ಜಿ. ಎಸ್. ಶರಣುಅವರ ಕವಿತೆ-ಮೊದ ಮೊದಲು

[3:04 pm, 29/09/2024] ~Sharanu GS: ಎಷ್ಟೋ ದಿನ ಆತು
ಕವಿತೆ ಹುಟ್ಲಿಲ್ಲ, ಕಥೆ ಕಟ್ಲಿಲ್ಲ
ಏನಿಕ್ಕೊ ಗೊತ್ತಿಲ್ಲ
ಇವೆಲ್ಲ ನನ್ನ ಬಿಟ್ಟೋತು ಅನ್ನೋ ಚಿಂತಿ ಮಾತ್ರ
ನನ್ನ ಬಿಡ್ಲಿಲ್ಲ

ಮೊದ ಮೊದಲು
ಕವಿತೆ ಹುಟ್ದಾಗ ಬರೆದುಬಿಡ್ತಿದ್ದೆ
ಇಲ್ದಿದ್ರೆ ಕವಿತೆ ಕಟ್ಲಿಕ್ಕೆಂದೆ ಕೂರ್ತಿದ್ದೆ
ಆದರೆ ಈಗೀಗ ಏನಾಗಿದಿಯೋ
ನನಗೆ ತಿಳಿತಿಲ್ಲ
ಹುಟ್ಟುವುದು ಕಷ್ಟ ಕಟ್ಟುವುದು ಕಷ್ಟ

ಮೊದ ಮೊದಲು
ಕವಿತೆ ಬರೆಯೋದೇ ಒಂದು ಕೆಲಸ
ಅದನ್ನ ಸಿಕ್ ಸಿಕ್ಕ ಜಾಗದಲ್ಲಿ ಓದೋದು
ಮತ್ತೊಂದು ಕೆಲಸ
ಈಗೀಗ ಟೈಮ್ ಇಲ್ಲ ಅಂತೀನಿ
ಮಾಡೋಕ್ಕೆ ಕೆಲಸ ನೂರೆಂಟು ಇದ್ರು
ಕೈಯಲ್ಲಿ ಫೋನ್ ಇಡ್ಕೊಂತೀನಿ

ಮೊದ ಮೊದಲು
ಕಣ್ಣಿಗೆ ಕಂಡಿದ್ನೇಲ್ಲ ಕವಿತೆ ಆಗಿಸ್ತಿದ್ದೆ
ಅದ್ರಲ್ಲೇ ಖುಷಿ, ಸಂಕ್ಟ, ಸಿಟ್ನೆಲ್ಲ ಹೊರ ಹಾಕ್ತಿದ್ದೆ
ಹೊಸ ಹೊಸ ಕವನ ಸಂಕಲನ ಹುಡುಕಿ ಓದ್ತಿದ್ದೆ
ಆದರೆ ಈಗೀಗ ಬ್ಯುಸಿ ಅದಿನಿ ಅಂತ
ನನ್ಗ ನಾನೆ ಅನ್ಕೊಂತೀನಿ
ಎಲ್ಲ ನೆನಸಿಕೊಂಡಾಗ ಚಿಂತಿ ಮಾಡ್ತೀನಿ
ಆಗ ಹಿರಿಯರು ಹೇಳಿದ ಮಾತು
‘ಚಿಂತಿ ಮಾಡಿ ಸಾಯಿಬ್ಯಾಡ್ರೋ’
ಅನ್ನೋದು ನೆನಪಿಗೆ ಬರ್ತದ


Leave a Reply

Back To Top