ್ಲಿನ ಕ್ರೀಡಾ ಪುಟದ ಮೂಲೆಯಲ್ಲಿ ಪ್ರಕಟವಾಗಿರುತ್ತದೆ. ಆ ಕ್ರೀಡಾಪಟುಗಳ ಕಠಿಣ ಶ್ರಮ ಮತ್ತು ನಿರಂತರ ಹೋರಾಟವನ್ನು ಯಾರೂ ಗುರುತಿಸುವುದಿಲ್ಲ ಎಂಬುದು ನಿಜವಾಗಿಯೂ ನೋವಿನ ಸಂಗತಿ. ಅವರು ಕೂಡ ಕ್ರಿಕೆಟ್ ತಾರೆಯರಷ್ಟೇ ಪರಿಶ್ರಮ ಮತ್ತು ಬದ್ಧತೆಯನ್ನು ಹಾಕಿರುತ್ತಾರೆ. ಆದರೂ ತಮ್ಮ ಸಾಧನೆಯನ್ನು ಗುರುತಿಸದೆ ಹೋಗುವುದು ಅವರಿಗೆ ಬೇಸರವನ್ನುಂಟು ಮಾಡುವ ಸಂಗತಿ. ಈ ತಾರತಮ್ಯವನ್ನು ಖಂಡಿಸಲೇಬೇಕು.
ಇತ್ತೀಚೆಗಷ್ಟೇ ಭಾರತದ ಚದುರಂಗ ತಂಡ 45ನೇ ಒಲಂಪಿಯಾಡ್ ನಲ್ಲಿ ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಚಿನ್ನದ ಪದಕವನ್ನು ಪಡೆದು ಐತಿಹಾಸಿಕ ಜಯವನ್ನು ದಾಖಲಿಸಿತು. ಇದು ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಚೆಸ್ ಆಟಗಾರರ ಜಾಣ್ಮೆ, ಏಕಾಗ್ರತೆ ಮತ್ತು ಬೆಳವಣಿಗೆಯನ್ನು ತೋರುತ್ತದೆ. ಇಡೀ ಚೆಸ್ ಒಲಂಪಿಯಾಡ್ ನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಎರಡು ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿರುವುದು ಸಾಮಾನ್ಯ ಸಂಗತಿಯೇನಲ್ಲ, ಆದರೆ ವಿಷಾದದ ಸಂಗತಿ ಎಂದರೆ ಭಾರತೀಯರ ಮನೆ ಮನೆಗಳಲ್ಲಿ ಸಂಭ್ರಮಿಸಬೇಕಾದ ಈ ವಿಷಯದ ಕುರಿತು ಯಾವುದೇ ಉತ್ಸಾಹ ಮತ್ತು ಹುಮ್ಮಸನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರು ತೋರಲಿಲ್ಲ ಎಂಬುದು.
ಈ ಎಲ್ಲಾ ಆಟಗಾರರ ಯಶಸ್ಸು ಕೇವಲ ಅವರ ಜಾಣ್ಮೆಯಿಂದ ಮಾತ್ರವಲ್ಲ ಬದಲಾಗಿ ಅವರ ಮಾನಸಿಕ ಸ್ಥಿತಪ್ರಜ್ಞತೆ ಚಾಕಚಕ್ಯತೆ ಮತ್ತು ಮುಂದಾಲೋಚನೆಗಳ ಪ್ರತಿಫಲವಾಗಿದೆ. ಭಾರತೀಯ ಚೆಸ್ ನ ಪುರುಷರ ಮತ್ತು ಮಹಿಳೆಯರ ಎರಡು ವಿಭಾಗಗಳು ಇಡೀ ದೇಶವನ್ನು ಹೆಮ್ಮೆ ಮತ್ತು ಅಭಿಮಾನದಿಂದ ಎದೆ ಉಬ್ಬಿಸುವಂತಹ ಸಾಧನೆಯನ್ನು ಮಾಡಿದೆ.
ಜಾಗತಿಕವಾಗಿ ಭಾರತದ ಏಕ ಪಾರಮ್ಯವನ್ನು ಈ ಚೆಸ್ ಒಲಂಪಿಯಾಡ್ ತೋರುತ್ತಿಲ್ಲ ಬದಲಾಗಿ ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿಯು ಉಳಿದ ಕ್ರೀಡೆಗಳಲ್ಲಿಯೂ ಪ್ರತಿಭಾನ್ವಿತರಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದೆ.
ಕ್ರಿಕೆಟ್ ಆಟಗಾರರಿಗೆ ದೊರೆಯುವಷ್ಟೇ ಗೌರವ ಮತ್ತು ಪ್ರೋತ್ಸಾಹಗಳು ಉಳಿದೆಲ್ಲ ಆಟಗಾರರಿಗೂ ದೊರೆಯಬೇಕು. ಎಲ್ಲಾ ಕ್ರೀಡೆಗಳನ್ನು ಮತ್ತು ಎಲ್ಲ ಕ್ರೀಡಾಪಟುಗಳಿಗೆ ಸಮಾನ ಗೌರವವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಮತ್ತು ಎಲ್ಲಾ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.
ಡಿ ಗುಕೇಶ್, ಆರ್ ಪ್ರಜ್ಞಾನಂದ,ವಿದ್ಯುತ ಗುಜರಾತಿ, ಅರ್ಜುನ್ ಇರಿಗೇಶಿಯವರನ್ನೊಳಗೊಂಡ ಪುರುಷರ ತಂಡವನ್ನು ಶ್ರೀನಾಥ್ ನಾರಾಯಣ ಮುನ್ನಡೆಸುತ್ತಿದ್ದರು.
ವೈಶಾಲಿ ಆರ್, ಹಾರಿಕ, ತಾನಿಯಾ ಸಚದೇವ್, ವಂತಿಕ ಅಗರ್ವಾಲ್, ದಿವ್ಯ ದೇಶಮುಖ್ ಮಹಿಳೆಯರ ತಂಡದಲ್ಲಿದ್ದು… ಎರಡು ತಂಡಗಳನ್ನು ರೂಪಿಸುವಲ್ಲಿ ಭಾರತದ ಮೊದಲ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರ ಪ್ರಭಾವವಿದೆ.
ವಿಶ್ವ ಚೆಸ್ ಒಲಂಪಿಯಾಡ್ ನ ಅಂಗಳದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದ
ಎಲ್ಲ ಭಾರತೀಯ ಚೆಸ್ ಪಟುಗಳಿಗೆ ತುಂಬು ಹೃದಯದ ಅಭಿನಂದನೆಗಳು
ವೀಣಾ ಹೇಮಂತ್ ಗೌಡ ಪಾಟೀಲ್
Nice madum