1896 ರ ಸಮಯ. ಎಲೆಕ್ಟ್ರಿಕ್ ಬಲ್ಬನ್ನು ಕಂಡುಹಿಡಿದ ಥಾಮಸ್ ಅಲ್ವಾ ಎಡಿಸನ್ ಕಂಪನಿಯೊಂದರ ಕಾರು ತಯಾರಿಕೆಯ ವಿನ್ಯಾಸ ಕಾರ್ಯದಲ್ಲಿ ನಿರತನಾಗಿದ್ದ. ಅದೇ ಸಮಯದಲ್ಲಿ ಯುವಕನೊಬ್ಬ ಅದೇ ಕಂಪನಿಯಲ್ಲಿದ್ದು ತನ್ನದೇ ಆದ ಗ್ಯಾಸೋಲಿನ್ ನಿಂದ  ನಡೆಸಬಲ್ಲ ಕಾರನ್ನು ತಯಾರಿಸುತ್ತಿದ್ದುದು ಎಡಿಸನ್ನನ ಕಿವಿಗೆ ಬಿತ್ತು. ನ್ಯೂಯಾರ್ಕ್ನಲ್ಲಿ ನಡೆದ ಕಂಪನಿಯ ಮೀಟಿಂಗ್ ನಲ್ಲಿ ಆತನನ್ನು ಭೇಟಿಯಾದ ಥಾಮಸ್ ಅಲ್ವಾ ಎಡಿಸನ್ ಆತನ ಕಾರ್ಯವನ್ನು ಶ್ಲಾಘಿಸಿ ಪ್ರಯತ್ನವನ್ನು ಮುಂದುವರಿಸುವಂತೆ ಹೇಳಿದರು.

 ವಿದ್ಯುತ್ ಶಕ್ತಿಯನ್ನು ಶಕ್ತಿಯ ಏಕೈಕ ಮೂಲ ಎಂದು ಭಾವಿಸುತ್ತಿದ್ದ ಎಡಿಸನ್ ಆ ಯುವಕನನ್ನು ಕುರಿತು “ನಿನ್ನ ಕಾರ್ಯ ಪ್ರಭಾವಶಾಲಿಯಾಗಿದ್ದು ನೀನು ಖಂಡಿತವಾಗಿಯೂ ಜಯಗಳಿಸುವೆ… ಪಟ್ಟು ಬಿಡದೆ ನಿನ್ನ ಕೆಲಸವನ್ನು ನಿರ್ವಹಿಸು” ಎಂದು ಕಿವಿಮಾತು ಹೇಳಿದರು. ಹಾಗೆ ಎಡಿಸನ್ ರಿಂದ ಹೇಳಿಸಿಕೊಂಡ ವ್ಯಕ್ತಿಯೇ ಖ್ಯಾತ ಕಾರು ತಯಾರಿಕಾ  ಕಂಪನಿ ಫೋರ್ಡ್ ನ ಮಾಲೀಕ ಹೆನ್ರಿ ಫೋರ್ಡ್.

 ವಿಜ್ಞಾನಿ ಎಡಿಸನ್ ರ ಶ್ಲಾಘನೆಯಿಂದ ಉತ್ತೇಜಿತನಾದ ಹೆನ್ರಿ ಫೋರ್ಡ್ ತನ್ನ ಕಾರ್ಯವನ್ನು ಮುಂದುವರಿಸಿ ಕಾರು ತಯಾರಿಕಾ ಕ್ಷೇತ್ರದಲ್ಲಿ ಹೊಸದೊಂದು ಆವಿಷ್ಕಾರವನ್ನು ಸೃಷ್ಟಿಸಿದನು.  ಅದು ಹೆಚ್ಚು ಜನಪ್ರಿಯವಾಗಿ ಆ ಕಾರನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿ ಹೆನ್ರಿಫೋರ್ಡ್ನನ್ನು ಕೆಲವೇ ವರ್ಷಗಳಲ್ಲಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ನಿಲ್ಲಿಸಿತು.

 ಮುಂದೆ 1914 ಡಿಸೆಂಬರ್ 9ರಂದು ಎಡಿಸನ್ ನ ಸಂಶೋಧನಾ ಪ್ರಯೋಗಾಲಯ ಮತ್ತು ಫ್ಯಾಕ್ಟರಿಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಹೋಯಿತು. ಇನ್ಶೂರೆನ್ಸ್ ನಿಂದ ಬಂದ ಹಣ ಕೂಡ ಅಗ್ನಿ ಅಪಘಾತದಿಂದ ಉಂಟಾದ ನಷ್ಟವನ್ನು ಭರಿಸಲು ಸಾಧ್ಯವಾಗದಾಗಿತ್ತು. ಅಗ್ನಿ ಅಪಘಾತದ ಅವಶೇಷಗಳು ತಣ್ಣಗಾಗುವ ಮುನ್ನವೇ ಅಲ್ಲಿಗೆ ಧಾವಿಸಿ ಬಂದ ಹೆನ್ರಿ ಫೋರ್ಡ್ 750,000 ಡಾಲರ್ ಮೊತ್ತವನ್ನು ದಾಖಲಿಸಿದ್ದ ಚೆಕ್ ಒಂದನ್ನು ಇನ್ನೂ ಹೆಚ್ಚು ಬೇಕಾದರೆ ಕೊಡಲು ಸಿದ್ದ ಎಂಬ ಪತ್ರವನ್ನೂ  67ರ ವೃದ್ಧ ಎಡಿಸನ್ ಗೆ ತಲುಪಿಸಿದ್ದನು.

