ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಚೆಂದಳಿರ ಮಾಮರದಿ ಹಾಡುತಿದೆ ಕೋಗಿಲೆ ಇಂಪಾಗಿ ಬರಲಿಲ್ಲ ಅವನು
ಸುಳಿಗಾಳಿ ಮೆಲ್ಲನೆ ಸೂಸುತಿದೆ ಸುತ್ತೆಲ್ಲ ತಂಪಾಗಿ ಬರಲಿಲ್ಲ ಅವನು

ಬಿಡಿಸಿದ ರಂಗೋಲಿ ಅದೇಕೋ ರಂಗು ರಂಗಾಗಿ ಮೆರೆಯುತಿದೆ ಏಕೆ
ಕಡಲ ಅಲೆಯೊಳಗೆ ಮುಳುಗುತಿಹನು ರವಿ ಕೆಂಪಾಗಿ ಬರಲಿಲ್ಲ ಅವನು

ಪಾರಿಜಾತದ ಹೂಗಳೆಲ್ಲ ಉದುರಿ ಚಿತ್ತಾರ ಮೂಡಿಸಿವೆ ಅಂಗಳದಲಿ
ಮರಳಿ ಗೂಡಿಗೆ ಬರುತಿವೆ ಹಕ್ಕಿಗಳು ಚಂದದಿ ಗುಂಪಾಗಿ ಬರಲಿಲ್ಲ ಅವನು

ದೂರ ಗದ್ದೆಯಲಿ ನವಿಲೊಂದು ಕುಣಿಯುತಿದೆ ಆಗಸದಿ ಕಾರ್ಮೋಡ ಕಂಡು
ಅಮಲೇರಿವೆ ಮಕರಂದವ ಕುಡಿದು ಭೃಂಗಗಳು ಸೊಂಪಾಗಿ ಬರಲಿಲ್ಲ ಅವನು

ಹಚ್ಚಿಟ್ಟ ದೀಪದ ಕುಡಿಯು ಹೊಯ್ದಾಡುತಿದೆ ಬಳಲಿ ಬಸವಳಿದಂತೆ
ಬೇಗಂ ಳ ಹೃದಯ ರೋದಿಸುತಿದೆ ತಳಮಳವು ಪೆಂಪಾಗಿ ಬರಲಿಲ್ಲ ಅವನು.

ಪೆಂಪು = ಅಧಿಕ ,ಹೆಚ್ಚು


()

Leave a Reply

Back To Top