ದೈನಂದಿನ ಸಂಗಾತಿ
ವೀಣಾ ವಾಣಿ
ವಾಣಿ ಹೇಮಂತ್ ಗೌಡ ಪಾಟೀಲ್
ಭರವಸೆಯೇ ಬದುಕು
65 ವರ್ಷ ವಯಸ್ಸಿನ ಶಬಾನ ಎಂಬ ಮಹಿಳೆ ಮೈಸೂರಿನಲ್ಲಿ ವಾಸವಾಗಿದ್ದು ಒಂದೊಮ್ಮೆ ಮನೆಯಲ್ಲಿ ಇಲ್ಲದ ಬದುಕಿನ ನಿರ್ವಹಣೆಗೆ ಕೆಲಸವೂ ಇಲ್ಲದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿಯಲ್ಲಿದ್ದ ಆಕೆ ಇಂದು ತನ್ನ ಆತ್ಮಸ್ಥೈರ್ಯ ಮತ್ತು ಬದ್ಧತೆಯಿಂದ ಕೂಡಿದ ಬದುಕಿನ ಸ್ಪೂರ್ತಿದಾಯಕ ಪಯಣದಿಂದ ಸಬಲೀಕರಣ ಹೊಂದಬಯಸುವವರಿಗೆ ದಾರಿದೀಪವಾಗಿದ್ದಾಳೆ.
ಗಂಡು ಅಲ್ಲದ ಹೆಣ್ಣು ಅಲ್ಲದ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಮನೆಯಿಂದ ಹೊರ ತಬ್ಬಿಸಿಕೊಂಡ ಆತ ಹೆಣ್ಣಾಗಿ ಪರಿವರ್ತಿತನಾಗಿ ಶಬಾನ ಎಂಬ ಹೆಸರಿನಿಂದ ತನ್ನನ್ನು ತಾನು ಕರೆದುಕೊಂಡಳು. ಜೀವನ ನಿರ್ವಹಣೆ ಮಾಡಲು ಮೈಸೂರಿಗೆ ವಲಸೆ ಬಂದ ಶಬಾನಾಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಇರಲು ಬಾಡಿಗೆಗೊಂದು ಮನೆ ದೊರೆಯದೆ ,ಮಾಡಲು ಕೆಲಸವಿಲ್ಲದೆ ಬೀದಿ ಬೀದಿ ಅಲೆದ ಶಬಾನ ಕೊನೆಗೂ ಒಂದು ಉದ್ಯೋಗ ಗಿಟ್ಟಿಸಿ ನೆಲೆ ನಿಲ್ಲಬೇಕೆಂದುಕೊಂಡಾಗ ಆಕೆಗೆ ಆಸರೆಯಾದದ್ದು ಆಕೆ ದತ್ತು ಸ್ವೀಕರಿಸಿದ ಮಗು ಬೀಬಿ ಫಾತಿಮಾ.
20 ವರ್ಷಗಳ ಹಿಂದೆ ಶಬಾನ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡು ಆಕೆಗೆ ಬೀಬಿ ಫಾತಿಮಾ ಎಂದು ಹೆಸರಿಟ್ಟು ಆಕೆಯನ್ನು ಪ್ರೀತಿಯಿಂದ ಪಾಲಿಸಿದಲ್ಲದೆ ಆಕೆಗೆ ಅತ್ಯಂತ ಇಷ್ಟವಾಗಿದ್ದ ಕಿಕ್ ಬಾಕ್ಸಿಂಗ್ ನಲ್ಲಿ ಆಕೆಗೆ ತರಬೇತಿ ಕೊಡಿಸಿದಳು. ತನ್ನ ವೈಯುಕ್ತಿಕ ಜೀವನದಲ್ಲಿ ಹಲವಾರು ತೊಂದರೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದ ಶಬಾನ ತನ್ನ ದತ್ತು ಪುತ್ರಿ ಫಾತಿಮಾಳಿಗೆ ಮಾತ್ರ ಯಾವುದೇ ಕೊರತೆ ಇಲ್ಲದಂತೆ ಬೆಳೆಸಿದಳಲ್ಲದೆ ಆಕೆ ತನ್ನ ಕನಸಿನ ಬೆನ್ನೇರಲು ಪ್ರೋತ್ಸಾಹಕಳಾಗಿ ನಿಂತಳು.