 ಮುಂದೆ 1916ರಲ್ಲಿ ಎಡಿಸನ್ ಮನೆಯ ಪಕ್ಕದ ಮನೆಗೆ ಬಂದು ವಾಸಿಸಿದ ಹೆನ್ರಿ ಫೋರ್ಡ್. ವಯೋಸಹಜ ತೊಂದರೆಗಳಿಂದ ಎಡಿಸನ್ ವೀಲ್ ಚೇರ್ ಬಳಸಲಾರಂಭಿಸಿದ. ಅದೇ ಸಮಯಕ್ಕೆ ಹೆನ್ರಿ ಫೋರ್ಡ್ ಕೂಡ ವೀಲ್ ಚೇರ್ ಬಳಸುವಂತಹ ಪರಿಸ್ಥಿತಿ ಬಂದೊದಗಿತು.

 ಶ್ರೇಷ್ಠ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ಹೆನ್ರಿ ಫೋರ್ಡ್ ನ ಕಾರ್ಯವನ್ನು ಪ್ರೋತ್ಸಾಹಿಸಿ ಆತನ ಆತ್ಮಬಲವನ್ನು ಹೆಚ್ಚಿಸಿದರೆ 67ರ ಇಳಿ ವಯಸಿನಲ್ಲಿ ತಮ್ಮೆಲ್ಲ ಸಂಶೋಧನೆಯ ಪರಿಣಾಮಗಳನ್ನು ಕಳೆದುಕೊಂಡ ಎಡಿಸನ್ ಗೆ ಹೆನ್ರಿ ಫೋರ್ಡ್ ಆರ್ಥಿಕ ಬೆಂಬಲ ನೀಡಿದರು.

 ಈ ಕಥೆ ನಮಗೆ ಕಲಿಸುವ ಪಾಠ ಮಹತ್ತರವಾದದ್ದು.. ಬೇರೊಬ್ಬರ ಪ್ರಗತಿಯನ್ನು ಕಂಡು ಎಂದೂ ಅಸೂಯೆ ಪಡಬಾರದು. ಸ್ಪರ್ಧೆಯಲ್ಲಿ ನೀವು ಭಾಗವಹಿಸಿ ಗೆಲ್ಲಲು ಸಾಧ್ಯವಾಗದಿದ್ದರೆ ಬೇಡ ನಿಮ್ಮ ಮುಂದಿರುವ ವ್ಯಕ್ತಿಯನ್ನು ಪ್ರೋತ್ಸಾಹಿಸಿ ಆತನ ದಾಖಲೆಯ ಜಯಕ್ಕೆ ಕಾರಣರಾಗಿ.
 ನಮ್ಮ ಕೈಯಲ್ಲಿರುವ ಮೇಣದ ದೀಪದಿಂದ ಬೇರೊಬ್ಬರ ಮೇಣದ ಬತ್ತಿಗೆ ಅಗ್ನಿಯನ್ನು ಸೋಕಿಸಿದರೆ ನಮ್ಮ ಕೈಯಲ್ಲಿರುವ ದೀಪ ತನ್ನ ಪ್ರಖರತೆಯನ್ನು ಕಳೆದುಕೊಳ್ಳದು.

 ಆದ್ದರಿಂದ ಯಶಸ್ಸಿನ ಉತ್ತುಂಗದಲ್ಲಿರುವವರು, ಇಲ್ಲವೇ ಯಶದ ಹಾದಿಯಲ್ಲಿ ಸಾಗುತ್ತಿರುವವರು   ಬೇರೆಯವರಿಗೆ ಸಹಾಯ ಸಹಕಾರ ನೀಡಲಿ. ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿ ಸ್ನೇಹ ಸಂಬಂಧಗಳನ್ನು ವೃದ್ಧಿಸಿಕೊಳ್ಳಲಿ.

 ಅಕಸ್ಮಾತ್ ಅವರೇನಾದರೂ ನಿಮಗಿಂತ ಹೆಚ್ಚು ಬೆಳೆದುಬಿಟ್ಟರೆ ಎಂಬ ಅಸೂಯೆ ಖಂಡಿತ ಬೇಡ. ಅವರವರ ಕರ್ಮಾನುಸಾರ ಅವರವರು ಪಡೆದು ಬಂದಿರುತ್ತಾರೆ. ಇಡೀ ದೇವಾಲಯವನ್ನು ಕಟ್ಟಲು ಇಟ್ಟಿಗೆಯೊಂದನ್ನು ನಾವು ಕೊಟ್ಟೆವೆಂದ ಮಾತ್ರಕ್ಕೆ ನಾವೇ ದೇವಾಲಯ ಕಟ್ಟಿದ ನಿರ್ಮಾತೃಗಳಲ್ಲ.. ದೇವಾಲಯ ಕಟ್ಟುವ ಕೈಂಕರ್ಯದಲ್ಲಿ ನಮ್ಮದೊಂದು ಅಳಿಲುಸೇವೆಗೆ ಅವಕಾಶ ದೊರೆಯಿತೆಂಬ ಕೃತಜ್ಞತಾ ಭಾವ ನಮ್ಮಲ್ಲಿ ಮನೆ ಮಾಡಿರಲಿ.


Leave a Reply

Back To Top