ಬೀಬಿ ಫಾತಿಮಾ 12 ವರ್ಷದವಳಿದ್ದಾಗ ಆಕೆಗೆ ಕಿಕ್ ಬಾಕ್ಸಿಂಗ್ ನಲ್ಲಿ ಅತೀವ ಆಸಕ್ತಿ ಮೂಡಿ ತನ್ನ ತಾಯಿ ತನಗೆ ಖರ್ಚಿಗೆ ಕೊಡುತ್ತಿದ್ದ ನಾಣ್ಯಗಳನ್ನು ಕೂಡಿಸಿಟ್ಟುಕೊಂಡಿದ್ದ ಆಕೆ ಸ್ಥಳೀಯ ಕಿಕ್ ಬಾಕ್ಸಿಂಗ್
ತರಬೇತಿ ಸಂಸ್ಥೆಯೊಂದರಲ್ಲಿ ದಾಖಲಾದಳು. ತಾಯಿಯ ಬಲವಾದ ಪ್ರೋತ್ಸಾಹದಿಂದ ಫಾತಿಮಾ ಕ್ಷಿಪ್ರ ಗತಿಯಲ್ಲಿ ಬಾಕ್ಸಿಂಗ್ನ ಎಲ್ಲ ಪಟ್ಟುಗಳನ್ನು ಕಲಿತು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಕಿಕ್ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಿ ಮೆಡಲುಗಳನ್ನು ಗಳಿಸಿದಳು. ಕರ್ನಾಟಕ ಸ್ಟೇಟ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ ಆಕೆ ಒಟ್ಟು 23 ಪದಕಗಳನ್ನು ತನ್ನ ಕೊರಳಿಗೆ ಮಾಲೆಯಾಗಿ ಧರಿಸಿದ್ದಾಳೆ.
ಪ್ರಮುಖ ಟೂರ್ನಮೆಂಟ್ಗಳಲ್ಲಿ ಮಗಳು ಆಡುವುದನ್ನು ನೋಡುವ ಶಬಾನಳ ಎದೆ ಹೆಮ್ಮೆಯಿಂದ ಬೀಗುತ್ತದೆ. ಫಾತಿಮಾ ಕೇವಲ ನನ್ನ ಮಗಳಲ್ಲ, ಆಕೆ ನನ್ನ ಹೆಮ್ಮೆ ಮತ್ತು ನನ್ನ ಪರಂಪರೆ ಎಂದು ಹರ್ಷದಿಂದ ಶಬಾನ ಹೇಳುತ್ತಾಳೆ.
ತನ್ನೆಲ್ಲ ಕಾರ್ಯ ಚಟುವಟಿಕೆಗಳ ಯಶಸ್ಸಿನ ಶ್ರೇಯವನ್ನು ತಾಯಿ ಶಬಾನಳಿಗೆ ಅರ್ಪಿಸುವ ಬೀಬಿ ಫಾತಿಮಾ ತಾಯಿಯ ಪ್ರೀತಿ ಮತ್ತು ಶ್ರದ್ಧೆ ತನ್ನನ್ನು ಇಂದಿನ ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಹೇಳುತ್ತಾಳೆ. ನನ್ನಮ್ಮ ನನ್ನ ಶಕ್ತಿಯಾಗಿದ್ದು ನಾನು ಇನ್ನಷ್ಟು ಹೆಚ್ಚಿನ ಎತ್ತರಗಳನ್ನು ಕ್ರಮಿಸಿ ತಾಯಿ ಹೆಮ್ಮೆ ಪಡುವಂತೆ ಬೆಳೆಯಬೇಕು ಎಂದು ಫಾತಿಮಾ ಹೇಳುತ್ತಾಳೆ..
ಮುಂಬರುವ ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಾಗುತ್ತಿರುವ ಫಾತಿಮಾ ಮತ್ತಷ್ಟು ಹೆಚ್ಚು ಮೆಡಲುಗಳನ್ನು ಗಳಿಸಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಆಕೆಯ ತಾಯಿ ಮತ್ತು ಇಡೀ ದೇಶ ಹೆಮ್ಮೆಯಿಂದ ಬೀಗುವಂತ ಸಾಧನೆಯನ್ನು ಮಾಡಲಿ.
ಸಣ್ಣ ಪುಟ್ಟ ತೊಂದರೆಗಳನ್ನು ಮುಂದೊಡ್ಡಿ ಎಷ್ಟೋ ಬಾರಿ ಹೆಣ್ಣು ಮಕ್ಕಳು ತಮ್ಮ ಮುಂದಿರುವ ಅವಕಾಶಗಳನ್ನು ಕೈಬಿಡುತ್ತಾರೆ.. ಮನೆಯಲ್ಲಿ ಒಪ್ಪುವುದಿಲ್ಲ, ಮಕ್ಕಳ ಮತ್ತು ಮನೆಯ ಜವಾಬ್ದಾರಿ, ಕೌಟುಂಬಿಕ ವಾತಾವರಣದಲ್ಲಿ ಸ್ವಾತಂತ್ರ್ಯದ ಅವಕಾಶವಿಲ್ಲದಿರುವಿಕೆ ಹೀಗೆ ಹತ್ತು ಹಲವು ವಿಷಯಗಳನ್ನು ಮುಂದೊಡ್ಡುವ ಹೆಣ್ಣು ಮಕ್ಕಳು
ಮದುವೆಯಾದ ಮೇಲೆ ತಮ್ಮ ಬದುಕೇ ಮುಗಿದು ಹೋಯಿತು ಎಂಬಂತೆ ಭಾವಿಸುವ ಕೊಟ್ಯಂತರ ಹೆಣ್ಣು ಮಕ್ಕಳಿಗೆ, ಮದುವೆಯ ನಂತರವೂ ಹೆಣ್ಣು ಮಕ್ಕಳು ತಮ್ಮ ಭವಿಷ್ಯದ ಕುರಿತು ಯೋಚಿಸಬೇಕು. ತಾನು ಸಶಕ್ತಳಾಗಿ ನಿಂತು ತನ್ನ ಮಕ್ಕಳಿಗೆ ಮಾದರಿಯಾಗಬೇಕು.
ಕುಟುಂಬದ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಹೆಣ್ಣು ಮಕ್ಕಳು ಖಂಡಿತವಾಗಿಯೂ ಮನೋ ದೈಹಿಕವಾಗಿ ಅಬಲೆಯರಲ್ಲ,ಆದರೆ ಆರ್ಥಿಕವಾಗಿ ಸಬಲೆಯರು ಕೂಡ ಅಲ್ಲ. ಪ್ರತಿ ತಿಂಗಳು ಮನೆ ಖರ್ಚಿಗೆ ಗಂಡ ಕೊಡುವ ದುಡ್ಡಿನಲ್ಲಿ ತಮಗಾಗಿ ಪುಡಿಗಾಸನ್ನು ಎತ್ತಿಟ್ಟುಕೊಳ್ಳುವ ಹೆಣ್ಣುಮಕ್ಕಳು ಗಂಡನ ಕಣ್ಣಿನಲ್ಲಿ, ಕುಟುಂಬದ ಇತರ ಸದಸ್ಯರ ಕಣ್ಣಿನಲ್ಲಿ ಕಳ್ಳರಂತೆ ತೋರುತ್ತಾರೆ. ಆಕೆಯೂ ಓರ್ವ ವ್ಯಕ್ತಿ ಆಕೆಗೂ ತನ್ನದೇ ಆದ ಸಣ್ಣ ಪುಟ್ಟ ಖರ್ಚುಗಳಿರುತ್ತವೆ, ಆಕೆ ಮಾಡುವ ಗೃಹ ಕೃತ್ಯಕ್ಕೆ ಯಾವುದೇ ಸಂಬಳ ಇಲ್ಲದ ಕಾರಣ ಆಕೆಗೂ ತನ್ನದೇ ವೈಯುಕ್ತಿಕ ಖರ್ಚಿಗೆ ತುಸು ದುಡ್ಡು ಬೇಕಾಗುತ್ತದೆ ಎಂಬುದನ್ನು ಅರಿಯದ ಗಂಡಸರು ಆಕೆ ಏನಾದರೂ ದುಡ್ಡಿಗೆ ಬೇಡಿಕೆಯನ್ನು ಇಟ್ಟಾಗ ಲೇವಡಿ ಮಾಡುತ್ತಾರೆ. ಕೆಲ ಹೆಣ್ಣು ಮಕ್ಕಳು ರೋಪು ಹಾಕಿ ಹಣ ಇಸಿದುಕೊಂಡರೆ ಮತ್ತೆ ಕೆಲ ಹೆಣ್ಣು ಮಕ್ಕಳು ನಮ್ಮ ಹಣೆಬರಹವೇ ಇಷ್ಟು ಎಂದು ಬಾಯಿ ಹೊಲಿದುಕೊಳ್ಳುತ್ತಾರೆ.
ಇನ್ನು ಕೆಲ ಹೆಣ್ಣು ಮಕ್ಕಳು ಅದೆಷ್ಟೇ ಕಷ್ಟ ನಿಷ್ಟುರಗಳು ಬಂದರೂ ಅವುಗಳನ್ನು ಸಹಿಸಿ ಇಲ್ಲವೇ ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗಿ ಗೆದ್ದು ಜಯಮಾಲೆ ಧರಿಸುತ್ತಾರೆ.
ಅಂತಹ ಆತ್ಮಬಲ ಎಲ್ಲ ಹೆಣ್ಣು ಮಕ್ಕಳಲ್ಲೂ ಮೈ ಗೂಡಲಿ ಎಂಬ ಆಶಯದೊಂದಿಗೆ.
ವೀಣಾ ಹೇಮಂತಗೌಡ ಪಾಟೀಲ್,